ಯೋಹಾನ 19:1-42

  • ಯೇಸುಗೆ ಚಾಟಿಯೇಟು, ಅವಮಾನ (1-7)

  • ಪಿಲಾತ ಇನ್ನೊಮ್ಮೆ ಯೇಸುವನ್ನ ವಿಚಾರಣೆ ಮಾಡಿದ (8-16ಎ)

  • ಗೊಲ್ಗೊಥಾದಲ್ಲಿ ಯೇಸುವನ್ನ ಕಂಬಕ್ಕೆ ಜಡಿದ್ರು (16ಬಿ-24)

  • ಅಮ್ಮನನ್ನ ಶಿಷ್ಯನ ಕೈಗೆ ಒಪ್ಪಿಸಿದನು (25-27)

  • ಯೇಸು ತೀರಿಕೊಂಡನು (28-37)

  • ಯೇಸುವನ್ನ ಸಮಾಧಿ ಮಾಡಿದ್ರು (38-42)

19  ಆಗ ಪಿಲಾತ ಯೇಸುವನ್ನ ಕರ್ಕೊಂಡು ಹೋಗಿ ಚಾಟಿಯಿಂದ ಹೊಡೆಸಿದ.+  ಸೈನಿಕರು ಮುಳ್ಳಿನ ಕಿರೀಟ ಮಾಡಿ ಆತನ ತಲೆ ಮೇಲಿಟ್ರು. ನೇರಳೆ ಬಣ್ಣದ ಬಟ್ಟೆ ಹಾಕಿದ್ರು.+  “ಯೆಹೂದ್ಯರ ರಾಜನಿಗೆ ಜೈ!” ಅಂತ ಗೇಲಿಮಾಡ್ತಾ ಇದ್ರು. ಕೆನ್ನೆಗೆ ಹೊಡಿತಾ ಇದ್ರು.+  ಪಿಲಾತ ಮತ್ತೆ ಹೊರಗೆ ಹೋಗಿ ಯೆಹೂದ್ಯರಿಗೆ “ನೋಡಿ! ನನಗೆ ಅವನಲ್ಲಿ ಯಾವ ತಪ್ಪೂ ಕಾಣ್ತಾ ಇಲ್ಲ.+ ಇದನ್ನ ನೀವು ಅರ್ಥ ಮಾಡ್ಕೊಳ್ಳಬೇಕಂತ ಅವನನ್ನ ಮತ್ತೆ ಹೊರಗೆ ಕರ್ಕೊಂಡು ಬರ್ತಿನಿ” ಅಂದ.  ಆಗ ಯೇಸು ಹೊರಗೆ ಬಂದನು. ಆತನ ತಲೆ ಮೇಲೆ ಮುಳ್ಳಿನ ಕಿರೀಟ, ಮೈಮೇಲೆ ನೇರಳೆ ಬಣ್ಣದ ಬಟ್ಟೆ ಇತ್ತು. ಪಿಲಾತ ಅವ್ರಿಗೆ “ಈ ಮನುಷ್ಯನನ್ನ ನೋಡಿ!” ಅಂದ.  ಆದ್ರೆ ಮುಖ್ಯ ಪುರೋಹಿತರು, ಕಾವಲುಗಾರರು ಯೇಸುವನ್ನ ನೋಡಿ “ಅವನನ್ನ ಕಂಬಕ್ಕೆ ಜಡಿದು ಸಾಯಿಸು! ಸಾಯಿಸು!”*+ ಅಂತ ಜೋರಾಗಿ ಕೂಗ್ತಾ ಇದ್ರು. ಪಿಲಾತ ಅವ್ರಿಗೆ “ನೀವೇ ಇವನನ್ನ ಕರ್ಕೊಂಡು ಹೋಗಿ ಮರಣಶಿಕ್ಷೆ ಕೊಡಿ.* ನನಗಂತೂ ಇವನಲ್ಲಿ ಯಾವ ತಪ್ಪೂ ಕಾಣಿಸ್ತಿಲ್ಲ”+ ಅಂದ.  ಅದಕ್ಕೆ ಯೆಹೂದ್ಯರು “ನಮಗೆ ಒಂದು ನಿಯಮ ಇದೆ. ಅದ್ರ ಪ್ರಕಾರ ಇವನು ಸಾಯಲೇಬೇಕು.+ ಯಾಕಂದ್ರೆ ಇವನು ದೇವರ ಮಗ ಅಂತ ಹೇಳ್ಕೊಂಡಿದ್ದಾನೆ”+ ಅಂದ್ರು.  ಈ ಮಾತು ಕೇಳಿಸ್ಕೊಂಡಾಗ ಪಿಲಾತನಿಗೆ ಇನ್ನೂ ಭಯ ಆಯ್ತು.  ಅವನು ಮತ್ತೆ ಮನೆಯೊಳಗೆ ಹೋಗಿ ಯೇಸುಗೆ “ನೀನು ಎಲ್ಲಿಂದ ಬಂದೆ?” ಅಂತ ಕೇಳಿದ. ಯೇಸು ಅವನಿಗೆ ಏನೂ ಹೇಳಲಿಲ್ಲ.+ 10  ಆಗ ಪಿಲಾತ “ನನ್ನ ಜೊತೆ ಮಾತಾಡಲ್ವಾ? ನಿನ್ನನ್ನ ಬಿಟ್ಟುಬಿಡೋದು, ನಿನಗೆ ಮರಣಶಿಕ್ಷೆ ಕೊಡೋದು* ನನ್ನ ಕೈಯಲ್ಲಿದೆ. ಆ ಅಧಿಕಾರ ನನಗಿದೆ ಅಂತ ಗೊತ್ತಿಲ್ವಾ?” ಅಂತ ಕೇಳಿದ. 11  ಅದಕ್ಕೆ ಯೇಸು “ದೇವ್ರಿಂದ ನಿನಗೆ ಅಧಿಕಾರ ಸಿಗದೇ ಇದ್ದಿದ್ರೆ ನನ್ನ ಮೇಲೆ ಯಾವ ಅಧಿಕಾರನೂ ಇರ್ತಾ ಇರಲಿಲ್ಲ. ಅದಕ್ಕೆ ನನ್ನನ್ನ ನಿನಗೆ ಹಿಡ್ಕೊಟ್ಟಿರೋ ಮನುಷ್ಯನ ಮೇಲೆ ಹೆಚ್ಚು ಪಾಪ ಇದೆ” ಅಂದನು. 12  ಹಾಗಾಗಿ ಪಿಲಾತ ಹೇಗಾದ್ರೂ ಮಾಡಿ ಯೇಸುವನ್ನ ಬಿಡಿಸಬೇಕು ಅಂತ ಪ್ರಯತ್ನಿಸ್ತಾ ಇದ್ದ. ಆದ್ರೆ ಯೆಹೂದ್ಯರು “ನೀನು ಅವನನ್ನ ಬಿಟ್ರೆ ರಾಜನ* ಸ್ನೇಹಿತನಾಗಿ ಇರಲ್ಲ. ತನ್ನನ್ನೇ ರಾಜ ಅಂತ ಹೇಳ್ಕೊಳ್ಳೋನು ರಾಜನ ವಿರೋಧಿ”+ ಅಂತ ಕೂಗಿದ್ರು. 13  ಪಿಲಾತ ಈ ಮಾತುಗಳನ್ನ ಕೇಳಿಸ್ಕೊಂಡ ಮೇಲೆ ಯೇಸುವನ್ನ ಹೊರಗೆ ಕರ್ಕೊಂಡು ಬಂದ. ನ್ಯಾಯಾಸನದ ಮೇಲೆ ಕೂತ. ಆ ಜಾಗಕ್ಕೆ ಕಲ್ಲುಹಾಸಿದ ಕಟ್ಟೆ ಅಂತ ಹೆಸ್ರು. ಹೀಬ್ರು ಭಾಷೆಯಲ್ಲಿ ಗಬ್ಬಥಾ ಅಂತಿದ್ರು. 14  ಅದು ಪಸ್ಕ ಹಬ್ಬದ ಸಿದ್ಧತೆಯ ದಿನ.+ ಮಧ್ಯಾಹ್ನ ಸುಮಾರು 12 ಗಂಟೆ ಆಗಿತ್ತು. ಪಿಲಾತ ಯೆಹೂದ್ಯರಿಗೆ “ನಿಮ್ಮ ರಾಜನನ್ನ ನೋಡಿ!” ಅಂದ. 15  ಆದ್ರೆ ಅವರು “ಅವನನ್ನ ಸಾಯಿಸು! ಅವನನ್ನ ಸಾಯಿಸು! ಅವನನ್ನ ಕಂಬಕ್ಕೆ ಜಡಿ!”* ಅಂತ ಕೂಗಿದ್ರು. ಆಗ ಪಿಲಾತ “ನಾನು ನಿಮ್ಮ ರಾಜನಿಗೆ ಮರಣಶಿಕ್ಷೆ ಕೊಡಬೇಕಾ?” ಅಂದ. ಅದಕ್ಕೆ ಮುಖ್ಯ ಪುರೋಹಿತರು “ಇವನು ನಮ್ಮ ರಾಜ ಅಲ್ಲ, ರೋಮಿನ ರಾಜ ಮಾತ್ರ ನಮ್ಮ ರಾಜ” ಅಂದ್ರು. 16  ಆಗ ಪಿಲಾತ ಯೇಸುವನ್ನ ಕಂಬಕ್ಕೆ ಜಡಿದು ಸಾಯಿಸೋಕೆ ಅವ್ರಿಗೆ ಒಪ್ಪಿಸಿಬಿಟ್ಟ.+ ಅವರು ಯೇಸುವನ್ನ ಅಲ್ಲಿಂದ ಕರ್ಕೊಂಡು ಹೋದ್ರು. 17  ಯೇಸುನೇ ಹಿಂಸಾ ಕಂಬ* ಹೊತ್ಕೊಂಡು ತಲೆಬುರುಡೆ ಅನ್ನೋ ಸ್ಥಳಕ್ಕೆ ಹೋದನು.+ ಇದನ್ನ ಹೀಬ್ರು ಭಾಷೆಯಲ್ಲಿ ಗೊಲ್ಗೊಥಾ+ ಅಂತಾರೆ. 18  ಅಲ್ಲಿ ಅವರು ಆತನನ್ನ ಕಂಬಕ್ಕೆ ಮೊಳೆಗಳಿಂದ ಜಡಿದು ಅದನ್ನ ಎತ್ತಿ ನಿಲ್ಲಿಸಿದ್ರು.+ ಆತನ ಜೊತೆ ಇನ್ನೂ ಇಬ್ಬರನ್ನ ಅಕ್ಕಪಕ್ಕದಲ್ಲಿ ಕಂಬಕ್ಕೆ ಏರಿಸಿದ್ರು. ಯೇಸು ಮಧ್ಯದಲ್ಲಿದ್ದನು.+ 19  ಅಷ್ಟೇ ಅಲ್ಲ ಪಿಲಾತ ಒಂದು ಹಲಗೆ ಮೇಲೆ “ಯೆಹೂದ್ಯರ ರಾಜನಾದ ನಜರೇತಿನ ಯೇಸು”+ ಅಂತ ಬರೆಸಿ ಹಿಂಸಾ ಕಂಬದ* ಮೇಲೆ ಇಟ್ಟನು. 20  ತುಂಬ ಯೆಹೂದ್ಯರು ಅದನ್ನ ಓದಿದ್ರು. ಯಾಕಂದ್ರೆ ಯೇಸುವನ್ನ ಕಂಬಕ್ಕೆ ಜಡಿದ ಸ್ಥಳ ಯೆರೂಸಲೇಮ್‌ ಪಟ್ಟಣಕ್ಕೆ ಹತ್ರ ಇತ್ತು. ಅಷ್ಟೇ ಅಲ್ಲ ಅದನ್ನ ಹೀಬ್ರು, ಲ್ಯಾಟಿನ್‌, ಗ್ರೀಕ್‌ ಭಾಷೆಯಲ್ಲಿ ಬರೆದಿತ್ತು. 21  ಯೆಹೂದ್ಯರ ಮುಖ್ಯ ಪುರೋಹಿತರು ಪಿಲಾತನಿಗೆ “‘ಯೆಹೂದ್ಯರ ರಾಜ’ ಅಂತ ಬರಿಬೇಡ, ‘ನಾನು ಯೆಹೂದ್ಯರ ರಾಜ ಅಂತ ಹೇಳ್ಕೊಳ್ತಿದ್ದವನು’ ಅಂತ ಬರಿ” ಅಂದ್ರು. 22  ಅದಕ್ಕೆ ಪಿಲಾತ “ನಾನು ಬರೆದಾಯ್ತು, ಅದನ್ನ ಬದಲಾಯಿಸೋಕೆ ಆಗಲ್ಲ” ಅಂದ. 23  ಸೈನಿಕರು ಯೇಸುವನ್ನ ಕಂಬಕ್ಕೆ ಜಡಿದ ಮೇಲೆ ಆತನ ಬಟ್ಟೆ ತಗೊಂಡು ಒಬ್ಬೊಬ್ರಿಗೆ ಒಂದೊಂದು ಪಾಲು ಬರೋ ತರ ನಾಲ್ಕು ಪಾಲು ಮಾಡಿ ಹಂಚ್ಕೊಂಡ್ರು. ಆತನ ಇನ್ನೊಂದು ಬಟ್ಟೆ ಸಹ ತಗೊಂಡ್ರು. ಆದ್ರೆ ಆ ಬಟ್ಟೆ ಮೇಲಿಂದ ಕೆಳಗಿನ ತನಕ ನೆಯ್ದಿತ್ತು, ಹೊಲಿಗೆನೇ ಇರಲಿಲ್ಲ. 24  ಹಾಗಾಗಿ “ಇದನ್ನ ಹರಿಯೋದು ಬೇಡ. ಚೀಟಿಹಾಕಿ ಯಾರಿಗೆ ಬರುತ್ತೋ ನೋಡೋಣ”+ ಅಂತ ಮಾತಾಡ್ಕೊಂಡ್ರು. “ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ, ನನ್ನ ವಸ್ತ್ರಕ್ಕಾಗಿ ಚೀಟು ಹಾಕ್ತಾರೆ” ಅನ್ನೋ ವಚನ ನಿಜ ಆಯ್ತು.+ ವಚನ ಏನು ಹೇಳಿತ್ತೋ ಅದನ್ನೇ ಆ ಸೈನಿಕರು ಮಾಡಿದ್ರು. 25  ಯೇಸುವಿನ ಹಿಂಸಾ ಕಂಬದ* ಹತ್ರ ಆತನ ಅಮ್ಮ,+ ಅವಳ ತಂಗಿ, ಕ್ಲೋಪನ ಹೆಂಡತಿ ಮರಿಯ, ಮಗ್ದಲದ ಮರಿಯ ನಿಂತಿದ್ರು.+ 26  ಆಗ ಯೇಸು ತನ್ನ ಅಮ್ಮ ಮತ್ತು ಪ್ರೀತಿಯ ಶಿಷ್ಯ+ ಹತ್ರದಲ್ಲೇ ನಿಂತಿರೋದನ್ನ ನೋಡಿ ಅಮ್ಮನಿಗೆ “ಅಮ್ಮಾ, ನೋಡು! ಇನ್ನು ಮೇಲಿಂದ ಇವನೇ ನಿನ್ನ ಮಗ” ಅಂದನು. 27  ಆಮೇಲೆ ಆ ಶಿಷ್ಯನಿಗೆ “ನೋಡು, ಇನ್ನು ಮೇಲಿಂದ ಇವಳೇ ನಿನ್ನ ಅಮ್ಮ” ಅಂದನು. ಅವತ್ತೇ ಮರಿಯಳನ್ನ ಆ ಶಿಷ್ಯ ತನ್ನ ಮನೆಗೆ ಕರ್ಕೊಂಡು ಹೋಗಿ ನೋಡ್ಕೊಂಡ. 28  ಆಮೇಲೆ ಯೇಸುಗೆ ತನ್ನ ಅಪ್ಪ ಕೊಟ್ಟ ಎಲ್ಲ ಕೆಲಸ ಮಾಡಿ ಮುಗಿಸಿದ್ದೀನಿ ಅಂತ ಗೊತ್ತಾಯ್ತು. ಆಗ ಯೇಸು “ನೀರು ಬೇಕು”+ ಅಂದನು. ಹೀಗೆ ಪವಿತ್ರ ಗ್ರಂಥದಲ್ಲಿರೋ ಮಾತು ನಿಜ ಆಯ್ತು. 29  ಅಲ್ಲಿ ಹುಳಿ ದ್ರಾಕ್ಷಾಮದ್ಯ ತುಂಬಿದ್ದ ಒಂದು ಪಾತ್ರೆ ಇತ್ತು. ಹಾಗಾಗಿ ಅಲ್ಲಿದ್ದವರು ಸ್ಪಂಜು ತಗೊಂಡು ಅದ್ರಲ್ಲಿ ಅದ್ದಿ ಕೋಲಿಗೆ* ಸಿಕ್ಕಿಸಿ ಆತನ ಬಾಯಿ ಹತ್ರ ಇಟ್ರು.+ 30  ಯೇಸು ಆ ಹುಳಿ ದ್ರಾಕ್ಷಾಮದ್ಯ ಕುಡಿದ ಮೇಲೆ “ಎಲ್ಲಾ ಮುಗಿತು!”+ ಅಂತ ಹೇಳಿ ತಲೆಬಗ್ಗಿಸಿ ಕೊನೆ ಉಸಿರೆಳೆದನು.+ 31  ಅವತ್ತು ಸಿದ್ಧತೆಯ ದಿನ.+ (ಮಾರನೇ ದಿನ ವಿಶೇಷ ಸಬ್ಬತ್‌ ದಿನ.)+ ಯೆಹೂದ್ಯರು ಪಿಲಾತನ ಹತ್ರ ಹೋಗಿ ಕಂಬಕ್ಕೆ ಹಾಕಿದವರ ಕಾಲುಗಳನ್ನ ಮುರಿದು ಬೇಗ ಸಾಯಿಸಿ ಕಂಬದಿಂದ ಶವಗಳನ್ನ ಇಳಿಸಬೇಕಂತ ಕೇಳ್ಕೊಂಡ್ರು. ಯಾಕಂದ್ರೆ ಸಬ್ಬತ್‌ ದಿನದಲ್ಲಿ ಶವಗಳನ್ನ ಹಿಂಸಾ ಕಂಬದ ಮೇಲೆ ಬಿಡ್ತಾ ಇರಲಿಲ್ಲ.+ 32  ಹಾಗಾಗಿ ಸೈನಿಕರು ಬಂದು ಯೇಸುವಿನ ಅಕ್ಕಪಕ್ಕ ಇದ್ದವರ ಕಾಲುಗಳನ್ನ ಮುರಿದ್ರು. 33  ಆದ್ರೆ ಸೈನಿಕರು ಯೇಸು ಹತ್ರ ಬಂದಾಗ ಆತನ ಜೀವ ಹೋಗಿರೋದನ್ನ ನೋಡಿ ಆತನ ಕಾಲುಗಳನ್ನ ಮುರಿಲಿಲ್ಲ. 34  ಆದ್ರೂ ಸೈನಿಕರಲ್ಲಿ ಒಬ್ಬ ಈಟಿಯಿಂದ ಯೇಸುವಿನ ಪಕ್ಕೆಲುಬುಗಳ ಮಧ್ಯ ಚುಚ್ಚಿದ.+ ತಕ್ಷಣ ರಕ್ತ ಮತ್ತು ನೀರು ಬಂತು. 35  ಇದನ್ನೆಲ್ಲ ಕಣ್ಣಾರೆ ನೋಡಿದವನೇ ಈ ಎಲ್ಲ ವಿಷ್ಯ ಹೇಳ್ತಾ ಇದ್ದಾನೆ. ಹೌದು, ಅವನು ಹೇಳ್ತಿರೋದೆಲ್ಲ ಸತ್ಯ. ನೀವು ಸಹ ಅದನ್ನ ನಂಬಬೇಕು ಅಂತ ಹೇಳ್ತಾ ಇದ್ದಾನೆ. ಯಾಕಂದ್ರೆ ಅವನು ಹೇಳ್ತಿರೋದೆಲ್ಲ ಸತ್ಯ ಅಂತ ಅವನಿಗೆ ಚೆನ್ನಾಗಿ ಗೊತ್ತು.+ 36  ನಿಜ ಹೇಳಬೇಕಂದ್ರೆ “ಆತನ ಒಂದು ಮೂಳೆನೂ ಮುರಿಯಲ್ಲ”*+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿರೋ ಮಾತು ನಿಜ ಆಯ್ತು. 37  “ಅವರು ಯಾರನ್ನ ಇರಿದಿದ್ದರೋ ಆತನನ್ನ ನೋಡ್ತಾರೆ”+ ಅಂತಾನೂ ಪವಿತ್ರ ಗ್ರಂಥದಲ್ಲಿ ಹೇಳುತ್ತೆ. 38  ಅರಿಮಥಾಯದ ಯೋಸೇಫ ಅನ್ನೋ ಒಬ್ಬ ವ್ಯಕ್ತಿ ಯೇಸುವಿನ ಶಿಷ್ಯನಾಗಿದ್ದ. ಆದ್ರೆ ಯೆಹೂದ್ಯರಿಗೆ ಭಯಪಟ್ಟು ಈ ವಿಷ್ಯ ಗುಟ್ಟಾಗಿ ಇಟ್ಟಿದ್ದ.+ ಅವನು ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಅನುಮತಿ ಕೇಳಿದ. ಪಿಲಾತ ಅನುಮತಿ ಕೊಟ್ಟ. ಹಾಗಾಗಿ ಯೋಸೇಫ ಯೇಸುವಿನ ದೇಹ ತಗೊಂಡು ಹೋದ.+ 39  ಯೇಸು ಹತ್ರ ಮೊದಲ ಸಲ ರಾತ್ರಿಯಲ್ಲಿ ಬಂದಿದ್ದ ನಿಕೊದೇಮ+ ಸುಮಾರು 30 ಕೆಜಿ ಗಂಧರಸ ಮತ್ತು ಅಗರಿನ ಮಿಶ್ರಣ ತಗೊಂಡು ಅಲ್ಲಿಗೆ ಬಂದ.+ 40  ಅವರು ಯೇಸು ದೇಹವನ್ನ ತಗೊಂಡು ಯೆಹೂದ್ಯರ ಪದ್ಧತಿ ಪ್ರಕಾರ ಸುಗಂಧದ್ರವ್ಯ ಹಾಕಿ ದೇಹವನ್ನ ನಾರುಪಟ್ಟಿಯಿಂದ ಸುತ್ತಿದ್ರು.+ 41  ಯೇಸುವನ್ನ ಕಂಬಕ್ಕೆ ಜಡಿದ ಜಾಗದ ಹತ್ರಾನೇ ಒಂದು ತೋಟ ಇತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು.+ ಅದ್ರಲ್ಲಿ ಯಾರನ್ನೂ ಸಮಾಧಿ ಮಾಡಿರಲಿಲ್ಲ. 42  ಆ ದಿನ ಯೆಹೂದ್ಯರ ಸಿದ್ಧತೆಯ ದಿನ+ ಆಗಿದ್ರಿಂದ ಮತ್ತು ಆ ಸಮಾಧಿ ಹತ್ರದಲ್ಲೇ ಇದ್ದಿದ್ರಿಂದ ಯೇಸುವನ್ನ ಅಲ್ಲೇ ಸಮಾಧಿ ಮಾಡಿದ್ರು.

ಪಾದಟಿಪ್ಪಣಿ

ಅಥವಾ “ಕಂಬಕ್ಕೆ ಜಡಿದು ಕೊಲ್ಲು!”
ಅಥವಾ “ಕಂಬಕ್ಕೆ ಜಡಿದು ಕೊಲ್ಲಿ!”
ಅಥವಾ “ನಿನ್ನನ್ನ ಕಂಬಕ್ಕೆ ಜಡಿದು ಕೊಲ್ಲೋದು!”
ಗ್ರೀಕಲ್ಲಿ “ಕೈಸರ.”
ಅಥವಾ “ಅವನನ್ನ ಕಂಬಕ್ಕೆ ಜಡಿದು ಕೊಲ್ಲು!”
ಅಕ್ಷ. “ಹಿಸ್ಸೋಪ್‌ ಗಿಡದ ಕೋಲಿಗೆ,” ಪ್ಯಾಲಸ್ತೀನಿನಲ್ಲಿ ಬೆಳೆಯೋ ಈ ಗಿಡ ಕಡಿಮೆ ಅಂದ್ರೂ 6 ಅಡಿ ಬೆಳೆಯುತ್ತೆ. ಪದವಿವರಣೆ ನೋಡಿ.
ಅಥವಾ “ಜಜ್ಜಲ್ಲ.”