ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಅಧಿಕಾರವನ್ನು ಅಂಗೀಕರಿಸಿರಿ

ಯೆಹೋವನ ಅಧಿಕಾರವನ್ನು ಅಂಗೀಕರಿಸಿರಿ

ಯೆಹೋವನ ಅಧಿಕಾರವನ್ನು ಅಂಗೀಕರಿಸಿರಿ

“ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾ. 5:3.

“ಅಧಿಕಾರ” ಎಂಬ ಪದವನ್ನು ಕೇಳಿದೊಡನೆ ಇಂದು ಅನೇಕರಿಗೆ ಕಹಿ ನುಂಗಿದಂತಾಗುತ್ತದೆ. ಇತರರಿಗೆ ಅಧೀನರಾಗುವುದು ಅನೇಕರಿಗೆ ಹಿಡಿಸದ ಸಂಗತಿ. “ನಾನೇಕೆ ಇನ್ನೊಬ್ಬರ ಮಾತನ್ನು ಕೇಳಬೇಕು, ನನಗೆ ಇಷ್ಟ ಬಂದದ್ದನ್ನು ನಾನು ಮಾಡುತ್ತೇನೆ” ಎಂಬ ಹೇಳಿಕೆ ಇತರರ ಅಧಿಕಾರಕ್ಕೆ ಅಧೀನರಾಗಲು ಇಷ್ಟಪಡದವರ ಮನೋಭಾವವನ್ನು ಚೆನ್ನಾಗಿ ಚಿತ್ರಿಸುತ್ತದೆ. ಹೀಗಿದ್ದರೂ, ಈ ಜನರು ನಿಜವಾಗಿಯೂ ಯಾರಿಗೂ ಅಧೀನರಾಗಿಲ್ಲವೆಂದು ಹೇಳಬಹುದೋ? ಖಂಡಿತ ಇಲ್ಲ! ಹೆಚ್ಚಿನವರು, “ಇಹಲೋಕದ ನಡವಳಿಕೆಯನ್ನು” ಬೆನ್ನಟ್ಟುವ ಜನರ ಮಟ್ಟಗಳನ್ನು ಅನುಸರಿಸುತ್ತಾರೆ. (ರೋಮಾ. 12:2) ಅವರು ಸ್ವತಂತ್ರರಾಗಿರುವ ಬದಲು, ಕ್ರೈಸ್ತನಾಗಿದ್ದ ಅಪೊಸ್ತಲ ಪೇತ್ರನು ಹೇಳಿದಂತೆ “ಕೆಟ್ಟತನದ ದಾಸತ್ವದೊಳಗಿದ್ದಾರೆ.” (2 ಪೇತ್ರ 2:19) ಮಾತ್ರವಲ್ಲ, ಅವರು ‘ಇಹಲೋಕಾಚಾರಕ್ಕೆ ಅನುಸಾರವಾಗಿಯೂ ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ’ ಅಂದರೆ ಪಿಶಾಚನಾದ ಸೈತಾನನಿಗೆ ಅನುಸಾರವಾಗಿಯೂ ನಡೆಯುತ್ತಾರೆ.—ಎಫೆ. 2:2.

2 ಒಬ್ಬ ಲೇಖಕನು ಕೊಚ್ಚಿಕೊಂಡದ್ದು: “ನನ್ನ ಹೆತ್ತವರಾಗಲಿ ಪಾದ್ರಿಯಾಗಲಿ ಗುರುವಾಗಲಿ ಬೈಬಲಾಗಲಿ ನನ್ನ ಆಲೋಚನೆಯು ಸರಿಯಾಗಿದೆಯೋ ತಪ್ಪಾಗಿದೆಯೋ ಎಂಬುದನ್ನು ನಿರ್ಧರಿಸುವಂತೆ ನಾನು ಬಿಡುವುದಿಲ್ಲ.” ಹೌದು, ಕೆಲವರು ತಮ್ಮ ಅಧಿಕಾರವನ್ನು ದುರುಪಯೋಗಿಸುವ ಕಾರಣ ನಮ್ಮ ವಿಧೇಯತೆಗೆ ಅರ್ಹರಾಗಿಲ್ಲದಿರಬಹುದು. ಹಾಗೆಂದ ಮಾತ್ರಕ್ಕೆ ನಮಗೆ ಮಾರ್ಗದರ್ಶನವೇ ಬೇಕಾಗಿಲ್ಲವೆಂದು ನಿರ್ಧರಿಸುವುದು ಸರಿಯೋ? ಅಲ್ಲವೆಂದು ವಾರ್ತಾಪತ್ರಿಕೆಯ ಶೀರ್ಷಿಕೆಗಳ ಮೇಲೆ ಕಣ್ಣೋಡಿಸುವುದರಿಂದ ತಿಳಿದು ಬರುತ್ತದೆ. ಮಾರ್ಗದರ್ಶನ ತೀರಾ ಅತ್ಯಾವಶ್ಯಕವಾಗಿರುವ ಈ ಸಂದರ್ಭಗಳಲ್ಲೂ ಅನೇಕ ಜನರು ಅದನ್ನು ತಳ್ಳಿಬಿಡುತ್ತಿರುವುದು ವಿಷಾದಕರ.

ಅಧಿಕಾರದ ಕುರಿತ ನಮ್ಮ ನೋಟ

3 ಅಧಿಕಾರಕ್ಕೆ ಅಧೀನರಾಗುವ ವಿಷಯದಲ್ಲಿ, ಕ್ರೈಸ್ತರಾಗಿರುವ ನಾವು ಲೋಕದವರಿಗಿಂತ ಭಿನ್ನರಾಗಿದ್ದೇವೆ. ಅಂದರೆ ಇತರರು ಹೇಳಿದ್ದೆಲ್ಲವನ್ನು ನಾವು ಕಣ್ಣುಮುಚ್ಚಿ ಮಾಡುತ್ತೇವೆಂದಲ್ಲ. ಬದಲಿಗೆ, ಕೆಲವೊಂದು ಸಂದರ್ಭಗಳಲ್ಲಿ, ಅಧಿಕಾರದಲ್ಲಿರುವವರಿಗೆ ಸಹ ನಾವು ಅಧೀನರಾಗಲು ನಿರಾಕರಿಸಬೇಕಾಗುತ್ತದೆ. ಒಂದನೆಯ ಶತಮಾನದ ಕ್ರೈಸ್ತರ ವಿಷಯದಲ್ಲೂ ಇದು ನಿಜವಾಗಿತ್ತು. ಉದಾಹರಣೆಗೆ, ಸಾರುವ ಕೆಲಸವನ್ನು ನಿಲ್ಲಿಸುವಂತೆ ಮಹಾಯಾಜಕರು ಮತ್ತು ಹಿರೀಸಭೆಯ ಅಧಿಕಾರಿಗಳು ಆಜ್ಞಾಪಿಸಿದಾಗ ಅಪೊಸ್ತಲರು ಅದಕ್ಕೆ ಮಣಿಯಲಿಲ್ಲ. ಮಾನವ ಅಧಿಕಾರಕ್ಕೆ ತಲೆಬಾಗುವ ಸಲುವಾಗಿ ತಾವು ಮಾಡುತ್ತಿದ್ದ ಸರಿಯಾದ ವಿಷಯವನ್ನು ಅವರು ಬಿಟ್ಟುಬಿಡಲಿಲ್ಲ.—ಅ. ಕೃತ್ಯಗಳು 5:27-29 ಓದಿ.

4 ಯೇಸುವಿನ ಸಮಯಕ್ಕಿಂತಲೂ ಮೊದಲಿದ್ದ ದೇವರ ಅನೇಕ ಸೇವಕರು ಇದೇ ರೀತಿಯ ದೃಢ ನಿಶ್ಚಯದೊಂದಿಗೆ ಜೀವಿಸಿದ್ದರು. ಉದಾಹರಣೆಗೆ, ಮೋಶೆಯು ‘ಫರೋಹನ ಕುಮಾರ್ತೆಯ ಮಗನೆನಿಸಿಕೊಳ್ಳಲು ನಿರಾಕರಿಸಿ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತೀರ್ಮಾನಿಸಿಕೊಂಡನು.’ ಅದು “ಅರಸನ ರೌದ್ರಕ್ಕೆ” ಕಾರಣವಾಯಿತಾದರೂ ಅವನದನ್ನೇ ಆಯ್ಕೆಮಾಡಿದನು. (ಇಬ್ರಿ. 11:24, 25, 27) ಯೋಸೆಫನು, ತನ್ನ ವಿರುದ್ಧ ಪ್ರತೀಕಾರ ತೀರಿಸಲು ಪೋಟೀಫರನ ಹೆಂಡತಿಗೆ ಅಧಿಕಾರವಿದೆಯೆಂದು ತಿಳಿದಿದ್ದರೂ ಅನೈತಿಕ ವಿಷಯದಲ್ಲಿ ಒಳಗೂಡುವಂತೆ ಆಕೆ ತಂದ ಒತ್ತಡಕ್ಕೆ ಮಣಿಯಲಿಲ್ಲ. (ಆದಿ. 39:7-9) ದಾನಿಯೇಲನು, ‘ತಾನು ರಾಜನ ಭೋಜನಪದಾರ್ಥಗಳನ್ನು ತಿಂದು ತನ್ನನ್ನು ಅಶುದ್ಧಮಾಡಿಕೊಳ್ಳಬಾರದೆಂದು ನಿಶ್ಚಯಿಸಿದನು.’ ಇದನ್ನು ಬಾಬಿಲೋನಿನ ಕಂಚುಕಿಯರ ಅಧ್ಯಕ್ಷನು ಒಪ್ಪುವುದು ಕಷ್ಟಕರವಾಗಿದ್ದರೂ ದಾನಿಯೇಲನು ಈ ನಿರ್ಣಯಕ್ಕೆ ಅಂಟಿಕೊಂಡನು. (ದಾನಿ. 1:8-14) ಫಲಿತಾಂಶವು ಏನೇ ಆಗಿದ್ದರೂ ಇತಿಹಾಸದಾದ್ಯಂತ ದೇವಜನರು ಸರಿಯಾದದ್ದನ್ನು ಮಾಡಲು ಸ್ಥಿರ ನಿಲುವನ್ನು ತೆಗೆದುಕೊಂಡರು ಎಂಬುದನ್ನು ಈ ಎಲ್ಲ ಉದಾಹರಣೆಗಳು ತೋರಿಸುತ್ತವೆ. ಅವರು ಮನುಷ್ಯರಿಗೆ ವಿಧೇಯರಾಗುವ ಮೂಲಕ ಅವರ ಮೆಚ್ಚುಗೆ ಪಡೆಯಲು ಪ್ರಯತ್ನಿಸಲಿಲ್ಲ. ನಾವು ಅವರಂತೆಯೇ ಇರಬೇಕು.

5 ನಮ್ಮ ಧೈರ್ಯದ ನಿಲುವನ್ನು ಮೊಂಡುತನವೆಂದು ತಪ್ಪಾಗಿ ಭಾವಿಸಬಾರದು; ರಾಜಕೀಯ ವ್ಯವಸ್ಥೆಗೆ ವಿರೋಧವನ್ನು ಸೂಚಿಸುತ್ತಾ ದಂಗೆಯೇಳುವಂಥ ಜನರೂ ನಾವಾಗಿರುವುದಿಲ್ಲ. ಬದಲಿಗೆ, ಯಾವುದೇ ಮಾನವನ ಅಧಿಕಾರಕ್ಕಿಂತ ಹೆಚ್ಚಾಗಿ ಯೆಹೋವನ ಅಧಿಕಾರಕ್ಕೆ ತಲೆಬಾಗಲು ನಾವು ದೃಢನಿಶ್ಚಯ ಮಾಡಿದ್ದೇವೆ. ಮಾನವ ನಿಯಮಗಳು ದೇವರ ನಿಯಮಗಳಿಗೆ ವಿರುದ್ಧವಾಗಿರುವಾಗ ನಾವೇನು ಮಾಡುತ್ತೇವೆಂದು ನಿರ್ಣಯಿಸುವುದು ಕಷ್ಟವಲ್ಲ. ಒಂದನೆಯ ಶತಮಾನದ ಅಪೊಸ್ತಲರಂತೆ ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗುತ್ತೇವೆ.

6 ದೇವರ ಅಧಿಕಾರವನ್ನು ಅಂಗೀಕರಿಸಲು ನಮಗೆ ಯಾವುದು ಸಹಾಯಮಾಡಿದೆ? ಜ್ಞಾನೋಕ್ತಿ 3:5, 6ರ ಮಾತುಗಳನ್ನು ನಾವು ಪಾಲಿಸುತ್ತೇವೆ. ಅದು ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ದೇವರು ನಮ್ಮಿಂದ ಏನನ್ನೇ ಕೇಳಿಕೊಳ್ಳಲಿ ಅದು ನಮ್ಮ ಒಳಿತಿಗಾಗಿರುತ್ತದೆಂಬ ನಂಬಿಕೆ ನಮಗಿದೆ. (ಧರ್ಮೋಪದೇಶಕಾಂಡ 10:12, 13 ಓದಿ.) ಇಸ್ರಾಯೇಲ್ಯರಿಗೆ ತನ್ನ ಕುರಿತು ತಿಳಿಸುತ್ತಾ ಯೆಹೋವನು ಹೇಳಿದ್ದು: “ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” ಅನಂತರ ಆತನು ಕೂಡಿಸಿದ್ದು: “ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾ. 48:17, 18) ಆ ಮಾತುಗಳಲ್ಲಿ ನಾವು ಭರವಸೆಯಿಡುತ್ತೇವೆ. ದೇವರ ಆಜ್ಞೆಗಳಿಗೆ ವಿಧೇಯರಾಗುವುದು ನಮಗೆ ಸದಾ ಪ್ರಯೋಜನಕರವಾಗಿದೆ ಎಂದು ನಾವು ದೃಢವಾಗಿ ನಂಬುತ್ತೇವೆ.

7 ಯೆಹೋವನ ವಾಕ್ಯದಲ್ಲಿ ಕೆಲವು ಆವಶ್ಯಕತೆಗಳು ಏಕೆ ಕೊಡಲ್ಪಟ್ಟಿವೆ ಎಂದು ನಮಗೆ ಪೂರ್ಣವಾಗಿ ಅರ್ಥವಾಗದಿದ್ದರೂ ನಾವು ಆತನ ಅಧಿಕಾರವನ್ನು ಅಂಗೀಕರಿಸಿ ವಿಧೇಯರಾಗುತ್ತೇವೆ. ಅದೊಂದು ಅಂಧಶ್ರದ್ಧೆಯಲ್ಲ, ಭರವಸೆಯಾಗಿದೆ. ನಮಗೇನು ಉತ್ತಮ ಎಂಬುದು ಯೆಹೋವನಿಗೆ ಚೆನ್ನಾಗಿ ತಿಳಿದಿದೆಯೆಂದು ನಾವು ಮನಸಾರೆ ನಂಬುವುದನ್ನು ಅದು ಪ್ರತಿಫಲಿಸುತ್ತದೆ. ನಾವು ವಿಧೇಯರಾಗುವಾಗ ಪ್ರೀತಿಯನ್ನು ಸಹ ವ್ಯಕ್ತಪಡಿಸುತ್ತೇವೆ. ಈ ಕುರಿತು ಅಪೊಸ್ತಲ ಯೋಹಾನನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾ. 5:3) ಆದರೆ, ವಿಧೇಯತೆ ತೋರಿಸುವುದರಲ್ಲಿ ನಾವು ಕಡೆಗಣಿಸಬಾರದಂಥ ಇನ್ನೊಂದು ವಿಷಯವು ಕೂಡ ಇದೆ.

ನಮ್ಮ ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದು

8 ನಾವು ನಮ್ಮ ‘ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಾಗಿರಬೇಕೆಂದು’ ಬೈಬಲ್‌ ಸಲಹೆ ನೀಡುತ್ತದೆ. (ಇಬ್ರಿ. 5:14) ಆದ್ದರಿಂದ, ಸ್ವಲ್ಪವೂ ಯೋಚಿಸದೆ ಯಾಂತ್ರಿಕವಾಗಿ ದೇವರ ನಿಯಮಗಳಿಗೆ ವಿಧೇಯರಾಗುವುದು ನಮ್ಮ ಧ್ಯೇಯವಲ್ಲ. ಬದಲಿಗೆ, ಯೆಹೋವನ ಮಟ್ಟಗಳ ಆಧಾರದ ಮೇಲೆ ನಾವು ‘ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಾಗಿರಬೇಕು.’ ಯೆಹೋವನ ಮಾರ್ಗಗಳಲ್ಲಿ ಅಡಗಿರುವ ಜ್ಞಾನವನ್ನು ಅರಿಯಲು ನಾವು ಬಯಸುತ್ತೇವೆ. ಆಗ ನಾವು ಕೀರ್ತನೆಗಾರನಂತೆ “ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ಹೇಳಬಲ್ಲೆವು.—ಕೀರ್ತ. 40:8.

9 ಕೀರ್ತನೆಗಾರನಂತೆ ನಾವು ದೇವರ ನಿಯಮಗಳನ್ನು ಗಣ್ಯಮಾಡಬೇಕಾದರೆ ಬೈಬಲಿನಿಂದ ನಾವೇನನ್ನು ಓದುತ್ತೇವೋ ಅದರ ಕುರಿತು ಧ್ಯಾನಿಸಬೇಕು. ಉದಾಹರಣೆಗೆ, ಯೆಹೋವನು ಕೊಟ್ಟಿರುವ ಒಂದು ನಿರ್ದಿಷ್ಟ ಕಟ್ಟಳೆಯ ಕುರಿತು ಕಲಿಯುವಾಗ ನಾವು ಹೀಗೆ ಕೇಳಿಕೊಳ್ಳಬಹುದು: ‘ಈ ಆಜ್ಞೆ ಅಥವಾ ಮೂಲತತ್ತ್ವವು ಏಕೆ ವಿವೇಕವುಳ್ಳದ್ದಾಗಿದೆ? ಇದಕ್ಕೆ ವಿಧೇಯತೆ ತೋರಿಸುವುದು ಒಳ್ಳೇದೇಕೆ? ಈ ವಿಷಯದಲ್ಲಿ ದೇವರಿಗೆ ಅವಿಧೇಯರಾದವರು ಯಾವ ದುಷ್ಪರಿಣಾಮಗಳನ್ನು ಅನುಭವಿಸಿದ್ದಾರೆ?’ ಹೀಗೆ ನಮ್ಮ ಮನಸ್ಸಾಕ್ಷಿಯು ಯೆಹೋವನ ಮಾರ್ಗಗಳಿಗೆ ಅನುಗುಣವಾಗಿರುವಲ್ಲಿ ನಾವು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ನಿರ್ಣಯವನ್ನು ಮಾಡುವೆವು. ಅಲ್ಲದೆ, ‘[ಯೆಹೋವನ] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದುಕೊಳ್ಳಲು’ ಶಕ್ತರಾಗುವೆವು. ಮತ್ತು ಅದಕ್ಕೆ ವಿಧೇಯರಾಗುವೆವು. (ಎಫೆ. 5:17) ಆದರೆ ಇದು ಯಾವಾಗಲೂ ಸುಲಭವಲ್ಲ.

ದೇವರ ಅಧಿಕಾರವನ್ನು ಹತ್ತಿಕ್ಕಲು ಸೈತಾನನ ಯತ್ನ

10 ಸೈತಾನನು ದೇವರ ಅಧಿಕಾರವನ್ನು ಹತ್ತಿಕ್ಕಲು ದೀರ್ಘಕಾಲದಿಂದ ಪ್ರಯತ್ನಿಸಿದ್ದಾನೆ. ಅವನ ಸ್ವತಂತ್ರ ಮನೋಭಾವವು ಹಲವಾರು ವಿಧಗಳಲ್ಲಿ ವ್ಯಕ್ತವಾಗಿದೆ. ಉದಾಹರಣೆಗೆ, ದೇವರು ಮಾಡಿರುವ ವಿವಾಹದ ಏರ್ಪಾಡಿಗೆ ಜನರು ತೋರಿಸುವ ನಿರ್ಲಕ್ಷ್ಯದ ಕುರಿತು ಯೋಚಿಸಿ. ಕೆಲವರು ವಿವಾಹವಾಗದೆ ಒಟ್ಟಿಗೆ ಜೀವಿಸುತ್ತಾರೆ. ಇನ್ನು ಕೆಲವರು ತಮ್ಮ ಸಂಗಾತಿಗೆ ವಿಚ್ಛೇದ ನೀಡಲು ದಾರಿಹುಡುಕುತ್ತಾರೆ. ಈ ಎರಡೂ ವಿಧದ ಜನರು ಜನಪ್ರಿಯ ನಟಿಯೊಬ್ಬಳ ಮಾತುಗಳೊಂದಿಗೆ ಸಮ್ಮತಿಸಬಹುದು. ಆಕೆ ತನ್ನ ಅಭಿಪ್ರಾಯವನ್ನು ಹೇಳಿದ್ದು: “ಜೀವನಪರ್ಯಂತ ಒಬ್ಬ ಸಂಗಾತಿಯೊಂದಿಗೆ ಜೀವಿಸುವುದು ಗಂಡು-ಹೆಣ್ಣು ಇಬ್ಬರಿಗೂ ಅಸಾಧ್ಯವಾದ ಸಂಗತಿ. ತಮ್ಮ ಸಂಗಾತಿಗೆ ನಿಷ್ಠರಾಗಿರುವ ಮತ್ತು ನಿಷ್ಠರಾಗಿರಲು ಬಯಸುವ ಜನರನ್ನು ನಾನೆಂದೂ ಕಂಡಿಲ್ಲ.” ತದ್ರೀತಿಯಲ್ಲಿ ಒಬ್ಬ ಖ್ಯಾತ ನಟ ತನ್ನ ಮುರಿದ ವೈವಾಹಿಕ ಜೀವನದ ಕುರಿತು ನೆನಸಿಕೊಳ್ಳುತ್ತಾ, “ಕೊನೆ ತನಕ ಒಬ್ಬರೊಂದಿಗೇ ಜೀವನ ನಡೆಸಲು ಆಗುತ್ತದೆಂದು ನನಗೆ ಅನಿಸುವುದಿಲ್ಲ” ಎಂದು ಹೇಳಿಕೆಯನ್ನಿತ್ತನು. ನಾವು ಹೀಗೆ ಕೇಳಿಕೊಳ್ಳತಕ್ಕದ್ದು: ‘ನಾನು ವಿವಾಹದ ವಿಷಯದಲ್ಲಿ ಯೆಹೋವನ ಅಧಿಕಾರವನ್ನು ಅಂಗೀಕರಿಸುತ್ತೇನೋ? ಅಥವಾ ಲೋಕದ ಸಡಿಲ ಮನೋಭಾವವು ನನ್ನ ಆಲೋಚನೆಯನ್ನು ಪ್ರಭಾವಿಸಿದೆಯೇ?’

11 ಯೆಹೋವನ ಸಂಘಟನೆಯಲ್ಲಿರುವ ಒಬ್ಬ ಯುವ ವ್ಯಕ್ತಿ ನೀವಾಗಿದ್ದೀರೋ? ಹಾಗಿರುವಲ್ಲಿ ಯೆಹೋವನ ಅಧಿಕಾರಕ್ಕೆ ಅಧೀನರಾಗುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ನೀವು ನೆನಸುವಂತೆ ಸೈತಾನನು ವಿಶೇಷವಾಗಿ ಬಯಸುತ್ತಾನೆ. ‘ಯೌವನದ ಇಚ್ಛೆ’ ಮತ್ತು ಸಮವಯಸ್ಕರಿಂದ ಬರುವ ಒತ್ತಡವು, ನಿಮ್ಮ ಸ್ವಾತಂತ್ರ್ಯವನ್ನು ದೇವರ ನಿಯಮ ಕಸಿದುಕೊಂಡುಬಿಟ್ಟಿದೆ ಎಂದು ನೀವು ನೆನಸುವಂತೆ ಮಾಡಬಹುದು. (2 ತಿಮೊ. 2:22) ಆದರೆ ಹಾಗಾಗಲು ಬಿಡಬೇಡಿ. ದೇವರ ಮಟ್ಟಗಳನ್ನು ಪಾಲಿಸುವುದು ಎಷ್ಟು ವಿವೇಕಯುತವೆಂದು ತಿಳಿಯಲು ಪ್ರಯತ್ನಿಸಿರಿ. ಉದಾಹರಣೆಗೆ “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಬೈಬಲ್‌ ನಿಮಗೆ ಹೇಳುತ್ತದೆ. (1 ಕೊರಿಂ. 6:18) ಈಗ ನೀವು ಹೀಗೆ ಕೇಳಿಕೊಳ್ಳಿರಿ: ‘ಆ ಆಜ್ಞೆಯನ್ನು ಪಾಲಿಸುವುದು ಏಕೆ ವಿವೇಕಯುತವಾಗಿದೆ? ಅದಕ್ಕೆ ವಿಧೇಯತೆ ತೋರಿಸುವುದರಿಂದ ನನಗಾಗುವ ಪ್ರಯೋಜನವೇನು?’ ದೇವರ ಆಜ್ಞೆಯನ್ನು ಕಡೆಗಣಿಸಿ, ಆ ತಪ್ಪಿಗಾಗಿ ಭಾರೀ ಬೆಲೆತೆತ್ತ ಕೆಲವರ ಕುರಿತು ನಿಮಗೆ ತಿಳಿದಿರಬಹುದು. ಅವರು ಈಗ ನಿಜವಾಗಿಯೂ ಸಂತೋಷದಿಂದಿದ್ದಾರೋ? ಈ ಮುಂಚೆ ಯೆಹೋವನ ಸಂಘಟನೆಯೊಂದಿಗೆ ಸಹವಸಿಸುತ್ತಿದ್ದಾಗ ಅನುಭವಿಸುತ್ತಿದ್ದದಕ್ಕಿಂತ ಉತ್ತಮವಾದ ಜೀವಿತವನ್ನು ಅವರು ಈಗ ಅನುಭವಿಸುತ್ತಿದ್ದಾರೋ? ದೇವರ ಇತರ ಸೇವಕರು ಕಂಡುಕೊಳ್ಳದೇ ಇರುವಂಥ ಸಂತೋಷದ ಯಾವುದಾದರೂ ರಹಸ್ಯವನ್ನು ನಿಜವಾಗಿಯೂ ಅವರು ಕಂಡುಕೊಂಡಿದ್ದಾರೋ?—ಯೆಶಾಯ 65:14 ಓದಿ.

12 ಸ್ವಲ್ಪ ಸಮಯದ ಹಿಂದೆ ಶಾರನ್‌ ಎಂಬ ಕ್ರೈಸ್ತಳು ಹೇಳಿದ್ದನ್ನು ಪರಿಗಣಿಸಿರಿ: “ಯೆಹೋವನ ನಿಯಮಕ್ಕೆ ಅವಿಧೇಯಳಾದ್ದರಿಂದಲೇ ನಾನೀಗ ಮಾರಕವಾದ ಏಡ್ಸ್‌ ರೋಗದಿಂದ ನರಳುತ್ತಿದ್ದೇನೆ. ನಾನು ಯೆಹೋವನ ಸೇವೆಯಲ್ಲಿ ಆನಂದಿಸಿದ ಆ ವರುಷಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.” ಯೆಹೋವನ ನಿಯಮಗಳನ್ನು ಮುರಿದದ್ದು ಎಷ್ಟೊಂದು ಮೂರ್ಖತನವೆಂದು ಅವಳಿಗೆ ಮನವರಿಕೆಯಾಯಿತು. ತಾನು ಅವುಗಳ ಮೌಲ್ಯವನ್ನು ಗಣ್ಯಮಾಡಬೇಕಿತ್ತೆಂದು ಆಕೆ ಪರಿತಪಿಸಿದಳು. ಹೌದು, ಯೆಹೋವನ ನಿಯಮಗಳು ನಮ್ಮ ಸುರಕ್ಷೆಗಾಗಿಯೇ ಇವೆ. ಶಾರನ್‌ ಮೇಲಿನ ಮಾತುಗಳನ್ನು ಬರೆದು ಕೇವಲ ಏಳೇ ವಾರಗಳಲ್ಲಿ ಮೃತಪಟ್ಟಳು. ಅವಳ ಈ ದುರಂತ ಕಥೆಯು ತೋರಿಸುವಂತೆ, ಈ ದುಷ್ಟ ಲೋಕದ ಭಾಗವಾಗುವವರಿಗೆ ಸೈತಾನನು ಖಂಡಿತ ಒಳ್ಳೇದೇನನ್ನೂ ನೀಡಲಾರನು. ‘ಸುಳ್ಳಿಗೆ ಮೂಲಪುರುಷನಾದ’ ಅವನು ಅನೇಕ ವಚನಗಳನ್ನು ಕೊಡುತ್ತಾನಾದರೂ ಅವೆಲ್ಲವೂ ವ್ಯರ್ಥ. ಹವ್ವಳಿಗೆ ಕೊಟ್ಟ ವಚನವನ್ನು ಹೇಗೆ ಉಳಿಸಿಕೊಳ್ಳಲಿಲ್ಲವೋ ಹಾಗೆಯೇ ತನ್ನ ಯಾವ ವಚನಗಳನ್ನೂ ಅವನು ಉಳಿಸಿಕೊಳ್ಳುವುದಿಲ್ಲ. (ಯೋಹಾ. 8:44) ಯೆಹೋವನ ಅಧಿಕಾರವನ್ನು ಅಂಗೀಕರಿಸುವುದೇ ಯಾವಾಗಲೂ ನಮಗೆ ಒಳಿತು ಎಂಬುದಂತೂ ಸತ್ಯ.

ಸ್ವತಂತ್ರ ಮನೋಭಾವದ ವಿರುದ್ಧ ಎಚ್ಚರವಾಗಿರ್ರಿ

13 ಯೆಹೋವನ ಅಧಿಕಾರವನ್ನು ಅಂಗೀಕರಿಸಬೇಕಾದರೆ ನಾವು ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳದಂತೆ ಎಚ್ಚರವಾಗಿರಬೇಕು. ಅಹಂಭಾವದ ಸ್ವಭಾವವು ಯಾರ ಮಾರ್ಗದರ್ಶನವೂ ನಮಗೆ ಅಗತ್ಯವಿಲ್ಲ ಎಂದು ನೆನಸುವಂತೆ ಮಾಡಬಹುದು. ಉದಾಹರಣೆಗೆ, ದೇವಜನರ ಮಧ್ಯದಲ್ಲಿ ಮುಂದಾಳತ್ವ ವಹಿಸುವವರು ನೀಡುವ ಸಲಹೆಗಳನ್ನು ನಾವು ನಿರಾಕರಿಸಬಹುದು. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ಸಮಯಕ್ಕೆ ಸರಿಯಾಗಿ ಆಧ್ಯಾತ್ಮಿಕ ಆಹಾರವನ್ನು ಒದಗಿಸುವಂತೆ ದೇವರು ಒಂದು ಏರ್ಪಾಡು ಮಾಡಿದ್ದಾನೆ. (ಮತ್ತಾ. 24:45-47) ಇದರ ಮೂಲಕವೇ ಯೆಹೋವನು ಇಂದು ತನ್ನ ಜನರನ್ನು ಪರಾಮರಿಸುತ್ತಿದ್ದಾನೆಂದು ನಾವು ನಮ್ರತೆಯಿಂದ ಅಂಗೀಕರಿಸಬೇಕು. ನಂಬಿಗಸ್ತ ಅಪೊಸ್ತಲರಂತೆ ಇರ್ರಿ. ಯೇಸುವಿನ ಕೆಲವು ಶಿಷ್ಯರು ಕೋಪಗೊಂಡು ಆತನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟಾಗ ಯೇಸು ತನ್ನ ಅಪೊಸ್ತಲರಿಗೆ, “ನೀವು ಸಹ ಹೋಗಬೇಕೆಂದಿದ್ದೀರಾ?” ಎಂದು ಕೇಳಿದನು. ಅದಕ್ಕೆ ಪೇತ್ರನು ಉತ್ತರಿಸಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.”—ಯೋಹಾ. 6:66-68.

14 ಯೆಹೋವನ ಅಧಿಕಾರವನ್ನು ಅಂಗೀಕರಿಸುವುದರಲ್ಲಿ ಆತನ ವಾಕ್ಯದ ಮೇಲೆ ಆಧರಿತವಾದ ಸಲಹೆಗಳಿಗೆ ಅನುಸಾರವಾಗಿ ಕ್ರಿಯೆಗೈಯುವುದು ಸೇರಿದೆ. ಉದಾಹರಣೆಗೆ, ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವು ನಮಗೆ ‘ಎಚ್ಚರವಾಗಿದ್ದು, ಸ್ವಸ್ಥಚಿತ್ತರಾಗಿರಿ’ ಎಂದು ಸಲಹೆ ಕೊಡುತ್ತಾ ಬಂದಿದೆ. (1 ಥೆಸ. 5:6) ಅಂಥ ಸಲಹೆಯು ಈ ಕಡೇ ದಿವಸಗಳಲ್ಲಿ ತಕ್ಕದ್ದಾಗಿದೆ. ಏಕೆಂದರೆ, ಇಂದು ಅನೇಕರು “ಸ್ವಾರ್ಥಚಿಂತಕರೂ ಹಣದಾಸೆಯವರೂ” ಆಗಿದ್ದಾರೆ. (2 ತಿಮೊ. 3:1, 2) ಎಲ್ಲೆಡೆಯೂ ಇರುವ ಈ ಮನೋಭಾವಗಳು ನಮ್ಮನ್ನು ಸಹ ತಟ್ಟಸಾಧ್ಯವೋ? ಹೌದು, ಸಾಧ್ಯವಿದೆ. ಪ್ರಾಪಂಚಿಕ ಗುರಿಗಳು ನಮ್ಮನ್ನು ಕ್ರಮೇಣ ಆಧ್ಯಾತ್ಮಿಕ ನಿದ್ರೆಗೆ ನಡೆಸಬಹುದು ಅಥವಾ ಪ್ರಾಪಂಚಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಮಾಡಬಹುದು. (ಲೂಕ 12:16-21) ಆದುದರಿಂದ ಸೈತಾನನ ಲೋಕದಲ್ಲಿ ಎಲ್ಲೆಲ್ಲೂ ಹರಡಿರುವ ಸ್ವಾರ್ಥಭರಿತ ಜೀವನಶೈಲಿಯನ್ನು ತೊರೆಯುವುದು ಮತ್ತು ಬೈಬಲ್‌ ಸಲಹೆಯನ್ನು ಅಂಗೀಕರಿಸುವುದು ಎಷ್ಟು ವಿವೇಕಯುತವಾಗಿದೆ!—1 ಯೋಹಾ. 2:16.

15 ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗ ಒದಗಿಸುವ ಆಧ್ಯಾತ್ಮಿಕ ಆಹಾರವು ನೇಮಿತ ಹಿರಿಯರ ಮೂಲಕ ಸ್ಥಳಿಕ ಸಭೆಗಳಿಗೆ ವಿತರಿಸಲ್ಪಡುತ್ತದೆ. ಬೈಬಲ್‌ ನಮಗೆ ಬುದ್ಧಿ ಹೇಳುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿ. 13:17) ಹಾಗಾದರೆ ಸಭಾ ಹಿರಿಯರು ತಪ್ಪೇ ಮಾಡುವುದಿಲ್ಲವೆಂದು ಇದರ ಅರ್ಥವೋ? ಇಲ್ಲವೇ ಇಲ್ಲ! ದೇವರು ಅವರ ಅಪರಿಪೂರ್ಣತೆಗಳನ್ನು ಯಾವನೇ ಮನುಷ್ಯನಿಗಿಂತ ಹೆಚ್ಚು ಸ್ಪಷ್ಟವಾಗಿ ತಿಳಿದಿದ್ದಾನೆ. ಹಾಗಿದ್ದರೂ ನಾವು ಅವರಿಗೆ ಅಧೀನರಾಗಿರಬೇಕೆಂದು ಆತನು ಬಯಸುತ್ತಾನೆ. ಹಿರಿಯರು ಅಪರಿಪೂರ್ಣರಾಗಿದ್ದರೂ ನಾವು ಅವರೊಂದಿಗೆ ಸಹಕರಿಸುವುದು ಯೆಹೋವನ ಅಧಿಕಾರವನ್ನು ಅಂಗೀಕರಿಸುತ್ತೇವೆಂಬುದಕ್ಕೆ ಸಾಕ್ಷ್ಯವಾಗಿದೆ.

ದೀನತೆಯ ಮಹತ್ವ

16 ಯೇಸುವೇ ನಿಜವಾಗಿಯೂ ಸಭೆಯ ಶಿರಸ್ಸಾಗಿದ್ದಾನೆ ಎಂದು ನಾವು ಯಾವಾಗಲೂ ನೆನಪಿನಲ್ಲಿಡಬೇಕು. (ಕೊಲೊ. 1:18) ಇದು, ನಾವು ನೇಮಿತ ಹಿರಿಯರ ಮಾರ್ಗದರ್ಶನಕ್ಕೆ ನಮ್ರತೆಯಿಂದ ಅಧೀನರಾಗಿ ಅವರನ್ನು ‘ಬಹಳವಾಗಿ ಸನ್ಮಾನಿಸಲು’ ಒಂದು ಕಾರಣವಾಗಿದೆ. (1 ಥೆಸ. 5:12, 13) ಸಭಾ ಹಿರಿಯರು ಸಹ ತಾವು ಅಧೀನರೆಂಬುದನ್ನು ಹೇಗೆ ತೋರಿಸಸಾಧ್ಯವಿದೆ? ಅವರು ಬೋಧಿಸುವ ವಿಷಯದಲ್ಲಿ ಜಾಗ್ರತೆ ವಹಿಸುತ್ತಾ, ಸಭೆಗೆ ತಮ್ಮ ಸ್ವಂತ ವಿಚಾರಗಳನ್ನಲ್ಲ, ದೇವರ ವಿಚಾರಗಳನ್ನು ತಿಳಿಯಪಡಿಸುವ ಮೂಲಕವೇ. ತಮ್ಮ ಸ್ವಂತ ಆಲೋಚನೆಗಳನ್ನು ವರ್ಧಿಸುವ ಸಲುವಾಗಿ ಅವರು ‘ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗವುದಿಲ್ಲ.’—1 ಕೊರಿಂ. 4:6.

17 ಸ್ವಂತಮಾನ ಪಡೆಯಲು ಪ್ರಯತ್ನಿಸುವುದರಿಂದ ಉಂಟಾಗುವ ಅಪಾಯಗಳನ್ನು ಸಭೆಯಲ್ಲಿರುವ ಎಲ್ಲರೂ ಅರಿತಿರಬೇಕು. (ಜ್ಞಾನೋ. 25:27) ಅಪೊಸ್ತಲ ಯೋಹಾನನು ಭೇಟಿಯಾದ ಕ್ರೈಸ್ತನೊಬ್ಬನಿಗೆ ಇಂಥ ಅಭಿಲಾಷೆಯೇ ಪಾಶವಾಗಿ ಪರಿಣಮಿಸಿತು. ಯೋಹಾನನು ಬರೆದುದು: “ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು. ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ.” (3 ಯೋಹಾ. 9, 10) ಇದರಿಂದ ನಮಗಿಂದು ಕಲಿಯಲು ಒಂದು ಉತ್ತಮ ಪಾಠವಿದೆ. ನಮ್ಮನ್ನು ಪಾಶದೊಳಗೆ ಸಿಕ್ಕಿಸಿ ಹಾಕುವಂಥ ಎಲ್ಲಾ ರೀತಿಯ ಹೆಬ್ಬಯಕೆಗಳನ್ನು ಬೇರುಸಹಿತ ಕಿತ್ತು ಹಾಕುವುದು ಎಷ್ಟು ಪ್ರಾಮುಖ್ಯ ಎಂಬುದನ್ನು ಇದು ತೋರಿಸಿಕೊಡುತ್ತದೆ. ಬೈಬಲ್‌ ಹೇಳುವುದು: “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು.” ಆದುದರಿಂದ ದೇವರ ಅಧಿಕಾರವನ್ನು ಅಂಗೀಕರಿಸುವವರು ಹೆಮ್ಮೆಯನ್ನು ತೊರೆಯುತ್ತಾರೆ. ಇಲ್ಲದಿರುವಲ್ಲಿ ಇದು ಅವಮಾನಕ್ಕೆ ನಡೆಸುತ್ತದೆ.—ಜ್ಞಾನೋ. 11:2; 16:18.

18 ಈ ಲೋಕದ ಸ್ವತಂತ್ರ ಮನೋಭಾವವನ್ನು ಪ್ರತಿರೋಧಿಸಿ ಯೆಹೋವನ ಅಧಿಕಾರವನ್ನು ಅಂಗೀಕರಿಸುತ್ತಾ ಮುಂದುವರಿಯುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ. ಯೆಹೋವನ ಸೇವೆ ಮಾಡುವಂಥ ಮಹಾ ಗೌರವದ ಕುರಿತು ಆಗಾಗ್ಗೆ ಗಣ್ಯತೆಯಿಂದ ಧ್ಯಾನಿಸಿರಿ. ಆತನು ತನ್ನ ಪವಿತ್ರಾತ್ಮದ ಮೂಲಕ ನಿಮ್ಮನ್ನು ತನ್ನ ಹತ್ತಿರಕ್ಕೆ ಎಳೆದಿದ್ದಾನೆಂಬದಕ್ಕೆ ನೀವು ದೇವಜನರೊಂದಿಗಿರುವುದೇ ರುಜುವಾತಾಗಿದೆ. (ಯೋಹಾ. 6:44) ದೇವರೊಂದಿಗಿನ ನಿಮ್ಮ ಸಂಬಂಧವನ್ನು ಎಂದೂ ಕಡಿಮೆ ಮೌಲ್ಯದ್ದಾಗಿ ಪರಿಗಣಿಸದಿರಿ. ಸ್ವತಂತ್ರ ಮನೋಭಾವವನ್ನು ಪ್ರತಿರೋಧಿಸಿ ಯೆಹೋವನ ಅಧಿಕಾರವನ್ನು ಅಂಗೀಕರಿಸುತ್ತೀರೆಂಬದನ್ನು ತೋರಿಸಿಕೊಡಲು ಜೀವಿತದ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮಿಂದಾಗುವ ಸರ್ವ ಪ್ರಯತ್ನವನ್ನು ಮಾಡಿರಿ.

ನಿಮಗೆ ನೆನಪಿದೆಯೋ?

• ಯೆಹೋವನ ಅಧಿಕಾರವನ್ನು ಅಂಗೀಕರಿಸುವುದರಲ್ಲಿ ಏನೆಲ್ಲ ಒಳಗೂಡಿದೆ?

• ನಮ್ಮ ‘ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದು’ ಯೆಹೋವನ ಅಧಿಕಾರವನ್ನು ಅಂಗೀಕರಿಸುವುದಕ್ಕೆ ಹೇಗೆ ಸಂಬಂಧಿಸಿದೆ?

• ಯಾವೆಲ್ಲ ಕ್ಷೇತ್ರಗಳಲ್ಲಿ ಸೈತಾನನು ದೇವರ ಅಧಿಕಾರವನ್ನು ಕಡೆಗಣಿಸಲು ಪ್ರಯತ್ನಿಸುತ್ತಾನೆ?

• ಯೆಹೋವನ ಅಧಿಕಾರವನ್ನು ಅಂಗೀಕರಿಸಲು ದೀನತೆ ಏಕೆ ಅತ್ಯಗತ್ಯ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಅಧಿಕಾರಕ್ಕೆ ಅಧೀನರಾಗುವುದು ಇಂದು ಅನೇಕರಿಗೆ ಹಿಡಿಸದ ಸಂಗತಿಯಾಗಿದೆ ಏಕೆ? (ಬಿ) ಇತರರ ಅಧಿಕಾರಕ್ಕೆ ಅಧೀನರಾಗಲು ಇಷ್ಟಪಡದವರು ನಿಜಕ್ಕೂ ಸ್ವತಂತ್ರರೋ? ವಿವರಿಸಿ.

3. ಒಂದನೆಯ ಶತಮಾನದ ಕ್ರೈಸ್ತರು ತಾವು ಮಾನವ ಅಧಿಕಾರಕ್ಕೆ ಕಣ್ಣುಮುಚ್ಚಿ ಅಧೀನರಾಗಲಿಲ್ಲ ಎಂಬುದನ್ನು ಹೇಗೆ ತೋರಿಸಿಕೊಟ್ಟರು?

4. ದೇವಜನರಲ್ಲಿ ಹೆಚ್ಚಿನವರು ಜನಪ್ರಿಯವಲ್ಲದ ಜೀವನಮಾರ್ಗವನ್ನು ಅನುಸರಿಸಿದ್ದರೆಂದು ಹೀಬ್ರು ಶಾಸ್ತ್ರಗ್ರಂಥದ ಯಾವ ಉದಾಹರಣೆಗಳು ತೋರಿಸುತ್ತವೆ?

5. ಅಧಿಕಾರದ ಕಡೆಗೆ ನಮಗಿರುವ ಮನೋಭಾವವು ಲೋಕದವರಿಗಿಂತ ಹೇಗೆ ಭಿನ್ನವಾಗಿದೆ?

6. ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದು ನಮಗೆ ಸದಾ ಪ್ರಯೋಜನಕರವಾಗಿದೆಯೇಕೆ?

7. ದೇವರ ವಾಕ್ಯದಲ್ಲಿ ಕೊಡಲ್ಪಟ್ಟಿರುವ ಒಂದು ಆಜ್ಞೆ ನಮಗೆ ಪೂರ್ಣವಾಗಿ ಅರ್ಥವಾಗದಿರುವಲ್ಲಿ ನಾವೇನು ಮಾಡಬೇಕು?

8. ನಮ್ಮ ‘ಜ್ಞಾನೇಂದ್ರಿಯಗಳನ್ನು ಶಿಕ್ಷಿಸಿಕೊಳ್ಳುವುದು’ ಯೆಹೋವನ ಅಧಿಕಾರವನ್ನು ಅಂಗೀಕರಿಸುವುದಕ್ಕೆ ಹೇಗೆ ಸಂಬಂಧಿಸಿದೆ?

9. ನಾವು ನಮ್ಮ ಮನಸ್ಸಾಕ್ಷಿಯನ್ನು ಯೆಹೋವನ ಮಟ್ಟಗಳಿಗೆ ಹೇಗೆ ಸರಿಹೊಂದಿಸಬಲ್ಲೆವು, ಮತ್ತು ಹಾಗೆ ಮಾಡುವುದು ಪ್ರಾಮುಖ್ಯವೇಕೆ?

10. ಸೈತಾನನು ದೇವರ ಅಧಿಕಾರವನ್ನು ಹತ್ತಿಕ್ಕಲು ಪ್ರಯತ್ನಿಸಿರುವ ಒಂದು ಕ್ಷೇತ್ರ ಯಾವುದು?

11, 12. (ಎ) ಯುವ ಜನರಿಗೆ ಯೆಹೋವನ ಅಧಿಕಾರವನ್ನು ಅಂಗೀಕರಿಸುವುದು ಕಷ್ಟಕರವಾಗಿರಬಹುದೇಕೆ? (ಬಿ) ಯೆಹೋವನ ನಿಯಮಗಳನ್ನೂ ಮೂಲತತ್ತ್ವಗಳನ್ನೂ ಕಡೆಗಣಿಸುವುದು ಎಷ್ಟೊಂದು ಮೂರ್ಖತನವೆಂಬುದಕ್ಕೆ ಒಂದು ಅನುಭವವನ್ನು ತಿಳಿಸಿರಿ.

13. ನಾವು ಸ್ವತಂತ್ರ ಮನೋಭಾವದ ಕುರಿತು ಎಚ್ಚರ ವಹಿಸಬೇಕಾದ ಒಂದು ಕ್ಷೇತ್ರವು ಯಾವುದು?

14, 15. ಬೈಬಲ್‌ ಸಲಹೆಗೆ ನಾವೇಕೆ ನಮ್ರತೆಯಿಂದ ಅಧೀನರಾಗಬೇಕು?

16. ಕ್ರೈಸ್ತ ಸಭೆಯ ಶಿರಸ್ಸಾಗಿರುವ ಯೇಸುವಿಗೆ ನಾವು ಯಾವ ರೀತಿಯಲ್ಲಿ ಗೌರವ ತೋರಿಸಬಹುದು?

17. ಹೆಬ್ಬಯಕೆಯು ಏಕೆ ಅಪಾಯಕಾರಿಯಾಗಿದೆ?

18. ಯೆಹೋವನ ಅಧಿಕಾರವನ್ನು ಅಂಗೀಕರಿಸುವಂತೆ ನಮಗೆ ಯಾವುದು ಸಹಾಯಮಾಡುವುದು?

[ಪುಟ 18ರಲ್ಲಿರುವ ಚಿತ್ರ]

‘ನಾವು ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕು’

[ಪುಟ 20ರಲ್ಲಿರುವ ಚಿತ್ರ]

ದೇವರ ಮಟ್ಟಗಳನ್ನು ಅನುಸರಿಸುವುದೇ ಯಾವಾಗಲೂ ವಿವೇಕಯುತವಾಗಿದೆ