ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರದೈಸಿನ ನಿರೀಕ್ಷೆಗೆ ಆಧಾರವಿದೆಯೆ?

ಪರದೈಸಿನ ನಿರೀಕ್ಷೆಗೆ ಆಧಾರವಿದೆಯೆ?

ಪರದೈಸಿನ ನಿರೀಕ್ಷೆಗೆ ಆಧಾರವಿದೆಯೆ?

‘ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟನು.’​—2 ಕೊರಿಂಥ 12:​2-4.

ಪರದೈಸ್‌. ಒಂದು ಭೂಪರದೈಸಿನ ಕುರಿತಾದ ದೇವರ ವಾಗ್ದಾನದ ಬಗ್ಗೆ ನೀವು ಮೊದಲ ಬಾರಿ ಕೇಳಿಸಿಕೊಂಡಾಗ ನಿಮಗೆ ಹೇಗನಿಸಿತು ಎಂಬುದು ನಿಮಗೆ ನೆನಪಿದೆಯೆ? ‘ಕುರುಡರ ಕಣ್ಣು ಕಾಣುವ, ಕಿವುಡರ ಕಿವಿ ಕೇಳುವ, ಅರಣ್ಯವು’ ಅಪಾರ ಸೌಂದರ್ಯದಿಂದ ನಳನಳಿಸುವುದರ ಕುರಿತು ಕಲಿತದ್ದು ನಿಮಗೆ ಜ್ಞಾಪಕವಿರಬಹುದು. ಅಥವಾ ತೋಳವು ಕುರಿಯ ಸಂಗಡ ವಾಸಿಸುವ ಮತ್ತು ಚಿಕ್ಕ ಮಗುವು ಚಿರತೆಯೊಂದಿಗಿರುವ ಪ್ರವಾದನೆಯ ಕುರಿತಾಗಿ ಏನು? ಮೃತರಾದ ಪ್ರಿಯ ಜನರು ಆ ಪರದೈಸಿನಲ್ಲಿರುವ ಪ್ರತೀಕ್ಷೆಯೊಂದಿಗೆ ಪುನಃ ಉಜ್ಜೀವಿಸಲ್ಪಡುವುದರ ಕುರಿತು ಓದಿದಾಗ ನೀವು ಪುಳಕಗೊಳ್ಳಲಿಲ್ಲವೋ?​—ಯೆಶಾಯ 11:6; 35:​5, 6; ಯೋಹಾನ 5:​28, 29.

2 ನಿಮ್ಮ ನಿರೀಕ್ಷೆಯು ನಿರಾಧಾರವಾದದ್ದೇನಲ್ಲ. ಪರದೈಸಿನ ಕುರಿತಾದ ಬೈಬಲ್‌ ವಾಗ್ದಾನಗಳನ್ನು ನೀವು ನಂಬಲು ಸಕಾರಣವಿದೆ. ಉದಾಹರಣೆಗೆ, ಶೂಲಕ್ಕೇರಿಸಲ್ಪಟ್ಟಿದ್ದ ದುಷ್ಕರ್ಮಿಗೆ “ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಯೇಸು ನುಡಿದ ಮಾತುಗಳಲ್ಲಿ ನಿಮಗೆ ದೃಢವಿಶ್ವಾಸವಿದೆ. (ಲೂಕ 23:43) ನೀವು ಈ ವಾಗ್ದಾನವನ್ನು ನಂಬುತ್ತೀರಿ: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” ದೇವರು ನಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ದುಃಖ, ಗೋಳಾಟ, ಮತ್ತು ಕಷ್ಟವು ಕೊನೆಗೊಳ್ಳುವುದು ಎಂಬ ವಾಗ್ದಾನದಲ್ಲಿಯೂ ನೀವು ವಿಶ್ವಾಸವಿಡುತ್ತೀರಿ. ಇದರ ಅರ್ಥ, ಒಂದು ಭೂಪರದೈಸ್‌ ಪುನಃ ಅಸ್ತಿತ್ವಕ್ಕೆ ಬರಲಿದೆ!​—2 ಪೇತ್ರ 3:13; ಪ್ರಕಟನೆ 21:4.

3 ಈ ಪರದೈಸಿನ ನಿರೀಕ್ಷೆಗಾಗಿರುವ ಇನ್ನೊಂದು ಆಧಾರವು, ಭೂಮಿಯಾದ್ಯಂತ ಇರುವ ಕ್ರೈಸ್ತರು ಈಗಾಗಲೇ ಯಾವುದರ ಭಾಗವಾಗಿದ್ದಾರೋ ಅದೇ ಆಗಿದೆ. ಇದೇನು? ದೇವರು ಒಂದು ಆಧ್ಯಾತ್ಮಿಕ ಪರದೈಸನ್ನು ಉಂಟುಮಾಡಿದ್ದಾನೆ ಮತ್ತು ತನ್ನ ಜನರನ್ನು ಅದರೊಳಗೆ ಕರೆತಂದಿದ್ದಾನೆ. “ಆಧ್ಯಾತ್ಮಿಕ ಪರದೈಸ್‌” ಎಂಬ ಪದವು ಕಾಲ್ಪನಿಕವಾಗಿ, ಅರ್ಥಮಾಡಿಕೊಳ್ಳಲು ಕಷ್ಟಕರವಾದದ್ದಾಗಿ ಕಂಡುಬರಬಹುದಾದರೂ, ಇಂಥ ಒಂದು ಪರದೈಸಿನ ಕುರಿತಾಗಿ ಮುಂತಿಳಿಸಲಾಗಿತ್ತು ಮತ್ತು ಇದು ಖಂಡಿತವಾಗಿಯೂ ಅಸ್ತಿತ್ವದಲ್ಲಿದೆ.

ಪರದೈಸಿನ ದರ್ಶನ

4 ಆಧ್ಯಾತ್ಮಿಕ ಪರದೈಸಿನ ವಿಷಯದಲ್ಲಿ ಅಪೊಸ್ತಲ ಪೌಲನು ಏನು ಬರೆದನು ಎಂಬುದನ್ನು ಗಮನಿಸಿರಿ: “ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು . . . ಮೂರನೆಯ ಆಕಾಶದ ಪರಿಯಂತರಕ್ಕೂ ಒಯ್ಯಲ್ಪಟ್ಟನು. . . . ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯರು ನುಡಿಯಲಶಕ್ಯವಾದ ಹೇಳಬಾರದ ಮಾತುಗಳನ್ನು ಕೇಳಿದನೆಂದು ಬಲ್ಲೆನು; ಆ ಸಮಯದಲ್ಲಿ ಅವನು ದೇಹಸಹಿತನಾಗಿದ್ದನೋ ದೇಹರಹಿತನಾಗಿದ್ದನೋ ನಾನರಿಯೆ, ದೇವರೇ ಬಲ್ಲನು.” (ಓರೆ ಅಕ್ಷರಗಳು ನಮ್ಮವು.) (2 ಕೊರಿಂಥ 12:2-4) ಈ ವಚನಭಾಗವು, ಯಾವ ವಚನಗಳಲ್ಲಿ ಪೌಲನು ತನ್ನ ಅಪೊಸ್ತಲತನವನ್ನು ಸಮರ್ಥಿಸಿದನೋ ಅವುಗಳ ಅನಂತರವೇ ಕಂಡುಬರುತ್ತದೆ. ಅಷ್ಟುಮಾತ್ರವಲ್ಲ, ಇಂಥ ಒಂದು ಅನುಭವವನ್ನು ಪಡೆದುಕೊಂಡಂತಹ ಬೇರಾವುದೇ ವ್ಯಕ್ತಿಯ ಕುರಿತು ಬೈಬಲ್‌ ಮಾತಾಡುವುದಿಲ್ಲ, ಮತ್ತು ಇದರ ಕುರಿತು ನಮಗೆ ತಿಳಿಸುತ್ತಿರುವುದು ಪೌಲನು ಮಾತ್ರವೇ. ಆದುದರಿಂದ, ಈ ದರ್ಶನವನ್ನು ಪಡೆದುಕೊಂಡವನು ಪೌಲನೇ ಆಗಿರುವುದು ಸಂಭವನೀಯ. ಈ ಅಮಾನುಷ ದರ್ಶನದಲ್ಲಿ ಅವನು ಯಾವ “ಪರದೈಸ”ನ್ನು ಪ್ರವೇಶಿಸಿದನು?​—2 ಕೊರಿಂಥ 11:​5, 23-31.

5 “ಮೂರನೆಯ ಆಕಾಶ”ವು ನಮ್ಮ ಭೂಗೋಳದ ಸುತ್ತಲಿರುವ ವಾತಾವರಣವನ್ನು ಅಥವಾ ಬಾಹ್ಯಾಕಾಶವನ್ನು ಸೂಚಿಸುತ್ತದೆ ಎಂದು ಪೂರ್ವಾಪರ ವಚನಗಳು ತಿಳಿಸುವುದಿಲ್ಲ. ಬೈಬಲ್‌ ಅನೇಕವೇಳೆ ಮೂರು ಎಂಬ ಸಂಖ್ಯೆಯನ್ನು ಒತ್ತು, ತೀವ್ರತೆ, ಅಥವಾ ಪ್ರಬಲತೆಯನ್ನು ಸೂಚಿಸಲಿಕ್ಕಾಗಿ ಉಪಯೋಗಿಸುತ್ತದೆ. (ಪ್ರಸಂಗಿ 4:12; ಯೆಶಾಯ 6:3; ಮತ್ತಾಯ 26:34, 75; ಪ್ರಕಟನೆ 4:8) ಹೀಗೆ, ದರ್ಶನದಲ್ಲಿ ಪೌಲನು ಏನು ಕಂಡನೋ ಅದು ಉನ್ನತವಾದದ್ದಾಗಿತ್ತು ಅಥವಾ ಘನತೆಗೇರಿಸಲ್ಪಟ್ಟದ್ದಾಗಿತ್ತು. ಅದು ಆಧ್ಯಾತ್ಮಿಕವಾದದ್ದಾಗಿತ್ತು.

6 ಆರಂಭದ ಬೈಬಲ್‌ ಪ್ರವಾದನೆಗಳು ನಮಗೆ ಒಳನೋಟವನ್ನು ನೀಡುತ್ತವೆ. ತನ್ನ ಪುರಾತನ ಜನರು ಅಪನಂಬಿಗಸ್ತರಾಗಿ ಪರಿಣಮಿಸಿದ ಬಳಿಕ ದೇವರು, ಬಾಬೆಲಿನವರು ಯೆಹೂದ ಮತ್ತು ಯೆರೂಸಲೇಮ್‌ನ ವಿರುದ್ಧ ಬರುವಂತೆ ಅನುಮತಿಸಲು ನಿರ್ಧರಿಸಿದನು. ಬೈಬಲ್‌ ಕಾಲಗಣನಶಾಸ್ತ್ರಕ್ಕನುಸಾರ, ಇದು ಸಾ.ಶ.ಪೂ. 607ರಲ್ಲಿ ನಡೆದ ವಿನಾಶದಲ್ಲಿ ಪರಾಕಾಷ್ಠೆಯನ್ನು ತಲಪಿತು. ಆ ಪ್ರದೇಶವು 70 ವರ್ಷಗಳ ವರೆಗೆ ನಿರ್ಜನವಾಗಿರುವುದು ಎಂದು ಪ್ರವಾದನೆಯು ತಿಳಿಸಿತು; ತದನಂತರ ಪಶ್ಚಾತ್ತಾಪಪಟ್ಟ ಯೆಹೂದ್ಯರು ಹಿಂದಿರುಗಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವಂತೆ ದೇವರು ಅನುಮತಿಸಲಿದ್ದನು. ಸಾ.ಶ.ಪೂ. 537ರ ಅನಂತರದಿಂದ ಇದು ಸಂಭವಿಸಿತು. (ಧರ್ಮೋಪದೇಶಕಾಂಡ 28:15, 62-68; 2 ಅರಸುಗಳು 21:10-15; 24:12-16; 25:1-4; ಯೆರೆಮೀಯ 29:10-14) ವಾಸ್ತವದಲ್ಲಿ ಆ ಪ್ರದೇಶಕ್ಕೆ ಏನು ಸಂಭವಿಸಿತು? ಆ 70 ವರ್ಷಗಳ ಕಾಲಾವಧಿಯಲ್ಲಿ ಅದು ವನ್ಯಸಸ್ಯಗಳ, ಬತ್ತಿಹೋದ ಕ್ಷೇತ್ರಗಳ ನಿವೇಶನವಾಯಿತು ಮತ್ತು ನರಿಗಳ ಬೀಡಾಯಿತು. (ಯೆರೆಮೀಯ 4:26; 10:22) ಆದರೂ, ಈ ವಾಗ್ದಾನವು ಕೊಡಲ್ಪಟ್ಟಿತ್ತು: “ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುದಾರಿಸಿ ಕಾಡುನೆಲವನ್ನು ಏದೆನ್‌ ಉದ್ಯಾನದಂತೆಯೂ ಬೀಳುಭೂಮಿಯನ್ನು ಯೆಹೋವನ ವನದ [ಅಥವಾ ಪರದೈಸ್‌, ಸೆಪ್ಟ್ಯುಅಜಿಂಟ್‌] ಹಾಗೂ ಕಳಿಕಳಿಸುವಂತೆ ಮಾಡುವನು.”​—ಯೆಶಾಯ 51:3.

7 ಎಪ್ಪತ್ತು ವರ್ಷಗಳ ಅನಂತರ ಏನು ಸಂಭವಿಸಿತು? ದೇವರ ಆಶೀರ್ವಾದದಿಂದ ಪರಿಸ್ಥಿತಿಗಳು ಉತ್ತಮಗೊಂಡವು. ಇದನ್ನು ನಿಮ್ಮ ಮನೋನೇತ್ರಗಳಲ್ಲಿ ಚಿತ್ರಿಸಿಕೊಳ್ಳಿರಿ: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. ಅದು ಸಮೃದ್ಧಿಯಾಗಿ ಹೂಬಿಟ್ಟು ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವದು; . . . ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು; ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು; ನರಿಗಳು ಮಲಗುತ್ತಿದ್ದ ಹಕ್ಕೆಯು ಆಪುಜಂಬುಗಳ ಪ್ರದೇಶವಾಗುವದು.”​—ಯೆಶಾಯ 35:1-7.

ಪುನಸ್ಸ್ಥಾಪಿಸಲ್ಪಟ್ಟ ಹಾಗೂ ರೂಪಾಂತರಿಸಲ್ಪಟ್ಟ ಜನರು

8 ಎಂತಹ ಒಂದು ರೂಪಾಂತರ! ನಿರ್ಜನ ಸ್ಥಿತಿಯಿಂದ ಪರದೈಸಾಗಿ ಪರಿವರ್ತನೆ. ಆದರೂ, ಈ ಪ್ರವಾದನೆ ಹಾಗೂ ಇತರ ವಿಶ್ವಾಸಾರ್ಹ ಪ್ರವಾದನೆಗಳು, ನಿರ್ಜನ ಪ್ರದೇಶವು ಫಲಭರಿತವಾಗುವುದಕ್ಕೆ ತುಲನಾತ್ಮಕವಾಗಿ ಜನರಲ್ಲಿಯೂ ಬದಲಾವಣೆ ಇರುವುದು ಎಂದು ತೋರಿಸಿದವು. ನಾವು ಹೀಗೇಕೆ ಹೇಳಸಾಧ್ಯವಿದೆ? ಯೆಶಾಯನು “ಯೆಹೋವನು ವಿಮೋಚಿಸಿದವರ” ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದನು; ಅವರು “ಉತ್ಸಾಹಧ್ವನಿಯೊಡನೆ” ತಮ್ಮ ದೇಶಕ್ಕೆ ಹಿಂದಿರುಗಲಿದ್ದರು ಮತ್ತು “ಹರ್ಷಾನಂದಗಳನ್ನು” ಅನುಭವಿಸಲಿದ್ದರು. (ಯೆಶಾಯ 35:10) ಇದು ಅಕ್ಷರಾರ್ಥ ಪ್ರದೇಶಕ್ಕಲ್ಲ, ಬದಲಾಗಿ ಜನರಿಗೆ ಅನ್ವಯಿಸಿತು. ಅಷ್ಟುಮಾತ್ರವಲ್ಲ, ಇನ್ನೊಂದು ಕಡೆಯಲ್ಲಿ ಯೆಶಾಯನು ಜನರು ಚೀಯೋನಿಗೆ ಪುನಸ್ಸ್ಥಾಪಿಸಲ್ಪಟ್ಟದ್ದರ ಕುರಿತು ಮುಂತಿಳಿಸಿದನು: “ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವದು. . . . ಭೂಮಿಯು ತನ್ನೊಳಗಿಂದ ಮೊಳಿಕೆಯನ್ನು ಹೊರಡಿಸುವಂತೆ . . . ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಸ್ತೋತ್ರವನ್ನೂ ಮೊಳೆಯಿಸುವನು.” ದೇವಜನರ ಕುರಿತಾಗಿ ಯೆಶಾಯನು ಇನ್ನೂ ಹೇಳಿದ್ದು: “ಯೆಹೋವನು ನಿಮ್ಮನ್ನು ನಿತ್ಯವೂ ನಡಿಸುತ್ತಾ . . . ನಿಮ್ಮ ಎಲುಬುಗಳನ್ನು ಸಸಾರಮಾಡುವನು; ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗುವಿರಿ.” (ಯೆಶಾಯ 58:11; 61:3, 11; ಯೆರೆಮೀಯ 31:10-12) ಆದುದರಿಂದ, ಅಕ್ಷರಾರ್ಥ ಪ್ರದೇಶದ ಪರಿಸರೀಯ ಸ್ಥಿತಿಗತಿಗಳು ಉತ್ತಮಗೊಳ್ಳುವಂತೆಯೇ, ಪುನಸ್ಸ್ಥಾಪಿತ ಯೆಹೂದ್ಯರಲ್ಲಿಯೂ ಬದಲಾವಣೆಗಳಿರುವವು.

9 ಈ ಐತಿಹಾಸಿಕ ನಮೂನೆಯು, ಪೌಲನು ದರ್ಶನದಲ್ಲಿ ಏನನ್ನು ನೋಡಿದನೋ ಅದನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದು, ಅವನು ಯಾವುದನ್ನು “ದೇವರ ಹೊಲ” ಎಂದು ಕರೆದನೋ ಮತ್ತು ಯಾವುದು ಫಲಭರಿತವಾಗಿರಲಿತ್ತೋ ಆ ಕ್ರೈಸ್ತ ಸಭೆಯನ್ನೂ ಒಳಗೂಡಲಿತ್ತು. (1 ಕೊರಿಂಥ 3:9) ಆ ದರ್ಶನವು ಯಾವಾಗ ನೆರವೇರಲಿತ್ತು? ತಾನು ನೋಡಿದ ದರ್ಶನವನ್ನು ಪೌಲನು “ಪ್ರಕಟನೆ” (ಪರಿಶುದ್ಧ ಬೈಬಲ್‌ *) ಎಂದು ಕರೆದನು; ಇದು ಭವಿಷ್ಯತ್ತಿನಲ್ಲಿ ಸಂಭವಿಸಲಿಕ್ಕಿತ್ತು. ತನ್ನ ಮರಣಾನಂತರ ವ್ಯಾಪಕವಾಗಿ ಧರ್ಮಭ್ರಷ್ಟತೆಯು ವಿಕಸಿಸಲಿದೆ ಎಂಬುದು ಅವನಿಗೆ ಗೊತ್ತಿತು. (2 ಕೊರಿಂಥ 12:1; ಅ. ಕೃತ್ಯಗಳು 20:29, 30; 2 ಥೆಸಲೋನಿಕ 2:3, 7) ಧರ್ಮಭ್ರಷ್ಟರು ಹೆಚ್ಚು ಪ್ರಚಲಿತರಾಗಿ, ಸತ್ಯ ಕ್ರೈಸ್ತರನ್ನು ನಿಸ್ತೇಜಗೊಳಿಸುವಂತೆ ತೋರುವಾಗ, ಅವರನ್ನು ಹುಲುಸಾಗಿ ಬೆಳೆಯುತ್ತಿರುವ ತೋಟಕ್ಕೆ ಹೋಲಿಸಸಾಧ್ಯವಿರಲಿಲ್ಲ. ಆದರೂ, ಸತ್ಯಾರಾಧನೆಯು ಪುನಃ ಉನ್ನತ ಸ್ಥಿತಿಗೇರಿಸಲ್ಪಡುವ ಕಾಲವು ಬರಲಿಕ್ಕಿತ್ತು. ‘ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸ’ಸಾಧ್ಯವಾಗುವಂತೆ ದೇವಜನರು ಪುನಸ್ಸ್ಥಾಪಿಸಲ್ಪಡಲಿದ್ದರು. (ಮತ್ತಾಯ 13:24-30, 36-43) ಇದು ಸ್ವರ್ಗದಲ್ಲಿ ದೇವರ ರಾಜ್ಯವು ಸ್ಥಾಪಿತವಾಗಿ ಕೆಲವು ವರ್ಷಗಳು ಕಳೆದ ಅನಂತರ ನಿಜವಾಗಿಯೂ ಸಂಭವಿಸಿತು. ಮತ್ತು ದಶಕಗಳು ಗತಿಸಿದಂತೆ, ದರ್ಶನದಲ್ಲಿ ಪೌಲನು ಮುನ್ನೋಡಿದಂಥ ಆಧ್ಯಾತ್ಮಿಕ ಪರದೈಸಿನಲ್ಲಿ ದೇವಜನರು ಆನಂದಿಸುತ್ತಿದ್ದಾರೆ ಎಂಬುದು ಇನ್ನಷ್ಟು ಸುಸ್ಪಷ್ಟವಾಗಿದೆ.

10 ಆದರೆ, ವ್ಯಕ್ತಿಗತವಾಗಿ ನಾವು ಅಪರಿಪೂರ್ಣರಾಗಿದ್ದೇವೆ ಎಂಬುದು ನಮಗೆ ಗೊತ್ತಿದೆ; ಆದುದರಿಂದ ಪೌಲನ ದಿನದಲ್ಲಿ ಕ್ರೈಸ್ತರ ನಡುವೆ ಸಮಸ್ಯೆಗಳಿದ್ದಂತೆ ಈಗಲೂ ಕೆಲವೊಮ್ಮೆ ಸಮಸ್ಯೆಗಳು ಏಳುವಾಗ ಅವು ನಮ್ಮನ್ನು ವಿಚಲಿತರನ್ನಾಗಿ ಮಾಡಬಾರದು. (1 ಕೊರಿಂಥ 1:10-13; ಫಿಲಿಪ್ಪಿ 4:2, 3; 2 ಥೆಸಲೋನಿಕ 3:6-14) ಆದರೂ, ನಾವೀಗ ಆನಂದಿಸುತ್ತಿರುವ ಆಧ್ಯಾತ್ಮಿಕ ಪರದೈಸಿನ ಕುರಿತಾಗಿ ಆಲೋಚಿಸಿರಿ. ಒಮ್ಮೆ ನಾವಿದ್ದಂಥ ಆಧ್ಯಾತ್ಮಿಕ ಅಸ್ವಸ್ಥ ಸ್ಥಿತಿಗೆ ಹೋಲಿಸುವಾಗ, ಈಗ ನಾವು ಆಧ್ಯಾತ್ಮಿಕವಾಗಿ ಗುಣಮುಖರಾಗಿದ್ದೇವೆ. ಮತ್ತು ಒಂದು ಕಾಲದಲ್ಲಿ ನಮಗಿದ್ದ ಆಧ್ಯಾತ್ಮಿಕ ಹಸಿವಿನ ಸ್ಥಿತಿಯನ್ನು, ನಮ್ಮ ಸದ್ಯದ ಪುಷ್ಕಳವಾಗಿ ಉಣಿಸಲ್ಪಡುತ್ತಿರುವ ಆಧ್ಯಾತ್ಮಿಕ ಸ್ಥಿತಿಯೊಂದಿಗೆ ಹೋಲಿಸಿ ನೋಡಿರಿ. ಬಂಜರಾದ ಆಧ್ಯಾತ್ಮಿಕ ಪ್ರದೇಶದಲ್ಲಿಯೋ ಎಂಬಂತೆ ಹೋರಾಟ ನಡೆಸುವುದಕ್ಕೆ ಬದಲಾಗಿ, ದೇವಜನರಿಗೆ ಆತನ ಅನುಗ್ರಹವಿದೆ ಮತ್ತು ಅವರ ಮೇಲೆ ಆಶೀರ್ವಾದಗಳ ಸುರಿಮಳೆಯೇ ಸುರಿಸಲ್ಪಡುತ್ತದೆ. (ಯೆಶಾಯ 35:​1, 7) ನೆಲಮಾಳಿಗೆಯ ಬಂದಿಖಾನೆಯಂಥ ಆಧ್ಯಾತ್ಮಿಕ ಅಂಧಕಾರದಲ್ಲಿ ಕುರುಡಾಗಿರುವುದಕ್ಕೆ ಬದಲಾಗಿ, ನಾವು ಸ್ವಾತಂತ್ರ್ಯದ ಹಾಗೂ ದೇವರ ಅನುಗ್ರಹದ ಬೆಳಕನ್ನು ನೋಡುತ್ತೇವೆ. ಬೈಬಲ್‌ ಪ್ರವಾದನೆಗಳನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಕಿವುಡರಂತಿದ್ದ ಜನರು ಈಗ ಶಾಸ್ತ್ರವಚನಗಳು ಏನು ಹೇಳುತ್ತವೆ ಎಂಬುದನ್ನು ಅರ್ಥಭರಿತವಾಗಿ ಕೇಳಿಸಿಕೊಳ್ಳತೊಡಗಿದ್ದಾರೆ. (ಯೆಶಾಯ 35:5) ಉದಾಹರಣೆಗೆ, ಭೂವ್ಯಾಪಕವಾಗಿ ಇರುವಂಥ ಲಕ್ಷಗಟ್ಟಲೆ ಯೆಹೋವನ ಸಾಕ್ಷಿಗಳು ದಾನಿಯೇಲನ ಪ್ರವಾದನೆಯ ಒಂದೊಂದು ವಚನವನ್ನೂ ಅಧ್ಯಯನಮಾಡಿದ್ದಾರೆ. ಅಷ್ಟುಮಾತ್ರವಲ್ಲ, ಬೈಬಲಿನ ಯೆಶಾಯ ಪುಸ್ತಕದ ಪ್ರತಿಯೊಂದು ಅಧ್ಯಾಯವನ್ನು ಗಹನವಾಗಿ ಪರಿಗಣಿಸಿದ್ದಾರೆ. ಆ ಚೈತನ್ಯದಾಯಕ ಆಧ್ಯಾತ್ಮಿಕ ಆಹಾರವು ನಮ್ಮ ಆಧ್ಯಾತ್ಮಿಕ ಪರದೈಸಿನ ಸ್ಪಷ್ಟ ಪುರಾವೆಯಾಗಿಲ್ಲವೋ?

11 ಎಲ್ಲಾ ಹಿನ್ನೆಲೆಗಳಿಂದ ಬಂದಿರುವ ಯಥಾರ್ಥವಂತರು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ಹೆಣಗಾಡುತ್ತಿರುವಾಗ, ಅವರ ಗುಣಲಕ್ಷಣಗಳಲ್ಲಾಗಿರುವ ಬದಲಾವಣೆಗಳ ಕುರಿತಾಗಿಯೂ ಆಲೋಚಿಸಿರಿ. ಮೂಲತಃ ಅವರೆಲ್ಲರೂ, ಒಂದು ಕಾಲದಲ್ಲಿ ತಮ್ಮಲ್ಲಿ ಆಳವಾಗಿ ಬೇರೂರಿದ್ದ ಪಾಶವೀಯ ಪ್ರವೃತ್ತಿಗಳನ್ನು ತೆಗೆದುಹಾಕಲು ಬಹಳವಾಗಿ ಶ್ರಮಿಸಿದ್ದಾರೆ. ನೀವು ಕೂಡ ಕೆಲವು ಕೆಟ್ಟ ಪ್ರವೃತ್ತಿಗಳನ್ನು ಜಯಿಸಲು ಪ್ರಯತ್ನಿಸಿ ಅದರಲ್ಲಿ ಸಾಕಷ್ಟು ಒಳ್ಳೇ ಫಲಿತಾಂಶಗಳನ್ನೂ ಪಡೆದುಕೊಂಡಿರಬಹುದು, ಮತ್ತು ನಿಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರೂ ಅದನ್ನೇ ಮಾಡಿದ್ದಾರೆ. (ಕೊಲೊಸ್ಸೆ 3:​8-14) ಆದುದರಿಂದ, ನೀವು ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ಸಹವಾಸಮಾಡುವಾಗ, ಹೆಚ್ಚು ಶಾಂತರೂ ಪ್ರಸನ್ನಚಿತ್ತರೂ ಆಗಿ ಬದಲಾವಣೆ ಹೊಂದಿರುವ ಜನರೊಂದಿಗೆ ಇರುತ್ತೀರಿ. ಅವರಿನ್ನೂ ಪರಿಪೂರ್ಣರಲ್ಲ ಎಂಬುದು ನಿಜ, ಆದರೆ ಅವರನ್ನು ಹಿಂಸ್ರ ಸಿಂಹಗಳು ಅಥವಾ ಕ್ರೂರ ಕಾಡುಮೃಗಗಳು ಎಂದು ಖಂಡಿತವಾಗಿಯೂ ವರ್ಣಿಸಸಾಧ್ಯವಿಲ್ಲ. (ಯೆಶಾಯ 35:9) ಪ್ರಸನ್ನಕರವಾಗಿರುವ ಈ ಆಧ್ಯಾತ್ಮಿಕ ಸಾಹಚರ್ಯವು ಏನನ್ನು ಸೂಚಿಸುತ್ತದೆ? ನಾವು ಆಧ್ಯಾತ್ಮಿಕ ಪರದೈಸ್‌ ಎಂದು ಸೂಕ್ತವಾಗಿಯೇ ಕರೆಯುವಂಥ ಒಂದು ಆಧ್ಯಾತ್ಮಿಕ ಸ್ಥಿತಿಯಲ್ಲಿ ಆನಂದಿಸುತ್ತಿದ್ದೇವೆ ಎಂಬುದಂತೂ ಸುಸ್ಪಷ್ಟ. ಮತ್ತು ನಮ್ಮ ಆಧ್ಯಾತ್ಮಿಕ ಪರದೈಸ್‌, ಯೆಹೋವನಿಗೆ ನಿಷ್ಠರಾಗಿ ಉಳಿಯುವಲ್ಲಿ ನಾವು ಆನಂದಿಸಲಿರುವ ಒಂದು ಭೂಪರದೈಸಿನ ಮುನ್‌ಛಾಯೆಯಾಗಿದೆ.

12 ಅಷ್ಟುಮಾತ್ರವಲ್ಲ, ನಾವು ಅಲಕ್ಷಿಸಬಾರದಂಥ ಇನ್ನೊಂದು ವಿಚಾರವೂ ಇದೆ. ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. ಆಗ ನೀವು ಬಲವುಳ್ಳವರಾಗಿ ಈ ಹೊಳೆ ದಾಟಿ ಆಚೆಯಿರುವ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.” (ಧರ್ಮೋಪದೇಶಕಾಂಡ 11:8) ಯಾಜಕಕಾಂಡ 20:​22, 24ರಲ್ಲಿ ಅದೇ ದೇಶದ ಕುರಿತಾಗಿ ತಿಳಿಸಲ್ಪಟ್ಟಿದೆ: “ಈ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು; ಹಾಗೆ ನಡೆದರೆ ನಾನು ನಿಮ್ಮನ್ನು ಯಾವ ದೇಶಕ್ಕೆ ಬರಮಾಡಿ ಅದನ್ನು ನಿವಾಸಕ್ಕಾಗಿ ಕೊಡುತ್ತೇನೋ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ. ನಿಮಗಾದರೋ​—ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ; ಹಾಲೂ ಜೇನೂ ಹರಿಯುವಂಥ ಆ ದೇಶವನ್ನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವೆನು.” ಹೌದು, ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದು, ಯೆಹೋವ ದೇವರೊಂದಿಗಿನ ಒಳ್ಳೇ ಸಂಬಂಧದ ಮೇಲೆ ಹೊಂದಿಕೊಂಡಿತ್ತು. ಇಸ್ರಾಯೇಲ್ಯರು ದೇವರಿಗೆ ವಿಧೇಯರಾಗಲು ತಪ್ಪಿಹೋದದ್ದರಿಂದಲೇ, ಬಾಬೆಲಿನವರು ಅವರನ್ನು ಸೋಲಿಸಿ ಅವರ ನಿವಾಸಸ್ಥಳದಿಂದ ಅವರನ್ನು ಹೊರಡಿಸುವಂತೆ ಆತನು ಅನುಮತಿಸಿದನು.

13 ನಮ್ಮ ಆಧ್ಯಾತ್ಮಿಕ ಪರದೈಸಿನ ಕುರಿತಾದ ಇನ್ನೂ ಅನೇಕ ಅಂಶಗಳು ನಮಗೆ ತುಂಬ ಇಷ್ಟಕರವಾಗಿರಬಹುದು. ಅದರ ಪರಿಸರವು ಕಣ್ಣಿಗೆ ತಂಪಾಗಿಯೂ ಮನಸ್ಸಿಗೆ ಮುದನೀಡುವಂಥದ್ದಾಗಿಯೂ ಇದೆ. ಪಾಶವೀಯ ಪ್ರವೃತ್ತಿಗಳನ್ನು ಬಿಟ್ಟುಬಿಡಲು ಪರಿಶ್ರಮಿಸಿರುವ ಕ್ರೈಸ್ತರೊಂದಿಗೆ ನಾವು ಶಾಂತಿಯಿಂದಿದ್ದೇವೆ. ಅವರು ಕರುಣಾಭರಿತರಾಗಿರಲು ಮತ್ತು ಇತರರಿಗೆ ಸಹಾಯಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೂ, ನಮ್ಮ ಆಧ್ಯಾತ್ಮಿಕ ಪರದೈಸಿನಲ್ಲಿ ಉಳಿಯುವುದು, ಈ ಜನರೊಂದಿಗೆ ಒಳ್ಳೇ ಸಂಬಂಧವನ್ನು ಹೊಂದಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಅಗತ್ಯಪಡಿಸುತ್ತದೆ. ನಾವು ಯೆಹೋವನೊಂದಿಗೆ ಒಳ್ಳೇ ಸಂಬಂಧದಲ್ಲಿರುವುದು ಹಾಗೂ ಆತನ ಚಿತ್ತವನ್ನು ಮಾಡುವುದನ್ನು ಇದು ಅಗತ್ಯಪಡಿಸುತ್ತದೆ. (ಮೀಕ 6:8) ನಾವು ಸ್ವಇಷ್ಟದಿಂದ ಈ ಆಧ್ಯಾತ್ಮಿಕ ಪರದೈಸಿನೊಳಗೆ ಬಂದಿದ್ದೇವೆ, ಆದರೆ ದೇವರೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಕಾರ್ಯನಡಿಸದಿರುವಲ್ಲಿ ನಾವು ಪಥಭ್ರಷ್ಟರಾಗಸಾಧ್ಯವಿದೆ ಅಥವಾ ಬಹಿಷ್ಕರಿಸಲ್ಪಡಸಾಧ್ಯವಿದೆ.

14 ನಮಗೆ ಸಹಾಯವಾಗುವಂಥ ಒಂದು ಪ್ರಾಮುಖ್ಯ ಅಂಶವು ಯಾವುದೆಂದರೆ, ನಾವು ದೇವರ ವಾಕ್ಯದಿಂದ ಬಲಗೊಳ್ಳುತ್ತಾ ಹೋಗುತ್ತೇವೆ. ಕೀರ್ತನೆ 1:​1-3ರ ಸಾಂಕೇತಿಕ ಭಾಷೆಯನ್ನು ಗಮನಿಸಿರಿ: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” ಇದಕ್ಕೆ ಕೂಡಿಸಿ, ಆಧ್ಯಾತ್ಮಿಕ ಪರದೈಸಿನಲ್ಲಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಬೈಬಲಾಧಾರಿತ ಪ್ರಕಾಶನಗಳು ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತವೆ.​—ಮತ್ತಾಯ 24:​45-47.

ಪರದೈಸಿನ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಬಲಪಡಿಸುವುದು

15 ಪರದೈಸಿನ ಇನ್ನೊಂದು ಮುನ್ನೋಟವನ್ನು ಪರಿಗಣಿಸಿರಿ. ಇಸ್ರಾಯೇಲ್ಯರು 40 ವರ್ಷಗಳ ವರೆಗೆ ಅರಣ್ಯದಲ್ಲಿ ಅಲೆದಾಡಿದ ಬಳಿಕ, ಮೋಶೆಯು ಅವರನ್ನು ಯೊರ್ದನ್‌ ಹೊಳೆಯ ಪೂರ್ವದಲ್ಲಿದ್ದ ಮೋವಾಬಿನ ಬಯಲಿಗೆ ನಡೆಸಿದನು. ಹಿಂದೆ ಒಂದು ಸಮಯದಲ್ಲಿ ಮೋಶೆಯು ಮಾಡಿದ ಒಂದು ತಪ್ಪಿನಿಂದಾಗಿ, ಅವನು ಇಸ್ರಾಯೇಲನ್ನು ಯೊರ್ದನಿನಾಚೆಗೆ ನಡೆಸಿಕೊಂಡು ಹೋಗಬಾರದೆಂದು ಯೆಹೋವನು ನ್ಯಾಯವಾಗಿಯೇ ನಿರ್ಣಯಿಸಿದನು. (ಅರಣ್ಯಕಾಂಡ 20:7-12; 27:12, 13) ಆಗ ಮೋಶೆಯು ದೇವರಿಗೆ ಹೀಗೆ ಬೇಡಿಕೊಂಡನು: “ನಾನೂ ಈ ಹೊಳೆಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು . . . ನೋಡುವದಕ್ಕೆ ಅಪ್ಪಣೆಯಾಗಲಿ.” ಮೋಶೆಯು ವಾಗ್ದತ್ತ ದೇಶವನ್ನು ಪ್ರವೇಶಿಸಲು ಸಾಧ್ಯವಿರಲಿಲ್ಲವಾದರೂ, ಪಿಸ್ಗಾ ಬೆಟ್ಟವನ್ನು ಏರಿ, ಅಲ್ಲಿಂದ ಆ ದೇಶದ ವಿಭಿನ್ನ ಪ್ರದೇಶಗಳನ್ನು ನೋಡಿದ ಬಳಿಕ, ಅದು “ಒಳ್ಳೆಯ ದೇಶ”ವಾಗಿತ್ತೆಂಬುದನ್ನು ಅವನು ಮನಗಂಡನು ಎಂಬುದು ಸುಸ್ಪಷ್ಟ. ಆ ದೇಶವು ಹೇಗಿತ್ತೆಂದು ನೀವು ನೆನಸುತ್ತೀರಿ?​—ಧರ್ಮೋಪದೇಶಕಾಂಡ 3:25-27.

16 ಇತ್ತೀಚಿನ ಸಮಯಗಳಲ್ಲಿ ಆ ಪ್ರದೇಶವು ಹೇಗಿದೆಯೊ ಅದರ ಮೇಲೆ ನೀವು ನಿಮ್ಮ ಅಭಿಪ್ರಾಯವನ್ನು ಆಧಾರಿಸುವಲ್ಲಿ, ಮರಳು, ಕಲ್ಲುಬಂಡೆಗಳಿಂದ ತುಂಬಿರುವ ಮರುಭೂಮಿ ಹಾಗೂ ಸುಡುವಂಥ ಶಾಖವಿರುವ ದೇಶವು ನಿಮ್ಮ ಮನಸ್ಸಿಗೆ ಬರಬಹುದು. ಆದರೆ ಬೈಬಲ್‌ ಸಮಯಗಳಲ್ಲಿ ಆ ಪ್ರದೇಶವು ಒಟ್ಟಿನಲ್ಲಿ ತುಂಬ ಭಿನ್ನವಾಗಿತ್ತೆಂದು ನಂಬಲು ಕಾರಣವಿದೆ. ಸೈಯಂಟಿಫಿಕ್‌ ಅಮೆರಿಕನ್‌ ಎಂಬ ಪತ್ರಿಕೆಯಲ್ಲಿ, ಜಲ ಹಾಗೂ ಮಣ್ಣಿನ ತಜ್ಞರಾದ ಡಾ. ವಾಲ್ಟರ್‌ ಸಿ. ಲೌಡರ್‌ಮಿಲ್ಕ್‌ ವಿವರಿಸಿದ್ದೇನೆಂದರೆ, ಈ ಪ್ರದೇಶದಲ್ಲಿರುವ ಭೂಮಿಯು “ಒಂದು ಸಾವಿರ ವರ್ಷಗಳ ದುರುಪಯೋಗದಿಂದಾಗಿ ಹಾನಿಗೊಳಗಾಗಿದೆ.” ಈ ಪೈರುತಜ್ಞರು ಬರೆದುದು: “ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಆ ಭೂಮಿಯನ್ನು ಈಗ ಆವರಿಸಿರುವ ‘ಮರುಭೂಮಿಯು’ ಮನುಷ್ಯನ ಕೆಲಸವೇ ಆಗಿದೆ, ಪ್ರಕೃತಿಯದ್ದಲ್ಲ.” ವಾಸ್ತವದಲ್ಲಿ ಅವರು ನಡೆಸಿದ ಅಧ್ಯಯನಗಳು ಸೂಚಿಸಿದ್ದೇನೆಂದರೆ, “ಒಂದು ಸಮಯದಲ್ಲಿ ಈ ದೇಶವು ಸಹಜ ಸೊಬಗಿನ ಕುರುಬರ ಪರದೈಸಾಗಿತ್ತು.” ಹಾಗಾದರೆ, ಮಾನವನ ದುರುಪಯೋಗವೇ ಯಾವುದು ಒಂದು ಕಾಲದಲ್ಲಿ “ಕುರುಬರ ಪರದೈಸ”ವಾಗಿತ್ತೊ ಅದನ್ನು ಹಾಳುಗೆಡವಿದೆ. *

17 ಬೈಬಲಿನಲ್ಲಿ ನೀವು ಏನನ್ನು ಓದಿದ್ದೀರೋ ಅದರ ಕುರಿತು ಧ್ಯಾನಿಸುವಾಗ, ವಾಗ್ದತ್ತ ದೇಶವು ನಿಜವಾಗಿಯೂ ಪರದೈಸಿನಂತಿತ್ತು ಎಂಬ ತೀರ್ಮಾನಕ್ಕೆ ಬರುವುದು ಖಂಡಿತವಾಗಿಯೂ ನ್ಯಾಯಸಮ್ಮತವಾದದ್ದಾಗಿದೆ ಎಂಬುದನ್ನು ನೀವೇ ಮನಗಾಣುವಿರಿ. ಮೋಶೆಯ ಮೂಲಕ ಯೆಹೋವನು ಜನರಿಗೆ ಯಾವ ಆಶ್ವಾಸನೆಯನ್ನಿತ್ತನು ಎಂಬುದನ್ನು ನೆನಪಿಸಿಕೊಳ್ಳಿರಿ: “ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶವೋ ಹಳ್ಳದಿನ್ನೆಗಳ ದೇಶ; ಆಕಾಶದಿಂದ ಮಳೆಬಿದ್ದ ಪ್ರಕಾರವೇ ಅದಕ್ಕೆ ನೀರುದೊರೆಯುವದು. ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ.”​—ಧರ್ಮೋಪದೇಶಕಾಂಡ 11:8-12.

18 ವಾಗ್ದತ್ತ ದೇಶದ ಹಚ್ಚಹಸುರಾದ ಸೌಂದರ್ಯ ಹಾಗೂ ಫಲಸಮೃದ್ಧಿಯು ಹೇಗಿತ್ತೆಂದರೆ, ಕೆಲವೊಂದು ಪ್ರದೇಶಗಳ ಕುರಿತಾಗಿ ಉದ್ಗಾರವೆತ್ತುವುದೇ ಪರದೈಸಿನಂಥ ಪರಿಸ್ಥಿತಿಗಳನ್ನು ಮನಸ್ಸಿಗೆ ತರುತ್ತದೆ. ಇದು ಯೆಶಾಯ 35ನೆಯ ಅಧ್ಯಾಯದಲ್ಲಿರುವ ಪ್ರವಾದನೆಯಿಂದ ಸ್ಪಷ್ಟವಾಗುತ್ತದೆ. ಇಸ್ರಾಯೇಲ್ಯರು ಬಾಬೆಲಿನಿಂದ ಹಿಂದಿರುಗಿದಾಗ ಈ ಪ್ರವಾದನೆಯು ತನ್ನ ಆರಂಭದ ನೆರವೇರಿಕೆಯನ್ನು ಪಡೆಯಿತು. ಯೆಶಾಯನು ಮುಂತಿಳಿಸಿದ್ದು: “ಅದು ಸಮೃದ್ಧಿಯಾಗಿ ಹೂಬಿಟ್ಟು ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವದು; ಲೆಬನೋನಿನ ಮಹಿಮೆಯೂ ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣುವವು.” (ಯೆಶಾಯ 35:2) ಲೆಬನೋನ್‌, ಕರ್ಮೆಲ್‌, ಮತ್ತು ಶಾರೋನಿನ ಕುರಿತಾದ ಪ್ರಸ್ತಾಪಗಳೇ, ಇಸ್ರಾಯೇಲ್ಯರ ಮನಸ್ಸಿನಲ್ಲಿ ಸಂತೃಪ್ತಿಕರವಾದ ಹಾಗೂ ಮನೋಹರವಾದ ಚಿತ್ರಣವನ್ನು ಮೂಡಿಸಿರಲೇಬೇಕು.

19 ಈಗ ಶಾರೋನನ್ನು ಪರಿಗಣಿಸಿರಿ. ಇದು ಸಮಾರ್ಯದ ಗುಡ್ಡಗಳು ಮತ್ತು ಮಹಾ ಸಮುದ್ರ ಅಥವಾ ಮೆಡಿಟರೇನಿಯನ್‌ ಸಮುದ್ರದ ನಡುವೆಯಿರುವ ಕಡಲತೀರದ ಬಯಲುಪ್ರದೇಶವಾಗಿದೆ. (10ನೇ ಪುಟದಲ್ಲಿರುವ ಚಿತ್ರವನ್ನು ನೋಡಿ.) ಇದು ನಯನಮನೋಹರ ಸೌಂದರ್ಯ ಹಾಗೂ ಫಲೋತ್ಪಾದಕತೆಗೆ ಪ್ರಸಿದ್ಧವಾಗಿದೆ. ಇದು ನೀರಾವರಿ ಪ್ರದೇಶವಾಗಿದ್ದರಿಂದ ದನಕರುಗಳನ್ನು ಮೇಯಿಸಲು ಸೂಕ್ತವಾದ ಸ್ಥಳವಾಗಿತ್ತು, ಆದರೆ ಇದರ ಉತ್ತರ ಭಾಗಗಳಲ್ಲಿ ಓಕ್‌ ಮರಗಳ ಅರಣ್ಯವಿತ್ತು. (1 ಪೂರ್ವಕಾಲವೃತ್ತಾಂತ 27:29; ಪರಮಗೀತ 2:​1, NW ಪಾದಟಿಪ್ಪಣಿ; ಯೆಶಾಯ 65:10) ಹೀಗೆ, ಯೆಶಾಯ 35:2 ಪುನಸ್ಸ್ಥಾಪನೆಯ ಕುರಿತು ಹಾಗೂ ಒಂದು ಪರದೈಸಿನಂತೆ ಬದಲಾಗಿ ವೈಭವದಿಂದ ಕಂಗೊಳಿಸಲಿದ್ದ ಪ್ರದೇಶದ ಕುರಿತು ಮುಂತಿಳಿಸುತ್ತಿತ್ತು. ಸಮಯಾನಂತರ ಪೌಲನು ದರ್ಶನದಲ್ಲಿ ಏನನ್ನು ನೋಡಿದನೋ ಅದಕ್ಕೆ ಹೊಂದಿಕೆಯಲ್ಲಿ, ಈ ಪ್ರವಾದನೆಯು ಆನಂದಮಯವಾದ ಆಧ್ಯಾತ್ಮಿಕ ಪರದೈಸಿನ ಕಡೆಗೂ ಕೈತೋರಿಸಿತು. ಅಂತಿಮವಾಗಿ, ಈ ಪ್ರವಾದನೆ ಹಾಗೂ ಇನ್ನಿತರ ಪ್ರವಾದನೆಗಳು, ಮಾನವಕುಲಕ್ಕಾಗಿರುವ ಭೂಪರದೈಸಿನ ಕುರಿತಾದ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಬಲಪಡಿಸುತ್ತವೆ.

20 ನಾವು ನಮ್ಮ ಆಧ್ಯಾತ್ಮಿಕ ಪರದೈಸಿನಲ್ಲಿ ನಿವಾಸಿಸುತ್ತಿರುವಾಗ, ಇದರ ಕುರಿತಾದ ನಮ್ಮ ಗಣ್ಯತೆಯನ್ನು ಹಾಗೂ ಭೂಪರದೈಸಿನ ಕುರಿತಾದ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳಸಾಧ್ಯವಿದೆ. ಹೇಗೆ? ಬೈಬಲಿನಲ್ಲಿ ನಾವು ಓದುವಂಥ ವಿಚಾರಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಗಹನಗೊಳಿಸಿಕೊಳ್ಳುವ ಮೂಲಕವೇ. ಬೈಬಲ್‌ ವಿವರಣೆಗಳು ಹಾಗೂ ಪ್ರವಾದನೆಗಳು ಅನೇಕವೇಳೆ ನಿರ್ದಿಷ್ಟ ಸ್ಥಳಗಳ ಕುರಿತು ಪ್ರಸ್ತಾಪಿಸುತ್ತವೆ. ಇವು ಎಲ್ಲಿದ್ದವು ಮತ್ತು ಭೂಗೋಳಕ್ಕೆ ಸಂಬಂಧಿಸಿದ ಇತರ ಪ್ರದೇಶಗಳಿಗೂ ಇವುಗಳಿಗೂ ಯಾವ ಸಂಬಂಧವಿತ್ತು ಎಂಬುದರ ಬಗ್ಗೆ ನೀವು ಹೆಚ್ಚು ಉತ್ತಮ ಗ್ರಹಿಕೆಯನ್ನು ಪಡೆದುಕೊಳ್ಳಲು ಬಯಸುತ್ತೀರೋ? ಮುಂದಿನ ಲೇಖನದಲ್ಲಿ, ಪ್ರಯೋಜನದಾಯಕವಾದ ರೀತಿಯಲ್ಲಿ ನಾವಿದನ್ನು ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಪರಿಗಣಿಸುವೆವು.

[ಪಾದಟಿಪ್ಪಣಿಗಳು]

^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 21 ಬೈಬಲಿನ ಭೂಗೋಳ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಡೆನಸ್‌ ಬಾಲೀ ಹೇಳುವುದು: “ಬೈಬಲ್‌ ಸಮಯಗಳಿಂದ ಸಸ್ಯಸಂಕುಲಗಳ ಸ್ವರೂಪವು ಅತ್ಯಧಿಕ ಬದಲಾವಣೆಗಳಿಗೆ ತುತ್ತಾಗಿರಲೇಬೇಕು.” ಇದಕ್ಕೆ ಕಾರಣವೇನು? “ಮಾನವರಿಗೆ ಇಂಧನಕ್ಕಾಗಿ ಮತ್ತು ನಿರ್ಮಾಣಕಾರ್ಯಕ್ಕಾಗಿ ಕಟ್ಟಿಗೆಯ ಅಗತ್ಯವಿತ್ತು, ಆದುದರಿಂದಲೇ . . . ಅವನು ಮರಗಳನ್ನು ಕಡಿಯತೊಡಗಿದನು ಮತ್ತು ಭೂಪ್ರದೇಶವನ್ನು ವಾತಾವರಣದ ಆಕ್ರಮಣಗಳಿಗೆ ಒಡ್ಡಿದನು. ಪರಿಸರದಲ್ಲಿನ ಈ ಸಂಘರ್ಷದ ಫಲಿತಾಂಶವಾಗಿ, ಇದರ ವಿನಾಶದಲ್ಲಿ ಹವಾಮಾನವು . . . ಕ್ರಮೇಣವಾಗಿ ಅತಿ ಪ್ರಾಮುಖ್ಯ ಅಂಶವಾಗಿ ಪರಿಣಮಿಸಿತ್ತು.”

ನೀವು ನೆನಪಿಸಿಕೊಳ್ಳಬಲ್ಲಿರೋ?

• ದರ್ಶನದಲ್ಲಿ ಅಪೊಸ್ತಲ ಪೌಲನು ಯಾವ “ಪರದೈಸ”ನ್ನು ಕಂಡನು?

• ಯೆಶಾಯ 35ನೆಯ ಅಧ್ಯಾಯದ ಆರಂಭದ ನೆರವೇರಿಕೆ ಯಾವುದಾಗಿತ್ತು, ಮತ್ತು ಪೌಲನು ದರ್ಶನದಲ್ಲಿ ಏನನ್ನು ನೋಡಿದನೋ ಅದರೊಂದಿಗೆ ಇದು ಹೇಗೆ ಸಂಬಂಧಿಸಿದೆ?

• ನಮ್ಮ ಆಧ್ಯಾತ್ಮಿಕ ಪರದೈಸಿನ ಕುರಿತಾದ ನಮ್ಮ ಗಣ್ಯತೆಯನ್ನು ಹಾಗೂ ಭೂಪರದೈಸಿನ ಕುರಿತಾದ ನಮ್ಮ ನಿರೀಕ್ಷೆಯನ್ನು ನಾವು ಹೇಗೆ ಬಲಪಡಿಸಿಕೊಳ್ಳಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಅನೇಕರು ಯಾವ ಬೈಬಲ್‌ ವಾಗ್ದಾನಗಳನ್ನು ಅಚ್ಚುಮೆಚ್ಚಿನವುಗಳಾಗಿ ಕಂಡುಕೊಳ್ಳುತ್ತಾರೆ?

2, 3. (ಎ) ನಮ್ಮ ಬೈಬಲಾಧಾರಿತ ನಿರೀಕ್ಷೆಯು ನಿರಾಧಾರವಾದದ್ದಲ್ಲ ಎಂದು ಏಕೆ ಹೇಳಸಾಧ್ಯವಿದೆ? (ಬಿ) ನಿರೀಕ್ಷೆಗಾಗಿ ಇನ್ನೂ ಯಾವ ಆಧಾರವು ನಮಗಿದೆ?

4. ಎರಡನೆಯ ಕೊರಿಂಥ 12:​2-4 ಯಾವ ದರ್ಶನದ ಕುರಿತು ತಿಳಿಸುತ್ತದೆ, ಮತ್ತು ಈ ದರ್ಶನವು ಯಾರಿಗೆ ಕೊಡಲ್ಪಟ್ಟಿರುವುದು ಸಂಭವನೀಯ?

5. ಪೌಲನು ಏನನ್ನು ನೋಡಲಿಲ್ಲ, ಮತ್ತು ಅದು ಎಂಥ ರೀತಿಯ “ಪರದೈಸ”ವಾಗಿತ್ತು?

6. ಪೌಲನು ಏನನ್ನು ಕಂಡನೋ ಅದಕ್ಕೆ ಯಾವ ಐತಿಹಾಸಿಕ ವಿಕಸನವು ಒಳನೋಟವನ್ನು ನೀಡುತ್ತದೆ?

7. ಎಪ್ಪತ್ತು ವರ್ಷಗಳ ನಿರ್ಜನ ಸ್ಥಿತಿಯ ಬಳಿಕ ಏನು ಸಂಭವಿಸಲಿಕ್ಕಿತ್ತು?

8. ಯೆಶಾಯ 35ನೆಯ ಅಧ್ಯಾಯವು ಜನರಿಗೆ ಅನ್ವಯವಾಗುತ್ತದೆ ಎಂಬುದು ನಮಗೆ ಹೇಗೆ ಗೊತ್ತು?

9. ಪೌಲನು ಯಾವ “ಪರದೈಸ”ನ್ನು ನೋಡಿದನು, ಮತ್ತು ಇದು ಯಾವಾಗ ನೆರವೇರಲಿಕ್ಕಿತ್ತು?

10, 11. ನಾವು ಅಪರಿಪೂರ್ಣರಾಗಿರುವುದಾದರೂ, ಒಂದು ಆಧ್ಯಾತ್ಮಿಕ ಪರದೈಸಿನಲ್ಲಿದ್ದೇವೆ ಎಂದು ಏಕೆ ಹೇಳಬಲ್ಲೆವು?

12, 13. ನಮ್ಮ ಆಧ್ಯಾತ್ಮಿಕ ಪರದೈಸಿನಲ್ಲಿ ಉಳಿಯಲಿಕ್ಕಾಗಿ ನಾವು ಏನು ಮಾಡಬೇಕು?

14. ನಾವು ಆಧ್ಯಾತ್ಮಿಕ ಪರದೈಸಿನಲ್ಲಿ ಉಳಿಯಲು ಯಾವುದು ಸಹಾಯಕವಾಗಿರುವುದು?

15. ಮೋಶೆಯು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ನಡೆಸಲು ಅಶಕ್ತನಾದದ್ದೇಕೆ, ಆದರೆ ಅವನು ಏನನ್ನು ನೋಡಿದನು?

16, 17. (ಎ) ಪುರಾತನ ಕಾಲದಲ್ಲಿದ್ದ ವಾಗ್ದತ್ತ ದೇಶವು ತೀರ ಇತ್ತೀಚಿನ ಸಮಯದಲ್ಲಿರುವ ದೇಶಕ್ಕಿಂತ ಹೇಗೆ ಭಿನ್ನವಾಗಿತ್ತು? (ಬಿ) ಒಂದು ಕಾಲದಲ್ಲಿ ವಾಗ್ದತ್ತ ದೇಶವು ಒಂದು ಪರದೈಸಿನಂತಿತ್ತು ಎಂದು ನಾವು ಹೇಗೆ ನಂಬಸಾಧ್ಯವಿದೆ?

18. ಯೆಶಾಯ 35:2 ದೇಶಭ್ರಷ್ಟರಾಗಿದ್ದ ಇಸ್ರಾಯೇಲ್ಯರಿಗೆ ವಾಗ್ದತ್ತ ದೇಶವು ಹೇಗಿರುವುದು ಎಂಬುದರ ವಿಷಯದಲ್ಲಿ ಹೇಗೆ ಒಂದು ಕಲ್ಪನೆಯನ್ನು ನೀಡಿದ್ದಿರಬೇಕು?

19, 20. (ಎ) ಪುರಾತನ ಶಾರೋನ್‌ ಕ್ಷೇತ್ರದ ಕುರಿತು ವರ್ಣಿಸಿರಿ. (ಬಿ) ಪರದೈಸಿನ ಕುರಿತಾದ ನಮ್ಮ ನಿರೀಕ್ಷೆಯನ್ನು ಬಲಪಡಿಸುವಂಥ ಒಂದು ವಿಧವು ಯಾವುದು?

[ಪುಟ 10ರಲ್ಲಿರುವ ಚಿತ್ರ]

ಶಾರೋನ್‌ ಬಯಲು ವಾಗ್ದತ್ತ ದೇಶದಲ್ಲಿದ್ದ ಒಂದು ಫಲಭರಿತ ಪ್ರದೇಶವಾಗಿತ್ತು

[ಕೃಪೆ]

Pictorial Archive (Near Eastern History) Est.

[ಪುಟ 12ರಲ್ಲಿರುವ ಚಿತ್ರ]

ಮೋಶೆಯು ಅದು “ಒಳ್ಳೆಯ ದೇಶ”ವಾಗಿತ್ತೆಂದು ಮನಗಂಡನು