ಧರ್ಮೋಪದೇಶಕಾಂಡ 11:1-32

  • ಯೆಹೋವನ ಶ್ರೇಷ್ಠತೆಯನ್ನ ನೋಡಿದ್ದೀರಿ (1-7)

  • ಕಾನಾನ್‌ ದೇಶ (8-12)

  • ವಿಧೇಯರಿಗೆ ಸಿಗೋ ಆಶೀರ್ವಾದ (13-17)

  • ದೇವರ ಮಾತನ್ನ ಹೃದಯದಲ್ಲಿ ಅಚ್ಚೊತ್ತಬೇಕು (18-25)

  • ‘ಆಶೀರ್ವಾದ ಅಥವಾ ಶಾಪ’ (26-32)

11  ನೀವು ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು.+ ಆತನು ಹೇಳಿದ ಹಾಗೆ ನಿಮ್ಮ ಕರ್ತವ್ಯವನ್ನ ಯಾವಾಗ್ಲೂ ಮಾಡಬೇಕು. ಆತನ ನಿಯಮಗಳನ್ನ ತೀರ್ಪುಗಳನ್ನ ಆಜ್ಞೆಗಳನ್ನ ಸದಾ ಪಾಲಿಸಬೇಕು.  ಇವತ್ತು ನಾನು ನಿಮ್ಮ ಮಕ್ಕಳ ಜೊತೆ ಅಲ್ಲ, ನಿಮ್ಮ ಜೊತೆ ಮಾತಾಡ್ತಾ ಇದ್ದೀನಿ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಕೊಟ್ಟ ಶಿಸ್ತನ್ನ+ ಆತನ ಶ್ರೇಷ್ಠತೆಯನ್ನ+ ಆತನ ಮಹಾ ಶಕ್ತಿಯನ್ನ*+ ನೀವು ನೋಡಿದ್ದೀರ. ಆದ್ರೆ ನಿಮ್ಮ ಮಕ್ಕಳು ನೋಡಿಲ್ಲ, ಅದ್ರ ಬಗ್ಗೆ ಗೊತ್ತಿಲ್ಲ.  ಆತನು ಈಜಿಪ್ಟಿನ ರಾಜ ಫರೋಹನಿಗೆ, ಅವನ ಇಡೀ ದೇಶಕ್ಕೆ ಮಾಡಿದ್ದನ್ನ, ಅಲ್ಲಿ ಮಾಡಿದ ಅದ್ಭುತಗಳನ್ನ ಅವರು ನೋಡಿಲ್ಲ.+  ಈಜಿಪ್ಟಿನ ಸೈನ್ಯ ನಿಮ್ಮನ್ನ ಬೆನ್ನಟ್ಟಿ ಬಂದಾಗ ದೇವರು ಫರೋಹನ ಕುದುರೆಗಳಿಗೆ, ಯುದ್ಧ ರಥಗಳಿಗೆ, ಸೈನಿಕರಿಗೆ ಏನು ಮಾಡಿದ, ಅವ್ರನ್ನ ಹೇಗೆ ಕೆಂಪು ಸಮುದ್ರದ ನೀರಲ್ಲಿ ಮುಳುಗಿಸಿದ, ಯೆಹೋವ ಅವ್ರನ್ನೆಲ್ಲ ಹೇಗೆ ಸರ್ವನಾಶ ಮಾಡಿದ ಅಂತ ನಿಮ್ಮ ಮಕ್ಕಳು ನೋಡಿಲ್ಲ.+  ಕಾಡಲ್ಲಿ ಇದ್ದಾಗಿಂದ ಇಲ್ಲಿ ಬರೋ ತನಕ ಆತನು ನಿಮಗೋಸ್ಕರ ಏನೆಲ್ಲ ಮಾಡಿದ ಅಂತ ಅವರು ನೋಡಿಲ್ಲ.  ಅಷ್ಟೇ ಅಲ್ಲ ರೂಬೇನನ ವಂಶದವನಾದ ಎಲೀಯಾಬನ ಮಕ್ಕಳಾದ ದಾತಾನ್‌, ಅಬೀರಾಮನನ್ನ, ಅವ್ರ ಕುಟುಂಬದವರನ್ನ, ಡೇರೆಗಳನ್ನ, ಅವ್ರ ಜೊತೆ ಇದ್ದ ಜನ್ರನ್ನ, ಪ್ರಾಣಿಗಳನ್ನ ಎಲ್ಲ ಇಸ್ರಾಯೇಲ್ಯರ ಕಣ್ಮುಂದೆನೇ ಭೂಮಿ ಹೇಗೆ ಬಾಯಿ ತೆರೆದು ನುಂಗಿಬಿಡ್ತು ಅನ್ನೋದನ್ನೂ ನಿಮ್ಮ ಮಕ್ಕಳು ನೋಡಿಲ್ಲ.+  ಆದ್ರೆ ಯೆಹೋವ ಮಾಡಿದ ಆ ಎಲ್ಲ ಮಹಾ ಅದ್ಭುತಗಳನ್ನ ಕಣ್ಣಾರೆ ನೋಡಿದ್ದೀರ!  ನಾನು ಇವತ್ತು ನಿಮಗೆ ಕೊಡ್ತಿರೋ ಎಲ್ಲ ಆಜ್ಞೆಗಳನ್ನ ಪಾಲಿಸಬೇಕು. ಆಗ ಮಾತ್ರ ನೀವು ಬಲಶಾಲಿ ಆಗ್ತೀರ, ಯೋರ್ದನ್‌ ದಾಟಿ ಆ ದೇಶವನ್ನ ವಶ ಮಾಡ್ಕೊಳ್ತೀರ.  ಯೆಹೋವ ನಿಮ್ಮ ಪೂರ್ವಜರಿಗೆ, ಅವ್ರ ಸಂತತಿಯವರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ಅಂದ್ರೆ ಹಾಲೂ ಜೇನೂ ಹರಿಯೋ ದೇಶದಲ್ಲಿ+ ಜಾಸ್ತಿ ವರ್ಷ ಬದುಕ್ತೀರ.+ 10  ನೀವು ವಶ ಮಾಡ್ಕೊಳ್ಳೋ ದೇಶ ಈಜಿಪ್ಟಿನ ತರ ಇಲ್ಲ. ನೀವು ಬಿಟ್ಟು ಬಂದ ಆ ಈಜಿಪ್ಟಲ್ಲಿ ಬೀಜ ಬಿತ್ತಬೇಕಿತ್ತು, ತರಕಾರಿ ತೋಟಕ್ಕೆ ಮಾಡೋ ತರ ಹೊಲಗದ್ದೆಗೆಲ್ಲ ತುಂಬ ಕಷ್ಟಪಟ್ಟು ನೀರು ಬಿಡಬೇಕಿತ್ತು.* 11  ಆದ್ರೆ ಯೋರ್ದನ್‌ ದಾಟಿ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಬೆಟ್ಟ, ಕಣಿವೆ, ಬಯಲು ಇದೆ.+ ಆಕಾಶದಿಂದ ಬೀಳೋ ಮಳೆ ಅದಕ್ಕೆ ನೀರು ಕೊಡುತ್ತೆ.+ 12  ಅದು ನಿಮ್ಮ ದೇವರಾದ ಯೆಹೋವ ನೋಡ್ಕೊಳ್ತಿರೋ ದೇಶ. ವರ್ಷದ ಆರಂಭದಿಂದ ಕೊನೆ ತನಕ ನಿಮ್ಮ ದೇವರಾದ ಯೆಹೋವ ಅದನ್ನ ಯಾವಾಗ್ಲೂ ಕಾಯ್ತಾನೆ.* 13  ನಾನು ಇವತ್ತು ಕೊಡ್ತಿರೋ ಆಜ್ಞೆಗಳನ್ನ ನೀವು ಶ್ರದ್ಧೆಯಿಂದ ಪಾಲಿಸಿದ್ರೆ, ನಿಮ್ಮ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿ, ಆತನ ಸೇವೆ ಮಾಡಿದ್ರೆ+ 14  ಆತನು ನಿಮ್ಮ ದೇಶದಲ್ಲಿ ಕಾಲಕಾಲಕ್ಕೆ ಮಳೆ ಸುರಿಸ್ತಾನೆ. ಶರತ್ಕಾಲದಲ್ಲೂ ವಸಂತಕಾಲದಲ್ಲೂ ಮಳೆ ಬೀಳೋ ಹಾಗೆ ಮಾಡ್ತಾನೆ. ಇದ್ರಿಂದ ನಿಮಗೆ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಸಿಗ್ತಾ ಇರುತ್ತೆ.+ 15  ಹೊಲಗಳಲ್ಲಿ ನಿಮ್ಮ ಪ್ರಾಣಿಗಳಿಗೆ ಬೇಕಾದ ಮೇವನ್ನ ಆತನು ಕೊಡ್ತಾನೆ. ನಿಮಗೂ ಆಹಾರ ಬೇಕಾದಷ್ಟು ಇರುತ್ತೆ, ನೀವು ತಿಂದು ತೃಪ್ತರಾಗ್ತೀರ.+ 16  ಆದ್ರೆ ನೀವು* ಮರುಳಾಗಿ ಬೇರೆ ದೇವರುಗಳನ್ನ ಆರಾಧಿಸಿ, ಅಡ್ಡಬಿದ್ದು ತಪ್ಪು ದಾರಿ ಹಿಡಿಬೇಡಿ. ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.+ 17  ಇಲ್ಲಾಂದ್ರೆ ಯೆಹೋವನ ಕೋಪ ನಿಮ್ಮ ಮೇಲೆ ಹೊತ್ತಿ ಉರಿಯುತ್ತೆ, ಮಳೆ ಬರದ ಹಾಗೆ ಆಕಾಶ ಮುಚ್ಚಿಬಿಡ್ತಾನೆ.+ ಆಗ ಭೂಮೀಲಿ ಬೆಳೆ ಬೆಳೆಯಲ್ಲ. ಯೆಹೋವ ನಿಮಗೆ ಕೊಡೋ ಆ ಒಳ್ಳೇ ದೇಶದಿಂದ ಬೇಗ ನಾಶ ಆಗ್ತೀರ.+ 18  ನನ್ನ ಈ ಮಾತುಗಳನ್ನ ನಿಮ್ಮ ಹೃದಯದಲ್ಲಿ ಅಚ್ಚೊತ್ತಬೇಕು, ನಿಮ್ಮ ಜೀವನದಲ್ಲಿ* ಅನ್ವಯಿಸಬೇಕು. ಇವುಗಳನ್ನ ಜ್ಞಾಪಕ ಪಟ್ಟಿ ತರ ಕೈಗೆ, ಹಣೆಪಟ್ಟಿ ತರ ಹಣೆಗೆ ಕಟ್ಕೊಬೇಕು.+ 19  ಇವುಗಳನ್ನ ನಿಮ್ಮ ಮಕ್ಕಳಿಗೆ ಕಲಿಸಬೇಕು. ಮನೇಲಿ ಕೂತಿರುವಾಗ, ದಾರೀಲಿ ನಡಿವಾಗ, ಮಲಗುವಾಗ ಏಳುವಾಗ ಇವುಗಳ ಬಗ್ಗೆ ಅವ್ರ ಜೊತೆ ಮಾತಾಡಬೇಕು.+ 20  ನಿಮ್ಮ ಮನೇಬಾಗಿಲಿನ ಚೌಕಟ್ಟುಗಳ ಮೇಲೆ, ಬಾಗಿಲ ಮೇಲೆ ಬರೀಬೇಕು. 21  ಹೀಗೆ ಮಾಡಿದ್ರೆ ಯೆಹೋವ ನಿಮ್ಮ ಪೂರ್ವಜರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟ ದೇಶದಲ್ಲಿ ಜಾಸ್ತಿ ವರ್ಷ ಬದುಕ್ತೀರ.+ ಭೂಮಿ ಮೇಲೆ ಆಕಾಶ ಎಷ್ಟು ಕಾಲ ಇರುತ್ತೋ ಅಷ್ಟು ಕಾಲ ನೀವೂ ನಿಮ್ಮ ಮಕ್ಕಳೂ* ಅಲ್ಲಿ ಇರ್ತಿರ. 22  ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲಿ ನಡಿಬೇಕು, ಆತನಿಗೆ ಆಪ್ತರಾಗಿ ಇರಬೇಕು+ ಅಂತ ನಾನು ಕೊಟ್ಟಿರೋ ಆಜ್ಞೆಗಳನ್ನ ನೀವು ಚಾಚೂತಪ್ಪದೆ ಪಾಲಿಸಿ. 23  ಆಗ ಯೆಹೋವ ಆ ಎಲ್ಲ ಜನಾಂಗಗಳನ್ನ ನಿಮ್ಮ ಮುಂದಿಂದ ಓಡಿಸಿಬಿಡ್ತಾನೆ.+ ಅಷ್ಟೇ ಅಲ್ಲ ನೀವು ನಿಮಗಿಂತ ದೊಡ್ಡದಾದ, ಹೆಚ್ಚು ಸಂಖ್ಯೆಯಲ್ಲಿ ಇರೋ ಆ ಜನಾಂಗಗಳ ದೇಶವನ್ನ ವಶ ಮಾಡ್ಕೊಳ್ತೀರ.+ 24  ನೀವು ಕಾಲಿಡೋ ಜಾಗವೆಲ್ಲ ನಿಮ್ಮದಾಗುತ್ತೆ.+ ನಿಮ್ಮ ದೇಶದ ಗಡಿ ಕಾಡಿಂದ ಲೆಬನೋನಿನ ತನಕ ಮಹಾನದಿ ಯೂಫ್ರೆಟಿಸಿಂದ ಪಶ್ಚಿಮದ ಸಮುದ್ರದ ತನಕ* ಇರುತ್ತೆ.+ 25  ಯಾರೂ ನಿಮ್ಮ ಮುಂದೆ ನಿಲ್ಲಲ್ಲ.+ ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನೀವು ಹೋಗೋ ದೇಶದಲ್ಲೆಲ್ಲ ಅಲ್ಲಿನ ಜನ ನಿಮಗೆ ಹೆದರಿ ನಡುಗೋ ತರ ಆತನು ಮಾಡ್ತಾನೆ.+ 26  ನೋಡಿ, ನಾನು ಇವತ್ತು ನಿಮ್ಮ ಮುಂದೆ ಆಶೀರ್ವಾದ ಬೇಕಾ, ಶಾಪ ಬೇಕಾ ಅಂತ ಆಯ್ಕೆ ಮಾಡೋ ಅವಕಾಶ ಇಡ್ತೀನಿ.+ 27  ನಾನು ಇವತ್ತು ನಿಮಗೆ ಕೊಡ್ತಿರೋ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸಿದ್ರೆ ಆಶೀರ್ವಾದ ಸಿಗುತ್ತೆ.+ 28  ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನ ಪಾಲಿಸದೇ ಇದ್ರೆ,+ ನಾನು ಇವತ್ತು ಕೊಡ್ತಿರೋ ಆಜ್ಞೆಗಳನ್ನ* ಪಾಲಿಸದೆ ಬಿಟ್ಟುಬಿಟ್ರೆ, ಇಲ್ಲಿ ತನಕ ನಿಮಗೆ ಗೊತ್ತಿಲ್ಲದ ದೇವರುಗಳನ್ನ ಆರಾಧಿಸಿದ್ರೆ ನಿಮ್ಮ ಮೇಲೆ ಶಾಪ ಬರುತ್ತೆ. 29  ನಿಮ್ಮ ದೇವರಾದ ಯೆಹೋವ ನೀವು ವಶ ಮಾಡ್ಕೊಳ್ಳೋ ದೇಶಕ್ಕೆ ನಿಮ್ಮನ್ನ ಸೇರಿಸಿದ ಮೇಲೆ ನೀವು ಗೆರಿಜ್ಜೀಮ್‌ ಬೆಟ್ಟದಿಂದ ಆಶೀರ್ವಾದ ಮಾಡಿ. ಏಬಾಲ್‌ ಬೆಟ್ಟದಿಂದ ಶಾಪ ಹಾಕಿ.+ 30  ಆ ಬೆಟ್ಟಗಳು ಯೋರ್ದನ್‌ ನದಿ ಆಚೆ ಪಶ್ಚಿಮದ ಕಡೆ ಅರಾಬಾದಲ್ಲಿರೋ ಕಾನಾನ್ಯರ ದೇಶದಲ್ಲಿ, ಗಿಲ್ಗಾಲಿನ ಮುಂದೆ, ದೊಡ್ಡ ಮರಗಳಿದ್ದ ಮೋರೆ+ ಅನ್ನೋ ಸ್ಥಳದ ಹತ್ರ ಇವೆ. 31  ಈಗ ನೀವು ಯೋರ್ದನನ್ನ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ಳಿ.+ ಆ ದೇಶವನ್ನ ವಶ ಮಾಡ್ಕೊಂಡು ಅದ್ರಲ್ಲಿ ಜೀವಿಸುವಾಗ 32  ನಾನು ಇವತ್ತು ಕೊಡ್ತಿರೋ ಎಲ್ಲ ನಿಯಮಗಳನ್ನ ತೀರ್ಪುಗಳನ್ನ ತಪ್ಪದೆ ಪಾಲಿಸಬೇಕು.+

ಪಾದಟಿಪ್ಪಣಿ

ಅಕ್ಷ. “ಬಲಿಷ್ಠ ಕೈಯನ್ನ ಮತ್ತು ಚಾಚಿದ ತೋಳನ್ನ.”
ಅಥವಾ “ಕಾಲುಗಳಿಂದ” ಅಂದ್ರೆ ಕಾಲಿಂದ ನೀರಿನ ಚಕ್ರ ತುಳಿಯೋ ಮೂಲಕ ಅಥವಾ ಕಾಲಿಂದ ಕಾಲುವೆ ತೆರಿಯೋ ಮೂಲಕ ಬಿಡಬೇಕಿತ್ತು.
ಅಥವಾ “ಯೆಹೋವನ ದೃಷ್ಟಿ ಅದ್ರ ಮೇಲಿರುತ್ತೆ.”
ಅಥವಾ “ನಿಮ್ಮ ಹೃದಯ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಕ್ಷ. “ಗಂಡು ಮಕ್ಕಳೂ.”
ಅದು, ಮಹಾ ಸಮುದ್ರ ಅಂದ್ರೆ ಮೆಡಿಟರೇನಿಯನ್‌ ಸಮುದ್ರ.
ಅಕ್ಷ. “ಮಾರ್ಗ.”