ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಆ ಸಮಯ ಬಂದಿದೆ!’

‘ಆ ಸಮಯ ಬಂದಿದೆ!’

‘ಆ ಸಮಯ ಬಂದಿದೆ!’

‘ಅವನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂದಿತ್ತು.’​—⁠ಯೋಹಾನ 13:⁠1.

1. ಸಾಮಾನ್ಯ ಶಕ 33ರ ಪಸ್ಕಹಬ್ಬವು ಹತ್ತಿರ ಬರುವಾಗ, ಯೆರೂಸಲೇಮಿನಲ್ಲಿ ಯಾವ ಊಹಾಪೋಹಗಳು ಕೇಳಿಬರುತ್ತಿವೆ, ಮತ್ತು ಏಕೆ?

ಸಾಮಾನ್ಯ ಶಕ 29ರಲ್ಲಿ ಯೇಸು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಆ ಬಳಿಕ ಅವನು ತನ್ನ ಮರಣ, ಪುನರುತ್ಥಾನ, ಮತ್ತು ಮಹಿಮೆಗೇರಿಸುವಿಕೆಯ “ಕಾಲ”ಕ್ಕೆ ನಡಿಸುವಂತಹ ಮಾರ್ಗದಲ್ಲಿ ನಡೆಯಲಾರಂಭಿಸಿದನು. ಈಗ ಸಾ.ಶ. 33ರ ವಸಂತಕಾಲವು ಬಂದಿದೆ. ಯೆಹೂದಿ ಹಿರೀಸಭೆ ಅಥವಾ ಸನ್ಹೆದ್ರಿನ್‌ ಯೇಸುವನ್ನು ಕೊಲ್ಲಲು ಸಂಚುಹೂಡಿ ಕೆಲವೇ ವಾರಗಳು ಕಳೆದಿವೆ. ಹಿರೀಸಭೆಯ ಒಬ್ಬ ಸದಸ್ಯನಾಗಿದ್ದ ನಿಕೊದೇಮನು ಫರಿಸಾಯರ ಯೋಜನೆಗಳ ಬಗ್ಗೆ ಯೇಸುವಿಗೆ ತಿಳಿಸಿದ್ದಿರಬಹುದು. ಆದುದರಿಂದ ಯೇಸು ಯೆರೂಸಲೇಮನ್ನು ಬಿಟ್ಟು, ಯೊರ್ದನ್‌ ಹೊಳೆಯ ಆಚೆ ಬದಿಯಲ್ಲಿರುವ ಹಳ್ಳಿಗೆ ಹೋಗುತ್ತಾನೆ. ಪಸ್ಕಹಬ್ಬವು ಹತ್ತಿರ ಬಂದಿರುವುದರಿಂದ, ಹಳ್ಳಿಯಿಂದ ಅನೇಕರು ಯೆರೂಸಲೇಮಿಗೆ ಹೋಗುತ್ತಾರೆ. ಮತ್ತು ಯೆರೂಸಲೇಮ್‌ ಪಟ್ಟಣವು ಯೇಸುವಿನ ಕುರಿತಾದ ಊಹಾಪೋಹಗಳಿಂದ ತುಂಬಿದೆ. “ಅವನು ಹಬ್ಬಕ್ಕೆ ಬಾರದೆ ಇದ್ದಾನೋ? ನಿಮಗೆ ಹೇಗೆ ಕಾಣುತ್ತದೆ” ಎಂದು ಜನರು ಪರಸ್ಪರ ಮಾತಾಡಿಕೊಳ್ಳುತ್ತಾ ಇರುತ್ತಾರೆ. ಮಹಾಯಾಜಕರು ಮತ್ತು ಫರಿಸಾಯರು ಜನರ ಈ ಕೋಲಾಹಲವನ್ನು ಇನ್ನೂ ಹೆಚ್ಚಿಸಿದ್ದಾರೆ. ಯಾರಾದರೂ ಯೇಸುವನ್ನು ನೋಡುವಲ್ಲಿ, ಅವನು ಯಾವ ಸ್ಥಳದಲ್ಲಿದ್ದಾನೆ ಎಂಬುದನ್ನು ತಮಗೆ ಕೂಡಲೇ ತಿಳಿಸಬೇಕೆಂದು ಅವರು ಅಪ್ಪಣೆ ವಿಧಿಸಿದ್ದಾರೆ.​—⁠ಯೋಹಾನ 11:​47-57.

2. ಮರಿಯಳ ಯಾವ ಕೆಲಸವು ವಾಗ್ವಾದವನ್ನು ಉಂಟುಮಾಡುತ್ತದೆ, ಮತ್ತು ಅವಳ ಪರವಾಗಿ ಯೇಸು ಕೊಟ್ಟ ಉತ್ತರವು, ‘ತನ್ನ ಕಾಲದ’ ಕುರಿತಾದ ಅವನ ಅರಿವಿನ ಬಗ್ಗೆ ಏನನ್ನು ಸೂಚಿಸುತ್ತದೆ?

2 ನೈಸಾನ್‌ 8ರಂದು, ಅಂದರೆ ಪಸ್ಕಹಬ್ಬದ ಆರು ದಿನಗಳಿಗೆ ಮುಂಚೆ, ಪುನಃ ಯೇಸು ಯೆರೂಸಲೇಮಿನ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾನೆ. ಮೊದಲಾಗಿ ಅವನು ಬೇಥಾನ್ಯಕ್ಕೆ ಬರುತ್ತಾನೆ. ಇದು ಯೇಸುವಿನ ಪ್ರಿಯ ಮಿತ್ರರಾಗಿದ್ದ ಮಾರ್ಥ, ಮರಿಯ, ಮತ್ತು ಲಾಜರನ ಊರಾಗಿದೆ. ಬೇಥಾನ್ಯವು ಯೆರೂಸಲೇಮಿನ ಹೊರಗೆ ಮೂರು ಕಿಲೊಮೀಟರುಗಳಷ್ಟು ದೂರದಲ್ಲಿದೆ. ಅಂದು ಶುಕ್ರವಾರ ಸಾಯಂಕಾಲವಾಗಿದೆ ಮತ್ತು ಯೇಸು ಸಬ್ಬತ್ತನ್ನು ಅಲ್ಲೇ ಕಳೆಯುತ್ತಾನೆ. ಮರುದಿನ ಸಾಯಂಕಾಲ, ಬಹು ಬೆಲೆಯುಳ್ಳ ಪರಿಮಳತೈಲವನ್ನು ಉಪಯೋಗಿಸುತ್ತಾ ಮರಿಯಳು ಅವನ ಸೇವೆಮಾಡಿದಾಗ, ಶಿಷ್ಯರು ಅವಳನ್ನು ಆಕ್ಷೇಪಿಸುತ್ತಾರೆ. ಅದಕ್ಕೆ ಯೇಸು ಹೇಳುವುದು: “ಈಕೆಯನ್ನು ಬಿಡು; ನನ್ನನ್ನು ಹೂಣಿಡುವ ದಿವಸಕ್ಕಾಗಿ ಅದನ್ನು ಇಟ್ಟುಕೊಳ್ಳಲಿ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.” (ಯೋಹಾನ 12:​1-8; ಮತ್ತಾಯ 26:​6-13) ‘ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂದಿದೆ’ ಎಂಬುದು ಯೇಸುವಿಗೆ ಗೊತ್ತಿತ್ತು. (ಯೋಹಾನ 13:⁠1) ಅಂದರೆ, ಐದು ದಿನಗಳ ಬಳಿಕ ಅವನು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡಲಿಕ್ಕಿದ್ದನು.’ (ಮಾರ್ಕ 10:45) ಆದುದರಿಂದ, ಈ ಸಮಯದಿಂದ ಯೇಸು ಮಾಡುವ ಹಾಗೂ ಕಲಿಸುವ ಪ್ರತಿಯೊಂದು ವಿಷಯಗಳಲ್ಲಿ ತುರ್ತುಪ್ರಜ್ಞೆಯು ಕಂಡುಬರುತ್ತದೆ. ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ನಾವು ಅತ್ಯಾತುರದಿಂದ ಎದುರುನೋಡುತ್ತಿರುವಾಗ, ಯೇಸುವಿನ ತುರ್ತುಪ್ರಜ್ಞೆಯು ನಮಗೆ ಎಂತಹ ಅತ್ಯುತ್ತಮ ಮಾದರಿಯಾಗಿದೆ! ಯೇಸುವಿನ ವಿಷಯದಲ್ಲಿ ಮರುದಿನವೇ ಏನು ಸಂಭವಿಸುತ್ತದೆ ಎಂಬುದನ್ನು ನಾವೀಗ ಪರಿಗಣಿಸೋಣ.

ಯೇಸು ಅರಸನಂತೆ ಯೆರೂಸಲೇಮನ್ನು ಪ್ರವೇಶಿಸಿದ ದಿನ

3. (ಎ) ನೈಸಾನ್‌ 9ರ ಭಾನುವಾರದಂದು ಯೇಸು ಹೇಗೆ ಯೆರೂಸಲೇಮನ್ನು ಪ್ರವೇಶಿಸುತ್ತಾನೆ ಮತ್ತು ಅವನ ಸುತ್ತಲೂ ಒಟ್ಟುಗೂಡಿದ್ದ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ? (ಬಿ) ಗುಂಪಿನ ಕುರಿತು ಆಪಾದಿಸಿದ ಫರಿಸಾಯರಿಗೆ ಯೇಸು ಯಾವ ಉತ್ತರವನ್ನು ಕೊಡುತ್ತಾನೆ?

3 ನೈಸಾನ್‌ 9ರ ಭಾನುವಾರದಂದು, ಯೇಸು ಅರಸನಂತೆ ಯೆರೂಸಲೇಮನ್ನು ಪ್ರವೇಶಿಸುತ್ತಾನೆ. ಜೆಕರ್ಯ 9:9ರ ನೆರವೇರಿಕೆಗನುಸಾರ, ಯೇಸು ಒಂದು ಕತ್ತೇಮರಿಯ ಮೇಲೆ ಕುಳಿತುಕೊಂಡು ಪಟ್ಟಣವನ್ನು ಸಮೀಪಿಸುತ್ತಾನೆ. ಆಗ ಅವನ ಸುತ್ತಲೂ ಒಟ್ಟುಗೂಡಿದ್ದವರಲ್ಲಿ ಅನೇಕರು, ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸುತ್ತಾರೆ ಹಾಗೂ ಇನ್ನಿತರರು ಮರಗಳಿಂದ ಚಿಗುರುಗಳನ್ನು ಕೊಯ್ದು ದಾರಿಯಲ್ಲಿ ಹರಡುತ್ತಾರೆ. ಅಷ್ಟುಮಾತ್ರವಲ್ಲ, “ಕರ್ತನ [“ಯೆಹೋವನ,” NW] ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ” ಎಂದು ಮಹಾ ಶಬ್ದದಿಂದ ಕೊಂಡಾಡತೊಡಗುತ್ತಾರೆ. ಆ ಗುಂಪಿನಲ್ಲಿದ್ದ ಫರಿಸಾಯರಲ್ಲಿ ಕೆಲವರು, ಯೇಸು ತನ್ನ ಶಿಷ್ಯರನ್ನು ಗದರಿಸುವಂತೆ ಬಯಸುತ್ತಾರೆ. ಆದರೆ ಯೇಸು ಅವರಿಗೆ ಉತ್ತರಿಸುವುದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ.”​—⁠ಲೂಕ 19:​38-40; ಮತ್ತಾಯ 21:​6-9.

4. ಯೇಸು ಯೆರೂಸಲೇಮನ್ನು ಪ್ರವೇಶಿಸಿದಾಗ, ಆ ಪಟ್ಟಣವು ಏಕೆ ಗದ್ದಲದಿಂದ ತುಂಬಿತ್ತು?

4 ಕೆಲವೇ ವಾರಗಳ ಹಿಂದೆ, ಆ ಗುಂಪಿನಲ್ಲಿದ್ದವರಲ್ಲಿ ಅನೇಕರು, ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ್ದನ್ನು ನೋಡಿರುತ್ತಾರೆ. ಈಗ ಅವರು ಆ ಅದ್ಭುತಕಾರ್ಯದ ಕುರಿತು ಇತರರಿಗೆ ಹೇಳುತ್ತಿರುತ್ತಾರೆ. ಆದುದರಿಂದ, ಯೇಸು ಯೆರೂಸಲೇಮನ್ನು ಪ್ರವೇಶಿಸಿದಾಗ, ಇಡೀ ಪ್ರಟ್ಟಣವು ಗದ್ದಲದಿಂದ ಕೂಡಿದೆ. “ಈತನು ಯಾರು?” ಎಂದು ಜನರು ಕೇಳುತ್ತಾರೆ. ಮತ್ತು ಅಲ್ಲಿ ನೆರೆದಿದ್ದ ಜನರು “ಈತನು ಆ ಪ್ರವಾದಿ, ಗಲಿಲಾಯದ ನಜರೇತಿನ ಯೇಸು” ಎಂದು ಹೇಳುತ್ತಿರುತ್ತಾರೆ. ಇದನ್ನೆಲ್ಲ ನೋಡುತ್ತಿದ್ದ ಫರಿಸಾಯರು, “ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ” ಎಂದು ಮಾತಾಡಿಕೊಳ್ಳುತ್ತಾರೆ.​—⁠ಮತ್ತಾಯ 21:​10, 11; ಯೋಹಾನ 12:​17-19.

5. ಯೇಸು ದೇವಾಲಯಕ್ಕೆ ಹೋದಾಗ ಏನು ಸಂಭವಿಸುತ್ತದೆ?

5 ಯೆರೂಸಲೇಮಿಗೆ ಬಂದಾಗಲೆಲ್ಲ ದೇವಾಲಯದೊಳಗೆ ಹೋಗಿ ಬೋಧಿಸುವುದು ಯೇಸುವಿನ ರೂಢಿಯಾಗಿದೆ. ಆದುದರಿಂದ, ಎಂದಿನಂತೆ ಈ ಬಾರಿಯೂ ಮಹಾ ಬೋಧಕನಾದ ಯೇಸು ದೇವಾಲಯಕ್ಕೆ ಹೋಗುತ್ತಾನೆ. ಅಲ್ಲಿ ಕುರುಡರೂ ಕುಂಟರೂ ಅವನ ಬಳಿಗೆ ಬರುತ್ತಾರೆ ಮತ್ತು ಅವನು ಅವರನ್ನು ವಾಸಿಮಾಡುತ್ತಾನೆ. ಮಹಾಯಾಜಕರೂ ಶಾಸ್ತ್ರಿಗಳೂ ಇದನ್ನು ನೋಡಿದಾಗ ಮತ್ತು “ದಾವೀದನ ಕುಮಾರನಿಗೆ ಜಯಜಯ” ಎಂದು ದೇವಾಲಯದಲ್ಲಿ ಹುಡುಗರು ಕೂಗುತ್ತಿರುವುದನ್ನು ಕೇಳಿಸಿಕೊಂಡಾಗ ತುಂಬ ಸಿಟ್ಟುಗೊಳ್ಳುತ್ತಾರೆ. ಆಗ ಯೇಸುವನ್ನು ಕುರಿತು, “ಇವರು ಹೇಳುವದನ್ನು ಕೇಳುತ್ತೀಯಾ” ಎಂದು ಅವರು ಆಕ್ಷೇಪಿಸುತ್ತಾರೆ. ಅವರಿಗೆ ಯೇಸು ಉತ್ತರಿಸುವುದು: “ಹೌದು, ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇ ಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ?” ತದನಂತರ ಯೇಸು ಅಲ್ಲಿ ಬೋಧಿಸುವುದನ್ನು ಮುಂದುವರಿಸುತ್ತಾನೆ. ಅದೇ ಸಮಯದಲ್ಲಿ, ದೇವಾಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಹ ಚೆನ್ನಾಗಿ ಗಮನಿಸುತ್ತಾನೆ.​—⁠ಮತ್ತಾಯ 21:​15, 16; ಮಾರ್ಕ 11:⁠11.

6. ಈ ಮುಂಚಿಗಿಂತಲೂ ಈಗ ಯೇಸು ವ್ಯವಹರಿಸುತ್ತಿರುವ ರೀತಿ ಹೇಗೆ ಭಿನ್ನವಾಗಿದೆ, ಮತ್ತು ಏಕೆ?

6 ಆರು ತಿಂಗಳುಗಳಿಗೆ ಮುಂಚೆ ಯೇಸು ವ್ಯವಹರಿಸುತ್ತಿದ್ದ ರೀತಿಗೂ ಈಗ ಅವನು ವ್ಯವಹರಿಸುತ್ತಿರುವ ರೀತಿಗೂ ಎಷ್ಟೊಂದು ವ್ಯತ್ಯಾಸವಿತ್ತು! ಆಗ ಅವನು ಪರ್ಣಶಾಲೆಗಳ ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋದಾಗ “ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ” ಹೋಗಿದ್ದನು. (ಯೋಹಾನ 7:10) ಮತ್ತು ಅವನ ಜೀವವು ಅಪಾಯದಲ್ಲಿದ್ದಾಗ, ಯಾವುದೇ ತೊಂದರೆಯಿಲ್ಲದೆ ತಪ್ಪಿಸಿಕೊಳ್ಳಲಿಕ್ಕಾಗಿ ಯಾವಾಗಲೂ ಸೂಕ್ತಕ್ರಮಗಳನ್ನು ತೆಗೆದುಕೊಂಡನು. ಆದರೆ ಈಗ ಅವನನ್ನು ಹಿಡಿದುಕೊಡುವಂತೆ ಆಜ್ಞೆಗಳು ಹೊರಡಿಸಲ್ಪಟ್ಟಿದ್ದರೂ, ಅವನು ಜನರಿಗೆ ಕಾಣುವಂತಹ ರೀತಿಯಲ್ಲಿ ಪಟ್ಟಣವನ್ನು ಪ್ರವೇಶಿಸುತ್ತಾನೆ! ಹಾಗೂ ತಾನೇ ಮೆಸ್ಸೀಯನೆಂದು ಯೇಸು ಎಲ್ಲರ ಮುಂದೆ ಹೇಳಿಕೊಳ್ಳುತ್ತಾನೆ; ಆದರೆ ಈ ಮುಂಚೆ ಅವನು ಎಂದೂ ಹೀಗೆ ಹೇಳಿಕೊಂಡಿರಲಿಲ್ಲ. (ಯೆಶಾಯ 42:2; ಮಾರ್ಕ 1:​40-44) ಗದ್ದಲಭರಿತ ಪ್ರಚಾರದ ಮೂಲಕ ಜನರ ಗಮನವನ್ನು ಸೆಳೆದುಕೊಳ್ಳಬೇಕು ಅಥವಾ ತನ್ನ ಕುರಿತಾದ ಅಸ್ಪಷ್ಟ ವರದಿಗಳು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸಲ್ಪಡಬೇಕು ಎಂದು ಯೇಸು ಎಂದೂ ಬಯಸಲಿಲ್ಲ. ಆದರೆ ಈಗ ಜನರ ಗುಂಪುಗಳೇ ಬಹಿರಂಗವಾಗಿ ಅವನನ್ನು ಅರಸನು, ರಕ್ಷಕನು, ಹಾಗೂ ಮೆಸ್ಸೀಯನೆಂದು ಘೋಷಿಸುತ್ತಿವೆ, ಮತ್ತು ಜನರ ಗುಂಪುಗಳನ್ನು ಗದರಿಸುವಂತೆ ಧಾರ್ಮಿಕ ಮುಖಂಡರು ಯೇಸುವನ್ನು ಕೇಳಿಕೊಂಡಾಗ ಅವನು ಅವರ ಬೇಡಿಕೆಯನ್ನು ತಳ್ಳಿಹಾಕುತ್ತಾನೆ! ಏಕೆ? ಏಕೆಂದರೆ, ಮರುದಿನವೇ ಯೇಸು ಘೋಷಿಸಿದ ಪ್ರಕಾರ “ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ.”​—⁠ಯೋಹಾನ 12:⁠23.

ಧೈರ್ಯದಿಂದ ಕ್ರಿಯೆಗೈದದ್ದು​—⁠ತದನಂತರ ಜೀವರಕ್ಷಕ ಬೋಧನೆಗಳು

7, 8. ಸಾ.ಶ. 33ರ ನೈಸಾನ್‌ 10ರಂದು ಯೇಸು ಮಾಡಿದ ಕೆಲಸವು, ಸಾ.ಶ. 30ರ ಪಸ್ಕಹಬ್ಬದ ಸಮಯದಲ್ಲಿ ಅವನು ದೇವಾಲಯದಲ್ಲಿ ಮಾಡಿದ ಕೆಲಸವನ್ನು ಹೇಗೆ ಪ್ರತಿಬಿಂಬಿಸುತ್ತದೆ?

7 ನೈಸಾನ್‌ 10ರ ಸೋಮವಾರದಂದು ದೇವಾಲಯಕ್ಕೆ ಬಂದಾಗ, ಭಾನುವಾರ ಮಧ್ಯಾಹ್ನ ಅವನು ಏನನ್ನು ನೋಡಿದನೋ ಅದರ ಬಗ್ಗೆ ಕ್ರಿಯೆಗೈಯುತ್ತಾನೆ. ಅವನು ‘ದೇವಾಲಯದಲ್ಲಿ ಮಾರುವವರನ್ನೂ ಕೊಳ್ಳುವವರನ್ನೂ ಹೊರಡಿಸಿಬಿಡುವುದಕ್ಕೆ ಪ್ರಾರಂಭಿಸಿ, ಚಿನಿವಾರರ ಮೇಜುಗಳನ್ನೂ ಪಾರಿವಾಳಮಾರುವವರ ಕಾಲ್ಮಣೆಗಳನ್ನೂ ಕೆಡವಿದನು; ಒಬ್ಬನನ್ನಾದರೂ ಸಾಮಾನು ಹೊತ್ತುಕೊಂಡು ದೇವಾಲಯದೊಳಗೆ ಹಾದುಹೋಗಗೊಡಿಸಲಿಲ್ಲ.’ ತಪ್ಪಿತಸ್ಥರನ್ನು ಖಂಡಿಸುತ್ತಾ ಅವನು ಹೇಳುವುದು: “ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ.”​—⁠ಮಾರ್ಕ 11:​15-17.

8 ಯೇಸುವಿನ ವರ್ತನೆಯು, ಅವನು ಮೂರು ವರ್ಷಗಳಿಗೆ ಮುಂಚೆ ಸಾ.ಶ. 30ರ ಪಸ್ಕಹಬ್ಬದ ಸಮಯದಲ್ಲಿ ದೇವಾಲಯಕ್ಕೆ ಬಂದಾಗ ಏನನ್ನು ಮಾಡಿದ್ದನೋ ಅದನ್ನೇ ಪ್ರತಿಬಿಂಬಿಸುತ್ತದೆ. ಆದರೂ, ಈ ಬಾರಿ ಅವನು ಅವರನ್ನು ಇನ್ನೂ ಉಗ್ರವಾಗಿ ಖಂಡಿಸುತ್ತಾನೆ. ಮತ್ತು ದೇವಾಲಯದಲ್ಲಿದ್ದ ವ್ಯಾಪಾರಿಗಳನ್ನು ‘ಕಳ್ಳರು’ ಎಂದು ಸಂಬೋಧಿಸುತ್ತಾನೆ. (ಲೂಕ 19:​45, 46; ಯೋಹಾನ 2:​13-16) ಅವರು ಕಳ್ಳರಾಗಿದ್ದಾರೆ, ಏಕೆಂದರೆ ಯಜ್ಞಾರ್ಪಣೆಗೋಸ್ಕರ ಪ್ರಾಣಿಗಳನ್ನು ಕೊಂಡುಕೊಳ್ಳಲು ಬರುತ್ತಿದ್ದ ಯೆಹೂದ್ಯರಿಂದ ಇವರು ತುಂಬ ಹಣವನ್ನು ವಸೂಲುಮಾಡುತ್ತಾರೆ. ಮಹಾಯಾಜಕರು, ಶಾಸ್ತ್ರಿಗಳು, ಮತ್ತು ಪ್ರಜೆಯ ಹಿರಿಯರು, ಯೇಸು ಏನು ಮಾಡುತ್ತಿದ್ದಾನೆಂಬುದನ್ನು ತಿಳಿದುಕೊಳ್ಳುತ್ತಾರೆ ಮತ್ತು ಪುನಃ ಅವನನ್ನು ಕೊಲ್ಲುವುದಕ್ಕೆ ಉಪಾಯ ಮಾಡುತ್ತಾರೆ. ಆದರೂ, ಎಲ್ಲ ಜನರು ಯೇಸುವಿನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟು, ಅವನಿಗೆ ಇನ್ನೂ ಕಿವಿಗೊಡಲಿಕ್ಕಾಗಿ ಅವನ ಬಳಿಯೇ ಇದ್ದುದರಿಂದ, ಯೇಸುವನ್ನು ಹೇಗೆ ಹೊರಗಟ್ಟಬೇಕು ಎಂಬುದು ಅವರಿಗೆ ತೋಚುವುದಿಲ್ಲ.​—⁠ಮಾರ್ಕ 11:18; ಲೂಕ 19:​47, 48.

9. ಯೇಸು ಯಾವ ಪಾಠವನ್ನು ಕಲಿಸುತ್ತಾನೆ, ಮತ್ತು ದೇವಾಲಯದಲ್ಲಿ ತನಗೆ ಕಿವಿಗೊಡುತ್ತಿದ್ದ ಜನರಿಗೆ ಯೇಸು ಯಾವ ಆಮಂತ್ರಣವನ್ನು ನೀಡುತ್ತಾನೆ?

9 ಯೇಸು ದೇವಾಲಯದಲ್ಲಿ ಬೋಧಿಸುವುದನ್ನು ಮುಂದುವರಿಸುತ್ತಾ, “ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ” ಎಂದು ಹೇಳುತ್ತಾನೆ. ಹೌದು, ತನ್ನ ಮಾನವ ಜೀವಿತವು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ ಎಂಬುದು ಅವನಿಗೆ ಗೊತ್ತಿದೆ. ತದನಂತರ ಅವನು ಒಂದು ಗೋದಿಯ ಕಾಳು ಬಹಳ ಫಲಕೊಡಬೇಕಾದರೆ ಅದು ಹೇಗೆ ಭೂಮಿಯಲ್ಲಿ ಬಿದ್ದು ಸಾಯಬೇಕು ಎಂಬುದರ ಕುರಿತು ತಿಳಿಸುತ್ತಾನೆ; ಇದು ಅವನು ಮರಣಪಟ್ಟು, ಇತರರಿಗೆ ನಿತ್ಯಜೀವವನ್ನು ಕೊಡುವ ಒಂದು ಮೂಲವಾಗಿ ಪರಿಣಮಿಸುವುದಕ್ಕೆ ಅನುರೂಪವಾಗಿದೆ. ಇಷ್ಟೆಲ್ಲ ತಿಳಿಸಿದ ಬಳಿಕ, ತನಗೆ ಕಿವಿಗೊಡುತ್ತಿದ್ದ ಜನರಿಗೆ ಯೇಸು ಈ ಆಮಂತ್ರಣವನ್ನು ನೀಡುತ್ತಾನೆ: “ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು.”​—⁠ಯೋಹಾನ 12:​23-26.

10. ತನಗೋಸ್ಕರ ಕಾದಿರುವ ಯಾತನಾಭರಿತ ಮರಣದ ಕುರಿತು ಯೇಸುವಿಗೆ ಯಾವ ಭಾವನೆ ಇದೆ?

10 ಕೇವಲ ನಾಲ್ಕು ದಿನಗಳ ನಂತರ ತಾನು ಅನುಭವಿಸಲಿರುವ ಯಾತನಾಭರಿತ ಮರಣದ ಕುರಿತು ಆಲೋಚಿಸುತ್ತಾ, ಯೇಸು ಮುಂದುವರಿಸುವುದು: “ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು.” ಆದರೆ, ಮುಂದೆ ಯೇಸುವಿಗಾಗಿ ಏನು ಕಾದಿರಿಸಲ್ಪಟ್ಟಿದೆಯೋ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದುದರಿಂದಲೇ ಅವನು ಹೇಳುವುದು: “ಆದರೆ ಇದಕ್ಕಾಗಿಯೇ [ನಾನು] ಈ ಕಾಲ ಸೇರಿದೆನು.” ಇದರ ಅರ್ಥ, ದೇವರು ಮಾಡಿರುವ ಎಲ್ಲ ಏರ್ಪಾಡುಗಳೊಂದಿಗೆ ಯೇಸು ನಿಜವಾಗಿಯೂ ಸಹಮತದಿಂದಿದ್ದಾನೆ ಎಂದಾಗಿದೆ. ತನ್ನ ಯಜ್ಞಾರ್ಪಿತ ಮರಣದ ತನಕ ತಾನು ಮಾಡುವ ಪ್ರತಿಯೊಂದು ಕೆಲಸವನ್ನು ದೇವರ ಚಿತ್ತವು ನಿಯಂತ್ರಿಸುವಂತೆ ಅನುಮತಿಸುವ ದೃಢನಿರ್ಧಾರವನ್ನು ಅವನು ಮಾಡಿದ್ದಾನೆ. (ಯೋಹಾನ 12:17) ದೇವರ ಚಿತ್ತಕ್ಕೆ ಸಂಪೂರ್ಣವಾಗಿ ಅಧೀನತೆ ತೋರಿಸುವುದರಲ್ಲಿ ಅವನು ನಮಗೋಸ್ಕರ ಎಂತಹ ಅತ್ಯುತ್ತಮ ಮಾದರಿಯನ್ನಿಟ್ಟಿದ್ದಾನೆ!

11. ಪರಲೋಕದಿಂದ ಒಂದು ಧ್ವನಿಯನ್ನು ಕೇಳಿಸಿಕೊಂಡ ಜನರಿಗೆ ಯೇಸು ಯಾವ ಉಪದೇಶಗಳನ್ನು ನೀಡುತ್ತಾನೆ?

11 ತನ್ನ ಮರಣವು ತನ್ನ ತಂದೆಯ ಹೆಸರಿನ ಮೇಲೆ ಯಾವ ಪರಿಣಾಮವನ್ನು ಉಂಟುಮಾಡುವುದು ಎಂಬ ವಿಷಯದಲ್ಲಿ ಯೇಸುವಿಗೆ ತುಂಬ ಚಿಂತೆಯಿದೆ. ಆದುದರಿಂದಲೇ ಅವನು “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ” ಎಂದು ಪ್ರಾರ್ಥಿಸುತ್ತಾನೆ. ಆಗ, ದೇವಾಲಯದಲ್ಲಿ ಒಟ್ಟುಗೂಡಿದ್ದ ಜನರ ಆಶ್ಚರ್ಯಕ್ಕೆ, ಪರಲೋಕದಿಂದ ಒಂದು ಧ್ವನಿಯು ಕೇಳಿಬರುತ್ತದೆ. “ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು” ಎಂಬ ಆಕಾಶವಾಣಿಯಾಗುತ್ತದೆ. ಈ ಸದವಕಾಶವನ್ನು ಮಹಾ ಬೋಧಕನು ಸದುಪಯೋಗಿಸಿಕೊಳ್ಳುತ್ತಾನೆ. ಹೇಗೆಂದರೆ, ಈ ಆಕಾಶವಾಣಿ ಏಕಾಯಿತು, ತನ್ನ ಮರಣದಿಂದಾಗುವ ಪರಿಣಾಮಗಳೇನು, ಮತ್ತು ಜನರು ಏಕೆ ತನ್ನಲ್ಲಿ ನಂಬಿಕೆಯಿಡಬೇಕು ಎಂಬುದರ ಕುರಿತು ಅಲ್ಲಿ ನೆರೆದಿದ್ದವರಿಗೆ ಅವನು ಹೇಳುತ್ತಾನೆ. (ಯೋಹಾನ 12:​28-36) ಹೀಗೆ, ಕಳೆದ ಎರಡು ದಿನಗಳಲ್ಲಿ ಯೇಸು ತುಂಬ ಕಾರ್ಯತತ್ಪರನಾಗಿದ್ದಾನೆ. ಆದರೆ ಅತಿ ಪ್ರಾಮುಖ್ಯವಾದ ದಿನವು ಇನ್ನೂ ಬರಲಿಕ್ಕಿದೆ.

ಉಗ್ರವಾದ ಖಂಡನೆಯ ದಿನ

12. ನೈಸಾನ್‌ 11ರ ಮಂಗಳವಾರದಂದು, ಧಾರ್ಮಿಕ ಮುಖಂಡರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವುದಕ್ಕೆ ಹೇಗೆ ಪ್ರಯತ್ನಿಸುತ್ತಾರೆ, ಮತ್ತು ಅದರ ಫಲಿತಾಂಶವೇನು?

12 ನೈಸಾನ್‌ 11ರ ಮಂಗಳವಾರದಂದು, ಪುನಃ ಯೇಸು ಬೋಧಿಸಲಿಕ್ಕಾಗಿ ದೇವಾಲಯಕ್ಕೆ ಹೋಗುತ್ತಾನೆ. ಅಂದು ನೆರೆದಿದ್ದ ಸಭಿಕರಲ್ಲಿ ಅವನ ವಿರೋಧಿಗಳೂ ಇದ್ದಾರೆ. ಹಿಂದಿನ ದಿನ ಯೇಸು ಮಾಡಿದ ಕೃತ್ಯಗಳನ್ನು ಸೂಚಿಸುತ್ತಾ, ಮಹಾಯಾಜಕರು ಹಾಗೂ ಪ್ರಜೆಯ ಹಿರಿಯರು ಅವನಿಗೆ, “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು”? ಎಂದು ಪ್ರಶ್ನಿಸುತ್ತಾರೆ. ಆಗ ತನ್ನ ಉತ್ತರದ ಮೂಲಕ ಈ ಮಹಾ ಬೋಧಕನು ಅವರನ್ನು ಗಲಿಬಿಲಿಗೊಳಿಸುತ್ತಾನೆ. ತದನಂತರ ಅವನು ತನ್ನ ವಿರೋಧಿಗಳು ಎಷ್ಟು ದುಷ್ಟರಾಗಿದ್ದಾರೆ ಎಂಬುದನ್ನು ಬಯಲುಮಾಡುವಂತಹ ಮೂರು ಸಾಮ್ಯಗಳನ್ನು ಹೇಳುತ್ತಾನೆ. ಈ ಸಾಮ್ಯಗಳಲ್ಲಿ ಎರಡು ದ್ರಾಕ್ಷೇತೋಟದ ಕುರಿತಾಗಿವೆ ಮತ್ತು ಒಂದು ಮದುವೆಯ ಊಟದ ಕುರಿತಾಗಿದೆ. ಯೇಸು ಹೇಳಿದ್ದನ್ನು ಕೇಳಿಸಿಕೊಂಡ ಧಾರ್ಮಿಕ ಮುಖಂಡರು ತುಂಬ ಕೋಪಗೊಂಡು, ಅವನನ್ನು ಹಿಡಿಯಲು ಬಯಸುತ್ತಾರೆ. ಆದರೆ, ಯೇಸುವನ್ನು ಪ್ರವಾದಿಯೆಂದು ಪರಿಗಣಿಸುತ್ತಿದ್ದ ಜನಸಮೂಹಕ್ಕೆ ಅವರು ಹೆದರುತ್ತಾರೆ. ಆದುದರಿಂದ, ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವದಕ್ಕೆ ಪಯತ್ನಿಸಿ, ಅವನನ್ನು ಸೆರೆಹಿಡಿಯಬೇಕೆಂದು ಅವರು ಉಪಾಯ ಮಾಡುತ್ತಾರೆ. ಆದರೂ, ತನ್ನ ಉತ್ತರಗಳಿಂದ ಯೇಸು ಅವರ ಬಾಯಿಮುಚ್ಚಿಸುತ್ತಾನೆ.​—⁠ಮತ್ತಾಯ 21:​23–22:⁠46.

13. ಶಾಸ್ತ್ರಿಗಳು ಮತ್ತು ಫರಿಸಾಯರ ವಿಷಯದಲ್ಲಿ ಯೇಸು ತನ್ನ ಕೇಳುಗರಿಗೆ ಯಾವ ಬುದ್ಧಿವಾದವನ್ನು ನೀಡುತ್ತಾನೆ?

13 ಶಾಸ್ತ್ರಿಗಳು ಮತ್ತು ಫರಿಸಾಯರು ದೇವರ ನಿಯಮಶಾಸ್ತ್ರವನ್ನು ಕಲಿಸುತ್ತೇವೆಂದು ಹೇಳಿಕೊಳ್ಳುವುದರಿಂದ, ಯೇಸು ತನ್ನ ಕೇಳುಗರನ್ನು ಹೀಗೆ ಉತ್ತೇಜಿಸುತ್ತಾನೆ: “ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” (ಮತ್ತಾಯ 23:​1-3) ಎಷ್ಟು ಪ್ರಬಲವಾದ ಸಾರ್ವಜನಿಕ ಖಂಡನೆ ಇದಾಗಿದೆ! ಆದರೆ ಇಷ್ಟಕ್ಕೇ ಅವನು ತನ್ನ ಖಂಡನೆಯನ್ನು ನಿಲ್ಲಿಸುವುದಿಲ್ಲ. ಏಕೆಂದರೆ ದೇವಾಲಯದಲ್ಲಿ ಅವನಿರುವುದು ಇದೇ ಕೊನೆಯ ಬಾರಿಯಾಗಿದೆ. ಆದುದರಿಂದ, ಪ್ರತಿಧ್ವನಿಸುತ್ತಿರುವ ಗುಡುಗಿನೋಪಾದಿ, ಒಂದಾದ ನಂತರ ಇನ್ನೊಂದರಂತೆ ಅವನು ಅವರ ಕಪಟ ಕೆಲಸಗಳನ್ನು ಧೈರ್ಯದಿಂದ ಬಯಲಿಗೆಳೆಯುತ್ತಾನೆ.

14, 15. ಶಾಸ್ತ್ರಿಗಳು ಮತ್ತು ಫರಿಸಾಯರ ವಿರುದ್ಧ ಯೇಸು ಯಾವ ಉಗ್ರ ಖಂಡನೆಯನ್ನು ಮಾಡಿದನು?

14 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ” ಎಂದು ಯೇಸು ಆರು ಬಾರಿ ಹೇಳುತ್ತಾನೆ. ಅವರು ಕಪಟಿಗಳಾಗಿದ್ದಾರೆ, ಏಕೆಂದರೆ ಅವರು ಪರಲೋಕ ರಾಜ್ಯದ ಬಾಗಿಲನ್ನು ಮುಚ್ಚಿಬಿಡುತ್ತಾರೆ, ಮತ್ತು ಅದರ ಒಳಗೆ ಹೋಗಬೇಕೆಂದಿರುವವರನ್ನು ಹೋಗಗೊಡಿಸುವುದಿಲ್ಲ ಎಂದು ಯೇಸು ವಿವರಿಸುತ್ತಾನೆ. ಒಬ್ಬ ವ್ಯಕ್ತಿಯನ್ನು ಮತಾಂತರಿಸಲು ಈ ಕಪಟಿಗಳು ಭೂಮಿಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತಾರೆ, ಆದರೆ ಕೊನೆಗೆ ಅವನನ್ನು ಶಾಶ್ವತವಾದ ಮರಣಕ್ಕೆ ಪಾತ್ರನಾಗುವಂತೆ ಮಾಡುತ್ತಾರೆ. ಅವರು “ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟು”ಬಿಡುತ್ತಾರೆ, ಆದರೆ ದಶಮಾಂಶವನ್ನು ಕೊಡುವ ವಿಷಯಕ್ಕೆ ಮಾತ್ರ ತುಂಬ ಗಮನ ಕೊಡುತ್ತಾರೆ. ಅಷ್ಟುಮಾತ್ರವಲ್ಲ, ಅವರು ‘ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತಾರೆ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗಪದಾರ್ಥಗಳಿಂದಲೂ ತುಂಬಿರುತ್ತವೆ.’ ಅಂದರೆ ಹೊರತೋರಿಕೆಗೆ ಅವರು ಭಕ್ತಿಯ ಆಡಂಬರವನ್ನು ತೋರಿಸುವುದಾದರೂ, ಒಳಗೆ ಕೊಳಕಿನಿಂದ ತುಂಬಿದ್ದಾರೆ. ಇದಲ್ಲದೆ, ತಮ್ಮ ಉದಾರ ಕೃತ್ಯಗಳ ಕಡೆಗೆ ಗಮನ ಸೆಳೆಯಲಿಕ್ಕಾಗಿ, ಪ್ರವಾದಿಗಳಿಗೋಸ್ಕರ ಸಮಾಧಿಗಳನ್ನು ಕಟ್ಟಲು ಮತ್ತು ನೀತಿವಂತರ ಗೋರಿಗಳನ್ನು ಅಲಂಕರಿಸಲು ಇವರು ಇಷ್ಟಪಡುತ್ತಾರೆ. ಆದರೆ, ವಾಸ್ತವದಲ್ಲಿ ಇವರು “ಪ್ರವಾದಿಗಳನ್ನು ಕೊಂದಂಥ ಜನರ ಮಕ್ಕಳಾಗಿದ್ದಾರೆ” (NW).​—⁠ಮತ್ತಾಯ 23:​13-15, 23-31.

15 ತನ್ನ ವಿರೋಧಿಗಳಿಗೆ ಆತ್ಮಿಕ ವಿಷಯಗಳಲ್ಲಿ ಅಭಿರುಚಿಯಿಲ್ಲ ಎಂದು ಅವರನ್ನು ಖಂಡಿಸುತ್ತಾ, “ಅಯ್ಯೋ, ದಾರಿತೋರಿಸುವ ಕುರುಡರೇ” ಎಂದು ಯೇಸು ಅವರನ್ನು ಸಂಬೋಧಿಸುತ್ತಾನೆ. ಏಕೆಂದರೆ ನೈತಿಕ ವಿಷಯಗಳಲ್ಲಿ ಅವರು ಕುರುಡರಾಗಿದ್ದಾರೆ. ಅವರು ದೇವಾಲಯದ ಆತ್ಮಿಕ ಮೌಲ್ಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದಕ್ಕಿಂತಲೂ, ಆ ಆರಾಧನಾ ಸ್ಥಳದ ಚಿನ್ನಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ತದನಂತರ ಯೇಸು ಇನ್ನೂ ಕಟುವಾದ ಮಾತುಗಳಿಂದ ಅವರನ್ನು ಖಂಡಿಸುತ್ತಾನೆ. ಅವನು ಹೇಳುವುದು: “ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ?” ಹೌದು, ತಮ್ಮ ದುಷ್ಟ ಮಾರ್ಗಗಳನ್ನು ಬೆನ್ನಟ್ಟಿದ್ದರಿಂದ, ಅವರು ನಿತ್ಯ ಮರಣವನ್ನು ಅನುಭವಿಸುವರು ಎಂದು ಯೇಸು ಅವರಿಗೆ ಹೇಳುತ್ತಿದ್ದಾನೆ. (ಮತ್ತಾಯ 23:​16-22, 33) ಆದುದರಿಂದ, ಒಂದುವೇಳೆ ನಮ್ಮ ಸಾರುವಿಕೆಯಲ್ಲಿ ಸುಳ್ಳು ಧರ್ಮದ ಕಪಟತನವನ್ನು ಬಯಲಿಗೆಳೆಯುವುದು ಒಳಗೂಡಿರುವುದಾದರೂ, ರಾಜ್ಯದ ಸಂದೇಶವನ್ನು ಸಾರುವುದರಲ್ಲಿ ನಾವು ಸಹ ಧೈರ್ಯವನ್ನು ತೋರಿಸೋಣ.

16. ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತುಕೊಂಡಿರುವಾಗ, ಯಾವ ಪ್ರಮುಖ ಪ್ರವಾದನೆಯನ್ನು ಯೇಸು ತನ್ನ ಶಿಷ್ಯರಿಗೆ ಮುಂತಿಳಿಸುತ್ತಾನೆ?

16 ಇದಾದ ಬಳಿಕ ಯೇಸು ದೇವಾಲಯವನ್ನು ಬಿಟ್ಟುಹೋಗುತ್ತಾನೆ. ಮಧ್ಯಾಹ್ನದ ಸೂರ್ಯನು ಅಸ್ತಮಿಸುತ್ತಿರುವಂತಹ ಸಮಯದಲ್ಲಿ, ಅವನು ಹಾಗೂ ಅವನ ಅಪೊಸ್ತಲರು ಎಣ್ಣೆಯ ಮರಗಳ ಗುಡ್ಡಕ್ಕೆ ಹೋಗುತ್ತಾರೆ. ಅಲ್ಲಿ ಕುಳಿತುಕೊಂಡಿರುವಾಗ, ದೇವಾಲಯದ ನಾಶನ, ತನ್ನ ಸಾನ್ನಿಧ್ಯ ಹಾಗೂ ವಿಷಯಗಳ ವ್ಯವಸ್ಥೆಯ ಅಂತ್ಯದ ಸೂಚನೆಯ ಕುರಿತಾದ ಪ್ರವಾದನೆಯನ್ನು ಯೇಸು ಮುಂತಿಳಿಸುತ್ತಾನೆ. ಈ ಪ್ರವಾದನ ಮಾತುಗಳ ಮಹತ್ವವು ನಮ್ಮ ದಿನಗಳಿಗೂ ಅನ್ವಯವಾಗುತ್ತದೆ. ಅದೇ ದಿನ ಸಾಯಂಕಾಲ ಯೇಸು ತನ್ನ ಶಿಷ್ಯರಿಗೆ ಹೇಳುವುದು: “ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿ ಕೊಡೋಣವಾಗುವದು.”​—⁠ಮತ್ತಾಯ 24:​1-14; 26:​1, 2.

ಯೇಸು ‘ತನ್ನವರನ್ನು ಕೊನೆಯ ತನಕ ಪ್ರೀತಿಸುತ್ತಾನೆ’

17. (ಎ) ನೈಸಾನ್‌ 14ರ ಪಸ್ಕಹಬ್ಬದಂದು ಯೇಸು ತನ್ನ 12 ಮಂದಿ ಅಪೊಸ್ತಲರಿಗೆ ಯಾವ ಪಾಠವನ್ನು ಕಲಿಸುತ್ತಾನೆ? (ಬಿ) ಇಸ್ಕರಿಯೋತ ಯೂದನನ್ನು ಕಳುಹಿಸಿಬಿಟ್ಟ ಬಳಿಕ ಯೇಸು ಯಾವ ಜ್ಞಾಪಕಾಚರಣೆಯನ್ನು ಆರಂಭಿಸುತ್ತಾನೆ?

17 ತದನಂತರದ ಎರಡು ದಿನಗಳಲ್ಲಿ, ಅಂದರೆ ನೈಸಾನ್‌ 12 ಮತ್ತು 13ರಂದು ಯೇಸು ದೇವಾಲಯದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ, ಧಾರ್ಮಿಕ ಮುಖಂಡರು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ, ಮತ್ತು ಈ ಸಮಯದಲ್ಲಿ ತನ್ನ ಅಪೊಸ್ತಲರೊಂದಿಗೆ ತಾನು ಆಚರಿಸಬೇಕಾಗಿರುವ ಪಸ್ಕಹಬ್ಬಕ್ಕೆ ಯಾವುದೇ ಅಡಚಣೆಯಾಗಬಾರದೆಂದು ಯೇಸು ಬಯಸುತ್ತಾನೆ. ಗುರುವಾರದ ಸೂರ್ಯಾಸ್ತಮಾನದೊಂದಿಗೆ ನೈಸಾನ್‌ 14 ಆರಂಭವಾಗುತ್ತದೆ. ಇದು ಭೂಮಿಯಲ್ಲಿ ಮಾನವನೋಪಾದಿ ಯೇಸುವಿನ ಜೀವಿತದ ಕೊನೆಯ ದಿನವಾಗಿದೆ. ಆ ದಿನ ಸಾಯಂಕಾಲ, ಯೆರೂಸಲೇಮಿನಲ್ಲಿದ್ದ ಒಂದು ಮನೆಯಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಒಟ್ಟುಗೂಡಿದ್ದಾರೆ. ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಈ ಮನೆಯಲ್ಲಿ ಅವರಿಗೋಸ್ಕರ ಸಿದ್ಧತೆಯನ್ನು ಮಾಡಲಾಗಿದೆ. ಅವರೆಲ್ಲರೂ ಒಟ್ಟಿಗೆ ಪಸ್ಕಹಬ್ಬವನ್ನು ಆಚರಿಸುತ್ತಿರುವಾಗ, ಯೇಸು ತನ್ನ 12 ಮಂದಿ ಅಪೊಸ್ತಲರ ಕಾಲುಗಳನ್ನು ತೊಳೆಯುವ ಮೂಲಕ ದೀನಭಾವದ ವಿಷಯದಲ್ಲಿ ಅತ್ಯುತ್ತಮವಾದ ಒಂದು ಪಾಠವನ್ನು ಕಲಿಸುತ್ತಾನೆ. ತನ್ನ ಗುರುವನ್ನು 30 ಬೆಳ್ಳಿ ನಾಣ್ಯಗಳಿಗೆ​—⁠ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಇದು ಕೇವಲ ಒಬ್ಬ ದಾಸನ ಬೆಲೆ​—⁠ಹಿಡಿದುಕೊಡುವುದಕ್ಕೆ ಒಪ್ಪಿಕೊಂಡಿರುವ ಇಸ್ಕರಿಯೋತ ಯೂದನನ್ನು ಕಳುಹಿಸಿಬಿಟ್ಟ ಬಳಿಕ, ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸುತ್ತಾನೆ.​—⁠ವಿಮೋಚನಕಾಂಡ 21:32; ಮತ್ತಾಯ 26:​14, 15, 26-29; ಯೋಹಾನ 13:​2-30.

18. ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ಯೇಸು ಪ್ರೀತಿಯಿಂದ ಯಾವ ಉಪದೇಶವನ್ನು ನೀಡುತ್ತಾನೆ, ಮತ್ತು ಸಮೀಪಿಸುತ್ತಿರುವ ತನ್ನ ಅಗಲುವಿಕೆಯ ನಂತರ ಕಾರ್ಯನಡಿಸಲಿಕ್ಕಾಗಿ ಅವರನ್ನು ಹೇಗೆ ಸಿದ್ಧಗೊಳಿಸುತ್ತಾನೆ?

18 ಜ್ಞಾಪಕಾಚರಣೆಯು ಮುಗಿದ ಬಳಿಕ ಯೇಸುವಿನ ಅಪೊಸ್ತಲರು, ತಮ್ಮಲ್ಲಿ ಯಾರು ಹೆಚ್ಚಿನವರು ಎಂಬುದರ ಬಗ್ಗೆ ಕೋಪದಿಂದ ವಾಗ್ವಾದಿಸತೊಡಗುತ್ತಾರೆ. ಆಗ ಯೇಸು ಅವರನ್ನು ಬಯ್ಯುವುದಕ್ಕೆ ಬದಲಾಗಿ, ಇತರರ ಸೇವೆಮಾಡುವುದರ ಮಹತ್ವದ ಕುರಿತು ತಾಳ್ಮೆಯಿಂದ ಉಪದೇಶಿಸುತ್ತಾನೆ. ತನ್ನ ಕಷ್ಟದ ಸಮಯದಲ್ಲಿ ಈ ಶಿಷ್ಯರೆಲ್ಲರೂ ಎಡೆಬಿಡದೆ ತನ್ನೊಂದಿಗೆ ಇರುವುದನ್ನು ಗಣ್ಯಮಾಡುತ್ತಾ, ಒಂದು ರಾಜ್ಯಕ್ಕಾಗಿ ಅವರೊಂದಿಗೆ ವೈಯಕ್ತಿಕ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾನೆ. (ಲೂಕ 22:​24-30) ಅಷ್ಟುಮಾತ್ರವಲ್ಲ, ಅವನು ಹೇಗೆ ಅವರನ್ನು ಪ್ರೀತಿಸಿದನೋ ಅದೇ ರೀತಿಯಲ್ಲಿ ಅವರು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಆಜ್ಞಾಪಿಸಿದನು. (ಯೋಹಾನ 13:34) ತದನಂತರ ಅವನು, ಸಮೀಪಿಸುತ್ತಿರುವ ತನ್ನ ಅಗಲುವಿಕೆಯ ಕುರಿತು ಅವರಿಗೆ ಹೇಳಿ, ತಾನು ಇಲ್ಲದಿರುವಾಗ ಹೇಗೆ ಕಾರ್ಯನಡಿಸಬೇಕು ಎಂಬ ವಿಷಯದಲ್ಲಿ ಅವರನ್ನು ಸಿದ್ಧಗೊಳಿಸುತ್ತಾನೆ. ತದನಂತರ, ತಾನು ಅವರ ಸ್ನೇಹಿತನಾಗಿರುವೆನೆಂಬ ಆಶ್ವಾಸನೆಯನ್ನು ಅವನು ನೀಡುತ್ತಾನೆ, ತನ್ನ ಮೇಲೆ ನಂಬಿಕೆಯಿಡುವಂತೆ ಅವರನ್ನು ಉತ್ತೇಜಿಸುತ್ತಾನೆ, ಮತ್ತು ಪವಿತ್ರಾತ್ಮದ ಸಹಾಯವನ್ನು ದಯಪಾಲಿಸುತ್ತೇನೆಂದು ಮಾತುಕೊಡುತ್ತಾನೆ. (ಯೋಹಾನ 14:​1-17; 15:15) ಆ ಮನೆಯನ್ನು ಬಿಟ್ಟುಹೋಗುವುದಕ್ಕೆ ಮೊದಲು ಯೇಸು ತನ್ನ ತಂದೆಯ ಬಳಿ ಹೀಗೆ ಬೇಡಿಕೊಳ್ಳುತ್ತಾನೆ: “ಕಾಲ ಬಂದದೆ; ನಿನ್ನ ಮಗನನ್ನು ಮಹಿಮೆಪಡಿಸು, ಆಗ ಮಗನು ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು.” ನಿಜವಾಗಿಯೂ ಯೇಸು ತನ್ನ ಅಗಲುವಿಕೆಯ ನಂತರ ಕಾರ್ಯನಡಿಸಲಿಕ್ಕಾಗಿ ಅಪೊಸ್ತಲರನ್ನು ಸಿದ್ಧಗೊಳಿಸಿದ್ದಾನೆ ಮತ್ತು ಖಂಡಿತವಾಗಿಯೂ ಅವನು ‘ತನ್ನವರನ್ನು ಕೊನೆಯ ತನಕ ಪ್ರೀತಿಸುತ್ತಾನೆ’ (NW).​—⁠ಯೋಹಾನ 13:1; 17:⁠1.

19. ಗೆತ್ಸೇಮನೆತೋಟದಲ್ಲಿ ಯೇಸು ಏಕೆ ಯಾತನೆಪಡುತ್ತಾನೆ?

19 ತದನಂತರ, ಯೇಸು ಮತ್ತು ಅವನ 11 ಮಂದಿ ನಂಬಿಗಸ್ತ ಅಪೊಸ್ತಲರು ಗೆತ್ಸೇಮನೆತೋಟಕ್ಕೆ ಬಂದಾಗ ಮಧ್ಯರಾತ್ರಿ ಕಳೆದಿರುತ್ತದೆ. ಈ ಮುಂಚೆ ಅವನು ತನ್ನ ಅಪೊಸ್ತಲರೊಂದಿಗೆ ಅನೇಕಬಾರಿ ಈ ತೋಟಕ್ಕೆ ಬಂದಿದ್ದಾನೆ. (ಯೋಹಾನ 18:​1, 2) ಕೆಲವೇ ತಾಸುಗಳೊಳಗೆ, ಒಬ್ಬ ತಿರಸ್ಕರಣೀಯ ಅಪರಾಧಿಯೋಪಾದಿ ಯೇಸು ಮರಣಪಡಲಿಕ್ಕಿದ್ದಾನೆ. ತಾನು ನಿರೀಕ್ಷಿಸುತ್ತಿದ್ದ ಅನುಭವದ ಕುರಿತಾದ ಮನೋಯಾತನೆ ಮತ್ತು ತನ್ನ ತಂದೆಯ ಮೇಲೆ ಇದು ಯಾವ ಅಪಕೀರ್ತಿಯನ್ನು ತರಬಹುದು ಎಂಬ ಆಲೋಚನೆಯು ಎಷ್ಟು ತೀವ್ರವಾಗಿತ್ತೆಂದರೆ, ಯೇಸು ಪ್ರಾರ್ಥಿಸುತ್ತಿರುವಾಗ ಅವನ ಬೆವರು ರಕ್ತದ ದೊಡ್ಡ ಹನಿಗಳೋಪಾದಿ ಭೂಮಿಗೆ ಬೀಳುತ್ತದೆ. (ಲೂಕ 22:​41-44) ತದನಂತರ ಯೇಸು ತನ್ನ ಅಪೊಸ್ತಲರಿಗೆ ಹೇಳುವುದು: “ಆ ಗಳಿಗೆ ಬಂತು . . . ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ.” ಅವನು ಇನ್ನೂ ಮಾತಾಡುತ್ತಿರುವಾಗಲೇ, ಪಂಜುಗಳು, ಕತ್ತಿಗಳು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದ ಒಂದು ದೊಡ್ಡ ಗುಂಪಿನೊಂದಿಗೆ ಇಸ್ಕರಿಯೋತ ಯೂದನು ಬರುತ್ತಾನೆ. ಇವರೆಲ್ಲರೂ ಯೇಸುವನ್ನು ಸೆರೆಹಿಡಿಯಲು ಬಂದಿದ್ದಾರೆ. ಆದರೆ ಯೇಸು ಇದಕ್ಕೆ ಪ್ರತಿಭಟಿಸುವುದಿಲ್ಲ. ಬದಲಾಗಿ, ಒಂದುವೇಳೆ ತಾನು ಪ್ರತಿಭಟಿಸಿದರೆ, ‘ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ?’ ಎಂದು ಅವನು ಹೇಳುತ್ತಾನೆ.​—⁠ಮಾರ್ಕ 14:​41-43; ಮತ್ತಾಯ 26:​48-54.

ಮನುಷ್ಯಕುಮಾರನು ಮಹಿಮೆಗೇರಿಸಲ್ಪಟ್ಟದ್ದು!

20. (ಎ) ಯೇಸುವನ್ನು ಸೆರೆಹಿಡಿದ ಬಳಿಕ ಯಾವ ನೀಚಕೃತ್ಯಗಳು ನಡೆಸಲ್ಪಡುತ್ತವೆ? (ಬಿ) ಸಾಯುವ ಸ್ವಲ್ಪ ಸಮಯಕ್ಕೆ ಮುಂಚೆ ಯೇಸು “ತೀರಿತು” ಎಂದು ಏಕೆ ಗಟ್ಟಿಯಾಗಿ ಹೇಳುತ್ತಾನೆ?

20 ಯೇಸುವನ್ನು ಸೆರೆಹಿಡಿದ ಬಳಿಕ, ಸುಳ್ಳು ಸಾಕ್ಷಿಗಳನ್ನು ಉಪಯೋಗಿಸಿ ಅವನ ಮೇಲೆ ತಪ್ಪುಹೊರಿಸಲಾಗುತ್ತದೆ. ಪಕ್ಷಪಾತಿಗಳಾದ ನ್ಯಾಯಾಧೀಶರು ಅವನನ್ನು ಅಪರಾಧಿಯೆಂದು ನಿರ್ಣಯಿಸುತ್ತಾರೆ. ಪೊಂತ್ಯ ಪಿಲಾತನು ಅವನನ್ನು ಮರಣ ದಂಡನೆಗೆ ಒಪ್ಪಿಸುತ್ತಾನೆ. ಮಹಾಯಾಜಕರು ಹಾಗೂ ಜನರ ಗುಂಪುಗಳು ಅವನನ್ನು ಅಪಹಾಸ್ಯಮಾಡುತ್ತವೆ. ಇದಲ್ಲದೆ ಸೈನಿಕರು ಅವನನ್ನು ಅಣಕಿಸುತ್ತಾರೆ ಹಾಗೂ ಅವನಿಗೆ ಚಿತ್ರಹಿಂಸೆ ನೀಡುತ್ತಾರೆ. (ಮಾರ್ಕ 14:​53-65; 15:​1, 15; ಯೋಹಾನ 19:​1-3) ಶುಕ್ರವಾರ ಮಧ್ಯಾಹ್ನದಷ್ಟಕ್ಕೆ, ಯೇಸುವನ್ನು ಯಾತನಾ ಕಂಬದ ಮೇಲೆ ಮೊಳೆಗಳನ್ನು ಜಡಿದು ನೇತುಹಾಕಲಾಗುತ್ತದೆ. ಅವನ ದೇಹದ ಭಾರದಿಂದ, ಅವನ ಕೈಗಳು ಮತ್ತು ಕಾಲುಗಳ ಮೊಳೆಯ ಗಾಯಗಳು ಹರಿಯತೊಡಗಿದಾಗ, ಅವನು ತೀವ್ರವಾದ ನೋವನ್ನು ಅನುಭವಿಸುತ್ತಾನೆ. (ಯೋಹಾನ 19:​17, 18) ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಯೇಸು “ತೀರಿತು” ಎಂದು ಗಟ್ಟಿಯಾಗಿ ಹೇಳುತ್ತಾನೆ. ಹೌದು, ಅವನು ಭೂಮಿಯಲ್ಲಿ ಯಾವ ಕೆಲಸಗಳನ್ನು ಮಾಡಲಿಕ್ಕಾಗಿ ಬಂದಿದ್ದನೋ ಆ ಎಲ್ಲ ಕೆಲಸಗಳನ್ನು ತೀರಿಸಿದ್ದಾನೆ. ತನ್ನ ಆತ್ಮವನ್ನು ದೇವರಿಗೆ ಒಪ್ಪಿಸಿಕೊಟ್ಟ ಬಳಿಕ, ಅವನು ತನ್ನ ತಲೆಯನ್ನು ಬಾಗಿಸಿ ಮರಣಪಡುತ್ತಾನೆ. (ಯೋಹಾನ 19:​28, 30; ಮತ್ತಾಯ 27:​45, 46; ಲೂಕ 23:46) ತದನಂತರ, ಮೂರನೆಯ ದಿನ ಯೆಹೋವನು ತನ್ನ ಮಗನನ್ನು ಪುನರುತ್ಥಾನಗೊಳಿಸುತ್ತಾನೆ. (ಮಾರ್ಕ 16:​1-6) ಅವನ ಪುನರುತ್ಥಾನವಾಗಿ ನಾಲ್ವತ್ತು ದಿನಗಳು ಕಳೆದ ಬಳಿಕ, ಯೇಸು ಪರಲೋಕಕ್ಕೆ ಹೋಗುತ್ತಾನೆ ಮತ್ತು ಮಹಿಮೆಗೇರಿಸಲ್ಪಡುತ್ತಾನೆ.​—⁠ಯೋಹಾನ 17:5; ಅ. ಕೃತ್ಯಗಳು 1:​3, 9-12; ಫಿಲಿಪ್ಪಿ 2:​8-11.

21. ನಾವು ಯೇಸುವನ್ನು ಹೇಗೆ ಅನುಕರಿಸಬಹುದು?

21 ಯಾವ ರೀತಿಯಲ್ಲಿ ನಾವು ಯೇಸುವಿನ ‘ಹೆಜ್ಜೆಯ ಜಾಡನ್ನು’ ನಿಕಟವಾಗಿ ಅನುಸರಿಸಬಹುದು? (1 ಪೇತ್ರ 2:21) ಅವನಂತೆ ನಾವು ರಾಜ್ಯದ ಸಾರುವಿಕೆಯಲ್ಲಿ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಒಳಗೂಡೋಣ ಮತ್ತು ದೇವರ ವಾಕ್ಯದ ಕುರಿತು ಮಾತಾಡುವುದರಲ್ಲಿ ಧೀರರೂ ಧೈರ್ಯಶಾಲಿಗಳೂ ಆಗಿರೋಣ. (ಮತ್ತಾಯ 24:14; 28:​19, 20; ಅ. ಕೃತ್ಯಗಳು 4:​29-31; ಫಿಲಿಪ್ಪಿ 1:14) ಕಾಲಪ್ರವಾಹದಲ್ಲಿ ನಾವೆಲ್ಲಿದ್ದೇವೆ ಎಂಬುದನ್ನು ಎಂದಿಗೂ ಮರೆಯದಿರೋಣ. ಅಥವಾ ಪ್ರೀತಿಸುವಂತೆ ಹಾಗೂ ಸತ್ಕಾರ್ಯಗಳನ್ನು ಮಾಡುವಂತೆ ಒಬ್ಬರು ಇನ್ನೊಬ್ಬರನ್ನು ಪ್ರಚೋದಿಸುವುದನ್ನು ಎಂದಿಗೂ ನಿಲ್ಲಿಸದಿರೋಣ. (ಮಾರ್ಕ 13:​28-33; ಇಬ್ರಿಯ 10:​24, 25) ನಮ್ಮ ಇಡೀ ಮಾರ್ಗಕ್ರಮವು ಯೆಹೋವ ದೇವರ ಚಿತ್ತದಿಂದ ಮತ್ತು “ಅಂತ್ಯಕಾಲದಲ್ಲಿ” ನಾವು ಜೀವಿಸುತ್ತಿದ್ದೇವೆ ಎಂಬ ತಿಳುವಳಿಕೆಯಿಂದ ನಿಯಂತ್ರಿಸಲ್ಪಡುವಂತೆ ಬಿಡೋಣ.​—⁠ದಾನಿಯೇಲ 12:⁠4.

ನೀವು ಹೇಗೆ ಉತ್ತರಿಸುವಿರಿ?

• ತನ್ನ ಮರಣವು ಸಮೀಪಿಸಿದೆ ಎಂಬುದರ ಕುರಿತು ಯೇಸುವಿಗಿದ್ದ ಅರಿವು, ಯೆರೂಸಲೇಮಿನ ದೇವಾಲಯದಲ್ಲಿ ಅವನು ಮಾಡುತ್ತಿದ್ದ ಅಂತಿಮ ಶುಶ್ರೂಷೆಯ ಮೇಲೆ ಯಾವ ಪರಿಣಾಮವನ್ನು ಬೀರಿತು?

• ಯೇಸು ‘ತನ್ನವರನ್ನು ಕೊನೆಯ ತನಕ ಪ್ರೀತಿಸಿದನು’ ಎಂಬುದನ್ನು ಯಾವುದು ತೋರಿಸುತ್ತದೆ?

• ಯೇಸುವಿನ ಭೂಜೀವಿತದ ಕೊನೆಯ ಕೆಲವು ತಾಸುಗಳಲ್ಲಿ ನಡೆದ ಘಟನೆಗಳು, ಅವನ ಕುರಿತಾಗಿ ಏನನ್ನು ತಿಳಿಯಪಡಿಸುತ್ತವೆ?

• ನಮ್ಮ ಶುಶ್ರೂಷೆಯಲ್ಲಿ ನಾವು ಕ್ರಿಸ್ತ ಯೇಸುವನ್ನು ಹೇಗೆ ಅನುಕರಿಸಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಯೇಸು ‘ತನ್ನವರನ್ನು ಕೊನೆಯ ತನಕ ಪ್ರೀತಿಸಿದನು’