ವಿಮೋಚನಕಾಂಡ 21:1-36

  • ಇಸ್ರಾಯೇಲ್ಯರಿಗೆ ಕೊಟ್ಟ ತೀರ್ಪುಗಳು (1-36)

    • ಇಬ್ರಿಯ ದಾಸರ ಬಗ್ಗೆ (2-11)

    • ಒಬ್ಬ ಇನ್ನೊಬ್ಬನಿಗೆ ಹಿಂಸೆ ಕೊಟ್ರೆ (12-27)

    • ಪ್ರಾಣಿಗಳ ಬಗ್ಗೆ (28-36)

21  “ನೀನು ಅವರಿಗೆ ಹೇಳಬೇಕಾದ ತೀರ್ಪುಗಳು ಯಾವುದಂದ್ರೆ,+  ನೀವು ಒಬ್ಬ ಇಬ್ರಿಯ ದಾಸನನ್ನ ಕೊಂಡುಕೊಂಡ್ರೆ+ ಅವನು ಆರು ವರ್ಷ ನಿಮಗೆ ಗುಲಾಮನಾಗಿ ಇರಬೇಕು. ಆದ್ರೆ ಏಳನೇ ವರ್ಷ ಅವನಿಂದ ಏನನ್ನೂ ತಗೊಳ್ಳದೆ ಅವನನ್ನ ಬಿಡುಗಡೆ ಮಾಡಬೇಕು.+  ಅವನು ಒಬ್ಬನೇ ಬಂದಿದ್ರೆ ಒಬ್ಬನೇ ಹೋಗಬೇಕು. ಹೆಂಡತಿ ಜೊತೆ ಬಂದಿದ್ರೆ ಅವಳು ಕೂಡ ಅವನ ಜೊತೆ ಹೋಗಬೇಕು.  ಒಂದುವೇಳೆ ಒಬ್ಬ ದಾಸನಿಗೆ ಅವನ ಯಜಮಾನ ಮದುವೆ ಮಾಡಿಸಿದ್ರೆ ಅವರಿಗೆ ಗಂಡುಹೆಣ್ಣು ಮಕ್ಕಳು ಹುಟ್ಟಿದ್ರೂ ಅವನು ಬಿಡುಗಡೆಯಾಗಿ ಹೋಗುವಾಗ ಒಬ್ಬನೇ ಹೋಗಬೇಕು. ಯಾಕಂದ್ರೆ ಅವನ ಹೆಂಡತಿ-ಮಕ್ಕಳು ಯಜಮಾನನಿಗೆ ಸೇರಿದವರು.+  ಆದ್ರೆ ಆ ದಾಸ ‘ನಾನು ಯಜಮಾನನನ್ನ, ಹೆಂಡತಿ ಮಕ್ಕಳನ್ನ ಪ್ರೀತಿಸ್ತೀನಿ. ಅದಕ್ಕೆ ನನಗೆ ಬಿಡುಗಡೆಯಾಗಿ ಹೋಗೋಕೆ ಇಷ್ಟ ಇಲ್ಲ’ ಅಂತ ಹೇಳಿದ್ರೆ+  ಅವನ ಯಜಮಾನ ಅವನನ್ನ ಸತ್ಯ ದೇವರ ಮುಂದೆ ಕರ್ಕೊಂಡು ಬರಬೇಕು. ಆಮೇಲೆ ಅವನನ್ನ ಬಾಗಿಲು ಅಥವಾ ಅದ್ರ ಚೌಕಟ್ಟಿನ ಮುಂದೆ ಕರ್ಕೊಂಡು ಬಂದು ದೊಡ್ಡ ಸೂಜಿಯಿಂದ ಅವನ ಕಿವಿ ಚುಚ್ಚಬೇಕು. ಆಗ ಅವನು ಜೀವನ ಇಡೀ ಆ ಯಜಮಾನನ ದಾಸನಾಗಿ ಇರ್ತಾನೆ.  ಒಬ್ಬ ತನ್ನ ಮಗಳನ್ನ ದಾಸಿ ಆಗೋಕೆ ಮಾರಿದ್ರೆ ಒಬ್ಬ ದಾಸ ಬಿಡುಗಡೆಯಾಗಿ ಹೋಗೋ ತರ ಅವಳು ಬಿಡುಗಡೆಯಾಗಿ ಹೋಗೋ ಹಾಗಿಲ್ಲ.  ಯಜಮಾನನಿಗೆ ಅವಳು ಇಷ್ಟ ಆಗದಿದ್ರೆ ಅವಳನ್ನ ಉಪಪತ್ನಿಯಾಗಿ ಮಾಡ್ಕೊಳ್ಳದೆ ಬೇರೆಯವರಿಗೆ ಮಾರಬಹುದು. ಆದ್ರೆ ವಿದೇಶಿಯರಿಗೆ ಮಾರೋ ಅಧಿಕಾರ ಅವನಿಗಿಲ್ಲ. ಯಾಕಂದ್ರೆ ಅವನು ಆ ದಾಸಿಗೆ ದ್ರೋಹ ಮಾಡಿದ್ದಾನೆ.  ಒಂದುವೇಳೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿದ್ರೆ ಒಬ್ಬ ಮಗಳಿಗಿರೋ ಹಕ್ಕುಗಳನ್ನ ಅವಳಿಗೆ ಕೊಡಬೇಕು. 10  ಅವನು ಇನ್ನೊಬ್ಬಳನ್ನ ಮದುವೆ ಆದ್ರೆ ಮೊದಲನೇ ಹೆಂಡತಿಗೆ ಊಟ, ಬಟ್ಟೆ, ಲೈಂಗಿಕ ಸಂಬಂಧವನ್ನ+ ಕಡಿಮೆ ಮಾಡಬಾರದು. 11  ಈ ಮೂರನ್ನೂ ಕೊಡದಿದ್ರೆ ಅವಳು ಏನೂ ಹಣ ಕೊಡದೆ ಬಿಡುಗಡೆಯಾಗಿ ಹೋಗಬಹುದು. 12  ಒಬ್ಬ ಇನ್ನೊಬ್ಬನನ್ನ ಹೊಡೆದು ಕೊಂದ್ರೆ ಹೊಡೆದವನನ್ನ ಸಾಯಿಸಬೇಕು.+ 13  ಆದ್ರೆ ಅವನು ಅದನ್ನ ಬೇಕುಬೇಕಂತ ಮಾಡಿಲ್ಲಾಂದ್ರೆ, ಸತ್ಯದೇವರಾದ ನಾನು ಅದನ್ನ ಅನುಮತಿಸಿದ್ರೆ ನಾನು ಹೇಳೋ ಜಾಗಕ್ಕೆ ಅವನು ಓಡಿಹೋಗಿ ಅಲ್ಲಿ ಇರಬಹುದು.+ 14  ಒಬ್ಬ ವ್ಯಕ್ತಿ ತುಂಬ ಕೋಪದಿಂದ ಇನ್ನೊಬ್ಬನನ್ನ ಬೇಕಂತಾನೇ ಕೊಂದ್ರೆ ಅವನನ್ನ ಸಾಯಿಸಬೇಕು.+ ಅವನು ನನ್ನ ಯಜ್ಞವೇದಿ ಹತ್ರ ಇದ್ರೂ ಅವನನ್ನ ಅಲ್ಲಿಂದ ಹಿಡ್ಕೊಂಡು ಹೋಗಿ ಸಾಯಿಸಬೇಕು.+ 15  ಅಪ್ಪಅಮ್ಮನ ಮೇಲೆ ಕೈ ಮಾಡೋರನ್ನ ಸಾಯಿಸಬೇಕು.+ 16  ಒಬ್ಬ ಯಾರನ್ನಾದ್ರೂ ಅಪಹರಿಸ್ಕೊಂಡು+ ಹೋಗಿ ಮಾರಿದ್ರೆ ಅಥವಾ ಆ ವ್ಯಕ್ತಿಯನ್ನ ತನ್ನ ಹತ್ರ ಇಟ್ಟುಕೊಂಡಿದ್ದಾಗಲೇ ಸಿಕ್ಕಿಬಿದ್ರೆ+ ಅವನನ್ನ ಸಾಯಿಸಬೇಕು.+ 17  ಅಪ್ಪಅಮ್ಮಗೆ ಶಾಪ ಹಾಕಿದವನನ್ನ* ಸಾಯಿಸಬೇಕು.+ 18  ಇಬ್ರು ಜಗಳ ಆಡ್ತಾ ಒಬ್ಬ ಇನ್ನೊಬ್ಬನನ್ನ ಕಲ್ಲಿಂದ ಅಥವಾ ಮುಷ್ಟಿಯಿಂದ* ಹೊಡೆದಾಗ ಗಾಯ ಆದವನ ಜೀವಕ್ಕೇನೂ ಅಪಾಯ ಆಗದಿದ್ರೂ ಹಾಸಿಗೆ ಹಿಡಿದ್ರೆ ನೀವು ಹೀಗೆ ಮಾಡಬೇಕು: 19  ಗಾಯ ಆದವನಿಗೆ ಕೆಲವು ದಿನ ಆದ್ಮೇಲೆ ಎದ್ದು ಕೋಲು ಹಿಡಿದು ಮನೆ ಹೊರಗೆ ನಡಿಯೋಕೆ ಆಗೋದಾದ್ರೆ ಹೊಡೆದವನಿಗೆ ಶಿಕ್ಷೆ ಆಗಬಾರದು. ಆದ್ರೂ ಗಾಯ ಆದವನಿಗೆ ಕೆಲಸ ಮಾಡೋಕೆ ಆಗದೇ ಹೋದ ಸಮಯದಿಂದ ಪೂರ್ತಿ ಗುಣ ಆಗೋ ತನಕ ಹೊಡೆದವನು ನಷ್ಟಭರ್ತಿ ಮಾಡಬೇಕು. 20  ಒಬ್ಬ ತನ್ನ ದಾಸ, ದಾಸಿನ ಕೋಲಿಂದ ಹೊಡೆದಾಗ ಅವರು ಸತ್ತರೆ ಹೊಡೆದವನಿಗೆ ತಕ್ಕ ಶಿಕ್ಷೆ ಕೊಡಬೇಕು.+ 21  ಆದ್ರೆ ಆ ದಾಸ ಒಂದೆರಡು ದಿನ ಜೀವದಿಂದ ಉಳಿದ್ರೆ ಹೊಡೆದವನಿಗೆ ಶಿಕ್ಷೆ ಕೊಡಬಾರದು. ಯಾಕಂದ್ರೆ ಹಣಕೊಟ್ಟು ತಗೊಂಡ ಆ ದಾಸನನ್ನ ಕಳ್ಕೊಳ್ಳೋದೇ ಯಜಮಾನನಿಗೆ ನಷ್ಟ. 22  ಇಬ್ರು ಜಗಳ ಆಡ್ತಿರುವಾಗ ಗರ್ಭಿಣಿಗೆ ಏಟು ಬಿದ್ದು ಹೆರಿಗೆ ಸಮಯಕ್ಕಿಂತ ಮುಂಚೆನೇ+ ಮಗು ಹುಟ್ಟಿದ್ರೆ ಮತ್ತು ತಾಯಿ ಮಗು ಇಬ್ರ ಜೀವಕ್ಕೇನೂ ಅಪಾಯ ಆಗದಿದ್ರೆ* ಹೊಡೆದವನು ನಷ್ಟಭರ್ತಿ ಮಾಡಬೇಕು. ಎಷ್ಟು ಹಣ ಕೊಡಬೇಕಂತ ಅವಳ ಗಂಡ ತೀರ್ಮಾನ ಮಾಡಬೇಕು. ಹೊಡೆದವನು ನ್ಯಾಯಾಧೀಶರ ಮೂಲಕ ಆ ಹಣವನ್ನ ಅವಳ ಗಂಡನಿಗೆ ಕೊಡಬೇಕು.+ 23  ಆದ್ರೆ ತಾಯಿ ಮಗು ಇಬ್ರಲ್ಲಿ ಒಬ್ರು ಸತ್ತರೂ ಅಪರಾಧಿಯನ್ನ ಸಾಯಿಸಬೇಕು. ಪ್ರಾಣಕ್ಕೆ ಪ್ರಾಣ ಕೊಡಬೇಕು.+ 24  ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು,+ 25  ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು ಕೊಡಬೇಕು. 26  ಒಬ್ಬ ತನ್ನ ದಾಸನ ಅಥವಾ ದಾಸಿಯ ಕಣ್ಣಿಗೆ ಹೊಡೆದು ಕುರುಡಾದ್ರೆ ಆ ಕಣ್ಣಿನ ನಷ್ಟಭರ್ತಿಗಾಗಿ ಅವನು ಆ ದಾಸನನ್ನ ಬಿಡುಗಡೆ ಮಾಡಬೇಕು.+ 27  ಅವನು ತನ್ನ ದಾಸನ ಅಥವಾ ದಾಸಿಯ ಹಲ್ಲು ಉದುರಿಸಿದ್ರೆ ಆ ಹಲ್ಲಿನ ನಷ್ಟಭರ್ತಿಗಾಗಿ ಅವನು ಆ ದಾಸನನ್ನ ಬಿಡುಗಡೆ ಮಾಡಬೇಕು. 28  ಒಂದು ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಅದನ್ನ ಕಲ್ಲು ಹೊಡೆದು ಸಾಯಿಸಬೇಕು.+ ಅದ್ರ ಮಾಂಸ ತಿನ್ನಬಾರದು. ಆ ಹೋರಿಯ ಯಜಮಾನನಿಗೆ ಶಿಕ್ಷೆ ಕೊಡಬಾರದು. 29  ಆದ್ರೆ ಒಂದು ಹೋರಿಗೆ ಮುಂಚಿಂದಾನೇ ಗುದ್ದೋ ಸ್ವಭಾವ ಇದ್ದು ಯಜಮಾನನಿಗೆ ಇದ್ರ ಬಗ್ಗೆ ಎಚ್ಚರಿಕೆ ಕೊಟ್ಟಿದ್ರೂ ಅವನು ಅದನ್ನ ಕಟ್ಟಿ ಹಾಕದಿದ್ದ ಕಾರಣ ಆ ಹೋರಿ ಯಾರನ್ನಾದ್ರೂ ಗುದ್ದಿ ಕೊಂದ್ರೆ ಅದನ್ನ ಕಲ್ಲು ಹೊಡಿದು ಸಾಯಿಸಬೇಕು. ಯಜಮಾನನನ್ನೂ ಸಾಯಿಸಬೇಕು. 30  ಒಂದುವೇಳೆ ಅವನ ಜೀವ ಬಿಡಿಸೋಕೆ ನಷ್ಟಭರ್ತಿ ಮಾಡಬೇಕು ಅಂತ ಹೇಳಿದ್ರೆ, ಅವನು ಆ ಪೂರ್ತಿ ಬೆಲೆ ಕೊಟ್ಟು ತನ್ನ ಜೀವವನ್ನ ಬಿಡಿಸಿಕೊಳ್ಳಬೇಕು. 31  ಹೋರಿ ಚಿಕ್ಕ ಮಕ್ಕಳನ್ನ ಗುದ್ದಿ ಕೊಂದ್ರೂ ಈ ತೀರ್ಪಿನ ಪ್ರಕಾರನೇ ಹೋರಿಯ ಯಜಮಾನನಿಗೆ ತೀರ್ಪು ಆಗಬೇಕು. 32  ಹೋರಿ ಒಬ್ಬ ದಾಸನನ್ನ ಗುದ್ದಿ ಕೊಂದ್ರೆ ಹೋರಿಯ ಯಜಮಾನ ಆ ದಾಸನ ಯಜಮಾನನಿಗೆ 30 ಶೆಕೆಲ್‌* ಕೊಡಬೇಕು. ಹೋರಿಯನ್ನ ಕಲ್ಲು ಹೊಡೆದು ಸಾಯಿಸಬೇಕು. 33  ಗುಂಡಿಯ ಬಾಯಿ ತೆರೆದು ಅದನ್ನ ಮುಚ್ಚದೇ ಬಿಟ್ಟಿದ್ರಿಂದ ಅಥವಾ ಗುಂಡಿ ತೋಡಿ ಅದ್ರ ಬಾಯನ್ನ ಮುಚ್ಚದೇ ಇದ್ದಿದ್ರಿಂದ ಹೋರಿ ಅಥವಾ ಕತ್ತೆ ಅದ್ರಲ್ಲಿ ಬಿದ್ದು ಸತ್ತರೆ 34  ಗುಂಡಿ ಯಾರದ್ದೋ ಆ ವ್ಯಕ್ತಿ ನಷ್ಟಭರ್ತಿ ಮಾಡಬೇಕು.+ ಅವನು ಆ ಪ್ರಾಣಿಯ ಯಜಮಾನನಿಗೆ ಬೆಲೆ ಕೊಡಬೇಕು, ಸತ್ತ ಪ್ರಾಣಿ ಅವನದ್ದಾಗುತ್ತೆ. 35  ಒಬ್ಬನ ಹೋರಿ ಇನ್ನೊಬ್ಬನ ಹೋರಿನ ಗುದ್ದಿ ಕೊಂದ್ರೆ ಜೀವದಿಂದಿರೋ ಹೋರಿನ ಅವರಿಬ್ರೂ ಮಾರಿ, ಬಂದ ಹಣನ ಸಮವಾಗಿ ಹಂಚ್ಕೊಳ್ಳಬೇಕು. ಸತ್ತ ಹೋರಿನ ಸಹ ಸಮವಾಗಿ ಹಂಚ್ಕೊಳ್ಳಬೇಕು. 36  ಆದ್ರೆ ಹೋರಿಗೆ ಮುಂಚಿಂದಾನೇ ಗುದ್ದೋ ಸ್ವಭಾವ ಇದ್ರೂ ಅದ್ರ ಯಜಮಾನ ಕಟ್ಟಿ ಹಾಕದಿದ್ರೆ ಅವನು ನಷ್ಟಭರ್ತಿಗಾಗಿ ಇನ್ನೊಂದು ಹೋರಿ ಕೊಡಬೇಕು. ಸತ್ತ ಹೋರಿ ಅವನದ್ದಾಗುತ್ತೆ.”

ಪಾದಟಿಪ್ಪಣಿ

ಅಥವಾ “ಕೆಟ್ಟದಾಗಲಿ ಅಂತ ಬಯ್ಯುವವನನ್ನ.”
ಬಹುಶಃ, “ಒಂದು ಉಪಕರಣದಿಂದ.”
ಅಥವಾ “ತಾಯಿ ಮಗುವಿಗೆ ತೀವ್ರ ಹಾನಿ ಆಗದಿದ್ರೆ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.