ಲೂಕ 19:1-48

  • ಯೇಸು ಜಕ್ಕಾಯನ ಮನೆಗೆ ಹೋದನು (1-10)

  • ಹತ್ತು ಮೈನಾಗಳ ಉದಾಹರಣೆ (11-27)

  • ಯೇಸು ಅದ್ಧೂರಿಯಾಗಿ ಒಳಗೆ ಬಂದನು (28-40)

  • ಯೇಸು ಯೆರೂಸಲೇಮಿನ ಬಗ್ಗೆ ನೆನಸಿ ಅಳ್ತಾನೆ (41-44)

  • ಯೇಸು ದೇವಾಲಯ ಶುಚಿಮಾಡ್ತಾನೆ (45-48)

19  ಯೇಸು ಯೆರಿಕೋ ಊರನ್ನ ದಾಟಿಹೋಗ್ತಾ ಇದ್ದನು.  ಅಲ್ಲಿ ಜಕ್ಕಾಯ ಅನ್ನೋ ಶ್ರೀಮಂತನಿದ್ದ. ಅವನು ತೆರಿಗೆ ವಸೂಲಿಗಾರರ ಮುಖ್ಯಸ್ಥ.  ಯೇಸು ಯಾರಂತ ನೋಡೋಕೆ ಕಾಯ್ತಾ ಇದ್ದ. ಆದ್ರೆ ಜಕ್ಕಾಯ ಕುಳ್ಳ ಆಗಿದ್ರಿಂದ ಜನಜಂಗುಳಿಯಲ್ಲಿ ಯೇಸು ಕಾಣ್ತಾ ಇರಲಿಲ್ಲ.  ಯೇಸು ಆ ದಾರಿಯಲ್ಲಿ ಹೋಗ್ತಿದ್ದಾನೆ ಅಂತ ಗೊತ್ತಾದ ತಕ್ಷಣ ಓಡಿಹೋಗಿ ಒಂದು ಅಂಜೂರ ಮರ ಹತ್ತಿದ.  ಯೇಸು ಆ ಜಾಗಕ್ಕೆ ಬಂದಾಗ ಮೇಲೆ ನೋಡಿ “ಜಕ್ಕಾಯ, ಬೇಗ ಇಳಿದು ಬಾ. ಇವತ್ತು ನಾನು ನಿನ್ನ ಮನೆಯಲ್ಲೇ ಇರ್ತಿನಿ” ಅಂದನು.  ಇದನ್ನ ಕೇಳಿ ಅವನು ಸರಸರಾಂತ ಇಳಿದು ಸಂತೋಷದಿಂದ ಯೇಸುನ ಮನೆಗೆ ಕರ್ಕೊಂಡು ಹೋದ.  ಆದ್ರೆ ಅಲ್ಲಿದ್ದವರು “ಇವನು ಪಾಪಿಯ ಮನೆಗೆ ಹೋಗ್ತಿದ್ದಾನಲ್ಲಾ?” ಅಂತ ಗುಣುಗುಟ್ಟಿದ್ರು.+  ಆದ್ರೆ ಜಕ್ಕಾಯ ನಿಂತು ಒಡೆಯನಿಗೆ “ಸ್ವಾಮಿ, ನೋಡು! ನನ್ನ ಆಸ್ತಿಯಲ್ಲಿ ಅರ್ಧ ಆಸ್ತಿಯನ್ನ ಬಡವರಿಗೆ ಕೊಡ್ತೀನಿ. ಸುಳ್ಳು ಆರೋಪ ಹೊರಿಸಿ ಯಾರಿಂದ ಹಣ ವಸೂಲಿ ಮಾಡಿದ್ದೀನೋ ಅವ್ರಿಗೆ ನಾಲ್ಕರಷ್ಟು ವಾಪಸ್‌ ಕೊಡ್ತೀನಿ” ಅಂದ.+  ಅದಕ್ಕೆ ಯೇಸು “ಇವತ್ತು ದೇವರು ಇವನನ್ನ ಇವನ ಕುಟುಂಬದವ್ರನ್ನ ರಕ್ಷಿಸಿದ್ದಾನೆ. ಯಾಕಂದ್ರೆ ಇವನು ಸಹ ಅಬ್ರಹಾಮನ ವಂಶದವನು. 10  ನಿಜ ಹೇಳಬೇಕಂದ್ರೆ ದಾರಿತಪ್ಪಿದ ಜನ್ರನ್ನ ಹುಡುಕಿ ರಕ್ಷಿಸಕ್ಕೇ ಮನುಷ್ಯಕುಮಾರ ಬಂದಿದ್ದಾನೆ” ಅಂದನು.+ 11  ಯೇಸು ಹೇಳೋದನ್ನ ಶಿಷ್ಯರು ಕೇಳಿಸ್ಕೊಳ್ತಾ ಇದ್ರು. ಅವರು ಯೆರೂಸಲೇಮಿಗೆ ಹತ್ತತ್ರ ಇದ್ರು. ಅಲ್ಲಿ ಹೋದ ತಕ್ಷಣ ದೇವರ ಆಳ್ವಿಕೆ ಬಂದುಬಿಡುತ್ತೆ ಅಂತ ಶಿಷ್ಯರು ನೆನಸಿದ್ರು.+ ಅದಕ್ಕೆ ಯೇಸು ಇನ್ನೊಂದು ಉದಾಹರಣೆ ಹೇಳಿದನು. 12  ಅದೇನಂದ್ರೆ “ರಾಜಮನೆತನದ ಒಬ್ಬ ವ್ಯಕ್ತಿ ರಾಜನಾಗಿ ಬರೋಕೆ ವಿದೇಶಕ್ಕೆ+ ಹೋದ. 13  ಹೋಗೋ ಮುಂಚೆ ಅವನು 10 ಆಳುಗಳನ್ನ ಕರೆದು 10 ಬೆಳ್ಳಿ ನಾಣ್ಯ* ಕೊಟ್ಟು ‘ನಾನು ಬರೋ ತನಕ ವ್ಯಾಪಾರಮಾಡಿ’ ಅಂದ.+ 14  ಆದ್ರೆ ಪ್ರಜೆಗಳಿಗೆ ಇವನನ್ನ ಕಂಡ್ರೆ ಆಗ್ತಿರಲಿಲ್ಲ. ಅವರು ಕೆಲವು ರಾಯಭಾರಿಗಳನ್ನ ಆ ವಿದೇಶಕ್ಕೆ ಕಳಿಸಿ ‘ಇವನು ನಮ್ಮ ರಾಜ ಆಗೋದು ನಮಗಿಷ್ಟ ಇಲ್ಲ’ ಅಂತ ಹೇಳಿಸಿದ್ರು. 15  ತುಂಬ ಸಮಯ ಆದ್ಮೇಲೆ ಅವನು ರಾಜನಾಗಿ ವಾಪಸ್‌ ಬಂದ. ಆ ಬೆಳ್ಳಿ ಹಣದಿಂದ ಆಳುಗಳು ವ್ಯಾಪಾರ ಮಾಡಿ ಎಷ್ಟು ಸಂಪಾದಿಸಿದ್ದಾರೆ+ ಅಂತ ತಿಳ್ಕೊಳ್ಳೋಕೆ ಅವ್ರನ್ನ ಕರೆಸಿದ. 16  ಮೊದಲನೇ ಆಳು ‘ಸ್ವಾಮಿ, ನೀನು ಐದು ಬೆಳ್ಳಿ ನಾಣ್ಯ ಕೊಟ್ಟಿದ್ದೆ. ನಾನು ಇನ್ನೂ ಐದು ಬೆಳ್ಳಿ ನಾಣ್ಯ ಸಂಪಾದಿಸಿದ್ದೀನಿ’ ಅಂದ.+ 17  ಅದಕ್ಕೆ ರಾಜ ‘ಶಭಾಷ್‌, ನೀನು ಒಳ್ಳೇ ಆಳು! ಯಾಕಂದ್ರೆ ನೀನು ತುಂಬ ಚಿಕ್ಕ ವಿಷ್ಯದಲ್ಲಿ ನಂಬಿಗಸ್ತನಾಗಿದ್ದೆ. ಹಾಗಾಗಿ 10 ಪಟ್ಟಣಗಳ ಮೇಲೆ ನಿನಗೆ ಅಧಿಕಾರ ಕೊಡ್ತೀನಿ’ ಅಂದ.+ 18  ಎರಡನೇ ಆಳು ‘ಸ್ವಾಮಿ, ನೀನು ಎರಡು ಬೆಳ್ಳಿ ನಾಣ್ಯ ಕೊಟ್ಟಿದ್ದೆ. ನಾನು ಇನ್ನೂ ಎರಡು ಬೆಳ್ಳಿ ನಾಣ್ಯ ಸಂಪಾದಿಸಿದ್ದೀನಿ’ ಅಂದ.+ 19  ಇವನಿಗೂ ಆ ರಾಜ ‘ನಿನಗೂ ಐದು ಪಟ್ಟಣಗಳ ಮೇಲೆ ಅಧಿಕಾರ ಕೊಡ್ತೀನಿ’ ಅಂದ. 20  ಆದ್ರೆ ಮೂರನೇ ಆಳು ‘ಸ್ವಾಮಿ, ತಗೋ ನೀನು ಕೊಟ್ಟ ಬೆಳ್ಳಿ ನಾಣ್ಯ. ಇದನ್ನ ನಾನು ಬಟ್ಟೆಯಲ್ಲಿ ಸುತ್ತಿ ನೆಲದಲ್ಲಿ ಬಚ್ಚಿಟ್ಟಿದ್ದೆ. 21  ನೀನಂದ್ರೆ ನನಗೆ ಭಯ. ಯಾಕಂದ್ರೆ ನೀನು ಕಠಿಣ ಮನುಷ್ಯ. ಜಮಾ ಮಾಡದ ಹಣವನ್ನ ನೀನು ಕೇಳ್ತೀಯ ಮತ್ತು ಬಿತ್ತದೆ ಇರೋ ಜಾಗದಲ್ಲಿ ಕೊಯ್ತಿಯ’ ಅಂದ.+ 22  ಅದಕ್ಕೆ ರಾಜ ಅವನಿಗೆ ‘ಕೆಟ್ಟ ಆಳು ನೀನು, ನಿನ್ನ ಮಾತಿನ ಮೇಲೆ ನಾನು ನಿನಗೆ ತೀರ್ಪು ಮಾಡ್ತೀನಿ. ನಾನೊಬ್ಬ ಕಠಿಣ ಮನುಷ್ಯ, ಜಮಾ ಮಾಡದ ಹಣವನ್ನ ಕೇಳ್ತೀನಿ, ಬಿತ್ತದಿದ್ರೂ ಕೊಯ್ತೀನಿ ಅಂತ ನಿನಗೆ ಗೊತ್ತಿತ್ತಲ್ವಾ?+ 23  ಅಂದಮೇಲೆ ನೀನು ವ್ಯಾಪಾರಿಗಳ ಹತ್ರ ನನ್ನ ಹಣ* ಜಮಾ ಮಾಡಬೇಕಿತ್ತು. ನಾನು ಬಂದಾಗ ನನಗೆ ಅದ್ರ ಬಡ್ಡಿಯಾದ್ರೂ ಸಿಗ್ತಾ ಇತ್ತು’ ಅಂದ. 24  ಆಮೇಲೆ ರಾಜ ಅಲ್ಲಿದ್ದವ್ರಿಗೆ ‘ಇವನ ಹತ್ರ ಇರೋ ಆ ಒಂದು ಬೆಳ್ಳಿ ನಾಣ್ಯ ತಗೊಂಡು 10 ಬೆಳ್ಳಿ ನಾಣ್ಯ ಇರುವವನಿಗೆ ಕೊಡಿ’ ಅಂದ.+ 25  ಆದ್ರೆ ಅವರು ‘ಸ್ವಾಮಿ, ಅವನ ಹತ್ರ ಈಗಾಗಲೇ 10 ಬೆಳ್ಳಿ ನಾಣ್ಯ ಇದೆ’ ಅಂದ್ರು. 26  ಅದಕ್ಕೆ ರಾಜ ‘ಚೆನ್ನಾಗಿ ಕೇಳಿಸ್ಕೊಳ್ಳಿ. ಯಾರ ಹತ್ರ ಇದೆಯೋ ಅವ್ರಿಗೆ ಇನ್ನೂ ಹೆಚ್ಚು ಕೊಡಲಾಗುತ್ತೆ. ಯಾರ ಹತ್ರ ಇಲ್ವೋ ಅವ್ರಿಂದ ಇರೋದನ್ನೂ ಕಿತ್ಕೊಳ್ಳಲಾಗುತ್ತೆ.+ 27  ನಾನು ರಾಜನಾಗಿರೋದು ಯಾರಿಗೆಲ್ಲ ಇಷ್ಟ ಇಲ್ವೋ ಆ ಶತ್ರುಗಳನ್ನೆಲ್ಲ ನನ್ನ ಮುಂದೆ ಕರ್ಕೊಂಡು ಬಂದು ಕೊಂದುಹಾಕಿ’ ಅಂದ.” 28  ಇದನ್ನ ಹೇಳಿದ ಮೇಲೆ ಯೇಸು ಯೆರೂಸಲೇಮ್‌ ಕಡೆ ನಡೆದ. 29  ಆಲೀವ್‌ ಗುಡ್ಡದ+ ಹತ್ರ ಇದ್ದ ಬೇತ್ಫಗೆ ಮತ್ತು ಬೇಥಾನ್ಯ ಪ್ರದೇಶಕ್ಕೆ ಬಂದಾಗ ಯೇಸು ಇಬ್ಬರು ಶಿಷ್ಯರನ್ನ+ ಕರೆದು 30  “ಅಲ್ಲಿ ಮುಂದೆ ಕಾಣ್ತಾ ಇರೋ ಆ ಹಳ್ಳಿಗೆ ಹೋಗಿ. ಅಲ್ಲಿ ಒಂದು ಕತ್ತೆ ಮರಿಯನ್ನ ಕಟ್ಟಿಹಾಕಿರುತ್ತಾರೆ. ಅದನ್ನ ಬಿಚ್ಚಿ ತನ್ನಿ. 31  ಯಾರಾದ್ರೂ ಕೇಳಿದ್ರೆ ‘ಇದು ನಮ್ಮ ಸ್ವಾಮಿಗೆ ಬೇಕು’ ಅಂತ ಹೇಳಿ” ಅಂದನು. 32  ಆಗ ಶಿಷ್ಯರು ಯೇಸು ಹೇಳಿದ ಹಾಗೆ ಮಾಡಿದ್ರು.+ 33  ಆ ಕತ್ತೆಮರಿಯನ್ನ ಬಿಚ್ಚುತ್ತಿದ್ದಾಗ ಅದ್ರ ಯಜಮಾನರು “ನೀವ್ಯಾಕೆ ಈ ಕತ್ತೆಮರಿಯನ್ನ ಬಿಚ್ತಾ ಇದ್ದೀರಾ?” ಅಂತ ಕೇಳಿದ್ರು. 34  ಅದಕ್ಕೆ ಅವರು “ಇದು ನಮ್ಮ ಸ್ವಾಮಿಗೆ ಬೇಕು” ಅಂದ್ರು. 35  ಅವರು ಆ ಕತ್ತೆಮರಿಯನ್ನ ತಂದು ಅದ್ರ ಮೇಲೆ ಬಟ್ಟೆ ಹಾಕಿ ಯೇಸುನ ಕೂರಿಸಿದ್ರು.+ 36  ಯೇಸು ಮುಂದೆಮುಂದೆ ಹೋಗ್ತಾ ಇದ್ದಾಗ ಜನ ದಾರಿಯಲ್ಲಿ ಬಟ್ಟೆ ಹಾಸ್ತಾ ಇದ್ರು.+ 37  ಆತನು ಆಲೀವ್‌ ಗುಡ್ಡದಿಂದ ಕೆಳಗೆ ಹೋಗೋ ದಾರಿ ಹತ್ರ ಬಂದನು. ಆಗ ಶಿಷ್ಯರು ತುಂಬ ಖುಷಿಯಿಂದ ದೇವರನ್ನ ಜೋರಾಗಿ ಹೊಗಳಿದ್ರು. ಯಾಕಂದ್ರೆ ಅವರು ತುಂಬ ಅದ್ಭುತಗಳನ್ನ ನೋಡಿದ್ದರು. 38  ಅವರು “ಯೆಹೋವನ* ಹೆಸ್ರಲ್ಲಿ ಬರ್ತಿರೋ ಇವನಿಗೆ ಆಶೀರ್ವಾದ ಸಿಗಲಿ! ಸ್ವರ್ಗದಲ್ಲಿ ಶಾಂತಿ ಇರಲಿ. ಉನ್ನತ ಆಕಾಶದಲ್ಲಿ ದೇವರಿಗೆ ಮಹಿಮೆ ಸಿಗಲಿ!” ಅಂದ್ರು.+ 39  ಆದ್ರೆ ಕೆಲವು ಫರಿಸಾಯರು ಆತನಿಗೆ “ಗುರು, ನಿನ್ನ ಶಿಷ್ಯರನ್ನ ಗದರಿಸು” ಅಂದ್ರು.+ 40  ಅದಕ್ಕೆ ಯೇಸು “ಇವರು ಸುಮ್ಮನಿದ್ರೆ ಕಲ್ಲುಗಳು ಕೂಗುತ್ತೆ ಅನ್ನೋದನ್ನ ನೆನಪಿಡಿ” ಅಂದನು. 41  ಆತನು ಯೆರೂಸಲೇಮ್‌ ಹತ್ರ ಬಂದಾಗ ಆ ಪಟ್ಟಣ ನೋಡಿ ಅತ್ತು+ 42  ಹೀಗಂದನು “ನಿಜ ಶಾಂತಿ ಸಿಗಬೇಕಂದ್ರೆ ಏನು ಮಾಡಬೇಕು ಅಂತ ನೀನು ಇವತ್ತಾದ್ರೂ ಅರ್ಥ ಮಾಡ್ಕೊಂಡಿದ್ರೆ ಚೆನ್ನಾಗಿರುತ್ತಿತ್ತು. ಆದ್ರೆ ಈ ವಿಷ್ಯಗಳು ನಿನಗೆ ಅರ್ಥ ಆಗಬಾರದು ಅಂತಾನೇ ರಹಸ್ಯವಾಗಿ ಇಟ್ಟಿರೋದು.+ 43  ನಿನಗೆ ಯಾವ ಗತಿ ಆಗುತ್ತೆ ಅಂದ್ರೆ ಶತ್ರುಗಳು ನಿನ್ನ ಸುತ್ತ ಚೂಪಾದ ಕೋಲು ಹಿಡ್ಕೊಂಡು ಮುತ್ತಿಗೆಹಾಕ್ತಾರೆ, ಎಲ್ಲ ಕಡೆಯಿಂದ ಕಾಟಕೊಡ್ತಾರೆ.+ 44  ಅವರು ನಿನ್ನನ್ನೂ ನಿನ್ನ ಮಕ್ಕಳನ್ನೂ ನೆಲಕ್ಕೆ ಚಚ್ಚಿ ಕೊಲ್ತಾರೆ.+ ನಿನ್ನ ಒಂದು ಕಲ್ಲು ಇನ್ನೊಂದು ಕಲ್ಲ ಮೇಲೆ ನಿಲ್ಲದ ಹಾಗೆ ಮಾಡ್ತಾರೆ.+ ಯಾಕಂದ್ರೆ ದೇವರು ನಿನ್ನನ್ನ ಪರೀಕ್ಷೆ ಮಾಡ್ತಿರುವಾಗ ನೀನು ಅರ್ಥ ಮಾಡ್ಕೊಳ್ಳಲಿಲ್ಲ” ಅಂದನು. 45  ಆಮೇಲೆ ಯೇಸು ದೇವಾಲಯಕ್ಕೆ ಬಂದು ವ್ಯಾಪಾರಿಗಳನ್ನ ಹೊರಗೆ ಓಡಿಸಿದನು.+ 46  ಅವ್ರಿಗೆ “‘ನನ್ನ ಆಲಯಕ್ಕೆ ಪ್ರಾರ್ಥನಾ ಮಂದಿರ ಅನ್ನೋ ಹೆಸ್ರು ಬರುತ್ತೆ’+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದ್ರೆ ನೀವು ಇದನ್ನ ‘ಕಳ್ಳರ ಸಂತೆ’ ಮಾಡ್ತಾ ಇದ್ದೀರ”+ ಅಂದನು. 47  ಯೇಸು ಪ್ರತಿದಿನ ದೇವಾಲಯದಲ್ಲಿ ಕಲಿಸ್ತಿದ್ದನು. ಆದ್ರೆ ಮುಖ್ಯ ಪುರೋಹಿತರು, ಪಂಡಿತರು, ನಾಯಕರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ 48  ಆದ್ರೆ ಅವಕಾಶನೇ ಸಿಗ್ತಿರಲಿಲ್ಲ. ಯಾಕಂದ್ರೆ ಜನ್ರೆಲ್ಲ ಆತನ ಮಾತು ಕೇಳೋಕೆ ಆತನ ಜೊತೆನೇ ಇರ್ತಿದ್ರು.+

ಪಾದಟಿಪ್ಪಣಿ

ಅಕ್ಷ. “ಮೈನಾ.” ಒಂದು ಮೈನಾ ನಾಣ್ಯ ಮೂರು ತಿಂಗಳಿನ ಕೂಲಿಯಾಗಿತ್ತು.
ಅಕ್ಷ. “ಬೆಳ್ಳಿ.”