ಮಾರ್ಕ 16:1-8
-
ಯೇಸು ಮತ್ತೆ ಬದುಕಿದನು (1-8)
16 ಸಬ್ಬತ್ ದಿನ+ ಆದಮೇಲೆ ಮಗ್ದಲದ ಮರಿಯ, ಯಾಕೋಬನ ತಾಯಿ ಮರಿಯ,+ ಸಲೋಮೆ ಯೇಸು ದೇಹಕ್ಕೆ ಹಚ್ಚೋಕೆ ಬೇರೆಬೇರೆ ಸುಗಂಧ ದ್ರವ್ಯ ಖರೀದಿ ಮಾಡಿದ್ರು.+
2 ವಾರದ ಮೊದಲನೇ ದಿನ ಬೆಳಬೆಳಿಗ್ಗೆ ಸಮಾಧಿ ಹತ್ರ ಬಂದ್ರು.+
3 ಅವರು “ಸಮಾಧಿ ಮುಂದೆ ಇರೋ ಕಲ್ಲನ್ನ ಯಾರು ಉರುಳಿಸ್ತಾರೆ?” ಅಂತ ಮಾತಾಡ್ಕೊಳ್ತಾ ಇದ್ರು.
4 ಅವರು ನೋಡಿದಾಗ, ಯಾರೋ ಆ ದೊಡ್ಡ ಕಲ್ಲನ್ನ ಉರುಳಿಸಿದ್ರು.+
5 ಅವರು ಸಮಾಧಿ ಒಳಗೆ ಹೋದ್ರು. ಬಿಳಿ ಬಟ್ಟೆ ಹಾಕೊಂಡಿದ್ದ ಒಬ್ಬ ಯುವಕ ಬಲಗಡೆ ಕೂತಿದ್ದ. ಅದನ್ನ ನೋಡಿ ಅವ್ರಿಗೆ ಎದೆ ಧಸಕ್ ಅಂತು.
6 ಅವನು “ಹೆದರಬೇಡಿ.+ ಕಂಬಕ್ಕೇರಿಸಿ ಕೊಂದ ನಜರೇತಿನ ಯೇಸುವನ್ನ ನೀವು ಹುಡುಕ್ತಿದ್ದೀರ ಅಂತ ನಂಗೊತ್ತು. ದೇವರು ಆತನಿಗೆ ಮತ್ತೆ ಜೀವ ಕೊಟ್ಟಿದ್ದಾನೆ.+ ಆತನು ಈಗ ಇಲ್ಲಿಲ್ಲ. ನೋಡಿ, ಆತನನ್ನ ಇಟ್ಟಿದ್ದ ಸ್ಥಳ ಇದೇ.+
7 ನೀವು ಹೋಗಿ ಶಿಷ್ಯರಿಗೆ ಮತ್ತು ಪೇತ್ರನಿಗೆ ‘ಯೇಸು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗ್ತಿದ್ದಾನೆ.+ ಆತನು ಮುಂಚೆನೇ ಹೇಳಿದ ಹಾಗೆ ಅಲ್ಲಿ ನೀವು ಆತನನ್ನ ನೋಡ್ತೀರ’ ಅಂತ ಹೇಳಿ” ಅಂದ.+
8 ಅವರು ಸಮಾಧಿಯಿಂದ ಹೊರಗೆ ಬಂದಾಗ ಭಯದಿಂದ ನಡುಗ್ತಿದ್ರು. ಆಶ್ಚರ್ಯದಿಂದ ಗಾಬರಿಪಟ್ಕೊಂಡು ಅಲ್ಲಿಂದ ಓಡಿಹೋದ್ರು. ಅವ್ರಿಗೆ ಎಷ್ಟು ಭಯ ಆಗಿತ್ತಂದ್ರೆ ಅವರು ಯಾರಿಗೂ ಏನೂ ಹೇಳಲಿಲ್ಲ.*+
ಪಾದಟಿಪ್ಪಣಿ
^ ನಾವು ನಂಬಬಹುದಾದ ಹಳೇ ಹಸ್ತಪ್ರತಿಗಳ ಪ್ರಕಾರ, ಮಾರ್ಕನ ಸುವಾರ್ತಾ ಪುಸ್ತಕ ವಚನ 8ಕ್ಕೆ ಕೊನೆಯಾಗುತ್ತೆ. ಪರಿಶಿಷ್ಟ ಎ3 ನೋಡಿ.

