ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೌರವ ಕೊಡಬೇಕಾದವರಿಗೆ ಗೌರವ ಕೊಡಿ

ಗೌರವ ಕೊಡಬೇಕಾದವರಿಗೆ ಗೌರವ ಕೊಡಿ

“ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನಿಗೂ ಕುರಿಮರಿಗೂ ಸ್ತುತಿ, ಗೌರವ, ಮಹಿಮೆ ಮತ್ತು ಬಲಗಳು ಸದಾಸರ್ವದಾ ಇರಲಿ.”—ಪ್ರಕ. 5:13.

ಗೀತೆಗಳು: 9, 108

1. (ಎ) ನಾವು ಕೆಲವರಿಗೆ ಗೌರವ ಕೊಡಲು ಕಾರಣವೇನು? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

ಸಾಮಾನ್ಯವಾಗಿ ನಾವು ಬೇರೆಯವರಿಗೆ ಹೇಗೆ ಗೌರವ ತೋರಿಸುತ್ತೇವೆ? ಅವರಿಗೆ ವಿಶೇಷ ಗಮನ ಕೊಡುತ್ತೇವೆ ಅಥವಾ ಮರ್ಯಾದೆ ಕೊಡುತ್ತೇವೆ. ಯಾರಾದರೂ ಏನಾದರೂ ಒಳ್ಳೇ ಕೆಲಸ ಮಾಡಿದರೆ, ಪ್ರಮುಖ ಸ್ಥಾನದಲ್ಲಿದ್ದರೆ ನಾವು ಅವರಿಗೆ ಗೌರವ ಕೊಡುತ್ತೇವೆ. ಈ ಲೇಖನದಲ್ಲಿ, ನಾವು ಯಾರಿಗೆ ಗೌರವ ಕೊಡಬೇಕು ಮತ್ತು ಯಾಕೆ ಕೊಡಬೇಕು ಎಂದು ಚರ್ಚಿಸಲಿದ್ದೇವೆ.

2, 3. (ಎ) ನಾವು ಯಾಕೆ ಯೆಹೋವನಿಗೆ ವಿಶೇಷ ಗೌರವ ಕೊಡಬೇಕು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಪ್ರಕಟನೆ 5:13 ರಲ್ಲಿ ತಿಳಿಸಲಾಗಿರುವ ಕುರಿಮರಿ ಯಾರು? (ಸಿ) ನಾವು ಅವನಿಗೆ ಯಾಕೆ ಗೌರವ ಕೊಡಬೇಕು?

2 “ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನಿಗೂ ಕುರಿಮರಿಗೂ” ಗೌರವ ಕೊಡಬೇಕೆಂದು ಪ್ರಕಟನೆ 5:13 ಹೇಳುತ್ತದೆ. ‘ಸಿಂಹಾಸನದ ಮೇಲೆ ಕುಳಿತುಕೊಂಡಿರುವಾತನು’ ಯೆಹೋವನು. ‘ಸದಾಸರ್ವದಾ ಜೀವಿಸುವ’ ಯೆಹೋವನಿಗೆ ಗೌರವ ಕೊಡಲು ಒಂದು ಕಾರಣವನ್ನು ಪ್ರಕಟನೆ 4 ನೇ ಅಧ್ಯಾಯದಲ್ಲಿ ತಿಳಿಸಲಾಗಿದೆ. ಅಲ್ಲಿ ಸ್ವರ್ಗದಲ್ಲಿರುವ ಜೀವಿಗಳು ಹೀಗೆ ಹೇಳುತ್ತಾರೆ: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.”—ಪ್ರಕ. 4:9-11.

3 ಪ್ರಕಟನೆ 5:13 ರಲ್ಲಿ ತಿಳಿಸಲಾಗಿರುವ “ಕುರಿಮರಿ” ಯೇಸು ಕ್ರಿಸ್ತ. ಇದು ನಮಗೆ ಹೇಗೆ ಗೊತ್ತು? ಯೇಸು ಭೂಮಿಯಲ್ಲಿದ್ದಾಗ ಅವನನ್ನು “ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ” ಎಂದು ಕರೆಯಲಾಯಿತು. (ಯೋಹಾ. 1:29) ಬೇರೆ ಯಾವ ರಾಜನು ತನ್ನ ಪ್ರಜೆಗಳಿಗೋಸ್ಕರ ತನ್ನ ಜೀವ ಕೊಟ್ಟಿದ್ದಾನೆ? ನಮ್ಮ ಪಾಪಗಳಿಗೋಸ್ಕರ ತನ್ನ ಜೀವವನ್ನೇ ಕೊಟ್ಟ ಯೇಸುವನ್ನು ನಾವು ಖಂಡಿತ ಗೌರವಿಸಬೇಕು. ಯೇಸು ಕ್ರಿಸ್ತನು “ರಾಜರಾಗಿ ಆಳುವವರ ರಾಜನೂ ಕರ್ತರಾಗಿ ಆಳುವವರ ಕರ್ತನೂ” ಆಗಿರುವುದರಿಂದ ಸಹ ನಾವು ಅವನನ್ನು ಗೌರವಿಸಬೇಕು. (1 ತಿಮೊ. 6:14-16) ಸ್ವರ್ಗದಲ್ಲಿರುವ ಜೀವಿಗಳು ಹೃದತುಂಬಿ ಹೀಗೆ ಹಾಡುತ್ತಾರೆ: “ವಧಿಸಲ್ಪಟ್ಟ ಕುರಿಮರಿಯು ಶಕ್ತಿ, ಐಶ್ವರ್ಯ, ವಿವೇಕ, ಬಲ, ಗೌರವ, ಮಹಿಮೆ ಮತ್ತು ಆಶೀರ್ವಾದವನ್ನು ಹೊಂದುವುದಕ್ಕೆ ಯೋಗ್ಯವಾಗಿದೆ.” (ಪ್ರಕ. 5:12) ನಿಮಗೂ ಅವರೊಂದಿಗೆ ಸೇರಿ ಹಾಡಬೇಕೆಂದು ಅನಿಸುತ್ತದಾ?

4. ನಾವು ಯೆಹೋವ ಮತ್ತು ಯೇಸುವಿಗೆ ಯಾಕೆ ಗೌರವ ಕೊಡಲೇಬೇಕು?

4 ಎಲ್ಲಾ ಮಾನವರ ನ್ಯಾಯತೀರ್ಪು ಮಾಡುವ ಕೆಲಸವನ್ನು ಯೆಹೋವನು ಯೇಸುವಿಗೆ ಕೊಟ್ಟಿದ್ದಾನೆ ಎಂದು ಯೋಹಾನ 5:22, 23 ಹೇಳುತ್ತದೆ. ಯೇಸುವಿಗೆ ಗೌರವ ತೋರಿಸಲು ಇದೊಂದು ಮುಖ್ಯ ಕಾರಣ. ನಾವು ಯೇಸುವಿಗೆ ಗೌರವ ಕೊಡುವಾಗ ಅದು ಯೆಹೋವನಿಗೇ ಗೌರವ ಕೊಟ್ಟಂತೆ ಆಗುತ್ತದೆ. ನಾವು ಯೇಸುವಿಗೆ ಮತ್ತು ಅವನ ತಂದೆಗೆ ಗೌರವ ಕೊಟ್ಟರೆ ನಮಗೆ ನಿತ್ಯಜೀವ ಸಿಗುತ್ತದೆ.—ಕೀರ್ತನೆ 2:11, 12 ಓದಿ.

5. ನಾವು ಮಾನವರಿಗೂ ಯಾಕೆ ಗೌರವ ಕೊಡಬೇಕು?

5 ನಾವು ಒಬ್ಬರಿಗೊಬ್ಬರೂ ಗೌರವ ಕೊಡಬೇಕು. ಯಾಕೆಂದರೆ ನಮ್ಮನ್ನು “ದೇವಸ್ವರೂಪದಲ್ಲಿ” ಸೃಷ್ಟಿಮಾಡಲಾಗಿದೆ. (ಆದಿ. 1:27) ಅಂದರೆ ಮಾನವನಿಗೆ ದೇವರಲ್ಲಿರುವ ಗುಣಗಳನ್ನು ತೋರಿಸುವ ಸಾಮರ್ಥ್ಯ ಇದೆ. ಉದಾಹರಣೆಗೆ, ಅವನು ಪ್ರೀತಿ, ದಯೆ, ಕರುಣೆಯಂಥ ಗುಣಗಳನ್ನು ತೋರಿಸಲು ಸಾಧ್ಯವಿದೆ. ಮಾನವನಿಗೆ ಮನಸ್ಸಾಕ್ಷಿ ಸಹ ಇದೆ. ಇದರಿಂದ ಅವನಿಗೆ ಯಾವುದು ಸರಿ ಯಾವುದು ತಪ್ಪು, ಯಾವುದು ಪ್ರಾಮಾಣಿಕ ಪ್ರಾಮಾಣಿಕವಲ್ಲ, ಯಾವುದು ಯೋಗ್ಯ ಯೋಗ್ಯವಲ್ಲ ಎಂಬ ಅರಿವು ಇದೆ. (ರೋಮ. 2:14, 15) ಅನೇಕರು ಶುದ್ಧವಾದ ಸುಂದರವಾದ ವಿಷಯಗಳನ್ನು ನೋಡಲು ಇಷ್ಟಪಡುತ್ತಾರೆ. ಬೇರೆಯವರೊಂದಿಗೆ ಸಮಾಧಾನದಿಂದ ಜೀವಿಸಲು ಬಯಸುತ್ತಾರೆ. ಇದೇನು ಆಶ್ಚರ್ಯಪಡಬೇಕಾದ ವಿಷಯವಲ್ಲ. ಯಾಕೆಂದರೆ ಯೆಹೋವನು ಎಲ್ಲವನ್ನೂ ಅಂದಚಂದವಾಗಿ ಮಾಡುತ್ತಾನೆ ಮತ್ತು ಎಲ್ಲರೊಂದಿಗೆ ಸಮಾಧಾನದಿಂದ ಇರಲು ಬಯಸುತ್ತಾನೆ. ಹೀಗೆ ಎಲ್ಲ ಮನುಷ್ಯರು ಒಂದಲ್ಲ ಒಂದು ವಿಧದಲ್ಲಿ ದೇವರನ್ನು ಅನುಕರಿಸುವ ಸಾಮರ್ಥ್ಯದೊಂದಿಗೆ ಸೃಷ್ಟಿಸಲ್ಪಟ್ಟಿದ್ದಾರೆ. ಹಾಗಾಗಿ ನಾವು ಮಾನವರಿಗೂ ಗೌರವ ಮರ್ಯಾದೆ ಕೊಡಲೇಬೇಕು.—ಕೀರ್ತ. 8:5.

ಯಾರಿಗೆ ಎಷ್ಟು ಗೌರವ ಕೊಡಬೇಕು?

6, 7. ಗೌರವ ಕೊಡುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೂ ಬೇರೆ ಜನರಿಗೂ ಇರುವ ವ್ಯತ್ಯಾಸ ಏನು?

6 ಮಾನವರಿಗೆ ಗೌರವ ತೋರಿಸಬೇಕು ಅಂತ ನೋಡಿದೆವು. ಆದರೆ ಯಾರಿಗೆ ಎಷ್ಟು ಗೌರವ ಕೊಡಬೇಕು, ಯಾವ ರೀತಿ ಗೌರವ ತೋರಿಸಬೇಕು ಎಂದು ಕೆಲವೊಮ್ಮೆ ಗೊತ್ತಾಗಲಿಕ್ಕಿಲ್ಲ. ಯಾಕೆಂದರೆ ಅಪರಿಪೂರ್ಣ ಮಾನವರ ಮೇಲೆ ಸೈತಾನನ ಲೋಕ ತುಂಬ ಪ್ರಭಾವ ಬೀರುತ್ತದೆ. ಇದರಿಂದ ಜನರು ಕೆಲವು ಪ್ರಖ್ಯಾತ ವ್ಯಕ್ತಿಗಳನ್ನು ಆರಾಧ್ಯ ದೈವವಾಗಿ ಮಾಡಿಕೊಳ್ಳುತ್ತಾರೆ. ಬೇರೆ ಮಾನವರಿಗೆ ಮರ್ಯಾದೆ ಗೌರವ ಕೊಡಿ ಅಂತ ದೇವರು ಹೇಳಿದ್ದಾನೆ, ಆದರೆ ಇವರು ತುಂಬ ಗೌರವ ಕೊಟ್ಟು ಅವರನ್ನು ದೇವರ ಸ್ಥಾನಕ್ಕೇ ಏರಿಸಿಬಿಡುತ್ತಾರೆ. ತಮ್ಮ ಅಚ್ಚುಮೆಚ್ಚಿನ ರಾಜಕಾರಣಿಗಳು, ಧರ್ಮಗುರುಗಳು, ಕ್ರೀಡಾಪಟುಗಳು, ಸಿನೆಮಾ ತಾರೆಗಳಂತೆಯೇ ಬಟ್ಟೆ ಹಾಕಲು, ಮಾತಾಡಲು, ವರ್ತಿಸಲು ಆರಂಭಿಸುತ್ತಾರೆ.

7 ಇಷ್ಟರ ಮಟ್ಟಿಗೆ ಮಾನವರಿಗೆ ಗೌರವ ಕೊಡುವುದು ತಪ್ಪು ಅಂತ ನಿಜ ಕ್ರೈಸ್ತರಿಗೆ ಗೊತ್ತು. ಯಾಕೆಂದರೆ ನಾವು ಅನುಕರಿಸಬೇಕಾದ ಮಾದರಿಯನ್ನು ಇಟ್ಟದ್ದು ಯೇಸು ಮಾತ್ರ. (1 ಪೇತ್ರ 2:21) ಯೇಸುವನ್ನು ಬಿಟ್ಟು ಬೇರೆ ಎಲ್ಲ ಮಾನವರೂ “ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ” ಅನ್ನುವುದನ್ನು ನಾವು ಮನಸ್ಸಿನಲ್ಲಿಡಬೇಕು. (ರೋಮ. 3:23) ಯಾವ ಮಾನವನನ್ನೂ ಪೂಜಿಸುವಷ್ಟರ ಮಟ್ಟಿಗೆ ಗೌರವಿಸಬಾರದು. ಹಾಗೆ ಮಾಡಿದರೆ ಯೆಹೋವನಿಗೆ ಸಂತೋಷವಾಗುವುದಿಲ್ಲ.

8, 9. (ಎ) ಯೆಹೋವನ ಸಾಕ್ಷಿಗಳು ಸರಕಾರೀ ಅಧಿಕಾರಿಗಳನ್ನು ಹೇಗೆ ನೋಡುತ್ತಾರೆ? (ಬಿ) ನಾವು ಯಾವಾಗ ಅಧಿಕಾರಿಗಳು ಹೇಳಿದಂತೆ ಮಾಡುವುದಿಲ್ಲ?

8 ಅಧಿಕಾರದ ಸ್ಥಾನದಲ್ಲಿರುವವರಿಗೆ ನಾವು ಗೌರವ ತೋರಿಸಲೇಬೇಕು. ಸರಕಾರೀ ಅಧಿಕಾರಿಗಳನ್ನು ತೆಗೆದುಕೊಳ್ಳಿ. ಅವರು ನಮಗೋಸ್ಕರ ತುಂಬ ವಿಷಯಗಳನ್ನು ಮಾಡುತ್ತಾರೆ. ಪ್ರಜೆಗಳ ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡುತ್ತಾರೆ ಮತ್ತು ಅವರ ಆವಶ್ಯಕತೆಗಳನ್ನು ಪೂರೈಸುತ್ತಾರೆ. ಅವರ ಸೇವೆಯಿಂದ ನಮಗೆ ತುಂಬ ಪ್ರಯೋಜನ ಸಿಗುತ್ತದೆ. ಕ್ರೈಸ್ತರು ಈ ಸರಕಾರೀ ಅಧಿಕಾರಿಗಳನ್ನು ‘ಮೇಲಧಿಕಾರಿಗಳಾಗಿ’ ನೋಡಬೇಕೆಂದು ಅಪೊಸ್ತಲ ಪೌಲ ಹೇಳಿದ್ದಾನೆ. ಅವರ ನಿಯಮಗಳನ್ನು ನಾವು ಪಾಲಿಸಬೇಕು ಎಂದು ಹೇಳುತ್ತಾ ಹೀಗಂದಿದ್ದಾನೆ: “ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು, . . . ಯಾರಿಗೆ ಮರ್ಯಾದೆಯೋ ಅವರಿಗೆ ಅಂಥ ಮರ್ಯಾದೆಯನ್ನು ಸಲ್ಲಿಸಿರಿ.”—ರೋಮ. 13:1, 7.

9 ಯೆಹೋವನ ಸಾಕ್ಷಿಗಳಾಗಿರುವ ನಾವು ಸರಕಾರೀ ಅಧಿಕಾರಿಗಳಿಗೆ ಖಂಡಿತ ಗೌರವ ತೋರಿಸುತ್ತೇವೆ. ಒಂದೊಂದು ಸ್ಥಳದಲ್ಲೂ ಗೌರವ ತೋರಿಸುವ ಬೇರೆಬೇರೆ ರೀತಿ-ರಿವಾಜು ಇರುತ್ತದೆ. ನಾವದನ್ನು ಪಾಲಿಸುತ್ತೇವೆ. ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡಲು ಬೇಕಾದ ಸಹಕಾರ ನೀಡುತ್ತೇವೆ. ಆದರೆ ಯೆಹೋವನ ಮಾತನ್ನು ಮೀರುವಂಥ ಒಂದು ವಿಷಯವನ್ನು ಮಾಡುವಂತೆ ಅವರು ಹೇಳುವಲ್ಲಿ ಅದನ್ನು ಮಾಡುವುದಿಲ್ಲ. ಇಂಥ ಸನ್ನಿವೇಶ ಎದುರಾದರೆ ನಾವು ಮಾನವನಿಗಿಂತ ಹೆಚ್ಚಾಗಿ ಯೆಹೋವನಿಗೆ ಗೌರವ ಕೊಟ್ಟು ಆತನ ಮಾತಿಗೆ ವಿಧೇಯರಾಗುತ್ತೇವೆ.—1 ಪೇತ್ರ 2:13-17 ಓದಿ.

10. ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರು ನಮಗೆ ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ?

10 ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಗೌರವ ತೋರಿಸುವ ವಿಷಯದಲ್ಲಿ ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರು ಒಳ್ಳೇ ಮಾದರಿ ಇಟ್ಟಿದ್ದಾರೆ. ಯೋಸೇಫ ಮತ್ತು ಮರಿಯಳ ಉದಾಹರಣೆ ನೋಡಿ. ರೋಮನ್ನರು ತಮ್ಮ ಸಾಮ್ರಾಜ್ಯದಲ್ಲಿ ಎಷ್ಟು ಜನ ಇದ್ದಾರೆ ಎಂದು ತಿಳಿದುಕೊಳ್ಳಲು ಒಂದು ಜನಗಣತಿ ನಡೆಸಿದರು. ಅದಕ್ಕಾಗಿ ಯೋಸೇಫ ಮತ್ತು ಮರಿಯ ತಮ್ಮ ಹೆಸರನ್ನು ನೋಂದಾಯಿಸಲು ಬೇತ್ಲೆಹೇಮಿಗೆ ಹೋಗಬೇಕಿತ್ತು. ಆಗ ಮರಿಯ ತುಂಬುಗರ್ಭಿಣಿಯಾಗಿದ್ದರೂ ಸರಕಾರದ ಮಾತಿಗೆ ವಿಧೇಯರಾಗಿ ಈ ಪ್ರಯಾಣ ಮಾಡಿದರು. (ಲೂಕ 2:1-5) ಅಪೊಸ್ತಲ ಪೌಲನು ಸಹ ಮಾನವ ನಾಯಕರಿಗೆ ಗೌರವ ಕೊಡುವುದರಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾನೆ. ಜನರು ಅವನ ಮೇಲೆ ಆರೋಪ ಹಾಕಿ ರಾಜ ಹೆರೋದ ಅಗ್ರಿಪ್ಪ ಮತ್ತು ರೋಮಿನ ಪ್ರಾಂತವಾದ ಯೂದಾಯದ ರಾಜ್ಯಪಾಲನಾಗಿದ್ದ ಫೆಸ್ತನ ಮುಂದೆ ತಂದು ನಿಲ್ಲಿಸಿದರು. ಆಗ ಪೌಲನು ತುಂಬ ಗೌರವದಿಂದ ತನ್ನ ವಾದವನ್ನು ಮಂಡಿಸಿದನು.—ಅ. ಕಾ. 25:1-12; 26:1-3.

11, 12. (ಎ) ನಾವು ಯಾಕೆ ಧರ್ಮಗುರುಗಳಿಗೆ ವಿಶೇಷ ಗೌರವ ಕೊಡುವುದಿಲ್ಲ? (ಬಿ) ಆಸ್ಟ್ರಿಯದ ನಮ್ಮ ಸಹೋದರನು ಒಬ್ಬ ರಾಜಕಾರಣಿಗೆ ಗೌರವ ಕೊಟ್ಟದ್ದರಿಂದ ಯಾವ ಪ್ರಯೋಜನ ಸಿಕ್ಕಿತು?

11 ಧರ್ಮಗುರುಗಳಿಗೆ ನಾವು ವಿಶೇಷ ಗೌರವ ಕೊಡಬೇಕಾ? ನಾವು ಸಾಮಾನ್ಯವಾಗಿ ಎಲ್ಲರಿಗೂ ಕೊಡುವಂಥ ಗೌರವವನ್ನು ಇವರಿಗೂ ಕೊಡುತ್ತೇವೆ. ಆದರೆ ಅವರಿಗೆ ವಿಶೇಷ ಗೌರವ ಕೊಡುವುದು ತಪ್ಪು. ಇಂಥ ಗೌರವ ಕೊಡಬೇಕೆಂದು ಅವರು ಬಯಸಿದರೂ ಕೊಡಬಾರದು. ಯಾಕೆ? ಯಾಕೆಂದರೆ ಸುಳ್ಳು ಧರ್ಮಗಳ ಈ ಮುಖಂಡರು ದೇವರ ಬಗ್ಗೆ, ಆತನ ವಾಕ್ಯವಾದ ಬೈಬಲಿನ ಬಗ್ಗೆ ಸತ್ಯವನ್ನು ಕಲಿಸುವುದಿಲ್ಲ. ಯೇಸು ತನ್ನ ಕಾಲದಲ್ಲಿದ್ದ ಇಂಥ ಧರ್ಮಗುರುಗಳನ್ನು ಕಪಟಿಗಳು, ಕುರುಡ ಮಾರ್ಗದರ್ಶಕರು ಎಂದು ಹೇಳಿ ಖಂಡಿಸಿದನು. (ಮತ್ತಾ. 23:23, 24) ಆದರೆ ಸರಕಾರೀ ಅಧಿಕಾರಿಗಳಿಗೆ ವಿಶೇಷ ಗೌರವ ಮನ್ನಣೆ ಕೊಡುವುದು ತಪ್ಪಲ್ಲ. ಇದರಿಂದ ಕೆಲವೊಮ್ಮೆ ನಮಗೆ ಪ್ರಯೋಜನವೂ ಆಗಿದೆ.

12 ಲೆಯೊಪೊಲ್ಟ್‌ ಇಂಗ್ಲೈಟ್ನ ಎಂಬ ಸಹೋದರನ ಉದಾಹರಣೆ ನೋಡೋಣ. ಎರಡನೇ ಲೋಕ ಯುದ್ಧದ ಸಮಯದಲ್ಲಿ ಆಸ್ಟ್ರಿಯದಲ್ಲಿ ಹುರುಪಿನಿಂದ ಸೇವೆ ಮಾಡುತ್ತಿದ್ದ ಇವರನ್ನು ನಾಜಿಗಳು ಬಂಧಿಸಿ ರೈಲಿನಲ್ಲಿ ಸೆರೆಶಿಬಿರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅದೇ ರೈಲಿನಲ್ಲಿ ಅವರಿಗೆ ಡಾಕ್ಟರ್‌ ಹೈನ್‌ರಿಕ್‌ ಗ್ಲೈಸ್ನ ಎಂಬವರು ಸಿಕ್ಕಿದರು. ಇವರು ಆಸ್ಟ್ರಿಯದ ರಾಜಕಾರಣಿಯಾಗಿದ್ದರು. ನಾಜಿಗಳು ಇವರನ್ನೂ ಬಂಧಿಸಿ ಸೆರೆಶಿಬಿರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸಹೋದರ ಲೆಯೊಪೊಲ್ಟ್‌ ತಮ್ಮ ನಂಬಿಕೆಗಳ ಬಗ್ಗೆ ಈ ರಾಜಕಾರಣಿಗೆ ತುಂಬ ಗೌರವದಿಂದ ತಿಳಿಸಿದಾಗ ಅವರು ಗಮನಕೊಟ್ಟು ಕೇಳಿದರು. ಯುದ್ಧ ಕೊನೆಗೊಂಡ ಮೇಲೆ ಆ ರಾಜಕಾರಣಿ ತಮ್ಮ ಅಧಿಕಾರವನ್ನು ಉಪಯೋಗಿಸಿ ಸಾಕ್ಷಿಗಳಿಗೆ ಅನೇಕ ಸಲ ಸಹಾಯ ಮಾಡಿದರು. ಸರಕಾರೀ ಅಧಿಕಾರಿಗಳಿಗೆ ಗೌರವ ಕೊಟ್ಟದ್ದರಿಂದ ಒಳ್ಳೇ ಫಲಿತಾಂಶಗಳು ಸಿಕ್ಕಿದ ಬೇರೆ ಅನುಭವಗಳು ಸಹ ನಿಮಗೆ ಗೊತ್ತಿರಬಹುದು.

ಬೇರೆ ಯಾರಿಗೆ ಗೌರವ ಕೊಡಬೇಕು?

13. ನಾವು ಯಾರಿಗೆ ಮುಖ್ಯವಾಗಿ ಗೌರವ ಮರ್ಯಾದೆ ಕೊಡಬೇಕು? ಯಾಕೆ?

13 ನಮ್ಮ ಸಹೋದರ ಸಹೋದರಿಯರಿಗೆ ನಾವು ಗೌರವ ಮರ್ಯಾದೆ ಕೊಡಬೇಕು. ಮುಖ್ಯವಾಗಿ ಮುಂದಾಳುತ್ವ ವಹಿಸುತ್ತಿರುವ ಸಹೋದರರಿಗೆ, ಅಂದರೆ ಹಿರಿಯರಿಗೆ, ಸಂಚರಣ ಮೇಲ್ವಿಚಾರಕರಿಗೆ, ಶಾಖಾ ಸಮಿತಿಯ ಸದಸ್ಯರಿಗೆ ಮತ್ತು ಆಡಳಿತ ಮಂಡಲಿಯ ಸದಸ್ಯರಿಗೆ ಗೌರವ ಕೊಡಬೇಕು. (1 ತಿಮೊಥೆಯ 5:17 ಓದಿ.) ಇವರೆಲ್ಲರೂ ಯೆಹೋವನ ಜನರ ಆವಶ್ಯಕತೆಗಳನ್ನು ಪೂರೈಸುತ್ತಾರೆ. ಇವರನ್ನು ಬೈಬಲು ‘ಮನುಷ್ಯರಲ್ಲಿ ದಾನಗಳು’ ಎಂದು ಕರೆಯುತ್ತದೆ. (ಎಫೆ. 4:8) ಇವರು ಯಾವುದೇ ದೇಶದವರಾಗಿರಲಿ, ಎಷ್ಟೇ ವಿದ್ಯಾಭ್ಯಾಸ ಪಡೆದಿರಲಿ, ಸಾಮಾಜಿಕ ಸ್ಥಾನಮಾನ ಏನೇ ಇರಲಿ, ಹಣಕಾಸಿನ ಸ್ಥಿತಿ ಹೇಗೇ ಇರಲಿ ನಾವು ಅವರಿಗೆ ಗೌರವ ಕೊಡುತ್ತೇವೆ. ಈ ವಿಷಯದಲ್ಲಿ ಮೊದಲನೇ ಶತಮಾನದ ಕ್ರೈಸ್ತರು ಒಳ್ಳೇ ಮಾದರಿ ಇಟ್ಟಿದ್ದಾರೆ. ಮುಂದಾಳುತ್ವ ವಹಿಸುತ್ತಿದ್ದ ಪುರುಷರಿಗೆ ಇವರು ಗೌರವ ಕೊಟ್ಟರು. ಆದರೆ ನಾವು ಈ ಸಹೋದರರಿಗೆ ಪೂಜ್ಯಭಾವನೆ ತೋರಿಸುವುದಿಲ್ಲ. ದೇವದೂತರೇ ಇಳಿದುಬಂದಿದ್ದಾರೆ ಅನ್ನುವ ತರ ನಡಕೊಳ್ಳುವುದಿಲ್ಲ. ಆದರೆ ಅವರ ಪ್ರಯಾಸ ಮತ್ತು ದೀನತೆಗೆ ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ.—2 ಕೊರಿಂಥ 1:24; ಪ್ರಕಟನೆ 19:10 ಓದಿ.

14, 15. ಕ್ರೈಸ್ತ ಹಿರಿಯರಿಗೂ ಧರ್ಮಗುರುಗಳಿಗೂ ಇರುವ ವ್ಯತ್ಯಾಸ ಏನು?

14 ಈ ಹಿರಿಯರು ದೀನ ಕುರುಬರಂತೆ ಇದ್ದಾರೆ. ತಮ್ಮನ್ನು ಸಿನೆಮಾ, ಕ್ರೀಡಾ ತಾರೆಗಳಂತೆ ನಡೆಸಬೇಕೆಂದು ಅವರು ಬಯಸುವುದಿಲ್ಲ. ಇಂದಿರುವ ಅನೇಕ ಧರ್ಮಗುರುಗಳಂತೆ ಅಥವಾ ಯೇಸುವಿನ ಕಾಲದಲ್ಲಿದ್ದ ಧರ್ಮಗುರುಗಳಂತೆ ಅವರಿಲ್ಲ. ಯೇಸು ಆ ಧರ್ಮಗುರುಗಳ ಬಗ್ಗೆ ಹೀಗೆ ಹೇಳಿದ್ದಾನೆ: “ಅವರು ಸಂಧ್ಯಾ ಭೋಜನಗಳಲ್ಲಿ ಅತಿ ಶ್ರೇಷ್ಠ ಸ್ಥಾನವನ್ನೂ ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಜನರಿಂದ ರಬ್ಬಿಗಳು ಎನಿಸಿಕೊಳ್ಳುವುದನ್ನೂ ಇಷ್ಟಪಡುತ್ತಾರೆ.”—ಮತ್ತಾ. 23:6, 7.

15 ಕ್ರೈಸ್ತ ಹಿರಿಯರು ಯೇಸುವಿನ ಈ ಮುಂದಿನ ಮಾತುಗಳಿಗೆ ವಿಧೇಯರಾಗುತ್ತಾರೆ: “ನೀವು ರಬ್ಬಿಗಳು ಎನಿಸಿಕೊಳ್ಳಬೇಡಿರಿ; ಏಕೆಂದರೆ ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರೂ ಸಹೋದರರು. ಇದಲ್ಲದೆ ಭೂಮಿಯಲ್ಲಿ ಯಾರನ್ನೂ ನಿಮ್ಮ ತಂದೆಯೆಂದು ಕರೆಯಬೇಡಿರಿ; ಏಕೆಂದರೆ ಸ್ವರ್ಗದಲ್ಲಿರುವ ಒಬ್ಬನೇ ನಿಮ್ಮ ತಂದೆಯಾಗಿದ್ದಾನೆ. ‘ನಾಯಕರು’ ಎಂದು ಕರೆಸಿಕೊಳ್ಳಬೇಡಿರಿ; ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ನಾಯಕನು. ಆದರೆ ನಿಮ್ಮಲ್ಲಿ ಅತಿ ದೊಡ್ಡವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಮತ್ತಾ. 23:8-12) ಇಡೀ ಲೋಕದಲ್ಲಿ ಎಲ್ಲ ಸಭೆಗಳಲ್ಲಿರುವ ಹಿರಿಯರು ದೀನತೆಯಿಂದ ಯೇಸುವಿನ ಮಾತುಗಳಿಗೆ ವಿಧೇಯತೆ ತೋರಿಸುವಾಗ ಸಹೋದರ ಸಹೋದರಿಯರು ಅವರಿಗೆ ಪ್ರೀತಿ, ಗೌರವ, ಮರ್ಯಾದೆ ಕೊಡುತ್ತಾರೆ.

ಹಿರಿಯರು ದೀನತೆ ತೋರಿಸುವಾಗ ಸಹೋದರ ಸಹೋದರಿಯರು ಅವರಿಗೆ ಪ್ರೀತಿ, ಗೌರವ ತೋರಿಸುತ್ತಾರೆ (ಪ್ಯಾರ 13-15 ನೋಡಿ)

16. ಗೌರವ ಕೊಡುವ ವಿಷಯದಲ್ಲಿ ಬೈಬಲ್‌ ಕೊಡುವ ಸಲಹೆಯನ್ನು ಅರ್ಥಮಾಡಿಕೊಂಡು ಅನ್ವಯಿಸಲು ಪ್ರಯತ್ನಪಡಬೇಕು ಯಾಕೆ?

16 ಯಾರಿಗೆ ಎಷ್ಟು ಗೌರವ ಕೊಡಬೇಕು ಅನ್ನುವ ವಿಷಯವನ್ನು ಅರ್ಥಮಾಡಿಕೊಂಡು ಅನ್ವಯಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಮೊದಲ ಶತಮಾನದ ಕ್ರೈಸ್ತರ ವಿಷಯದಲ್ಲೂ ಇದು ಸತ್ಯವಾಗಿತ್ತು. (ಅ. ಕಾ. 10:22-26; 3 ಯೋಹಾ. 9, 10) ಆದರೆ ಬೈಬಲ್‌ ಹೇಳುವ ರೀತಿಯಲ್ಲಿ ನಾವು ಗೌರವ ಕೊಡಲು ಪ್ರಯತ್ನ ಮಾಡುವುದರಿಂದ ಪ್ರಯೋಜನಗಳಿವೆ. ಅವುಗಳ ಬಗ್ಗೆ ಮುಂದೆ ನೋಡೋಣ.

ಗೌರವ ಕೊಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ?

17. ಅಧಿಕಾರದ ಸ್ಥಾನಗಳಲ್ಲಿರುವ ವ್ಯಕ್ತಿಗಳಿಗೆ ಗೌರವ ಕೊಡುವುದರಿಂದ ಯಾವ ಪ್ರಯೋಜನ ಸಿಗುತ್ತದೆ?

17 ಅಧಿಕಾರದ ಸ್ಥಾನಗಳಲ್ಲಿರುವ ವ್ಯಕ್ತಿಗಳಿಗೆ ಗೌರವ ಕೊಟ್ಟರೆ ಅವರು ನಮ್ಮ ಸಾರುವ ಕೆಲಸದ ಪರವಾಗಿ ನಿಲ್ಲಬಹುದು. ನಮ್ಮ ಕೆಲಸದ ಬಗ್ಗೆ ಒಳ್ಳೇ ಅಭಿಪ್ರಾಯವೂ ಮೂಡಬಹುದು. ಸುಮಾರು ವರ್ಷಗಳ ಹಿಂದೆ ಜರ್ಮನಿಯಲ್ಲಿ ಇದೇ ಆಯಿತು. ಬಿರ್ಜಿಟ್‌ ಎಂಬ ಪಯನೀಯರ್‌ ಸಹೋದರಿ ತನ್ನ ಮಗಳ ಪದವಿಪ್ರಾಪ್ತಿ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿದ್ದ ಶಿಕ್ಷಕಿಯರು ಸಾಕ್ಷಿ ಮಕ್ಕಳ ಬಗ್ಗೆ ಒಳ್ಳೇ ವರದಿ ಕೊಟ್ಟರು. ಇಷ್ಟು ವರ್ಷಗಳಲ್ಲಿ ಈ ಮಕ್ಕಳಿಂದ ಯಾವುದೇ ತೊಂದರೆ ಆಗಿಲ್ಲ, ಒಳ್ಳೇದಾಗಿ ನಡಕೊಂಡರು ಎಂದು ಹೇಳಿದರು. ಅದಕ್ಕೆ ನಮ್ಮ ಸಹೋದರಿ, “ನಡತೆಯ ವಿಷಯದಲ್ಲಿ ದೇವರಿಟ್ಟಿರುವ ಮಟ್ಟಗಳನ್ನು ಪಾಲಿಸುವಂತೆ ನಮ್ಮ ಮಕ್ಕಳಿಗೆ ಕಲಿಸುತ್ತೇವೆ. ಶಿಕ್ಷಕರಿಗೆ ಗೌರವ ಕೊಡುವುದು, ಮರ್ಯಾದೆಯಿಂದ ನಡಕೊಳ್ಳುವುದೂ ಇದರಲ್ಲಿ ಸೇರಿದೆ” ಎಂದು ಹೇಳಿದರು. ಶಾಲೆಯಲ್ಲಿರುವ ಎಲ್ಲ ಮಕ್ಕಳೂ ಸಾಕ್ಷಿ ಮಕ್ಕಳಂತೆ ಇದ್ದರೆ ಅವರಿಗೆ ಪಾಠ ಮಾಡುವುದು ಸುಲಭ ಎಂದರು ಒಬ್ಬ ಶಿಕ್ಷಕಿ. ಇನ್ನೊಬ್ಬ ಶಿಕ್ಷಕಿಯಂತೂ ಎಷ್ಟು ಪ್ರಭಾವಿತರಾದರು ಅಂದರೆ ಕೆಲವು ವಾರಗಳ ನಂತರ ನಡೆದ ಒಂದು ಅಧಿವೇಶನಕ್ಕೆ ಹಾಜರಾದರು.

18, 19. ಹಿರಿಯರಿಗೆ ಗೌರವ ಕೊಡುವಾಗ ನಾವು ಯಾವ ವಿಷಯಗಳನ್ನು ಮನಸ್ಸಿನಲ್ಲಿಡಬೇಕು?

18 ಸಭಾ ಹಿರಿಯರಿಗೆ ಹೇಗೆ ಗೌರವ ಕೊಡಬೇಕೆಂದು ಅರ್ಥಮಾಡಿಕೊಳ್ಳಲು ಬೈಬಲಿನಲ್ಲಿರುವ ತತ್ವಗಳು ನಮಗೆ ಸಹಾಯಮಾಡುತ್ತವೆ. (ಇಬ್ರಿಯ 13:7, 17 ಓದಿ.) ಅವರು ಹಾಕುತ್ತಿರುವ ಶ್ರಮಕ್ಕಾಗಿ ನಾವು ಅವರನ್ನು ಶ್ಲಾಘಿಸಬೇಕು. ಹಿರಿಯರು ಕೊಡುವ ನಿರ್ದೇಶನಗಳನ್ನು ನಾವು ಪಾಲಿಸುವಾಗ ಅವರು ತಮ್ಮ ಕರ್ತವ್ಯವನ್ನು ಸಂತೋಷದಿಂದ ಪೂರೈಸಲು ಆಗುತ್ತದೆ. ನಾವು ಅವರ ನಂಬಿಕೆಯನ್ನು ಅನುಕರಿಸಬೇಕೆಂದು ಸಹ ಬೈಬಲ್‌ ಹೇಳುತ್ತದೆ. ಇದರರ್ಥ ಹೆಸರುವಾಸಿಯಾದ ಒಬ್ಬ ಹಿರಿಯನು ಹೇಗೆ ಮಾತಾಡುತ್ತಾನೆ, ಭಾಷಣ ಕೊಡುತ್ತಾನೆ, ಯಾವ ಬಟ್ಟೆ ಹಾಕುತ್ತಾನೆ ಅನ್ನುವುದನ್ನು ನಾವು ಹಾಗೇ ಅನುಕರಿಸಬೇಕು ಎಂದಲ್ಲ. ಹೀಗೆ ಮಾಡಿದರೆ ನಾವು ಯೇಸುವನ್ನಲ್ಲ, ಒಬ್ಬ ಮನುಷ್ಯನನ್ನು ಹಿಂಬಾಲಿಸುತ್ತಿದ್ದೇವೆ ಎಂದಾಗುತ್ತದೆ. ಹಿರಿಯರು ನಮ್ಮಂತೆ ಅಪರಿಪೂರ್ಣರು ಅಂತ ನಾವು ಮರೆಯಬಾರದು.

19 ನಾವು ಹಿರಿಯರನ್ನು ಸಿನೆಮಾ, ಕ್ರೀಡಾ ತಾರೆಗಳಂತೆ ನೋಡದೆ ಅವರಿಗೆ ಕೊಡಬೇಕಾದಷ್ಟು ಗೌರವ ಕೊಡುವಾಗ ಅವರಿಗೇ ಸಹಾಯವಾಗುತ್ತದೆ. ಹೇಗೆ? ಅವರು ದೀನರಾಗಿಯೇ ಇರುತ್ತಾರೆ. ತಾವು ಬೇರೆಯವರಿಗಿಂತ ಶ್ರೇಷ್ಠರು, ತಾವು ಮಾಡಿದ್ದೇ ಸರಿ ಎಂಬ ಯೋಚನೆ ಅವರಲ್ಲಿ ಬರುವುದಿಲ್ಲ.

20. ನಾವು ಬೇರೆಯವರಿಗೆ ಗೌರವ ಕೊಡುವಾಗ ಯಾವ ಪ್ರಯೋಜನ ಸಿಗುತ್ತದೆ?

20 ನಾವು ಬೇರೆಯವರಿಗೆ ಗೌರವ ಕೊಡುವಾಗ ನಾವು ನಮ್ಮ ಬಗ್ಗೆಯೇ ಯೋಚನೆ ಮಾಡುವ ವ್ಯಕ್ತಿಗಳಲ್ಲ ಅಂತ ತೋರಿಸಿಕೊಡುತ್ತೇವೆ. ಬೇರೆಯವರು ನಮಗೆ ವಿಶೇಷ ಗಮನ ಕೊಡುವಾಗಲೂ ದೀನರಾಗಿ ಇರುತ್ತೇವೆ. ನಮ್ಮ ಸಂಘಟನೆ ಯಾವೊಬ್ಬ ಮಾನವನಿಗೂ, ಅವನು ಸಾಕ್ಷಿಯಾಗಿರಲಿ ಇಲ್ಲದಿರಲಿ ಅತಿಯಾದ ಗೌರವ ಕೊಡುವುದಿಲ್ಲ. ನಾವೂ ಅದೇ ರೀತಿ ಅತಿಯಾದ ಗೌರವ ಕೊಡದಿರುವ ಮೂಲಕ ಸಂಘಟನೆ ಮಾಡುವಂತೆ ಮಾಡುತ್ತೇವೆ. ಅಷ್ಟುಮಾತ್ರವಲ್ಲ ನಾವು ಅತಿಯಾದ ಗೌರವ ಕೊಡುವ ವ್ಯಕ್ತಿ ತಪ್ಪುಮಾಡಿದರೆ ಅಥವಾ ಅವರಿಂದ ನಮಗೆ ಬೇಜಾರಾದರೆ ನಾವು ಸಂಘಟನೆ ಬಿಟ್ಟು ಹೋಗಲ್ಲ.

21. ನಾವು ಬೇರೆಯವರಿಗೆ ಗೌರವ ಕೊಡುವಾಗ ಸಿಗುವ ಅತಿ ದೊಡ್ಡ ಪ್ರಯೋಜನ ಏನು?

21 ನಾವು ಬೇರೆಯವರಿಗೆ ಕೊಡಬೇಕಾದ ಗೌರವ ಕೊಡುವಾಗ ಸಿಗುವ ಅತಿ ದೊಡ್ಡ ಪ್ರಯೋಜನ ಏನೆಂದರೆ, ನಾವು ದೇವರನ್ನು ಸಂತೋಷಪಡಿಸುತ್ತೇವೆ. ಯೆಹೋವನು ಬಯಸುವುದನ್ನೇ ಮಾಡುತ್ತಿದ್ದೇವೆ. ಹೀಗೆ ಆತನಿಗೆ ನಂಬಿಗಸ್ತರಾಗಿ ಇರುತ್ತೇವೆ. ಆಗ ಯೆಹೋವನು ಸೈತಾನನಿಗೆ ಉತ್ತರ ಕೊಡಲು ಸಾಧ್ಯವಾಗುತ್ತದೆ. ಯಾಕೆಂದರೆ ಯಾರೂ ನಂಬಿಗಸ್ತರಾಗಿರಲು ಸಾಧ್ಯವಿಲ್ಲ ಎಂದು ಸೈತಾನ ದೂಷಿಸಿದ್ದಾನೆ. (ಜ್ಞಾನೋ. 27:11) ಯಾರಿಗೆ ಎಷ್ಟು ಗೌರವ ಕೊಡಬೇಕೆಂದು ಲೋಕದಲ್ಲಿರುವ ಅನೇಕರಿಗೆ ಗೊತ್ತಿಲ್ಲ. ಆದರೆ ಯೆಹೋವನು ಹೇಳಿದಂಥ ರೀತಿಯಲ್ಲಿ ಹೇಗೆ ಗೌರವ ಕೊಡಬೇಕೆಂದು ನಮಗೆ ಗೊತ್ತು. ಇದಕ್ಕಾಗಿ ನಾವು ಕೃತಜ್ಞರು!