ತಿಮೊತಿಗೆ ಬರೆದ ಮೊದಲನೇ ಪತ್ರ 6:1-21

  • ಆಳುಗಳು ಯಜಮಾನರಿಗೆ ಗೌರವ ಕೊಡಬೇಕು (1, 2)

  • ಸುಳ್ಳು ಬೋಧಕರು, ಹಣದಾಸೆ (3-10)

  • ದೇವರ ಸೇವಕನಿಗೆ ಸೂಚನೆ (11-16)

  • ಒಳ್ಳೇ ಕೆಲಸಗಳನ್ನ ಮಾಡಬೇಕು (17-19)

  • ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ (20, 21)

6  ಎಲ್ಲ ಆಳುಗಳು ತಮ್ಮ ಯಜಮಾನರಿಗೆ ತುಂಬ ಗೌರವ ಕೊಡ್ಲಿ.+ ಆಗ ದೇವರ ಹೆಸ್ರನ್ನ, ಆತನ ಬೋಧನೆಯನ್ನ ಯಾರೂ ಅವಮಾನ ಮಾಡಲ್ಲ.+  ನಿಮ್ಮ ಯಜಮಾನರು ಕ್ರೈಸ್ತರಾಗಿದ್ರೆ ‘ಇವರು ನಮ್ಮ ಸಹೋದರರಲ್ವಾ, ಪರ್ವಾಗಿಲ್ಲ’ ಅಂದ್ಕೊಂಡು ಅವ್ರ ಜೊತೆ ಅಗೌರವದಿಂದ ನಡ್ಕೊಬಾರದು. ಬದಲಿಗೆ ಇನ್ನೂ ಜಾಸ್ತಿ ಕಷ್ಟಪಟ್ಟು ಕೆಲಸ ಮಾಡಬೇಕು. ಯಾಕಂದ್ರೆ ಅಂಥ ಶ್ರಮದಿಂದ ಕ್ರೈಸ್ತರು, ನಮ್ಮ ಪ್ರೀತಿಯ ಸಹೋದರರು ಪ್ರಯೋಜನ ಪಡಿತಾರೆ. ಈ ವಿಷ್ಯಗಳನ್ನ ಕಲಿಸ್ತಾ ಇರು, ಅದ್ರ ಪ್ರಕಾರ ನಡಿಯೋಕೆ ಬುದ್ಧಿ ಹೇಳ್ತಾ ಇರು.  ಯಾವನಾದ್ರೂ ಸುಳ್ಳು ವಿಷ್ಯಗಳನ್ನ ಕಲಿಸಿದ್ರೆ, ನಮ್ಮ ಪ್ರಭು ಯೇಸು ಕ್ರಿಸ್ತನ ಒಳ್ಳೇ* ಬೋಧನೆಯನ್ನ ಅವನು ಒಪ್ಪದಿದ್ರೆ,+ ಅವನು ಕಲಿಸೋದು ದೇವರಿಗೆ ನಂಬಿಗಸ್ತರಾಗಿ ಇರೋಕೆ ಸಹಾಯ ಮಾಡದಿದ್ರೆ+  ಅವನು ಅಹಂಕಾರದಿಂದ ಉಬ್ಬಿಕೊಂಡವನು, ಬುದ್ಧಿ ಇಲ್ಲದವನು ಆಗಿದ್ದಾನೆ.+ ವಾದ-ವಿವಾದಗಳಲ್ಲಿ, ಪದಗಳ ಬಗ್ಗೆ ಜಗಳ ಮಾಡೋದ್ರಲ್ಲಿ ಮುಳುಗಿರ್ತಾನೆ.*+ ಇಂಥ ವಿಷ್ಯಗಳಿಂದ ಹೊಟ್ಟೆಕಿಚ್ಚು, ಜಗಳ, ಸುಳ್ಳು ಆರೋಪ,* ಕೆಟ್ಟ ಸಂಶಯ ಹುಟ್ಟುತ್ತೆ ಅಷ್ಟೇ.  ಕೊಳಕು ಮನಸ್ಸಿನವರು, ಸತ್ಯವನ್ನ ಅರ್ಥನೇ ಮಾಡ್ಕೊಳ್ಳದವರು ಚಿಕ್ಕಪುಟ್ಟ ವಿಷ್ಯಕ್ಕೆಲ್ಲ ಜಗಳ ಮಾಡ್ತಾ ಇರ್ತಾರೆ.+ ಅವರು ದೇವರ ಭಕ್ತಿಯನ್ನ ಲಾಭ ಮಾಡೋಕೆ ಒಂದು ದಾರಿ ಅಂತ ಯೋಚಿಸ್ತಾರೆ.+  ದೇವರ ಭಕ್ತಿ ಇದ್ರೆ ತುಂಬ ಲಾಭ ಇದೆ ಅನ್ನೋದು ನಿಜ. ಆದ್ರೆ ಆ ಭಕ್ತಿಯಿಂದ ಇರೋದ್ರಲ್ಲೇ ತೃಪ್ತಿ ಪಡ್ಯೋ ಗುಣ ಇದ್ರೆ ಮಾತ್ರ ಆ ಲಾಭ ಸಿಗುತ್ತೆ.+  ಯಾಕಂದ್ರೆ ನಾವು ಹುಟ್ಟಿದಾಗ ಲೋಕಕ್ಕೆ ಏನೂ ತಗೊಂಡು ಬರಲಿಲ್ಲ, ಸತ್ತಾಗ್ಲೂ ಏನೂ ತಗೊಂಡು ಹೋಗಲ್ಲ.+  ಹಾಗಾಗಿ ನಮಗೆ ಊಟ ಬಟ್ಟೆ* ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.+  ಹೇಗಾದ್ರೂ ಶ್ರೀಮಂತರಾಗಬೇಕು ಅಂದ್ಕೊಳ್ಳೋರು ಕೆಟ್ಟ ಯೋಚನೆಗಳಿಗೆ, ಉರ್ಲಿಗೆ,+ ತುಂಬ ಹುಚ್ಚು ಆಸೆಗಳಿಗೆ ಬಲಿ ಆಗ್ತಾರೆ. ಇಂಥ ಆಸೆಗಳು ಅಪಾಯಕಾರಿ. ಅಷ್ಟೇ ಅಲ್ಲ, ಆ ಆಸೆಗಳು ನಾಶದ ಮತ್ತು ಸಾವಿನ ಗುಂಡಿಗೆ ತಳ್ಳುತ್ತೆ.+ 10  ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ. ಆ ಆಸೆಯಿಂದಾನೇ ಕೆಲವರು ನಂಬಿಕೆ ಕಳ್ಕೊಂಡಿದ್ದಾರೆ, ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.*+ 11  ಆದ್ರೆ ದೇವರ ಸೇವಕನೇ, ನೀನು ಇದ್ರಿಂದ ದೂರ ಓಡು. ನೀತಿ, ದೇವರ ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯತೆ ಇವನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡು.+ 12  ನಿನ್ನ ನಂಬಿಕೆ ಸರಿ ಅಂತ ತೋರಿಸೋಕೆ ಒಳ್ಳೇ ಹೋರಾಟ ಮಾಡು. ಶಾಶ್ವತ ಜೀವವನ್ನ ಬಿಗಿಯಾಗಿ ಹಿಡ್ಕೊ. ಆ ಜೀವ ಪಡಿಯೋಕೇ ದೇವರು ನಿನ್ನನ್ನ ಕರೆದನು ತಾನೇ? ತುಂಬ ಜನ್ರ ಮುಂದೆ ನೀನು ಈ ಜೀವದ ಬಗ್ಗೆ ಒಳ್ಳೇ ಸಾಕ್ಷಿ ಕೊಟ್ಟೆ. 13  ಎಲ್ಲವನ್ನ ಜೀವಂತವಾಗಿ ಇಡೋ ದೇವರ ಮುಂದೆ ಮತ್ತು ಪೊಂತ್ಯ ಪಿಲಾತನಿಗೆ+ ಒಳ್ಳೇ ಸಾಕ್ಷಿ ಕೊಟ್ಟ ಕ್ರಿಸ್ತ ಯೇಸು ಮುಂದೆ ನಾನು ನಿನಗೆ ಈ ಆಜ್ಞೆಗಳನ್ನ ಕೊಡ್ತೀನಿ. 14  ನಿನ್ನಲ್ಲಿ ತಪ್ಪು ಸಿಗದ ಹಾಗೆ, ಯಾರೂ ನಿನ್ನ ಕಡೆ ಬೆರಳು ತೋರಿಸದ ಹಾಗೆ ಈ ಆಜ್ಞೆಗಳನ್ನ ಪಾಲಿಸು. ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ತನಕ ಅವನ್ನ ಪಾಲಿಸು.+ 15  ಸರಿಯಾದ ಸಮಯಕ್ಕೆ ಆತನು ಮತ್ತೆ ಬರ್ತಾನೆ. ಆತನೇ ಸಂತೋಷವಾಗಿರೋ ಬಲಶಾಲಿ ಪ್ರಭು. ಆತನು ರಾಜರ ರಾಜ, ಒಡೆಯರ ಒಡೆಯ.+ 16  ಅವ್ರಲ್ಲಿ ಆತನೊಬ್ಬನೇ ಅಮರ.+ ಹೊಳೆಯೋ ಬೆಳಕಿರೋ+ ಜಾಗದಲ್ಲಿ ಆತನು ವಾಸ ಮಾಡ್ತಾನೆ. ಅಲ್ಲಿ ಆತನನ್ನ ಯಾವ ಮನುಷ್ಯನೂ ನೋಡಿಲ್ಲ, ನೋಡೋಕೆ ಸಾಧ್ಯನೂ ಇಲ್ಲ.+ ಅಲ್ಲಿಗೆ ಹೋಗೋಕೆ ಯಾರಿಗೂ ಆಗಲ್ಲ. ಆತನಿಗೆ ಗೌರವ, ನಿರಂತರ ಬಲ ಸಿಗ್ಲಿ. ಆಮೆನ್‌. 17  ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+ 18  ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು. 19  ಹೀಗೆ ಮಾಡಿದ್ರೆ ಸುರಕ್ಷಿತ ನಿಧಿಯಾಗಿರೋ ಒಂದು ಒಳ್ಳೇ ಭವಿಷ್ಯ ಅವ್ರಿಗೆ ಸಿಗುತ್ತೆ.+ ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಂಡಿರೋಕೆ ಆಗುತ್ತೆ.+ 20  ತಿಮೊತಿ, ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ.+ ಪವಿತ್ರವಾದದ್ದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಮತ್ತು ತಮಗೆ ತುಂಬ ಜ್ಞಾನ ಇದೆ ಅಂತ ನೆನಸೋ ಜನ್ರ ಯೋಚನೆಗಳನ್ನ ಕೇಳಿಸ್ಕೊಬೇಡ. ಯಾಕಂದ್ರೆ ಅವ್ರ ಆಲೋಚನೆ ಯಾವುದು ನಿಜಾನೋ ಅದಕ್ಕೆ ವಿರುದ್ಧವಾಗಿದೆ.+ 21  ಇಂಥ ಜ್ಞಾನ ತಮಗಿದೆ ಅಂತ ತೋರಿಸ್ಕೊಂಡು ಕೆಲವರು ನಂಬಿಕೆ ಬಿಟ್ಟು ಹೋಗಿದ್ದಾರೆ. ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ.

ಪಾದಟಿಪ್ಪಣಿ

ಅಥವಾ “ಪ್ರಯೋಜನ ತರೋ.”
ಅಥವಾ “ಪ್ರಯೋಜನ ಇಲ್ಲದಿದ್ರೂ ಹುಚ್ಚುಚ್ಚಾಗಿ ಒಳಗೂಡ್ತಾನೆ.”
ಅಥವಾ “ಅವಮಾನದ ಮಾತು.”
ಅಥವಾ “ಆಶ್ರಯ.”
ಅಕ್ಷ. “ವೇದನೆಗಳಿಂದ ತಮ್ಮನ್ನ ಎಲ್ಲ ಕಡೆ ತಿವಿಸ್ಕೊಂಡಿದ್ದಾರೆ.”
ಅಥವಾ “ಈಗಿನ ಕಾಲದಲ್ಲಿ.” ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಥವಾ “ಆಜ್ಞೆ ಕೊಡು.”
ಅಥವಾ “ಉದಾರಿಗಳು.”