ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

2012ರಲ್ಲಿ ಪುರಾತತ್ವ ತಜ್ಞರಿಗೆ ಒಡೆದುಹೋಗಿದ್ದ ಒಂದು ಪಿಂಗಾಣಿ ಜಾಡಿಯ ತುಂಡುಗಳು ಸಿಕ್ಕಿದವು. ಅದು ಸುಮಾರು 3,000 ವರ್ಷ ಹಿಂದಿನ ಕಾಲದ್ದು. ಆ ಸಂಶೋಧಕರಿಗೆ ತುಂಬ ಸಂತೋಷವಾಯಿತು. ಯಾಕೆ? ಜಾಡಿ ಸಿಕ್ಕಿದ್ದಕ್ಕಲ್ಲ, ಅದರ ಮೇಲಿದ್ದ ಬರಹ ನೋಡಿ.

ಪುರಾತತ್ವ ತಜ್ಞರು ಆ ಜಾಡಿಯ ಎಲ್ಲ ತುಂಡುಗಳನ್ನು ಜೋಡಿಸಿದಾಗ ಅದರ ಮೇಲೆ ಕಾನಾನ್ಯ ಭಾಷೆಯಲ್ಲಿ ಏನೋ ಬರೆದಿರುವುದು ಕಂಡುಬಂತು. “ಎಷ್ಬಾಳ್‌ ಬೆನ್‌ ಬೆಡಾ” ಅಂದರೆ “ಬೆಡಾನ ಪುತ್ರ ಎಷ್ಬಾಳ” ಎಂದು ಬರೆದಿತ್ತು. ಪ್ರಾಚೀನ ಕಾಲದ ಒಂದು ವಸ್ತುವಿನ ಮೇಲೆ ಈ ಹೆಸರು ಸಿಕ್ಕಿರುವುದು ಇದೇ ಮೊದಲನೇ ಸಾರಿ.

ಎಷ್ಬಾಳ ಎಂಬ ಹೆಸರಿದ್ದ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಅವನು ರಾಜ ಸೌಲನ ಮಗ. (1 ಪೂರ್ವ. 8:33; 9:39) ಆ ಜಾಡಿ ಕಂಡುಹಿಡಿದವರಲ್ಲಿ ಒಬ್ಬರಾದ ಪ್ರೊಫೆಸರ್‌ ಯೋಸೆಫ್‌ ಗಾರ್ಫಿಂಗಲ್‌ ಹೇಳಿದ್ದು: “ಆಸಕ್ತಿಕರ ವಿಷಯವೇನೆಂದರೆ ಎಷ್ಬಾಳ್‌ ಎಂಬ ಹೆಸರು ಬೈಬಲಿನಲ್ಲಿದೆ. ಈ ಹೆಸರನ್ನು ರಾಜ ದಾವೀದನ ಆಳ್ವಿಕೆಯ ಸಮಯದಲ್ಲಿ ಬಳಸಲಾಗಿತ್ತು. ಈಗ ಈ ಹೆಸರು ಪುರಾತತ್ವದ ದಾಖಲೆಯಲ್ಲೂ ಲಭ್ಯವಾಗಿದೆ.” ಪುರಾತತ್ವ ಶಾಸ್ತ್ರ ಬೈಬಲನ್ನು ಬೆಂಬಲಿಸುತ್ತದೆಂದು ತೋರಿಸಲು ಇದು ಇನ್ನೊಂದು ಉದಾಹರಣೆ!

ಸೌಲನ ಮಗನಾದ ಎಷ್ಬಾಳನನ್ನು [ಎಷ್‌+ಬಾಳ] ಬೈಬಲಿನಲ್ಲಿ ಈಷ್ಬೋಶೆತ [ಈಷ್‌+ಬೋಶೆತ] ಎಂದೂ ಕರೆಯಲಾಗಿದೆ. (2 ಸಮು. 2:10) ಈ ಹೆಸರಿನಲ್ಲಿ ‘ಬಾಳ’ ಅಂತ ಹಾಕದೆ ‘ಬೋಶೆತ’ ಅಂತ ಯಾಕೆ ಹಾಕಲಾಗಿದೆ? ಸಂಶೋಧಕರು ಈ ವಿವರಣೆ ಕೊಡುತ್ತಾರೆ: ಎರಡನೇ ಸಮುವೇಲ ಪುಸ್ತಕವನ್ನು ಬರೆದ ವ್ಯಕ್ತಿ ‘ಎಷ್ಬಾಳ’ ಎಂಬ ಹೆಸರನ್ನು ಬೇಕುಬೇಕೆಂದೇ ಹಾಕಿರಲಿಕ್ಕಿಲ್ಲ, ಯಾಕೆಂದರೆ ಅದು ಇಸ್ರಾಯೇಲ್ಯರಿಗೆ ಬಾಳನನ್ನು ನೆನಪಿಗೆ ತರುತ್ತಿತ್ತು. ಬಾಳನು ಕಾನಾನ್ಯ ಜನರು ಆರಾಧಿಸುತ್ತಿದ್ದ ಚಂಡಮಾರುತದ ದೇವತೆಯಾಗಿದ್ದನು. ಹೀಗಿದ್ದರೂ, ಎಷ್ಬಾಳ ಎಂಬ ಹೆಸರನ್ನು ಒಂದನೇ ಪೂರ್ವಕಾಲವೃತ್ತಾಂತದಲ್ಲಿ ಬಳಸಲಾಗಿದೆ.