ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀತಿವಂತರು ‘ಯೆಹೋವನಲ್ಲಿ ಆನಂದಪಡುವರು’

ನೀತಿವಂತರು ‘ಯೆಹೋವನಲ್ಲಿ ಆನಂದಪಡುವರು’

ಡೈನಗೆ 80 ವರ್ಷ. ಕಳೆದ ಕೆಲವು ವರ್ಷಗಳಿಂದ ತುಂಬ ನೋವನ್ನು ಅನುಭವಿಸಿದ್ದಾರೆ. ಅವರ ಗಂಡನಿಗೆ ಮರೆವಿನ ಕಾಯಿಲೆ ಇತ್ತು. ಅವರು ತೀರಿಕೊಳ್ಳುವ ಮುಂಚೆ ಕೆಲವು ವರ್ಷ ವೃದ್ಧರನ್ನು ನೋಡಿಕೊಳ್ಳುವ ಶುಶ್ರೂಷಾ ಕೇಂದ್ರದಲ್ಲಿದ್ದರು. ಅವರ ಇಬ್ಬರು ಗಂಡು ಮಕ್ಕಳೂ ತೀರಿಹೋದರು. ಡೈನಗೆ ಸ್ತನ ಕ್ಯಾನ್ಸರ್‌ ಬಂದು ಅದರ ಜೊತೆನೂ ಹೋರಾಡಬೇಕಿತ್ತು. ಇಷ್ಟೆಲ್ಲಾ ಆದರೂ ಅವರನ್ನು ಕೂಟದಲ್ಲಿ ಸೇವೆಯಲ್ಲಿ ನೋಡಿದ ಸಹೋದರ-ಸಹೋದರಿಯರು ಅವರು ಯಾವಾಗಲೂ ಸಂತೋಷವಾಗಿ ಇರುವುದನ್ನು ಗಮನಿಸಿದ್ದಾರೆ.

ಜಾನ್‌ 43 ವರ್ಷ ಸಂಚರಣ ಮೇಲ್ವಿಚಾರಕರಾಗಿದ್ದರು. ಆ ಕೆಲಸ ಅಂದರೆ ಅವರಿಗೆ ತುಂಬ ಇಷ್ಟ, ಅದೇ ಅವರ ಜೀವ ಆಗಿತ್ತು! ಆದರೆ ಕಾಯಿಲೆಬಿದ್ದ ಒಬ್ಬ ಸಂಬಂಧಿಕರನ್ನು ನೋಡಿಕೊಳ್ಳಲು ಆ ಸೇವೆಯನ್ನು ನಿಲ್ಲಿಸಬೇಕಾಯಿತು. ಸಮ್ಮೇಳನದಲ್ಲಿ ಅಥವಾ ಅಧಿವೇಶನದಲ್ಲಿ ಜಾನ್‌ಗೆ ಪರಿಚಯವಿರುವ ಸಹೋದರ-ಸಹೋದರಿಯರು ಸಿಕ್ಕಿದಾಗ ‘ಮೊದಲು ಇದ್ದ ತರನೇ ಇದ್ದಾರಲ್ಲ’ ಅಂತ ಅನಿಸುತ್ತದೆ. ಯಾಕೆಂದರೆ ಅವರಲ್ಲಿ ಈಗಲೂ ಸಂತೋಷದ ಚಿಲುಮೆಯಾಗಿದ್ದಾರೆ.

ಡೈನ ಮತ್ತು ಜಾನ್‌ ಸಂತೋಷವಾಗಿ ಇರಲು ಹೇಗೆ ಸಾಧ್ಯ ಆಯಿತು? ನೋವು ಅನುಭವಿಸುವ ವ್ಯಕ್ತಿ ಹೇಗೆ ತಾನೇ ಸಂತೋಷವಾಗಿ ಇರಬಹುದು? ತನಗೆ ಇಷ್ಟ ಇರುವ ಒಂದು ನೇಮಕವನ್ನು ತ್ಯಾಗಮಾಡಬೇಕಾಗಿ ಬಂದರೂ ಹೇಗೆ ಸಂತೋಷವಾಗಿ ಇರಬಹುದು? ಇದಕ್ಕೆ ಬೈಬಲ್‌ ಉತ್ತರ ಕೊಡುತ್ತದೆ. ನೀತಿವಂತರು ‘ಯೆಹೋವನಲ್ಲಿ ಆನಂದಪಡುತ್ತಾರೆ’ ಎಂದು ಬೈಬಲ್‌ ಹೇಳುತ್ತದೆ. (ಕೀರ್ತ. 64:10) ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಾವು ಮೊದಲು ಯಾವುದು ನಿಜ ಸಂತೋಷ ಕೊಡುತ್ತದೆ, ಯಾವುದು ಕೊಡಲ್ಲ ಎಂದು ತಿಳುಕೊಳ್ಳಬೇಕು.

ತಾತ್ಕಾಲಿಕ ಸಂತೋಷ ಕೊಡುವ ವಿಷಯಗಳು

ಕೆಲವೊಂದು ವಿಷಯಗಳು ಯಾವಾಗಲೂ ಸಂತೋಷ ತರುತ್ತವೆ. ಉದಾಹರಣೆಗೆ, ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವ ಜೋಡಿಗೆ ಅಥವಾ ಮಗು ಹುಟ್ಟಿದಾಗ ಅದರ ಹೆತ್ತವರಿಗೆ ಅಥವಾ ಯೆಹೋವನ ಸೇವೆಯಲ್ಲಿ ಒಂದು ಹೊಸ ನೇಮಕ ಸಿಕ್ಕಿರುವ ಸಹೋದರ-ಸಹೋದರಿಗೆ ಹೇಗನಿಸುತ್ತೆ ಸ್ವಲ್ಪ ಯೋಚಿಸಿ. ಇದೆಲ್ಲ ಯೆಹೋವನ ಕೊಡುಗೆ ಆಗಿರುವುದರಿಂದ ಅವರಿಗೆ ಸಂತೋಷ ಆಗೇ ಆಗುತ್ತೆ. ಯಾಕೆಂದರೆ ಮದುವೆ ಮಾಡಿಕೊಳ್ಳುವುದಕ್ಕೆ, ಮಕ್ಕಳು ಪಡೆಯುವುದಕ್ಕೆ ಮತ್ತು ತನ್ನ ಸಂಘಟನೆಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿರುವುದೇ ಯೆಹೋವನು.—ಆದಿ. 2:18, 22; ಕೀರ್ತ. 127:3; 1 ತಿಮೊ. 3:1.

ಆದರೂ ಕೆಲವು ವಿಷಯಗಳು ಕೊಡುವ ಸಂತೋಷ ಜಾಸ್ತಿ ದಿನ ಇರಲ್ಲ. ಬಾಳಸಂಗಾತಿ ಬಿಟ್ಟುಹೋಗಬಹುದು ಅಥವಾ ತೀರಿಹೋಗಬಹುದು. (ಯೆಹೆ. 24:18; ಹೋಶೇ. 3:1) ಮಕ್ಕಳು ತಂದೆತಾಯಿಯ ಮತ್ತು ಯೆಹೋವನ ಮಾತು ಕೇಳದೆ ಹೋಗಬಹುದು, ಬಹಿಷ್ಕಾರನೂ ಆಗಬಹುದು. ಉದಾಹರಣೆಗೆ ಸಮುವೇಲನ ಇಬ್ಬರು ಗಂಡುಮಕ್ಕಳು ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡಲಿಲ್ಲ. ದಾವೀದನು ಬತ್ಷೆಬೆ ಜೊತೆ ಪಾಪ ಮಾಡಿದ ಕಾರಣ ತನ್ನ ಕುಟುಂಬದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಯಿತು. (1 ಸಮು. 8:1-3; 2 ಸಮು. 12:11) ಈ ತರ ಆದಾಗ ಸಂತೋಷ ಇರುತ್ತಾ?

ಅದೇ ರೀತಿ ಕೆಲವೊಮ್ಮೆ ನಮ್ಮ ನೇಮಕದಲ್ಲಿ ನಾವು ಮುಂದುವರಿಯಕ್ಕಾಗಲ್ಲ. ಯಾಕೆಂದರೆ ನಮ್ಮ ಆರೋಗ್ಯ ಹಾಳಾಗಬಹುದು ಅಥವಾ ಕುಟುಂಬವನ್ನು ನೋಡಿಕೊಳ್ಳಬೇಕಾಗಬಹುದು ಅಥವಾ ಸಂಘಟನೆಯಲ್ಲಿ ಬದಲಾವಣೆ ಆಗಬಹುದು. ತಮ್ಮ ನೇಮಕ ಬಿಟ್ಟುಕೊಡಬೇಕಾದ ಬಹಳಷ್ಟು ಸಹೋದರ ಸಹೋದರಿಯರು ಈಗಲೂ ಅದನ್ನು ನೆನಸಿ ಕೊರಗುತ್ತಾರೆ.

ಇದರಿಂದ ನಮಗೇನು ಅರ್ಥ ಆಗುತ್ತೆ ಅಂದರೆ, ನಮಗೆ ಇಂಥ ವಿಷಯಗಳಿಂದ ಸಿಗುವ ಸಂತೋಷ ಶಾಶ್ವತವಾಗಿರುವುದಿಲ್ಲ. ಹಾಗಾದರೆ, ಜೀವನದಲ್ಲಿ ಕಷ್ಟ ಬಂದಾಗಲೂ ಶಾಶ್ವತವಾಗಿರುವ ಸಂತೋಷ ಇದೆಯಾ? ಇದೆ. ಯಾಕೆಂದರೆ ಸಮುವೇಲ, ದಾವೀದ ಮತ್ತು ಬೇರೆಯವರು ಕೂಡ ಕಷ್ಟಗಳು ಬಂದಾಗ ಸಂತೋಷ ಕಳಕೊಳ್ಳಲಿಲ್ಲ.

ಶಾಶ್ವತ ಸಂತೋಷ ಕೊಡುವ ವಿಷಯಗಳು

ಯೇಸುವಿಗೆ ನಿಜವಾದ ಸಂತೋಷ ಅಂದರೆ ಏನು ಅಂತ ಗೊತ್ತಿತ್ತು. ಭೂಮಿಗೆ ಬರುವ ಮುಂಚೆ ಆತನು ಯೆಹೋವನ “ಮುಂದೆ ವಿನೋದಿಸುತ್ತಾ” ಅಥವಾ ಆನಂದಿಸುತ್ತಾ ಇದ್ದನು ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 8:30) ಆದರೆ ಆತನು ಭೂಮಿಗೆ ಬಂದಾಗ ಕಠಿಣವಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಏನೇ ಆದರೂ ಯೇಸು ತನ್ನ ತಂದೆಯ ಇಷ್ಟವನ್ನು ಮಾಡುವುದರಲ್ಲಿ ಸಂತೋಷ ಕಂಡುಕೊಂಡನು. (ಯೋಹಾ. 4:34) ತನ್ನ ಜೀವನದ ನೋವುಭರಿತ ಕೊನೇ ತಾಸುಗಳಲ್ಲಿ ಆತನ ಮನಸ್ಥಿತಿ ಹೇಗಿತ್ತು? “ತನ್ನ ಮುಂದೆ ಇಡಲ್ಪಟ್ಟಿದ್ದ ಆನಂದಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು” ಸಹಿಸಿಕೊಂಡನು ಅಂತ ನಾವು ಬೈಬಲಲ್ಲಿ ಓದುತ್ತೇವೆ. (ಇಬ್ರಿ. 12:2) ಹೀಗಿರುವುದರಿಂದ ನಿಜ ಸಂತೋಷದ ಬಗ್ಗೆ ಯೇಸು ಹೇಳಿದ ಎರಡು ಮಾತುಗಳಿಂದ ನಾವು ತುಂಬ ಕಲಿಯಬಹುದು.

ಒಮ್ಮೆ ಯೇಸುವಿನ 70 ಶಿಷ್ಯರು ಸೇವೆ ಮುಗಿಸಿಕೊಂಡು ತುಂಬ ಸಂತೋಷದಿಂದ ವಾಪಸ್‌ ಬಂದರು. ಅವರು ಅನೇಕ ಅದ್ಭುತಕಾರ್ಯಗಳನ್ನು ಮಾಡಿದ್ದರು, ದೆವ್ವಗಳನ್ನೂ ಬಿಡಿಸಿದ್ದರು. ಆದರೆ ಯೇಸು ಅವರಿಗೆ “ದೆವ್ವಗಳು ನಿಮಗೆ ಅಧೀನಮಾಡಲ್ಪಟ್ಟಿವೆ ಎಂದು ನೀವು ಹರ್ಷಿಸದೆ, ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಬರೆಯಲ್ಪಟ್ಟಿವೆ ಎಂದು ಹರ್ಷಿಸಿರಿ” ಅಂತ ಹೇಳಿದನು. (ಲೂಕ 10:1-9, 17, 20) ಹೌದು, ನಮಗೆ ಸಿಗುವ ಯಾವ ವಿಶೇಷ ನೇಮಕಕ್ಕಿಂತಲೂ ಯೆಹೋವನ ಮೆಚ್ಚುಗೆ ತುಂಬ ಮುಖ್ಯ ಮತ್ತು ಇದರಿಂದ ನಮಗೆ ತುಂಬ ಸಂತೋಷ ಸಿಗುತ್ತದೆ.

ಇನ್ನೊಂದು ಸಂದರ್ಭದಲ್ಲಿ ಯೇಸು ತುಂಬ ಜನರ ಮುಂದೆ ಮಾತಾಡುತ್ತಿದ್ದಾಗ ಒಬ್ಬ ಯೆಹೂದಿ ಸ್ತ್ರೀಗೆ ಆತನ ಬೋಧನೆ ತುಂಬ ಇಷ್ಟವಾಯಿತು. ಇಂಥ ಒಳ್ಳೇ ಬೋಧಕನನ್ನು ಹೆತ್ತ ತಾಯಿಗೆ ತನ್ನ ಮಗನ ಬಗ್ಗೆ ಎಷ್ಟು ಸಂತೋಷ ಆಗಿರಬಹುದು ಎಂದು ಹೇಳಿದಳು. ಆದರೆ ಯೇಸು ಅವಳನ್ನು ತಿದ್ದುತ್ತಾ “ಇಲ್ಲ, ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದನು. (ಲೂಕ 11:27, 28) ಹೆಮ್ಮೆಪಡುವಂಥ ವಿಷಯಗಳನ್ನು ನಮ್ಮ ಮಕ್ಕಳು ಮಾಡಿದಾಗ ನಮಗೆ ಸಂತೋಷ ಆಗುತ್ತದೆ. ಆದರೆ ಯೆಹೋವನ ಮಾತನ್ನು ಕೇಳುವುದರಿಂದ ಮತ್ತು ಆತನ ಜೊತೆ ಒಳ್ಳೇ ಸಂಬಂಧ ಇಟ್ಟುಕೊಳ್ಳುವುದರಿಂದ ಸಿಗುವ ಸಂತೋಷ ಸದಾಕಾಲ ಇರುತ್ತದೆ.

ಯೆಹೋವನು ನಮ್ಮನ್ನು ಮೆಚ್ಚಿಕೊಂಡಿದ್ದಾನೆ ಎಂದು ತಿಳಿದಾಗ ನಮಗೆ ತುಂಬ ಸಂತೋಷ ಆಗುತ್ತದೆ. ಕಷ್ಟಗಳು ನೋವನ್ನು ತಂದರೂ ಅವುಗಳಿಗೆ ನಮ್ಮ ಈ ಸಂತೋಷವನ್ನು ಕಿತ್ತುಕೊಳ್ಳಲು ಆಗುವುದಿಲ್ಲ. ನಿಜ ಏನೆಂದರೆ, ಕಷ್ಟ ಬಂದರೂ ನಂಬಿಕೆಯಿಂದ ಇದ್ದರೆ ನಮ್ಮ ಸಂತೋಷ ಇನ್ನೂ ಹೆಚ್ಚಾಗುತ್ತದೆ. (ರೋಮ. 5:3-5) ಅಲ್ಲದೆ ಯೆಹೋವನು ತನ್ನನ್ನು ನಂಬುವವರಿಗೆ ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. ಆನಂದ ಅನ್ನುವುದು ಅದರ ಫಲದ ಅಂಶವಾಗಿದೆ. (ಗಲಾ. 5:22) ‘ನೀತಿವಂತರು ಯೆಹೋವನಲ್ಲಿ ಆನಂದಪಡುತ್ತಾರೆ’ ಎಂದು ಕೀರ್ತನೆ 64:10​ರಲ್ಲಿ ಯಾಕೆ ಬರೆದಿದೆ ಎಂದು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಆನಂದದಿಂದ ಇರಲು ಜಾನ್‌ಗೆ ಯಾವುದು ಸಹಾಯ ಮಾಡಿತು?

ಡೈನ ಮತ್ತು ಜಾನ್‌ ಸಮಸ್ಯೆಗಳನ್ನು ಎದುರಿಸಿದರೂ ಹೇಗೆ ಸಂತೋಷವಾಗಿ ಉಳಿಯಲು ಸಾಧ್ಯವಾಯಿತು ಎಂದೂ ಇದು ತಿಳಿಸುತ್ತದೆ. ಡೈನ ಹೇಳುತ್ತಾರೆ: “ಚಿಕ್ಕ ಮಕ್ಕಳು ತಂದೆ-ತಾಯಿಯ ಆಶ್ರಯದಲ್ಲಿ ಇರುವಂತೆ ನಾನು ಯೆಹೋವನ ಆಶ್ರಯದಲ್ಲಿದ್ದೇನೆ. ನಗುಮುಖದಿಂದ ಸುವಾರ್ತೆ ಸಾರುತ್ತಾ ಇರಲು ಯೆಹೋವನು ನನಗೆ ಶಕ್ತಿ ಕೊಟ್ಟಿದ್ದಾನೆ ಅಂತ ಅನಿಸುತ್ತದೆ.” ಜಾನ್‌ ತನ್ನ ನೇಮಕವನ್ನು ಬಿಟ್ಟುಕೊಡಬೇಕಾದಾಗಲೂ ಸೇವೆಯಲ್ಲಿ ಸಂತೋಷವಾಗಿ ಹಾಗೂ ಕಾರ್ಯಮಗ್ನರಾಗಿ ಇರಲು ಅವರಿಗೆ ಯಾವುದು ಸಹಾಯ ಮಾಡಿತು? “1998​ರಲ್ಲಿ ಶುಶ್ರೂಷಾ ತರಬೇತಿ ಶಾಲೆಯಲ್ಲಿ ಕಲಿಸಲು ನೇಮಕ ಪಡೆದಾಗಿಂದ ನಾನು ತುಂಬ ವೈಯಕ್ತಿಕ ಅಧ್ಯಯನ ಮಾಡಿದ್ದೇನೆ.” ಯೆಹೋವನು ಏನೇ ನೇಮಕ ಕೊಟ್ಟರೂ ಅದನ್ನು ಮಾಡಲು ಅವರಿಗೂ ಅವರ ಹೆಂಡತಿಗೂ ಇಷ್ಟ ಇದ್ದದರಿಂದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸುಲಭವಾಗಿತ್ತು ಎಂದು ಹೇಳುತ್ತಾರೆ. “ಇದನ್ನು ಮಾಡಿದ್ದಕ್ಕೆ ನಮಗೆ ಯಾವುದೇ ವಿಷಾದ ಇಲ್ಲ” ಎಂದೂ ಹೇಳುತ್ತಾರೆ.

ಕೀರ್ತನೆ 64:10​ರಲ್ಲಿ ಹೇಳಿರುವ ಮಾತು ನಿಜ ಎಂದು ಇನ್ನೂ ಅನೇಕರು ಅನುಭವದಿಂದ ತಿಳುಕೊಂಡಿದ್ದಾರೆ. ಅಮೆರಿಕದ ಬೆತೆಲಿನಲ್ಲಿ 30ಕ್ಕೂ ಹೆಚ್ಚು ವರ್ಷ ಸೇವೆ ಮಾಡಿದ ಒಂದು ದಂಪತಿಯ ಉದಾಹರಣೆ ನೋಡಿ. ಅವರು ವಿಶೇಷ ಪಯನೀಯರರಾಗಿ ನೇಮಕ ಪಡೆದರು. “ನಮಗೆ ತುಂಬ ಇಷ್ಟ ಇರುವುದನ್ನು ಕಳಕೊಂಡಾಗ ಬೇಜಾರಾಗುವುದು ಸಹಜ” ಎಂದು ಒಪ್ಪಿಕೊಳ್ಳುತ್ತಾರೆ. “ಆದರೆ ಬೇಜಾರು ಮಾಡಿಕೊಂಡೇ ಇರಕ್ಕಾಗಲ್ಲ” ಅಂತನೂ ಹೇಳುತ್ತಾರೆ. ಅವರು ನೇಮಕ ಪಡೆದಿದ್ದ ಊರಿಗೆ ಬಂದ ಕೂಡಲೇ ಸಭೆಯವರ ಜೊತೆ ಸೇವೆ ಮಾಡಲು ಆರಂಭಿಸಿದರು. “ನಾವು ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಪ್ರಾರ್ಥನೆ ಮಾಡಿದ್ವಿ. ಆ ಪ್ರಾರ್ಥನೆಗಳಿಗೆ ಉತ್ತರ ಸಿಗುವುದನ್ನು ನೋಡಿದಾಗ ನಮಗೆ ಉತ್ತೇಜನ ಸಿಕ್ಕಿತು, ಸಂತೋಷವಾಯಿತು. ನಾವು ಬಂದ ಸ್ವಲ್ಪ ಸಮಯದಲ್ಲೇ ಸಭೆಯಲ್ಲಿರುವ ಬೇರೆಯವರೂ ಪಯನೀಯರ್‌ ಸೇವೆ ಆರಂಭಿಸಿದರು ಮತ್ತು ದೇವರ ಆಶೀರ್ವಾದದಿಂದ ನಮಗೆ ಎರಡು ಪ್ರಗತಿಪರ ಬೈಬಲ್‌ ಅಧ್ಯಯನ ಸಿಕ್ಕಿತು.”

“ಸದಾ ಉಲ್ಲಾಸಿಸಿರಿ”

ನಿಜ, ಯಾವಾಗಲೂ ಸಂತೋಷವಾಗಿರುವುದು ಸುಲಭವಲ್ಲ. ಕೆಲವೊಮ್ಮೆ ಬೇಜಾರೂ ಆಗುತ್ತದೆ. ಆದರೆ ಕೀರ್ತನೆ 64:10​ರಲ್ಲಿರುವ ಮಾತುಗಳ ಮೂಲಕ ಯೆಹೋವನು ನಮ್ಮನ್ನು ಸಂತೈಸುತ್ತಾನೆ. ನಮಗೆ ನಿರುತ್ಸಾಹ ಆದಾಗಲೂ ನಂಬಿಗಸ್ತರಾಗಿ ಉಳಿದರೆ ‘ಯೆಹೋವನಲ್ಲಿ ಆನಂದಪಡುತ್ತೇವೆ’ ಎಂಬ ಆಶ್ವಾಸನೆ ಇರುತ್ತದೆ. ಯೆಹೋವನು ಮಾತು ಕೊಟ್ಟಿರುವ ‘ನೂತನಾಕಾಶಮಂಡಲ ನೂತನಭೂಮಂಡಲ’ ಬರುವ ಸಮಯಕ್ಕಾಗಿಯೂ ನಾವು ಎದುರುನೋಡಬಹುದು. ಆಗ ಎಲ್ಲರೂ ಪರಿಪೂರ್ಣವಾಗಿ ಇರುತ್ತಾರೆ ಮತ್ತು ಯೆಹೋವನು ಮಾಡಲಿರುವ ಎಲ್ಲದಕ್ಕೂ ‘ಹರ್ಷಗೊಂಡು ಸದಾ ಉಲ್ಲಾಸದಿಂದ’ ಇರುತ್ತಾರೆ.—ಯೆಶಾ. 65:17, 18.

ಅದು ಹೇಗಿರುತ್ತೆ ಅಂತ ಸ್ವಲ್ಪ ಯೋಚಿಸಿ ನೋಡಿ. ನಮ್ಮ ಆರೋಗ್ಯ ಎಂದೂ ಹಾಳಾಗಲ್ಲ. ಪ್ರತಿದಿನವನ್ನು ನವಚೈತನ್ಯದಿಂದ ಶುರುಮಾಡುತ್ತೀವಿ. ಹಿಂದೆ ನಮಗೆ ದುಃಖ ತಂದಂಥ ಯಾವುದೇ ವಿಷಯ ಇದ್ದಿದ್ದರೂ ಅದನ್ನು ನೆನಸಿ ನಾವು ಮುಂದೆ ಕಷ್ಟಪಡಲ್ಲ. “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು” ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. ಮೃತಪಟ್ಟ ನಮ್ಮ ಪ್ರಿಯ ಜನರನ್ನು ನಾವು ಸ್ವಾಗತಿಸುತ್ತೇವೆ. ಆಗ, ಯೇಸು 12 ವರ್ಷದ ಬಾಲಕಿಯನ್ನು ಪುನರುತ್ಥಾನ ಮಾಡಿದಾಗ ಅವಳ ತಂದೆ-ತಾಯಿಗೆ ಹೇಗನಿಸಿತ್ತೋ ಹಾಗೇ ಅನಿಸುವುದು: “ಅವರು ಆನಂದಪರವಶರಾದರು.” (ಮಾರ್ಕ 5:42) ಕೊನೆಗೆ ಭೂಮಿಯಲ್ಲಿರುವ ಪ್ರತಿಯೊಬ್ಬರು ನಿಜಕ್ಕೂ ನೀತಿವಂತರಾಗಿರುವರು ಮತ್ತು ಶಾಶ್ವತವಾಗಿ ‘ಯೆಹೋವನಲ್ಲಿ ಆನಂದಪಡುವರು.’