ಒಂದನೇ ಸಮುವೇಲ 8:1-22

  • ರಾಜ ಬೇಕು ಅಂತ ಇಸ್ರಾಯೇಲ್ಯರ ಒತ್ತಾಯ (1-9)

  • ಸಮುವೇಲನ ಎಚ್ಚರಿಕೆ (10-18)

  • ರಾಜ ಬೇಕನ್ನುವ ಬೇಡಿಕೆಗೆ ಯೆಹೋವನ ಸಮ್ಮತಿ (19-22)

8  ಸಮುವೇಲನಿಗೆ ವಯಸ್ಸಾದಾಗ ಅವನು ತನ್ನ ಮಕ್ಕಳನ್ನ ಇಸ್ರಾಯೇಲ್ಯರಿಗೆ ನ್ಯಾಯಾಧೀಶರನ್ನಾಗಿ ನೇಮಿಸಿದ.  ಅವನ ಮೊದಲ ಮಗನ ಹೆಸ್ರು ಯೋವೇಲ, ಎರಡನೇ ಮಗನ ಹೆಸ್ರು ಅಬೀಯ.+ ಅವರು ಬೇರ್ಷೆಬದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡ್ತಿದ್ರು.  ಆದ್ರೆ ಸಮುವೇಲನ ಮಕ್ಕಳು ಅವನ ತರ ಇರಲಿಲ್ಲ. ಮೋಸದಿಂದ ಹಣ ಮಾಡ್ತಿದ್ರು,+ ಲಂಚ+ ತಗೊಳ್ತಿದ್ರು, ತಪ್ಪು ತೀರ್ಪು ಕೊಟ್ಟು ಅನ್ಯಾಯ ಮಾಡ್ತಿದ್ರು.+  ಸ್ವಲ್ಪ ಸಮಯ ಆದ್ಮೇಲೆ ಇಸ್ರಾಯೇಲಿನ ಎಲ್ಲ ಹಿರಿಯರು ಸೇರಿ ರಾಮದಲ್ಲಿದ್ದ ಸಮುವೇಲನ ಹತ್ರ ಬಂದ್ರು.  ಅವರು ಸಮುವೇಲನಿಗೆ “ನೋಡು, ನಿನಗೆ ತುಂಬ ವಯಸ್ಸು ಆಯ್ತು. ನಿನ್ನ ಮಕ್ಕಳು ನೋಡಿದ್ರೆ ನಿನ್ನ ತರ ಅಲ್ಲ. ಹಾಗಾಗಿ ನ್ಯಾಯತೀರಿಸೋಕೆ ಬೇರೆ ಜನಾಂಗಗಳಿಗೆ ಇರೋ ತರ ನಮಗೂ ಒಬ್ಬ ರಾಜನನ್ನ ನೇಮಿಸು”+ ಅಂದ್ರು.  “ನ್ಯಾಯತೀರಿಸೋಕೆ ನಮಗೆ ಒಬ್ಬ ರಾಜನನ್ನ ಕೊಡು” ಅಂತ ಅವರು ಕೇಳಿದಾಗ ಸಮುವೇಲನಿಗೆ ತುಂಬ ನೋವಾಯ್ತು. ಆಗ ಸಮುವೇಲ ಯೆಹೋವನಿಗೆ ಪ್ರಾರ್ಥಿಸಿದ.  ಅದಕ್ಕೆ ಯೆಹೋವ ಸಮುವೇಲನಿಗೆ “ಜನ್ರು ಹೇಳೋ ಪ್ರತಿಯೊಂದು ಮಾತನ್ನ ಕೇಳು. ಯಾಕಂದ್ರೆ ಅವರು ನಿನ್ನನ್ನಲ್ಲ, ನನ್ನನ್ನ ಬೇಡ ಅಂತ ಹೇಳಿದ್ದಾರೆ. ಅವ್ರ ರಾಜನಾಗಿರೋ ನನ್ನನ್ನ ಬೇಡ ಅಂತಿದ್ದಾರೆ.+  ಈಜಿಪ್ಟಿಂದ ನಾನು ಅವ್ರನ್ನ ಬಿಡಿಸ್ಕೊಂಡು ಬಂದ ದಿನದಿಂದ ಇವತ್ತಿನ ತನಕ ಅವರು ಇದನ್ನೇ ಮಾಡ್ತಿದ್ದಾರೆ. ಅವರು ನನ್ನನ್ನ ಬಿಟ್ಟು+ ಬೇರೆ ದೇವರುಗಳನ್ನ ಆರಾಧನೆ ಮಾಡ್ತಿದ್ದಾರೆ.+ ಅವರು ನನಗೆ ಮಾಡಿದ ಹಾಗೇ ನಿನಗೂ ಮಾಡ್ತಿದ್ದಾರೆ.  ಈಗ ನೀನು ಅವರು ಹೇಳೋ ಹಾಗೆ ಕೇಳು. ಆದ್ರೆ ಅವ್ರಿಗೆ ದೊಡ್ಡ ಎಚ್ಚರಿಕೆ ಕೊಡು. ಅವ್ರನ್ನ ಆಳೋ ರಾಜನಿಗೆ ಅವ್ರ ಹತ್ರ ಏನು ಬೇಕಾದ್ರೂ ಕೇಳೋ ಹಕ್ಕಿದೆ ಅಂತ ಹೇಳು” ಅಂದನು. 10  ರಾಜ ಬೇಕು ಅಂತ ಕೇಳ್ತಿದ್ದ ಜನ್ರಿಗೆ ಯೆಹೋವನ ಮಾತುಗಳನ್ನೆಲ್ಲ ಸಮುವೇಲ ಹೇಳಿದ. 11  ಸಮುವೇಲ ಹೀಗಂದ “ನಿಮ್ಮನ್ನ ಆಳೋ ರಾಜನಿಗೆ ಈ ಬೇಡಿಕೆಗಳನ್ನ ನಿಮ್ಮ ಮುಂದಿಡೋ ಹಕ್ಕಿರುತ್ತೆ:+ ಅವನು ನಿಮ್ಮ ಗಂಡು ಮಕ್ಕಳನ್ನ ತಗೊಂಡು+ ಅವನ ರಥಗಳ ಸಾರಥಿಗಳನ್ನಾಗಿ,+ ಅವನ ಕುದುರೆ ಸವಾರರನ್ನಾಗಿ+ ಮಾಡ್ಕೊಳ್ತಾನೆ. ಕೆಲವರು ಅವನ ರಥಗಳ ಮುಂದೆ ಓಡಬೇಕಾಗುತ್ತೆ. 12  ರಾಜ ತನಗಾಗಿ ಕೆಲವ್ರನ್ನ ಸಾವಿರ ಜನ್ರ ಮೇಲೆ ಅಧಿಪತಿಗಳನ್ನಾಗಿ,+ ಇನ್ನೂ ಕೆಲವ್ರನ್ನ ಐವತ್ತು ಜನ್ರ ಮೇಲೆ ಅಧಿಪತಿಗಳನ್ನಾಗಿ+ ನೇಮಿಸ್ತಾನೆ. ಕೆಲವರು ಅವನ ಭೂಮಿಯನ್ನ ಉಳುಮೆ ಮಾಡ್ತಾರೆ,+ ಪೈರನ್ನ ಕೊಯ್ತಾರೆ.+ ಅವನ ಯುದ್ಧದ ಆಯುಧಗಳನ್ನ, ಅವನ ರಥಗಳಿಗೆ ಬೇಕಾಗೋ ಸಲಕರಣೆಗಳನ್ನ ತಯಾರಿಸ್ತಾರೆ.+ 13  ಅವನು ನಿಮ್ಮ ಹೆಣ್ಣು ಮಕ್ಕಳನ್ನ ಸುಗಂಧದ್ರವ್ಯ ಮಾಡೋಕೆ, ಅಡುಗೆ ಮಾಡೋಕೆ, ರೊಟ್ಟಿ ಸುಡೋಕೆ ಕೆಲಸಕ್ಕೆ ಇಟ್ಕೊಳ್ತಾನೆ.+ 14  ನಿಮ್ಮ ಹೊಲದ, ದ್ರಾಕ್ಷಿ ತೋಟದ, ಆಲಿವ್‌ ತೋಪುಗಳ+ ಫಲಗಳನ್ನ ನಿಮ್ಮಿಂದ ತಗೊಳ್ತಾನೆ. ಅವುಗಳನ್ನ ತನ್ನ ಸೇವಕರಿಗೆ ಕೊಡ್ತಾನೆ. 15  ಅವನು ನಿಮ್ಮ ಹೊಲಗಳ ಧಾನ್ಯಗಳಲ್ಲಿ, ದ್ರಾಕ್ಷಿ ತೋಟಗಳ ಹಣ್ಣುಗಳಲ್ಲಿ ಹತ್ತರಲ್ಲಿ ಒಂದು ಭಾಗ ತಗೊಳ್ತಾನೆ. ಅವುಗಳನ್ನ ತನ್ನ ಆಸ್ಥಾನದ ಅಧಿಕಾರಿಗಳಿಗೆ, ಸೇವಕರಿಗೆ ಕೊಡ್ತಾನೆ. 16  ನಿಮ್ಮ ಆಳುಗಳನ್ನ, ಆಡು-ಕುರಿಗಳನ್ನ, ಕತ್ತೆಗಳನ್ನ ತಗೊಳ್ತಾನೆ. ಅವುಗಳನ್ನೆಲ್ಲ ತನ್ನ ಕೆಲಸಕ್ಕಾಗಿ ಬಳಸ್ಕೊಳ್ತಾನೆ.+ 17  ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದು ಭಾಗ ತಗೊಳ್ತಾನೆ.+ ನೀವು ಅವನ ದಾಸರಾಗಿ ಬಿಡ್ತೀರ. 18  ನೀವು ನಿಮಗಾಗಿ ಆರಿಸ್ಕೊಂಡ ರಾಜನಿಂದಾಗಿ ಕಣ್ಣೀರು ಹಾಕೋ ದಿನ ಬರುತ್ತೆ.+ ಆದ್ರೆ ಅವತ್ತು ಯೆಹೋವ ನಿಮಗೆ ಉತ್ತರ ಕೊಡಲ್ಲ.” 19  ಆದ್ರೆ ಜನ ಸಮುವೇಲನ ಮಾತು ಕೇಳಲಿಲ್ಲ. ಅವರು “ಏನಾದ್ರೂ ಸರಿ, ನಮಗೊಬ್ಬ ರಾಜ ಬೇಕೇ ಬೇಕು. 20  ಆಗ ನಾವು ಕೂಡ ಬೇರೆ ಎಲ್ಲ ದೇಶಗಳ ತರ ಆಗ್ತೀವಿ. ನಮ್ಮ ರಾಜ ನಮ್ಮನ್ನ ಆಳ್ತಾನೆ.* ನಮ್ಮನ್ನ ಮುನ್ನಡೆಸ್ತಾನೆ. ನಮ್ಮ ಶತ್ರುಗಳ ವಿರುದ್ಧ ಯುದ್ಧ ಮಾಡ್ತಾನೆ” ಅಂದ್ರು. 21  ಜನ ಹೇಳಿದ ಮಾತನ್ನೆಲ್ಲ ಕೇಳಿದ ಮೇಲೆ ಸಮುವೇಲ ಆ ಮಾತುಗಳನ್ನ ಯೆಹೋವನಿಗೆ ಹೇಳಿದ. 22  ಆಗ ಯೆಹೋವ ಸಮುವೇಲನಿಗೆ “ಅವ್ರ ಮಾತು ಕೇಳು. ಅವ್ರನ್ನ ಆಳೋಕೆ ಒಬ್ಬ ರಾಜನನ್ನ ನೇಮಿಸು”+ ಅಂದನು. ಸಮುವೇಲ ಇಸ್ರಾಯೇಲ್‌ ಗಂಡಸ್ರಿಗೆ “ನಿಮ್ಮನಿಮ್ಮ ಪಟ್ಟಣಗಳಿಗೆ ವಾಪಸ್‌ ಹೋಗಿ” ಅಂದ.

ಪಾದಟಿಪ್ಪಣಿ

ಅಥವಾ “ನಮಗೆ ನ್ಯಾಯ ತೀರಿಸ್ತಾನೆ.”