ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹ ಜೀವನದ ಆರಂಭ ಮತ್ತು ಉದ್ದೇಶ

ವಿವಾಹ ಜೀವನದ ಆರಂಭ ಮತ್ತು ಉದ್ದೇಶ

“ಯೆಹೋವದೇವರು—ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ; ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಅಂದನು.”—ಆದಿ. 2:18.

ಗೀತೆಗಳು: 36, 11

1, 2. (ಎ) ವಿವಾಹ ಜೀವನದ ಆರಂಭ ಹೇಗಾಯಿತು? (ಬಿ) ವಿವಾಹ ಜೀವನದ ಬಗ್ಗೆ ಮೊದಲ ಪುರುಷ ಮತ್ತು ಸ್ತ್ರೀಗೆ ಏನು ಗೊತ್ತಾಗಿರಬೇಕು? (ಲೇಖನದ ಆರಂಭದ ಚಿತ್ರ ನೋಡಿ.)

ಗಂಡುಹೆಣ್ಣು ಮದುವೆಯಾಗುವುದು ಸಹಜ, ಸ್ವಾಭಾವಿಕ. ಆದರೆ ವಿವಾಹ ಜೀವನದ ಆರಂಭ ಹೇಗಾಯಿತು? ಅದರ ಉದ್ದೇಶವೇನು? ಇದನ್ನು ತಿಳಿದುಕೊಂಡರೆ ವಿವಾಹದ ಬಗ್ಗೆ ಯೋಗ್ಯ ಮನೋಭಾವವಿರಲು, ವಿವಾಹದಿಂದ ಸಿಗುವ ಆಶೀರ್ವಾದಗಳನ್ನು ಪೂರ್ಣವಾಗಿ ಆನಂದಿಸಲು ಆಗುತ್ತದೆ. ಆದ್ದರಿಂದ ಯೆಹೋವನು ಮೊದಲ ಮನುಷ್ಯ ಆದಾಮನನ್ನು ಸೃಷ್ಟಿಸಿದ ಸಮಯಕ್ಕೆ ಹೋಗೋಣ. ಪ್ರಾಣಿಗಳಿಗೆ ಹೆಸರನ್ನಿಡುವ ಕೆಲಸವನ್ನು ಆತನು ಆದಾಮನಿಗೆ ಕೊಟ್ಟನು. ಆ ಕೆಲಸ ಮಾಡುತ್ತಿದ್ದಾಗ ಎಲ್ಲ ಪ್ರಾಣಿಗಳು ಜೋಡಿಜೋಡಿ ಆಗಿರುವುದನ್ನು ಆದಾಮ ಗಮನಿಸಿದ. ಆದರೆ ಅವನಿಗೆ “ಸರಿಬೀಳುವ ಸಹಕಾರಿ ಕಾಣಿಸಲಿಲ್ಲ.” ಆದ್ದರಿಂದ ದೇವರು ಅವನಿಗೆ ಗಾಢ ನಿದ್ರೆ ಬರಿಸಿ ಅವನ ಪಕ್ಕೆಲುಬನ್ನು ತೆಗೆದು ಅದರಿಂದ ಸ್ತ್ರೀಯನ್ನು ಸೃಷ್ಟಿಸಿದನು. ಬಳಿಕ ಅವಳನ್ನು ಆದಾಮನ ಬಳಿ ಕರೆತಂದು ಹೆಂಡತಿಯಾಗಿ ಕೊಟ್ಟನು. (ಆದಿಕಾಂಡ 2:20-24 ಓದಿ.) ವಿವಾಹ ಜೀವನ ಯೆಹೋವನು ಕೊಟ್ಟಿರುವ ಉಡುಗೊರೆ ಎಂದು ಇದು ತೋರಿಸುತ್ತದೆ.

2 ಆಗ ಏದೆನ್‌ ತೋಟದಲ್ಲಿ ಯೆಹೋವನು ಹೇಳಿದ ಈ ಮಾತುಗಳನ್ನು ಹಲವಾರು ವರ್ಷಗಳ ನಂತರ ಯೇಸು ಪುನರುಚ್ಚರಿಸಿದನು: “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು.” (ಮತ್ತಾ. 19:4, 5) ಆದಾಮನ ಪಕ್ಕೆಲುಬಿನಿಂದ ಮೊದಲ ಸ್ತ್ರೀ ಸೃಷ್ಟಿಯಾದ್ದರಿಂದ ಅವರಿಬ್ಬರಿಗೂ ತಮ್ಮ ಬಂಧ ಎಷ್ಟು ಆಪ್ತವೆಂದು ಗೊತ್ತಾಗಿರಬೇಕು. ಗಂಡಹೆಂಡತಿ ವಿಚ್ಛೇದನ ಪಡೆಯುವುದನ್ನು ಅಥವಾ ಒಬ್ಬರಿಗಿಂತ ಹೆಚ್ಚು ವಿವಾಹಸಂಗಾತಿ ಇರುವುದನ್ನು ಯೆಹೋವನು ಉದ್ದೇಶಿಸಿರಲಿಲ್ಲ.

ವಿವಾಹ ಯೆಹೋವನ ಉದ್ದೇಶದ ಭಾಗ

3. ವಿವಾಹ ಜೀವನದ ಒಂದು ಮುಖ್ಯ ಉದ್ದೇಶವೇನಾಗಿತ್ತು?

3 ಆದಾಮನಿಗೆ ತನ್ನ ಹೆಂಡತಿಯನ್ನು ನೋಡಿ ತುಂಬ ಖುಷಿ ಆಯಿತು. ಆಕೆಗೆ ನಂತರ ಹವ್ವ ಎಂದು ಹೆಸರಿಟ್ಟನು. ಅವಳು ಅವನಿಗೆ ಸರಿಬೀಳುವ ಸಹಕಾರಿಣಿಯಾದಳು. ಹೀಗೆ ಆದಾಮಹವ್ವರು ಗಂಡಹೆಂಡತಿಯಾಗಿ ಸಂತೋಷದಿಂದಿದ್ದರು. (ಆದಿ. 2:18) ವಿವಾಹ ಜೀವನದ ಒಂದು ಮುಖ್ಯ ಉದ್ದೇಶ ಭೂಮಿಯನ್ನು ಮಾನವರಿಂದ ತುಂಬಿಸುವುದೇ ಆಗಿತ್ತು. (ಆದಿ. 1:28) ಗಂಡುಹೆಣ್ಣು ಮಕ್ಕಳಿಗೆ ತಂದೆತಾಯಿ ಮೇಲೆ ಪ್ರೀತಿ ಇರುತ್ತದಾದರೂ, ಮದುವೆಯಾದ ಮೇಲೆ ಹೆತ್ತವರನ್ನು ಬಿಟ್ಟು ಸ್ವಂತ ಸಂಸಾರ ನಡೆಸಬೇಕಿತ್ತು. ಹೀಗೆ ಮಾನವರು ಇಡೀ ಭೂಮಿಯನ್ನು ತುಂಬಿಸಿ, ಪರದೈಸಾಗಿ ಮಾಡಬೇಕಿತ್ತು.

4. ಮೊದಲ ವಿವಾಹಕ್ಕೆ ಏನಾಯಿತು?

4 ಆದಾಮಹವ್ವರು ಯೆಹೋವನಿಗೆ ಅವಿಧೇಯರಾದಾಗ ಆ ಮೊದಲ ವಿವಾಹಕ್ಕೆ ಹಾನಿಬಂತು. “ಪುರಾತನ ಸರ್ಪ”ವಾದ ಪಿಶಾಚ ಸೈತಾನನು ಹವ್ವಳಿಗೆ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷ”ದ ಹಣ್ಣು ತಿಂದರೆ ವಿಶೇಷ ಜ್ಞಾನ ಸಿಗುತ್ತದೆ, ಒಳ್ಳೇದು ಕೆಟ್ಟದ್ದು ಯಾವುದೆಂದು ಅವಳೇ ನಿರ್ಣಯಿಸಲು ಆಗುತ್ತದೆಂದು ಹೇಳಿ ವಂಚಿಸಿದನು. ಆ ಹಣ್ಣನ್ನು ತಿನ್ನಲು ನಿರ್ಣಯಿಸುವ ಮುಂಚೆ ಹವ್ವಳು ಕುಟುಂಬದ ಶಿರಸ್ಸಾದ ಆದಾಮನಿಗೆ ಗೌರವ ತೋರಿಸಿ ಅವನೊಂದಿಗೆ ಅದರ ಬಗ್ಗೆ ಮೊದಲು ಮಾತಾಡಬೇಕಿತ್ತು. ಆಕೆ ಹಾಗೆ ಮಾಡಲಿಲ್ಲ. ಆದಾಮನು ಸಹ ದೇವರಿಗೆ ವಿಧೇಯತೆ ತೋರಿಸುವ ಬದಲಿಗೆ ಹೆಂಡತಿಯ ಮಾತು ಕೇಳಿ ಹಣ್ಣನ್ನು ತಿಂದನು.—ಪ್ರಕ. 12:9; ಆದಿ. 2:9, 16, 17; 3:1-6.

5. ಆದಾಮಹವ್ವರು ಯೆಹೋವನಿಗೆ ಕೊಟ್ಟ ಉತ್ತರಗಳಿಂದ ನಾವೇನು ಕಲಿಯಬಹುದು?

5 ಇದರ ಬಗ್ಗೆ ಯೆಹೋವನು ಅವರನ್ನು ಪ್ರಶ್ನಿಸಿದಾಗ ಆದಾಮನು ಹೆಂಡತಿಯ ಮೇಲೆ ತಪ್ಪು ಹೊರಿಸಿದನು. “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು” ಎಂದು ಹೇಳಿದನು. ಸರ್ಪವು ತನ್ನನ್ನು ವಂಚಿಸಿತೆಂದು ಹವ್ವಳು ಅದರ ಮೇಲೆ ತಪ್ಪು ಹೊರಿಸಿದಳು. (ಆದಿ. 3:12, 13) ಹೀಗೆ ಆದಾಮಹವ್ವ ತಮ್ಮ ಅವಿಧೇಯತೆಗೆ ಕುಂಟು ನೆಪಗಳನ್ನು ಕೊಟ್ಟರು! ಆದ್ದರಿಂದ ಯೆಹೋವನು ಆ ದಂಗೆಕೋರರಿಗೆ ಶಿಕ್ಷೆ ವಿಧಿಸಿದನು. ಅವರಿಂದ ನಮಗೊಂದು ಎಚ್ಚರಿಕೆಯ ಪಾಠವಿದೆ. ದಾಂಪತ್ಯವು ಸಫಲವಾಗಬೇಕಾದರೆ ಗಂಡಹೆಂಡತಿ ಇಬ್ಬರೂ ಯೆಹೋವನಿಗೆ ವಿಧೇಯರಾಗಬೇಕು. ಮಾತ್ರವಲ್ಲ, ತಮ್ಮತಮ್ಮ ಕ್ರಿಯೆಗಳಿಗೆ ತಾವೇ ಜವಾಬ್ದಾರಿ ಹೊತ್ತುಕೊಳ್ಳಬೇಕು.

6. ಆದಿಕಾಂಡ 3:15⁠ನ್ನು ವಿವರಿಸಿ.

6 ಸೈತಾನನು ಏದೆನ್‌ ತೋಟದಲ್ಲಿ ಅಷ್ಟೆಲ್ಲ ಮಾಡಿದರೂ ಮಾನವಕುಲಕ್ಕೆ ಭವಿಷ್ಯಕ್ಕಾಗಿ ನಿರೀಕ್ಷೆ ಇರುವಂತೆ ಯೆಹೋವನು ನಿಶ್ಚಿತ ಏರ್ಪಾಡು ಮಾಡಿದನು. ಈ ನಿರೀಕ್ಷೆ ಬೈಬಲಿನ ಮೊತ್ತಮೊದಲ ಪ್ರವಾದನೆಯಲ್ಲಿದೆ. (ಆದಿಕಾಂಡ 3:15 ಓದಿ.) ಸೈತಾನನನ್ನು ‘ಸ್ತ್ರೀಯ ಸಂತಾನ’ ಜಜ್ಜುವುದೆಂದು ಆ ಪ್ರವಾದನೆ ಮುಂತಿಳಿಸಿತು. ಈ ಸ್ತ್ರೀ ಯಾರು? ಸ್ವರ್ಗದಲ್ಲಿ ಸೇವೆಮಾಡುತ್ತಾ ದೇವರ ಜೊತೆ ಆಪ್ತ ಸಂಬಂಧವಿರುವ ನೀತಿವಂತ ದೇವದೂತರೇ. ಅವರು ಯೆಹೋವನಿಗೆ ಹೆಂಡತಿಯಂತೆ ಇದ್ದಾರೆ. ಪಿಶಾಚನನ್ನು ‘ಜಜ್ಜಲು’ ಈ ದೇವದೂತರ ಗುಂಪಿನಿಂದ ಒಬ್ಬನನ್ನು ಯೆಹೋವನು ಕಳುಹಿಸಲಿದ್ದನು. ಅವನೇ ಸ್ತ್ರೀಯ ಸಂತತಿ. ಅವನ ಮೂಲಕ ವಿಧೇಯ ಮಾನವರು ಮೊದಲ ದಂಪತಿ ಕಳೆದುಕೊಂಡದ್ದನ್ನು ಪುನಃ ಪಡೆಯಲು ಶಕ್ತರಾಗುವರು. ಅಂದರೆ ಅವರು ಯೆಹೋವನು ಆರಂಭದಲ್ಲಿ ಉದ್ದೇಶಿಸಿದಂತೆ ಭೂಮಿಯ ಮೇಲೆ ಸದಾ ಜೀವಿಸುವ ಅವಕಾಶ ಪಡೆಯುವರು.—ಯೋಹಾ. 3:16.

7. (ಎ) ಆದಾಮಹವ್ವರ ದಂಗೆಯಂದಿನಿಂದ ವಿವಾಹ ಜೀವನಕ್ಕೆ ಏನಾಗಿದೆ? (ಬಿ) ಗಂಡಹೆಂಡತಿಯರು ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೆ?

7 ಆದಾಮಹವ್ವರ ದಂಗೆ ಅವರ ವಿವಾಹ ಜೀವನದ ಮೇಲೆ, ನಂತರದ ಎಲ್ಲ ವಿವಾಹಗಳ ಮೇಲೆ ಕೆಟ್ಟ ಪರಿಣಾಮ ಬೀರಿತು. ಉದಾಹರಣೆಗೆ, ಹವ್ವಳಿಗೆ ಮತ್ತು ಅವಳ ಸಂತಾನದ ಎಲ್ಲ ಹೆಣ್ಮಕ್ಕಳಿಗೆ ಹೆರಿಗೆಯ ಸಮಯದಲ್ಲಿ ತುಂಬ ನೋವು, ಹೆಂಡತಿಯರಿಗೆ ತಮ್ಮ ಗಂಡಂದಿರ ಮೇಲೆ ಅತಿಯಾದ ಆಸೆ, ಹೆಂಡತಿಯರ ಮೇಲೆ ಗಂಡಂದಿರ ದಬ್ಬಾಳಿಕೆ ಮತ್ತು ದೌರ್ಜನ್ಯ. ನಾವಿಂದು ಅನೇಕ ದಂಪತಿಗಳ ಮಧ್ಯೆ ಇದನ್ನೇ ನೋಡುತ್ತೇವೆ. (ಆದಿ. 3:16) ಆದರೆ ಯೆಹೋವನ ಅಪೇಕ್ಷೆಯೇನು? ಗಂಡನು ಕುಟುಂಬದ ಶಿರಸ್ಸಾಗಿದ್ದು ಪ್ರೀತಿಯಿಂದ ನಡೆದುಕೊಳ್ಳಬೇಕು ಮತ್ತು ಹೆಂಡತಿ ಗಂಡನಿಗೆ ಅಧೀನತೆ ತೋರಿಸಬೇಕೆಂದೇ ಆತನ ಅಪೇಕ್ಷೆ. (ಎಫೆ. 5:33) ಕ್ರೈಸ್ತ ಗಂಡಹೆಂಡತಿಯರ ಮಧ್ಯೆ ಸಹಕಾರ ಇರುವಾಗ ಸಮಸ್ಯೆಗಳು ಕಡಿಮೆಯಾಗುತ್ತವೆ.

ಆದಾಮನ ಸಮಯದಿಂದ ಜಲಪ್ರಳಯದ ತನಕದ ವಿವಾಹ ಜೀವನ

8. ಆದಾಮನ ಸಮಯದಿಂದ ಜಲಪ್ರಳಯದ ತನಕದ ವಿವಾಹ ಜೀವನ ಹೇಗಿತ್ತೆಂದು ವಿವರಿಸಿ.

8 ಆದಾಮಹವ್ವರಿಗೆ ಗಂಡು, ಹೆಣ್ಣು ಮಕ್ಕಳು ಹುಟ್ಟಿದರು. (ಆದಿ. 5:4) ಅವರ ಮೊದಲ ಮಗ ಕಾಯಿನನು ತನ್ನ ಸಂಬಂಧಿಕರಲ್ಲಿ ಒಬ್ಬಳನ್ನು ಮದುವೆಯಾದ. ಬೈಬಲ್‌ ದಾಖಲೆಗನುಸಾರ ಕಾಯಿನನ ವಂಶಜನಾದ ಲೆಮೆಕನು ಎರಡು ಹೆಂಡತಿಯರಿದ್ದ ಮೊದಲ ವ್ಯಕ್ತಿ. (ಆದಿ. 4:17, 19) ಆದಾಮನ ಸಮಯದಿಂದ ನೋಹನ ಸಮಯದ ವರೆಗೆ ಯೆಹೋವನ ಆರಾಧಕರು ತುಂಬ ಕಡಿಮೆ ಇದ್ದರು. ಅವರಲ್ಲಿ ಕೆಲವರೆಂದರೆ ಹೇಬೆಲ, ಹನೋಕ, ನೋಹ ಹಾಗೂ ಅವನ ಕುಟುಂಬದವರು. ನೋಹನ ದಿನಗಳಲ್ಲಿ, “ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.” ಆದರೆ ದೇವದೂತರ ಮತ್ತು ಮನುಷ್ಯಪುತ್ರಿಯರ ಈ ವಿವಾಹ ಅಸಹಜ, ಅಸ್ವಾಭಾವಿಕವಾಗಿತ್ತು. ಹಾಗಾಗಿ ಇವರಿಗೆ ಹುಟ್ಟಿದ ಪುತ್ರರು ಹಿಂಸಾತ್ಮಕ ದೈತ್ಯರಾದರು. ಅವರನ್ನು ನೆಫೀಲಿಯರು ಎಂದು ಕರೆಯಲಾಯಿತು. ಆ ಸಮಯದಲ್ಲಿ ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿತ್ತು, ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು.’—ಆದಿ. 6:1-5.

9. (ಎ) ನೋಹನ ದಿನದಲ್ಲಿದ್ದ ದುಷ್ಟರಿಗೆ ಯೆಹೋವನು ಏನು ಮಾಡಿದನು? (ಬಿ) ಆ ಕಾಲದಲ್ಲಿ ನಡೆದ ವಿಷಯಗಳಿಂದ ನಾವೇನು ಪಾಠ ಕಲಿಯಬೇಕು?

9 ಆ ಎಲ್ಲ ದುಷ್ಟ ಜನರನ್ನು ನಾಶಮಾಡಲು ಯೆಹೋವನು ದೊಡ್ಡ ಜಲಪ್ರಳಯವನ್ನು ತಂದನು. ಅದಕ್ಕೆ ಮುಂಚೆ “ನೀತಿಯನ್ನು ಸಾರುವವನಾಗಿದ್ದ ನೋಹ” ಜನರೆಲ್ಲರಿಗೆ ಜಲಪ್ರಳಯದ ಬಗ್ಗೆ ಎಚ್ಚರಿಸಿದನು. (2 ಪೇತ್ರ 2:5) ಆದರೆ ಅವರು ಅವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ದೈನಂದಿನ ಕೆಲಸಗಳಲ್ಲಿ, ಮದುವೆ ಮಾಡಿಕೊಳ್ಳುವುದರಲ್ಲಿ ಮುಳುಗಿದ್ದರು. ಯೇಸು ನೋಹನ ಕಾಲವನ್ನು ನಮ್ಮ ಸಮಯಕ್ಕೆ ಹೋಲಿಸಿದನು. (ಮತ್ತಾಯ 24:37-39 ಓದಿ.) ಇಂದು ನಾವು ಕೂಡ ದುಷ್ಟ ಲೋಕ ನಾಶವಾಗುವ ಮುಂಚೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದೇವೆ. ಆದರೆ ಹೆಚ್ಚಿನ ಜನರು ಕಿವಿಗೊಡುವುದಿಲ್ಲ. ಜಲಪ್ರಳಯಕ್ಕೆ ಮುಂಚೆ ನಡೆದ ವಿಷಯಗಳಿಂದ ನಾವೇನು ಪಾಠ ಕಲಿಯಬೇಕು? ಯೆಹೋವನ ದಿನ ಹತ್ತಿರವಿದೆಯೆಂದು ಮರೆತುಬಿಡುವಷ್ಟರ ಮಟ್ಟಿಗೆ ನಾವು ಮದುವೆಯಾಗುವುದು, ಮಕ್ಕಳನ್ನು ಪಡೆಯುವುದು ಮುಂತಾದ ಕೌಟುಂಬಿಕ ವಿಷಯಗಳಲ್ಲೇ ಮುಳುಗಿರಬಾರದು.

ಜಲಪ್ರಳಯದಿಂದ ಯೇಸುವಿನ ದಿನದ ತನಕದ ವಿವಾಹ ಜೀವನ

10. (ಎ) ಅನೇಕ ಸಂಸ್ಕೃತಿಗಳಲ್ಲಿ ಯಾವ ರೀತಿಯ ಅನೈತಿಕ ಪದ್ಧತಿಗಳು ಸಾಮಾನ್ಯವಾಗಿ ಬಿಟ್ಟವು? (ಬಿ) ಅಬ್ರಹಾಮ, ಸಾರ ಗಂಡಹೆಂಡತಿಯಾಗಿ ಹೇಗೆ ಒಳ್ಳೇ ಮಾದರಿಯಿಟ್ಟರು?

10 ನೋಹ ಮತ್ತು ಅವನ ಮೂವರು ಪುತ್ರರಲ್ಲಿ ಪ್ರತಿಯೊಬ್ಬನಿಗೆ ಒಬ್ಬೊಬ್ಬ ಹೆಂಡತಿ ಮಾತ್ರ ಇದ್ದರು. ಆದರೆ ಜಲಪ್ರಳಯದ ನಂತರ ಅನೇಕರು ಬಹುಪತ್ನೀತ್ವ ಪದ್ಧತಿ ಅನುಸರಿಸಿದರು. ಅನೇಕ ಸಂಸ್ಕೃತಿಗಳಲ್ಲಿ ಲೈಂಗಿಕ ಅನೈತಿಕತೆ ಸರ್ವಸಾಮಾನ್ಯವಾಯಿತು. ಅದು ಜನರ ಧಾರ್ಮಿಕ ಪದ್ಧತಿಗಳ ಭಾಗವೂ ಆಯಿತು. ಅಬ್ರಹಾಮ, ಸಾರ ಕಾನಾನಿಗೆ ಹೋದಾಗ ಅಲ್ಲಿನ ಜನರ ಮಧ್ಯೆ ವಿವಾಹದ ಏರ್ಪಾಡಿಗೆ ಅಗೌರವ ತೋರಿಸುವ ಅನೈತಿಕ ಪದ್ಧತಿಗಳಿದ್ದವು. ಹಾಗಾಗಿ ಯೆಹೋವನು ಸೊದೋಮ್‌ ಗೊಮೋರ ಊರುಗಳನ್ನು ನಾಶಮಾಡಿದನು. ಅಬ್ರಹಾಮ ಆ ಕಾಲದ ಅನೈತಿಕ ಜನರಂತಿರದೆ ತುಂಬ ಭಿನ್ನನಾಗಿದ್ದನು. ತನ್ನ ಕುಟುಂಬಕ್ಕೆ ಒಳ್ಳೇ ಶಿರಸ್ಸಾಗಿದ್ದನು. ಸಾರಳು ಅಧೀನತೆ ತೋರಿಸುವ ಹೆಂಡತಿಯಾಗಿದ್ದು ಒಳ್ಳೇ ಮಾದರಿಯಾಗಿದ್ದಳು. (1 ಪೇತ್ರ 3:3-6 ಓದಿ.) ಅಬ್ರಹಾಮನು ತನ್ನ ಮಗ ಇಸಾಕ ಯೆಹೋವನ ಆರಾಧಕಳನ್ನೇ ಮದುವೆಯಾಗುವಂತೆ ಏರ್ಪಾಡು ಮಾಡಿದನು. ಇಸಾಕನು ಸಹ ತನ್ನ ಮಗ ಯಾಕೋಬನಿಗೆ ಅಂಥದ್ದೇ ಏರ್ಪಾಡು ಮಾಡಿದನು. ಮುಂದೆ ಯಾಕೋಬನ ಪುತ್ರರಿಂದ ಇಸ್ರಾಯೇಲಿನ 12 ಕುಲಗಳು ಹುಟ್ಟಿಬಂದವು.

11. ಧರ್ಮಶಾಸ್ತ್ರದಿಂದಾಗಿ ಇಸ್ರಾಯೇಲ್ಯರಿಗೆ ಯಾವ ರೀತಿಯ ಸಂರಕ್ಷಣೆ ಸಿಕ್ಕಿತು?

11 ಇದೇ ಇಸ್ರಾಯೇಲ್‌ ಜನಾಂಗದೊಂದಿಗೆ ಯೆಹೋವನು ಮುಂದೆ ಒಂದು ಒಡಂಬಡಿಕೆ ಅಥವಾ ಒಪ್ಪಂದ ಮಾಡಿದನು. ಆ ಜನಾಂಗಕ್ಕೆ ಮೋಶೆಯ ಮುಖಾಂತರ ಧರ್ಮಶಾಸ್ತ್ರವನ್ನು ಕೊಟ್ಟನು. ಅದರಲ್ಲಿದ್ದ ನಿಯಮಗಳು ಇಸ್ರಾಯೇಲ್ಯರಿಗೆ ಆಧ್ಯಾತ್ಮಿಕ ಸಂರಕ್ಷಣೆ ಕೊಟ್ಟವು. ಉದಾಹರಣೆಗೆ, ಬಹುಪತ್ನೀತ್ವ ಹಾಗೂ ಬೇರೆ ವಿವಾಹ ಪದ್ಧತಿಗಳಿಗೆ ಸಂಬಂಧಪಟ್ಟ ನಿಯಮಗಳಿದ್ದವು. ಸುಳ್ಳು ಆರಾಧಕರನ್ನು ಮದುವೆ ಆಗಬಾರದೆಂಬ ನಿಯಮವೂ ಇತ್ತು. (ಧರ್ಮೋಪದೇಶಕಾಂಡ 7:3, 4 ಓದಿ.) ಗಂಡಹೆಂಡಿರ ಮಧ್ಯೆ ಗಂಭೀರ ಸಮಸ್ಯೆಗಳು ಎದ್ದರೆ ಸಹಾಯಮಾಡಲು ಹಿರೀಪುರುಷರಿದ್ದರು. ದಾಂಪತ್ಯದ್ರೋಹ, ಶೀಲ-ಶಂಕೆ ಇವೆಲ್ಲದ್ದರ ವಿರುದ್ಧವೂ ನಿಯಮಗಳಿದ್ದವು. ವಿಚ್ಛೇದನಕ್ಕೆ ಅನುಮತಿಯಿತ್ತು, ಆದರೆ ಗಂಡ ಮತ್ತು ಹೆಂಡತಿಯನ್ನು ಸಂರಕ್ಷಿಸಲು ನಿಯಮಗಳೂ ಇದ್ದವು. ಉದಾಹರಣೆಗೆ ಗಂಡನು ಹೆಂಡತಿಯ ‘ಅವಲಕ್ಷಣವಾದ’ ಅಂದರೆ ಅಸಭ್ಯವಾದ ವಿಷಯಕ್ಕಾಗಿ ಅವಳಿಗೆ ವಿಚ್ಛೇದನ ಕೊಡಬಹುದಿತ್ತು. (ಧರ್ಮೋ. 24:1) ಇಲ್ಲಿ ‘ಅಸಭ್ಯ’ ಏನೆಂದು ಬೈಬಲ್‌ ವಿವರಿಸದಿದ್ದರೂ ಹೆಂಡತಿಯ ಚಿಕ್ಕಪುಟ್ಟ ತಪ್ಪಿಗೆಲ್ಲ ಗಂಡ ವಿಚ್ಛೇದನ ಕೊಡುವಂತಿರಲಿಲ್ಲ.—ಯಾಜ. 19:18.

ಯಾವತ್ತೂ ದಾಂಪತ್ಯದ್ರೋಹ ಮಾಡಬೇಡಿ

12, 13. (ಎ) ಮಲಾಕಿಯನ ದಿನಗಳಲ್ಲಿ ಕೆಲವರು ತಮ್ಮ ಹೆಂಡತಿಯರ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದರು? (ಬಿ) ದೀಕ್ಷಾಸ್ನಾನಪಡೆದ ವಿವಾಹಿತ ವ್ಯಕ್ತಿ ವ್ಯಭಿಚಾರ ಮಾಡಿದರೆ ಪರಿಣಾಮ ಏನಾಗುವುದು?

12 ಪ್ರವಾದಿ ಮಲಾಕಿಯನ ದಿನಗಳಲ್ಲಿ ಅನೇಕ ಯೆಹೂದಿ ಗಂಡಂದಿರು ಏನೇನೊ ನೆಪಗಳನ್ನು ಕೊಟ್ಟು ತಮ್ಮ ಹೆಂಡತಿಯರಿಗೆ ವಿಚ್ಛೇದನ ಕೊಡುತ್ತಿದ್ದರು. ಅವರಿದನ್ನು ಮಾಡುತ್ತಿದ್ದದ್ದು, ಯುವತಿಯರನ್ನು ಇಲ್ಲವೆ ಯೆಹೋವನ ಆರಾಧಕರಲ್ಲದ ಸ್ತ್ರೀಯರನ್ನು ಮದುವೆಯಾಗಲಿಕ್ಕಾಗಿ. ಯೇಸುವಿನ ಕಾಲದಲ್ಲೂ ಯೆಹೂದಿ ಗಂಡಸರು ತಮ್ಮ ಹೆಂಡತಿಯರಿಗೆ ಕ್ಷುಲ್ಲಕ ಕಾರಣಗಳಿಗೆಲ್ಲ ವಿಚ್ಛೇದನ ಕೊಡುತ್ತಿದ್ದರು. (ಮತ್ತಾ. 19:3) ಕುತಂತ್ರದಿಂದ ಮಾಡಲಾಗುತ್ತಿದ್ದ ಇಂಥ ವಿಚ್ಛೇದನಗಳನ್ನು ಯೆಹೋವನು ಹಗೆಮಾಡುತ್ತಿದ್ದನು.ಮಲಾಕಿಯ 2:13-16 ಓದಿ.

13 ಇಂದು ದಾಂಪತ್ಯದ್ರೋಹ ಯೆಹೋವನ ಜನರ ಮಧ್ಯೆ ಅಸಮ್ಮತ. ಅವರಲ್ಲಿ ಅದು ನಡೆಯುವುದೂ ಅಪರೂಪ. ಆದರೆ ದೀಕ್ಷಾಸ್ನಾನ ಪಡೆದಿರುವ ವಿವಾಹಿತ ವ್ಯಕ್ತಿಯೊಬ್ಬರು ಬೇರೊಬ್ಬರನ್ನು ಮದುವೆಯಾಗುವ ಉದ್ದೇಶದಿಂದಲೇ ವ್ಯಭಿಚಾರ ಮಾಡಿ ವಿಚ್ಛೇದನ ಪಡೆದರೆಂದು ಇಟ್ಟುಕೊಳ್ಳಿ. ಆ ವ್ಯಕ್ತಿ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಡದಿದ್ದರೆ ಸಭೆಯನ್ನು ಶುದ್ಧವಾಗಿಡಲಿಕ್ಕಾಗಿ ಅವನನ್ನು/ಅವಳನ್ನು ಬಹಿಷ್ಕರಿಸಲಾಗುತ್ತದೆ. (1 ಕೊರಿಂ. 5:11-13) ಆ ವ್ಯಕ್ತಿ “ಪಶ್ಚಾತ್ತಾಪಕ್ಕೆ ಯೋಗ್ಯವಾದ ಫಲವನ್ನು ಉತ್ಪಾದಿ”ಸಿದ ನಂತರವೇ ಸಭೆಯೊಳಗೆ ಮತ್ತೆ ಸ್ವೀಕರಿಸಲಾಗುತ್ತದೆ. (ಲೂಕ 3:8; 2 ಕೊರಿಂ. 2:5-10) ಅವರು ಸಭೆಗೆ ಪುನಃ ಹಿಂದಿರುಗಲು ಇಂತಿಷ್ಟು ಸಮಯ ದಾಟಬೇಕೆಂದೇನಿಲ್ಲ. ಆದರೆ ಆ ವ್ಯಕ್ತಿ ನಿಜವಾಗಿಯೂ ಪಶ್ಚಾತ್ತಾಪಪಟ್ಟಿದ್ದಾನೆಂದು ರುಜುವಾಗಲು ಮತ್ತು ಪುನಃ ಸಭೆಯ ಸದಸ್ಯನಾಗಲು ಒಂದು ಅಥವಾ ಹೆಚ್ಚು ವರ್ಷ ಹಿಡಿಯಬಹುದು. ಹಾಗಿದ್ದರೂ, ಆ ವ್ಯಕ್ತಿಯ ಪಶ್ಚಾತ್ತಾಪವು ಹೃತ್ಪೂರ್ವಕವಾದದ್ದಾ ಅಲ್ಲವಾ ಎನ್ನುವುದಕ್ಕೆ ಅವನು ‘ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಾಗುವುದು.’—ರೋಮ. 14:10-12; 1979, ನವೆಂಬರ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 31-32 ನೋಡಿ.

ಕ್ರೈಸ್ತರ ವೈವಾಹಿಕ ಜೀವನ

14. ಧರ್ಮಶಾಸ್ತ್ರವು ಯಾವ ಮುಖ್ಯ ಉದ್ದೇಶವನ್ನು ಪೂರೈಸಿತು?

14 ಇಸ್ರಾಯೇಲ್ಯರು 1,500ಕ್ಕೂ ಹೆಚ್ಚು ವರ್ಷ ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರು. ಅದರಲ್ಲಿದ್ದ ನಿಯಮಗಳು ದೇವಜನರಿಗೆ ಹಲವಾರು ವಿಧಗಳಲ್ಲಿ ಸಹಾಯಮಾಡಿತು. ಉದಾಹರಣೆಗೆ ಅದು ಜನರಿಗೆ ಕುಟುಂಬ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಮಾಡುವ ತತ್ವಗಳನ್ನು ಕೊಟ್ಟಿತು. ಮೆಸ್ಸೀಯನ ಕಡೆಗೆ ನಡಿಸಿತು. (ಗಲಾ. 3:23, 24) ಆದರೆ ಯೇಸು ಸತ್ತಾಗ ಆ ಧರ್ಮಶಾಸ್ತ್ರ ಕೊನೆಗೊಂಡಿತು. ದೇವರು ಒಂದು ಹೊಸ ಏರ್ಪಾಡನ್ನು ಮಾಡಿದನು. (ಇಬ್ರಿ. 8:6) ಹಾಗಾಗಿ ಮುಂದಕ್ಕೆ ಕ್ರೈಸ್ತರು ಧರ್ಮಶಾಸ್ತ್ರದಲ್ಲಿ ಅನುಮತಿಸಲಾಗಿದ್ದ ಕೆಲವು ವಿಷಯಗಳನ್ನು ಮಾಡುವಂತಿರಲಿಲ್ಲ.

15. (ಎ) ಕ್ರೈಸ್ತರಿಗಿರುವ ವಿವಾಹದ ಮಟ್ಟ ಯಾವುದು? (ಬಿ) ಕ್ರೈಸ್ತರೊಬ್ಬರು ವಿಚ್ಛೇದನ ಕೊಡುವುದರ ಬಗ್ಗೆ ಯೋಚಿಸುವಾಗ ಯಾವೆಲ್ಲ ಅಂಶಗಳನ್ನು ಮನಸ್ಸಿನಲ್ಲಿಡಬೇಕು?

15 ಒಮ್ಮೆ ಫರಿಸಾಯರು ವಿವಾಹ ಜೀವನದ ಬಗ್ಗೆ ಯೇಸುವಿಗೆ ಒಂದು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಾಗಿ ಯೇಸು, ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ವಿಚ್ಛೇದನ ಪಡೆಯಲು ಅನುಮತಿಸಿದ್ದರೂ ದೇವರು ಆರಂಭದಲ್ಲಿ ಅದನ್ನು ಉದ್ದೇಶಿಸಿರಲಿಲ್ಲವೆಂದು ಹೇಳಿದನು. (ಮತ್ತಾ. 19:6-8) ಆದ್ದರಿಂದ ದೇವರು ಏದೆನ್‌ ತೋಟದಲ್ಲಿಟ್ಟ ವಿವಾಹದ ಮಟ್ಟವನ್ನು ಕ್ರೈಸ್ತರು ಪಾಲಿಸಬೇಕೆಂದು ಯೇಸು ಸೂಚಿಸಿದನು. (1 ತಿಮೊ. 3:2, 12) ಇದರರ್ಥ ವಿವಾಹ ಸಂಗಾತಿಗಳು “ಒಂದೇ ಶರೀರ” ಆಗಿರುವುದರಿಂದ ಒಟ್ಟಿಗೇ ಇರಬೇಕು. ಈ ಬಂಧವನ್ನು ಗಟ್ಟಿಯಾಗಿಡಲು ಇಬ್ಬರಲ್ಲೂ ದೇವರ ಮೇಲೆ ಮತ್ತು ಸಂಗಾತಿಯ ಮೇಲೆ ಪ್ರೀತಿ ಇರಬೇಕಿತ್ತು. ಸಂಗಾತಿ “ವ್ಯಭಿಚಾರ” ಅಂದರೆ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದರೆ ಮಾತ್ರ ವಿಚ್ಛೇದನ ಪಡೆಯಬೇಕಿತ್ತು. ಬೇರೆ ಕಾರಣಗಳಿಗಾಗಿ ವಿಚ್ಛೇದನ ಪಡೆದರೆ ಪುನಃ ಮದುವೆ ಆಗಬಾರದಿತ್ತು. (ಮತ್ತಾ. 19:9) ಅನೈತಿಕತೆಯಲ್ಲಿ ಒಳಗೂಡಿದ ಸಂಗಾತಿ ಪಶ್ಚಾತ್ತಾಪಪಟ್ಟರೆ ಅವರ ಗಂಡ ಅಥವಾ ಹೆಂಡತಿ ಕ್ಷಮಿಸಸಾಧ್ಯವಿದೆ. ಪ್ರವಾದಿ ಹೋಶೇಯನ ಹೆಂಡತಿ ಗೋಮೆರಳು ಅನೈತಿಕತೆ ನಡಿಸಿದರೂ ಅವನು ಅವಳನ್ನು ಕ್ಷಮಿಸಿದನು. ಯೆಹೋವನು ಸಹ ಇಸ್ರಾಯೇಲ್‌ ಜನಾಂಗ ಆಧ್ಯಾತ್ಮಿಕ ರೀತಿಯ ವ್ಯಭಿಚಾರ ಮಾಡಿದ ಬಳಿಕ ಪಶ್ಚಾತ್ತಾಪಪಟ್ಟಾಗ ಕ್ಷಮಿಸಿದನು. (ಹೋಶೇ. 3:1-5) ಒಬ್ಬ ಗಂಡ ಅಥವಾ ಹೆಂಡತಿಗೆ ತನ್ನ ಸಂಗಾತಿ ಅನೈತಿಕತೆಯಲ್ಲಿ ಒಳಗೂಡಿದ್ದರೆಂದು ಗೊತ್ತಿದ್ದರೂ ಅವರ ಜೊತೆ ಮತ್ತೆ ಲೈಂಗಿಕ ಸಂಬಂಧವಿಟ್ಟರೆ ಆ ತಪ್ಪಿತಸ್ಥ ಸಂಗಾತಿಯನ್ನು ಕ್ಷಮಿಸಿದ್ದಾರೆ ಎಂದರ್ಥ. ಇನ್ನು ಮುಂದೆ ಆ ವ್ಯಕ್ತಿ ತನ್ನ ಸಂಗಾತಿಗೆ ಬೈಬಲ್‌ ಆಧರಿತವಾಗಿ ವಿಚ್ಛೇದನ ಕೊಡಲು ಸಾಧ್ಯವಿಲ್ಲ.

16. ಮದುವೆಯಾಗದೇ ಉಳಿಯುವುದರ ಬಗ್ಗೆ ಯೇಸು ಏನಂದನು?

16 ಲೈಂಗಿಕ ಅನೈತಿಕತೆಯ ಕಾರಣಕ್ಕಾಗಿ ಮಾತ್ರ ನಿಜ ಕ್ರೈಸ್ತರು ವಿಚ್ಛೇದನ ಕೊಡಬಹುದೆಂದು ಹೇಳಿದ ನಂತರ ಯೇಸು, ಮದುವೆಯಾಗದೇ ಉಳಿಯುವ ‘ವರವನ್ನು ಹೊಂದಿರುವವರ’ ಬಗ್ಗೆ ಹೇಳಿದನು. ಆತನಂದದ್ದು: “ಇದಕ್ಕೆ ಆಸ್ಪದಮಾಡಿಕೊಳ್ಳಬಲ್ಲವನು ಆಸ್ಪದಮಾಡಿಕೊಳ್ಳಲಿ.” (ಮತ್ತಾ. 19:10-12) ಅನೇಕರು ಅಪಕರ್ಷಣೆಯಿಲ್ಲದೆ ಯೆಹೋವನ ಸೇವೆ ಮಾಡಲಿಕ್ಕೆ ಮದುವೆಯಾಗದೇ ಉಳಿಯುವ ಆಯ್ಕೆಮಾಡುತ್ತಾರೆ. ಅವರ ಈ ನಿರ್ಣಯ ಮೆಚ್ಚಬೇಕಾದದ್ದೇ!

17. ಮದುವೆಯಾಗಬೇಕಾ ಆಗದೇ ಉಳಿಯಬೇಕಾ ಎಂದು ಕ್ರೈಸ್ತರೊಬ್ಬರು ಹೇಗೆ ನಿರ್ಣಯಿಸಬಹುದು?

17 ಮದುವೆಯಾಗಬೇಕಾ ಮದುವೆಯಾಗದೇ ಉಳಿಯಬೇಕಾ ಎಂದು ನಿರ್ಣಯಿಸಲು ಯಾವುದು ಸಹಾಯಮಾಡುವುದು? ಅವಿವಾಹಿತರಾಗಿ ಇರುವುದು ಒಂದು ವರ. ಮದುವೆಯಾಗದೆ ಇರಲು ತನ್ನಿಂದ ಸಾಧ್ಯನಾ ಎಂದು ಒಬ್ಬ ವ್ಯಕ್ತಿ ಮೊದಲೇ ನಿರ್ಣಯಿಸಬೇಕು. ಅವಿವಾಹಿತರಾಗಿ ಉಳಿಯುವುದೇ ಉತ್ತಮವೆಂದು ಅಪೊಸ್ತಲ ಪೌಲ ಹೇಳಿದನು. ಆದರೆ ಹೀಗೂ ಹೇಳಿದನು: “ಜಾರತ್ವವು [ಲೈಂಗಿಕ ಅನೈತಿಕತೆ] ಪ್ರಬಲವಾಗಿರುವುದರಿಂದ ಪ್ರತಿಯೊಬ್ಬ ಪುರುಷನಿಗೆ ತನ್ನ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬ ಸ್ತ್ರೀಗೆ ತನ್ನ ಸ್ವಂತ ಗಂಡನು ಇರಲಿ. ಅವರಿಗೆ ಸ್ವನಿಯಂತ್ರಣವಿಲ್ಲದಿದ್ದರೆ ಅವರು ಮದುವೆಮಾಡಿಕೊಳ್ಳಲಿ; ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದೇ ಮೇಲು.” ಆದ್ದರಿಂದ ತೀವ್ರ ಲೈಂಗಿಕ ಆಸೆಗಳಿಂದಾಗಿ ಹಸ್ತಮೈಥುನ ಇಲ್ಲವೆ ಲೈಂಗಿಕ ಅನೈತಿಕತೆ ನಡೆಸುವುದನ್ನು ತಪ್ಪಿಸಲು ಒಬ್ಬ ವ್ಯಕ್ತಿ ಮದುವೆಯಾಗುವ ನಿರ್ಣಯ ಮಾಡಬಹುದು. ಹಾಗಿದ್ದರೂ ತಾವು ಮದುವೆ ವಯಸ್ಸಿನವರು ಆಗಿದ್ದೇವಾ ಎಂದೂ ಅವಿವಾಹಿತರು ಯೋಚಿಸಬೇಕು. ಪೌಲನಂದದ್ದು: “ಯಾವನಾದರೂ ತನ್ನ ಅವಿವಾಹಿತ ಸ್ಥಿತಿಯ ವಿಷಯದಲ್ಲಿ ತಾನು ಅಯೋಗ್ಯವಾಗಿ ವರ್ತಿಸುತ್ತಿದ್ದೇನೆಂದು ಭಾವಿಸುವುದಾದರೆ ಮತ್ತು ಅವನು ತನ್ನ ಯೌವನದ ಪರಿಪಕ್ವ ಸ್ಥಿತಿಯನ್ನು ದಾಟಿರುವುದಾದರೆ, ಅವನು ಮದುವೆಮಾಡಿಕೊಳ್ಳುವುದು ಅಗತ್ಯವೆಂದು ಅವನಿಗೆ ಕಂಡುಬಂದರೆ ಅವನು ತನ್ನಿಷ್ಟದಂತೆಯೇ ಮಾಡಲಿ; ಹಾಗೆ ಮಾಡಿದರೆ ಅವನು ಪಾಪಮಾಡುವುದಿಲ್ಲ. ಅಂಥವರು ಮದುವೆಮಾಡಿಕೊಳ್ಳಲಿ.” (1 ಕೊರಿಂ. 7:2, 9, 36; 1 ತಿಮೊ. 4:1-3) ಯೌವನದಲ್ಲಿ ಸಾಮಾನ್ಯವಾಗಿ ಅನೇಕರಿಗೆ ಬರುವ ತೀವ್ರ ಲೈಂಗಿಕ ಆಸೆಗಳ ಕಾರಣಕ್ಕಾಗಿ ಮಾತ್ರ ಮದುವೆಯಾಗುವಂತೆ ನಾವು ಯಾರನ್ನೂ ಪ್ರೋತ್ಸಾಹಿಸಬಾರದು. ಏಕೆಂದರೆ ಅವನು/ಅವಳು ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಹೊರುವಷ್ಟು ಪ್ರೌಢರಾಗಿರಲಿಕ್ಕಿಲ್ಲ.

18, 19. (ಎ) ಕ್ರೈಸ್ತ ವಿವಾಹ ಜೀವನದ ಆರಂಭ ಹೇಗಿರಬೇಕು? (ಬಿ) ಮುಂದಿನ ಲೇಖನದಲ್ಲಿ ನಾವೇನು ಚರ್ಚಿಸಲಿದ್ದೇವೆ?

18 ಕ್ರೈಸ್ತ ವಿವಾಹ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣು ಇಬ್ಬರೂ ದೀಕ್ಷಾಸ್ನಾನ ಪಡೆದಿದ್ದು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವವರಾಗಿರಬೇಕು. ಅವರಿಗೆ ಒಬ್ಬರಿನ್ನೊಬ್ಬರ ಮೇಲೆಯೂ ಪ್ರೀತಿಯಿರಬೇಕು. ಎಷ್ಟೆಂದರೆ ಇಡೀ ಜೀವನ ಜೊತೆಯಲ್ಲಿ ಕಳೆಯಲು ಸಿದ್ಧರಿರಬೇಕು. ‘ಕರ್ತನಲ್ಲಿರುವವರನ್ನು ಮಾತ್ರ’ ಮದುವೆಯಾಗಬೇಕೆಂಬ ಬುದ್ಧಿಮಾತಿಗೆ ಅವರು ವಿಧೇಯತೆ ತೋರಿಸಿರುವುದರಿಂದ ಯೆಹೋವನು ಅವರನ್ನು ಆಶೀರ್ವದಿಸುವನು. (1 ಕೊರಿಂ. 7:39) ಅವರ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸಲು ಬೈಬಲಿನ ಬುದ್ಧಿವಾದವನ್ನು ಪಾಲಿಸುತ್ತಾ ಇರಬೇಕು.

19 ನಾವಿಂದು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ. ವೈವಾಹಿಕ ಜೀವನವನ್ನು ಯಶಸ್ವಿಗೊಳಿಸಲು ಬೇಕಾದ ಗುಣಗಳು ಅನೇಕರಲ್ಲಿ ಇಲ್ಲ. (2 ತಿಮೊ. 3:1-5) ಮುಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವ ಬೈಬಲ್‌ ತತ್ವಗಳು ಕ್ರೈಸ್ತರ ವೈವಾಹಿಕ ಜೀವನ ಯಶಸ್ವಿಯಾಗಲು, ಸಂತೋಷದಿಂದ ತುಂಬಿರಲು ನೆರವಾಗುವವು. ಹೀಗೆ ಅವರು ನಿತ್ಯಜೀವಕ್ಕೆ ನಡೆಸುವ ಮಾರ್ಗದಲ್ಲಿ ನಡೆಯುತ್ತಾ ಇರಬಹುದು.—ಮತ್ತಾ. 7:13, 14.