ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಭಾಗ 1

ಸುಖೀ ಸಂಸಾರಕ್ಕಾಗಿ ಸೃಷ್ಟಿಕರ್ತನೆಡೆಗೆ ನೋಡಿ

ಸುಖೀ ಸಂಸಾರಕ್ಕಾಗಿ ಸೃಷ್ಟಿಕರ್ತನೆಡೆಗೆ ನೋಡಿ

‘ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.’—ಮತ್ತಾಯ 19:4

ಮೊಟ್ಟ ಮೊದಲ ಮದುವೆಯನ್ನು ಮಾಡಿದ್ದು ಯೆಹೋವ ದೇವರು. * ಆತನು ಮೊದಲ ಸ್ತ್ರೀಯನ್ನು ಸೃಷ್ಟಿಸಿ ‘ಆಕೆಯನ್ನು ಆದಾಮನ ಬಳಿಗೆ ಕರೆತಂದನು’ ಎಂದು ಬೈಬಲ್‌ ಹೇಳುತ್ತದೆ. ಆಗ ಆದಾಮನಿಗೆ ಎಷ್ಟು ಖುಷಿಯಾಯಿತೆಂದರೆ “ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಒಂದು ಗೀತೆಯನ್ನೇ ಹಾಡಿಬಿಟ್ಟನು. (ಆದಿಕಾಂಡ 2:22, 23) ವಿವಾಹಿತರು ಸಂತೋಷದಿಂದಿರಬೇಕೆಂದು ಯೆಹೋವನು ಈಗಲೂ ಬಯಸುತ್ತಾನೆ.

ನೀವು ವೈವಾಹಿಕ ಜೀವನಕ್ಕೆ ಕಾಲಿಡುವಾಗ, ಅದು ಹೂವಿನ ಹಾದಿಯಾಗಿರುತ್ತದೆ ಎಂದೆಣಿಸಬಹುದು. ಆದರೆ ಒಬ್ಬರನ್ನೊಬ್ಬರು ತುಂಬ ಪ್ರೀತಿಸುವ ದಂಪತಿಗಳ ಮಧ್ಯೆ ಸಹ ಸಮಸ್ಯೆಗಳಿರುತ್ತವೆ. (1ಕೊರಿಂಥ 7:28) ಈ ಕಿರುಹೊತ್ತಗೆಯಲ್ಲಿರುವ ಬೈಬಲ್‌ ತತ್ವಗಳನ್ನು ಅನ್ವಯಿಸಿಕೊಳ್ಳುವುದಾದರೆ ನಿಮ್ಮ ಸಂಸಾರ ಸುಖೀ ಸಂಸಾರವಾಗಲು ಸಾಧ್ಯ.—ಕೀರ್ತನೆ 19:8-11.

 1 ಯೆಹೋವನು ನಿಮಗೆ ಕೊಟ್ಟಿರುವ ಪಾತ್ರವನ್ನು ನಿರ್ವಹಿಸಿ

ಬೈಬಲಿನ ಹಿತವಚನ: ಗಂಡನು ಕುಟುಂಬಕ್ಕೆ ಶಿರಸ್ಸಾಗಿದ್ದಾನೆ.—ಎಫೆಸ 5:23.

ಗಂಡಂದಿರೇ, ನೀವು ನಿಮ್ಮ ಹೆಂಡತಿಯನ್ನು ಕೋಮಲವಾಗಿ ನೋಡಿಕೊಳ್ಳಬೇಕೆಂದು ಯೆಹೋವನು ನಿರೀಕ್ಷಿಸುತ್ತಾನೆ. (1 ಪೇತ್ರ 3:7) ನಿಮ್ಮ ಪತ್ನಿಯನ್ನು ನಿಮಗೆ ಸಹಕಾರಿಣಿಯಾಗಿರಲು ಆತನು ಸೃಷ್ಟಿಸಿದ್ದಾನೆ. ಆದ್ದರಿಂದ ನೀವು ಆಕೆಯೊಂದಿಗೆ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕೆಂದು ಬಯಸುತ್ತಾನೆ. (ಆದಿಕಾಂಡ 2:18) ನೀವು ನಿಮ್ಮ ಹೆಂಡತಿಯನ್ನು ಎಷ್ಟು ಗಾಢವಾಗಿ ಪ್ರೀತಿಸಬೇಕೆಂದರೆ ನಿಮ್ಮ ಅಭಿರುಚಿಗಳಿಗಿಂತ ಆಕೆಯ ಇಷ್ಟಾನಿಷ್ಟಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು.—ಎಫೆಸ 5:25-29.

ಹೆಂಡತಿಯರೇ, ನಿಮ್ಮ ಗಂಡನಿಗೆ ಆಳವಾದ ಗೌರವವನ್ನು ತೋರಿಸುತ್ತಾ ಅವರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಲು ನೀವು ನೆರವಾಗಬೇಕೆಂದು ಯೆಹೋವನು ನಿರೀಕ್ಷಿಸುತ್ತಾನೆ. (1 ಕೊರಿಂಥ 11:3; ಎಫೆಸ 5:33) ನಿಮ್ಮ ಪತಿಯ ನಿರ್ಣಯಗಳನ್ನು ಬೆಂಬಲಿಸಿ ಮತ್ತು ಹೃತ್ಪೂರ್ವಕವಾಗಿ ಅವರೊಂದಿಗೆ ಸಹಕರಿಸಿ. (ಕೊಲೊಸ್ಸೆ 3:18) ಹೀಗೆ ಮಾಡಿದರೆ, ನಿಮ್ಮ ಗಂಡನ ದೃಷ್ಟಿಯಲ್ಲಿ ಮುತ್ತಿನಂಥ ಮಡದಿಯಾಗುವಿರಿ, ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗುವಿರಿ.—1 ಪೇತ್ರ 3:1-6.

ಹೀಗೆ ಮಾಡಿ:

  • ‘ನಾನು ಒಳ್ಳೇ ಗಂಡ ಅಥವಾ ಹೆಂಡತಿಯಾಗಿರಲು ಇನ್ನೂ ಏನ್‌ ಮಾಡಿದ್ರೆ ಚೆನ್ನಾಗಿರುತ್ತೆ?’ ಎಂದು ನಿಮ್ಮ ಸಂಗಾತಿಯನ್ನು ಕೇಳಿ. ಅವರು ಹೇಳುವಾಗ ಕಿವಿಗೊಟ್ಟು ಕೇಳಿ ಮತ್ತು ಆ ವಿಷಯದಲ್ಲಿ ಪ್ರಗತಿ ಮಾಡುತ್ತಾ ಇರಿ

  • ಒಬ್ಬರನ್ನೊಬ್ಬರು ಸಂತೋಷಪಡಿಸಲು ಏನು ಮಾಡಬೇಕೆಂದು ತಿಳಿಯಲು ಸಾಕಷ್ಟು ಸಮಯ ಹಿಡಿಯುವುದರಿಂದ, ತಾಳ್ಮೆ ತೋರಿಸಿ

2 ಸಂಗಾತಿಯ ಭಾವನೆಗಳಿಗೆ ಪರಿಗಣನೆ ತೋರಿಸಿ

ಬೈಬಲಿನ ಹಿತವಚನ: ನಿಮ್ಮ ಸಂಗಾತಿಗೆ ಯಾವೆಲ್ಲ ವಿಷಯಗಳು ಅಚ್ಚುಮೆಚ್ಚು ಎಂದು ತಿಳಿದುಕೊಂಡು ಅದನ್ನು ಮಾಡಲು ಪ್ರಯತ್ನಿಸಿ. (ಫಿಲಿಪ್ಪಿ 2:3, 4) ತನ್ನ ಆರಾಧಕರು “ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು” ಎಂದು ಯೆಹೋವನು ಬಯಸುತ್ತಾನೆ. ಇದನ್ನು ಮನಸ್ಸಿನಲ್ಲಿಟ್ಟು, ನಿಮ್ಮ ಸಂಗಾತಿಯನ್ನು ಬಹು ಅಮೂಲ್ಯರೆಂದು ಪರಿಗಣಿಸಿ. (2 ತಿಮೊಥೆಯ 2:24) “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿ ವಂತರ ಮಾತೇ ಮದ್ದು.” ಆದ್ದರಿಂದ, ನೀವಾಡುವ ಮಾತುಗಳ ಮೇಲೆ ನಿಗಾ ಇರಲಿ. (ಜ್ಞಾನೋಕ್ತಿ 12:18) ದಯೆ ಮತ್ತು ಪ್ರೀತಿಯಿಂದ ಮಾತಾಡಲು ಯೆಹೋವನ ಪವಿತ್ರಾತ್ಮ ನಿಮಗೆ ಸಹಾಯಮಾಡುತ್ತದೆ.—ಗಲಾತ್ಯ 5:22, 23; ಕೊಲೊಸ್ಸೆ 4:6.

ಹೀಗೆ ಮಾಡಿ:

  • ನಿಮ್ಮ ಸಂಗಾತಿಯೊಂದಿಗೆ ಯಾವುದಾದರೂ ಗಂಭೀರ ವಿಷಯವನ್ನು ಚರ್ಚಿಸುವಾಗ ಸಮಾಧಾನದಿಂದಿರಲು ಮತ್ತು ನಿಮ್ಮ ಯೋಚನೆ ಸರಿಯಿದ್ದರೂ ನಿಮ್ಮ ಸಂಗಾತಿಯ ಮಾತನ್ನು ಬಿಚ್ಚು ಮನಸ್ಸಿನಿಂದ ಕೇಳಿಸಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥಿಸಿ

  • ಮಾತಾಡುವ ಮುಂಚೆ ಏನು ಮಾತಾಡಬೇಕು ಮತ್ತು ಹೇಗೆ ಮಾತಾಡಬೇಕು ಎಂದು ಯೋಚಿಸಿ

 3 ಒಂದೇ ಆಲೋಚನೆಯುಳ್ಳವರಾಗಿರಿ

ಬೈಬಲಿನ ಹಿತವಚನ: ವಿವಾಹವಾದಾಗ ನೀವು ಮತ್ತು ನಿಮ್ಮ ಸಂಗಾತಿ ‘ಒಂದೇ ಶರೀರವಾಗುವಿರಿ.’ (ಮತ್ತಾಯ 19:5) ಆದರೂ ನಿಮ್ಮಿಬ್ಬರ ವ್ಯಕ್ತಿತ್ವ ಭಿನ್ನವಾಗಿರುವುದರಿಂದ ನಿಮ್ಮ ಅಭಿಪ್ರಾಯಗಳೂ ಭಿನ್ನವಾಗಿರಬಹುದು. ಹಾಗಾಗಿ, ನೀವು ಒಂದೇ ಥರ ಯೋಚಿಸಲು, ಒಂದೇ ರೀತಿಯ ಭಾವನೆಗಳನ್ನು ಬೆಳೆಸಿಕೊಳ್ಳಲು ಕಲಿಯುವ ಅವಶ್ಯಕತೆಯಿದೆ. (ಫಿಲಿಪ್ಪಿ 2:2) ನಿರ್ಣಯಗಳನ್ನು ಮಾಡುವಾಗ ಒಗ್ಗಟ್ಟು ತುಂಬ ಪ್ರಾಮುಖ್ಯ. ‘ಬಹು ಮಂದಿ ಆಲೋಚನಾಪರರಿರುವಲ್ಲಿ ಉದ್ದೇಶಗಳು ಈಡೇರುವವು’ ಎಂದು ಬೈಬಲ್‌ಹೇಳುತ್ತದೆ. (ಜ್ಞಾನೋಕ್ತಿ 15:22) ನೀವು ಜೊತೆಗೂಡಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗ ಬೈಬಲ್‌ತತ್ವಗಳು ನಿಮ್ಮನ್ನು ಮಾರ್ಗದರ್ಶಿಸಲಿ.—ಜ್ಞಾನೋಕ್ತಿ 8:32, 33.

ಹೀಗೆ ಮಾಡಿ:

  • ನಿಮ್ಮ ಸಂಗಾತಿಯೊಂದಿಗೆ ವಿಷಯವನ್ನು ಅಥವಾ ಅಭಿಪ್ರಾಯಗಳನ್ನು ಮಾತ್ರವಲ್ಲದೆ ನಿಮ್ಮ ಭಾವನೆಗಳನ್ನೂ ಹಂಚಿಕೊಳ್ಳಿ

  • ಯಾವುದಾದರೂ ವಿಷಯವನ್ನು ಮಾಡಲು ಒಪ್ಪಿಕೊಳ್ಳುವ ಅಥವಾ ಯಾರಿಗಾದರೂ ಮಾತು ಕೊಡುವ ಮುಂಚೆ ನಿಮ್ಮ ಸಂಗಾತಿಯ ಅಭಿಪ್ರಾಯ ಕೇಳಿ

^ ಪ್ಯಾರ. 4 ಬೈಬಲ್‌ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.