ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿನ್ನಕ್ಕಿಂತ ಅಮೂಲ್ಯವಾದದ್ದನ್ನು ಹುಡುಕಿ

ಚಿನ್ನಕ್ಕಿಂತ ಅಮೂಲ್ಯವಾದದ್ದನ್ನು ಹುಡುಕಿ

ನಿಮಗೆ ಯಾವತ್ತಾದರೂ ಚಿನ್ನದ ಗಟ್ಟಿ ಸಿಕ್ಕಿದೆಯಾ? ಅಪರೂಪವಾಗಿ ಕೆಲವರಿಗೆ ಸಿಕ್ಕಿರಬಹುದು. ಆದರೆ, ಲಕ್ಷಾಂತರ ಜನರು ಚಿನ್ನಕ್ಕಿಂತ ಅಮೂಲ್ಯವಾಗಿರುವುದನ್ನು ಕಂಡುಕೊಂಡಿದ್ದಾರೆ. ಅದೇ ದೈವಿಕ ವಿವೇಕ. ಇದು “ಚೊಕ್ಕ ಬಂಗಾರ”ಕ್ಕಿಂತಲೂ ಅಮೂಲ್ಯ.—ಯೋಬ 28:12, 15.

ಬೈಬಲ್‌ ವಿದ್ಯಾರ್ಥಿಗಳು ಕೆಲವು ವಿಧಗಳಲ್ಲಿ ಚಿನ್ನದ ಅನ್ವೇಷಕರಂತೆ ಇದ್ದಾರೆ. ಈ ವಿದ್ಯಾರ್ಥಿಗಳು ದೇವರ ವಾಕ್ಯದಲ್ಲಿರುವ ಬೆಲೆಕಟ್ಟಲಾಗದ ವಿವೇಕವನ್ನು ಪಡೆಯಲು ಶತಪ್ರಯತ್ನ ಮಾಡಬೇಕು. ಚಿನ್ನವನ್ನು ಕಂಡುಕೊಳ್ಳುವ ಮೂರು ವಿಧಗಳಿಂದ ಬೈಬಲ್‌ ವಿದ್ಯಾರ್ಥಿಗಳು ಏನು ಕಲಿಯಬಹುದು ಎಂದು ನೋಡೋಣ.

ನಿಮಗೆ ಸಿಕ್ಕಿದ್ದು ಚಿನ್ನದ ಗಟ್ಟಿ!

ನೆನಸಿ, ನೀವು ಒಂದು ನದಿತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದೀರಾ. ದಾರಿಯಲ್ಲಿ ಸೂರ್ಯನ ಕಿರಣಕ್ಕೆ ಪಳಪಳ ಹೊಳೆಯುತ್ತಾ ಇರುವ ಸುಂದರವಾದ ಪುಟ್ಟ ವಸ್ತು ನಿಮ್ಮ ಗಮನ ಸೆಳೆಯುತ್ತದೆ. ನೀವು ಬಗ್ಗಿ ಏನಿರಬಹುದು ಎಂದು ನೋಡಿದರೆ ಆಹಾ, ಅದೊಂದು ಚಿನ್ನದ ಗಟ್ಟಿ! ಆಕಾರದಲ್ಲಿ ಅದು ಬೆಂಕಿ ಕಡ್ಡಿಯ ತುದಿಗಿಂತ ಚಿಕ್ಕದು, ಆದರೆ ಅದರ ಹೊಳಪು ವಜ್ರಕ್ಕಿಂತ ಹೆಚ್ಚು. ಇನ್ನಷ್ಟು ಹೆಚ್ಚು ಸಿಗುತ್ತೇನೋ ಎಂಬ ನಿರೀಕ್ಷೆಯಲ್ಲಿ ನೀವು ಸುತ್ತಲೂ ಕಣ್ಣಾಡಿಸುತ್ತೀರಲ್ಲವೇ?

ಅದೇರೀತಿ, ಯೆಹೋವನ ಸಾಕ್ಷಿಯೊಬ್ಬರು ನಿಮ್ಮನ್ನು ಭೇಟಿಯಾಗಿ ಬೈಬಲಿನಲ್ಲಿರುವ ನಿರೀಕ್ಷೆಯನ್ನು ಸ್ವಲ್ಪ ಸಮಯದ ಹಿಂದಷ್ಟೇ ನಿಮ್ಮೊಟ್ಟಿಗೆ ಹಂಚಿಕೊಂಡಿರಬಹುದು. ಅವರೊಂದಿಗೆ ಮಾತಾಡುತ್ತಿರುವಾಗ ನಿಮಗೆ ಸಿಕ್ಕ ಮೊದಲ ಆಧ್ಯಾತ್ಮಿಕ ಗಟ್ಟಿಯ ಬಗ್ಗೆ ನಿಮಗಿನ್ನೂ ನೆನಪಿರಬಹುದು. ಅದು ದೇವರ ಹೆಸರು ಯೆಹೋವ ಎಂದು ಮೊದಲ ಬಾರಿ ಬೈಬಲಿನಲ್ಲಿ ನೋಡಿದ್ದಾಗಿರಬಹುದು. (ಕೀರ್ತ. 83:18) ಅಥವಾ ನೀವು ಯೆಹೋವನಿಗೆ ಸ್ನೇಹಿತರಾಗಬಹುದು ಎಂದು ಕಲಿತದ್ದಾಗಿರಬಹುದು. (ಯಾಕೋ. 2:23) ತಕ್ಷಣ ನಿಮಗೆ ಚಿನ್ನಕ್ಕಿಂತಲೂ ಅಮೂಲ್ಯವಾಗಿರೋದು ನನಗೆ ಸಿಕ್ಕಿತು ಎಂದು ಅನಿಸಿರಬಹುದು ಮತ್ತು ಇನ್ನೂ ಹೆಚ್ಚು ಆಧ್ಯಾತ್ಮಿಕ ಗಟ್ಟಿಗಳನ್ನು ಹುಡುಕುವ ಬಯಕೆ ನಿಮ್ಮಲ್ಲಿ ಮೂಡಿರಬಹುದು.

ಇನ್ನೂ ಹೆಚ್ಚು ಸಿಗುತ್ತದೆ!

ಚಿನ್ನದ ಚಿಕ್ಕ ಚಿಕ್ಕ ತುಣುಕುಗಳು ಕೆಲವೊಮ್ಮೆ ನದಿ ಮತ್ತು ತೊರೆಗಳಲ್ಲಿ ಶೇಖರವಾಗುತ್ತವೆ. ಅದನ್ನು ಮೆಕ್ಕಲು ಚಿನ್ನ ಅನ್ನುತ್ತಾರೆ. ಚಿನ್ನದ ಅನ್ವೇಷಕನು ಶತಪ್ರಯತ್ನ ಮಾಡಿದರೆ, ಕೆಲವು ತಿಂಗಳಲ್ಲೇ ಕೆ.ಜಿ.ಗಟ್ಟಲೆ ಚಿನ್ನ ಬಾಚಿಕೊಳ್ಳಬಹುದು. ಅದರ ಬೆಲೆ ಎಷ್ಟೋ ಲಕ್ಷ.

ಚಿನ್ನದ ಅನ್ವೇಷಕನಿಗೆ ಚಿನ್ನ ಸಿಕ್ಕಿದಾಗ ಹೇಳಲಾರದಷ್ಟು ಸಂತೋಷ ಆಗುತ್ತದೆ. ಅದೇರೀತಿ, ನೀವು ಯೆಹೋವನ ಸಾಕ್ಷಿಯೊಟ್ಟಿಗೆ ಬೈಬಲ್‌ ಕಲಿಯಲು ಶುರುಮಾಡಿದಾಗ ನಿಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಒಂದೊಂದು ಬೈಬಲ್‌ ವಚನದ ಬಗ್ಗೆ ಧ್ಯಾನಿಸಿದಾಗ ನಿಮ್ಮ ಜ್ಞಾನ ಭಂಡಾರಕ್ಕೆ ಹೊಸ ಹೊಸ ವಿಷಯಗಳು ಸೇರಿಕೊಂಡಿತು. ಅದು ನಿಮ್ಮನ್ನು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸಿತು. ಆ ಅಮೂಲ್ಯ ಬೈಬಲ್‌ ಸತ್ಯಗಳನ್ನು ಧ್ಯಾನಿಸಿದಾಗ ಯೆಹೋವನಿಗೆ ಹೇಗೆ ಸ್ನೇಹಿತರಾಗಬಹುದು, ಆತನ ಪ್ರೀತಿಯಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ಕಲಿತಿರಿ.—ಯಾಕೋ. 4:8; ಯೂದ 20, 21.

ಬೈಬಲಿನ ಅಮೂಲ್ಯ ಸತ್ಯಗಳನ್ನು ಕಲಿಯಲು ಚಿನ್ನವನ್ನು ಹುಡುಕುವ ಅನ್ವೇಷಕನಂತೆ ನಿಮ್ಮ ಕೈಲಾದದ್ದನ್ನೆಲ್ಲ ಮಾಡುತ್ತೀರಾ?

ಚಿನ್ನದ ಅನ್ವೇಷಕನು ಅಮೂಲ್ಯವಾದ ಚಿನ್ನದ ತುಣುಕುಗಳನ್ನು ಹುಡುಕುವಂತೆಯೇ ನೀವು ಸಹ ಬೆಲೆಬಾಳುವ ಆಧ್ಯಾತ್ಮಿಕ ವಿಷಯಗಳನ್ನು ಹುಡುಕಲು ಶತಪ್ರಯತ್ನ ಹಾಕಿದಿರಿ. ಬೈಬಲಿನ ಮೂಲಭೂತ ಸತ್ಯಗಳನ್ನು ತಿಳುಕೊಂಡ ಮೇಲೆ ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಬೇಕಾದ ಹೆಜ್ಜೆಗಳನ್ನು ತೆಗೆದುಕೊಂಡಿರಿ.—ಮತ್ತಾ. 28:19, 20.

ಹುಡುಕುತ್ತಲೇ ಇರಿ!

ಬೃಹದಾಕಾರದ ಬಂಡೆಗಳಲ್ಲಿ ಚಿಕ್ಕ ಪ್ರಮಾಣದ ಚಿನ್ನವನ್ನು ಅನ್ವೇಷಕರು ಕಂಡುಕೊಳ್ಳುತ್ತಾರೆ. ಕೆಲವು ಬಂಡೆಗಳಲ್ಲಿ ಹೆಚ್ಚು ಚಿನ್ನದ ಸಂಗ್ರಹವಿರುತ್ತದೆ. ಈ ಚಿನ್ನವನ್ನು ಹೊರಗೆ ತರಲು ಭೂಮಿಯನ್ನು ಅಗೆದು ಅದಿರನ್ನು ಹೊರತೆಗೆದು ಅದನ್ನು ಪುಡಿಪುಡಿ ಮಾಡಿ ಚಿನ್ನವನ್ನು ಬೇರ್ಪಡಿಸಬೇಕು. ಒಂದು ಸಾರಿ ಕಣ್ಣಾಡಿಸಿದ ತಕ್ಷಣ ಅದಿರಲ್ಲಿರುವ ಚಿನ್ನ ಸಿಕ್ಕಿಬಿಡಲ್ಲ. ಯಾಕೆ ಗೊತ್ತಾ? ಯಾಕೆಂದರೆ ಒಂದು ಟನ್‌ ಮಣ್ಣಿನಲ್ಲಿ ಸಿಗುವ ಚಿನ್ನ ಕೇವಲ 10 ಗ್ರಾಂ! ಆದರೂ, “ಕೈ ಕೆಸರಾದರೆ ಬಾಯಿ ಮೊಸರು” ಅನ್ನುವ ಹಾಗೆ ಆ ಚಿನ್ನ ಪಡೆಯಲು ಅನ್ವೇಷಕನು ಹಾಕುವ ಪ್ರಯತ್ನ ಸಾರ್ಥಕ.

ಒಬ್ಬನಿಗೆ “ಕ್ರಿಸ್ತನ ಕುರಿತಾದ ಪ್ರಾಥಮಿಕ ಸಿದ್ಧಾಂತ”ಗಳು ಗೊತ್ತಿದ್ದರೂ ಇನ್ನೂ ಹೆಚ್ಚು ಆಧ್ಯಾತ್ಮಿಕ ವಿಷಯಗಳನ್ನು ಹುಡುಕಲು ಅವನು ಪ್ರಯತ್ನ ಹಾಕಬೇಕು. (ಇಬ್ರಿ. 6:1, 2) ಹೊಸ ಹೊಸ ವಿಷಯಗಳನ್ನು ಹೀರಿಕೊಳ್ಳಲು ಮತ್ತು ವೈಯಕ್ತಿಕ ಬೈಬಲ್‌ ಅಧ್ಯಯನದಿಂದ ಪ್ರಾಯೋಗಿಕ ಪಾಠಗಳನ್ನು ಕಲಿಯಲು ನೀವು ಪ್ರಯತ್ನಿಸಬೇಕು. ಹಾಗಾಗಿ, ನೀವು ವರ್ಷಾನುಗಟ್ಟಲೆಯಿಂದ ಬೈಬಲ್‌ ಓದುತ್ತಿದ್ದರೂ ವೈಯಕ್ತಿಕ ಬೈಬಲ್‌ ಅಧ್ಯಯನದಿಂದ ಪ್ರಯೋಜನ ಪಡೆಯುತ್ತಾ ಇರಬೇಕಾದರೆ ಏನು ಮಾಡಬೇಕು?

ಕಲಿಯುವ ಉತ್ಸಾಹ ಕಳಕೊಳ್ಳಬೇಡಿ. ಓದುತ್ತಿರುವ ಮಾಹಿತಿಗೆ ಚೆನ್ನಾಗಿ ಗಮನಕೊಡಿ. ಹುಡುಕುತ್ತಲೇ ಇರಿ, ಆಗ ಬೆಲೆಕಟ್ಟಲಾಗದ ದೇವರ ವಿವೇಕ ಮತ್ತು ಉಪದೇಶಗಳು ನಿಮಗೆ ಸಿಗುತ್ತವೆ. (ರೋಮ. 11:33) ಬೈಬಲಿನ ಬಗ್ಗೆ ನಿಮಗಿರುವ ಜ್ಞಾನವನ್ನು ಹೆಚ್ಚಿಸಲು ನಿಮ್ಮ ಭಾಷೆಯಲ್ಲಿ ಲಭ್ಯವಿರುವ ಸಂಶೋಧನಾ ಸಾಧನಗಳನ್ನು ಚೆನ್ನಾಗಿ ಉಪಯೋಗಿಸಿ. ನಿಮಗಿರುವ ಪ್ರಶ್ನೆಗಳಿಗೆ ಉತ್ತರ ಮತ್ತು ಬೇಕಾದ ಮಾರ್ಗದರ್ಶನೆ ಸಿಗುವ ವರೆಗೆ ತಾಳ್ಮೆಯಿಂದಿರಿ. ಯಾವ ವಚನ ಅಥವಾ ಲೇಖನ ಸಹೋದರ ಸಹೋದರಿಯರಿಗೆ ಸಹಾಯ ಮತ್ತು ಪ್ರೋತ್ಸಾಹ ಕೊಟ್ಟಿದೆ ಎಂದು ಅವರನ್ನು ಕೇಳಿ. ಬೈಬಲ್‌ ಓದುವಾಗ ನೀವು ಕಂಡುಕೊಂಡ ಆಸಕ್ತಿಕರ ಅಂಶಗಳನ್ನು ಹಂಚಿಕೊಳ್ಳಿ.

ಬೈಬಲ್‌ ಅಧ್ಯಯನದ ಗುರಿ ಕೇವಲ ಜ್ಞಾನ ಪಡೆದುಕೊಳ್ಳುವುದಲ್ಲ. “ಜ್ಞಾನವು ಉಬ್ಬಿಸುತ್ತದೆ” ಎಂದು ಅಪೊಸ್ತಲ ಪೌಲ ಎಚ್ಚರಿಸಿದ್ದಾನೆ. (1 ಕೊರಿಂ. 8:1) ಆದ್ದರಿಂದ, ದೀನರಾಗಿರಲು ಮತ್ತು ನಮ್ಮ ನಂಬಿಕೆಯನ್ನು ಬಲಪಡಿಸಲು ಶ್ರಮಹಾಕಬೇಕು. ಕುಟುಂಬ ಆರಾಧನೆ, ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ತಪ್ಪದೇ ಮಾಡಿ. ಅದು ಯೆಹೋವನ ಮಟ್ಟ ಮತ್ತು ಚಿತ್ತಕ್ಕೆ ಹೊಂದಿಕೆಯಲ್ಲಿ ಜೀವಿಸಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಇತರರಿಗೆ ಸಹಾಯ ಮಾಡಲು ಪ್ರಚೋದಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ, ಚಿನ್ನಕ್ಕಿಂತ ಅಮೂಲ್ಯವಾದ ವಿಷಯಗಳು ನಿಮಗೆ ಸಿಕ್ಕಿರುವುದರಿಂದ ಸಂತೋಷಪಡುತ್ತೀರಿ.—ಜ್ಞಾನೋ. 3:13, 14.