ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ: ಜಗತ್ತಿನ ವಿನಾಶಕ್ಕೆ ಭಯಪಡಬೇಕೆ?

ಜಗತ್ತಿನ ವಿನಾಶ ಹೆದರಿಕೆ ಹಪಾಹಪಿ ಹತಾಶೆ

ಜಗತ್ತಿನ ವಿನಾಶ ಹೆದರಿಕೆ ಹಪಾಹಪಿ ಹತಾಶೆ

ಪ್ರಾಚೀನ ಮಾಯಾ ಕ್ಯಾಲೆಂಡರ್‌ ಪ್ರಕಾರ ಡಿಸೆಂಬರ್‌ 21, 2012ರಂದು ಜಗತ್ತು ಅಲ್ಲೋಲ ಕಲ್ಲೋಲ ಆಗುತ್ತೆ ಎಂದಿದ್ದರು ಅನೇಕರು. ಈಗ ನಿಮಗೇನು ಅನಿಸುತ್ತಿದೆ? ನಿರಾಳ? ನಿರಾಶೆ? ನಿರ್ಭಾವುಕತೆ? ಲೋಕಾಂತ್ಯದ ಲೆಕ್ಕಾಚಾರ ಮತ್ತೊಮ್ಮೆ ತಲೆಕೆಳಗಾದಂತೆ ಕಾಣುತ್ತಿದೆಯಲ್ಲಾ!

“ಲೋಕಾಂತ್ಯ” ಬಗ್ಗೆ ಬೈಬಲ್‌ ಏನು ಹೇಳುತ್ತೆ? (ಮತ್ತಾಯ 24:3, ಪವಿತ್ರ ಗ್ರಂಥ ಭಾಷಾಂತರ) ಕೆಲವರು ಭೂಮಿ ಉರಿದು ಭಸ್ಮವಾಗುತ್ತೆ ಅಂತ ಭಯಪಡುತ್ತಾರೆ. ಇನ್ನು ಕೆಲವರಿಗೆ ಜಗತ್ತಿನ ಕೊನೆ ಹೇಗಾಗುತ್ತೆ ಎಂದು ನೋಡುವ ಕಾತರ. ಹಲವರು ವರ್ಷ ವರ್ಷಗಳಿಂದ ಭೂಮಿಯ ಅಂತ್ಯಕಾಲದ ಬಗ್ಗೆ ಭವಿಷ್ಯವಾಣಿಗಳನ್ನು ಕೇಳಿ ಕೇಳಿ ಬೇಸತ್ತುಹೋಗಿದ್ದಾರೆ. ಲೋಕಾಂತ್ಯದ ಬಗ್ಗೆ ಜನರೇ ಏನೇನೋ ಕಲ್ಪಿಸಿಕೊಳ್ಳುತ್ತಿದ್ದಾರಾ? ನಿಜವಾಗ್ಲೂ ಏನು ನಡೆಯುತ್ತೆ?

ಲೋಕಾಂತ್ಯದ ಬಗ್ಗೆ ಬೈಬಲ್‌ ಹೇಳುವ ಸಂಗತಿಗಳನ್ನು ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಲೋಕಾಂತ್ಯವನ್ನು ಎದುರುನೋಡಬೇಕು ಎನ್ನುವ ಬೈಬಲ್‌ ಎದುರುನೋಡಬೇಕು ಯಾಕೆ ಎಂಬ ಕಾರಣಗಳನ್ನೂ ಕೊಡುತ್ತೆ. ಅಷ್ಟೇ ಅಲ್ಲ ಅಂತ್ಯ ವಿಳಂಬವಾಗುತ್ತಿದೆ ಅಂತನಿಸಿದಾಗ ಹತಾಶೆ ಸಹಜ ಎಂದೂ ಹೇಳುತ್ತೆ. ಲೋಕಾಂತ್ಯದ ಬಗ್ಗೆ ಜನರಲ್ಲಿ ಸಾಮಾನ್ಯವಾಗಿ ಬರುವಂಥ ಪ್ರಶ್ನೆಗಳಿಗೆ ಬೈಬಲ್‌ ಏನು ಹೇಳುತ್ತದೆ . . . ಮುಂದೆ ಓದಿ . . . .

ಭೂಮಿ ಉರಿದು ಭಸ್ಮವಾಗುತ್ತಾ?

ಬೈಬಲಿನ ಉತ್ತರ: “ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು [ದೇವರು] ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿ”ದ್ದಾನೆ.ಕೀರ್ತನೆ 104:5.

ನಮ್ಮ ಪೃಥ್ವಿಗೆ ಬೆಂಕಿಯಿಂದಾಗಲಿ ಇನ್ಯಾವುದೇ ವಿಷಯದಿಂದ ಆಗಲಿ ಆಪತ್ತು ಬರಲಾರದು. ಎಷ್ಟೇ ಯುಗಗಳು ಕಳೆದರೂ ಈ ಭೂಮಿಯೇ ಮನುಷ್ಯನ ಶಾಶ್ವತ ವಾಸಸ್ಥಳ ಎಂದು ಬೈಬಲ್‌ ಹೇಳುತ್ತೆ. ಬೈಬಲಿನ ಕೀರ್ತನೆ 37:29 “ನೀತಿವಂತರೋ [ಭೂಮಿಯನ್ನು] ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎನ್ನುತ್ತೆ.—ಕೀರ್ತನೆ 115:16; ಯೆಶಾಯ 45:18.

ದೇವರು ಭೂಗ್ರಹವನ್ನು ಸೃಷ್ಟಿಸಿ “ಬಹು ಒಳ್ಳೇದಾಗಿ”ದೆ ಎಂದಿದ್ದನು. ಈಗಲೂ ದೇವರ ಅಭಿಪ್ರಾಯ ಬದಲಾಗಿಲ್ಲ. (ಆದಿಕಾಂಡ 1:31) ಅದನ್ನು ನಾಶಮಾಡಬೇಕೆಂಬ ಉದ್ದೇಶ ಆತನಿಗಿಲ್ಲ. ಬದಲಿಗೆ “ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸುವ” ಉದ್ದೇಶ ಆತನಿಗಿದೆ. ಅಲ್ಲದೆ ಭೂಮಿ ನಾಶವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮಾತುಕೊಟ್ಟಿದ್ದಾನೆ.—ಪ್ರಕಟನೆ 11:18.

ಆದರೆ ಬೈಬಲಿನ 2 ಪೇತ್ರ 3:7ರಲ್ಲಿ ಭೂಮಿ ಬೆಂಕಿಗೆ ತುತ್ತಾಗುವುದೆಂದು ಹೇಳಿದೆಯಲ್ಲಾ? “ಈಗಿರುವ ಭೂಮ್ಯಾಕಾಶಗಳು . . . ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ” ಎಂದು ಹೇಳುತ್ತೆ ಸತ್ಯವೇದವು ಬೈಬಲ್‌. ಹಾಗಾದರೆ ನಿಜವಾಗ್ಲೂ ಭೂಮಿ ಬೆಂಕಿಯಿಂದ ನಾಶವಾಗುತ್ತಾ? ಇಲ್ಲ. ಬೈಬಲ್‌ ಕೆಲವೊಮ್ಮೆ ಆಕಾಶ, ಭೂಮಿ, ಬೆಂಕಿ ಎಂಬೀ ಪದಗಳನ್ನು ಸಾಂಕೇತಿಕವಾಗಿ ಬಳಸುತ್ತೆ. ಉದಾ: ಧರ್ಮೋಪದೇಶಕಾಂಡ 30:19ರಲ್ಲಿ “ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ” ಎಂದಿದೆ. ಇಲ್ಲಿ ಭೂಮಿ ಮನುಷ್ಯರನ್ನು ಸೂಚಿಸುತ್ತೆ.

ಅದೇ ರೀತಿ 2 ಪೇತ್ರ 3:7ರಲ್ಲಿರುವ ಆಕಾಶ, ಭೂಮಿ, ಬೆಂಕಿ ಎಂಬೀ ಪದಗಳನ್ನು ಸಾಂಕೇತಿಕ ಅರ್ಥದಲ್ಲಿ ಬಳಸಲಾಗಿದೆ. ಅದರ ಹಿಂದಿನ ಅಂದರೆ ವಚನ 5 ಮತ್ತು 6ರನ್ನು ನೋಡಿದರೆ ಪ್ರಾಚೀನ ಕಾಲದ ನೋಹ ಎಂಬ ಸತ್ಪುರುಷನ ಸಮಯದಲ್ಲಿ ನಡೆದ ಮಹಾ ಜಲಪ್ರಳಯದ ಬಗ್ಗೆ ಇದೆ. ಅಂದು ನೀರಿನಲ್ಲಿ ನಾಶವಾಗಿದ್ದು ಭೂಮಿಯಲ್ಲ. ಭೂಮಿಯಲ್ಲಿದ್ದ ದುಷ್ಟ ಮಾನವರು. ಜೊತೆಗೆ “ಆಕಾಶ” ಅಂದರೆ ಜನರನ್ನು ಆಳುತ್ತಿದ್ದವರು ಕೂಡ ನಾಶವಾದರು. (ಆದಿಕಾಂಡ 6:11) ಅದೇ ರೀತಿ ದುಷ್ಟ ಮಾನವರು ಮತ್ತು ಭ್ರಷ್ಟ ಸರ್ಕಾರಗಳು ಬೆಂಕಿಯಿಂದ ಅಂದರೆ ಶಾಶ್ವತವಾಗಿ ನಾಶವಾಗಿ ಹೋಗುತ್ತೆ ಎಂದು 2 ಪೇತ್ರ 3:7 ಭವಿಷ್ಯ ನುಡಿಯುತ್ತಿದೆ.

ಲೋಕಾಂತ್ಯ ಅಂದರೆ ಏನೆಲ್ಲ ನಡೆಯುತ್ತೆ?

ಬೈಬಲಿನ ಉತ್ತರ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.”1 ಯೋಹಾನ 2:17.

ಇಲ್ಲಿ ಗತಿಸಿಹೋಗಲಿರುವ “ಲೋಕ” ಅನ್ನುವುದು ಭೂಗ್ರಹವಲ್ಲ. ದೇವರ ನೀತಿನಿಯಮಗಳನ್ನು ಉಲ್ಲಂಘಿಸುತ್ತಾ ಬದುಕುತ್ತಿರುವ ಮಾನವ ಲೋಕ. ಅದನ್ನು ದೇವರು ಅಳಿಸಿಹಾಕುತ್ತಾನೆ. ಉದಾಹರಣೆಗೆ, ಕ್ಯಾನ್ಸರ್‌ ರೋಗಿಯ ಪ್ರಾಣ ಉಳಿಸಲು ವೈದ್ಯರು ಕ್ಯಾನ್ಸರ್‌ ಗಡ್ಡೆಯನ್ನು ಮಾತ್ರ ತೆಗೆದುಹಾಕುತ್ತಾರೆ. ಅದೇ ರೀತಿ ಜನರು ಸಂತೋಷವಾಗಿ ಜೀವಿಸಲೆಂದು ದೇವರು ಕೆಟ್ಟ ಜನರನ್ನು ಮಾತ್ರ ಭೂಮಿಯಿಂದ ‘ತೆಗೆದುಹಾಕುತ್ತಾನೆ.’ (ಕೀರ್ತನೆ 37:9) ಈ ದೃಷ್ಟಿಯಲ್ಲಿ ಲೋಕಾಂತ್ಯ ಎನ್ನುವುದು ಒಳ್ಳೇ ವಿಷಯ.

ಇದೇ ವಿಷಯವನ್ನು ಇನ್ನಿತರ ಬೈಬಲ್‌ ಭಾಷಾಂತರಗಳು ಕೂಡ ಹೇಳುತ್ತೆ. “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಮತ್ತು “ಯುಗದ ಸಮಾಪ್ತಿ” ಎನ್ನುತ್ತೆ ಆ ಭಾಷಾಂತರಗಳು. (ಮತ್ತಾಯ 24:3, ಸತ್ಯವೇದವು) ಹಾಗಾದರೆ ಮಾನವಕುಲ ಮತ್ತು ಭೂಗ್ರಹ ಇವೆರಡೂ ನಾಶವಾಗಲ್ಲ. ಹಾಗೆಂದ ಮೇಲೆ ಒಂದು ಹೊಸ ಯುಗ, ಒಂದು ಹೊಸ ವಿಷಯಗಳ ವ್ಯವಸ್ಥೆ ಬರಲೇ ಬೇಕಲ್ಲವೇ? ಬರುತ್ತೆ ಎನ್ನುತ್ತೆ ಬೈಬಲ್‌. ಅದನ್ನೇ ಬೈಬಲ್‌ “ಬರಲಿರುವ ವಿಷಯಗಳ ವ್ಯವಸ್ಥೆ” ಎಂದು ಹೇಳುತ್ತೆ.—ಲೂಕ 18:30.

ಆ ಕಾಲವನ್ನು ಯೇಸು “ಹೊಸ ಸೃಷ್ಟಿ” ಎಂದು ಹೇಳಿದನು. ಮನುಷ್ಯರು ಯಾವ ಪರಿಸ್ಥಿತಿಯಲ್ಲಿ ಜೀವನ ಮಾಡಬೇಕೆನ್ನುವುದು ದೇವರ ಉದ್ದೇಶವಾಗಿತ್ತೋ ಆ ಪರಿಸ್ಥಿತಿಯನ್ನು ಯೇಸು ಮತ್ತೆ ನಿರ್ಮಿಸುತ್ತಾನೆ. (ಮತ್ತಾಯ 19:28) ಆಗ . . . .

  • ಸುಂದರ ಉದ್ಯಾನವನದಂಥ ಭೂಮಿಯಲ್ಲಿ ಎಲ್ಲರಿಗೂ ಭದ್ರತೆ, ಸುಖ ಸಮೃದ್ಧಿ ಇರುತ್ತೆ.—ಯೆಶಾಯ 35:1; ಮೀಕ 4:4.

  • ಸಾರ್ಥಕತೆ, ಸಂತೃಪ್ತಿ ಕೊಡುವ ಕೆಲಸ ಇರುತ್ತೆ.—ಯೆಶಾಯ 65:21-23.

  • ರೋಗರುಜಿನಗಳಿಂದ ಸಂಪೂರ್ಣ ಮುಕ್ತಿ ಸಿಗುತ್ತೆ.—ಯೆಶಾಯ 33:24.

  • ಚಿರಯೌವ್ವನ, ಮುದುಕರು ಯುವಕರಾಗುತ್ತಾರೆ.—ಯೋಬ 33:25.

  • ತೀರಿಹೋದವರು ಜೀವ ಪಡೆದುಕೊಳ್ಳುತ್ತಾರೆ.—ಯೋಹಾನ 5:28, 29.

ನಾವು “ದೇವರ ಚಿತ್ತವನ್ನು” ಮಾಡಿದರೆ ಅಂದರೆ ದೇವರು ಹೇಳಿದಂತೆ ನಡೆದರೆ ಲೋಕಾಂತ್ಯಕ್ಕೆ ಹೆದರಬೇಕಾಗಿಲ್ಲ. ಅದನ್ನು ಸಂತೋಷದಿಂದ ಎದುರುನೋಡುತ್ತಿರಬಹುದು.

ಲೋಕಾಂತ್ಯ ನಿಜವಾಗ್ಲೂ ಹತ್ತಿರವಿದೆಯಾ?

ಬೈಬಲಿನ ಉತ್ತರ: “ಈ ಸಂಗತಿಗಳು ಸಂಭವಿಸುತ್ತಿರುವುದನ್ನು ನೀವು ಸಹ ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿರಿ.”ಲೂಕ 21:31.

ದ ಲಾಸ್ಟ್‌ ಡೇಸ್‌ ಆರ್‌ ಹಿಯರ್‌ ಅಗೈನ್‌ ಎಂಬ ಪುಸ್ತಕದಲ್ಲಿ ಪ್ರೊಫೆಸರ್‌ ರಿಚರ್ಡ್‌ ಕೈಲ್‌ ಹೀಗೆ ಬರೆಯುತ್ತಾರೆ: “ಹಠಾತ್ತನೆ ಆಗುವ ಬದಲಾವಣೆಗಳು ಮತ್ತು ಸಮಾಜದ ಅಸ್ತವ್ಯಸ್ತತೆಗಳಿಂದಾಗಿ ಜಗತ್ತಿನ ಅಂತ್ಯದ ಬಗ್ಗೆ ಲೆಕ್ಕಾಚಾರಗಳು, ಭವಿಷ್ಯವಾಣಿಗಳು ತಲೆಎತ್ತುತ್ತಿವೆ.” ಇದು ಸತ್ಯ. ಅದರಲ್ಲೂ ಬದಲಾವಣೆಗಳ, ಅಸ್ತವ್ಯಸ್ತತೆಗಳ ಕಾರಣ ನಿಗೂಢವಾದಾಗಂತೂ ಇನ್ನೂ ಹೆಚ್ಚು ಲೆಕ್ಕಾಚಾರಗಳು ಹೆಡೆಯಾಡುತ್ತವೆ.

ಆದರೆ ಬೈಬಲಿನಲ್ಲಿ ಭವಿಷ್ಯನುಡಿದವರು ತಮ್ಮ ಕಾಲದಲ್ಲಿ ನಡೆಯುತ್ತಿದ್ದ ಲೋಕಘಟನೆಗಳ ಆಧಾರದ ಮೇಲೆ ಲೋಕಾಂತ್ಯದ ಬಗ್ಗೆ ಬರೆದಿಲ್ಲ. ಮುಂದೆ ಬರಲಿರುವ ಲೋಕಾಂತ್ಯದತ್ತ ಬೆರಳು ತೋರಿಸುವ ಸಂಗತಿಗಳನ್ನು ಬರೆದರು. ಅವನ್ನು ದೇವರ ಸಹಾಯದಿಂದ ಬರೆದರು. ಅಂಥ ಕೆಲವು ಭವಿಷ್ಯನುಡಿಗಳನ್ನು ಮುಂದೆ ಕೊಡಲಾಗಿದೆ. ಆ ಸಂಗತಿಗಳು ಇಂದು ನಡಿತಿದ್ಯಾ ಅಂತ ನೀವೇ ನೋಡಿ . . .

  • ಯುದ್ಧಗಳು, ಬರಗಾಲಗಳು, ಭೂಕಂಪಗಳು, ಶರವೇಗದಲ್ಲಿ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳು.—ಮತ್ತಾಯ 24:7; ಲೂಕ 21:11.

  • ಅಪರಾಧಗಳ ಹೆಚ್ಚಳ.—ಮತ್ತಾಯ 24:12.

  • ಮಾನವರಿಂದ ಭೂಮಿ, ಪರಿಸರದ ವಿನಾಶ.—ಪ್ರಕಟನೆ 11:18.

  • ಸ್ವಾರ್ಥ ಹಣದಾಸೆ ಇರುವ, ದೇವರನ್ನು ಬಿಟ್ಟು ಸುಖಭೋಗಗಳ ಹಿಂದೆ ಹೋಗುವ ಜನರು.—2 ತಿಮೊಥೆಯ 3:2, 4.

  • ಕುಟುಂಬ ಕಲಹಗಳು.—2 ತಿಮೊಥೆಯ 3:2, 3.

  • ಅಂತ್ಯದ ಬಗ್ಗೆ ಉಡಾಫೆ ಮನೋಭಾವ.—ಮತ್ತಾಯ 24:37-39.

  • ದೇವರ ರಾಜ್ಯದ ಸುವಾರ್ತೆ ಬಗ್ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ನಡೆಯುತ್ತಿರುವ ಸಾಕ್ಷಿಕಾರ್ಯ.—ಮತ್ತಾಯ 24:14.

“ಈ ಎಲ್ಲ ಸಂಗತಿಗಳನ್ನು ನೀವು ನೋಡುವಾಗ” ಯೇಸು ಹೇಳಿದಂತೆ ಲೋಕಾಂತ್ಯ ಸನ್ನಿಹಿತವಾಗಿದೆ ಎಂದು ತಿಳಿದುಕೊಳ್ಳಿ. (ಮತ್ತಾಯ 24:33) ಈ ಎಲ್ಲ ಪುರಾವೆಗಳನ್ನು ನೋಡಿ ಯೆಹೋವನ ಸಾಕ್ಷಿಗಳು ಲೋಕಾಂತ್ಯ ಹತ್ತಿರವಿದೆ ಎಂದು ನಂಬುತ್ತಾರೆ. ಹಾಗಾಗಿ 236 ದೇಶದ್ವೀಪಗಳಲ್ಲಿ ಅದರ ಬಗ್ಗೆ ಸಾರಿ ಹೇಳುತ್ತಿದ್ದಾರೆ.

ನಾವು ನಿರೀಕ್ಷಿಸಿದ ಸಮಯಕ್ಕೆ ಅಂತ್ಯ ಬಂದಿಲ್ಲ. ಅಂದ್ರೆ ಲೋಕಾಂತ್ಯ ಆಗೋದೇ ಇಲ್ವಾ?

ಬೈಬಲಿನ ಉತ್ತರ: “ಅವರು ‘ಶಾಂತಿ ಮತ್ತು ಭದ್ರತೆ’ ಎಂದು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರವೇ ಫಕ್ಕನೆ ಬರುವುದು ಮತ್ತು ಅವರು ಹೇಗೂ ತಪ್ಪಿಸಿಕೊಳ್ಳಲಾರರು.”1 ಥೆಸಲೊನೀಕ 5:3.

ಲೋಕಾಂತ್ಯವನ್ನು ಬೈಬಲ್‌ ಪ್ರಸವವೇದನೆಗೆ ಹೋಲಿಸುತ್ತೆ. ಗರ್ಭಿಣಿಗೆ ಪ್ರಸವವೇದನೆ ನಿರೀಕ್ಷಿಸಿರದ ಸಮಯದಲ್ಲಿ ಬರುತ್ತೆ. ಲೋಕಾಂತ್ಯ ಕೂಡ ಹಾಗೇ ಇದೆ. ಒಬ್ಬ ಗರ್ಭಿಣಿ ಮಹಿಳೆ ತನ್ನಲ್ಲಾಗುತ್ತಿರುವ ಬದಲಾವಣೆಯನ್ನು ಸದಾ ಗಮನಿಸುತ್ತಿರಬೇಕು. ಡಾಕ್ಟರ್‌ ಆಕೆಗೆ ಮಗುವಿನ ಜನನ ದಿನವನ್ನು ಲೆಕ್ಕಹಾಕಿ ಹೇಳಬಹುದು. ಒಂದುವೇಳೆ ಆ ದಿನ ದಾಟಿ ಹೋದರೂ ಇವತ್ತಿಲ್ಲ ನಾಳೆ ಮಗು ಹುಟ್ಟುತ್ತೆ ಅಂತ ಆಕೆಗೆ ಚೆನ್ನಾಗಿ ಗೊತ್ತಿರುತ್ತೆ ಮತ್ತು ಎದುರುನೋಡುತ್ತಿರುತ್ತಾಳೆ. ಅದೇ ರೀತಿ ನಾವು ನಿರೀಕ್ಷಿಸಿದ ಸಮಯದಲ್ಲಿ ಲೋಕಾಂತ್ಯ ಆಗಿಲ್ಲ ಎಂದಮಾತ್ರಕ್ಕೆ ನಾವು ಜೀವಿಸುತ್ತಿರುವುದು “ಕಡೆ ದಿವಸಗಳಲ್ಲಿ” ಎನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ.—2 ತಿಮೊಥೆಯ 3:1.

‘ಲೋಕಾಂತ್ಯ ಸನ್ನಿಹಿತವಾಗಿರೋದು ನಿಜವಾದ್ರೆ ಜನರು ಯಾಕೆ ಇದನ್ನ ನಂಬುತ್ತಿಲ್ಲ?’ ಅಂತ ನೀವು ಕೇಳಬಹುದು. ನಂಬದ ಜನರೂ ಇರುತ್ತಾರೆ ಅಂತ ಬೈಬಲ್‌ ಮುಂಚೆಯೇ ಹೇಳಿತ್ತು. ಕಾಲ ತೀರ ಕೆಟ್ಟುಹೋಗಿದೆ ಅನ್ನುವುದನ್ನಾಗಲಿ ಲೋಕಾಂತ್ಯ ಹತ್ತಿರವಾಗುತ್ತಿದೆ ಅನ್ನುವುದನ್ನಾಗಲಿ ಜನರು ನಂಬುವುದಿಲ್ಲ. ಬದಲಿಗೆ “ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದ ದಿನದಿಂದ ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ” ಎನ್ನುತ್ತಾ ಗೇಲಿಮಾಡುತ್ತಾರೆ. (2 ಪೇತ್ರ 3:3, 4) ಲೋಕಾಂತ್ಯ ಹತ್ತಿರವಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ, ಆದರೆ ಬಹುಪಾಲು ಜನರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ.—ಮತ್ತಾಯ 24:38, 39.

ಲೋಕಾಂತ್ಯ ಹತ್ತಿರವಿದೆ ಎನ್ನುವುದಕ್ಕೆ ಬೈಬಲ್‌ ಕೊಡುವ ಕೆಲವೊಂದು ಪುರಾವೆಗಳನ್ನು ಮಾತ್ರ ನಾವು ಈ ಲೇಖನದಲ್ಲಿ ನೋಡಿದೆವು. * ನಿಮಗೆ ಇನ್ನೂ ತಿಳಿದುಕೊಳ್ಳುವ ಆಸೆ ಇದೆಯಾ? ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿ. ಉಚಿತವಾಗಿ ಬೈಬಲ್‌ ಕಲಿಯಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಅವರು ನಿಮ್ಮ ಮನೆಗೆ ಬಂದು ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಸ್ಥಳದಲ್ಲಿ ಅಥವಾ ದೂರವಾಣಿ ಮೂಲಕ ಬೈಬಲ್‌ ಕಲಿಸುತ್ತಾರೆ. ಅದಕ್ಕಾಗಿ ನೀವು ಕೊಡಬೇಕಾಗಿರೋದು ಸಮಯ ಮಾತ್ರ. ಈ ಅಧ್ಯಯನದಿಂದ ನೀವು ಅನಂತ ಪ್ರಯೋಜನಗಳನ್ನು ಪಡೆಯಬಲ್ಲಿರಿ. ▪ (w13-E 01/01)

^ ಪ್ಯಾರ. 39 ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ ಹೆಚ್ಚಿನ ಮಾಹಿತಿಯಿದೆ. ಅದರಲ್ಲಿ “ನಾವು ‘ಕಡೇ ದಿವಸಗಳಲ್ಲಿ’ ಜೀವಿಸುತ್ತಿದ್ದೇವೊ?” ಎಂಬ 9ನೇ ಅಧ್ಯಾಯ ಓದಿ.