ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅದ್ಭುತಕರ ವಾಸಿ’ ದೇವರಿಂದಲೋ?

‘ಅದ್ಭುತಕರ ವಾಸಿ’ ದೇವರಿಂದಲೋ?

‘ಅದ್ಭುತಕರ ವಾಸಿ’ ದೇವರಿಂದಲೋ?

ಕೆಲವು ದೇಶಗಳಲ್ಲಿ ಯಾತ್ರಾರ್ಥಿಗಳು ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವುದು ಸಾಮಾನ್ಯ. ಅಲ್ಲಿ, ವಾಸಿಯಾಗದ ರೋಗರುಜಿನಗಳು ಅದ್ಭುತಕರವಾಗಿ ವಾಸಿಯಾಗುತ್ತವೆ ಎಂದು ಅನೇಕರ ವಾದ. ಬೇರೆ ದೇಶಗಳಲ್ಲಿ ಮಾಂತ್ರಿಕರು ಭೂತಪ್ರೇತಗಳ ಸಹಾಯದಿಂದ ಜನರನ್ನು ವಾಸಿಮಾಡುತ್ತಾರೆಂಬ ವದಂತಿಯುಂಟು. ಮತ್ತಿತರ ಸ್ಥಳಗಳಲ್ಲಿ ಭಾವೋತ್ಪಾದಕ ಭಕ್ತಿ ಸಂಜೀವನಗಳು ನಡೆಸಲ್ಪಡುತ್ತವೆ. ಅವುಗಳಲ್ಲಿ ರೋಗಿಗಳು ವಾಸಿಯಾಗಿ ತಮ್ಮ ಗಾಲಿಕುರ್ಚಿಗಳನ್ನು ಬಿಟ್ಟು ಛಂಗನೆ ಎದ್ದುನಿಲ್ಲುತ್ತಾರೆ ಅಥವಾ ಕಂಕುಳುಗೋಲನ್ನು ಎಸೆದುಬಿಡುತ್ತಾರೆ.

ಅಂಥ ವಾಸಿಗಳನ್ನು ನಡೆಸುವವರು ಹೆಚ್ಚಾಗಿ ವಿಭಿನ್ನ ಧರ್ಮಗಳ ಜನರಾಗಿದ್ದಾರೆ. ಆದರೆ ಅವರು ಒಬ್ಬರನ್ನೊಬ್ಬರು ವಿರೋಧಿಸುತ್ತಾ ಧರ್ಮಭ್ರಷ್ಟರು, ಸುಳ್ಳರು, ವಿಧರ್ಮಿಗಳು ಎಂದು ದೂರುತ್ತಿರುತ್ತಾರೆ. ಹೀಗಿರಲಾಗಿ ಪ್ರಶ್ನೆಯೇನೆಂದರೆ, ಪರಸ್ಪರ ಪ್ರತಿವಿರೋಧಿಗಳಾಗಿರುವ ಇಂಥ ಜನರ ಮೂಲಕ ದೇವರು ಅದ್ಭುತಗಳನ್ನು ನಡಿಸುತ್ತಿದ್ದಾನೋ? ಏಕೆಂದರೆ ಬೈಬಲ್‌ ಹೇಳುವುದು “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.” (1 ಕೊರಿಂಥ 14:33) ಆದುದರಿಂದ ಈ ‘ಅದ್ಭುತಕರ ವಾಸಿಮಾಡುವಿಕೆಯು’ ದೇವರಿಂದ ನಡೆಸಲ್ಪಡುತ್ತದೋ? ಕೆಲವು ವಾಸಿಗಾರರು ಯೇಸುವಿನ ಶಕ್ತಿಯಿಂದ ತಾವು ಗುಣಪಡಿಸುತ್ತೇವೆಂದು ಹೇಳುತ್ತಾರೆ. ಆದರೆ ಸ್ವತಃ ಯೇಸು ರೋಗಿಗಳನ್ನು ಹೇಗೆ ಗುಣಪಡಿಸಿದನೆಂದು ನಾವು ನೋಡೋಣ.

ಯೇಸು ಜನರನ್ನು ವಾಸಿಮಾಡಿದ ವಿಧ

ಯೇಸು ರೋಗಿಗಳನ್ನು ವಾಸಿಮಾಡಿದ ವಿಧವು ಇಂದಿನ ವಾಸಿಗಾರರಿಗಿಂತ ತೀರಾ ಭಿನ್ನವಾಗಿದೆ. ಉದಾಹರಣೆಗೆ, ಸಹಾಯ ಕೇಳಿ ಬಂದ ಪ್ರತಿಯೊಬ್ಬರನ್ನು ಯೇಸು ವಾಸಿಮಾಡಿದನು. ಜನರ ಗುಂಪಿನಿಂದ ನಿರ್ದಿಷ್ಟ ವ್ಯಕ್ತಿಗಳನ್ನು ಕರೆದು ಅವರನ್ನು ಮಾತ್ರ ವಾಸಿಮಾಡಿ, ಇತರರನ್ನು ಬಿಟ್ಟುಬಿಡಲಿಲ್ಲ. ಮಾತ್ರವಲ್ಲ, ಆತನು ಜನರನ್ನು ಸಂಪೂರ್ಣವಾಗಿ ಗುಣಪಡಿಸಿದನು. ಬಹುತೇಕ ಯಾವಾಗಲೂ ಕ್ಷಣದಲ್ಲೇ ಜನರು ಗುಣಹೊಂದಿದರು. ಬೈಬಲ್‌ ಹೇಳುವುದು: “ಆತನಿಂದ ಶಕ್ತಿ ಹೊರಟು ಎಲ್ಲರನ್ನು ವಾಸಿಮಾಡುತ್ತಿದ್ದದರಿಂದ ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವದಕ್ಕೆ ಪ್ರಯತ್ನಮಾಡಿದರು.”​—⁠ಲೂಕ 6:⁠19.

ಇಂದು ನಂಬಿಕೆಯ ಆಧಾರದಲ್ಲಿ ವಾಸಿಮಾಡುವವರು (ಫೇತ್‌ ಹೀಲರ್ಸ್‌), ಜನರು ವಾಸಿಯಾಗದೇ ಇರುವಾಗ ಅವರ ನಂಬಿಕೆಯ ಕೊರತೆಯೇ ಅದಕ್ಕೆ ಕಾರಣ ಎಂದು ಹೇಳುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ತನ್ನಲ್ಲಿ ನಂಬಿಕೆಯನ್ನೇ ಇಡದ ಕೆಲವರನ್ನು ಸಹ ಯೇಸು ವಾಸಿಮಾಡಿದ್ದನು. ಉದಾಹರಣೆಗೆ, ಒಮ್ಮೆ ಯೇಸು ಒಬ್ಬ ಕುರುಡನನ್ನು ತಾನಾಗಿಯೇ ಸಮೀಪಿಸಿ ಅವನನ್ನು ವಾಸಿಮಾಡಿದನು. “ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ” ಎಂದು ಯೇಸು ಕೇಳಿದ್ದು ಅವನನ್ನು ವಾಸಿಮಾಡಿದ ಬಳಿಕವೇ. ಅದಕ್ಕೆ ಆ ಮನುಷ್ಯನು “ಆತನು ಯಾರು, ಸ್ವಾಮೀ? ತಿಳಿಸಿದರೆ ಆತನನ್ನು ನಂಬುತ್ತೇನೆ” ಎಂದನು. “ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು” ಅಂದನು ಯೇಸು.​—⁠ಯೋಹಾನ 9:​1-7, 35-38.

ನೀವು ಹೀಗೆ ನೆನಸಬಹುದು, ‘ಯೇಸುವಿನಿಂದ ವಾಸಿಗೊಳಿಸಲ್ಪಡಲು ನಂಬಿಕೆ ಅಗತ್ಯವಿಲ್ಲವಾದರೆ, ತಾನು ವಾಸಿಮಾಡಿದ ಜನರಿಗೆ ಅವನು ಅನೇಕವೇಳೆ “ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಎಂದು ಹೇಳಿದ್ದೇಕೆ?’ (ಲೂಕ 8:48; 17:19; 18:42) ಏಕೆಂದರೆ, ಯಾರ ನಂಬಿಕೆಯು ಆತನನ್ನು ಹುಡುಕುವಂತೆ ಮಾಡಿತೋ ಅವರು ಸ್ವಸ್ಥರಾದರೆಂಬ ಅರ್ಥದಲ್ಲಿ ಯೇಸು ಹಾಗೆ ಹೇಳಿದನು. ಯಾರು ಆತನನ್ನು ಸಮೀಪಿಸಲು ನಿರಾಕರಿಸಿದರೋ ಅವರು ವಾಸಿಯಾಗುವ ಸಂದರ್ಭವನ್ನು ಕಳಕೊಂಡರು. ವಾಸಿಯಾದವರು ಗುಣವಾದದ್ದು ತಮ್ಮ ನಂಬಿಕೆಯಿಂದಲ್ಲ, ಅವರು ಗುಣವಾದದ್ದು ದೇವರ ಶಕ್ತಿಯಿಂದಲೇ. ಬೈಬಲ್‌ ಯೇಸುವಿನ ಕುರಿತು ಹೇಳುವುದು: “ದೇವರು . . . ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು.”​—⁠ಅ. ಕೃತ್ಯಗಳು 10:⁠38.

ಸಾಮಾನ್ಯವಾಗಿ, ಇಂದಿನ ಅದ್ಭುತಕರ ವಾಸಿಗಳಲ್ಲಿ ಹಣವು ಪ್ರಾಮುಖ್ಯ ಪಾತ್ರವಹಿಸುವಂತೆ ಕಾಣುತ್ತದೆ. ಫೇತ್‌ ಹೀಲರ್ಸ್‌ ಹಣ-ಕಾಸು ಎತ್ತುವುದರಲ್ಲಿ ನಿಸ್ಸೀಮರೆಂಬ ಖ್ಯಾತಿ ಇದೆ. ಅಂಥ ಒಬ್ಬ ವಾಸಿಗಾರನು ಕೇವಲ ಒಂದೇ ವರ್ಷದಲ್ಲಿ ತನ್ನ ಭೂವ್ಯಾಪಕ ಕಾರ್ಯಕ್ರಮದಲ್ಲಿ 8 ಕೋಟಿ 90 ಲಕ್ಷ ಡಾಲರ್‌ ಹಣ ಒಟ್ಟುಗೂಡಿಸಿದ್ದನೆಂಬ ವರದಿಯುಂಟು. ವಾಸಿಯಾಗುವ ಆಸೆಯಿಂದ ಪುಣ್ಯಕ್ಷೇತ್ರಗಳಿಗೆ ಬರುವ ಯಾತ್ರಾರ್ಥಿಗಳಿಂದ ಚರ್ಚ್‌ ಸಂಘಟನೆಗಳು ಭಾರಿ ದುಡ್ಡನ್ನು ಗುಡ್ಡೆಹಾಕುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಯೇಸು ತಾನು ಗುಣಪಡಿಸಿದವರಿಂದ ಎಂದೂ ಹಣ ಕೇಳಲಿಲ್ಲ. ತಾನು ಸ್ವಸ್ಥಮಾಡಿದವರಿಗೆ ಒಂದು ಸಂದರ್ಭದಲ್ಲಿ ಆತನು ಉಣಿಸಿದನು ಸಹ. (ಮತ್ತಾಯ 15:​30-38) ತನ್ನ ಶಿಷ್ಯರನ್ನು ಸಾರಲು ಕಳುಹಿಸಿದಾಗ ಯೇಸು ಹೀಗೆಂದನು: “ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.” (ಮತ್ತಾಯ 10:⁠8) ಆಧುನಿಕ ದಿನದ ವಾಸಿಗಾರರ ಕಾರ್ಯಗಳು ಯೇಸುವಿನ ವಾಸಿಗಿಂತ ಅಷ್ಟು ಭಿನ್ನವಾಗಿರುವುದೇಕೆ?

ವಾಸಿ”—ಯಾವ ಮೂಲದಿಂದ?

ಹಲವಾರು ವರ್ಷಗಳಿಂದ ವೈದ್ಯಕೀಯ ವೃತ್ತಿಯ ಕೆಲವರು ಧಾರ್ಮಿಕ ವಾಸಿಗಳ ಕುರಿತ ವಾದಗಳನ್ನು ಪರೀಕ್ಷಿಸಿದ್ದಾರೆ. ಅವರು ಕಂಡುಕೊಂಡದ್ದೇನು? ಲಂಡನಿನ ಡೈಲಿ ಟೆಲಿಗ್ರಾಫ್‌ಗೆ ಅನುಸಾರವಾಗಿ, ಆ ವಿಷಯದ ಕುರಿತು ಪರೀಕ್ಷಿಸುವುದರಲ್ಲಿ 20 ವರ್ಷಗಳನ್ನು ಕಳೆದ ಇಂಗ್ಲೆಂಡ್‌ನ ವೈದ್ಯನೊಬ್ಬನು ಹೇಳಿದ್ದು: “ಅದ್ಭುತಕರ ವಾಸಿಮಾಡುವಿಕೆಯ ಕ್ಯಾರಿಸ್ಮೇಟಿಕ್‌ ವರದಿಗಳಿಗೆ ವೈದ್ಯಕೀಯ ಪುರಾವೆಯ ಒಂದೇ ಒಂದು ಆಧಾರವೂ ಇಲ್ಲ.” ಆದರೂ ಸಂತರ ಅವಶೇಷ, ಪುಣ್ಯಕ್ಷೇತ್ರ ಅಥವಾ ಧಾರ್ಮಿಕ ವಾಸಿಗಾರರ ಶಕ್ತಿಯಿಂದ ತಾವು ವಾಸಿಯಾದೆವು ಎಂದು ನಂಬುವ ಅನೇಕಾನೇಕ ಜನರಿದ್ದಾರೆ. ಅವರು ಮೋಸಕರವಾದ ತಂತ್ರಕ್ಕೆ ಬಲಿಬಿದ್ದಿರಸಾಧ್ಯವೋ?

ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ಧಾರ್ಮಿಕ ವಂಚಕರು ತನಗೆ, “ಸ್ವಾಮೀ, ಸ್ವಾಮೀ, . . . ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ” ಎಂದು ಹೇಳುವರೆಂದನು. ಆಗ ತಾನು ಅವರಿಗೆ, “ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ” ಅನ್ನುವೆನು ಎಂದನು ಯೇಸು. (ಮತ್ತಾಯ 7:​22, 23) ಅಂಥ ಮಹತ್ಕಾರ್ಯ ಮಾಡುವವರ ಶಕ್ತಿಯ ಮೂಲವು ಯಾವುದೆಂದು ತೋರಿಸುತ್ತಾ ಅಪೊಸ್ತಲ ಪೌಲನು ಅಂದದ್ದು: “ಆ ಅಧರ್ಮಸ್ವರೂಪನ ಪ್ರತ್ಯಕ್ಷತೆಯು ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನಮಾರ್ಗದಲ್ಲಿರುವವರಿಗೋಸ್ಕರ ಸಂಭವಿಸುವದು.” ​—⁠2 ಥೆಸಲೊನೀಕ 2:​9, 10.

ಅಷ್ಟುಮಾತ್ರವಲ್ಲದೆ ಧಾರ್ಮಿಕ ಅವಶೇಷಗಳು, ಮೂರ್ತಿಗಳು ಹಾಗೂ ವಿಗ್ರಹಗಳು ಒಳಗೂಡಿರುವ “ವಾಸಿಮಾಡುವಿಕೆಗಳು” ದೈವಿಕ ಮೂಲದಿಂದ ಬಂದಿರಸಾಧ್ಯವಿಲ್ಲ. ಏಕೆ? ಏಕೆಂದರೆ ದೇವರ ವಾಕ್ಯವು ಸ್ಪಷ್ಟವಾಗಿ ಆಜ್ಞಾಪಿಸುವುದು: “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ” ಮತ್ತು “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.” (1 ಕೊರಿಂಥ 10:14; 1 ಯೋಹಾನ 5:21) ಅಂಥ “ವಾಸಿಮಾಡುವಿಕೆಗಳು” ಸತ್ಯಾರಾಧನೆಯಿಂದ ದೂರಸೆಳೆಯಲು ಸೈತಾನನು ಮಾಡಿರುವ ಕುತಂತ್ರಗಳಾಗಿವೆ. ಬೈಬಲ್‌ ಅನ್ನುವುದು: ‘ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುತ್ತಾನೆ.’​—⁠2 ಕೊರಿಂಥ 11:⁠14.

ಯೇಸುವೂ ಅಪೊಸ್ತಲರೂ ಜನರನ್ನು ವಾಸಿಮಾಡಿದ್ದೇಕೆ?

ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ದಾಖಲೆಯಾದ ನಿಜವಾದ ಅದ್ಭುತಕರ ವಾಸಿಮಾಡುವಿಕೆಗಳು, ಯೇಸು ಮತ್ತು ಅಪೊಸ್ತಲರು ಅವನ್ನು ದೇವರ ಶಕ್ತಿಯಿಂದಲೇ ಮಾಡಿದರೆಂದು ಗುರುತಿಸುತ್ತವೆ. (ಯೋಹಾನ 3:2; ಇಬ್ರಿಯ 2:​3, 4) ಯೇಸುವಿನ ಅದ್ಭುತಕರ ವಾಸಿಮಾಡುವಿಕೆಗಳು ಆತನು ಸಾರಿದ ಸಂದೇಶವನ್ನೂ ಬೆಂಬಲಿಸುತ್ತವೆ: “ಯೇಸು ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿಹೇಳುತ್ತಾ ಜನರ ಎಲ್ಲಾತರದ ರೋಗಗಳನ್ನೂ ಎಲ್ಲಾತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.” (ಮತ್ತಾಯ 4:23) ಯೇಸುವಿನ ಮಹತ್ಕಾರ್ಯಗಳಲ್ಲಿ ರೋಗಿಗಳನ್ನು ವಾಸಿಮಾಡಿದ್ದು ಮಾತ್ರವಲ್ಲ ಜನಸಮೂಹಗಳಿಗೆ ಉಣಿಸುವಿಕೆ, ನೈಸರ್ಗಿಕ ಪ್ರಕೋಪಗಳ ನಿಯಂತ್ರಣ ಮತ್ತು ಸತ್ತವರನ್ನು ಬದುಕಿಸುವುದು ಸಹ ಸೇರಿದ್ದವು. ಇವು ಆತನು ತನ್ನ ರಾಜ್ಯದಾಳಿಕೆಯ ಕೆಳಗೆ ವಿಧೇಯ ಮಾನವಕುಲಕ್ಕೆ ಏನು ಮಾಡಲಿರುವನೆಂಬುದನ್ನು ತೋರಿಸಿಕೊಟ್ಟವು!

ಅಂಥಾ ಮಹತ್ಕಾರ್ಯಗಳು ಅಥವಾ ಆತ್ಮದ ವರಗಳು ಯೇಸು ಮತ್ತು ಅವನ ಅಪೊಸ್ತಲರ ಹಾಗೂ ಅವರು ಯಾರಿಗೆ ಆ ವರವನ್ನು ಕೊಟ್ಟಿದ್ದರೋ ಅವರ ಮರಣಾನಂತರ ಗತಿಸಿಹೋದವೆಂಬುದು ವ್ಯಕ್ತ. ಅಪೊಸ್ತಲ ಪೌಲನು ಬರೆದದ್ದು: “ಪ್ರವಾದನೆಗಳಾದರೋ ಇಲ್ಲದಂತಾಗುವವು; [ಅದ್ಭುತಕರವಾಗಿ ನುಡಿಯುವ] ವಾಣಿಗಳೋ ನಿಂತುಹೋಗುವವು; [ದೈವಿಕವಾಗಿ ಪ್ರಕಟವಾದ] ವಿದ್ಯೆಯೋ ಇಲ್ಲದಂತಾಗುವದು.” (1 ಕೊರಿಂಥ 13:⁠8) ಏಕೆ? ಏಕೆಂದರೆ ಅವುಗಳು ತಮ್ಮ ಉದ್ದೇಶವನ್ನು ಸಾಧಿಸಿದ ಬಳಿಕ ಅಂದರೆ ಯೇಸು ವಾಗ್ದತ್ತ ಮೆಸ್ಸೀಯನೆಂದೂ ಕ್ರೈಸ್ತಸಭೆಯು ದೇವರಿಂದ ಒಪ್ಪಲ್ಪಟ್ಟ ಸಭೆಯೆಂದೂ ಗುರುತಿಸಿದ ಬಳಿಕ ಅಂಥ ಮಹತ್ಕಾರ್ಯಗಳ ಅಗತ್ಯವು ಇನ್ನು ಮುಂದೆ ಇರಲಿಲ್ಲ. ಆದ್ದರಿಂದ ವಾಸಿಮಾಡುವಿಕೆಯೂ ಸೇರಿರುವ ಅಂಥ ಮಹತ್ಕಾರ್ಯಗಳು ‘ಇಲ್ಲದಂತಾಗುವವು.’

ಹಾಗಿದ್ದರೂ, ಯೇಸುವಿನ ವಾಸಿಮಾಡುವಿಕೆಯ ಅದ್ಭುತಗಳು ಇಂದು ನಮ್ಮೆಲ್ಲರಿಗೂ ಪ್ರಾಮುಖ್ಯ ಸಂದೇಶವನ್ನು ಕೊಡುತ್ತವೆ. ದೇವರ ರಾಜ್ಯದ ಕುರಿತು ಯೇಸು ಏನನ್ನು ಕಲಿಸಿದನೋ ಅವುಗಳಿಗೆ ಗಮನಕೊಟ್ಟು ನಂಬಿಕೆಯಿಡುವುದಾದರೆ ಈ ಪ್ರೇರಿತ ಪ್ರವಾದನೆಯು ಆಧ್ಯಾತ್ಮಿಕವಾಗಿಯೂ ದೈಹಿಕವಾಗಿಯೂ ನೆರವೇರಲಿರುವ ಸಮಯವನ್ನು ನಾವು ಮುನ್ನೋಡಬಲ್ಲೆವು. ಆಗ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”​—⁠ಯೆಶಾಯ 33:24; 35:​5, 6; ಪ್ರಕಟನೆ 21:⁠4. (w08 12/1)