ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾವೀದನು ಹೆದರಲಿಲ್ಲ ಏಕೆ?

ದಾವೀದನು ಹೆದರಲಿಲ್ಲ ಏಕೆ?

ನಿಮ್ಮ ಮಕ್ಕಳಿಗೆ ಕಲಿಸಿರಿ

ದಾವೀದನು ಹೆದರಲಿಲ್ಲ ಏಕೆ?

ನಿಮಗೆ ಎಂದಾದರೂ ಭಯವಾಗುತ್ತದೋ?​—⁠ * ಹೌದು, ಕೆಲವೊಮ್ಮೆ ನಾವು ಭಯಪಡುತ್ತೇವೆ. ನಿಮಗೆ ಭಯವಾದಾಗ ನೀವೇನು ಮಾಡುತ್ತೀರಿ?​—⁠ ನಿಮಗಿಂತ ದೊಡ್ಡವರೂ ಬಲಿಷ್ಠರೂ ಆಗಿರುವ ಯಾರ ಹತ್ತಿರವಾದರೂ ಓಡುತ್ತೀರಿ ಅಲ್ಲವೇ? ಪ್ರಾಯಶಃ ನಿಮ್ಮ ಅಪ್ಪ ಅಥವಾ ಅಮ್ಮ ನಿಮ್ಮ ಸಹಾಯಕ್ಕೆ ಬಂದಾರು. ಸಹಾಯಕ್ಕಾಗಿ ನಾವು ಎಲ್ಲಿಗೆ ತಿರುಗಬೇಕೆಂಬುದರ ಕುರಿತು ದಾವೀದನ ಉದಾಹರಣೆಯಿಂದ ಹೆಚ್ಚನ್ನು ಕಲಿಯಬಲ್ಲೆವು. ಅವನು ದೇವರಿಗೆ ಹಾಡಿದ್ದು: “ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು. . . . ದೇವರನ್ನು ನಂಬಿ ನಿರ್ಭಯದಿಂದಿರುವೆನು.”​—⁠ಕೀರ್ತನೆ 56:​3, 4.

ದಾವೀದನು ನಿರ್ಭಯನಾಗಿರಲು ಕಲಿತದ್ದು ಯಾರಿಂದ? ಅವನ ಹೆತ್ತವರಿಂದಲೋ?​—⁠ ಪ್ರಾಯಶಃ ಅವನು ತನ್ನ ಹೆತ್ತವರಿಂದ ಕಲಿತ್ತಿದ್ದಿರಬಹುದು. ಇಷಯ ಎಂಬವನು ಅವನ ತಂದೆ. ದೇವರು ವಾಗ್ದಾನಿಸಿದ್ದ “ಸಮಾಧಾನದ ಪ್ರಭು” ಆದ ಯೇಸು ಕ್ರಿಸ್ತನ ನಂಬಿಗಸ್ತ ಪೂರ್ವಜರಲ್ಲಿ ಅವನೊಬ್ಬನು. (ಯೆಶಾಯ 9:6; 11:​1-3, 10) ಇಷಯನ ತಂದೆ ಓಬೇದನು ದಾವೀದನ ಅಜ್ಜ. ಓಬೇದನ ತಾಯಿಯ ಹೆಸರಿನಲ್ಲಿ ಬೈಬಲಿನ ಒಂದು ಪುಸ್ತಕ ಇದೆ. ಆಕೆಯ ಹೆಸರು ಏನೆಂದು ನಿಮಗೆ ಗೊತ್ತೋ?​—⁠ ರೂತ್‌ ಎಂಬುದೇ ಆಕೆಯ ಹೆಸರು. ಅವಳು ನಿಷ್ಠಾವಂತೆಯಾದ ಸ್ತ್ರೀ. ಅವಳ ಗಂಡನ ಹೆಸರು ಬೋವಜ.​—⁠ರೂತಳು 4:​21, 22.

ದಾವೀದನು ಹುಟ್ಟುವ ಬಹಳ ಮುಂಚೆಯೇ ರೂತ್‌-ಬೋವಜರು ತೀರಿಕೊಂಡರು ನಿಜ. ದಾವೀದನ ಮುತ್ತಜ್ಜನಾದ ಬೋವಜನ ತಾಯಿಯ ಹೆಸರು ನಿಮಗೆ ಗೊತ್ತಿರಬಹುದು. ಯೆರಿಕೋ ಪಟ್ಟಣದಲ್ಲಿ ಜೀವಿಸಿದ್ದ ಆಕೆ ಕೆಲವು ಇಸ್ರಾಯೇಲ್ಯ ಗೂಢಚಾರರನ್ನು ಬಚ್ಚಿಟ್ಟು ಕಾಪಾಡಿದ್ದಳು. ಫಲಿತಾಂಶವಾಗಿ ಯೆರಿಕೋದ ಗೋಡೆಗಳು ಬಿದ್ದು ಪಟ್ಟಣ ನಾಶವಾದಾಗ ಆಕೆಯು ತನ್ನನ್ನೂ ತನ್ನ ಕುಟುಂಬವನ್ನೂ ರಕ್ಷಿಸಿದ್ದಳು. ಹೇಗೆಂದರೆ ಗೂಢಚಾರರು ಹೇಳಿದಂತೆ ಒಂದು ಕೆಂಪು ಹಗ್ಗವನ್ನು ಕಿಟಕಿಗೆ ಕಟ್ಟಿದ ಮೂಲಕವೇ. ಈಗ, ಆಕೆಯ ಹೆಸರು ತಿಳಿಯಿತೇ?​—⁠ ಹಾಂ . . . ರಾಹಾಬಳೇ. ಅನಂತರ ಆಕೆ ಯೆಹೋವನ ಆರಾಧಕಳಾದಳು. ನಾವೆಲ್ಲರೂ ಅನುಸರಿಸತಕ್ಕ ಧೈರ್ಯದ ಮಾದರಿ ಆಕೆ.​—⁠ಯೆಹೋಶುವ 2:​1-21; 6:​22-25; ಇಬ್ರಿಯ 11:​30, 31.

ದಾವೀದನ ತಂದೆ-ತಾಯಿ ಯೆಹೋವನ ಈ ಎಲ್ಲ ನಂಬಿಗಸ್ತ ಸೇವಕರ ಕುರಿತು ಅವನಿಗೆ ಕಲಿಸಿದ್ದರೆಂಬುದು ನಿಶ್ಚಯ. ಏಕೆಂದರೆ ಹೆತ್ತವರು ತಮ್ಮ ಮಕ್ಕಳಿಗೆ ಅಂಥಾ ವಿಷಯಗಳನ್ನು ಕಲಿಸಬೇಕು ಎಂಬ ಆಜ್ಞೆಯು ಕೊಡಲ್ಪಟ್ಟಿತ್ತು. (ಧರ್ಮೋಪದೇಶಕಾಂಡ 6:​4-9) ಕಾಲಾನಂತರ ಇಷಯನ ಕಿರಿಯ ಮಗನಾದ ಈ ದಾವೀದನನ್ನು ಇಸ್ರಾಯೇಲಿನ ಅರಸನಾಗಿ ಆರಿಸಿಕೊಳ್ಳುವಂತೆ ದೇವರು ತನ್ನ ಪ್ರವಾದಿಯಾದ ಸಮುವೇಲನಿಗೆ ಹೇಳಿದನು.​—⁠1 ಸಮುವೇಲ 16:​4-13.

ಒಂದು ದಿನ ಇಷಯನು ದಾವೀದನನ್ನು ಕರೆದು ಅವನ ಮೂವರು ಅಣ್ಣಂದಿರಿಗೆ ಊಟವನ್ನು ತಕ್ಕೊಂಡು ಹೋಗುವಂತೆ ಹೇಳಿದನು. ಅವರು ದೇವರ ಶತ್ರುಗಳಾದ ಫಿಲಿಷ್ಟಿಯರ ವಿರುದ್ಧ ಯುದ್ಧಮಾಡುತ್ತಿದ್ದರು. ದಾವೀದನು ಬಂದು ಅಣ್ಣಂದಿರನ್ನು ನೋಡಲೆಂದು ಸೀದಾ ರಣರಂಗಕ್ಕೆ ಹೋದಾಗ ಅಲ್ಲಿ ದೈತ್ಯ ಗೊಲ್ಯಾತನು “ಜೀವಸ್ವರೂಪನಾದ ದೇವರ ಸೈನ್ಯವನ್ನು” ಗೇಲಿಮಾಡುತ್ತಿದ್ದದನ್ನು ಕೇಳಿಸಿಕೊಂಡನು. ಗೊಲ್ಯಾತನ ಬೆದರಿಕೆಯನ್ನು ಎದುರಿಸಲು ಎಲ್ಲರೂ ಭಯಪಟ್ಟರು. ಆದರೆ ದಾವೀದನು ಅವನ ವಿರುದ್ಧ ಯುದ್ಧಕ್ಕೆ ಹೋಗಲು ಬಯಸಿದನು. ಅದನ್ನು ಕೇಳಿ ಅರಸ ಸೌಲನು ಅವನನ್ನು ಕರೇಕಳುಹಿಸಿದನು. ಆದರೆ ಸೌಲನು ದಾವೀದನನ್ನು ನೋಡಿ “ನೀನು ಇನ್ನೂ ಹುಡುಗನು” ಎಂದನು.

ದಾವೀದನು ಸೌಲನಿಗೆ ವಿವರಿಸುತ್ತಾ ತಂದೆಯ ಹಿಂಡಿನಲ್ಲಿದ್ದ ಕುರಿಯನ್ನು ಎಳೆದೊಯ್ಯುತ್ತಿದ್ದ ಸಿಂಹವನ್ನೂ ಕರಡಿಯನ್ನೂ ತಾನು ಕೊಂದಿದ್ದೇನೆ, ಗೊಲ್ಯಾತನಿಗೂ ‘ಅದೇ ಗತಿಯಾಗಬೇಕು’ ಎಂದನು. “ಹೋಗು; ಯೆಹೋವನು ನಿನ್ನ ಸಂಗಡ ಇರಲಿ” ಎಂದನು ಸೌಲನು. ದಾವೀದನು ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ತನ್ನ ಸೊಂಟಚೀಲದಲ್ಲಿ ಹಾಕಿ ಕವಣೆಯನ್ನು ಹಿಡಿದುಕೊಂಡು ಗೊಲ್ಯಾತನೊಂದಿಗೆ ಹೋರಾಡಲು ಹೊರಟನು. ಗೊಲ್ಯಾತನು ಈ ಚಿಕ್ಕ ಹುಡುಗನನ್ನು ಕಂಡು, “ಇಲ್ಲಿ ಬಾ; ನಿನ್ನ ಮಾಂಸವನ್ನು ಮೃಗಪಕ್ಷಿಗಳಿಗೆ ಹಂಚಿಕೊಡುತ್ತೇನೆ” ಎಂದು ಅರಚುತ್ತಾನೆ. ಅದಕ್ಕೆ ದಾವೀದನು “ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ” ಎನ್ನುತ್ತಾ ‘ನಾನು ನಿನ್ನನ್ನು ಕೊಂದೇಬಿಡುವೆ’ ಎಂದು ಕೂಗಿ ಹೇಳುತ್ತಾನೆ.

ಹಾಗೆ ಹೇಳುತ್ತಾ ದಾವೀದನು ಗೊಲ್ಯಾತನ ಬಳಿಗೆ ಓಡಿ ತನ್ನ ಚೀಲದಿಂದ ಕಲ್ಲನ್ನು ತೆಗೆದು ಕವಣೆಗೇರಿಸಿ ಗೊಲ್ಯಾತನ ಹಣೆಗೆ ನೇರವಾಗಿ ಗುರಿಯಿಟ್ಟು ಹೊಡೆಯುತ್ತಾನೆ. ಆಗ ಗೊಲ್ಯಾತನು ಬೋರಲಬಿದ್ದು ಸತ್ತನು. ಫಿಲಿಷ್ಟಿಯರು ಅದನ್ನು ಕಂಡು ಭಯಭ್ರಾಂತರಾಗಿ ಓಡತೊಡಗಿದರು. ಇಸ್ರಾಯೇಲ್ಯರು ಅವರನ್ನು ಬೆನ್ನಟ್ಟುತ್ತಾ ಹೋಗಿ ಯುದ್ದವನ್ನು ಗೆದ್ದರು. 1 ಸಮುವೇಲ 17:​12-54ರಲ್ಲಿರುವ ಈ ಇಡೀ ಕಥೆಯನ್ನು ದಯವಿಟ್ಟು ನಿಮ್ಮ ಕುಟುಂಬದೊಂದಿಗೆ ಓದಿ.

ಚಿಕ್ಕ ಮಕ್ಕಳಾದ ನೀವು ಸಹ ಒಂದುವೇಳೆ ದೇವರ ಆಜ್ಞೆಗಳನ್ನು ಅನುಸರಿಸಲು ಹೆದರಬಹುದು. ದೇವರ ಸೇವಕನಾದ ಯೆರೆಮೀಯನೂ ಚಿಕ್ಕ ಹುಡುಗನಾಗಿದ್ದಾಗ ದೇವರ ಆಜ್ಞೆ ಪಾಲಿಸಲು ಭಯಪಟ್ಟನು. ಆಗ ದೇವರು ಅವನಿಗೆ, “ಅಂಜಬೇಡ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು” ಎಂದು ಹೇಳಿದನು. ಆದುದರಿಂದ ಯೆರೆಮೀಯನು ಧೈರ್ಯದಿಂದ ದೇವರು ಆಜ್ಞಾಪಿಸಿದಂತೆಯೇ ಸಾರಿದನು. ದಾವೀದ ಮತ್ತು ಯೆರೆಮೀಯನಂತೆ ನೀವು ದೇವರಲ್ಲಿ ಭರವಸೆಯಿಡುವುದಾದರೆ ನೀವು ಭಯಪಡದೆ ಧೈರ್ಯವಾಗಿರಲು ಕಲಿಯುವಿರಿ.​—⁠ಯೆರೆಮೀಯ 1:​6-8. (w08 12/1)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ‘​—⁠’ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಏನಾದರೂ ಹೇಳುವಂತೆ ಉತ್ತೇಜಿಸಲು ಈ ಗುರುತನ್ನು ಕೊಡಲಾಗಿದೆ.

ಪ್ರಶ್ನೆಗಳು:

❍ ದೇವರ ಸೈನ್ಯವನ್ನು ಗೊಲ್ಯಾತನು ಗೇಲಿಮಾಡಿದಾಗ ದಾವೀದನು ಏನು ಮಾಡಿದನು?

❍ ದಾವೀದನು ಗೊಲ್ಯಾತನನ್ನು ಸೋಲಿಸಿದ್ದು ಹೇಗೆ?

❍ ನಾವು ಧೈರ್ಯವಾಗಿರುವುದನ್ನು ಇಂದು ಹೇಗೆ ಕಲಿಯಬಹುದು?