ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಾರುಣ್ಯದ ಹತಾಶೆಯಿಂದ ಮುಕ್ತಿ

ತಾರುಣ್ಯದ ಹತಾಶೆಯಿಂದ ಮುಕ್ತಿ

ತಾರುಣ್ಯದ ಹತಾಶೆಯಿಂದ ಮುಕ್ತಿ

ಎವ್ಸೇಬ್ಯೋ ಮಾರ್ಸೀಯೋ ಹೇಳಿದಂತೆ

ಇಸವಿ 1993ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನಾನು ಬಿಗಿಭದ್ರತೆಯ ಸೆರೆಮನೆಯೊಂದಕ್ಕೆ ಭೇಟಿನೀಡಿದೆ. ಕೈದಿಯಾಗಿದ್ದ ನನ್ನ ತಂಗಿ ಮಾರೀವೀಯ ದೀಕ್ಷಾಸ್ನಾನಕ್ಕಾಗಿ ನಾನಲ್ಲಿದ್ದೆ. ನಾನು ದೀಕ್ಷಾಸ್ನಾನದ ವಿಧಿಗಳನ್ನು ನಡೆಸುವುದನ್ನು ಕೆಲವು ಸೆರೆಮನೆವಾಸಿಗಳು ಮತ್ತು ಅಲ್ಲಿನ ಅಧಿಕಾರಿಗಳು ತುಂಬಾ ಗೌರವದಿಂದ ವೀಕ್ಷಿಸಿದರು. ನಾನು ಮತ್ತು ನನ್ನ ತಂಗಿ ಆ ಸ್ಥಳಕ್ಕೆ ಹೇಗೆ ಬಂದುಮುಟ್ಟಿದೇವು ಎಂಬುದನ್ನು ವಿವರಿಸುವ ಮೊದಲು ನಮ್ಮ ಬಾಲ್ಯದ ಕುರಿತು ನಿಮಗೆ ತಿಳಿಸುವೆ.

ನಾನು ಸ್ಪೇನ್‌ನಲ್ಲಿ 1954ರ ಮೇ 5ರಂದು ಜನಿಸಿದೆ. ಎಂಟು ಮಕ್ಕಳಿದ್ದ ದೊಡ್ಡ ಕುಟುಂಬದಲ್ಲಿ ನಾನು ಮೊದಲನೆಯವನು. ಮಾರೀವೀ ಮೂರನೆಯವಳು. ನಮ್ಮ ಅಜ್ಜಿಯು ನಮ್ಮನ್ನು ಪಕ್ಕಾ ಕ್ಯಾಥೊಲಿಕರಾಗಿ ಬೆಳೆಸಿದರು. ಬಾಲ್ಯದಲ್ಲಿ ಅವರ ಅಕ್ಕರೆಯ ತೆಕ್ಕೆಯಡಿಲ್ಲಿದ್ದಾಗ ದೇವರ ಬಗ್ಗೆ ಅರಳಿದ ಪೂಜ್ಯ ಭಾವನೆಗಳ ಆ ಸುಂದರ ನೆನಪುಗಳು ಇನ್ನೂ ನನ್ನಲ್ಲಿ ಹಚ್ಚಹಸುರಾಗಿವೆ. ಆದರೆ ನನ್ನ ತಂದೆಯ ಮನೆಯಲ್ಲಿ ಧಾರ್ಮಿಕ ವಿಷಯಗಳಿಗೆ ಒಂದಿಷ್ಟೂ ಮನ್ನಣೆಯಿರಲಿಲ್ಲ. ತಾಯಿಯನ್ನು ಮತ್ತು ನಮ್ಮನ್ನು ತಂದೆ ಯಾವಾಗಲೂ ಹೊಡೆಯುತ್ತಿದ್ದರು. ನಾವೆಲ್ಲರೂ ಭಯದಿಂದಲೇ ಬದುಕುತ್ತಿದ್ದೆವು. ತಾಯಿ ಕಷ್ಟದಿಂದ ನರಳುವುದನ್ನು ನೋಡುವಾಗ ನನಗೆ ದುಃಖ ತಾಳಲಾಗುತ್ತಿರಲಿಲ್ಲ.

ಶಾಲೆಯಲ್ಲಿದ್ದ ಪರಿಸ್ಥಿತಿಯೂ ನನ್ನನ್ನು ವ್ಯಥೆಗೀಡುಮಾಡಿತು. ನಮ್ಮ ಶಿಕ್ಷಕನು ಒಬ್ಬ ಪಾದ್ರಿಯಾಗಿದ್ದನು. ನಾವು ಏನಾದರೂ ತಪ್ಪು ಉತ್ತರ ಕೊಡುವಲ್ಲಿ ಅವನು ನಮ್ಮ ತಲೆಯನ್ನು ಗೋಡೆಗೆ ಪಟಪಟನೆ ಜಜ್ಜುತ್ತಿದ್ದನು. ಇನ್ನೊಬ್ಬ ಪಾದ್ರಿ, ಹುಡುಗಿಯರ ಹೋಮ್‌ವರ್ಕ್‌ಗಳನ್ನು ಪರಿಶೀಲಿಸುವಾಗ ಅವರನ್ನು ಲೈಂಗಿಕವಾಗಿ ಪೀಡಿಸುತ್ತಿದ್ದನು. ಮಾತ್ರವಲ್ಲ, ನರಕದಂಥ ಕ್ಯಾಥೊಲಿಕ್‌ ಬೋಧನೆಗಳು ನನ್ನಲ್ಲಿ ಗಲಿಬಿಲಿ ಉಂಟುಮಾಡಿ ಭಯಹುಟ್ಟಿಸುತ್ತಿದ್ದವು. ನನ್ನಲ್ಲಿದ್ದ ದೈವಭಕ್ತಿ ಬೇಗನೆ ಕರಟಿಹೋಯಿತು.

ಅರ್ಥಹೀನ ಬದುಕಿನ ಸುಳಿಯಲ್ಲಿ

ದೈವಭಕ್ತಿಯ ಕುರಿತು ಯಾವುದೇ ಮಾರ್ಗದರ್ಶನ ಸಿಗದ ಕಾರಣ ನಾನು ಅನೈತಿಕ ಹಾಗೂ ಹಿಂಸಾತ್ಮಕ ಜನರೊಡನೆ ಕ್ಲಬ್ಬುಗಳಲ್ಲಿ ಕಾಲಕಳೆಯಲು ತೊಡಗಿದೆ. ಅಲ್ಲಿ ಹೊಡೆದಾಟಗಳು ಸರ್ವಸಾಮಾನ್ಯವಾಗಿದ್ದವು. ಚಾಕು, ಚೈನ್‌, ಬಾಟಲಿ, ಕುರ್ಚಿಗಳೇ ಮಾರಕ ಅಸ್ತ್ರಗಳಾಗುತ್ತಿದ್ದವು. ನಾನು ಬೇಕೆಂದೆ ಇಂಥ ಹೊಡೆದಾಟಗಳಲ್ಲಿ ಭಾಗವಹಿಸದಿದ್ದರೂ, ಒಮ್ಮೆ ಬಿದ್ದ ಏಟಿನ ರಭಸಕ್ಕೆ ನಾನು ಮೂರ್ಛೆತಪ್ಪಿ ಬಿದ್ದೆ.

ಕ್ರಮೇಣ ನಾನು ಇಂಥ ವಿಷಯಗಳಿಂದ ಬೇಸತ್ತು ಹೋದೆ ಮತ್ತು ಯಾವುದೇ ಗಲಾಟೆಗಳಿಲ್ಲದ ಪ್ರಶಾಂತವಾಗಿರುವ ಕ್ಲಬ್ಬುಗಳಿಗಾಗಿ ಹುಡುಕತೊಡಗಿದೆ. ಆದರೆ ಅಂಥ ಕ್ಲಬ್ಬುಗಳಲ್ಲೂ ಡ್ರಗ್ಸ್‌ ಸರ್ವಸಾಮನ್ಯವಾಗಿದ್ದವು. ಡ್ರಗ್ಸ್‌ನಿಂದ ಮನಃಶಾಂತಿ ಮತ್ತು ತೃಪ್ತಿ ಸಿಗುವ ಬದಲು ಚಿಂತೆ ಮತ್ತು ಭ್ರಮೆ ನನ್ನ ಪಾಲಾದವು.

ಇದರಿಂದ ನೆಮ್ಮದಿ ಕಾಣದಿದ್ದರೂ ನನ್ನ ತಮ್ಮ ಹೋಸೇ ಲೂಈಸ್‌ ಹಾಗೂ ಗೆಳೆಯ ಮೀಗೆಲ್‌ರಿಗೆ ಆಮಿಷ ಒಡ್ಡಿ ಈ ಅರ್ಥಹೀನ ಬದುಕಿನ ಸುಳಿಗೆ ಸೆಳೆದೆ. ಆ ಸಮಯದಲ್ಲಿ ಸ್ಪೇನ್‌ನಲ್ಲಿದ್ದ ಅನೇಕ ಇತರ ಯುವಜನರಂತೆ ನಾವು ಸಹ ಭ್ರಷ್ಟ ಲೋಕದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗಿದೆವು. ನಾನು ಡ್ರಗ್ಸ್‌ಗೆ ಎಷ್ಟು ದಾಸನಾಗಿದ್ದೇನೆಂದರೆ ಅದನ್ನು ಖರೀದಿಸಲು ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಿದ್ದೆ. ಇದರಿಂದ ನನ್ನ ಮರ್ಯಾದೆಯನ್ನೆಲ್ಲ ಕಳಕೊಂಡೆ.

ಯೆಹೋವನ ಸಹಾಯಹಸ್ತ

ಈ ಸಮಯದಲ್ಲೆಲ್ಲ ನಾನು ನನ್ನ ಗೆಳೆಯರೊಂದಿಗೆ ದೇವರ ಅಸ್ತಿತ್ವ ಮತ್ತು ಬದುಕಿನ ಅರ್ಥದ ಕುರಿತು ಮಾತಾಡುತ್ತಿದ್ದೆ. ನಾನು ದೇವರನ್ನು ಹುಡುಕತೊಡಗಿದೆ. ನನ್ನ ಭಾವನೆಗಳನ್ನೆಲ್ಲ ತೋಡಿಕೊಳ್ಳಲು ಯಾರಾದರೂ ಸಿಗುವರೋ ಎಂದು ಹಂಬಲಿಸಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಫ್ರಾಂತೀಸ್ಕೋ. ಅವನು ಬೇರೆಯವರಿಗಿಂತ ಭಿನ್ನನಾಗಿದ್ದನು. ಅವನು ಪ್ರಾಮಾಣಿಕನೂ ದಯಾಪರನೂ ಮತ್ತು ಯಾವಾಗಲೂ ಸಂತೋಷದಿಂದಿರುವವನಂತೆ ಕಂಡನು. ಆದುದರಿಂದ, ನನ್ನ ಮನದಾಳದ ಭಾವನೆಗಳೆನ್ನೆಲ್ಲ ಅವನ ಮುಂದೆ ತೋಡಿಕೊಂಡು ಹೃದಯ ಹಗುರಮಾಡಿಕೊಳ್ಳಲು ತೀರ್ಮಾನಿಸಿದೆ. ಫ್ರಾಂತೀಸ್ಕೋ ಒಬ್ಬ ಯೆಹೋವನ ಸಾಕ್ಷಿಯಾಗಿದ್ದನು. ಅಮಲೌಷಧದ ಕುರಿತು ಲೇಖನವಿದ್ದ ಕಾವಲಿನಬುರುಜು ಪತ್ರಿಕೆಯೊಂದನ್ನು ಅವನು ನನಗೆ ಕೊಟ್ಟನು.

ಆ ಲೇಖನವನ್ನು ಓದಿದ ಅನಂತರ ಸಹಾಯಕ್ಕಾಗಿ ನಾನು ದೇವರನ್ನು ಹೀಗೆ ಬೇಡಿಕೊಂಡೆ: “ದೇವರೇ, ನೀನು ಇದ್ದಿ ಎಂದು ನನಗೆ ಗೊತ್ತು, ನಿನ್ನನ್ನು ತಿಳಿದುಕೊಳ್ಳಬೇಕು ಮತ್ತು ನಿನ್ನ ಇಷ್ಟವನ್ನು ಮಾಡಬೇಕೆಂಬ ಆಶೆ ನನಗಿದೆ. ದಯವಿಟ್ಟು ಕರುಣಿಸು!” ಫ್ರಾಂತೀಸ್ಕೋ ಮತ್ತು ಇತರ ಯೆಹೋವನ ಸಾಕ್ಷಿಗಳು ಬೈಬಲಿನಿಂದ ನನಗೆ ಉತ್ತೇಜನ ನೀಡಿದರು ಮತ್ತು ಕೆಲವು ಬೈಬಲ್‌ ಆಧಾರಿತ ಸಾಹಿತ್ಯಗಳನ್ನು ಸಹ ಕೊಟ್ಟರು. ಇವರ ಮೂಲಕ ನಾನು ಕೇಳಿಕೊಂಡ ಸಹಾಯವನ್ನು ದೇವರು ಒದಗಿಸುತ್ತಿದ್ದಾನೆ ಎಂಬುದು ನನಗೆ ಮನವರಿಕೆಯಾಯಿತು. ನಾನು ಕಲಿತುಕೊಂಡ ವಿಷಯಗಳನ್ನು ನನ್ನ ಗೆಳೆಯರಿಗೆ ಮತ್ತು ನನ್ನ ತಮ್ಮ ಹೋಸೇ ಲೂಈಸ್‌ಗೆ ಹೇಳತೊಡಗಿದೆ.

ಒಂದು ದಿನ ನಾನು ಮತ್ತು ನನ್ನ ಸ್ನೇಹಿತರು ಉನ್ಮಾದದಿಂದ ಕೂಡಿದ ಸಂಗೀತ ಕಾರ್ಯಕ್ರಮವೊಂದನ್ನು ಮುಗಿಸಿ ಹಿಂತಿರುಗುತ್ತಿದ್ದೆವು. ಆಗ ನಾನು ಆ ಗುಂಪಿನಿಂದ ಬೇರೆಯಾಗಿ ದೂರ ನಿಂತು ಅವರನ್ನು ಗಮನಿಸಿದೆ. ಅಮಲೌಷಧಗಳ ಪರಿಣಾಮದಿಂದ ನಮ್ಮ ನಡತೆ ಎಷ್ಟು ಅಸಹ್ಯವಾಗಿತ್ತೆಂದು ಅರಿತು ನನಗೆ ಜಿಗುಪ್ಸೆಯಾಯಿತು. ಈ ರೀತಿಯ ಬದುಕನ್ನು ಬಿಟ್ಟು ನಾನೊಬ್ಬ ಯೆಹೋವನ ಸಾಕ್ಷಿಯಾಗಬೇಕೆಂದು ಆ ಕ್ಷಣವೇ ನಿರ್ಣಯಿಸಿದೆ.

ನನಗೊಂದು ಬೈಬಲ್‌ ಬೇಕೆಂದು ನಾನು ಫ್ರಾಂತೀಸ್ಕೋನನ್ನು ಕೇಳಿಕೊಂಡೆ. ಅವನು ಬೈಬಲಿನೊಂದಿಗೆ ನಿತ್ಯಜೀವಕ್ಕೆ ನಡೆಸುವ ಸತ್ಯ * ಎಂಬ ಪುಸ್ತಕವನ್ನು ನೀಡಿದನು. ಆ ಪುಸ್ತಕದಲ್ಲಿ, ದೇವರು ನಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡುವನು ಮತ್ತು ಮರಣವನ್ನು ಸಹ ತೆಗೆದು ಹಾಕುವನು ಎಂಬ ಆತನ ವಾಗ್ದಾನದ ಕುರಿತು ನಾನು ಓದಿದೆ. ಮಾನವರನ್ನು ಎಲ್ಲ ರೀತಿಯ ಕಷ್ಟಸಂಕಷ್ಟಗಳಿಂದ ಬಿಡುಗಡೆಗೊಳಿಸುವ ಸತ್ಯವನ್ನು ನಾನು ಕಂಡುಕೊಂಡೆ ಎಂಬುದರಲ್ಲಿ ನನಗೆ ಯಾವ ಸಂದೇಹವೂ ಇರಲಿಲ್ಲ. (ಯೋಹಾನ 8:32; ಪ್ರಕಟನೆ 21:4) ಅನಂತರ, ನಾನು ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೂಟವೊಂದಕ್ಕೆ ಹಾಜರಾದೆ. ಅಲ್ಲಿ ಅವರು ತೋರಿಸಿದ ಪ್ರೀತಿ, ಸ್ನೇಹಸೌಹಾರ್ದತೆ ನನ್ನ ಮನಸ್ಸನ್ನು ಆಳವಾಗಿ ಪ್ರಭಾವಿಸಿದವು.

ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನನಗಾದ ಆ ಅನುಭವದಿಂದ ನಾನೆಷ್ಟು ಪ್ರಭಾವಿತನಾದೆನೆಂದರೆ ಆ ಕೂಡಲೇ ಹೋಸೇ ಲೂಈಸ್‌ ಮತ್ತು ನನ್ನ ಸ್ನೇಹಿತರನ್ನು ಭೇಟಿಯಾಗಿ ಅವರಿಗೆ ಎಲ್ಲವನ್ನೂ ತಿಳಿಸಿದೆ. ಕೆಲವು ದಿನಗಳ ನಂತರ ನಾವೆಲ್ಲರೂ ಕೂಟಕ್ಕೆ ಹಾಜರಾದೆವು. ನಮ್ಮ ಮುಂದಿನ ಸಾಲಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ನಮ್ಮೆಡೆಗೆ ಕುಡಿನೋಟ ಬೀರಿದಳು. ಉದ್ದ ಕೂದಲು ಬಿಟ್ಟಿದ್ದ ನಮ್ಮೆಲ್ಲರನ್ನೂ ಅಲ್ಲಿ ಕಾಣುವುದು ಅವಳಲ್ಲಿ ಆಶ್ಚರ್ಯ ಹುಟ್ಟಿಸಿತ್ತು ಎಂಬುದು ನಿಸ್ಸಂಶಯ. ಆದರೆ ಮತ್ತೊಮ್ಮೆ ನಮ್ಮನ್ನು ನೋಡದಂತೆ ಜಾಗ್ರತೆವಹಿಸಿದಳು. ಮುಂದಿನ ವಾರ ಮತ್ತೆ ನಾವು ರಾಜ್ಯ ಸಭಾಗೃಹಕ್ಕೆ ಹೋದಾಗ ಅವಳು ಇನ್ನಷ್ಟು ಅಚ್ಚರಿಗೊಂಡಿರಬಹುದು. ಏಕೆಂದರೆ, ಈ ಬಾರಿ ನಾವು ಸಭ್ಯ ಉಡುಪನ್ನು ತೊಟ್ಟು, ಟೈ ಹಾಕಿ ಬಂದಿದ್ದೆವು.

ಅದಾಗಿ ಸ್ವಲ್ಪದರಲ್ಲೇ ನಾನು ಮತ್ತು ಮೀಗೆಲ್‌ ಯೆಹೋವನ ಸಾಕ್ಷಿಗಳ ಸರ್ಕಿಟ್‌ ಸಮ್ಮೇಳನವನ್ನು ಹಾಜರಾದೆವು. ನಮ್ಮ ಜೀವನದಲ್ಲಿ ಈ ಮೊದಲು ಇಂಥ ಅನುಭವವಾಗಿದ್ದೇ ಇಲ್ಲ. ಅಲ್ಲಿ ಎಲ್ಲ ವಯಸ್ಸಿನ ಜನರ ನಡುವಿದ್ದ ನಿಜವಾದ ಸಹೋದರತ್ವವನ್ನು ನಾವು ಕಂಡೆವು. ಮತ್ತು ನಮ್ಮ ಆಶ್ಚರ್ಯಕ್ಕಾಗಿ, ಕೆಲವು ದಿನಗಳ ಹಿಂದೆ ನಾವು ಸಂಗೀತ ರಸಸಂಜೆಗೆಂದು ಹೋಗಿದ್ದ ಸಭಾಂಗಣದಲ್ಲೇ ಈ ಸಮ್ಮೇಳನವು ಇತ್ತು. ಆದರೆ ಇಲ್ಲಿದ್ದ ವಾತಾವರಣ ಮತ್ತು ಸಂಗೀತವು ನಮ್ಮನ್ನು ಹುರಿದುಂಬಿಸಿತು.

ನಮ್ಮ ಸ್ನೇಹಿತರ ಇಡೀ ಗುಂಪು ಈಗ ಬೈಬಲನ್ನು ಕಲಿಯಲಾರಂಭಿಸಿತು. ಸುಮಾರು ಎಂಟು ತಿಂಗಳ ನಂತರ, ಅಂದರೆ 1974 ಜುಲೈ 26ರಂದು ನಾನು ಮತ್ತು ಮೀಗೆಲ್‌ ದೀಕ್ಷಾಸ್ನಾನ ಪಡೆದುಕೊಂಡೆವು. ಆಗ ನಾವಿಬ್ಬರೂ 20ರ ತರುಣರಾಗಿದ್ದೆವು. ಕೆಲವು ತಿಂಗಳ ನಂತರ ನಮ್ಮೊಂದಿಗಿದ್ದ ಇನ್ನೂ ನಾಲ್ವರು ದೀಕ್ಷಾಸ್ನಾನ ಪಡೆದುಕೊಂಡರು. ಬೈಬಲಿನಿಂದ ನಾನು ಪಡೆದುಕೊಂಡ ತರಬೇತಿಯು ಕಾಯಿಲೆಯಿಂದ ಬಳಲುತ್ತಿದ್ದ ನನ್ನ ತಾಯಿಗೆ ಮನೆಗೆಲಸದಲ್ಲಿ ನೆರವಾಗುವಂತೆ ನನ್ನನ್ನು ಉತ್ತೇಜಿಸಿತು. ಮಾತ್ರವಲ್ಲ, ಹೊಸದಾಗಿ ಕಂಡುಕೊಂಡ ಸತ್ಯವನ್ನು ಆಕೆಗೆ ತಿಳಿಸುವಂತೆ ಸಹ ನಾನು ಪ್ರೇರಿಸಲ್ಪಟ್ಟೆ. ನಾವು ಪರಸ್ಪರ ಆಪ್ತರಾದೆವು. ನನ್ನ ತಮ್ಮತಂಗಿಯಂದಿರಿಗೆ ಸಹಾಯಮಾಡಲು ಸಹ ಸಾಕಷ್ಟು ಸಮಯಕಳೆದೆ.

ಸಕಾಲದಲ್ಲಿ ಒಬ್ಬ ತಮ್ಮನನ್ನು ಬಿಟ್ಟು ಎಲ್ಲರೂ ಹಾಗೂ ತಾಯಿ ಬೈಬಲ್‌ ಸತ್ಯವನ್ನು ಕಲಿತರು ಮತ್ತು ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದರು. 1977ರಲ್ಲಿ ನಾನು ಸೋಲೆಡಾಡ್‌ಳನ್ನು ಮದುವೆಯಾದೆ. ನಾನು ಗೆಳೆಯರೊಂದಿಗೆ ಮೊತ್ತಮೊದಲ ಬಾರಿ ರಾಜ್ಯ ಸಭಾಗೃಹಕ್ಕೆ ಹಾಜರಾದಾಗ ನಮ್ಮನ್ನು ನೋಡಿ ಆಶ್ಚರ್ಯಪಟ್ಟ ತರುಣಿ ಅವಳೇ ಆಗಿದ್ದಳು. ಕೇವಲ ಕೆಲವೇ ತಿಂಗಳುಗಳಲ್ಲಿ ನಾವಿಬ್ಬರೂ ಪಯನೀಯರರಾದೆವು. ಯೆಹೋವನ ಸಾಕ್ಷಿಗಳು ಪೂರ್ಣ ಸಮಯ ಸೌವಾರ್ತಿಕ ಕೆಲಸವನ್ನು ಮಾಡುವವರನ್ನು ಪಯನೀಯರರು ಎಂದು ಕರೆಯುತ್ತಾರೆ.

ಮುದ್ದು ತಂಗಿಯ ಬಿಡುಗಡೆ

ನನ್ನ ತಂಗಿ ಮಾರೀವೀ ಚಿಕ್ಕವಳಾಗಿದ್ದಾಗ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು. ಆ ಭಯಾನಕ ಘಟನೆಯ ಕರಿನೆರಳು ಆಕೆಯನ್ನು ಬಹಳವಾಗಿ ಭಾದಿಸಿತ್ತು. ಹದಿಹರೆಯದಲ್ಲೇ ಅವಳು ಅಮಲೌಷಧ, ಕಳ್ಳತನ ಮತ್ತು ವ್ಯಭಿಚಾರವನ್ನೊಳಗೊಂಡ ಅನೈತಿಕ ಜೀವನಶೈಲಿಯನ್ನು ರೂಢಿಸಿಕೊಂಡಳು. 23ನೇ ವಯಸ್ಸಿನಲ್ಲಿ ಆಕೆಯನ್ನು ಸೆರೆಮನೆಗೆ ಹಾಕಲಾಯಿತು. ಅಲ್ಲಿಯೂ ಅವಳು ಹಿಂದಿನ ಜೀವನಶೈಲಿಯನ್ನೇ ಮುಂದುವರಿಸುತ್ತಾ ಮನಬಂದಂತೆ ಜೀವಿಸುತ್ತಿದ್ದಳು.

ಆ ಸಮಯದಷ್ಟಕ್ಕೆ ನಾನು ಸರ್ಕಿಟ್‌ ಮೇಲ್ವಿಚಾರಕನಾಗಿದ್ದೆ. ಸಂಚರಣ ಸೇವಕರನ್ನು ಯೆಹೋವನ ಸಾಕ್ಷಿಗಳು ಹೀಗೆ ಕರೆಯುತ್ತಾರೆ. 1989ರಲ್ಲಿ ನನ್ನನ್ನು ಮತ್ತು ಸೊಲೆಡಾಡ್‌ಳನ್ನು ಮಾರೀವೀ ಸೆರೆಯಾಗಿದ್ದ ಪ್ರದೇಶಕ್ಕೆ ನೇಮಿಸಲಾಯಿತು. ಸೆರೆಯಧಿಕಾರಿಗಳು ಆ ಸಮಯದಲ್ಲಿ ಅವಳ ಮಗನನ್ನು ಅವಳಿಂದ ಬೇರ್ಪಡಿಸಿದ್ದರು. ಇದರಿಂದ ಅವಳು ಮನನೊಂದು ಕುಗ್ಗಿಹೋಗಿದ್ದಳು. ಅವಳಿಗೆ ಬದುಕುವ ಆಶೆಯೇ ಇರಲಿಲ್ಲ. ಒಂದು ದಿನ ನಾನು ಅವಳನ್ನು ಭೇಟಿಯಾದೆ ಮತ್ತು ಇಬ್ಬರೂ ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡುವ ಸಲಹೆಯನ್ನು ಕೊಟ್ಟೆ. ಅವಳು ಅದಕ್ಕೆ ಒಪ್ಪಿಕೊಂಡಳು. ಅಧ್ಯಯನ ಆರಂಭಿಸಿ ಒಂದು ತಿಂಗಳಾದ ಬಳಿಕ ಅವಳು ಅಮಲೌಷಧ ಮತ್ತು ಹೊಗೆಸೊಪ್ಪು ಸೇವಿಸುವುದನ್ನು ನಿಲ್ಲಿಸಿಬಿಟ್ಟಳು. ಅವಳ ಬದುಕಿನಲ್ಲಿ ಇಂಥ ಬದಲಾವಣೆಗಳನ್ನು ಮಾಡಲು ಯೆಹೋವನು ಆಕೆಯನ್ನು ಬಲಪಡಿಸಿದ್ದನ್ನು ಕಣ್ಣಾರೆಕಂಡು ನಾನು ರೋಮಾಂಚನಗೊಂಡೆ.—ಇಬ್ರಿಯ 4:12.

ಅಧ್ಯಯನ ಆರಂಭಿಸಿದ ಸ್ವಲ್ಪದರಲ್ಲೇ ಮಾರೀವೀಯು ತನ್ನ ಜೊತೆಸೆರೆವಾಸಿಗಳೊಂದಿಗೂ ಕಾರಾಗೃಹದ ಅಧಿಕಾರಿಗಳೊಂದಿಗೂ ಬೈಬಲಿನ ಸತ್ಯಗಳ ಕುರಿತು ಮಾತಾಡಲು ಪ್ರಾರಂಭಿಸಿದಳು. ಅವಳನ್ನು ಒಂದರ ಅನಂತರ ಇನ್ನೊಂದು ಕಾರಾಗೃಹಕ್ಕೆ ಹಾಕಿದರೂ ಅವಳು ಅಲ್ಲೆಲ್ಲಾ ಸಾರುತ್ತಲೇ ಇದ್ದಳು. ಒಂದು ಕಾರಾಗೃಹದಲ್ಲಂತೂ ಆಕೆ ಪ್ರತಿಯೊಂದು ಕೋಣೆ ಕೋಣೆಗೂ ಹೋಗಿ ಸಾರಿದಳು. ಅನಂತರದ ವರ್ಷಗಳಲ್ಲಿ ಮಾರೀವೀ ವಿವಿಧ ಕಾರಾಗೃಹದಲ್ಲಿದ್ದ ಬೇರೆ ಬೇರೆ ಸೆರೆವಾಸಿಗಳೊಂದಿಗೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿದಳು.

ಒಂದು ದಿನ ಮಾರೀವೀಯು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವ ತನ್ನ ಇಚ್ಛೆಯನ್ನು ನನಗೆ ತಿಳಿಸಿದಳು. ಆದರೆ ಕಾರಾಗೃಹದಿಂದ ಹೊರಬರಲು ಆಕೆಗೆ ಅನುಮತಿ ಸಿಗಲಿಲ್ಲ. ಮಾತ್ರವಲ್ಲ, ಆಕೆಗೆ ದೀಕ್ಷಾಸ್ನಾನ ನೀಡುವುದಕ್ಕಾಗಿ ಯಾರನ್ನು ಕಾರಾಗೃಹದ ಒಳಗೆ ಬಿಡಲೂ ಅನುಮತಿ ಇರಲಿಲ್ಲ. ಕಾರಾಗೃಹದ ಕೆಟ್ಟ ಪರಿಸ್ಥಿತಿಯಲ್ಲಿ ಅವಳಿನ್ನೂ ನಾಲ್ಕು ವರ್ಷ ಕಾಯಬೇಕಾಗಿತ್ತು. ಆ ಸಮಯದಲ್ಲಿ ತನ್ನ ನಂಬಿಕೆಯನ್ನು ಕಾಪಾಡಿಕೊಳ್ಳಲು ಅವಳಿಗೆ ಯಾವುದು ಸಹಾಯಮಾಡಿತು? ಆ ಪ್ರದೇಶದಲ್ಲಿದ್ದ ಸಭೆಯಲ್ಲಿ ಕೂಟಗಳು ನಡೆಯುತ್ತಿದ್ದ ಅದೇ ವೇಳೆಯಲ್ಲಿ ಮಾರೀವೀಯು ಕಾರಾಗೃಹದ ತನ್ನ ಕೋಣೆಯಲ್ಲಿ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವಿಷಯವನ್ನು ಪರಿಶೀಲಿಸುತ್ತಿದ್ದಳು. ಅಲ್ಲದೆ ಅವಳು ಪ್ರತಿದಿನ ಬೈಬಲನ್ನು ಅಧ್ಯಯನ ಮಾಡುತ್ತಿದ್ದಳು ಮತ್ತು ಪ್ರಾರ್ಥಿಸುತ್ತಿದ್ದಳು.

ಕೊನೆಗೊಂದು ದಿನ ಮಾರೀವೀಯನ್ನು ಬಿಗಿಭದ್ರತೆಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಆ ಕಾರಾಗೃಹದಲ್ಲಿ ಈಜುಕೊಳವಿತ್ತು. ಈ ಸಂದರ್ಭದಲ್ಲಿ ತನ್ನ ಬಹುಕಾಲದ ದೀಕ್ಷಾಸ್ನಾನದ ಇಚ್ಛೆ ನೆರೆವೇರಬಹುದೆಂದು ಆಕೆಗೆ ಅನಿಸಿತು. ಆಕೆಯ ಇಚ್ಛೆ ಕೊನೆಗೂ ಕೈಗೂಡಿತು. ಮಾರೀವೀಗೆ ದೀಕ್ಷಾಸ್ನಾನ ಪಡೆದುಕೊಳ್ಳಲು ಅನುಮತಿ ದೊರೆಯಿತು. ಹೀಗೆ, ಅವಳಿಗೆ ದೀಕ್ಷಾಸ್ನಾನದ ಭಾಷಣವನ್ನು ಕೊಡುವುದಕ್ಕಾಗಿ ನಾನು ಅಲ್ಲಿಗೆ ಹೋಗಿದ್ದೆ. ಅವಳ ಜೀವನದ ಅತಿ ಮಧುರ ಕ್ಷಣದಲ್ಲಿ ನಾನು ಅವಳೊಂದಿಗಿದ್ದೆ.

ಮಾರೀವೀಗೆ ತನ್ನ ಹಳೆಯ ಜೀವನಶೈಲಿಯಿಂದಾಗಿ AIDS ರೋಗ ತಗಲಿತ್ತು. ಹಾಗಿದ್ದರೂ, ಅವಳ ಒಳ್ಳೆಯ ನಡತೆಯಿಂದಾಗಿ ಶಿಕ್ಷಾವಧಿಯು ತೀರುವ ಮುಂಚೆಯೇ ಆಕೆಯನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಲಾಯಿತು. 1994ರ ಮಾರ್ಚ್‌ ತಿಂಗಳಿನಲ್ಲಿ ಅವಳು ಕಾರಾಗೃಹದಿಂದ ಹೊರಬಂದಳು. ಬಳಿಕ ಅವಳು ತಾಯಿಯೊಂದಿಗೆ ಜೀವಿಸಿದಳು. ಎರಡು ವರ್ಷಗಳ ಅನಂತರ ಅವಳು ತನ್ನ ಕೊನೆಯುಸಿರೆಳೆಯುವ ವರೆಗೆ ಕ್ರಿಯಾಶೀಲ ಕ್ರಿಸ್ತೀಯ ಜೀವನವನ್ನು ನಡೆಸಿದಳು.

ವಿನಾಶಕಾರಿ ಭಾವನೆಗಳನ್ನು ಜಯಿಸುವುದು

ನಾನು ಸಹ ನನ್ನ ಹಿಂದಿನ ಬದುಕಿನ ಪರಿಣಾಮಗಳಿಂದ ಸಂಪೂರ್ಣವಾಗಿ ಮುಕ್ತನಾಗಿಲ್ಲ. ತಂದೆ ನನ್ನ ಮೇಲೆಸಗಿದ್ದ ದೌರ್ಜನ್ಯ ಹಾಗೂ ನನ್ನ ಹದಿಹರೆಯದ ಜೀವನರೀತಿ, ನನ್ನ ವ್ಯಕ್ತಿತ್ವದ ಮೇಲೆ ಅಳಿಸಲಾಗದ ಕಲೆಯನ್ನು ಉಂಟುಮಾಡಿದೆ. ನಾನು ದೊಡ್ಡವನಾಗಿದ್ದರೂ, ದೋಷಿ ಭಾವನೆ ಪದೇ ಪದೇ ನನ್ನನ್ನು ಚುಚ್ಚುತ್ತಿದೆ ಮತ್ತು ಆತ್ಮಭಿಮಾನವನ್ನು ಆಗಾಗ್ಗೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನಾನು ಮಾನಸಿಕವಾಗಿ ತುಂಬಾ ಕುಗ್ಗಿಹೋಗುತ್ತೇನೆ. ಆದರೂ, ನನ್ನನ್ನು ಕಾಡುತ್ತಿರುವ ಈ ಎಲ್ಲ ಭಾವನೆಗಳ ವಿರುದ್ಧ ಹೋರಾಡಲು ದೇವರ ವಾಕ್ಯವು ನೀಡುವ ಸಹಾಯ ಬೆಲೆಕಟ್ಟಲಾಗದು. ಕಳೆದ ಅನೇಕ ವರ್ಷಗಳಲ್ಲಿ, ಯೆಶಾಯ 1:18 ಮತ್ತು ಕೀರ್ತನೆ 103:8-13ರಂಥ ಬೈಬಲ್‌ ವಚನಗಳನ್ನು ಪದೇ ಪದೇ ಧ್ಯಾನಿಸುವುದು ಮತ್ತೆ ಮತ್ತೆ ಮರುಕಳಿಸುತ್ತಿರುವ ದೋಷಿ ಭಾವನೆಗಳ ಅಲೆಗಳ ತೀವ್ರತೆಯನ್ನು ಕಡಿಮೆಗೊಳಿಸಲು ಸಹಾಯಮಾಡಿದೆ.

ನಾನು ಯಾವುದಕ್ಕೂ ಪ್ರಯೋಜನವಿಲ್ಲದವನು ಎಂಬ ಕೀಳರಿಮೆಯ ಭಾವನೆಗಳ ವಿರುದ್ಧ ಹೋರಾಡಲು ಯೆಹೋವನು ಒದಗಿಸಿರುವ ಇನ್ನೊಂದು ಆಯುಧ ಪ್ರಾರ್ಥನೆಯೇ. ನಾನು ಆಗಾಗ್ಗೆ ಧಾರಾಕಾರವಾದ ಕಣ್ಣೀರಿನೊಂದಿಗೆ ಯೆಹೋವನಿಗೆ ಪ್ರಾರ್ಥಿಸುತ್ತೇನೆ. 1 ಯೋಹಾನ 3:19, 20ರಲ್ಲಿರುವ ಈ ವಾಕ್ಯಗಳು ನನ್ನನ್ನು ಬಲಪಡಿಸಿವೆ: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.”

“ಪಶ್ಚಾತ್ತಾಪದಿಂದ ಜಜ್ಜಿಹೋದ” ಮನಸ್ಸಿನಿಂದ ದೇವರಿಗೆ ಯಥಾರ್ಥವಾಗಿ ಪ್ರಾರ್ಥಿಸುತ್ತಿರುವುದರಿಂದ, ನಾನು ಈ ಹಿಂದೆ ಭಾವಿಸಿದಷ್ಟು ಕೆಟ್ಟವನಲ್ಲ ಎಂದು ನನಗೆ ತಿಳಿದುಬಂದಿದೆ. ತಮ್ಮ ಹಿಂದಿನ ನಡತೆಗಾಗಿ ಹೃದಯದಾಳದಿಂದ ಪಶ್ಚಾತ್ತಾಪಪಟ್ಟು ಯೆಹೋವನ ಚಿತ್ತ ಮಾಡಲು ತೊಡಗುವವರನ್ನು ಆತನು ತಿರಸ್ಕರಿಸುವುದಿಲ್ಲವೆಂದು ಬೈಬಲ್‌ ಯೆಹೋವನನ್ನು ಹುಡುಕುವವರೆಲ್ಲರಿಗೆ ಆಶ್ವಾಸನೆ ಕೊಡುತ್ತದೆ.—ಕೀರ್ತನೆ 51:17.

ನನ್ನಲ್ಲಿ ಅಪನಂಬಿಕೆಯ ಭಾವನೆಗಳು ಭುಗಿಲೆದ್ದಾಗೆಲ್ಲ, ಫಿಲಿಪ್ಪಿಯ 4:8ರಲ್ಲಿ ತಿಳಿಸಿರುವ ಆಧ್ಯಾತ್ಮಿಕ ವಿಚಾರಗಳಂಥ ಸಕಾರಾತ್ಮಕ ಆಲೋಚನೆಗಳನ್ನು ನನ್ನ ಮನಸ್ಸನಲ್ಲಿ ತುಂಬಿಸಲು ನಾನು ಪ್ರಯತ್ನಿಸುತ್ತೇನೆ. 23ನೇ ಕೀರ್ತನೆ ಮತ್ತು ಪರ್ವತ ಪ್ರಸಂಗವನ್ನು ನಾನು ಬಾಯಿಪಾಠ ಮಾಡಿಕೊಂಡಿದ್ದೇನೆ. ನಕಾರಾತ್ಮಕ ಆಲೋಚನೆಗಳು ನನ್ನಲ್ಲಿ ಉದ್ಭವಿಸುವಾಗ ಬೈಬಲಿನ ಈ ಭಾಗಗಳನ್ನು ನನ್ನಷ್ಟಕ್ಕೆ ಉಚ್ಛರಿಸುತ್ತೇನೆ. ಹೀಗೆ ಮಾಡುವುದು ನಿದ್ರೆಗಳಿಲ್ಲದ ರಾತ್ರಿಗಳಲ್ಲಿ ವಿನಾಶಕಾರಿ ಆಲೋಚನೆಗಳು ಪೀಡಿಸುವಾಗ ತುಂಬಾ ಸಹಾಯಕಾರಿಯಾಗಿದೆ.

ನನಗೆ ಸಿಕ್ಕಿದ ಇನ್ನೊಂದು ಸಹಾಯವೆಂದರೆ, ನನ್ನ ಪತ್ನಿ ಮತ್ತು ಇತರ ಪ್ರೌಢ ಕ್ರೈಸ್ತ ವ್ಯಕ್ತಿಗಳು ನೀಡುವ ಪ್ರಶಂಸೆಯಾಗಿದೆ. ಅವರು ಕೊಡುವ ಉತ್ತೇಜನವನ್ನು ಸ್ವೀಕರಿಸಲು ಮೊದಮೊದಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರೀತಿ “ಎಲ್ಲವನ್ನೂ ನಂಬುತ್ತದೆ” ಎಂಬುದನ್ನು ಅರ್ಥಮಾಡಲು ನನಗೆ ಬೈಬಲ್‌ ಸಹಾಯನೀಡಿದೆ. (1 ಕೊರಿಂಥ 13:7) ಕ್ರಮೇಣ ನನ್ನ ಇತಿಮಿತಿ ಹಾಗೂ ದೌರ್ಬಲ್ಯಗಳನ್ನು ವಿನಯಭಾವದಿಂದ ಒಪ್ಪಿಕೊಳ್ಳಲು ಕಲಿತುಕೊಂಡಿದ್ದೇನೆ.

ನನ್ನನ್ನು ಕಾಡುತ್ತಿದ್ದ ವಿನಾಶಕಾರಿ ಭಾವನೆಗಳಿಂದ ಒಂದು ಪ್ರಯೋಜನವೂ ಇದೆ. ನಕಾರಾತ್ಮಕ ಭಾವನೆಗಳೊಂದಿಗಿನ ಹೋರಾಟವು ನಾನೊಬ್ಬ ಪರಾನುಭೂತಿಯುಳ್ಳ ಸಂಚರಣ ಮೇಲ್ವಿಚಾರಕನಾಗುವಂತೆ ಸಹಾಯಮಾಡಿದೆ. ನಾನು ಮತ್ತು ನನ್ನ ಪತ್ನಿ ಸುಮಾರು 30 ವರ್ಷಗಳಿಂದ ಪೂರ್ಣಸಮಯದ ಸುವಾರ್ತೆಯ ಶುಶ್ರೂಷಕರಾಗಿ ಸೇವೆಸಲ್ಲಿಸಿದ್ದೇವೆ. ಇತರರಿಗೆ ಸೇವೆಮಾಡುವುದರಿಂದ ಸಿಗುವ ಸಂತೋಷವು ನನ್ನ ನಕಾರಾತ್ಮಕ ಭಾವನೆಗಳನ್ನು ಹಾಗೂ ನನ್ನ ಹಿಂದಿನ ಅಹಿತಕರ ನೆನಪುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ನನ್ನ ಜೀವನದ ಹಾದಿಯನ್ನು ಹಿಂತಿರುಗಿ ನೋಡುವಾಗ ಮತ್ತು ಯೆಹೋವನು ನನಗೆ ಅನುಗ್ರಹಿಸಿದ ಆಶೀರ್ವಾದಗಳ ಕುರಿತು ಆಲೋಚಿಸುವಾಗ ಕೀರ್ತನೆಗಾರನಂತೆ ಹೇಳಲು ಮನ ತುಡಿಯುತ್ತದೆ. ಅವನು ಹೇಳಿದ್ದು: “ಯೆಹೋವನನ್ನು ಕೊಂಡಾಡು . . . ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ.”—ಕೀರ್ತನೆ 103:1-4. (w08 1/1)

[ಪಾದಟಿಪ್ಪಣಿ]

^ ಪ್ಯಾರ. 14 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಆದರೆ ಈಗ ಮುದ್ರಿಸಲ್ಪಡುತ್ತಿಲ್ಲ.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೋಷಿ ಭಾವನೆ ಪದೇ ಪದೇ ನನ್ನನ್ನು ಚುಚ್ಚುತ್ತಿದೆ ಮತ್ತು ಆತ್ಮಭಿಮಾನವನ್ನು ಆಗಾಗ್ಗೆ ಕಳೆದುಕೊಳ್ಳುತ್ತೇನೆ. ಆದರೂ, ನನ್ನನ್ನು ಕಾಡುತ್ತಿರುವ ಈ ಎಲ್ಲ ಭಾವನೆಗಳ ವಿರುದ್ಧ ಹೋರಾಡಲು ದೇವರ ವಾಕ್ಯವು ನೀಡುವ ಸಹಾಯ ಬೆಲೆಕಟ್ಟಲಾಗದು

[ಪುಟ 27ರಲ್ಲಿರುವ ಚಿತ್ರಗಳು]

ನನ್ನ ತಮ್ಮ ಹೋಸೇ ಲೂಈಸ್‌ ಮತ್ತು ಗೆಳೆಯ ಮೀಗೆಲ್‌, ಇಬ್ಬರೂ ನನ್ನ ಕೆಟ್ಟ ಮತ್ತು ಒಳ್ಳೆಯ ಮಾದರಿಯನ್ನು ಅನುಸರಿಸಿದರು

[ಪುಟ 28, 29ರಲ್ಲಿರುವ ಚಿತ್ರ]

ಮಾರ್ಸೀಯೋ ಕುಟುಂಬ, 1973ರಲ್ಲಿ

[ಪುಟ 29ರಲ್ಲಿರುವ ಚಿತ್ರ]

ಕೈದಿಯಾಗಿ ಮಾರೀವೀ

[ಪುಟ 30ರಲ್ಲಿರುವ ಚಿತ್ರ]

ಪತ್ನಿ ಸೋಲೆಡಾಡ್‌ಳೊಂದಿಗೆ