ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ರಾಜ್ಯವು ನಿಮ್ಮ ಹೃದಯದಲ್ಲಿದೆಯೋ?

ದೇವರ ರಾಜ್ಯವು ನಿಮ್ಮ ಹೃದಯದಲ್ಲಿದೆಯೋ?

ನಮ್ಮ ಓದುಗರ ಪ್ರಶ್ನೆ

ದೇವರ ರಾಜ್ಯವು ನಿಮ್ಮ ಹೃದಯದಲ್ಲಿದೆಯೋ?

ಈ ಪ್ರಶ್ನೆಗೆ ಉತ್ತರವು ‘ಹೌದು’ ಎಂದು ಅನೇಕರು ಇಂದು ನಂಬುತ್ತಾರೆ. ಉದಾಹರಣೆಗೆ, ದ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡೀಯ ಇದನ್ನು ಸಮರ್ಥಿಸಿ ಹೇಳುವುದು: “ದೇವರ ರಾಜ್ಯವೆಂದರೆ . . . ನಮ್ಮ ಹೃದಯಗಳನ್ನು ದೇವರು ಆಳುವುದಾಗಿದೆ.” ಸಾಮಾನ್ಯವಾಗಿ ಪಾದ್ರಿಗಳು ಇದನ್ನು ಕಲಿಸುತ್ತಾರೆ. ಆದರೆ, ದೇವರ ರಾಜ್ಯವು ಮಾನವರ ಹೃದಯಗಳಲ್ಲಿ ಇದೆಯೆಂದು ಬೈಬಲ್‌ ನಿಜವಾಗಿಯೂ ಕಲಿಸುತ್ತದೋ?

ದೇವರ ರಾಜ್ಯವು ಮಾನವರ ಹೃದಯಗಳಲ್ಲಿದೆ ಎಂಬ ವಿಚಾರವನ್ನು ಪ್ರಥಮವಾಗಿ ಯೇಸುವೇ ಪ್ರವರ್ತಿಸಿದನೆಂದು ಅನೇಕರು ನೆನಸುತ್ತಾರೆ. “ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿಯೇ ಅದೆ” ಎಂದು ಯೇಸು ಹೇಳಿದ್ದು ನಿಜ. (ಲೂಕ 17:21, NW) ಇದನ್ನು ಕೆಲವು ಭಾಷಾಂತರಗಳು “ದೇವರ ರಾಜ್ಯವು ನಿಮ್ಮಲ್ಲಿಯೇ ಅದೆ” ಅಥವಾ “ನಿಮ್ಮೊಳಗೆ ಇದೆ” ಎಂದೂ ಹೇಳುತ್ತವೆ. ಇವು ಯೇಸುವಿನ ಹೇಳಿಕೆಯ ಸರಿಯಾದ ಭಾಷಾಂತರವಾಗಿವೆಯೋ? ದೇವರ ರಾಜ್ಯವು ಮಾನವ ಹೃದಯಗಳಲ್ಲಿದೆಯೆಂದು ಯೇಸು ನಿಜವಾಗಿ ಅರ್ಥೈಸಿದನೋ?

ಮೊದಲನೆಯದಾಗಿ, ಮಾನವ ಹೃದಯವು ಏನಾಗಿದೆ ಎಂದು ಪರಿಗಣಿಸಿ. ಬೈಬಲಿನಲ್ಲಿ ಸಾಂಕೇತಿಕ ಹೃದಯವು ಒಬ್ಬನ ಅಂತರಂಗವನ್ನು ಅಂದರೆ ಅವನ ಆಲೋಚನೆ, ವರ್ತನೆ ಮತ್ತು ಭಾವನೆಗಳ ಮೂಲವನ್ನು ಸೂಚಿಸುತ್ತದೆ. ದೇವರ ರಾಜ್ಯದಂಥ ಮಹೋನ್ನತವಾದ ವಿಷಯವು ಮಾನವರ ಹೃದಯದೊಳಗಿರುವುದು ಅಂದರೆ ಆ ರಾಜ್ಯವು ಜನರನ್ನು ಪರಿವರ್ತಿಸಿ ಶ್ರೇಷ್ಠರನ್ನಾಗಿ ಮಾಡುವ ಸಂಗತಿಯು ಮನಸ್ಸಿಗೆ ಹಿಡಿಸುವಂತಿರಬಹುದು. ಆದರೆ ಇಂಥ ಬೋಧನೆಗೆ ಆಧಾರವೇನಾದರೂ ಇದೆಯೋ?

ಬೈಬಲ್‌ ತಿಳಿಸುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ.” (ಯೆರೆಮೀಯ 17:9) ಯೇಸುವೇ ಹೇಳಿದ್ದು: “ಒಳಗಿನಿಂದ ಅಂದರೆ ಮನುಷ್ಯರ ಮನಸ್ಸಿನೊಳಗಿಂದ ಸೂಳೆಗಾರಿಕೆ ಕಳ್ಳತನ ಕೊಲೆ ಹಾದರ ದ್ರವ್ಯಾಶೆ ಕೆಡುಕುತನ . . . ಇವೇ ಮೊದಲಾದವುಗಳ ಕೆಟ್ಟ ಆಲೋಚನೆಗಳು ಹೊರಡುತ್ತವೆ.” (ಮಾರ್ಕ 7:20-22) ಇದನ್ನು ಪರಿಗಣಿಸಿ: ಜಗತ್ತಿನಲ್ಲಿ ನಾವಿಂದು ನೋಡುತ್ತಿರುವ ಕಷ್ಟಸಂಕಟದ ಮೂಲವು ಮಾನವರ ಪಾಪಪೂರ್ಣ ಹೃದಯವೇ ಆಗಿದೆಯಲ್ಲವೇ? ಹೀಗಿರುವಾಗ, ಅಂಥ ಮೂಲದಿಂದ ಪರಿಪೂರ್ಣವಾಗಿರುವ ದೇವರ ರಾಜ್ಯವು ಹೇಗೆ ಬರಸಾಧ್ಯವಿದೆ? ಮದ್ದುಗುಣಿಕೇ ಅಥವಾ ದತ್ತೂರಿ ಗಿಡವು ಹೇಗೆ ಅಂಜೂರದ ಹಣ್ಣನ್ನು ಕೊಡಲಾರದೋ ಹಾಗೆಯೆ ಮಾನವ ಹೃದಯದಿಂದ ದೇವರ ರಾಜ್ಯವು ಖಂಡಿತ ಬರಲಾರದು.—ಮತ್ತಾಯ 7:16.

ಎರಡನೆಯದಾಗಿ, ಲೂಕ 17:21ರ ಮಾತುಗಳನ್ನು ಹೇಳುವಾಗ ಯೇಸು ಯಾರೊಂದಿಗೆ ಮಾತಾಡುತ್ತಿದ್ದನೆಂದು ಗಮನಿಸಿರಿ. ಅದರ ಹಿಂದಿನ ವಚನವು ತಿಳಿಸುವ ಪ್ರಕಾರ, “ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಿದಾಗ ಆತನು ಅವರಿಗೆ” ಆ ಮಾತುಗಳನ್ನು ಹೇಳಿದನು. (ಲೂಕ 17:20) ಫರಿಸಾಯರು ಯೇಸುವಿನ ವಿರೋಧಿಗಳಾಗಿದ್ದರು. ಕಪಟಿಗಳಾದ ಆ ಫರಿಸಾಯರು ದೇವರ ರಾಜ್ಯಕ್ಕೆ ಹೋಗುವುದಿಲ್ಲವೆಂದು ಯೇಸು ತಿಳಿಸಿದನು. (ಮತ್ತಾಯ 23:13) ಫರಿಸಾಯರು ದೇವರ ರಾಜ್ಯಕ್ಕೆ ಸೇರುವುದಿಲ್ಲವಾದರೆ, ಆ ರಾಜ್ಯವು ಅವರ ಹೃದಯಗಳಲ್ಲಿ ಇರಸಾಧ್ಯವಿತ್ತೇ? ಖಂಡಿತವಾಗಿ ಇಲ್ಲ! ಹಾಗಾದರೆ ಯೇಸು ಏನನ್ನು ಅರ್ಥೈಸಿದನು?

ಯೇಸುವಿನ ಈ ಮಾತುಗಳನ್ನು ಅನುವಾದಿಸುವಾಗ ಜಾಗರೂಕತೆಯಿಂದ ಮಾಡಿದ ಅನೇಕ ಬೈಬಲ್‌ ತರ್ಜುಮೆಗಳು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನಲ್ಲಿರುವ ಪದಕ್ಕೆ ತದ್ರೀತಿಯ ಪದವನ್ನು ಬಳಸುತ್ತವೆ. ಕೆಲವು ಭಾಷಾಂತರಗಳು, ದೇವರ ರಾಜ್ಯವು “ನಿಮ್ಮ ನಡುವೆ ಇದೆ” ಅಥವಾ “ನಿಮ್ಮ ಮಧ್ಯದಲ್ಲಿದೆ” ಎಂದು ತಿಳಿಸುತ್ತವೆ. ದೇವರ ರಾಜ್ಯವು ಆ ಸಮಯದಲ್ಲಿದ್ದ ಫರಿಸಾಯರ ಮತ್ತು ಜನರ ಮಧ್ಯದಲ್ಲಿ ಇದ್ದದ್ದು ಹೇಗೆ? ಒಳ್ಳೇದು, ಆ ರಾಜ್ಯದ ಅರಸನಾಗುವಂತೆ ಯೆಹೋವ ದೇವರು ನೇಮಿಸಿದ ವ್ಯಕ್ತಿ ಯೇಸು ತಾನೇ ಆಗಿದ್ದನು. ನೇಮಿತ ಅರಸನಾದ ಯೇಸು ಆ ಜನರ ಮಧ್ಯದಲ್ಲಿಯೇ ಇದ್ದನು. ಅವನು ದೇವರ ರಾಜ್ಯದ ಕುರಿತು ಕಲಿಸಿದನು. ಅಲ್ಲದೆ, ಅದ್ಭುತಗಳನ್ನು ಮಾಡುವ ಮೂಲಕ ಆ ರಾಜ್ಯವು ಏನು ಮಾಡಲಿರುವುದು ಎಂಬುದರ ಮುನ್ನೋಟವನ್ನು ಸಹ ನೀಡಿದನು. ಹೀಗಿರುವುದರಿಂದ, ನಿಜವಾದ ಅರ್ಥದಲ್ಲಿ ದೇವರ ರಾಜ್ಯವು ಅವರ ಮಧ್ಯದಲ್ಲಿತ್ತು.

ಮಾನವರ ಹೃದಯಗಳಲ್ಲಿ ದೇವರ ರಾಜ್ಯವಿದೆ ಎಂಬ ಅಭಿಪ್ರಾಯಕ್ಕೆ ಬೈಬಲಿನಲ್ಲಿ ಯಾವುದೇ ಆಧಾರವಿಲ್ಲವೆಂಬುದು ಸುಸ್ಪಷ್ಟ. ಅದು ಒಂದು ನೈಜ ಸರಕಾರವಾಗಿದ್ದು, ಪ್ರವಾದಿಗಳು ಮುಂತಿಳಿಸಿದಂತೆ ಭೂಮಿಯ ಮೇಲೆ ಮಹತ್ತರ ಬದಲಾವಣೆಗಳನ್ನು ಮಾಡುವುದು.—ಯೆಶಾಯ 9:6, 7; ದಾನಿಯೇಲ 2:44. (w08 1/1)