ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ವೃದ್ಧರ ಕಾಳಜಿವಹಿಸುತ್ತಾನೆ

ದೇವರು ವೃದ್ಧರ ಕಾಳಜಿವಹಿಸುತ್ತಾನೆ

ದೇವರು ವೃದ್ಧರ ಕಾಳಜಿವಹಿಸುತ್ತಾನೆ

ಇಂದು ವೃದ್ಧರ ದುರುಪಚಾರವು ವ್ಯಾಪಕವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅಧರ್ಮ ತುಂಬಿರುವ ಈ ಲೋಕದ “ಕಡೇ ದಿವಸಗಳಲ್ಲಿ” ಜನರು “ಸ್ವಾರ್ಥಚಿಂತಕರೂ . . . [ಸ್ವಾಭಾವಿಕ] ಮಮತೆಯಿಲ್ಲದವರೂ” ಆಗಿರುವರು ಎಂದು ಬಹಳ ಸಮಯದ ಹಿಂದೆಯೇ ಬೈಬಲ್‌ ಮುಂತಿಳಿಸಿತ್ತು. (2 ತಿಮೊಥೆಯ 3:​1-3) “ಸ್ವಾಭಾವಿಕ ಮಮತೆ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ಕುಟುಂಬ ವೃತ್ತದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರೀತಿಗೆ ಸೂಚಿಸಸಾಧ್ಯವಿದೆ. ಬೈಬಲಿನ ಪ್ರವಾದನೆಗೆ ಹೊಂದಿಕೆಯಲ್ಲಿ ಇಂದು ಅಂಥ ಮಮತೆಯು ಗಮನಾರ್ಹವಾಗಿ ಕಡಿಮೆಯಾಗಿದೆ.

ವೃದ್ಧರನ್ನು ದುರುಪಚರಿಸುವ ಜನರಿಗೆ ತದ್ವಿರುದ್ಧವಾಗಿ ಯೆಹೋವನಾದರೊ ವೃದ್ಧರನ್ನು ಅತ್ಯಮೂಲ್ಯರೆಂದೆಣಿಸುತ್ತಾನೆ ಮತ್ತು ಅವರ ಕಾಳಜಿವಹಿಸುತ್ತಾನೆ. ಬೈಬಲ್‌ ಇದನ್ನು ಹೇಗೆ ತೋರಿಸಿಕೊಡುತ್ತದೆ ಎಂಬುದನ್ನು ಪರಿಗಣಿಸಿರಿ.

“ವಿಧವೆಯರಿಗೆ ಸಹಾಯಕ”

ಯೆಹೋವನಿಗೆ ವೃದ್ಧರ ಬಗ್ಗೆ ಕಾಳಜಿಯಿದೆ ಎಂಬುದು ಹೀಬ್ರು ಶಾಸ್ತ್ರಗಳಲ್ಲಿ ತಿಳಿದುಬರುತ್ತದೆ. ಉದಾಹರಣೆಗೆ, ಕೀರ್ತನೆ 68:5ರಲ್ಲಿ ದಾವೀದನು ಯೆಹೋವನನ್ನು ‘ವಿಧವೆಯರಿಗೆ ಸಹಾಯಕನು’ ಎಂದು ಕರೆಯುತ್ತಾನೆ. ನಮಗೆ ತಿಳಿದಿರುವಂತೆ ವಿಧವೆಯರು ಸಾಮಾನ್ಯವಾಗಿ ವೃದ್ಧರಾಗಿರುತ್ತಾರೆ. * ಇತರ ಬೈಬಲ್‌ ಭಾಷಾಂತರಗಳಲ್ಲಿ, “ಸಹಾಯಕ” ಎಂಬ ಪದವನ್ನು “ನ್ಯಾಯಾಧೀಶ,” “ರಕ್ಷಕ” ಮತ್ತು “ಪಾಲಕ” ಎಂದು ಭಾಷಾಂತರಿಸಲಾಗಿದೆ. ಯೆಹೋವನಿಗೆ ವಿಧವೆಯರ ಕಾಳಜಿಯಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಾಸ್ತವದಲ್ಲಿ, ಯಾರಾದರೂ ಅವರನ್ನು ದುರುಪಚರಿಸುವುದಾದರೆ ಯೆಹೋವನ ಕೋಪವು ಅವರ ಮೇಲೆ ಉರಿಯುವುದು ಎಂಬುದಾಗಿಯೂ ಬೈಬಲ್‌ ತಿಳಿಸುತ್ತದೆ. (ವಿಮೋಚನಕಾಂಡ 22:​22-24, NIBV) ವಿಧವೆಯರನ್ನು ಮತ್ತು ಎಲ್ಲ ನಂಬಿಗಸ್ತ ವೃದ್ಧ ವ್ಯಕ್ತಿಗಳನ್ನು ದೇವರು ಹಾಗೂ ಆತನ ಸೇವಕರು ಅತ್ಯಮೂಲ್ಯರೆಂದೆಣಿಸುತ್ತಾರೆ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು” ಎಂದು ಹೇಳುವ ಮೂಲಕ ಜ್ಞಾನೋಕ್ತಿ 16:31 ಯೆಹೋವನ ಮತ್ತು ಆತನ ಜನರ ದೃಷ್ಟಿಕೋನವನ್ನು ತಿಳಿಯಪಡಿಸುತ್ತದೆ.

ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ವೃದ್ಧರಿಗೆ ಮರ್ಯಾದೆ ತೋರಿಸುವುದು ಒಂದು ಮೂಲಭೂತ ಅಂಶವಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರಿಗೆ ಹೀಗೆ ಆಜ್ಞಾಪಿಸಲಾಗಿತ್ತು: “ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.” (ಯಾಜಕಕಾಂಡ 19:32) ಇದರ ಅರ್ಥ ಇಸ್ರಾಯೇಲಿನಲ್ಲಿ, ಯೆಹೋವನೊಂದಿಗಿನ ಸಂಬಂಧ ಮತ್ತು ವೃದ್ಧರಿಗೆ ತೋರಿಸುವ ಮರ್ಯಾದೆಯು ಒಂದಕ್ಕೊಂದು ಹೊಂದಿಕೆಯಲ್ಲಿತ್ತು. ಒಬ್ಬ ವ್ಯಕ್ತಿಯು ವೃದ್ಧರನ್ನು ದುರುಪಚರಿಸುವುದಾದರೆ, ತನಗೆ ದೇವರ ಮೇಲೆ ಪ್ರೀತಿಯಿದೆ ಎಂದು ಹೇಳಸಾಧ್ಯವಿರಲಿಲ್ಲ.

ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲವಾದರೂ ‘ಕ್ರಿಸ್ತನ ನಿಯಮದ’ ಕೆಳಗಿದ್ದಾರೆ. ಈ ನಿಯಮವು ಅವರ ನಡತೆ ಮತ್ತು ಮನೋಭಾವವನ್ನು ಹೆಚ್ಚಿನ ಮಟ್ಟಿಗೆ ಪ್ರಭಾವಿಸುತ್ತದೆ. ಇದರಲ್ಲಿ, ಹೆತ್ತವರಿಗೆ ಮತ್ತು ವೃದ್ಧರಿಗೆ ಪ್ರೀತಿ ಹಾಗೂ ಕಾಳಜಿಯನ್ನು ತೋರಿಸುವುದು ಸಹ ಸೇರಿದೆ. (ಗಲಾತ್ಯ 6:2; ಎಫೆಸ 6:1-3; 1 ತಿಮೊಥೆಯ 5:1-3) ಆದರೆ ಕ್ರೈಸ್ತರು ಪ್ರೀತಿಯನ್ನು ತೋರಿಸುವುದು ಬರೀ ಅದೊಂದು ಆಜ್ಞೆಯಾಗಿರುವ ಮಾತ್ರಕ್ಕಲ್ಲ, ಬದಲಿಗೆ ಅವರು ಹೃದಯದಿಂದ ಪ್ರೇರಿತರಾಗಿ ಈ ಪ್ರೀತಿಯನ್ನು ತೋರಿಸುತ್ತಾರೆ. “ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ” ಎಂದು ಅಪೊಸ್ತಲ ಪೇತ್ರನು ಉತ್ತೇಜಿಸಿದನು.​—⁠1 ಪೇತ್ರ 1:22.

ವೃದ್ಧರನ್ನು ನಾವು ನೋಡಿಕೊಳ್ಳಬೇಕು ಎನ್ನುವುದಕ್ಕೆ ಶಿಷ್ಯನಾದ ಯಾಕೋಬನು ಮತ್ತಷ್ಟು ಕಾರಣವನ್ನು ಒದಗಿಸುತ್ತಾನೆ. ಅವನು ಬರೆದದ್ದು: “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ [ಅಥವಾ, ಆರಾಧನೆ].” (ಯಾಕೋಬ 1:27) ಇಲ್ಲಿ ಯಾಕೋಬನು, ವೃದ್ಧರು ದೇವರಿಗೆ ಎಷ್ಟೊಂದು ಅಮೂಲ್ಯರು ಎಂಬ ಆಲೋಚನಾಪ್ರೇರಕ ಅಂಶವನ್ನು ನಮ್ಮ ಗಮನಕ್ಕೆ ತರುತ್ತಾನೆ.

ಆದುದರಿಂದ, ವೃದ್ಧರನ್ನು ಕೇವಲ ದುರುಪಚರಿಸದಿದ್ದರೆ ಸಾಕು ಎಂದು ನಾವು ನೆನಸಬಾರದು. ಬದಲಾಗಿ ಅವರ ಪ್ರಯೋಜನಾರ್ಥವಾಗಿ ಸಕಾರಾತ್ಮಕ ಕೆಲಸಗಳನ್ನು ಮಾಡುವ ಮೂಲಕ ನಾವು ಅವರ ಕಡೆಗೆ ಕ್ರಿಯಾಶೀಲ ಪರಿಗಣನೆಯನ್ನು ತೋರಿಸಬೇಕಾಗಿದೆ. (“ಕ್ರಿಯೆಯ ಮೂಲಕ ತೋರಿಸಲ್ಪಡುವ ಪ್ರೀತಿ” ಎಂಬ ಪುಟಗಳು 6-7ರಲ್ಲಿರುವ ಚೌಕವನ್ನು ನೋಡಿ.) ಯಾಕೋಬನು ಬರೆದದ್ದು: ‘ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೇ.’​—⁠ಯಾಕೋಬ 2:26.

‘ಸಂಕಟದಲ್ಲಿ ಬಿದ್ದಿರುವ’ ವೃದ್ಧರಿಗೆ ಸಾಂತ್ವನ

ಯಾಕೋಬನ ಮಾತುಗಳಿಂದ ನಾವು ಇನ್ನೊಂದು ಅಂಶವನ್ನೂ ಕಲಿಯಬಲ್ಲೆವು. ‘ಸಂಕಟದಲ್ಲಿ ಬಿದ್ದಿರುವ’ ವೃದ್ಧರನ್ನು ಪರಾಮರಿಸಿರಿ ಎಂದು ಯಾಕೋಬನು ಕ್ರೈಸ್ತರಿಗೆ ತಿಳಿಸಿದನು ಎಂಬುದನ್ನು ಗಮನಿಸಿರಿ. “ಸಂಕಟ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ನಮ್ಮ ಜೀವನದ ಸ್ಥಿತಿಗತಿಯ ಒತ್ತಡದಿಂದಾಗಿ ಉಂಟಾಗುವ ದುಃಖ, ವ್ಯಥೆ ಇಲ್ಲವೆ ಯಾತನೆಯನ್ನು ಸೂಚಿಸುತ್ತದೆ. ಅನೇಕ ವೃದ್ಧರು ಇಂಥ ದುಃಖವನ್ನು ಅನುಭವಿಸುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಕೆಲವರು ಒಂಟಿ ಭಾವನೆಯೊಂದಿಗೆ ಹೋರಾಡುತ್ತಿದ್ದಾರೆ. ಇತರರು ತಮ್ಮ ವೃದ್ಧಾಪ್ಯದಿಂದ ಉಂಟಾದ ಇತಿಮಿತಿಗಳ ಕಾರಣ ಖಿನ್ನರಾಗಿದ್ದಾರೆ. ದೇವರ ಸೇವೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿರುವವರು ಸಹ ಖಿನ್ನತೆಯನ್ನು ಎದುರಿಸಬಹುದು. ಉದಾಹರಣೆಗೆ ಜಾನ್‌ * ಎಂಬವರನ್ನು ತೆಗೆದುಕೊಳ್ಳಿ. ಅವರು ನಲವತ್ತಕ್ಕಿಂತಲೂ ಹೆಚ್ಚು ವರ್ಷಕಾಲ ದೇವರ ರಾಜ್ಯದ ನಂಬಿಗಸ್ತ ಘೋಷಕರಾಗಿದ್ದಾರೆ; ಇದರಲ್ಲಿ ಮೂವತ್ತು ವರ್ಷಗಳನ್ನು ಅವರು ಪೂರ್ಣ ಸಮಯದ ಸೇವೆಯಲ್ಲಿ ಕಳೆದಿದ್ದಾರೆ. ಈಗ ತಮ್ಮ 80ಗಳ ಪ್ರಾಯದಲ್ಲಿರುವ ಅವರು ತಮಗೂ ಕೆಲವೊಮ್ಮೆ ನಿರುತ್ತೇಜನದ ಅನಿಸಿಕೆಯಾಗುತ್ತದೆ ಎಂದು ತಿಳಿಸುತ್ತಾರೆ. ಅವರು ಹೇಳುವುದು: “ನಾನು ಅನೇಕವೇಳೆ ಗತಸಮಯಗಳನ್ನು ನೆನಪಿಸಿಕೊಳ್ಳುತ್ತೇನೆ. ಆಗ ನಾನು ಮಾಡಿದ ತಪ್ಪುಗಳು ನನ್ನ ಮುಂದೆಬಂದು ನಿಲ್ಲುತ್ತವೆ. ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಅವನ್ನು ನಾನು ಮಾಡದೇ ಇರಬಹುದಾಗಿತ್ತು ಎಂದು ಯಾವಾಗಲೂ ನಾನು ನೆನಸುತ್ತೇನೆ.”

ಇಂಥ ವ್ಯಕ್ತಿಗಳು, ಯೆಹೋವನು ಪರಿಪೂರ್ಣನಾದರೂ ಆತನು ನಮ್ಮಿಂದ ಪರಿಪೂರ್ಣತೆಯನ್ನು ಎದುರುನೋಡುವುದಿಲ್ಲ ಎಂಬುದನ್ನು ತಿಳಿಯುವಾಗ ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ. ನಮ್ಮ ತಪ್ಪುಗಳನ್ನು ಆತನು ತಿಳಿದಿದ್ದಾನಾದರೂ, ಬೈಬಲ್‌ ಆತನ ಕುರಿತು ತಿಳಿಸುವುದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:⁠3) ಹೌದು, ಯೆಹೋವನು ನಮ್ಮ ತಪ್ಪುಗಳ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುವುದಿಲ್ಲ, ಬದಲಾಗಿ ನಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ಆತನು ನೋಡುತ್ತಾನೆ. ಇದು ನಮಗೆ ಹೇಗೆ ಗೊತ್ತು?

ಪಾಪ ಮತ್ತು ಅಪರಿಪೂರ್ಣತೆ ಏನೆಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದ ರಾಜ ದಾವೀದನು ದೇವರಿಂದ ಪ್ರೇರಿತನಾಗಿ ಕೀರ್ತನೆ 139:​1-3ರಲ್ಲಿ ಕಂಡುಬರುವ ಈ ಮಾತುಗಳನ್ನು ದಾಖಲಿಸಿದನು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.” ಇಲ್ಲಿ ಕಂಡುಬುರುವ “ಶೋಧಿಸಿ ಗ್ರಹಿಸಿಕೊಳ್ಳುತ್ತೀ” ಎಂಬ ಅಭಿವ್ಯಕ್ತಿಯು “ತೂರು” ಎಂಬ ಅಕ್ಷರಾರ್ಥವನ್ನು ನೀಡುತ್ತದೆ. ಇದು, ಧಾನ್ಯವನ್ನು ಹೊಟ್ಟಿನಿಂದ ಪ್ರತ್ಯೇಕಿಸುವುದಕ್ಕೆ ಹೆಚ್ಚುಕಡಿಮೆ ಸಮಾನವಾಗಿದೆ. ನಮ್ಮ ತಪ್ಪುಗಳನ್ನು ತೂರಿಬಿಟ್ಟು, ಒಳ್ಳೇ ಕೃತ್ಯಗಳನ್ನು ಮಾತ್ರ ತನ್ನ ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆಂಬುದು ಯೆಹೋವನಿಗೆ ತಿಳಿದಿದೆ ಎಂಬ ಆಶ್ವಾಸನೆಯನ್ನು ದೈವಿಕ ಪ್ರೇರಣೆಯಿಂದ ದಾವೀದನು ನೀಡುತ್ತಾನೆ.

ಎಷ್ಟರ ತನಕ ನಾವು ಕರುಣಾಮಯಿಯಾದ ನಮ್ಮ ಸ್ವರ್ಗೀಯ ತಂದೆಗೆ ನಂಬಿಗಸ್ತರಾಗಿ ಉಳಿಯುತ್ತೇವೊ ಅಷ್ಟರ ತನಕ ಆತನು ನಮ್ಮ ಒಳ್ಳೇ ಕೃತ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಮತ್ತು ಅವನ್ನು ನಿಕ್ಷೇಪದಂತೆ ಕಾಪಾಡಿಕೊಳ್ಳುತ್ತಾನೆ. ವಾಸ್ತವದಲ್ಲಿ, ನಮ್ಮ ಕೆಲಸವನ್ನೂ ಆತನ ನಾಮಕ್ಕಾಗಿ ನಾವು ತೋರಿಸಿದ ಪ್ರೀತಿಯನ್ನೂ ಮರೆಯುವುದು ಆತನ ದೃಷ್ಟಿಯಲ್ಲಿ ಅನ್ಯಾಯ ಕೃತ್ಯಕ್ಕೆ ಸಮಾನವಾಗಿದೆ ಎಂದು ಬೈಬಲ್‌ ತಿಳಿಸುತ್ತದೆ.​—⁠ಇಬ್ರಿಯ 6:10.

“ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು”

ವೃದ್ಧಾಪ್ಯದ ಸಮಸ್ಯೆಗಳು, ಮಾನವಕುಲಕ್ಕೆ ದೇವರು ಉದ್ದೇಶಿಸಿದ ಸಂಗತಿಗಳಾಗಿಲ್ಲ ಎಂದು ಬೈಬಲ್‌ ತೋರಿಸುತ್ತದೆ. ನಮ್ಮ ಪ್ರಥಮ ಹೆತ್ತವರು ತಮ್ಮ ಸೃಷ್ಟಿಕರ್ತನ ವಿರುದ್ಧ ದಂಗೆಯೆದ್ದ ಬಳಿಕವೇ ವೃದ್ಧಾಪ್ಯದ ಹಾನಿಕಾರಕ ಪ್ರಭಾವಗಳು ಮಾನವ ಜೀವನದ ಭಾಗವಾದವು. (ಆದಿಕಾಂಡ 3:17-19; ರೋಮಾಪುರ 5:12) ಆದರೆ ಇದು ಸದಾಕಾಲಕ್ಕೂ ಮುಂದುವರಿಯುವುದಿಲ್ಲ.

ಈಗಾಗಲೇ ನೋಡಿರುವಂತೆ, ವೃದ್ಧರ ದುರುಪಚಾರವನ್ನು ಸೇರಿಸಿ ಇಂದು ನಾವು ಅನುಭವಿಸುತ್ತಿರುವ ಅನೇಕ ಕೆಟ್ಟ ಪರಿಸ್ಥಿತಿಗಳು ನಾವು ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬುದಕ್ಕೆ ರುಜುವಾತನ್ನು ನೀಡುತ್ತವೆ. (2 ತಿಮೊಥೆಯ 3:⁠1) ದೇವರ ಉದ್ದೇಶವು, ವೃದ್ಧಾಪ್ಯ ಮತ್ತು ಮರಣದ ಹಾನಿಕಾರಕ ಪ್ರಭಾವಗಳನ್ನು ಸೇರಿಸಿ ಪಾಪದ ಎಲ್ಲ ಪರಿಣಾಮಗಳನ್ನು ತೆಗೆದುಹಾಕುವುದೇ ಆಗಿದೆ. ಬೈಬಲ್‌ ತಿಳಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”​—⁠ಪ್ರಕಟನೆ 21:⁠4.

ದೇವರ ನೂತನ ಲೋಕದಲ್ಲಿ, ವೃದ್ಧಾಪ್ಯದ ಕಷ್ಟಸಂಕಟಗಳು ಗತಕಾಲದ ಸಂಗತಿಗಳಾಗಿರುವವು. ಅದೇ ರೀತಿಯಲ್ಲಿ ವೃದ್ಧರ ದುರುಪಚಾರವು ಸಹ ಇಲ್ಲದೆ ಹೋಗುವುದು. (ಮೀಕ 4:⁠4) ದೇವರ ಜ್ಞಾಪಕದಲ್ಲಿರುವ ಮೃತರು ಸಹ ಪುನಃ ಜೀವವನ್ನು ಹಿಂದಕ್ಕೆ ಪಡೆದುಕೊಳ್ಳಲಿದ್ದಾರೆ ಮತ್ತು ಅವರಿಗೂ ಭೂಪರದೈಸಿನಲ್ಲಿ ಸದಾಕಾಲ ಜೀವಿಸುವ ಸುಯೋಗವು ದೊರಕಲಿದೆ. (ಯೋಹಾನ 5:​28, 29) ಆ ಸಮಯದಲ್ಲಿ, ಯೆಹೋವ ದೇವರು ವೃದ್ಧರ ಬಗ್ಗೆ ಮಾತ್ರವಲ್ಲ ತನಗೆ ವಿಧೇಯರಾಗುವ ಎಲ್ಲ ಜನರ ಬಗ್ಗೆ ಕಾಳಜಿವಹಿಸುತ್ತಾನೆ ಎಂಬುದು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಲಿರುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 5 ಕೆಲವು ವಿಧವೆಯರು ವೃದ್ಧರಲ್ಲವೆಂಬುದು ನಿಜ. ಆದರೆ ಅಂಥ ಯುವ ವಿಧವೆಯರ ಕಾಳಜಿಯನ್ನು ಸಹ ಯೆಹೋವನು ವಹಿಸುತ್ತಾನೆಂದು ಬೈಬಲ್‌ ತಿಳಿಸುತ್ತದೆ. ಇದರ ಒಂದು ಉದಾಹರಣೆಯನ್ನು ನಾವು ಯಾಜಕಕಾಂಡ 22:13ರಲ್ಲಿ ನೋಡಬಹುದು.

^ ಪ್ಯಾರ. 11 ಹೆಸರು ಬದಲಾಯಿಸಲ್ಪಟ್ಟಿದೆ.

[ಪುಟ 6, 7ರಲ್ಲಿರುವ ಚೌಕ/ಚಿತ್ರಗಳು]

ಕ್ರಿಯೆಯ ಮೂಲಕ ತೋರಿಸಲ್ಪಡುವ ಪ್ರೀತಿ

ಯೆಹೋವನ ಸಾಕ್ಷಿಗಳಲ್ಲಿ ಸಭಾ ಹಿರಿಯರು ವೃದ್ಧರನ್ನು ಪರಾಮರಿಸುವುದರಲ್ಲಿ ಮುಂದಾಳುತ್ವವನ್ನು ವಹಿಸುತ್ತಾರೆ. “ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ” ಎಂದು ಅಪೊಸ್ತಲ ಪೇತ್ರನು ಕೊಟ್ಟ ಸಲಹೆಯನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (1 ಪೇತ್ರ 5:⁠2) ಪ್ರಾಯೋಗಿಕ ವಿಧಗಳಲ್ಲಿ ವೃದ್ಧರ ಪರಾಮರಿಕೆ ಮಾಡುವುದು ದೇವರ ಮಂದೆಯನ್ನು ಕಾಯುವುದರ ಭಾಗವಾಗಿದೆ. ಇದರಲ್ಲಿ ಏನು ಒಳಗೂಡಿರಸಾಧ್ಯವಿದೆ?

ಒಬ್ಬ ವೃದ್ಧ ವ್ಯಕ್ತಿಯ ಅಗತ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ತಾಳ್ಮೆಯ ಆವಶ್ಯಕತೆಯಿದೆ ಮತ್ತು ಅವರನ್ನು ಆಗಾಗ ಭೇಟಿಮಾಡಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವಂಥ ಸ್ನೇಹಪರ ಸಂಭಾಷಣೆಯನ್ನು ಮಾಡುವುದೂ ಅಗತ್ಯವಾಗಿದೆ. ಒಂದುವೇಳೆ ಅಂಗಡಿಗೆ ಹೋಗಿಬರಲು, ಮನೆಯನ್ನು ಶುಚಿಗೊಳಿಸಲು, ಕ್ರೈಸ್ತ ಕೂಟಗಳಿಗೆ ಅವರನ್ನು ಕರೆದೊಯ್ಯಲು, ಬೈಬಲ್‌ ಹಾಗೂ ಕ್ರೈಸ್ತ ಸಾಹಿತ್ಯವನ್ನು ಓದಲು ಮತ್ತು ಇತರ ಅನೇಕ ವಿಷಯಗಳಲ್ಲಿ ಅವರಿಗೆ ಸಹಾಯದ ಅಗತ್ಯವಿರಬಹುದು. ಎಲ್ಲಿ ಸಾಧ್ಯವೊ ಅಲ್ಲಿ, ಪ್ರಾಯೋಗಿಕ ಹಾಗೂ ಭರವಸಾರ್ಹ ಏರ್ಪಾಡುಗಳನ್ನು ಮಾಡಿ ಅವನ್ನು ಕಾರ್ಯರೂಪಕ್ಕೆ ಹಾಕಬೇಕಾಗಿದೆ. *

ಸಭೆಯಲ್ಲಿರುವ ಒಬ್ಬ ವೃದ್ಧ ಸಹೋದರ ಇಲ್ಲವೆ ಸಹೋದರಿಯು ಹಣಕಾಸಿನ ಅಥವಾ ಯಾವುದಾದರೊಂದು ತುರ್ತಿನ ಅಗತ್ಯದಲ್ಲಿದ್ದರೆ ಆಗೇನು? ಮೊದಲಾಗಿ, ಅವರಿಗೆ ಸಹಾಯಮಾಡಬಲ್ಲ ಮಕ್ಕಳು ಇಲ್ಲವೆ ಇತರ ಸಂಬಂಧಿಕರು ಇದ್ದಾರೊ ಎಂಬುದನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಇದು 1 ತಿಮೊಥೆಯ 5:3ಕ್ಕೆ ಹೊಂದಿಕೆಯಲ್ಲಿದೆ. ಅಲ್ಲಿ ಹೀಗೆ ತಿಳಿಸಲಾಗಿದೆ: “ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.”

ಸರಕಾರವು ಒದಗಿಸುವಂಥ ಯಾವುದೇ ಸಹಕಾರದಿಂದ ತಾನು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆಯೋ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಒಬ್ಬ ವೃದ್ಧ ವ್ಯಕ್ತಿಗೆ ಸಹಾಯದ ಅಗತ್ಯವಿರಬಹುದು. ಪ್ರಾಯಶಃ ಸಭೆಯಲ್ಲಿರುವ ಕೆಲವರು ಈ ಸಹಾಯವನ್ನು ನೀಡಲು ಶಕ್ತರಾಗಿರಬಹುದು. ಇಂಥ ಯಾವುದೇ ಸಹಕಾರವು ಲಭ್ಯವಿಲ್ಲದಿರುವಲ್ಲಿ, ಒಬ್ಬ ವೃದ್ಧ ವ್ಯಕ್ತಿಯು ಸಭೆಯಿಂದ ಸಹಾಯವನ್ನು ಪಡೆದುಕೊಳ್ಳಲು ಅರ್ಹನಾಗಿದ್ದಾನೊ ಎಂಬುದನ್ನು ಹಿರಿಯರು ನಿರ್ಧರಿಸಸಾಧ್ಯವಿದೆ. ಕೆಲವು ವಿದ್ಯಮಾನಗಳಲ್ಲಿ, ಪ್ರಥಮ ಶತಮಾನದ ಸಭೆಯಲ್ಲಿಯೂ ಇದು ಅನುಮತಿಸಲ್ಪಟ್ಟಿತ್ತು. ಅಪೊಸ್ತಲ ಪೌಲನು ತನ್ನ ಜೊತೆಕೆಲಸಗಾರನಾದ ತಿಮೊಥೆಯನಿಗೆ ಬರೆದದ್ದು: “ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿಲ್ಲದ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು; ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿರಬೇಕು; ಅಂದರೆ ಮಕ್ಕಳನ್ನು ಸಾಕಿದವಳಾಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ದೇವಜನರಿಗೆ ಉಪಚಾರಮಾಡಿದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಲಿ ಆಗಿರಬೇಕು.”​—⁠1 ತಿಮೊಥೆಯ 5:9, 10.

[ಪಾದಟಿಪ್ಪಣಿ]

^ ಪ್ಯಾರ. 25 ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು, 1994, ಆಗಸ್ಟ್‌ 1ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ವೃದ್ಧರಿಗೆ ಕ್ರಿಸ್ತೀಯ ಪ್ರೀತಿಯನ್ನು ತೋರಿಸುವುದು” ಎಂಬ ಲೇಖನವನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರ]

ಅಗತ್ಯದಲ್ಲಿದ್ದ ವಿಧವೆಯರಿಗೆ ದೊರ್ಕಳು ಸಹಾಯಮಾಡುತ್ತಿದ್ದಳು.​—⁠ಅ. ಕೃತ್ಯಗಳು 9:​36-39