ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಣವನ್ನು ಬುದ್ಧಿವಂತಿಕೆಯಿಂದ ಹೇಗೆ ಖರ್ಚುಮಾಡಲಿ?

ಹಣವನ್ನು ಬುದ್ಧಿವಂತಿಕೆಯಿಂದ ಹೇಗೆ ಖರ್ಚುಮಾಡಲಿ?

ಬೈಬಲಿನ ದೃಷ್ಟಿಕೋನ

ಹಣವನ್ನು ಬುದ್ಧಿವಂತಿಕೆಯಿಂದ ಹೇಗೆ ಖರ್ಚುಮಾಡಲಿ?

“ದಿನ ಹೋದ ಹಾಗೆ ಖರ್ಚು ಹೆಚ್ಚಾಗುತ್ತಿದೆ. ಆದರೆ ನನ್ನ ಸಂಬಳ ಮಾತ್ರ ಹೆಚ್ಚಾಗುತ್ತಿಲ್ಲ. ಸಂಸಾರದ ಬಂಡಿ ಎಳೆಯುವುದು ಹೇಗೆಂಬ ಚಿಂತೆಯಲ್ಲಿ ರಾತ್ರಿಯೆಲ್ಲಾ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ.”—ಜೇಮ್ಸ್‌.

“ನನ್ನ ಮುಂದೆ ಉಪಾಯಗಳೇ ಇಲ್ಲ. ಹಣದ ಸಮಸ್ಯೆಯಿಂದ ಹೊರ ಬರಲು ದಾರಿಯೇ ಇಲ್ಲವೆಂಬಂತಿದೆ.”—ಶೆರೀ.

ಆರ್ಥಿಕ ಹಿಂಜರಿತದ ಸಮಯದಲ್ಲಿ ಈ ರೀತಿಯ ಮಾತುಗಳು ಕೇಳಿಬರುವುದು ಸಾಮಾನ್ಯ. ‘ಅಂತಾರಾಷ್ಟ್ರೀಯ ಕಾರ್ಮಿಕ ಕಾರ್ಯಾಲಯ’ದ ಪ್ರಧಾನ ನಿರ್ದೇಶಕರಾದ ಹ್ವಾನ್‌ ಸೊಮಾವ್ಯಾರವರು ಇತ್ತೀಚಿನ ವಿಶ್ವ ಆರ್ಥಿಕ ಬಿಕ್ಕಟ್ಟಿನ ಕುರಿತು ಹೀಗಂದರು: “ಇದು ಕೇವಲ ವಾಲ್‌ ಸ್ಟ್ರೀಟ್‌ಗೆ [ಅಮೆರಿಕದ ಆರ್ಥಿಕ ವ್ಯವಸ್ಥೆಗೆ] ಸಂಬಂಧಿಸಿದ ಬಿಕ್ಕಟ್ಟಲ್ಲ, ಇಡೀ ಜಗತ್ತಿಗೆ ಸಂಬಂಧಿಸಿದೆ.”

ಇದ್ದಕ್ಕಿದ್ದಂತೆ ಕೆಲಸ ಕಳಕೊಂಡಾಗ ಅಥವಾ ಕುಟುಂಬದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಿಕ್ಕೂ ಹಣ ಸಾಲದಿದ್ದಾಗ ಒಬ್ಬ ವ್ಯಕ್ತಿ ಚಿಂತೆಯಲ್ಲಿ ಮುಳುಗಿ ಕಂಗಾಲಾಗಬಹುದು. ಬೈಬಲಿನ ಒಬ್ಬ ಬರಹಗಾರನಾದ ದಾವೀದನಿಗೂ ಒಮ್ಮೆ ಹಾಗೆಯೇ ಅನಿಸಿತು. ಆಗ ಅವನು “ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ಸಂಕಟಗಳಿಂದ ನನ್ನನ್ನು ಬಿಡಿಸು” ಎಂದು ಪ್ರಾರ್ಥಿಸಿದನು. (ಕೀರ್ತನೆ 25:17, NW) ನಾವು ಜೀವಿಸುತ್ತಿರುವ ಈ ಸಮಯದ ಕುರಿತು ಬೈಬಲ್‌ ಏನನ್ನುತ್ತದೆ? ಅದರಲ್ಲಿರುವ ದೇವಪ್ರೇರಿತ ವಿವೇಕ ನಮ್ಮ ನೆಮ್ಮದಿಯನ್ನೂ ಭದ್ರತೆಯನ್ನೂ ಹೆಚ್ಚಿಸಬಲ್ಲದೋ?

ಕಠಿನ ಕಾಲಕ್ಕಾಗಿ ಬೇಕಾದ ವಿವೇಕ

ಈ ಲೋಕದ “ಕಡೇ ದಿವಸ”ಗಳಲ್ಲಿ “ಸಂಕಟದ ಶೂಲೆ” ಇರುವುದೆಂದೂ “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” ಇರುವವೆಂದೂ ಬೈಬಲ್‌ ಮುಂತಿಳಿಸಿತ್ತು. (2 ತಿಮೊಥೆಯ 3:1; ಮತ್ತಾಯ 24:8) ಈ ಮಾತುಗಳು ಇಂದು ನಿಜವಾಗುತ್ತಿವೆ. ಆದರೂ ನಮಗಿಂದು ನಿರೀಕ್ಷೆಯೇ ಇಲ್ಲವೆಂದೇನಿಲ್ಲ. ಏಕೆಂದರೆ ಆರ್ಥಿಕ ಅಸ್ಥಿರತೆಯನ್ನು ನಿಭಾಯಿಸಲಿಕ್ಕೂ ಬೇಕಾದ ವಿವೇಕವನ್ನು ದೇವರು ಪವಿತ್ರ ಬೈಬಲಿನ ಮೂಲಕ ನಮಗೆ ಕೊಟ್ಟಿದ್ದಾನೆ.

ಹಣದ ಬಗ್ಗೆ ನಮಗಿರಬೇಕಾದ ಸಮತೂಕದ ನೋಟವನ್ನು ಬೈಬಲ್‌ನಲ್ಲಿ ತಿಳಿಸಲಾಗಿದೆ. “ಧನವು ಹೇಗೋ ಹಾಗೆ ಜ್ಞಾನವೂ [“ವಿವೇಕ,” NW] ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ” ಎನ್ನುತ್ತದೆ ಪ್ರಸಂಗಿ 7:12. ಹಣ ನಮಗೆ ಸ್ವಲ್ಪಮಟ್ಟಿಗೆ ಆಶ್ರಯ ಕೊಡುವುದಾದರೂ ಬೈಬಲಿನಲ್ಲಿನ ದೈವಿಕ ವಿವೇಕ ಮಾತ್ರ ಎಲ್ಲಾ ಸಮಯದಲ್ಲೂ ನಿಜ ಭದ್ರತೆ ನೀಡಬಲ್ಲದು. ಇದಕ್ಕೆ ಕೆಲವು ಉದಾಹರಣೆಗಳನ್ನು ಪರಿಗಣಿಸಿ.

ಆರ್ಥಿಕ ಕಷ್ಟದ ಸಮಯದಲ್ಲಿ ನಿಭಾಯಿಸುವುದು ಹೇಗೆ?

ಶ್ರಮಶೀಲರಾಗಿರಿ. “ಸೋಮಾರಿಯ ಆಶೆಯು ವ್ಯರ್ಥ; ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.” (ಜ್ಞಾನೋಕ್ತಿ 13:4) ಇದರಿಂದ ನಾವೇನು ಕಲಿಯಬಲ್ಲೆವು? ನೀವು ಪ್ರಾಮಾಣಿಕ, ಶ್ರಮಶೀಲ ಕೆಲಸಗಾರರೆಂಬ ಹೆಸರು ಮಾಡಿಕೊಳ್ಳಿ. ಏಕೆಂದರೆ ಧಣಿಗಳು ಉತ್ತಮ ಕೆಲಸಗಾರರಿಗೆ ಪ್ರಾಶಸ್ತ್ಯ ಕೊಡುತ್ತಾರೆ. ಇಂಥವರನ್ನೇ ಹೆಚ್ಚಾಗಿ ಕೆಲಸಕ್ಕಿಡಲಾಗುತ್ತದೆ ಮತ್ತು ಅಷ್ಟು ಬೇಗ ಕೆಲಸದಿಂದ ತೆಗೆದು ಹಾಕಲಾಗುವುದಿಲ್ಲ.—ಎಫೆಸ 4:28.

ಖರೀದಿಸುವ ಮೊದಲು ಯೋಚಿಸಿ. “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” ಅಂದನು ಯೇಸು. (ಲೂಕ 14:28) ಇಲ್ಲಿ ಯೇಸು ಒಬ್ಬ ವ್ಯಕ್ತಿ ತನ್ನ ಹಿಂಬಾಲಕನಾಗುವ ಮುಂಚೆ ಏನು ಮಾಡಬೇಕೆಂದು ದೃಷ್ಟಾಂತಿಸುತ್ತಿದ್ದನು. ಈ ಮಾತನ್ನೇ ಹಣಕಾಸಿನ ವಿಷಯಕ್ಕೂ ಅನ್ವಯಿಸಬಹುದು. ಇದರರ್ಥ ಒಂದು ಬಜೆಟನ್ನು ತಯಾರಿಸಿ ಅದರಲ್ಲಿ ನಿಮ್ಮ ಅಗತ್ಯಗಳನ್ನೂ ಅವುಗಳ ಬೆಲೆಯನ್ನೂ ಪಟ್ಟಿಮಾಡಿ.

ದುಶ್ಚಟಗಳಿಗಾಗಿ ಹಣ ಸುರಿಯಬೇಡಿ. ಜೂಜಾಟ, ಧೂಮಪಾನ, ಮಾದಕವಸ್ತುಗಳ ಬಳಕೆ, ಮದ್ಯದ ದುರ್ಬಳಕೆ ಮುಂತಾದವೆಲ್ಲಾ ದೇವರ ದೃಷ್ಟಿಯಲ್ಲಿ ಕೆಟ್ಟದ್ದಾಗಿವೆ.—ಜ್ಞಾನೋಕ್ತಿ 23:20, 21; ಯೆಶಾಯ 65:11; 2 ಕೊರಿಂಥ 7:1.

“ಹಣದ ಪ್ರೇಮ”ದಿಂದ ದೂರವಿರಿ. (ಇಬ್ರಿಯ 13:5) ಹಣದ ಪ್ರೇಮವಿರುವವರಿಗೆ ಕೊನೆಗೆ ಸಿಗುವುದು ದುಃಖ ಹಾಗೂ ನಿರಾಶೆಯೇ. ಹೀಗೆ ಅವರು ‘ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲಾ ಕಡೆಗಳಲ್ಲಿ ತಿವಿಸಿಕೊಳ್ಳುತ್ತಾರೆ.’ (1 ತಿಮೊಥೆಯ 6:9, 10) ಅಲ್ಲದೆ ಎಷ್ಟೇ ಇದ್ದರೂ ತೃಪ್ತಿ ಇಲ್ಲದ್ದರಿಂದ ಅವರು ತಮ್ಮ ತಣಿಸಲಾಗದ ಆಸೆಯ ಅಡಿಯಾಳಾಗುತ್ತಾರೆ.—ಪ್ರಸಂಗಿ 5:10.

ಇದ್ದದ್ದರಲ್ಲಿ ತೃಪ್ತರಾಗಿರಲು ಕಲಿಯಿರಿ. “ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು. ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.” (1 ತಿಮೊಥೆಯ 6:7, 8) ತಮಗಿರುವ ಸ್ವಲ್ಪದ್ದರಲ್ಲೇ ತೃಪ್ತರಾಗಿರುವವರು ಆರ್ಥಿಕ ವ್ಯವಸ್ಥೆಯಲ್ಲಿ ಹಿಂಜರಿತವಾದಾಗ ಅತಿಯಾದ ಚಿಂತೆಯಲ್ಲಿ ಮುಳುಗುವುದಿಲ್ಲ. ಆದುದರಿಂದ ಇರುವುದರಲ್ಲೇ ತೃಪ್ತರಾಗಿರಲು ಕಲಿಯಿರಿ.—ಬಲಗಡೆಯ ಚೌಕ ನೋಡಿ.

ನಾಳೆ ಏನಾಗುವುದೋ ಯಾರಿಗೂ ತಿಳಿದಿಲ್ಲ. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎನ್ನುತ್ತದೆ ಪ್ರಸಂಗಿ 9:11. ಆದ್ದರಿಂದ ವಿವೇಕಿಗಳು “ತಮ್ಮ ನಿರೀಕ್ಷೆಯನ್ನು ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, . . . ದೇವರ ಮೇಲೆ” ಇಡುತ್ತಾರೆ. ಆತನು ತನ್ನ ನಿಷ್ಠಾವಂತ ಜನರಿಗೆ “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ಮಾತು ಕೊಟ್ಟಿದ್ದಾನೆ.—1 ತಿಮೊಥೆಯ 6:17; ಇಬ್ರಿಯ 13:5. (g10-E 05)

ನೀವೇನು ಹೇಳುತ್ತೀರಿ?

● ಬೈಬಲ್‌ ನಮ್ಮ ದಿನಗಳನ್ನು ಹೇಗೆ ವರ್ಣಿಸುತ್ತದೆ?—2 ತಿಮೊಥೆಯ 3:1-5.

● ಭರವಸಾರ್ಹ ಮಾರ್ಗದರ್ಶನ ಇಂದು ಎಲ್ಲಿ ಸಿಗುತ್ತದೆ?—ಕೀರ್ತನೆ 19:7.

● ನನ್ನ ಕುಟುಂಬದ ಭವಿಷ್ಯವನ್ನು ಹೇಗೆ ಭದ್ರಗೊಳಿಸಬಲ್ಲೆ?—ಪ್ರಸಂಗಿ 7:12.

[ಪುಟ 21ರಲ್ಲಿರುವ ಚೌಕ/ಚಿತ್ರ]

ಉಳಿತಾಯಕ್ಕೆ ಉಪಾಯಗಳು

ಶಾಪಿಂಗ್‌: ಮನೆಯಲ್ಲೇ ಒಂದು ಪಟ್ಟಿ ತಯಾರಿಸಿ. ಅವನ್ನು ಬಿಟ್ಟು ಬೇರೇನೂ ಖರೀದಿಸಬೇಡಿ. ಕಡಿಮೆ ಬೆಲೆಗೆ ವಸ್ತುಗಳು ಎಲ್ಲಿ ದೊರೆಯುತ್ತವೆಂದು ನೋಡಿ. ಕೂಪನ್‌ ಹಾಗೂ ರಿಯಾಯಿತಿ ಆಫರ್‌ಗಳನ್ನು ಬಳಸಿಕೊಳ್ಳಿ. ಅವಶ್ಯಕ ವಸ್ತುಗಳನ್ನು ಸೇಲ್‌ಗಳಲ್ಲಿ ಅಥವಾ ಅದರ ಬೇಡಿಕೆ ಕಡಿಮೆ ಇರುವಂಥ ಸಮಯಗಳಲ್ಲಿ ಖರೀದಿಸಿ. ಸಾಧ್ಯವಿರುವಾಗಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಖರೀದಿಸಿ.

ಮನೆ ಖರ್ಚು: ದಂಡ ತೆರುವುದನ್ನು ತಪ್ಪಿಸಲು ಎಲ್ಲಾ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ಊಟ, ಪಾನೀಯಗಳನ್ನು ಮನೆಯಲ್ಲೇ ತಯಾರಿಸಿ. ಆಹಾರ, ಮದ್ಯ ಸೇವನೆ ಮಿತವಾಗಿರಲಿ. ಲೈಟ್‌ ಹಾಗೂ ಇತರ ವಿದ್ಯುತ್‌ ಉಪಕರಣಗಳನ್ನು ಅನಾವಶ್ಯಕವಾಗಿ ‘ಆನ್‌’ ಇಡಬೇಡಿ. ಸಾಧ್ಯವಿರುವಲ್ಲಿ ವಿದ್ಯುತ್‌ ಉಳಿಸುವ ಉಪಕರಣಗಳನ್ನೇ ಬಳಸಿ. ಚಿಕ್ಕ ಮನೆಯಲ್ಲಿ ವಾಸಿಸಿ.

ಪ್ರಯಾಣ: ನಿಮಗೆ ಸ್ವಂತ ವಾಹನ ಅಗತ್ಯವಿರುವಲ್ಲಿ ಉತ್ತಮ ಸ್ಥಿತಿಯಲ್ಲಿರುವ, ಕಡಿಮೆ ಇಂಧನ ಬಳಸುವ ವಾಹನವನ್ನು ಖರೀದಿಸಿ. ಅದು ಹೊಚ್ಚ ಹೊಸತೇ ಆಗಿರಬೇಕೆಂದೇನಿಲ್ಲ. ವಾಹನ ತಕ್ಕೊಂಡು ಹೋದಾಗ ಒಂದೇ ಸಾರಿ ಆದಷ್ಟು ಕೆಲಸ ಮುಗಿಸಿ ಬನ್ನಿ. ಸಾಧ್ಯವಿರುವಾಗೆಲ್ಲಾ ಇತರರೊಂದಿಗೆ ಅವರ ವಾಹನದಲ್ಲಿ ಹೋಗಿ ಖರ್ಚನ್ನು ಹಂಚಿಕೊಳ್ಳಿ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿ, ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹೋಗಿ. ರಜೆ ತಕ್ಕೊಂಡು ಎಲ್ಲಿಯಾದರೂ ಹೋಗಬೇಕೆಂದಿರುವಲ್ಲಿ ಬೆಲೆ ಕಡಿಮೆ ಇರುವ ಸಮಯದಲ್ಲಿ ಬಹುಶಃ ಹತ್ತಿರದ ಊರುಗಳಿಗೇ ಹೋಗಿ.

ಫೋನ್‌, ಮನೋರಂಜನೆ: ನಿಮಗೆ ಲ್ಯಾಂಡ್‌ಲೈನ್‌ ಮತ್ತು ಮೊಬೈಲ್‌ ಫೋನ್‌ ಎರಡೂ ಬೇಕಾ? ಮಕ್ಕಳ ಹತ್ತಿರವೂ ಮೊಬೈಲ್‌ಗಳಿರುವಲ್ಲಿ ಅದನ್ನವರು ಮಿತವಾಗಿ ಬಳಸಬಹುದಾ? ಅಥವಾ ಅದಿಲ್ಲದೆ ಇರಬಹುದಾ? ಟಿ.ವಿ. ಇದ್ದರೆ ಕೆಲವೇ ಚಾನೆಲ್‌ಗಳನ್ನಿಟ್ಟು ಖರ್ಚು ಕಡಿಮೆ ಮಾಡಬಹುದೋ? * ಹೊಸ ಪುಸ್ತಕಗಳನ್ನು ಅಥವಾ ಸಿನಿಮಾ ಸಿ.ಡಿ.ಗಳನ್ನು ಖರೀದಿಸುವ ಬದಲು ಅವುಗಳನ್ನು ಬಾಡಿಗೆಗೆ ತನ್ನಿ.

[ಪಾದಟಿಪ್ಪಣಿ]

^ ಇನ್ನೂ ಹೆಚ್ಚಿನ ಮಾಹಿತಿಗಾಗಿ 2009 ಏಪ್ರಿಲ್‌-ಜೂನ್‌ ತಿಂಗಳ ಎಚ್ಚರ! ಪತ್ರಿಕೆಯಲ್ಲಿ “ವಿವೇಚನೆಯಿಂದ ಹಣ ಬಳಸಿ” ಎಂಬ ಲೇಖನ ನೋಡಿ.