ಮೂಢನಂಬಿಕೆ ಬೈಬಲ್ ಬೋಧನೆಯೊಂದಿಗೆ ಸಮರಸದಲ್ಲಿದೆಯೋ?
ಬೈಬಲಿನ ದೃಷ್ಟಿಕೋನ
ಮೂಢನಂಬಿಕೆ ಬೈಬಲ್ ಬೋಧನೆಯೊಂದಿಗೆ ಸಮರಸದಲ್ಲಿದೆಯೋ?
ಪತ್ರಿಕೋದ್ಯಮಿಯೊಬ್ಬನು ಒಂದು ವರ್ಷದವರೆಗೆ ವಿಮಾನಯಾನವನ್ನು ಮಾಡಲೇಯಿಲ್ಲ. ಅವನು ವಿಮಾನ ಅಪಘಾತದಲ್ಲಿ ಸಾಯುವನೆಂದು ಜ್ಯೋತಿಷಿಯೊಬ್ಬನು ತಿಳಿಸಿದ್ದೆ ಇದಕ್ಕೆ ಕಾರಣವಾಗಿತ್ತು. ಎಲ್ಲ ರೀತಿಯ ಜನರು ಬೇರೆ ಬೇರೆ ರೀತಿಯ ಮೂಢನಂಬಿಕೆಯ ಆಚರಣೆಗಳನ್ನು ಮಾಡುತ್ತಾರೆ. ಇವರಲ್ಲಿ ರಾಜಕಾರಿಣಿಗಳು, ವ್ಯಾಪಾರಿಗಳು, ಚಿತ್ರನಟರು, ಕ್ರೀಡಾಪಟುಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದ್ದಾರೆ. ಅನಿಶ್ಚಿತತೆ, ಒತ್ತಡ ಅಥವಾ ಚಿಂತೆಗಳು ಕಾಡುತ್ತಿರುವಾಗ ಮೂಢನಂಬಿಕೆಗಳ ಆಚರಣೆಗಳು ತಮ್ಮನ್ನು ಅಪಾಯಗಳಿಂದ ಕಾಪಾಡಿ ಸಂರಕ್ಷಿಸುತ್ತವೆ ಎಂಬುದು ಅವರ ನಂಬಿಕೆ. ಅಥವಾ ಅದರಿಂದ ತಮ್ಮ ಕಾರ್ಯಸಿದ್ಧಿಯಾಗುತ್ತದೆಂದು ಅವರು ನಂಬುತ್ತಾರೆ.
ಅನೇಕ ಮೂಢನಂಬಿಕೆಗಳನ್ನು ಜನರು ವಿಲಕ್ಷಣವಾದ ಸ್ವಾರಸ್ಯಕರ ವಿಷಯವೆಂದು ಕಾಣುತ್ತಾರೆ. ಮಾತ್ರವಲ್ಲ, ಅವು ತಮಗೆ ಯಾವ ಹಾನಿಯನ್ನುಂಟುಮಾಡದೆ ಮಾನಸಿಕ ಸ್ಥೈರ್ಯ ತುಂಬುತ್ತವೆಂದು ನೆನಸುತ್ತಾರೆ. ಮಾನವಶಾಸ್ತ್ರಜ್ಞಳಾಗಿದ್ದ ಮಾರ್ಗರೇಟ್ ಹೇಳಿದ್ದು: “ನಾವು ಇಚ್ಛಿಸಿದ್ದು ಕೈಗೂಡಲು ಅಥವಾ ಅವಗಢವಾಗದಂತೆ ತಡೆಯಲು ಎಷ್ಟು ಹಾತೊರೆಯುತ್ತೇವೆ ಎಂಬುದನ್ನು ಮೂಢನಂಬಿಕೆಗಳು ತೋರಿಸುತ್ತವೆ. ಅವನ್ನು ನಾವು ಸಂಪೂರ್ಣವಾಗಿ ನಂಬದಿದ್ದರೂ ನಮ್ಮಲ್ಲಿ ಅವು ನಿರೀಕ್ಷೆಯನ್ನು ಉಂಟುಮಾಡುತ್ತವೆ.” ಆದರೂ ದೇವರನ್ನು ಮೆಚ್ಚಿಸಬಯಸುವವರು ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ‘ಮೂಢನಂಬಿಕೆ ನಿಜ ಕ್ರೈಸ್ತತ್ವದೊಂದಿಗೆ ಸಮರಸದಲ್ಲಿದೆಯೋ?’
ಮೂಢನಂಬಿಕೆಯ ಉಗಮ
ಮಾನವರೆಲ್ಲರ ಮೇಲೆ ಭಯದ ಕರಿನೆರಳು ಕವಿದಿದೆ. ಸಾವಿನ ಭಯ, ಮರಣದ ನಂತರ ಏನಾಗುತ್ತದೆ ಎಂಬ ಭೀತಿ ಇದಕ್ಕಿರುವ ಕೆಲವು ಉದಾಹರಣೆಗಳಷ್ಟೇ. ದೇವರ ವಿರೋಧಿಯಾಗಿರುವ ದಂಗೆಕೋರ ಸೈತಾನನು ಮಾನವರನ್ನು ತನ್ನ ಹದ್ದುಬಸ್ತಿನಲ್ಲಿಡಲು ದೃಢತೀರ್ಮಾನವುಳ್ಳವನಾಗಿದ್ದಾನೆ. ಅದಕ್ಕಾಗಿ ಇಂಥ ಭಯವನ್ನು ಹೆಚ್ಚಿಸಲು ವಂಚಿಸುವ ಸುಳ್ಳುಗಳನ್ನು ಕೂಡಿಸುತ್ತಿದ್ದಾನೆ. (ಯೋಹಾನ 8:44; ಪ್ರಕಟನೆ 12:9) ಜನರಿಗೆ ಆಮಿಷವೊಡ್ಡಿ ಅವರನ್ನು ದೇವರಿಂದ ದೂರಸೆಳೆಯಲು ಪ್ರಯತ್ನಿಸುವವನು ಕೇವಲ ಸೈತಾನನೊಬ್ಬನೆ ಅಲ್ಲ. ಬೈಬಲಿನಲ್ಲಿ ಅವನನ್ನು “ದೆವ್ವಗಳ ಒಡೆಯ” ನೆಂದು ಕರೆಯಲಾಗಿದೆ. (ಮತ್ತಾಯ 12:24-27) ಈ ದೆವ್ವಗಳು ಯಾರಾಗಿದ್ದಾರೆ? ನೋಹನು ಜೀವಿಸುತ್ತಿದ್ದ ಸಮಯದಲ್ಲಿ ಅನೇಕ ದೇವದೂತರು ಸೈತಾನನೊಡಗೂಡಿ ದೇವರ ವಿರುದ್ಧ ದಂಗೆಯೆದ್ದರು ಮತ್ತು ಹೀಗೆ ದೆವ್ವಗಳಾದರು. ಅಂದಿನಿಂದ ಅವರು ಮಾನವರ ಮನಸ್ಸುಗಳನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಉಪಯೋಗಿಸುತ್ತಿರುವ ಒಂದು ವಿಧಾನವೇ ಮೂಢನಂಬಿಕೆ.—ಆದಿಕಾಂಡ 6:1, 2; ಲೂಕ 8:2, 30; ಯೂದ 6.
ಮೂಢನಂಬಿಕೆ ಹುಟ್ಟಲು ಸೈತಾನನ ಒಂದು ಸುಳ್ಳು ಕಾರಣವಾಯಿತು. ಅದೇನೆಂದರೆ, ಮನುಷ್ಯನು ಸತ್ತಾಗ ಅವನ ಶರೀರದಿಂದ ಬೇರ್ಪಟ್ಟ ಅಗೋಚರ ಭಾಗವೊಂದು ಬದುಕುಳಿಯುತ್ತದೆ ಮತ್ತು ಅದು ಜೀವದಿಂದಿರುವವರನ್ನು ಏನು ಬೇಕಾದರೂ ಮಾಡಬಹುದು ಎಂಬ ನಂಬಿಕೆಯಾಗಿದೆ. ಆದರೆ ಬೈಬಲ್ ಹೇಳುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” ಅಷ್ಟೇ ಅಲ್ಲ, ಸತ್ತ ಮೇಲೆ “ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ” ಎಂದು ಸಹ ಅದು ತಿಳಿಸುತ್ತದೆ.—ಪ್ರಸಂಗಿ 9:5, 10.
‘ಯೆಹೋವನಿಗೆ ಅಸಹ್ಯವಾದ’ ವಿಷಯ
ಅನೇಕ ಜನರು ಸೈತಾನನ ಸುಳ್ಳುಗಳನ್ನು ನಂಬಿದ್ದಾರೆ. ಆದರೆ, ಈ ಕುರಿತು ದೇವರು ಎಷ್ಟೋ ವರ್ಷಗಳ ಹಿಂದೆಯೇ ತನ್ನ ಜನರಾದ ಇಸ್ರಾಯೇಲ್ಯರಿಗೆ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡಿದ್ದನು. ಆತನ ವಾಕ್ಯ ತಿಳಿಸಿದ್ದು: “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.”—ಧರ್ಮೋಪದೇಶಕಾಂಡ 18:10-12.
ವಿಷಾದಕರವಾಗಿ, ಇಸ್ರಾಯೇಲ್ಯರು ಎಲ್ಲ ಸಮಯಗಳಲ್ಲಿಯೂ ಈ ಎಚ್ಚರಿಕೆಗೆ ಕಿವಿಗೊಡಲಿಲ್ಲ. ಉದಾಹರಣೆಗೆ, ಪ್ರವಾದಿ ಯೆಶಾಯನ ಕಾಲದಲ್ಲಿದ್ದ ಕೆಲವರು “ಶುಭದಾಯಕದೇವತೆ” ಯನ್ನು ಮೆಚ್ಚಿಸಿದರೆ ತಮ್ಮ ಬೆಳೆಯ ಫಸಲು ಯೇಥೇಷ್ಟವಾಗುವುದೆಂದು ನಂಬಿದರು. ಈ ಯೆಶಾಯ 65:11, 12.
ಮೂಢನಂಬಿಕೆಯ ಕಾರಣ ಅವರು ಘೋರ ಪರಿಣಾಮವನ್ನು ಎದುರಿಸಬೇಕಾಯಿತು. ಅವರು ಯೆಹೋವನ ಪ್ರಸನ್ನತೆಯನ್ನೂ ಆಶೀರ್ವಾದವನ್ನೂ ಕಳೆದುಕೊಂಡರು.—ಕ್ರೈಸ್ತತ್ವವು ಸ್ಥಾಪನೆಯಾದ ಮೇಲೆ ಸಹ ಮೂಢನಂಬಿಕೆಯ ಕುರಿತಾದ ಯೆಹೋವನ ಮನೋಭಾವವೇನೂ ಬದಲಾಗಲಿಲ್ಲ. ಅಪೊಸ್ತಲ ಪೌಲನು ಲುಸ್ತ್ರದಲ್ಲಿದ್ದ ಮೂಢನಂಬಿಕೆಯ ಜನರಿಗೆ, “ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು” ಹುರಿದುಂಬಿಸಿದನು.—ಅ. ಕೃತ್ಯಗಳು. 14:15.
ಮೂಢನಂಬಿಕೆಯ ಬಲೆಯಿಂದ ಬಿಡಿಸಿಕೊಳ್ಳುವುದು
ಮೂಢನಂಬಿಕೆಯ ಆಚರಣೆಗಳು ಲೆಕ್ಕವಿಲ್ಲದಷ್ಟಿವೆ ಮತ್ತು ಅವೆಲ್ಲವುಗಳಲ್ಲಿ ಸಾಮಾನ್ಯವಾಗಿರುವ ಒಂದು ಸಂಗತಿಯನ್ನು ಕಾಣಬಹುದು. ಅದೇನೆಂದರೆ ಅವುಗಳಿಗೆ ಯಾವುದೇ ತರ್ಕಬದ್ಧ ಆಧಾರಗಳಿಲ್ಲ. ಮೂಢನಂಬಿಕೆಯ ಕೆಟ್ಟ ಪರಿಣಾಮಗಳಲ್ಲಿ ಒಂದು ಯಾವುದೆಂದರೆ, ಜನರು ತಮ್ಮ ಕೃತ್ಯಗಳ ಹೊಣೆಯನ್ನು ವಹಿಸಿಕೊಳ್ಳುವ ಬದಲು ತಮ್ಮ ದುರದೃಷ್ಟವನ್ನು ಹಳಿಯುವಂತೆ ಅದು ಮಾಡುತ್ತದೆ.
ಮೂಢನಂಬಿಕೆಯ ಬಲೆಯಿಂದ ಅನೇಕರು ತಮ್ಮನ್ನು ಬಿಡಿಸಿಕೊಂಡಿರುವುದು ಸಂತೋಷದ ವಿಷಯವಾಗಿದೆ. “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” ಎಂದು ಯೇಸು ಹೇಳಿದನು. (ಯೋಹಾನ 8:32) ಇಪ್ಪತೈದು ವರ್ಷಗಳಿಂದ ಭವಿಷ್ಯ ನುಡಿಯುತ್ತಿದ್ದ ಬ್ರಸಿಲ್ನ ಕ್ಲಮಂಟಿನಾ ಎಂಬವಳು ಹೇಳಿದ್ದು: “ಭವಿಷ್ಯ ನುಡಿಯುವುದೇ ನನ್ನ ಬದುಕಿಗೆ ಜೀವಾಳವಾಗಿತ್ತು. ಆದರೆ ಬೈಬಲ್ ಸತ್ಯವು ನನ್ನನ್ನು ಮೂಢನಂಬಿಕೆಯಿಂದ ಬಿಡುಗಡೆಗೊಳಿಸಿತು.” ಪ್ರತಿದಿನ ಬೈಬಲ್ ಅಧ್ಯಯನಮಾಡುವುದು ಮತ್ತು ಯೆಹೋವ ದೇವರಿಗೆ ಮನದಾಳದಿಂದ ಪ್ರಾರ್ಥಿಸುವುದು ನಮಗೆ ಆಂತರಿಕ ಬಲವನ್ನು ಕೊಡುತ್ತದೆ. ಯಾವುದು ಸರಿಯಾಗಿದೆ ಎಂಬುದನ್ನು ನಿಧಾನವಾಗಿ ಯೋಚಿಸಿ ತಿಳಿಯಲು ಇದು ನಮಗೆ ಸಹಾಯಮಾಡುತ್ತದೆ. ಹೀಗೆ ನಾವು ಸರಿಯಾದ ನಿರ್ಧಾರಗಳನ್ನು ಮಾಡಿ ಆಪತ್ತು ಮತ್ತು ಚಿಂತೆಗಳನ್ನು ತಪ್ಪಿಸಬಹುದು.—ಫಿಲಿಪ್ಪಿ 4:6, 7, 13.
“ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು?” ಎಂದು ಬೈಬಲ್ ಕೇಳುತ್ತದೆ. ಆದುದರಿಂದ ನಿಜ ಕ್ರೈಸ್ತರು ಮೂಢನಂಬಿಕೆಯಿಂದ ದೂರವಿರಬೇಕು.—2 ಕೊರಿಂಥ 6:14-16. (g 3/08)
ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?
◼ ಮೂಢನಂಬಿಕೆಗಳಲ್ಲಿ ಒಳಗೂಡಿದ್ದ ಯೆಶಾಯನ ದಿನದ ಇಸ್ರಾಯೇಲ್ಯರು ದೇವರನ್ನು ಬಿಟ್ಟು ಯಾರ ಮೇಲೆ ಭರವಸೆಯಿಟ್ಟರು?—ಯೆಶಾಯ 65:11, 12.
◼ ಲುಸ್ತ್ರದಲ್ಲಿದ್ದ ಮೂಢನಂಬಿಕೆಯ ಜನರಿಗೆ ಅಪೊಸ್ತಲ ಪೌಲನು ಏನೆಂದು ಹುರಿದುಂಬಿಸಿದನು?—ಅ. ಕೃತ್ಯಗಳು 14:15.
◼ ಮೂಢನಂಬಿಕೆ ನಿಜ ಕ್ರೈಸ್ತತ್ವದೊಂದಿಗೆ ಸಮರಸದಲ್ಲಿದೆಯೋ?—2 ಕೊರಿಂಥ 6:14-16.