ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಬಲ್ಲೆ?

ನನ್ನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು

ನನ್ನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಬಲ್ಲೆ?

“ಯುವಕರಿಗೆ ಬಲವು ಭೂಷಣ” ಎನ್ನುತ್ತದೆ ಜ್ಞಾನೋಕ್ತಿ 20:29. ನಿಮಗೆ ಅಸ್ವಸ್ಥತೆ ಅಥವಾ ಅಂಗವಿಕಲತೆ ಇರುವುದಾದರೆ ಈ ವಚನವೆಂದೂ ನಿಮಗೆ ಅನ್ವಯಿಸಲಾರದು ಎಂದೆನಿಸಬಹುದು. ಆದರೆ ಅದು ನಿಮಗೂ ಅನ್ವಯಿಸುತ್ತದೆ! ವಾಸ್ತವವೇನೆಂದರೆ ಅಂಗವಿಕಲತೆ ಮತ್ತು ದೀರ್ಘಕಾಲಿಕ ರೋಗಗಳಿರುವ ಅನೇಕರು ತಮ್ಮ ತೊಂದರೆ-ತೊಡಕುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಎಚ್ಚರ! ಪತ್ರಿಕೆಯು ಅಂಥ ನಾಲ್ಕು ಯುವಜನರನ್ನು ಸಂದರ್ಶಿಸಿದೆ.

ಜಪಾನಿನ ಹಿರೋಕಿ ಎಂಬವನಿಗೆ ಹುಟ್ಟಿದಾಗಲೇ ಮಿದುಳಿಗೆ ಲಕ್ವ ಹೊಡೆದಿತ್ತು. ಅವನು ಹೇಳುವುದು: “ತಲೆಯನ್ನು ನೆಟ್ಟಗಿಡಲು ನನ್ನ ಕತ್ತಿನ ಸಾಯ್ನುಗಳಲ್ಲಿ ಶಕ್ತಿಯಿಲ್ಲ. ನನ್ನ ಕೈಯನ್ನು ಸಹ ನಿಯಂತ್ರಿಸಲು ನನಗೆ ಕಷ್ಟವಾಗುತ್ತದೆ. ನಾನು ಮಾಡಬಯಸುವುದಕ್ಕೆ ವಿರುದ್ಧವಾದದ್ದೇ ಆಗಿಬಿಡುತ್ತದೆ. ಬೇರೆಯವರ ಸಹಾಯವಿಲ್ಲದೆ ಏನನ್ನೂ ಮಾಡಲಾರೆ.”

ದಕ್ಷಿಣ ಆಫ್ರಿಕದ ನ್ಯಾಟಲಿ ಮತ್ತು ಅವಳ ತಮ್ಮ ಜೇಮ್ಸ್‌ಗೆ ಹುಟ್ಟುವಾಗಲೇ, ತುಂಬ ಅಪರೂಪವಾಗಿರುವ ಒಂದು ಬಗೆಯ ಕುಬ್ಜತೆಯಿತ್ತು. ಅಲ್ಲದೆ ನ್ಯಾಟಲಿಯ ಬೆನ್ನುಹುರಿಯು ಅಸಾಮಾನ್ಯವಾಗಿ ಒಂದು ಪಕ್ಕಕ್ಕೆ ಬಾಗಿತ್ತು. ಅವಳು ಹೇಳುವುದು: “ಬೆನ್ನೆಲುಬಿಗೆ ಸಂಬಂಧಪಟ್ಟ ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ನಾನು ಮಾಡಿಸಿಕೊಳ್ಳಬೇಕಾಯಿತು ಮತ್ತು ಬೆನ್ನು ಬಾಗಿರುವುದರಿಂದ ನನ್ನ ಶ್ವಾಸಕೋಶವು ದುರ್ಬಲವಾಗಿದೆ.”

ಬ್ರಿಟನ್‌ನಲ್ಲಿರುವ ತಿಮೊಥಿಗೆ 17 ವರ್ಷವಾಗುವಾಗ ಕ್ರಾನಿಕ್‌ ಫಟೀಗ್‌ ಸಿಂಡ್ರೋಮ್‌ ಇದೆ ಎಂದು ತಿಳಿದುಬಂತು. ಅವನು ಹೇಳುವುದು: “ಆರೋಗ್ಯವಂತನಾಗಿ ಕ್ರಿಯಾಶೀಲನಾಗಿದ್ದ ನಾನು ಎರಡು ತಿಂಗಳೊಳಗೆ ಎಷ್ಟು ಅಶಕ್ತನಾದೆನೆಂದರೆ ನಿಂತುಕೊಳ್ಳಲು ಕಾಲಲ್ಲಿ ಶಕ್ತಿಯೇ ಇರಲಿಲ್ಲ.”

ಆಸ್ಟ್ರೇಲಿಯದ ಡೇನ್ಯೆಲ್‌ ಎಂಬವಳಿಗೆ 19 ರ ಹರೆಯದಲ್ಲಿ ಮಧುಮೇಹ ರೋಗವಿದೆಯೆಂದು ತಿಳಿದುಬಂತು. “ಮಧುಮೇಹದ ಲಕ್ಷಣಗಳು ಹೊರಗೆ ಗೋಚರವಾಗದ ಕಾರಣ ಅದೆಷ್ಟು ಗಂಭೀರ ಕಾಯಿಲೆ ಎಂದು ಕೆಲವರಿಗೆ ತಿಳಿದಿರುವುದಿಲ್ಲ. ಆದರೆ ಅದು ಜೀವವನ್ನೇ ಹಿಂಡುತ್ತದೆ.”

ನೀವು ಯಾವುದಾದರೂ ಒಂದು ರೀತಿಯ ಅಸ್ವಸ್ಥತೆ ಅಥವಾ ವಿಕಲಾಂಗತೆಯಿಂದ ಬಳಲುತ್ತಿದ್ದಲ್ಲಿ ಹಿರೋಕಿ, ನ್ಯಾಟಲಿ, ತಿಮೊಥಿ, ಮತ್ತು ಡೇನ್ಯೆಲ್‌ ಅವರ ಹೇಳಿಕೆಗಳನ್ನು ಓದುವಾಗ ನಿಶ್ಚಯವಾಗಿಯೂ ನಿಮಗೆ ಉತ್ತೇಜನವಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುವಲ್ಲಿ ಅವರ ಹೇಳಿಕೆಗಳು ಇಂಥ ಕಾಯಿಲೆಗಳಿಂದ ಬಳಲುತ್ತಿರುವವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಬಲ್ಲವು.

ಎಚ್ಚರ!: ನಿಮಗಿರುವ ಅತಿ ದೊಡ್ಡ ಸಮಸ್ಯೆ ಯಾವುದು?

ನ್ಯಾಟಲಿ: ಜನರು ನನ್ನನ್ನು ನೋಡಿ ಏನು ಅಂದುಕೊಳ್ಳುತ್ತಾರೆ ಎಂಬದೇ ದೊಡ್ಡ ಸಮಸ್ಯೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆಂದು ಅನಿಸುವುದರಿಂದ ನನಗೆ ಮುಜುಗರವಾಗುತ್ತದೆ.

ಡೇನ್ಯೆಲ್‌: ಮಧುಮೇಹ ಇದ್ದಾಗ ಯಾವವ ಆಹಾರವನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಯಾವುದನ್ನು ಹೆಚ್ಚಾಗಿ ಸೇವಿಸಬಾರದು ಎಂದು ಅರಿತಿರುವುದೇ ಒಂದು ದೊಡ್ಡ ಸಮಸ್ಯೆ. ಎಲ್ಲಾದರೂ ನನ್ನ ಪಥ್ಯೆಯಲ್ಲಿ ಹೆಚ್ಚುಕಡಿಮೆಯಾದರೆ, ನನ್ನ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿ ನಾನು ಮೂರ್ಛೆ ತಪ್ಪಿಬೀಳಲೂಬಹುದು.

ಹಿರೋಕಿ: ನನಗಂತಲೇ ಮಾಡಿದ ಒಂದು ವಿಶಿಷ್ಟ ಗಾಲಿಕುರ್ಚಿ ಇದೆ. ದಿನಕ್ಕೆ ಸುಮಾರು 15 ತಾಸು ನಾನು ಒಂದೇ ಭಂಗಿಯಲ್ಲಿ ಕೂತಿರಬೇಕಾಗುತ್ತದೆ. ಅಲ್ಲದೆ ನನಗೆ ಸರಿಯಾಗಿ ನಿದ್ದೆಯೂ ಬರುವುದಿಲ್ಲ. ಚಿಕ್ಕ ಶಬ್ದವಾದರೂ ಎಚ್ಚರವಾಗುತ್ತದೆ.

ತಿಮೊಥಿ: ನನಗೆ ಕಾಯಿಲೆಯಿದೆ ಎಂಬ ವಾಸ್ತವಾಂಶವನ್ನು ನನಗೆ ಮೊದಮೊದಲು ಅರಗಿಸಿಕೊಳ್ಳಲಿಕ್ಕೇ ಆಗಲಿಲ್ಲ. ನನ್ನ ಪರಿಸ್ಥಿತಿಯ ಕುರಿತು ನನಗೆ ತುಂಬಾ ಕಸಿವಿಸಿಯಾಗುತ್ತಿತ್ತು.

ಎಚ್ಚರ!: ನಿಮಗಿರುವ ಇತರ ಸಮಸ್ಯೆಗಳಾವುವು?

ಡೇನ್ಯೆಲ್‌: ಮಧುಮೇಹ ಇರುವುದರಿಂದ ನನಗೆ ತುಂಬ ಸುಸ್ತಾಗುತ್ತದೆ. ಸಾಮಾನ್ಯವಾಗಿ ನನ್ನ ಪ್ರಾಯದ ಯೌವನಸ್ಥರಿಗಿಂತ ಹೆಚ್ಚು ನಿದ್ರೆಯ ಆವಶ್ಯಕತೆ ನನಗಿದೆ. ಅಲ್ಲದೆ ನನಗಿರುವ ಕಾಯಿಲೆಯು ದೀರ್ಘಕಾಲದ್ದು. ಅದಕ್ಕೆ ವಾಸಿ ಎಂಬದೇ ಇಲ್ಲ.

ನ್ಯಾಟಲಿ: ಕುಳ್ಳಿಯಾಗಿರುವುದೇ ನನ್ನ ದೊಡ್ಡ ಚಿಂತೆ. ಅಂಗಡಿ ಮಳಿಗೆ​ಗಳಿಗೆ ಹೋಗಿ ಷೆಲ್ಫುಗಳಿಂದ ಬೇಕಾದ ಸಾಮಾನುಗಳನ್ನು ತೆಗೆಯುವಂಥ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡಲೂ ನನಗೆ ಕಷ್ಟ. ಒಬ್ಬಳೇ ಹೋದರಂತೂ ಸಾಕುಸಾಕಾಗಿ ಹೋಗುತ್ತದೆ.

ತಿಮೊಥಿ: ಸತತ ನೋವನ್ನು ನುಂಗುವುದರ ಜೊತೆಗೆ ಆಗಾಗ ಖಿನ್ನತೆಯು ನನ್ನನ್ನು ಕಾಡುತ್ತಿತ್ತು. ಅಸ್ವಸ್ಥನಾಗುವ ಮುಂಚೆ ನಾನು ತುಂಬ ಲವಲವಿಕೆಯಿಂದಿದ್ದೆ. ಕೆಲಸಕ್ಕೆ ಹೋಗುತ್ತಿದೆ ಮತ್ತು ವಾಹನವನ್ನೂ ಓಡಿಸುತ್ತಿದೆ. ಫುಟ್‌ಬಾಲ್‌ ಮತ್ತು ಸ್ಕ್ವಾಷ್‌ನಂಥ ಆಟಗಳಲ್ಲೂ ಭಾಗವಹಿಸುತ್ತಿದ್ದೆ. ಆದರೆ ಈಗ ಗಾಲಿ ಕುರ್ಚಿಗೆ ಅಂಟಿಕೊಂಡಿದ್ದೇನೆ.

ಹಿರೋಕಿ: ನನಗೆ ಮಾತಿನ ದೌರ್ಬಲ್ಯವಿದೆ. ಇದರಿಂದ ನನಗೆ ಮನಸ್ಸೇ ಬಿಟ್ಟುಹೋಗುತ್ತದೆ ಮತ್ತು ಇತರರೊಂದಿಗೆ ಮಾತಾಡಲು ಹಿಂಜರಿಯುತ್ತೇನೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಕೈಗಳ ನಿಯಂತ್ರಣ ತಪ್ಪಿ ಯಾರಿಗಾದರೂ ತಗಲಿಬಿಡುತ್ತವೆ. ಮಾತಾಡುವ ಸಮಸ್ಯೆಯಿರುವುದರಿಂದ “ಕ್ಷಮಿಸಿ” ಎಂದು ಹೇಳಲಿಕ್ಕೆ ಸಹ ನನಗೆ ಸಾಧ್ಯವಾಗುವುದಿಲ್ಲ.

ಎಚ್ಚರ!: ನಿಮ್ಮ ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವುದು ಸಹಾಯಮಾಡಿದೆ?

ಡೇನ್ಯೆಲ್‌: ಬದುಕಿನ ಒಳ್ಳೇ ವಿಷಯಗಳ ಕಡೆಗೆ ಗಮನ ತಿರುಗಿಸಲು ನಾನು ಪ್ರಯತ್ನಿಸುತ್ತೇನೆ. ಪ್ರೀತಿಯ ಕುಟುಂಬ ನನಗಿದೆ. ಸಭೆಯಲ್ಲಿ ಅಕ್ಕರೆಯ ಸ್ನೇಹಿತರು ನನಗಿದ್ದಾರೆ ಮತ್ತು ಹೆಚ್ಚು ಪ್ರಾಮುಖ್ಯವಾಗಿ ಯೆಹೋವನು ನನಗೆ ಆಧಾರವಾಗಿದ್ದಾನೆ. ಅಲ್ಲದೆ, ಮಧುಮೇಹದ ಕುರಿತ ಪ್ರಚಲಿತ ಮಾಹಿತಿಯನ್ನು ನಾನು ಸಂಗ್ರಹಿಸುತ್ತೇನೆ. ನನ್ನ ಆರೋಗ್ಯವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ ಮತ್ತು ಆದಷ್ಟು ಮಟ್ಟಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.

ನ್ಯಾಟಲಿ: ಪ್ರಾರ್ಥನೆ ನನಗೆ ಬಲಕೊಡುತ್ತದೆ. ನನ್ನೆಲ್ಲಾ ಸಮಸ್ಯೆಗಳನ್ನು ಒಟ್ಟಿಗೆ ಅಲ್ಲ ಒಂದೊಂದಾಗಿ ನಿಭಾಯಿಸುತ್ತೇನೆ. ಸದಾ ಕಾರ್ಯನಿರತಳಾಗಿರುವುದು ನಕಾರಾತ್ಮಕ ಯೋಚನೆಗಳನ್ನು ದೂರವಿಡಲು ಸಹಾಯಮಾಡಿದೆ. ಅಲ್ಲದೆ ಸಮಸ್ಯೆಗಳನ್ನು ಹೆತ್ತವರೊಂದಿಗೆ ಹೇಳಿಕೊಳ್ಳುತ್ತೇನೆ.

ತಿಮೊಥಿ: ಪ್ರತಿದಿನ ನಾನು ಕಡಿಮೆಪಕ್ಷ ಸ್ವಲ್ಪಸಮಯವಾದರೂ ಒಂದಲ್ಲ ಒಂದು ಆಧ್ಯಾತ್ಮಿಕ ವಿಷಯದಲ್ಲಿ ತೊಡಗಿರುತ್ತೇನೆ. ಉದಾಹರಣೆಗೆ, ದಿನದ ವಚನವನ್ನು ಓದುವ ಮೂಲಕ ಪ್ರತಿದಿನವನ್ನು ಆರಂಭಿಸುತ್ತೇನೆ. ಭಾವನಾತ್ಮಕವಾಗಿ ಖಿನ್ನನಾಗಿರುವಾಗಲಂತೂ ವೈಯಕ್ತಿಕ ಬೈಬಲ್‌ ಅಧ್ಯಯನ ಮತ್ತು ಪ್ರಾರ್ಥನೆ ನನಗೆ ತುಂಬ ಸಹಾಯಕರವಾಗಿದೆ.

ಹಿರೋಕಿ: ನನ್ನಿಂದಾಗದಿರುವ ಸಂಗತಿಗಳ ಕುರಿತು ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಸಮಯ ಹಾಳುಮಾಡುತ್ತದೆ ಅಷ್ಟೇ. ಅದರ ಬದಲಿಗೆ ಆಧ್ಯಾತ್ಮಿಕವಾಗಿ ಬಲಗೊಳ್ಳಲು ನನ್ನಿಂದಾದದ್ದೆಲ್ಲವನ್ನು ಮಾಡುತ್ತೇನೆ. ಬೈಬಲನ್ನು ಅಧ್ಯಯನ ಮಾಡದೆ ಇರಲು ನನ್ನ ಪರಿಸ್ಥಿತಿಯನ್ನು ಎಂದೂ ಒಂದು ನೆಪವಾಗಿ ಉಪಯೋಗಿಸುವುದಿಲ್ಲ. ನಿದ್ರೆಬಾರದಾಗ ಪ್ರಾರ್ಥನೆಗೆ ಅದೊಂದು ಅತ್ಯುತ್ತಮ ಅವಕಾಶವೆಂದು ಎಣಿಸುತ್ತೇನೆ.​—⁠ರೋಮಾಪುರ 12:12 ನೋಡಿ.

ಎಚ್ಚರ!: ಬೇರೆಯವರು ನಿಮ್ಮನ್ನು ಹೇಗೆ ಪ್ರೋತ್ಸಾಹಿಸಿದ್ದಾರೆ?

ಹಿರೋಕಿ: ನಾನು ಮಾಡುವ ಕೆಲಸವು ಕೇವಲ ಕೊಂಚವೇ ಆಗಿರುವುದಾದರೂ ಹಿರಿಯರು ನನ್ನನ್ನು ಸದಾ ಪ್ರಶಂಸಿಸುತ್ತಾರೆ. ಅಲ್ಲದೆ ನನ್ನ ಸಭೆಯ ಸಹೋದರ ಸಹೋದರಿಯರು ಪುನರ್ಭೇಟಿ ಹಾಗೂ ಬೈಬಲ್‌ ಅಧ್ಯಯನಗಳಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಾರೆ.​—⁠ರೋಮಾಪುರ 12:10 ನೋಡಿ.

ಡೇನ್ಯೆಲ್‌: ಸಹೋದರ ಸಹೋದರಿಯರು ಹೃತ್ಪೂರ್ವಕವಾಗಿ ನನ್ನನ್ನು ಶ್ಲಾಘಿಸುವುದೇ ಮನಮುಟ್ಟುವ ವಿಷಯವಾಗಿದೆ. ಇದು ಅವರು ನನ್ನನ್ನು ಪ್ರೀತಿಸುತ್ತಾರೆಂಬ ನಂಬಿಕೆಯನ್ನು ನನಗೆ ಕೊಡುತ್ತದೆ. ನನ್ನ ಪರಿಸ್ಥಿತಿಯನ್ನು ನಿಭಾಯಿಸಲು ಇದೇ ಪ್ರೋತ್ಸಾಹವಾಗಿದೆ.

ತಿಮೊಥಿ: ಒಬ್ಬ ವೃದ್ಧ ಸಹೋದರಿ ಕೂಟಗಳಲ್ಲಿ ನನ್ನೊಂದಿಗೆ ಮಾತಾಡಲು ವಿಶೇಷ ಪ್ರಯತ್ನಮಾಡುತ್ತಾಳೆ. ಹಿರಿಯರು ಮತ್ತು ಅವರ ಪತ್ನಿಯರು ಸಹ ನನಗೆ ಪ್ರೋತ್ಸಾಹ ಹಾಗೂ ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ. 84 ವರ್ಷದ ಹಿರಿಯರೊಬ್ಬರು ನನ್ನಿಂದ ತಲಪಲಾಗುವ ಗುರಿಗಳನ್ನಿಡಲು ಸಹಾಯಮಾಡಿದ್ದಾರೆ. ಒಬ್ಬ ಶುಶ್ರೂಷಾ ಸೇವಕನು ಕ್ಷೇತ್ರ ಸೇವೆಯಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಕರೆನೀಡಿದ್ದಾನೆ. ನನ್ನ ಗಾಲಿಕುರ್ಚಿಯನ್ನು ನಡೆಸಲು ಸುಲಭವಾಗುವಂತೆ ಸಮತಟ್ಟಾದ ಪ್ರದೇಶದಲ್ಲಿ ಅವನು ಸೇವೆ ಏರ್ಪಡಿಸಿದ್ದಾನೆ.​—⁠ಕೀರ್ತನೆ 55:22 ನೋಡಿ.

ನ್ಯಾಟಲಿ: ರಾಜ್ಯ ಸಭಾಗೃಹದೊಳಕ್ಕೆ ಕಾಲಿಟ್ಟೊಡನೆ ನನ್ನ ಆಧ್ಯಾತ್ಮಿಕ ಸಹೋದರ ಸಹೋದರಿಯರು ನಸುನಗೆ ಬೀರುತ್ತಾ ನನ್ನನ್ನು ವಂದಿಸುತ್ತಾರೆ. ತಮ್ಮ ಸ್ವಂತ ಕಷ್ಟಕಾರ್ಪಣ್ಯಗಳ ಮಧ್ಯೆಯೂ ವೃದ್ಧ ಸಹೋದರ ಸಹೋದರಿಯರು ಪ್ರತಿಸಲ ಉತ್ತೇಜನದಾಯಕ ಮಾತುಗಳನ್ನು ಆಡುತ್ತಾರೆ.​—⁠2 ಕೊರಿಂಥ 4:16, 17 ನೋಡಿ.

ಎಚ್ಚರ!: ಸಕಾರಾತ್ಮಕವಾಗಿ ಯೋಚಿಸಲು ನಿಮಗೆ ಯಾವುದು ಸಹಾಯಮಾಡುತ್ತದೆ?

ಹಿರೋಕಿ: ಒಬ್ಬ ಯೆಹೋವನ ಸಾಕ್ಷಿಯಾದ ನಾನು, ಉಜ್ವಲ ನಿರೀಕ್ಷೆಯಿರುವ ಸಂಘಟಿತ ಜನರೊಂದಿಗೆ ಸಹವಾಸಿಸುತ್ತೇನೆ. ಇಂಥ ಒಂದು ಒಳ್ಳೇ ಸಂಘಟನೆಯ ಭಾಗವಾಗಿದ್ದೇನೆ ಎಂಬದೇ ಸಕಾರಾತ್ಮಕವಾಗಿ ಇರುವಂತೆ ಮಾಡಿದೆ.​—⁠2 ಪೂರ್ವಕಾಲವೃತ್ತಾಂತ 15:⁠7 ನೋಡಿ.

ಡೇನ್ಯೆಲ್‌: ದೇವರ ಉದ್ದೇಶವನ್ನು ತಿಳಿದುಕೊಳ್ಳಲು ನನಗಿರುವ ಅಮೂಲ್ಯ ಅವಕಾಶದ ಕುರಿತು ನಾನು ಯೋಚಿಸುತ್ತೇನೆ. ಅನೇಕ ಜನರಿಗೆ ಉತ್ತಮ ಆರೋಗ್ಯವಿದೆ ಆದರೆ ನನ್ನ ಜೀವನದಲ್ಲಿರುವಷ್ಟು ನೆಮ್ಮದಿ ಅವರಿಗಿಲ್ಲ.​—⁠ಜ್ಞಾನೋಕ್ತಿ 15:15 ನೋಡಿ.

ನ್ಯಾಟಲಿ: ಸದಾ ಖುಷಿಯಿಂದಿರುವ ಜನರೊಂದಿಗಿರುವುದು ತುಂಬ ಅವಶ್ಯ ಎಂದು ನಾನು ಕಂಡುಕೊಂಡೆ. ಸಂಕಷ್ಟಗಳ ಮಧ್ಯೆ ಸಹ ಯೆಹೋವನನ್ನು ಸೇವಿಸುತ್ತಿರುವವರ ಅನುಭವಗಳನ್ನು ಓದುವುದರಿಂದಲೂ ನನಗೆ ಪ್ರೋತ್ಸಾಹ ಸಿಗುತ್ತದೆ. ಅಲ್ಲದೆ ರಾಜ್ಯ ಸಭಾಗೃಹಕ್ಕೆ ಹೋದಾಗಲೆಲ್ಲಾ ನಾನು ಇನ್ನಷ್ಟು ಬಲಗೊಳ್ಳುತ್ತೇನೆ ಎಂಬದರಲ್ಲಿ ಸಂಶಯವಿಲ್ಲ. ಒಬ್ಬ ಯೆಹೋವನ ಸಾಕ್ಷಿಯಾಗಿರುವುದು ದೊಡ್ಡ ಗೌರವದ ಸಂಗತಿಯೆಂಬುದು ಅಲ್ಲಿರುವಾಗ ಪದೇ ಪದೇ ನನ್ನ ಮನಸ್ಸಿಗೆ ಬರುತ್ತದೆ.​—⁠ಇಬ್ರಿಯ 10:24, 25 ನೋಡಿ.

ತಿಮೊಥಿ: 1 ಕೊರಿಂಥ 10:13 ರ ಪ್ರಕಾರ, ನಮಗೆ ಸಹಿಸಲಾಗುವುದಕ್ಕಿಂತ ಹೆಚ್ಚಿನದ್ದನ್ನು ಯೆಹೋವನು ಎಂದೂ ಬರಗೊಡಿಸುವುದಿಲ್ಲ. ನನ್ನ ಈ ಸಂಕಷ್ಟವನ್ನು ನಿಭಾಯಿಸಬಲ್ಲೆ ಎಂಬ ಭರವಸೆ ನನ್ನ ಸೃಷ್ಟಿಕರ್ತನಿಗೆ ಇದೆಯಾದರೆ ನಾನ್ಯಾಕೆ ವ್ಯಥೆಪಡಬೇಕು? (g 2/08)

“ಯುವ ಜನರು ಪ್ರಶ್ನಿಸುವುದು” ಎಂಬ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿ

ಹಿರೋಕಿ ಮತ್ತು ತಿಮೊಥಿಗೆ ಗಾಲಿಕುರ್ಚಿಯ ನೆರವಿಲ್ಲದೆ ಓಡಾಡಲು ಸಾಧ್ಯವಿಲ್ಲ. ನೀವು ತದ್ರೀತಿಯ ಪರಿಸ್ಥಿತಿಯಲ್ಲಿರುವುದಾದರೆ, ಸಕಾರಾತ್ಮಕ ಮನೋಭಾವವನ್ನು ತಾಳಲು ಅವರ ಹೇಳಿಕೆಗಳು ನಿಮಗೆ ಹೇಗೆ ಸಹಾಯಮಾಡಬಲ್ಲವು?

“ಮಧುಮೇಹದ ಲಕ್ಷಣಗಳು ಹೊರಗೆ ಗೋಚರವಾಗದ ಕಾರಣ ಅದೆಷ್ಟು ಗಂಭೀರ ಕಾಯಿಲೆ ಎಂದು ಕೆಲವರಿಗೆ ತಿಳಿದಿರುವುದಿಲ್ಲ” ಎಂದು ಡೇನ್ಯೆಲ್‌ ಹೇಳುತ್ತಾಳೆ. ನೀವು ಸಹ ಬೇರೆಯವರಿಗೆ “ಗೋಚರವಾಗದ” ಕಾಯಿಲೆಯೊಂದರಿಂದ ಬಳಲುತ್ತಿದ್ದೀರೋ? ಹಾಗಿರುವಲ್ಲಿ, ಡೇನ್ಯೆಲ್‌ಳ ಹೇಳಿಕೆಗಳಿಂದ ನೀವು ಯಾವ ಪಾಠಗಳನ್ನು ಕಲಿಯಬಲ್ಲಿರಿ?

ಜನರು ತನ್ನನ್ನು ನೋಡಿ ಏನು ಅಂದುಕೊಳ್ಳುತ್ತಾರೆ ಎಂಬದೇ ಒಂದು ದೊಡ್ಡ ಸಮಸ್ಯೆ ಎಂದು ನ್ಯಾಟಲಿ ಹೇಳುತ್ತಾಳೆ. ನ್ಯಾಟಲಿಯಂಥ ವ್ಯಕ್ತಿಗಳಿಗೆ ಮುಜುಗರವಾಗದಂತೆ ನೀವು ಹೇಗೆ ನೋಡಿಕೊಳ್ಳುತ್ತೀರಿ? ಅಸ್ವಸ್ಥತೆ ಅಥವಾ ವಿಕಲಾಂಗತೆಯಿಂದಾಗಿ ನಿಮಗೂ ನ್ಯಾಟಲಿಯಂತೆ ಅನಿಸುವಲ್ಲಿ ಅವಳ ಸಕರಾತ್ಮಕ ಮನೋಭಾವವನ್ನು ನೀವು ಹೇಗೆ ಅನುಕರಿಸುತ್ತೀರಿ?

ಅಂಗವಿಕಲರಾಗಿರುವ ಇಲ್ಲವೆ ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿರುವ ನಿಮ್ಮ ಪರಿಚಯಸ್ಥರ ಹೆಸರುಗಳನ್ನು ಇಲ್ಲಿ ಪಟ್ಟಿಮಾಡಿ.

.....

ಅವರಲ್ಲಿ ಪ್ರತಿಯೊಬ್ಬರಿಗೆ ಭಾವನಾತ್ಮಕ ಬೆಂಬಲ ನೀಡಲು ನೀವೇನು ಮಾಡಬಲ್ಲಿರಿ?

.....

.....

[ಪುಟ 23ರಲ್ಲಿರುವ ಚೌಕ]

ಬೈಬಲಿನ ಸಾಂತ್ವನ

ಯೇಸುವಿಗೆ ಅಸ್ವಸ್ಥರೆಡೆಗೆ ನಿಜ ಕನಿಕರವಿದೆ.​—⁠ಮಾರ್ಕ 1:​40, 41.

ಯೇಸು, ‘ಎಲ್ಲಾತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವ’ ಮೂಲಕ ದೇವರ ರಾಜ್ಯದಲ್ಲಾಗುವ ಗುಣಪಡಿಸುವಿಕೆಯನ್ನು ತೋರಿಸಿಕೊಟ್ಟನು.​—⁠ಮತ್ತಾಯ 4:23.

ದೇವರ ನೂತನ ಲೋಕದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” ಅಲ್ಲದೆ ಯಾವುದೇ ರೀತಿಯ ಬೇನೆ ಅಲ್ಲಿರದು.​—⁠ಯೆಶಾಯ 33:24; ಪ್ರಕಟನೆ 21:1-4.

‘ಕಡೇ ಶತ್ರುವಾಗಿರುವ’ ಮರಣವೂ “ನಿವೃತ್ತಿಯಾಗುವದು.”​—⁠1 ಕೊರಿಂಥ 15:25, 26.

[ಪುಟ 22ರಲ್ಲಿರುವ ಚಿತ್ರ]

ಹಿರೋಕಿ, 23 ಜಪಾನ್‌

[ಪುಟ 22ರಲ್ಲಿರುವ ಚಿತ್ರ]

ನ್ಯಾಟಲಿ, 20 ದಕ್ಷಿಣ ಆಫ್ರಿಕ

[ಪುಟ 22ರಲ್ಲಿರುವ ಚಿತ್ರ]

ತಿಮೊಥಿ, 20 ಬ್ರಿಟನ್‌

[ಪುಟ 22ರಲ್ಲಿರುವ ಚಿತ್ರ]

ಡೇನ್ಯೆಲ್‌, 24 ಆಸ್ಟ್ರೇಲಿಯ