ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಟ್ಟಕಡೆಗೆ ಎಲ್ಲರಿಗೂ ಒಂದು ಉತ್ತಮ ಮನೆ

ಕಟ್ಟಕಡೆಗೆ ಎಲ್ಲರಿಗೂ ಒಂದು ಉತ್ತಮ ಮನೆ

ಕಟ್ಟಕಡೆಗೆ ಎಲ್ಲರಿಗೂ ಒಂದು ಉತ್ತಮ ಮನೆ

ಕೆನ್ಯದ ನೈರೋಬಿಯ ಸಮೀಪದ ಹೊರವಲಯದಲ್ಲಿ, ಯುನೈಟೆಡ್‌ ನೇಷನ್ಸ್‌ ಗೀಗೀರೀ ಕಾಂಪೌಂಡ್‌ ಎಂಬ ಸುಂದರವಾದ 140 ಎಕರೆ ಸ್ಥಳವನ್ನು ಹೊಂದಿರುವ ಕಾಂಪೌಂಡ್‌ ಇದೆ. ಅದರೊಳಗೆ ಯು.ಎನ್‌.-ಹ್ಯಾಬಿಟಟ್‌ ಮುಖ್ಯಕಾರ್ಯಾಲಯವೂ ಇದೆ. ಈ ಸಮುದಾಯವು, ಭೌಗೋಳಿಕ ವಸತಿ ಬಿಕ್ಕಟ್ಟನ್ನು ಪರಿಹರಿಸುತ್ತೇವೆಂಬ ಅಂತಾರಾಷ್ಟ್ರೀಯ ಬದ್ಧತೆಯ ಒಂದು ಚಿಹ್ನೆಯಾಗಿದೆ. ಈ ಕಾಂಪೌಂಡಿನ ಮೇಲಿರುವ ಗೀಗೀರೀ ಪ್ರಕೃತಿಜಾಡಿಗೆ (ಮಾರ್ಗಸೂಚಕ ಕಂಬಗಳುಳ್ಳ ಹಾದಿಗೆ) ಅನುಸಾರವಾಗಿ ನಡೆದುಕೊಂಡು ಹೋದರೆ, ಒಗ್ಗಟ್ಟಾದ ಪ್ರಯತ್ನ ಮತ್ತು ಸಾಕಷ್ಟು ನಿಧಿಯಿಂದಾಗಿ ಏನೆಲ್ಲ ಸಾಧಿಸಸಾಧ್ಯವಿದೆ ಎಂಬುದಕ್ಕೆ ಆಶ್ಚರ್ಯಕರ ಪುರಾವೆಯನ್ನು ಕಾಣಬಹುದು. ಪರಿಸರೀಯ ಹಾಳುಭೂಮಿ ಎಂದು ಒಂದೊಮ್ಮೆ ಪರಿಗಣಿಸಲಾಗಿದ್ದ ಆ ಸ್ಥಳವು ಈಗ ಸಂಪೂರ್ಣವಾಗಿ ಉಪಯೋಗದಲ್ಲಿದ್ದು, ಸಿಬ್ಬಂದಿಗಳಿಗೆ ಹಾಗೂ ಸಂದರ್ಶಕರಿಗೆ ಸುಂದರವಾದ ಮನೋರಂಜನಾ ಕ್ಷೇತ್ರವಾಗಿದೆ.

ಆದರೆ, ಈ ಸ್ಥಳಕ್ಕೆ ಕೇವಲ ಕೆಲವೇ ಕಿಲೋಮೀಟರ್‌ ದೂರದಲ್ಲಿ ಹೊಸದಾದ ಆದರೂ ಸತತವಾಗಿ ವಿಸ್ತರಿಸುತ್ತಿರುವ ಒಂದು ಕೊಳಚೆ ಪ್ರದೇಶವಿದೆ. ಸದ್ಯದ ವಸತಿ ಬಿಕ್ಕಟ್ಟು ಎಷ್ಟು ಜಟಿಲವಾಗಿದೆ ಎಂಬುದಕ್ಕೆ ಇದೊಂದು ಜ್ಞಾಪಕದಂತಿದೆ. ಮಣ್ಣು, ಕಟ್ಟಿಗೆ ಮತ್ತು ಟಿನ್‌ ತಗಡುಗಳಿಂದ ಕಟ್ಟಲ್ಪಟ್ಟಿರುವ ಈ ಗುಡಿಸಲುಗಳಲ್ಲಿ ಪ್ರತಿಯೊಂದರ ಕ್ಷೇತ್ರವು ಸುಮಾರು ನಾಲ್ಕು ಚದರ ಮೀಟರ್‌ ಆಗಿದೆ. ಆ ಗುಡಿಸಲುಗಳ ಮಧ್ಯದಿಂದ ಹಾದುಹೋಗುವ ದಾರಿಗಳು ಕೊಳಚೆ ನೀರಿನ ದುರ್ವಾಸನೆಯಿಂದ ತುಂಬಿವೆ. ನೀರಿಗಾಗಿ ಯುನೈಟೆಡ್‌ ಸ್ಟೇಟ್ಸ್‌ನ ಸರಾಸರಿ ಪ್ರಜೆ ವ್ಯಯಿಸುವ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣವನ್ನು ಇಲ್ಲಿನ ನಿವಾಸಿಗಳು ವ್ಯಯಿಸುತ್ತಾರೆ. ಇಲ್ಲಿ ವಾಸಿಸುತ್ತಿರುವ ಸುಮಾರು 40,000 ಮಂದಿಯಲ್ಲಿ ಹೆಚ್ಚಿನವರು 20 ಮತ್ತು 30ವರುಷದವರಾಗಿದ್ದಾರೆ. ಅವರು ಸೋಮಾರಿಗಳೊ ಇಲ್ಲವೆ ಯಾವುದೇ ಕೆಲಸವನ್ನು ಮಾಡಲು ಪ್ರಚೋದಿತರಾಗದವರೊ ಅಲ್ಲ. ಅವರು ಹತ್ತಿರದಲ್ಲಿರುವ ನೈರೋಬಿಯಲ್ಲಿ ಕೆಲಸಗಳನ್ನು ಹುಡುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದಾರೆ.

ಇದಕ್ಕೆ ತೀರ ವ್ಯತಿರಿಕ್ತವಾಗಿ, ಇದರ ಹತ್ತಿರದಲ್ಲಿಯೇ ಇರುವ ಶುದ್ಧವಾದ, ಸೂಕ್ತವಾದ, ಆಕರ್ಷಣೀಯ ಪರಿಸರವನ್ನು ಹೊಂದಿರುವ ಗೀಗೀರೀ ಕಾಂಪೌಂಡ್‌ನಲ್ಲಿರುವ ಯು.ಎನ್‌.-ಹ್ಯಾಬಿಟಟ್‌ನಲ್ಲಿ ಲೋಕದ ಮುಖಂಡರು ತಮ್ಮ ನೆರೆಯಲ್ಲೇ ಇರುವ ಬಡ ಸ್ತ್ರೀಪುರುಷರ ಮತ್ತು ಮಕ್ಕಳ ಭವಿಷ್ಯತ್ತಿನ ಬಗ್ಗೆ ಚರ್ಚಿಸಲು ಒಟ್ಟುಗೂಡುತ್ತಾರೆ. ವಿಶ್ವಸಂಸ್ಥೆಯ ಸೆಕ್ರಿಟರಿ ಜೆನರಲ್‌ಗನುಸಾರ ಕಸಿವಿಸಿಗೊಳಿಸುವ ಸತ್ಯವೇನೆಂದರೆ, ಕೊಳಚೆ ಪ್ರದೇಶದಲ್ಲಿ ವಾಸಿಸುವವರ ಜೀವನವನ್ನು ತಕ್ಕಮಟ್ಟಿಗೆ ಉತ್ತಮಗೊಳಿಸುವ “ಸಂಪನ್ಮೂಲಗಳು, ಪ್ರಾಯೋಗಿಕ ಜ್ಞಾನ ಮತ್ತು ಶಕ್ತಿ ಈ ಲೋಕಕ್ಕಿದೆ.” ಹಾಗಿರುವಾಗ ಮಾಡಬೇಕಾಗಿರುವುದು ಏನು? ಸಮಾಪ್ತಿಯಲ್ಲಿ ಅನಾನ್‌ರವರು ತಿಳಿಸಿದ್ದು: “ಪ್ರಗತಿಗೆ ತಡೆಯಾಗಿರುವ ನಿರಾಸಕ್ತಿ ಮತ್ತು ಸರಕಾರದ ವತಿಯಿಂದ ಪ್ರಚೋದನೆ ಇಲ್ಲದಿರುವಿಕೆಯನ್ನು, ಸಂಬಂಧಪಟ್ಟ ಎಲ್ಲರೂ ತೆಗೆದುಹಾಕಸಾಧ್ಯವಿದೆ . . . ಎಂಬುದು ನನ್ನ ನಿರೀಕ್ಷೆ.”

ಆದರೆ ಆ ನಿರೀಕ್ಷೆಯು ಎಷ್ಟು ವಾಸ್ತವಿಕವಾಗಿದೆ? ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳಿಕ ರಾಜಕಾರಣಿಗಳು ಒಟ್ಟಾಗಿ ತಮ್ಮ ಸ್ವಹಿತವನ್ನು ಬದಿಗೊತ್ತಿ, ಎಲ್ಲರ ಪ್ರಯೋಜನಾರ್ಥವಾಗಿ ಸಾಮಾನ್ಯ ಪರಿಹಾರವನ್ನು ಕಂಡುಹಿಡಿಯುವಂತೆ ಮಾಡಬೇಕಾದರೆ ಏನು ಅಗತ್ಯವಿದೆ? ಸದ್ಯದ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ಯಾರೋ ಒಬ್ಬನಲ್ಲಿ ಸಂಪನ್ಮೂಲಗಳು, ಪ್ರಾಯೋಗಿಕ ಜ್ಞಾನ ಮತ್ತು ಶಕ್ತಿಯೂ ಇದೆ. ಹೆಚ್ಚು ಪ್ರಾಮುಖ್ಯವಾಗಿ, ಆತನಲ್ಲಿ ಕನಿಕರ ಮತ್ತು ಬೇಗನೆ ಕ್ರಿಯೆಗೈಯಬೇಕೆಂಬ ಇಚ್ಛೆಯೂ ಇದೆ. ವಾಸ್ತವದಲ್ಲಿ, ಆತನ ಸರಕಾರವು ಈಗಾಗಲೇ ಭೌಗೋಳಿಕ ವಸತಿ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಲು ಒಂದು ಸವಿಸ್ತಾರವಾದ ಕಾರ್ಯಕ್ರಮವನ್ನು ವಿವರಿಸಿದೆ.

ಒಂದು ಹೊಸ ವಸತಿ ಯೋಜನೆ

ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ತಾನು ಏನು ಮಾಡಲು ಉದ್ದೇಶಿಸಿದ್ದಾನೆ ಎಂಬುದನ್ನು ಬೈಬಲಿನಲ್ಲಿ ತಿಳಿಸಿದ್ದಾನೆ. ಆತನು ವಾಗ್ದಾನಿಸುವುದು: “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು.” (ಯೆಶಾಯ 65:17) ಇದೊಂದು ರೋಮಾಂಚಕ ಬದಲಾವಣೆಯನ್ನು ತರಲಿದೆ. ನೂತನ ಸರಕಾರವನ್ನು ಸೂಚಿಸುವ ‘ಆಕಾಶಮಂಡಲವು,’ ಸದ್ಯದ ಮಾನವ ಸರಕಾರಗಳಿಂದ ಮಾಡಲು ಸಾಧ್ಯವಾಗದ ವಿಷಯಗಳನ್ನು ಸಾಧಿಸಲಿದೆ. ದೇವರ ರಾಜ್ಯ ಅಥವಾ ಸರಕಾರವು, ಭೂಮಿಯ ಮೇಲೆ ಮಾನವರ ನೂತನ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಸುರಕ್ಷೆ ಮತ್ತು ಸ್ವಗೌರವವನ್ನು ಖಾತ್ರಿಪಡಿಸುತ್ತದೆ. “ಅಂತ್ಯಕಾಲದಲ್ಲಿ” ಈ ನೂತನ ಭೂಸಮಾಜದ ಭಾವೀ ಸದಸ್ಯರು ಒಟ್ಟುಗೂಡಿಸಲ್ಪಡುವರು ಎಂದು ಈ ಮುಂಚೆ ಯೆಶಾಯನಿಗೆ ತಿಳಿಸಲಾಗಿತ್ತು. (ಯೆಶಾಯ 2:​1-4) ಇದರ ಅರ್ಥ ಈ ಬದಲಾವಣೆಗಳು ಅತಿ ಬೇಗನೆ ಸಂಭವಿಸಲಿವೆ.​—⁠ಮತ್ತಾಯ 24:​3-14; 2 ತಿಮೊಥೆಯ 3:​1-5.

ಯೆಶಾಯ 65ನೇ ಅಧ್ಯಾಯದಲ್ಲಿನ ಇತರ ವಚನಗಳಲ್ಲಿ ದಾಖಲಾಗಿರುವ ಮಾತುಗಳಲ್ಲಿ ತೋರಿಬರುವ ಪ್ರಕಾರ, ಆ ಸಮಯದಲ್ಲಿ ದೇವರು ನಿರ್ದಿಷ್ಟವಾಗಿ ಪ್ರತಿಯೊಬ್ಬರಿಗೂ ಒಂದು ಶಾಶ್ವತವಾದ ಮನೆಯನ್ನು ಒದಗಿಸುವನು. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು” ಎಂದು ಆತನು ತಿಳಿಸುತ್ತಾನೆ. (ಯೆಶಾಯ 65:​21, 22) ಕೊನೆಗೂ ಅದ್ಭುತಕರವಾದ ಪರದೈಸಿನಲ್ಲಿ ಒಂದು ಸೂಕ್ತವಾದ ಮನೆಯನ್ನು ಹೊಂದಿರುವುದನ್ನು ಮತ್ತು ಶುದ್ಧವಾದ ಪರಿಸರ ಹಾಗೂ ಭದ್ರವಾದ ಪರಿಸ್ಥಿತಿಗಳನ್ನು ಹೊಂದಿರುವುದನ್ನು ತುಸು ಕಲ್ಪಿಸಿಕೊಳ್ಳಿ! ಅಂಥ ಪರಿಸ್ಥಿತಿಗಳನ್ನು ಯಾರು ತಾನೇ ಬಯಸುವುದಿಲ್ಲ? ಆದರೆ ದೇವರು ವಾಗ್ದಾನಿಸಿದ ಈ ವಿಷಯಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನೀವು ಹೇಗೆ ಖಾತ್ರಿಯಿಂದಿರಬಲ್ಲಿರಿ?

ನೀವು ಭರವಸೆಯಿಡಬಲ್ಲ ಒಂದು ವಾಗ್ದಾನ

ದೇವರು ಆರಂಭದಲ್ಲಿ ಆದಾಮಹವ್ವರನ್ನು ಸೃಷ್ಟಿಸಿದಾಗ ಅವರನ್ನು ಒಂದು ಹಾಳುಭೂಮಿಯಲ್ಲಿ ಬಿಟ್ಟುಬಿಡಲಿಲ್ಲ. ಬದಲಾಗಿ, ಆತನು ಅವರನ್ನು ಶುದ್ಧ ಗಾಳಿ ಮತ್ತು ಬೇಕಾದಷ್ಟು ನೀರು ಹಾಗೂ ಆಹಾರವನ್ನು ಹೊಂದಿದ್ದ ಒಂದು ಸುಂದರ ಉದ್ಯಾನವನವಾದ ಏದೆನ್‌ ತೋಟದಲ್ಲಿ ಇಟ್ಟನು. (ಆದಿಕಾಂಡ 2:​8-15) ಮತ್ತು ಭೂಮಿಯನ್ನು ತುಂಬಿಕೊಳ್ಳುವಂತೆ ಆದಾಮನಿಗೆ ತಿಳಿಸಲಾಯಿತು, ತುಂಬಿತುಳುಕುವಂತೆ ಅಲ್ಲ. (ಆದಿಕಾಂಡ 1:28) ಪ್ರತಿಯೊಬ್ಬರೂ ಸುವ್ಯವಸ್ಥೆ, ಸಾಮರಸ್ಯ ಮತ್ತು ಉತ್ತಮ ವಿಷಯಗಳ ಸಮೃದ್ಧಿಯಲ್ಲಿ ಆನಂದಿಸಬೇಕೆಂದು ಆರಂಭದಿಂದಲೇ ದೇವರು ಉದ್ದೇಶಿಸಿದ್ದನು.

ನಂತರ ನೋಹನ ದಿನದಲ್ಲಿ ಮಾನವ ಸಮಾಜವು ಹಿಂಸಾಚಾರ ಮತ್ತು ಅನೈತಿಕತೆಯಿಂದ ತುಂಬಿತು. ಆದುದರಿಂದ “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು.” (ಆದಿಕಾಂಡ 6:​11, 12) ಇದನ್ನು ನೋಡಿ ದೇವರು ಸುಮ್ಮನೆ ಕಣ್ಣುಮುಚ್ಚಿಕೊಂಡನೊ? ಇಲ್ಲ. ಆತನು ಕೂಡಲೆ ಕ್ರಿಯೆಗೈದನು. ತನ್ನ ಸ್ವಂತ ನಾಮದ ದೆಸೆಯಿಂದಲೂ ನೀತಿವಂತನಾದ ನೋಹ ಮತ್ತು ಅವನ ಕುಟುಂಬದ ದೆಸೆಯಿಂದಲೂ ಆತನು ಭೌಗೋಳಿಕ ಪ್ರಳಯದ ಮೂಲಕ ಭೂಮಿಯನ್ನು ಶುದ್ಧಮಾಡಿದನು. ಆದುದರಿಂದ ನೋಹನು ನಾವೆಯಿಂದ ಹೊರಬಂದು ತನ್ನ ನೂತನ ಮನೆಗೆ ಪ್ರವೇಶಿಸಿದಾಗ, ಅವನಿಗೆ ಪುನಃ ಒಮ್ಮೆ ‘ಬಹುಸಂತಾನವುಳ್ಳವನಾಗಿ ಹೆಚ್ಚು, ಭೂಲೋಕದಲ್ಲೆಲ್ಲಾ ತುಂಬಿಕೊಳ್ಳು’ ಎಂದು ಹೇಳಲಾಯಿತು.​—⁠ಆದಿಕಾಂಡ 9:⁠1.

ಅನಂತರವೂ, ದೇವರು ಇಸ್ರಾಯೇಲ್ಯರಿಗೆ ಅವರ ಪೂರ್ವಜನಾದ ಅಬ್ರಹಾಮನಿಗೆ ವಾಗ್ದಾನಮಾಡಿದ್ದ ಸ್ವಾಸ್ತ್ಯವನ್ನು ಒದಗಿಸಿದನು. ಆ ವಾಗ್ದತ್ತ ದೇಶವನ್ನು “ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶ” ಎಂದು ವರ್ಣಿಸಲಾಗಿತ್ತು. (ವಿಮೋಚನಕಾಂಡ 3:⁠8) ಆದರೆ ಅವರ ಅವಿಧೇಯತೆಯ ಕಾರಣ, ಇಸ್ರಾಯೇಲ್ಯರು ಅರಣ್ಯದಲ್ಲಿ ಯಾವುದೇ ಕಾಯಂ ಮನೆಯನ್ನು ಹೊಂದಿರದೆ 40 ವರುಷಗಳ ಕಾಲ ಅಲೆಯಬೇಕಾಯಿತು. ಹಾಗಿದ್ದರೂ, ದೇವರು ತನ್ನ ಮಾತಿಗನುಸಾರವಾಗಿ ಕಟ್ಟಕಡೆಗೆ ಅವರಿಗೆ ನೆಲೆಸಲು ದೇಶವನ್ನು ಒದಗಿಸಿದನು. ಪ್ರೇರಿತ ವೃತ್ತಾಂತವು ವರದಿಸುವುದು: “ಯೆಹೋವನು . . . ಅವರಿಗೆ ಎಲ್ಲಾ ಕಡೆಯಲ್ಲಿಯೂ ಸಮಾಧಾನಕೊಟ್ಟನು. . . . ಆತನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು.”​—⁠ಯೆಹೋಶುವ 21:​43-45.

ಕಟ್ಟಕಡೆಗೆ ಒಂದು ಮನೆ!

ಯೆಶಾಯ 65ನೇ ಅಧ್ಯಾಯದಲ್ಲಿರುವ ಯೆಹೋವನ ಮಾತುಗಳು ಅರ್ಥರಹಿತವಲ್ಲ ಎಂಬುದು ಸ್ಪಷ್ಟ. ಎಲ್ಲವುಗಳ ಸೃಷ್ಟಿಕರ್ತನಾದ ಆತನಿಗೆ, ಭೂಮಿಯನ್ನು ಶುದ್ಧಮಾಡಲು ಮತ್ತು ಅದರ ಕಡೆಗಿನ ತನ್ನ ಮೂಲ ಉದ್ದೇಶವನ್ನು ಪೂರೈಸಲು ಏನೆಲ್ಲ ಮಾಡಬೇಕೊ ಅದನ್ನು ಮಾಡುವ ಶಕ್ತಿಯಿದೆ. (ಯೆಶಾಯ 40:​26, 28; 55:​10, 11) ಮಾತ್ರವಲ್ಲದೆ, ದೇವರು ಅದನ್ನು ಮಾಡಲು ಬಯಸುತ್ತಾನೆ ಎಂಬುದಾಗಿಯೂ ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. (ಕೀರ್ತನೆ 72:​12, 13) ಹಿಂದಿನ ಕಾಲದಲ್ಲಿದ್ದ ನೀತಿವಂತ ಮನುಷ್ಯರಿಗೆ ತಕ್ಕದಾದ ಮನೆಯನ್ನು ಒದಗಿಸಲು ಆತನು ಸೂಕ್ತವಾದ ಕ್ರಿಯೆಯನ್ನು ಕೈಗೊಂಡಿದ್ದನು ಮತ್ತು ಅತಿ ಬೇಗನೆ ಅದನ್ನೇ ಪುನಃ ಮಾಡುವನು.

ವಾಸ್ತವದಲ್ಲಿ, ಆತನ ಮಗನಾದ ಯೇಸು ಕ್ರಿಸ್ತನು ಈ ಭೂಮಿಗೆ ಬಂದಾಗ, ‘ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ’ ಪ್ರಾರ್ಥಿಸಲು ತನ್ನ ಹಿಂಬಾಲಕರಿಗೆ ನಿರ್ದಿಷ್ಟವಾಗಿ ಕಲಿಸಿದನು. (ಮತ್ತಾಯ 6:10) ಭೂಮಿಯು ಪರದೈಸಾಗಲಿದೆ ಎಂದು ಅವನು ಸೂಚಿಸಿದನು. (ಲೂಕ 23:43) ಇದರ ಅರ್ಥವೇನು ಎಂಬುದನ್ನು ಆಲೋಚಿಸಿರಿ. ಮುಂದೆಂದೂ ಕೊಳಚೆ ಪ್ರದೇಶವಾಗಲಿ, ಜೋಪಡಿ ಮನೆಗಳಾಗಲಿ, ದಾರಿಬದಿಯಲ್ಲಿ ಮಲಗುವ ಜನರಾಗಲಿ, ಇಲ್ಲವೆ ಮನೆಯಿಂದ ಹೊರಗಟ್ಟಲ್ಪಡುವ ಭಯದಿಂದ ಜೀವಿಸುವ ಜನರಾಗಲಿ ಇರುವುದಿಲ್ಲ. ಅದು ಎಂಥ ಒಂದು ಸಂತೋಷದ ಸಮಯವಾಗಿರುವುದು! ದೇವರ ರಾಜ್ಯದ ಕೆಳಗೆ, ಪ್ರತಿಯೊಬ್ಬರೂ ಕಟ್ಟಕಡೆಗೆ ಒಂದು ಶಾಶ್ವತ ಮನೆಯನ್ನು ಹೊಂದುವರು! (g05 9/22)

[ಪುಟ 10ರಲ್ಲಿರುವ ಚೌಕ/ಚಿತ್ರ]

ಪುರಾತನ ಇಸ್ರಾಯೇಲಿನ ಮನೆಗಳು

ಇಸ್ರಾಯೇಲ್ಯರು ತಮಗಿಂತ ಮುಂಚೆ ಇದ್ದ ಕಾನಾನ್ಯರಂತೆ ಕಲ್ಲಿನ ಮನೆಗಳನ್ನು ಇಷ್ಟಪಡುತ್ತಿದ್ದರು ಎಂಬುದು ಸುವ್ಯಕ್ತ. ಏಕೆಂದರೆ ಅಂಥ ಕಟ್ಟಡಗಳು ಇತರ ಕಟ್ಟಡಗಳಿಗಿಂತ ಹೆಚ್ಚು ಸ್ಥಿರವಾದವುಗಳೂ ಕಳ್ಳಕಾಕರಿಂದ ಸಂರಕ್ಷಣೆಯನ್ನು ಒದಗಿಸುವಂಥವುಗಳೂ ಆಗಿದ್ದವು. (ಯೆಶಾಯ 9:9; ಆಮೋಸ 5:11) ಹಾಗಿದ್ದರೂ ತಗ್ಗುಪ್ರದೇಶಗಳಲ್ಲಿನ ಮನೆಗಳ ಗೋಡೆಗಳನ್ನು ಕಟ್ಟಲು, ಬಿಸಿಲಿಗೆ ಒಣಗಿಸಿದ ಇಲ್ಲವೆ ಒಲೆಯಲ್ಲಿ ಸುಟ್ಟ ಮಣ್ಣಿನ ಇಟ್ಟಿಗೆಗಳನ್ನು ಉಪಯೋಗಿಸಲಾಗುತ್ತಿತ್ತು. ಹೆಚ್ಚಿನ ಚಾವಣಿಗಳು ಸಮತಟ್ಟಾಗಿದ್ದವು. ಕೆಲವೊಮ್ಮೆ ಚಾವಣಿಯ ಮೇಲೆ ಒಂದು ಕೋಣೆಯನ್ನು ಕಟ್ಟಲಾಗುತ್ತಿತ್ತು. ಅನೇಕವೇಳೆ, ಅಂಗಳದಲ್ಲಿ ಒಂದು ಒಲೆ ಮತ್ತು ಕೆಲವೊಮ್ಮೆ ಒಂದು ಬಾವಿ ಇಲ್ಲವೆ ನೀರಿನ ತೊಟ್ಟಿ ಇರುತ್ತಿತ್ತು.​—⁠2 ಸಮುವೇಲ 17:18.

ಮನೆಯನ್ನು ಕಟ್ಟುವುದರ ಕುರಿತು ಮೋಶೆಯ ಧರ್ಮಶಾಸ್ತ್ರದಲ್ಲಿ ಅನೇಕ ನಿಯಮಗಳಿದ್ದವು. ಸುರಕ್ಷತೆಗೆ ಪ್ರಾಮುಖ್ಯ ಸ್ಥಾನವನ್ನು ನೀಡಲಾಗಿತ್ತು. ಯಾವುದೇ ಅನಾಹುತ ಸಂಭವಿಸದಂತೆ ಸಮತಟ್ಟಾದ ಚಾವಣಿಯ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕಿತ್ತು. ಮತ್ತೊಬ್ಬನ ಮನೆಯನ್ನು ಆಶಿಸಬಾರದೆಂದು ಹತ್ತನೇ ಆಜ್ಞೆಯು ಇಸ್ರಾಯೇಲ್ಯರನ್ನು ಎಚ್ಚರಿಸಿತ್ತು. ಯಾರಿಗಾದರೂ ತನ್ನ ಮನೆಯನ್ನು ಮಾರಬೇಕಾಗಿ ಬಂದರೆ, ಅವನು ತನ್ನ ಮನೆಯನ್ನು ಮಾರಿದ ಸ್ವಲ್ಪ ಕಾಲದ ವರೆಗೆ ಅದನ್ನು ಪುನಃ ಹಿಂದಕ್ಕೆ ಖರೀದಿಸುವ ಹಕ್ಕನ್ನು ಹೊಂದಿದ್ದನು.​—⁠ವಿಮೋಚನಕಾಂಡ 20:17; ಯಾಜಕಕಾಂಡ 25:​29-33; ಧರ್ಮೋಪದೇಶಕಾಂಡ 22:⁠8.

ಇಸ್ರಾಯೇಲಿನಲ್ಲಿ ಮನೆಯು ಆಧ್ಯಾತ್ಮಿಕ ಬೋಧಿಸುವಿಕೆಯ ಪ್ರಾಮುಖ್ಯ ಸ್ಥಳವಾಗಿಯೂ ಸೇವೆಸಲ್ಲಿಸುತ್ತಿತ್ತು. ಮನೆಯಲ್ಲಿರುವಾಗ ತಂದೆ ತನ್ನ ಮಕ್ಕಳಿಗೆ ದೇವರ ಆವಶ್ಯಕತೆಗಳನ್ನು ಕಲಿಸಬೇಕೆಂದು ನಿರ್ದಿಷ್ಟ ಮಾರ್ಗದರ್ಶನವನ್ನು ನೀಡಲಾಗಿತ್ತು ಮತ್ತು ವಿಗ್ರಹಗಳಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಡಬಾರದಾಗಿತ್ತು.​—⁠ಧರ್ಮೋಪದೇಶಕಾಂಡ 6:​6, 7; 7:26.

[ಚಿತ್ರ]

ಪುರಾತನ ಇಸ್ರಾಯೇಲಿನಲ್ಲಿ, ಪರ್ಣಶಾಲೆಗಳ ಜಾತ್ರೆಯನ್ನು ಆಚರಿಸುವುದು ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಮನೆಗಳನ್ನು ಉಪಯೋಗಿಸಲಾಗುತ್ತಿತ್ತು

[ಪುಟ 12ರಲ್ಲಿರುವ ಚೌಕ/ಚಿತ್ರ]

ಅತ್ಯಾರಂಭದ ಮನೆಗಳು

ಮೊದಲನೇ ಮನುಷ್ಯನಾದ ಆದಾಮನು ಒಂದು ಮನೆಯಲ್ಲಿ ವಾಸಿಸಿದನೆಂದು ಬೈಬಲ್‌ ತಿಳಿಸುವುದಿಲ್ಲ. ಹಾಗಿದ್ದರೂ, ಕಾಯಿನನು “ಒಂದು ಊರನ್ನು ಕಟ್ಟಿ ಅದಕ್ಕೆ ಹನೋಕ ಎಂದು ತನ್ನ ಮಗನ ಹೆಸರಿಟ್ಟನು” ಎಂಬುದಾಗಿ ಆದಿಕಾಂಡ 4:17 ತಿಳಿಸುತ್ತದೆ. ಈ ಊರು ಇಂದಿನ ಮಟ್ಟಗಳಿಗನುಸಾರ ಒಂದು ಸುಭದ್ರವಾದ ಹಳ್ಳಿಯಾಗಿತ್ತು ಅಷ್ಟೆ. ಅಲ್ಲಿ ಯಾವ ರೀತಿಯ ವಸತಿಗಳನ್ನು ಉಪಯೋಗಿಸಲಾಗುತ್ತಿತ್ತು ಎಂಬುದನ್ನು ವೃತ್ತಾಂತವು ತಿಳಿಸುವುದಿಲ್ಲ. ಇಡೀ ಹಳ್ಳಿಯಲ್ಲಿ ಕಾಯಿನನ ಹತ್ತಿರದ ಕುಟುಂಬ ಸದಸ್ಯರೇ ಇದ್ದಿರಬಹುದು.

ಆರಂಭದ ಕಾಲಗಳಲ್ಲಿ ಗುಡಾರಗಳಲ್ಲಿ ವಾಸಿಸುವುದು ಸರ್ವಸಾಮಾನ್ಯವಾಗಿತ್ತು. ಕಾಯಿನನ ವಂಶಜನಾದ ಯಾಬಾಲನನ್ನು “ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು” ಎಂದು ಕರೆಯಲಾಗಿದೆ. (ಆದಿಕಾಂಡ 4:20) ಗುಡಾರಗಳನ್ನು ಹಾಕುವುದು ಮತ್ತು ಅದನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಕೊಂಡೊಯ್ಯುವುದು ಬಹಳ ಸುಲಭವಾಗಿದ್ದಿರಬೇಕು.

ಸಮಯವು ದಾಟಿದಂತೆ, ಅನೇಕ ನಾಗರಿಕತೆಗಳಿಂದಾಗಿ ಹೆಚ್ಚು ವೈಭವವಾದ ಮನೆಗಳಿಂದ ತುಂಬಿದ ಪಟ್ಟಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಉದಾಹರಣೆಗೆ, ಪೂರ್ವಜನಾದ ಅಬ್ರಾಮನು (ಅಬ್ರಹಾಮನು) ಒಮ್ಮೆ ವಾಸಿಸುತ್ತಿದ್ದ ಊರ್‌ ಪಟ್ಟಣದಲ್ಲಿನ ಅವಶೇಷಗಳು ಸೂಚಿಸುವಂತೆ, ಅಲ್ಲಿನ ಕೆಲವು ನಿವಾಸಿಗಳು ಗಾರೆ ಬಳಿದು ಸುಣ್ಣ ಹಚ್ಚಿದ 13ರಿಂದ 14 ಕೋಣೆಗಳುಳ್ಳ ವೈಭವದ ಮನೆಗಳಲ್ಲಿ ವಾಸಿಸುತ್ತಿದ್ದರು. ಅಂಥ ಮನೆಗಳು ಇತರರಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದ ಮತ್ತು ಅವರೂ ಹೊಂದಿರಲು ಇಚ್ಛಿಸುತ್ತಿದ್ದ ಮನೆಗಳಾಗಿದ್ದಿರಬಹುದು.

[ಪುಟ 8, 9ರಲ್ಲಿರುವ ಚಿತ್ರ]

ನೀತಿವಂತರಿಗೆ ಭದ್ರವಾದ ಮನೆಯನ್ನು ದೇವರು ವಾಗ್ದಾನಿಸಿದ್ದಾನೆ