ವಿಮೋಚನಕಾಂಡ 3:1-22

  • ಮೋಶೆ ಮತ್ತು ಉರಿತಿದ್ದ ಮುಳ್ಳಿನ ಪೊದೆ (1-12)

  • ಯೆಹೋವ ತನ್ನ ಹೆಸ್ರಿನ ಅರ್ಥ ವಿವರಿಸಿದನು (13-15)

  • ಯೆಹೋವ ಮೋಶೆಗೆ ಕೊಟ್ಟ ನಿರ್ದೇಶನ (16-22)

3  ಮೋಶೆ ಕುರುಬನಾದ. ಅವನ ಮಾವ ಇತ್ರೋ+ ಮಿದ್ಯಾನಿನ ಪುರೋಹಿತನಾಗಿದ್ದ. ಮೋಶೆ ತನ್ನ ಮಾವನ ಕುರಿಗಳನ್ನ ಮೇಯಿಸ್ತಿದ್ದ. ಒಂದಿನ ಅವನು ಕಾಡಿನ* ಪಶ್ಚಿಮ ದಿಕ್ಕಿಗೆ ಕುರಿಗಳನ್ನ ಕರ್ಕೊಂಡು ಹೋಗ್ತಾ ಸತ್ಯ ದೇವರ ಬೆಟ್ಟಕ್ಕೆ ಅಂದ್ರೆ ಹೋರೇಬ್‌ಗೆ+ ಬಂದ.  ಅಲ್ಲಿ ಅವನಿಗೆ ಮುಳ್ಳಿನ ಪೊದೆಯೊಳಗೆ ಉರಿತಿದ್ದ ಬೆಂಕಿಯಲ್ಲಿ ಯೆಹೋವನ ದೂತ ಕಾಣಿಸ್ಕೊಂಡ.+ ಮೋಶೆ ಆ ಪೊದೆಯನ್ನೇ ನೋಡ್ತಿದ್ದ. ಆ ಮುಳ್ಳಿನ ಪೊದೆಗೆ ಬೆಂಕಿ ಹೊತ್ತಿ ಉರಿತಿದ್ರು ಅದು ಸುಟ್ಟು ಹೋಗಿಲ್ಲ.  ಆಗ ಮೋಶೆ “ಈ ಮುಳ್ಳಿನ ಪೊದೆ ಯಾಕೆ ಸುಟ್ಟು ಹೋಗ್ತಿಲ್ಲಾ? ಹತ್ರ ಹೋಗಿ ನೋಡ್ತೀನಿ” ಅಂದ್ಕೊಂಡ.  ಅವನು ಪೊದೆ ಹತ್ರ ಬರೋದನ್ನ ಯೆಹೋವ ನೋಡಿ ಪೊದೆ ಒಳಗಿಂದ “ಮೋಶೆ! ಮೋಶೆ!” ಅಂತ ಕರೆದನು. ಅದಕ್ಕವನು “ಹೇಳು ಸ್ವಾಮಿ” ಅಂದ.  ಆತನು “ಹತ್ರ ಬರಬೇಡ. ನಿನ್ನ ಚಪ್ಪಲಿ ಬಿಚ್ಚಿಡು. ಯಾಕಂದ್ರೆ ನೀನು ನಿಂತ ಜಾಗ ಪವಿತ್ರವಾಗಿದೆ” ಅಂದನು.  “ನಾನು ನಿನ್ನ ಪೂರ್ವಜರ* ದೇವರು, ಅಬ್ರಹಾಮನ ದೇವರು,+ ಇಸಾಕನ ದೇವರು,+ ಯಾಕೋಬನ ದೇವರು”+ ಅಂದನು. ಆಗ ಮೋಶೆ ಸತ್ಯ ದೇವರನ್ನ ನೋಡೋಕೆ ಭಯಪಟ್ಟು ಮುಖ ಮುಚ್ಕೊಂಡ.  ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ಈಜಿಪ್ಟಲ್ಲಿ ಇರೋ ನನ್ನ ಜನ್ರ ನೋವು ನರಳಾಟವನ್ನ ನಾನು ಕಣ್ಣಾರೆ ನೋಡಿದ್ದೀನಿ. ಈಜಿಪ್ಟ್‌ ಜನ ಅವರನ್ನ ಬಲವಂತವಾಗಿ ದುಡಿಸ್ಕೊಳ್ತಿದ್ದಾರೆ. ಅದನ್ನ ತಾಳಕ್ಕಾಗದೆ ನನ್ನ ಜನ ಸಹಾಯಕ್ಕಾಗಿ ಬೇಡ್ಕೊಳ್ತಿದ್ದಾರೆ. ನಾನು ಅವರ ಪ್ರಾರ್ಥನೆ ಕೇಳಿದ್ದೀನಿ. ಅವರು ಎಷ್ಟು ನೋವು ಅನುಭವಿಸ್ತಾ ಇದ್ದಾರಂತ ನನಗೆ ಚೆನ್ನಾಗಿ ಗೊತ್ತು.+  ಹಾಗಾಗಿ ನಾನು ಇಳಿದುಹೋಗಿ* ಅವರನ್ನ ಈಜಿಪ್ಟ್‌ ಜನ್ರ ಕೈಯಿಂದ ಬಿಡಿಸಿ ಆ ದೇಶದಿಂದ ಕರ್ಕೊಂಡು ಬರ್ತಿನಿ.+ ಅವರನ್ನ ಹಾಲೂ ಜೇನೂ ಹರಿಯೋ+ ವಿಶಾಲವಾದ ಒಳ್ಳೇ ದೇಶಕ್ಕೆ ಅಂದ್ರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರೋ ಪ್ರದೇಶಕ್ಕೆ ಕರ್ಕೊಂಡು ಹೋಗ್ತೀನಿ.+  ಇಸ್ರಾಯೇಲ್ಯರ ಕೂಗು ನನಗೆ ಮುಟ್ಟಿದೆ. ಈಜಿಪ್ಟ್‌ ಜನ್ರು ಅವರ ಮೇಲೆ ಎಷ್ಟು ಕ್ರೂರವಾಗಿ ದಬ್ಬಾಳಿಕೆ ನಡೆಸ್ತಿದ್ದಾರೆ ಅಂತ ನಾನು ನೋಡ್ದೆ.+ 10  ಅದಕ್ಕೆ ನಿನ್ನನ್ನ ಫರೋಹನ ಹತ್ರ ಕಳಿಸ್ತೀನಿ. ನನ್ನ ಜನರಾದ ಇಸ್ರಾಯೇಲ್ಯರನ್ನ ನೀನು ಈಜಿಪ್ಟಿಂದ ಕರ್ಕೊಂಡು ಬರಬೇಕು”+ ಅಂದನು. 11  ಆದ್ರೆ ಮೋಶೆ ಸತ್ಯ ದೇವರಿಗೆ “ಫರೋಹನ ಹತ್ರ ಹೋಗೋಕೆ, ಈಜಿಪ್ಟಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬರೋಕೆ ನನಗೆ ಯಾವ ಯೋಗ್ಯತೆನೂ ಇಲ್ಲ” ಅಂದ. 12  ದೇವರು “ನಾನು ನಿನ್ನ ಜೊತೆ ಇರ್ತಿನಿ.+ ನೀನು ನನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ ಮೇಲೆ ನೀವೆಲ್ಲ ಇದೇ ಬೆಟ್ಟದಲ್ಲಿ ಸತ್ಯ ದೇವರಾದ ನನ್ನನ್ನ ಆರಾಧನೆ* ಮಾಡ್ತೀರ. ನಾನೇ ನಿನ್ನನ್ನ ಕಳಿಸಿದ್ದು ಅನ್ನೋದಕ್ಕೆ ಇದೇ ಗುರುತು”+ ಅಂದನು. 13  ಆದ್ರೆ ಮೋಶೆ ಸತ್ಯ ದೇವರಿಗೆ “ನಾನು ಇಸ್ರಾಯೇಲ್ಯರ ಹತ್ರ ಹೋಗಿ ‘ನಿಮ್ಮ ಪೂರ್ವಜರ ದೇವರು ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’ ಅಂದಾಗ ‘ಆತನ ಹೆಸರೇನು?’+ ಅಂತ ಅವರು ಕೇಳಿದ್ರೆ ನಾನೇನು ಹೇಳಲಿ?” ಅಂತ ಕೇಳಿದ. 14  ದೇವರು ಅವನಿಗೆ “ನಾನು ಏನಾಗಬೇಕು ಅಂತ ಇಷ್ಟಪಡ್ತಿನೋ* ಹಾಗೇ ಆಗ್ತೀನಿ”*+ ಅಂದನು. “‘ಆಗ್ತೀನಿ ಅನ್ನೋ ಹೆಸ್ರು ಇರೋ ದೇವರೇ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’+ ಅಂತ ನೀನು ಇಸ್ರಾಯೇಲ್ಯರಿಗೆ ಹೇಳಬೇಕು” ಅಂದನು. 15  ದೇವರು ಮತ್ತೆ ಮೋಶೆಗೆ ಹೀಗಂದನು: “‘ನಿಮ್ಮ ಪೂರ್ವಜರ ದೇವರು, ಅಬ್ರಹಾಮನ ದೇವರು,+ ಇಸಾಕನ ದೇವರು,+ ಯಾಕೋಬನ ದೇವರು+ ಆದ ಯೆಹೋವ ನನ್ನನ್ನ ನಿಮ್ಮ ಹತ್ರ ಕಳಿಸಿದ್ದಾನೆ’ ಅಂತ ನೀನು ಇಸ್ರಾಯೇಲ್ಯರಿಗೆ ಹೇಳಬೇಕು. ಸದಾಕಾಲಕ್ಕೂ ಇದೇ ನನ್ನ ಹೆಸ್ರು.+ ಎಲ್ಲ ಪೀಳಿಗೆಯವರು ಇದೇ ಹೆಸರಿಂದ ನನ್ನನ್ನ ನೆನಪಿಸ್ಕೊಳ್ಳಬೇಕು. 16  ನೀನೀಗ ಹೋಗಿ ಇಸ್ರಾಯೇಲ್ಯರ ಹಿರಿಯರನ್ನ ಸೇರಿಸಿ ಅವರಿಗೆ ‘ನಿಮ್ಮ ಪೂರ್ವಜರ ದೇವರು, ಅಬ್ರಹಾಮ, ಇಸಾಕ ಮತ್ತು ಯಾಕೋಬನ ದೇವರು ಆದ ಯೆಹೋವ ನನಗೆ ಕಾಣಿಸ್ಕೊಂಡನು. ಆತನು “ನಾನು ನಿಮ್ಮ ಪರಿಸ್ಥಿತಿಯನ್ನ ಕಣ್ಣಾರೆ ನೋಡಿದ್ದೀನಿ,+ ಈಜಿಪ್ಟಲ್ಲಿ ನೀವು ಎಷ್ಟು ಕಷ್ಟ ಪಡ್ತಾ ಇದ್ದೀರಂತ ನೋಡಿದ್ದೀನಿ. 17  ಹಾಗಾಗಿ ನಾನು ನಿಮಗೆ ಮಾತು ಕೊಡ್ತೀನಿ. ಏನಂದ್ರೆ ನಿಮಗೆ ಕಷ್ಟ ನೋವು ಕೊಡ್ತಿರೋ ಈಜಿಪ್ಟ್‌ ಜನ್ರಿಂದ ನಿಮ್ಮನ್ನ ಬಿಡಿಸ್ತೀನಿ.+ ಕಾನಾನ್ಯರು, ಹಿತ್ತಿಯರು, ಅಮೋರಿಯರು,+ ಪೆರಿಜೀಯರು, ಹಿವ್ವಿಯರು, ಯೆಬೂಸಿಯರು+ ವಾಸಿಸ್ತಾ ಇರೋ ಹಾಲೂ ಜೇನೂ ಹರಿಯೋ ಕಾನಾನ್‌ ದೇಶಕ್ಕೆ ನಿಮ್ಮನ್ನು ಕರ್ಕೊಂಡು ಹೋಗ್ತೀನಿ”+ ಅಂದಿದ್ದಾನೆ’ ಅಂತ ಹೇಳು. 18  ಅವರು ನಿನ್ನ ಮಾತು ಕೇಳೇ ಕೇಳ್ತಾರೆ.+ ನೀನು ಇಸ್ರಾಯೇಲ್ಯರ ಹಿರಿಯರ ಜೊತೆ ಈಜಿಪ್ಟಿನ ರಾಜನ ಹತ್ರ ಹೋಗಿ ಅವನಿಗೆ ‘ಇಬ್ರಿಯರ+ ದೇವರಾದ ಯೆಹೋವ ನಮ್ಮ ಜೊತೆ ಮಾತಾಡಿದ್ದಾನೆ. ನಾವು ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸೋಕೆ ಮೂರು ದಿನ ಪ್ರಯಾಣಮಾಡಿ ಕಾಡಿಗೆ ಹೋಗಬೇಕು. ದಯವಿಟ್ಟು ಅನುಮತಿ ಕೊಡು’+ ಅಂತ ಹೇಳಬೇಕು. 19  ಆದ್ರೆ ಅವನು ಅನುಮತಿ ಕೊಡಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಜಿಪ್ಟಿನ ರಾಜನ ವಿರುದ್ಧ ನಾನು ನನ್ನ ಶಕ್ತಿ ತೋರಿಸ್ತೀನಿ.* ಆಗ ಅವನು ನಿಮ್ಮನ್ನ ಕಳಿಸ್ಲೇ ಬೇಕಾಗುತ್ತೆ.+ 20  ನಾನು ಕೈಚಾಚಿ ಈಜಿಪ್ಟಲ್ಲಿ ತುಂಬ ಅದ್ಭುತಗಳನ್ನ ಮಾಡಿ ಆ ದೇಶಕ್ಕೆ ಶಿಕ್ಷೆ ಕೊಡಬೇಕಾಗುತ್ತೆ. ಆಮೇಲೆ ಅವನು ನಿಮ್ಮನ್ನ ಕಳಿಸ್ತಾನೆ.+ 21  ನೀವು ಅಲ್ಲಿಂದ ಬರಿಗೈಲಿ ಬರಲ್ಲ. ಯಾಕಂದ್ರೆ ನನ್ನ ಜನರಾದ ನೀವು ಆ ದೇಶ ಬಿಟ್ಟು ಹೋಗುವಾಗ ಈಜಿಪ್ಟ್‌ ಜನರು ನಿಮಗೆ ದಯೆ ತೋರಿಸೋ ಹಾಗೆ ಮಾಡ್ತೀನಿ.+ 22  ಪ್ರತಿಯೊಬ್ಬ ಇಸ್ರಾಯೇಲ್ಯ ಸ್ತ್ರೀ, ಅಕ್ಕಪಕ್ಕ ಮನೆಯ ಸ್ತ್ರೀಯಿಂದ, ತನ್ನ ಮನೆಯಲ್ಲಿ ವಾಸಿಸೋ ವಿದೇಶೀ ಸ್ತ್ರೀಯಿಂದ ಚಿನ್ನಬೆಳ್ಳಿಯ ಒಡವೆಗಳನ್ನ, ಬಟ್ಟೆಗಳನ್ನ ಕೇಳಬೇಕು. ಅವನ್ನ ನೀವು ನಿಮ್ಮ ಗಂಡುಹೆಣ್ಣು ಮಕ್ಕಳಿಗೆ ಹಾಕಿ. ಹೀಗೆ ನೀವು ಈಜಿಪ್ಟ್‌ ಜನ್ರನ್ನ ಲೂಟಿ ಮಾಡ್ತೀರ.”+

ಪಾದಟಿಪ್ಪಣಿ

ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಅಕ್ಷ. “ತಂದೆಯ.”
ಅಥವಾ “ಅವರ ಕಡೆಗೆ ಗಮನಹರಿಸಿ.”
ಅಕ್ಷ. “ಸೇವೆ.”
ಅಥವಾ “ಆರಿಸಿಕೊಳ್ತಿನೋ.”
ಅಥವಾ “ನಾನು ಏನಾಗಿ ಪರಿಣಮಿಸಬೇಕೋ ಅದಾಗಿ ಪರಿಣಮಿಸ್ತೀನಿ.” ಪರಿಶಿಷ್ಟ ಎ4 ನೋಡಿ.
ಅಕ್ಷ. “ಈಜಿಪ್ಟಿನ ರಾಜನನ್ನ ನನ್ನ ಬಲಿಷ್ಠ ಕೈ ಒತ್ತಾಯ ಮಾಡಿದಾಗ.”