ಎರಡನೇ ಸಮುವೇಲ 17:1-29

  • ಅಹೀತೋಫೆಲನ ಸಲಹೆಯನ್ನ ಹೂಷೈ ಕೆಡಿಸಿದ (1-14)

  • ದಾವೀದನಿಗೆ ಎಚ್ಚರಿಕೆ, ಅವನು ಅಬ್ಷಾಲೋಮನಿಂದ ತಪ್ಪಿಸ್ಕೊಂಡ (15-29)

    • ಬರ್ಜಿಲೈ ಮತ್ತು ಬೇರೆಯವರು ಸಹಾಯ ಮಾಡಿದ್ರು (27-29)

17  ಆಮೇಲೆ ಅಹೀತೋಫೆಲ ಅಬ್ಷಾಲೋಮನಿಗೆ “ನಾನು 12,000 ಗಂಡಸ್ರನ್ನ ಆರಿಸ್ಕೊಂಡು, ಇವತ್ತು ರಾತ್ರಿನೇ ದಾವೀದನ ಹಿಂದೆ ಹೋಗೋಕೆ ದಯವಿಟ್ಟು ಅನುಮತಿ ಕೊಡು.  ದಾವೀದ ದಣಿದಾಗ, ಬಲ ಕಳ್ಕೊಂಡಾಗ*+ ನಾನು ಅವನ ಮೇಲೆ ದಾಳಿ ಮಾಡಿ ಭಯಪಡಿಸ್ತೀನಿ. ಆಗ ರಾಜನ ಜೊತೆ ಇರೋ ಜನ್ರೆಲ್ಲ ಅವನನ್ನ ಬಿಟ್ಟು ಓಡಿಹೋಗ್ತಾರೆ. ಆಮೇಲೆ ಅವನನ್ನ ಸಾಯಿಸ್ತೀನಿ.+  ಎಲ್ಲ ಜನ್ರನ್ನ ನಿನ್ನ ಹತ್ರ ಕರ್ಕೊಂಡು ಬರ್ತಿನಿ. ನೀನು ಹುಡುಕ್ತಿರೋ ವ್ಯಕ್ತಿಯನ್ನ ನಾಶಮಾಡಿದ್ರೆ ಮಾತ್ರ ಅವರು ನಿನ್ನ ಹತ್ರ ವಾಪಸ್‌ ಬರ್ತಾರೆ, ಸಮಾಧಾನವಾಗಿ ಇರ್ತಾರೆ” ಅಂದ.  ಈ ಸಲಹೆ ಅಬ್ಷಾಲೋಮನಿಗೆ, ಇಸ್ರಾಯೇಲಿನ ಎಲ್ಲ ಹಿರಿಯರಿಗೆ ಇಷ್ಟ ಆಯ್ತು.  ಆದ್ರೂ ಅಬ್ಷಾಲೋಮ “ಅರ್ಕೀಯನಾದ ಹೂಷೈಯನ್ನ+ ದಯವಿಟ್ಟು ಕರಿರಿ. ಅವನ ಅಭಿಪ್ರಾಯ ಕೇಳಿ ನೋಡೋಣ” ಅಂದ.  ಹೂಷೈ ಅಬ್ಷಾಲೋಮನ ಹತ್ರ ಬಂದಾಗ “ಅಹೀತೋಫೆಲ ನಮಗೆ ಈ ಸಲಹೆ ಕೊಟ್ಟಿದ್ದಾನೆ. ಅವನ ಸಲಹೆ ತರ ನಾವು ಮಾಡೋದಾ? ಬೇರೆ ಏನು ಮಾಡಬೇಕಂತ ನಮಗೆ ಹೇಳು” ಅಂದ.  ಅದಕ್ಕೆ ಹೂಷೈ ಅಬ್ಷಾಲೋಮನಿಗೆ “ಈ ಸಲ ಅಹೀತೋಫೆಲ ಕೊಟ್ಟ ಸಲಹೆ ಸರಿಯಾಗಿಲ್ಲ!”+ ಅಂದ.  ಆಮೇಲೆ ಹೂಷೈ “ನಿನ್ನ ತಂದೆ, ಅವನ ಜೊತೆ ಇರೋ ಗಂಡಸ್ರು ಶಕ್ತಿಶಾಲಿಗಳು,+ ಅವರು ಮರಿಗಳನ್ನ ಕಳ್ಕೊಂಡಿರೋ ಕರಡಿ+ ತರ ಕ್ರೂರಿಗಳು ಅಂತ ನಿನಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ, ನಿನ್ನ ತಂದೆ ವೀರ ಸೈನಿಕ.+ ಅವನು ಜನ್ರ ಮಧ್ಯದಲ್ಲಿ ರಾತ್ರಿ ಕಳೆಯಲ್ಲ.  ಈ ಕ್ಷಣದಲ್ಲಿ ಅವನು ಗವಿಯಲ್ಲೋ* ಬೇರೆಲ್ಲೋ ಅಡಗಿಕೊಂಡಿರ್ತಾನೆ.+ ಅವನು ಮೊದ್ಲು ದಾಳಿ ಮಾಡಿದ್ರೆ ಅದನ್ನ ಕೇಳಿಸ್ಕೊಳ್ಳುವವರು ‘ಅಬ್ಷಾಲೋಮನ ಪಕ್ಷದ ಜನ ಸೋತುಹೋದ್ರು!’ ಅಂತಾರೆ. 10  ಇಂಥ ಮಾತನ್ನ ಕೇಳಿಸ್ಕೊಂಡ್ರೆ ಸಿಂಹದಂಥ ಹೃದಯ ಇರೋ ವ್ಯಕ್ತಿ+ ಕೂಡ ಭಯದಿಂದ ನಡುಗಿಹೋಗ್ತಾನೆ. ಯಾಕಂದ್ರೆ ನಿನ್ನ ತಂದೆ ಬಲಶಾಲಿ,+ ಅವನ ಜೊತೆ ಇರೋ ಗಂಡಸ್ರು ಕೂಡ ಧೈರ್ಯಶಾಲಿಗಳು ಅಂತ ಇಡೀ ಇಸ್ರಾಯೇಲಿಗೆ ಗೊತ್ತು. 11  ನಾನು ಕೊಡೋ ಸಲಹೆ ಏನಂದ್ರೆ: ದಾನಿಂದ ಬೇರ್ಷೆಬದ+ ತನಕ ಸಮುದ್ರದ ಮರಳಿನ ಕಣಗಳಷ್ಟು ಇರೋ ಎಲ್ಲ ಇಸ್ರಾಯೇಲ್ಯರನ್ನ+ ನೀನು ಸೇರಿಸಬೇಕು. ಯುದ್ಧದಲ್ಲಿ ಅವ್ರ ಮುಂದಾಳತ್ವ ವಹಿಸಬೇಕು. 12  ಅವನು ನಮಗೆ ಎಲ್ಲಿ ಸಿಗ್ತಾನೋ ನಾವು ಅಲ್ಲೇ ಅವನ ಮೇಲೆ ದಾಳಿ ಮಾಡೋಣ. ನೆಲದ ಮೇಲೆ ಬೀಳೋ ಇಬ್ಬನಿ ತರ ನಾವು ಅವನ ಮೇಲೆ ಬೀಳೋಣ. ಆಗ ಅವನಾಗ್ಲಿ, ಅವನ ಗಂಡಸರಾಗ್ಲಿ ಯಾರೂ ಉಳಿಯಲ್ಲ. 13  ಅವನು ಹಿಂದೆ ಸರಿದು ಪಟ್ಟಣಕ್ಕೆ ಓಡಿ ಹೋದ್ರೆ, ನಾವು ಎಲ್ಲ ಇಸ್ರಾಯೇಲ್ಯರನ್ನ ಕರ್ಕೊಂಡು ಹೋಗಿ ಆ ಪಟ್ಟಣವನ್ನ ನಾಶ ಮಾಡೋಣ. ಹಗ್ಗಗಳನ್ನ ತಗೊಂಡು ಆ ಪಟ್ಟಣದ ಒಂದು ನುಣುಪಾದ ಕಲ್ಲು ಸಹ ಉಳಿಯದ ಹಾಗೆ ಎಳೆದು ಕಣಿವೆಗೆ ಹಾಕೋಣ” ಅಂದ. 14  ಆಗ ಅಬ್ಷಾಲೋಮ, ಇಸ್ರಾಯೇಲಿನ ಎಲ್ಲ ಗಂಡಸ್ರು “ಅಹೀತೋಫೆಲನ ಸಲಹೆಗಿಂತ ಅರ್ಕೀಯನಾದ ಹೂಷೈ ಸಲಹೆ ಚೆನ್ನಾಗಿದೆ!”+ ಅಂದ್ರು. ಅಹೀತೋಫೆಲನ ಸಲಹೆ ತರ ನಡಿಬಾರದು ಅಂತ ಯೆಹೋವನೇ ತೀರ್ಮಾನಿಸಿದ್ರಿಂದ* ಹೀಗಾಯ್ತು.+ ಯಾಕಂದ್ರೆ ಯೆಹೋವ ಅಬ್ಷಾಲೋಮನ ಮೇಲೆ ಕಷ್ಟ ತರಬೇಕಂತ ಇದ್ದನು.+ 15  ಆಮೇಲೆ ಹೂಷೈ ಪುರೋಹಿತರಾದ ಚಾದೋಕ, ಎಬ್ಯಾತಾರಗೆ+ ಹೀಗಂದ: “ಅಬ್ಷಾಲೋಮನಿಗೆ, ಇಸ್ರಾಯೇಲಿನ ಹಿರಿಯರಿಗೆ ಅಹೀತೋಫೆಲ ಕೊಟ್ಟ ಸಲಹೆ ಮತ್ತು ನಾನು ಕೊಟ್ಟ ಸಲಹೆ ಹೀಗಿತ್ತು. 16  ಈಗ ದಾವೀದನಿಗೆ ತಕ್ಷಣ ಸುದ್ದಿ ಕಳಿಸಿ ಅವನಿಗೆ ಹೀಗೆ ಎಚ್ಚರಿಸಿ: ‘ಇವತ್ತು ರಾತ್ರಿ ಕಾಡಿನ ನದಿದಾಟೋ ಜಾಗಗಳ ಹತ್ರ ಇರಬೇಡ. ದಾಟಿಹೋಗು, ಇಲ್ಲದಿದ್ರೆ ರಾಜ, ಅವನ ಜೊತೆ ಇರೋ ಜನ ನಾಶ ಆಗ್ತಾರೆ.’”+ 17  ಯೋನಾತಾನ,+ ಅಹೀಮಾಚ+ ಯಾರಿಗೂ ಕಾಣಿಸ್ಕೊಳ್ಳದ ಹಾಗೆ ಪಟ್ಟಣದ ಹೊರಗೆ ಏನ್‌-ರೋಗೆಲ್‌+ ಹತ್ರ ವಾಸ ಇದ್ರು. ಒಬ್ಬ ದಾಸಿ ಬಂದು ನಡೆದ ವಿಷ್ಯವನ್ನೆಲ್ಲ ಅವ್ರಿಗೆ ಹೇಳಿದಳು. ಆಗ ಅವರು ಬೇಗ ಬೇಗ ಹೋಗಿ ಅದನ್ನ ರಾಜ ದಾವೀದನಿಗೆ ಹೇಳಿದ್ರು. 18  ಹಾಗಿದ್ರೂ ಯುವಕನೊಬ್ಬ ಅವರಿಬ್ರನ್ನ ನೋಡಿ ಅದನ್ನ ಬಂದು ಅಬ್ಷಾಲೋಮನಿಗೆ ಹೇಳಿದ. ಹಾಗಾಗಿ ಅವರಿಬ್ರೂ ತಕ್ಷಣ ಅಲ್ಲಿಂದ ಬಹುರೀಮಲ್ಲಿದ್ದ+ ಒಬ್ಬನ ಮನೆಗೆ ಬಂದ್ರು. ಆ ಮನೆ ಅಂಗಳದಲ್ಲಿ ಒಂದು ಬಾವಿ ಇತ್ತು. ಅವರು ಆ ಬಾವಿ ಒಳಗೆ ಇಳಿದ್ರು. 19  ಆ ಮನೆಯವನ ಹೆಂಡತಿ ಆ ಬಾವಿ ಮೇಲೆ ಬಟ್ಟೆ ಹಾಸಿ ಅದ್ರ ಮೇಲೆ ಧಾನ್ಯದ ನುಚ್ಚನ್ನ ಹರಡಿದಳು. ಇದ್ರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. 20  ಅಬ್ಷಾಲೋಮನ ಸೇವಕರು ಆ ಸ್ತ್ರೀ ಮನೆಗೆ ಬಂದು “ಅಹೀಮಾಚ, ಯೋನಾತಾನರು ಎಲ್ಲಿ?” ಅಂತ ಕೇಳಿದ್ರು. ಅದಕ್ಕೆ ಅವಳು “ಅವರು ನದಿ ಕಡೆಗೆ ಹೋದ್ರು”+ ಅಂದಳು. ಆಮೇಲೆ ಆ ಗಂಡಸ್ರು ಅವ್ರನ್ನ ಹುಡುಕಿದ್ರು, ಆದ್ರೆ ಸಿಗಲಿಲ್ಲ. ಹಾಗಾಗಿ ಅವರು ಯೆರೂಸಲೇಮಿಗೆ ವಾಪಸ್‌ ಬಂದ್ರು. 21  ಆ ಗಂಡಸರು ಹೋದ ಮೇಲೆ ಅವರು ಬಾವಿಯಿಂದ ಮೇಲಕ್ಕೆ ಬಂದು ರಾಜ ದಾವೀದನಿಗೆ ಸುದ್ದಿ ಮುಟ್ಟಿಸಿದ್ರು. ಅವರು ಅವನಿಗೆ “ನಿನ್ನ ವಿರುದ್ಧ ಅಹೀತೋಫೆಲ ಹೀಗೆ ಸಲಹೆ ಕೊಟ್ಟಿದ್ದಾನೆ.+ ಬೇಗ ನದಿ ದಾಟು” ಅಂದ್ರು. 22  ತಕ್ಷಣ ದಾವೀದ, ಅವನ ಜೊತೆ ಇದ್ದ ಎಲ್ಲ ಜನರು ಯೋರ್ದನ್‌ ನದಿ ದಾಟಿದ್ರು. ಒಬ್ಬರನ್ನೂ ಬಿಡದೆ ಎಲ್ರೂ ಬೆಳಗಾಗೋ ಮುಂಚೆ ಯೋರ್ದನ್‌ ನದಿ ದಾಟಿದ್ರು. 23  ತಾನು ಕೊಟ್ಟ ಸಲಹೆ ತರ ಮಾಡಲಿಲ್ಲ ಅಂತ ಅಹೀತೋಫೆಲನಿಗೆ ಗೊತ್ತಾದಾಗ ಕತ್ತೆ ಮೇಲೆ ಕೂತು ತನ್ನ ಊರಿಗೆ ಹೋದ.+ ಅಲ್ಲಿ ತನ್ನ ಕುಟುಂಬಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿ+ ನೇಣು ಹಾಕೊಂಡು* ಸತ್ತುಹೋದ.+ ಅವನನ್ನ ಅವನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ರು. 24  ದಾವೀದ ಮಹನಯಿಮಿಗೆ+ ಹೋದ. ಅಬ್ಷಾಲೋಮ ಇಸ್ರಾಯೇಲಿನ ಎಲ್ಲ ಗಂಡಸ್ರ ಜೊತೆ ಯೋರ್ದನ್‌ ನದಿ ದಾಟಿದ. 25  ಅಬ್ಷಾಲೋಮ ಯೋವಾಬನ+ ಜಾಗದಲ್ಲಿ ಅಮಾಸನನ್ನ+ ಸೇನಾಪತಿಯಾಗಿ ಮಾಡಿದ. ಇಸ್ರಾಯೇಲ್ಯನಾದ ಇತ್ರ ಅನ್ನೋನು ನಾಹಾಷನ ಮಗಳಾದ ಅಬೀಗೈಲ+ ಜೊತೆ ಸಂಬಂಧ ಇಟ್ಕೊಂಡಿದ್ದ. ಇವರಿಬ್ರಿಗೆ ಹುಟ್ಟಿದವನೇ ಈ ಅಮಾಸ. ಅಬೀಗೈಲ ಯೋವಾಬನ ತಾಯಿಯಾಗಿದ್ದ ಚೆರೂಯಳ ಸಹೋದರಿ. 26  ಅಬ್ಷಾಲೋಮ, ಅವನ ಜೊತೆ ಇದ್ದ ಇಸ್ರಾಯೇಲ್ಯರು ಗಿಲ್ಯಾದ್‌+ ಪ್ರದೇಶದಲ್ಲಿ ಪಾಳೆಯ ಹೂಡಿದ್ರು. 27  ದಾವೀದ ಮಹನಯಿಮಿಗೆ ಬಂದ ಕೂಡ್ಲೇ ಅಮ್ಮೋನಿಯರ ರಬ್ಬಾದಿಂದ+ ಬಂದಿದ್ದ ನಾಹಾಷನ ಮಗ ಶೋಬಿ, ಲೋದೆಬಾರಿಂದ ಬಂದಿದ್ದ ಅಮ್ಮೀಯೇಲನ ಮಗ ಮಾಕೀರ,+ ರೋಗೆಲೀಮಿಂದ ಬಂದಿದ್ದ ಗಿಲ್ಯಾದ್ಯನಾದ ಬರ್ಜಿಲೈ+ ಬಂದ್ರು. 28  ಅವರು ಹಾಸಿಗೆ, ಬೋಗುಣಿ, ಮಡಕೆ, ಗೋದಿ, ಬಾರ್ಲಿ,* ಹಿಟ್ಟು, ಸುಟ್ಟ ಧಾನ್ಯ, ಎರಡು ರೀತಿಯ ಅವರೆ ಕಾಳು, ಒಣ ಧಾನ್ಯ, 29  ಜೇನುತುಪ್ಪ, ಬೆಣ್ಣೆ, ಕುರಿಗಳು, ಗಿಣ್ಣು* ತಂದಿದ್ರು. “ಜನ್ರು ಕಾಡಲ್ಲಿ ಹಸಿದಿರ್ತಾರೆ, ದಣಿದಿರ್ತಾರೆ, ಬಾಯಾರಿರ್ತಾರೆ” ಅಂದ್ಕೊಂಡು ಇದನ್ನೆಲ್ಲಾ ದಾವೀದನಿಗಾಗಿ, ಅವನ ಜೊತೆ ಇದ್ದ ಜನ್ರಿಗಾಗಿ ತಂದಿದ್ರು.+

ಪಾದಟಿಪ್ಪಣಿ

ಅಥವಾ “ಅವನ ಎರಡೂ ಕೈ ಬಲ ಕಳ್ಕೊಂಡಾಗ.”
ಅಥವಾ “ಗುಂಡಿಗಳಲ್ಲೋ, ಕೊರಕಲು ದಾರಿಗಳಲ್ಲೋ.”
ಅಥವಾ “ಆಜ್ಞೆ ಕೊಟ್ಟದ್ರಿಂದ.”
ಅಥವಾ “ಕತ್ತುಹಿಸುಕಿಕೊಂಡು.”
ಅಥವಾ “ಜವೆಗೋದಿ.”
ಅಕ್ಷ. “ಹಸುವಿನ ಮೊಸರು.”