ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಎಂದೆಂದಿಗೂ ಯೆಹೋವನ ಹೆಸರಿನಲ್ಲಿ ನಡೆಯುವೆವು!

ನಾವು ಎಂದೆಂದಿಗೂ ಯೆಹೋವನ ಹೆಸರಿನಲ್ಲಿ ನಡೆಯುವೆವು!

ನಾವು ಎಂದೆಂದಿಗೂ ಯೆಹೋವನ ಹೆಸರಿನಲ್ಲಿ ನಡೆಯುವೆವು!

“ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”​—ಮೀಕ 4:5.

1. ಮೀಕ 3ರಿಂದ 5ನೆಯ ಅಧ್ಯಾಯಗಳಲ್ಲಿ ಯಾವ ಸಂದೇಶಗಳು ಅಡಕವಾಗಿವೆ?

ಯೆಹೋವನು ತನ್ನ ಜನರಿಗೆ ಏನೋ ತಿಳಿಸಲಿಕ್ಕಿದ್ದಾನೆ, ಮತ್ತು ಆತನು ಮೀಕನನ್ನು ತನ್ನ ಪ್ರವಾದಿಯಾಗಿ ಉಪಯೋಗಿಸುತ್ತಾನೆ. ದುಷ್ಕರ್ಮಿಗಳ ವಿರುದ್ಧ ಕ್ರಮಕೈಕೊಳ್ಳುವುದು ದೇವರ ಉದ್ದೇಶವಾಗಿದೆ. ಇಸ್ರಾಯೇಲಿನ ಧರ್ಮಭ್ರಷ್ಟತೆಗಾಗಿ ಆತನು ಅದಕ್ಕೆ ಶಿಕ್ಷೆ ವಿಧಿಸಲಿದ್ದಾನೆ. ಆದರೆ ಸಂತೋಷದ ವಿಷಯವೇನಂದರೆ, ಯೆಹೋವನು ತನ್ನ ಹೆಸರಿನಲ್ಲಿ ನಡೆಯುವವರನ್ನು ಆಶೀರ್ವದಿಸುವನು. ಮೀಕನ ಪ್ರವಾದನೆಯ 3ರಿಂದ 5ನೆಯ ಅಧ್ಯಾಯಗಳಲ್ಲಿ ಈ ಸಂದೇಶಗಳು ಸ್ಪಷ್ಟವಾಗಿ ಹೊರಹೊಮ್ಮುತ್ತವೆ.

2, 3. (ಎ) ಇಸ್ರಾಯೇಲಿನ ಮುಖಂಡರು ಯಾವ ಗುಣವನ್ನು ತೋರಿಸಬೇಕಿತ್ತು, ಆದರೆ ಅವರು ನಿಜವಾಗಿಯೂ ಏನು ಮಾಡುತ್ತಿದ್ದಾರೆ? (ಬಿ) ಮೀಕ 3:2, 3ರಲ್ಲಿ ಉಪಯೋಗಿಸಲ್ಪಟ್ಟಿರುವ ರೂಪಕಗಳನ್ನು ನೀವು ಹೇಗೆ ವಿವರಿಸುವಿರಿ?

2 ದೇವರ ಪ್ರವಾದಿಯು ಘೋಷಿಸುವುದು: “ಯಾಕೋಬಿನ ಮುಖಂಡರೇ, ಇಸ್ರಾಯೇಲ್‌ ವಂಶದ ಅಧ್ಯಕ್ಷರೇ, ಕೇಳಿರಿ, ಕೇಳಿರಿ! ನ್ಯಾಯವನ್ನು ಮಂದಟ್ಟುಮಾಡಿಕೊಳ್ಳುವದು ನಿಮ್ಮ ಧರ್ಮವಲ್ಲವೆ.” ಹೌದು, ಅದು ಅವರ ಧರ್ಮವಾಗಿತ್ತು. ಆದರೆ ಅವರು ನಿಜವಾಗಿಯೂ ಏನು ಮಾಡುತ್ತಿದ್ದಾರೆ? ಮೀಕನು ಹೇಳುವುದು: “ಆಹಾ, ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದನ್ನು ಪ್ರೀತಿಸುತ್ತಾರೆ, ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ, ಅವರ ಎಲುಬುಗಳಿಂದ ಮಾಂಸವನ್ನು ಕಿತ್ತುಬಿಡುತ್ತಾರೆ; ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ, ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ; ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ.”​—ಮೀಕ 3:​1-3

3 ಹೌದು, ಈ ಮುಖಂಡರು ಬಡವರೂ, ನಿಸ್ಸಹಾಯಕರೂ, ಕುರಿಗಳಂತಿರುವವರೂ ಆಗಿರುವ ಜನರನ್ನು ಶೋಷಣೆಗೊಳಪಡಿಸುತ್ತಿದ್ದಾರೆ! ಇಲ್ಲಿ ಉಪಯೋಗಿಸಲಾಗಿರುವ ರೂಪಕಗಳನ್ನು ಮೀಕನಿಗೆ ಕಿವಿಗೊಡುತ್ತಿದ್ದವರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಕೊಯ್ದ ಕುರಿಯನ್ನು ಬೇಯಿಸುವ ಮೊದಲು ಅದರ ಚರ್ಮವನ್ನು ಸುಲಿದು, ತುಂಡುತುಂಡಾಗಿ ಕತ್ತರಿಸಲಾಗುತ್ತದೆ. ಕೆಲವು ಸಲ ಎಲುಬುಗಳನ್ನು ಒಡೆದು ಮಜ್ಜೆಯನ್ನು ತೆಗೆಯಲಾಗುತ್ತದೆ. ಮೀಕನು ಹೇಳಿರುವಂತಹ ರೀತಿಯ ದೊಡ್ಡ ಪಾತ್ರೆಯಲ್ಲಿ ಮಾಂಸವನ್ನೂ ಎಲುಬುಗಳನ್ನೂ ಬೇಯಿಸಲಾಗುತ್ತದೆ. (ಯೆಹೆಜ್ಕೇಲ 24:3-5, 10) ಮೀಕನ ದಿನದಲ್ಲಿ ಆ ದುಷ್ಟ ಮುಖಂಡರಿಂದ ಜನರು ಅನುಭವಿಸುವಂತಹ ದೌರ್ಜನ್ಯಕರ ಉಪಚಾರದ ಎಷ್ಟು ಸಮಂಜಸವಾದ ದೃಷ್ಟಾಂತವಿದು!

ನಾವು ನ್ಯಾಯವನ್ನು ತೋರಿಸಬೇಕೆಂಬುದು ಯೆಹೋವನ ಅಪೇಕ್ಷೆ

4. ಯೆಹೋವನ ಮತ್ತು ಇಸ್ರಾಯೇಲಿನ ಮುಖಂಡರ ಮಧ್ಯೆ ಯಾವ ತಾರತಮ್ಯವಿದೆ?

4 ಪ್ರೀತಿಪರ ಕುರುಬನಾದ ಯೆಹೋವನ ಮತ್ತು ಇಸ್ರಾಯೇಲಿನ ಮುಖಂಡರ ಮಧ್ಯೆ ಎದ್ದುಕಾಣುವ ತಾರತಮ್ಯವಿದೆ. ಅವರು ನ್ಯಾಯವನ್ನು ತೋರಿಸದಿರುವುದರಿಂದ, ಮಂದೆಯನ್ನು ಕಾಪಾಡುವ ತಮ್ಮ ನೇಮಕವನ್ನು ಪೂರೈಸಲು ಅವರು ತಪ್ಪಿಹೋಗುತ್ತಾರೆ. ಅದಕ್ಕೆ ಬದಲಾಗಿ, ಅವರು ಆ ಸಾಂಕೇತಿಕ ಕುರಿಗಳನ್ನು ಶೋಷಣೆಗೊಳಪಡಿಸಿ, ನ್ಯಾಯವನ್ನು ತೋರಿಸದೆ, ಮೀಕ 3:10ರಲ್ಲಿ ತಿಳಿಸಲ್ಪಟ್ಟಿರುವಂತೆ, ಅವರನ್ನು ‘ನರಹತ್ಯಕ್ಕೆ’ ಒಳಪಡಿಸುತ್ತಾರೆ. ಈ ಸನ್ನಿವೇಶದಿಂದ ನಾವೇನು ಕಲಿಯಬಲ್ಲೆವು?

5. ತನ್ನ ಜನರ ಮಧ್ಯೆ ನಾಯಕತ್ವವನ್ನು ವಹಿಸುವವರಿಂದ ಯೆಹೋವನು ಏನನ್ನು ಅಪೇಕ್ಷಿಸುತ್ತಾನೆ?

5 ತನ್ನ ಜನರ ಮಧ್ಯೆ ನಾಯಕತ್ವವನ್ನು ವಹಿಸುವವರು ನ್ಯಾಯವನ್ನು ತೋರಿಸುವಂತೆ ದೇವರು ಅಪೇಕ್ಷಿಸುತ್ತಾನೆ. ಇಂದು ಯೆಹೋವನ ಸೇವಕರ ಮಧ್ಯೆ ಇದು ಸತ್ಯವೆಂದು ನಮಗೆ ಕಂಡುಬರುತ್ತದೆ. ಅಲ್ಲದೆ, ಇದು ಯೆಶಾಯ 32:1ಕ್ಕೆ ಹೊಂದಿಕೆಯಲ್ಲಿದೆ. ಅಲ್ಲಿ ನಾವು ಓದುವುದು: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.” ಆದರೆ ಮೀಕನ ದಿನಗಳಲ್ಲಿ ನಾವೇನನ್ನು ಕಂಡುಕೊಳ್ಳುತ್ತೇವೆ? ‘ಒಳ್ಳೆಯದನ್ನು ದ್ವೇಷಿಸಿ ಕೆಟ್ಟದನ್ನು ಪ್ರೀತಿಸುವವರು’ ನ್ಯಾಯವನ್ನು ತಿರುಚುತ್ತಾ ಹೋಗುತ್ತಾರೆ.

ಯಾರ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತದೆ?

6, 7. ಮೀಕ 3:4ರಲ್ಲಿ ಯಾವ ಪ್ರಾಮುಖ್ಯವಾದ ಅಂಶವು ಎತ್ತಿತೋರಿಸಲ್ಪಟ್ಟಿದೆ?

6 ಮೀಕನ ಸಮಕಾಲೀನರು ಯೆಹೋವನ ಅನುಗ್ರಹವನ್ನು ಅಪೇಕ್ಷಿಸಬಹುದೊ? ನಿಶ್ಚಯವಾಗಿಯೂ ಇಲ್ಲ! ಮೀಕ 3:4 ಹೇಳುವುದು: “ಇಷ್ಟೆಲ್ಲಾ ನಡಿಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು; ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವನು.” ಇದು ಅತಿ ಪ್ರಾಮುಖ್ಯವಾದ ಒಂದು ಅಂಶವನ್ನು ಎತ್ತಿತೋರಿಸುತ್ತದೆ.

7 ನಾವು ಪಾಪವನ್ನು ಆಚರಿಸುತ್ತಾ ಹೋಗುವಲ್ಲಿ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡನು. ನಾವು ಇಬ್ಬಗೆಯ ಜೀವನವನ್ನು ನಡೆಸುತ್ತಿರುವಲ್ಲಿ, ಅಂದರೆ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದೇವೆಂದು ತೋರಿಸಿಕೊಳ್ಳುತ್ತಾ, ಅದೇ ಸಮಯದಲ್ಲಿ ನಮ್ಮ ತಪ್ಪನ್ನು ಅಡಗಿಸಿಡುತ್ತಿರುವಲ್ಲಿ, ಇದು ಖಂಡಿತವಾಗಿ ನಿಜವಾಗಿದೆ. ಕೀರ್ತನೆ 26:4ಕ್ಕನುಸಾರ ದಾವೀದನು ಹಾಡಿದ್ದು: “ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ.” ಹೀಗಿರುವಾಗ, ತನ್ನ ವಾಕ್ಯವನ್ನು ಬೇಕುಬೇಕೆಂದು ಉಲ್ಲಂಘಿಸುವವರ ಪ್ರಾರ್ಥನೆಗಳಿಗೆ ಯೆಹೋವನು ಹೇಗೆ ತಾನೇ ಉತ್ತರಕೊಟ್ಟಾನು!

ದೇವರಾತ್ಮದಿಂದ ಬಲಗೊಳಿಸಲ್ಪಡುವುದು

8. ಯಾವುದರ ಕುರಿತು ಮೀಕನ ಸಮಯದ ಸುಳ್ಳು ಪ್ರವಾದಿಗಳಿಗೆ ಎಚ್ಚರಿಸಲಾಯಿತು?

8 ಇಸ್ರಾಯೇಲ್ಯರ ಮುಖಂಡರ ಮಧ್ಯೆ ಎಂತಹ ಹೇಸಿಗೆಯ ಆಚಾರಗಳು ನಡೆಯುತ್ತಿವೆ! ಸುಳ್ಳು ಪ್ರವಾದಿಗಳು, ಜನರು ಆತ್ಮಿಕವಾಗಿ ಅಲೆದಾಡುವಂತೆ ಮಾಡುತ್ತಾರೆ. ಲೋಭಿಗಳಾದ ಮುಖಂಡರು “ಶಾಂತಿ!” (NW)ಎಂದು ಕೂಗುತ್ತಾರೆ, ಆದರೆ ತಮ್ಮ ಬಾಯಿಗೆ ಕವಳಕೊಡದವನ ಮೇಲೆ ಯುದ್ಧನಿರ್ಧರಿಸುತ್ತಾರೆ. “ನೀವು ಇಂಥವರಾದಕಾರಣ ನಿಮಗೆ ರಾತ್ರಿಯಾಗುವದು, ದಿವ್ಯದರ್ಶನವಾಗದು; ನಿಮಗೆ ಕತ್ತಲುಕವಿಯುವದು, ಕಣಿಹೇಳಲಾಗದು; ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವದು; ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೆಗೊಳ್ಳುವರು, ಎಲ್ಲರೂ ಬಟ್ಟೆಯಿಂದ ಬಾಯಿ [“ಮೀಸೆ,” NW] ಮುಚ್ಚಿಕೊಳ್ಳುವರು; ಅವರಿಗೆ ದೈವೋತ್ತರವೇ ದೊರೆಯದು,” ಎಂದು ಯೆಹೋವನು ಹೇಳುತ್ತಾನೆ.​—ಮೀಕ 3:5-7ಎ.

9, 10. ‘ಮೀಸೆಯನ್ನು ಮುಚ್ಚಿಕೊಳ್ಳುವುದರ’ ಅರ್ಥವೇನು, ಮತ್ತು ಮೀಕನಿಗೆ ಹಾಗೆ ಮಾಡಲು ಕಾರಣವಿಲ್ಲ ಏಕೆ?

9 “ಮೀಸೆ ಮುಚ್ಚಿ”ಕೊಳ್ಳುವುದೇಕೆ? ಮೀಕನ ದುಷ್ಟ ಸಮಕಾಲೀನರು ಇದನ್ನು ನಾಚಿಕೆಯಿಂದಾಗಿ ಮಾಡುತ್ತಾರೆ. ಮತ್ತು ಈ ದುಷ್ಟರು ನಾಚಿಕೆಪಡಲೇಬೇಕಾಗಿದೆ. ಏಕೆಂದರೆ, ಅವರಿಗನುಸಾರ “ದೈವೋತ್ತರ”ವು ದೊರೆಯುವುದಿಲ್ಲ. (ಮೀಕ 3:7ಬಿ) ಅಹಂಕಾರಿಗಳಾದ ದುಷ್ಟರ ಪ್ರಾರ್ಥನೆಗಳಿಗೆ ಯೆಹೋವನು ಗಮನವನ್ನು ಕೊಡುವುದೇ ಇಲ್ಲ.

10 ಆದರೆ ಮೀಕನು “ಮೀಸೆ ಮುಚ್ಚಿ”ಕೊಳ್ಳಲು ಯಾವುದೇ ಕಾರಣವಿಲ್ಲ. ಅವನು ನಾಚಿಕೆಪಡುವುದಿಲ್ಲ. ಯೆಹೋವನು ಅವನ ಪ್ರಾರ್ಥನೆಗಳನ್ನು ಆಲಿಸುತ್ತಾನೆ. ಈ ನಂಬಿಗಸ್ತ ಪ್ರವಾದಿಯು ಮೀಕ 3:8ರಲ್ಲಿ ಏನು ಹೇಳುತ್ತಾನೊ ಅದಕ್ಕೆ ಗಮನಕೊಡಿರಿ: “ನಾನಾದರೋ ಯೆಹೋವನ ಆತ್ಮಾವೇಶದಿಂದ ಬಲಪರಾಕ್ರಮನ್ಯಾಯಭರಿತನಾಗಿ”ದ್ದೇನೆ. ಮೀಕನು ತನ್ನ ದೀರ್ಘಕಾಲದ ನಂಬಿಗಸ್ತಿಕೆಯ ಸೇವೆಯ ಸಮಯದಲ್ಲಿ ಯಾವಾಗಲೂ, “ಯೆಹೋವನ ಆತ್ಮಾವೇಶದಿಂದ ಬಲಪರಾಕ್ರಮನ್ಯಾಯಭರಿತ”ನಾಗಿ ಇದ್ದುದಕ್ಕಾಗಿ ಎಷ್ಟು ಆಭಾರಿಯಾಗಿದ್ದಾನೆ! ಇದು, “ಯಾಕೋಬಿಗೆ ಅದರ ದ್ರೋಹವನ್ನು ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು” ಅವನಿಗೆ ಬಲವನ್ನು ಕೊಟ್ಟಿದೆ.

11. ದೇವರ ಸಂದೇಶಗಳನ್ನು ಪ್ರಕಟಪಡಿಸಲು ಮಾನವರು ಬಲವನ್ನು ಹೇಗೆ ಪಡೆಯುತ್ತಾರೆ?

11 ದೇವರ ಪ್ರತಿಕೂಲ ತೀರ್ಪಿನ ಸಂದೇಶಗಳನ್ನು ಸಾರಿ ಹೇಳಲು ಮೀಕನಿಗೆ ಮಾನುಷಶಕ್ತಿಗಿಂತಲೂ ಹೆಚ್ಚಿನದ್ದು ಬೇಕಾಗಿರುತ್ತದೆ. ಯೆಹೋವನ ಆತ್ಮ, ಅಥವಾ ಬಲಾಢ್ಯವಾದ ಕಾರ್ಯಕಾರಿ ಶಕ್ತಿಯು ಆವಶ್ಯಕವಾಗಿದೆ. ನಮ್ಮ ವಿಷಯದಲ್ಲೇನು? ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಬಲಪಡಿಸುವಲ್ಲಿ ಮಾತ್ರ ನಾವು ನಮ್ಮ ಸಾರುವ ನೇಮಕವನ್ನು ಪೂರೈಸಬಲ್ಲೆವು. ನಾವು ಪಾಪವನ್ನು ಪ್ರಜ್ಞಾಪೂರ್ವಕವಾಗಿ ಆಚರಿಸುತ್ತಾ ಹೋಗುವಲ್ಲಿ ನಮ್ಮ ಸಾರುವ ಪ್ರಯತ್ನಗಳು ಸಂಪೂರ್ಣವಾಗಿ ನಿಷ್ಫಲಗೊಳ್ಳುವವು ಖಂಡಿತ. ನಾವು ಹಾಗೆ ಮಾಡುತ್ತಿರುವಲ್ಲಿ, ಈ ಕೆಲಸವನ್ನು ಮಾಡಲು ಶಕ್ತಿಯನ್ನು ಕೊಡುವಂತೆ ನಾವು ಮಾಡುವ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಡದಿರುವನು. ‘ಯೆಹೋವನ ಆತ್ಮವು’ ನಮ್ಮ ಮೇಲೆ ನೆಲೆಸದಿದ್ದರೆ ನಾವು ನಮ್ಮ ಸ್ವರ್ಗೀಯ ತಂದೆಯ ತೀರ್ಪಿನ ಸಂದೇಶಗಳನ್ನು ನಿಶ್ಚಯವಾಗಿಯೂ ಸಾರಲಾರೆವು. ಆಲಿಸಲ್ಪಡುವ ಪ್ರಾರ್ಥನೆಗಳು ಮತ್ತು ಪವಿತ್ರಾತ್ಮದ ಸಹಾಯದ ಮೂಲಕ ನಾವು ದೇವರ ವಾಕ್ಯವನ್ನು ಮೀಕನಂತೆ ಧೈರ್ಯದಿಂದ ಹೇಳಶಕ್ತರಾಗುತ್ತೇವೆ.

12. ಯೇಸುವಿನ ಆರಂಭದ ಶಿಷ್ಯರು ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ’ ಸಾಧ್ಯಗೊಳಿಸಿದ್ದು ಯಾವುದು?

12 ನೀವು ಪ್ರಾಯಶಃ ಅಪೊಸ್ತಲರ ಕೃತ್ಯಗಳು 4:​23-31ರ ವೃತ್ತಾಂತವನ್ನು ಜ್ಞಾಪಿಸಿಕೊಳ್ಳಬಹುದು. ಯೇಸುವಿನ ಪ್ರಥಮ ಶತಮಾನದ ಶಿಷ್ಯರಲ್ಲಿ ನೀವು ಒಬ್ಬರಾಗಿದ್ದೀರೆಂದು ಭಾವಿಸಿಕೊಳ್ಳಿ. ಉನ್ಮತ್ತರಾದ ಹಿಂಸಕರು ಕ್ರಿಸ್ತನ ಶಿಷ್ಯರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದರು. ಆದರೆ ಈ ನಿಷ್ಠಾವಂತರು ತಮ್ಮ ಪರಮಾಧಿಕಾರಿ ಕರ್ತನಿಗೆ, “ಕರ್ತನೇ, ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು,” ಎಂದು ಪ್ರಾರ್ಥನೆಯಲ್ಲಿ ಬೇಡಿಕೊಂಡರು. ಫಲಿತಾಂಶವೇನಾಗಿತ್ತು? ಪ್ರಾರ್ಥನೆ ಮಾಡಿದ ಮೇಲೆ, ಅವರು ಕೂಡಿದ್ದ ಸ್ಥಳವು ನಡುಗಿತು; ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು. ಆದುದರಿಂದ ನಾವು ನಮ್ಮ ಶುಶ್ರೂಷೆಯಲ್ಲಿ ತೊಡಗುತ್ತಾ ಮುಂದುವರಿಯುವಾಗ ಪ್ರಾರ್ಥನಾಪೂರ್ವಕವಾಗಿ ಯೆಹೋವನ ಕಡೆಗೆ ನೋಡಿ, ಪವಿತ್ರಾತ್ಮದ ಮೂಲಕ ಆತನು ಕೊಡುವ ಸಹಾಯದ ಮೇಲೆ ಆತುಕೊಳ್ಳೋಣ.

13. ಯೆರೂಸಲೇಮ್‌ ಹಾಗೂ ಸಮಾರ್ಯಕ್ಕೆ ಏನು ಸಂಭವಿಸುವುದು, ಮತ್ತು ಏಕೆ?

13 ಪುನಃ ಮೀಕನ ದಿನಗಳ ಕುರಿತು ಚಿಂತಿಸಿರಿ. ಮೀಕ 3:​9-12ಕ್ಕನುಸಾರ, ರಕ್ತಾಪರಾಧಿಗಳಾದ ಅಧಿಪತಿಗಳು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ, ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ, ಸುಳ್ಳು ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ. ಆದಕಾರಣ, ಯೆಹೂದದ ರಾಜಧಾನಿಯಾದ ಯೆರೂಸಲೇಮ್‌ “ಹಾಳುದಿಬ್ಬ”ವಾಗುವುದೆಂದು ದೇವರು ವಿಧಿಸಿರುವುದು ಆಶ್ಚರ್ಯವಲ್ಲ! ಸುಳ್ಳಾರಾಧನೆ ಮತ್ತು ನೈತಿಕ ಭ್ರಷ್ಟಾಚಾರ ಇಸ್ರಾಯೇಲಿನಲ್ಲೂ ಏಳಿಗೆಹೊಂದುತ್ತಿದ್ದದರಿಂದ, ದೇವರು ಸಮಾರ್ಯವನ್ನು “ಹಾಳುದಿಬ್ಬ”ವಾಗಿ ಮಾಡಲಿದ್ದಾನೆ ಎಂಬುದಾಗಿ ಎಚ್ಚರಿಸಲು ಮೀಕನು ಪ್ರೇರಿಸಲ್ಪಟ್ಟನು. (ಮೀಕ 1:6) ವಾಸ್ತವದಲ್ಲಿ, ಸಾ.ಶ.ಪೂ. 740ರಲ್ಲಿ ಅಶ್ಶೂರ ಸೇನೆಗಳು ಮುಂತಿಳಿಸಲ್ಪಟ್ಟ ನಾಶನವನ್ನು ಸಮಾರ್ಯದ ಮೇಲೆ ತರುವುದನ್ನು ನೋಡಲು ಪ್ರವಾದಿಯು ಬದುಕಿದ್ದನು. (2 ಅರಸುಗಳು 17:5, 6; 25:1-21) ಯೆರೂಸಲೇಮ್‌ ಮತ್ತು ಸಮಾರ್ಯದ ವಿರುದ್ಧವಾದ ಈ ಪ್ರಬಲವಾದ ಸಂದೇಶಗಳನ್ನು ಯೆಹೋವನ ಶಕ್ತಿಯಿಂದಲೇ ಕೊಡಲ್ಪಡಲು ಸಾಧ್ಯ ಎಂಬುದು ವ್ಯಕ್ತ.

14. ಮೀಕ 3:12ರ ಪ್ರವಾದನೆಯು ಹೇಗೆ ನೆರವೇರಿತು, ಮತ್ತು ಇದು ನಮ್ಮ ಮೇಲೆ ಯಾವ ಪರಿಣಾಮ ಬೀರಬೇಕು?

14 ಯೆಹೋವನ ಪ್ರತಿಕೂಲ ತೀರ್ಪಿನಿಂದ ಯೆಹೂದವು ತಪ್ಪಿಸಿಕೊಳ್ಳಲಾರದು. ಮೀಕ 3:12ರ ಪ್ರವಾದನೆಯ ನೆರವೇರಿಕೆಯಲ್ಲಿ, ಚೀಯೋನು “ಹೊಲದಂತೆ ಗೇಯಲ್ಪಡುವದು.” ನಾವೀಗ ಇರುವಂಥ 21ನೆಯ ಶತಮಾನದಿಂದ ಹಿಂದಕ್ಕೆ ನೋಡುವಾಗ, ಇದೆಲ್ಲವೂ ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಯೆಹೂದ ಮತ್ತು ಯೆರೂಸಲೇಮಿನ ಮೇಲೆ ವಿನಾಶವನ್ನು ತಂದಾಗ ಸಂಭವಿಸಿತ್ತೆಂದು ನಮಗೆ ತಿಳಿದದೆ. ಮೀಕನು ಇದರ ಬಗ್ಗೆ ಪ್ರವಾದಿಸಿ ಅನೇಕ ವರುಷಗಳು ಕಳೆದ ನಂತರ ಇದು ಸಂಭವಿಸಿತಾದರೂ, ಅದು ಬಂದೇ ಬರುವುದೆಂಬುದರಲ್ಲಿ ಅವನಿಗೆ ನಿಶ್ಚಯವಿತ್ತು. ಆದುದರಿಂದ, ಮುಂತಿಳಿಸಲ್ಪಟ್ಟ “ಯೆಹೋವನ ದಿನ”ದಲ್ಲಿ ಸದ್ಯದ ದುಷ್ಟ ವ್ಯವಸ್ಥೆಯು ಅಂತ್ಯಗೊಳ್ಳುವುದು ಎಂಬುದರ ಕುರಿತು ನಾವೂ ಅಷ್ಟೇ ಭರವಸೆಯಿಂದಿರಬೇಕೆಂಬುದು ನಿಶ್ಚಯ.​—2 ಪೇತ್ರ 3:​11, 12.

ಯೆಹೋವನು ನ್ಯಾಯತೀರಿಸುತ್ತಾನೆ

15. ಮೀಕ 4:​1-4ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವರ್ಣಿಸುವಿರಿ?

15 ಹಿನ್ನೋಟ ಬೀರುವಾಗ, ಮೀಕನು ಮುಂದಕ್ಕೆ ರೋಮಾಂಚಕವಾದ ನಿರೀಕ್ಷೆಯ ಸಂದೇಶವೊಂದನ್ನು ಕೊಡುವುದನ್ನು ನಾವು ನೋಡುತ್ತೇವೆ. ಮೀಕ 4:​1-4ರಲ್ಲಿ ಎಷ್ಟು ಉತ್ತೇಜನದಾಯಕವಾದ ಮಾತುಗಳನ್ನು ನಾವು ನೋಡುತ್ತೇವೆ! ಮೀಕನು ಹೇಳಿದ್ದರಲ್ಲಿ ಭಾಗಶಃ ಹೀಗಿದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು. . . . ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.”

16, 17. ಮೀಕ 4:​1-4 ಇಂದು ಹೇಗೆ ನೆರವೇರುತ್ತಿದೆ?

16 ಈ ‘ಬಹು ರಾಷ್ಟ್ರದವರು’ ಮತ್ತು ‘ಪ್ರಬಲ ಜನಾಂಗಗಳವರು’ ಯಾರು? ಅವರು ಈ ಲೋಕದ ರಾಷ್ಟ್ರಗಳು ಅಥವಾ ಸರಕಾರಗಳು ಆಗಿರುವುದಿಲ್ಲ. ಬದಲಿಗೆ, ಯೆಹೋವನ ಸತ್ಯಾರಾಧನೆಯ ಬೆಟ್ಟದಲ್ಲಿ ಪವಿತ್ರ ಸೇವೆಗಾಗಿ ಐಕ್ಯವಾಗಿ ಕೂಡಿಬರುವ ಸಕಲ ಜನಾಂಗಗಳ ವ್ಯಕ್ತಿಗಳಿಗೆ ಈ ಪ್ರವಾದನೆಯು ಸೂಚಿಸುತ್ತದೆ.

17 ಮೀಕನ ಪ್ರವಾದನೆಗೆ ಹೊಂದಿಕೆಯಲ್ಲಿ, ಯೆಹೋವನ ಶುದ್ಧಾರಾಧನೆಯು ಸಂಪೂರ್ಣವಾದ ರೀತಿಯಲ್ಲಿ ಬೇಗನೆ ಭೂವ್ಯಾಪಕವಾಗಿ ಆಚರಿಸಲ್ಪಡುವುದು. ಇಂದು, “ನಿತ್ಯಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳ” ಜನರು ಯೆಹೋವನ ಮಾರ್ಗಗಳಲ್ಲಿ ಉಪದೇಶಿಸಲ್ಪಡುತ್ತಿದ್ದಾರೆ. (ಅ. ಕೃತ್ಯಗಳು 13:48) ರಾಜ್ಯದ ಪಕ್ಷವನ್ನು ವಹಿಸುವ ವಿಶ್ವಾಸಿಗಳಿಗೆ, ಯೆಹೋವನು ಆತ್ಮಿಕವಾಗಿ ವ್ಯಾಜ್ಯಗಳನ್ನು ವಿಚಾರಿಸಿ, ನ್ಯಾಯತೀರಿಸುತ್ತಿದ್ದಾನೆ. ಅವರು “ಮಹಾ ಸಮೂಹ”ದ ಭಾಗವಾಗಿ “ಮಹಾ ಸಂಕಟವನ್ನು” (NW) ಪಾರಾಗುವರು. (ಪ್ರಕಟನೆ 7:​9, 14) ತಮ್ಮ ಕತ್ತಿಗಳನ್ನು ಗುಳಗಳನ್ನಾಗಿ ಮಾಡಿರುವ ಅವರು, ಜೊತೆ ಯೆಹೋವನ ಸಾಕ್ಷಿಗಳೊಂದಿಗೆ ಮತ್ತು ಇತರರೊಂದಿಗೆ ಇಂದು ಸಹ ಶಾಂತಿಯಿಂದ ಜೀವಿಸುತ್ತಾರೆ. ಅವರ ಮಧ್ಯೆಯಿರುವುದು ಎಷ್ಟು ಹರ್ಷಕರ!

ಯೆಹೋವನ ಹೆಸರಿನಲ್ಲಿ ನಡೆಯಲು ನಿರ್ಧರಿಸಿರುವುದು

18. ‘ತನ್ನ ತನ್ನ ದ್ರಾಕ್ಷಾಲತೆ ಮತ್ತು ಅಂಜೂರಗಿಡದ ನೆರಳಿನಲ್ಲಿ ಕೂತುಕೊಳ್ಳುವುದು’ ಏನನ್ನು ಸಾಂಕೇತಿಸುತ್ತದೆ?

18 ನಮ್ಮ ದಿನಗಳಲ್ಲಿ, ಭಯವು ಒಂದು ಕೇಡುಸೂಚಕ ಮೋಡದಂತೆ ಭೂಮಿಯನ್ನು ಆವರಿಸಿರುವಾಗ, ಅನೇಕರು ಯೆಹೋವನ ಮಾರ್ಗಗಳ ಬಗ್ಗೆ ಕಲಿಯುತ್ತಿರುವುದನ್ನು ನೋಡಿ ನಾವು ರೋಮಾಂಚಗೊಂಡಿದ್ದೇವೆ. ದೇವರನ್ನು ಪ್ರೀತಿಸುವ ಅಂಥವರೆಲ್ಲರೂ ಯುದ್ಧವನ್ನು ಕಲಿಯುವುದಿಲ್ಲ, ಮತ್ತು ತಮ್ಮ ಸ್ವಂತ ದ್ರಾಕ್ಷಾಲತೆ ಹಾಗೂ ಅಂಜೂರಗಿಡದ ಕೆಳಗೆ ಕೂತುಕೊಳ್ಳುವ, ಈಗ ಅತಿ ಸಮೀಪದಲ್ಲಿರುವ ಆ ಸಮಯಕ್ಕಾಗಿ ನಾವು ಹಾರೈಸುತ್ತೇವೆ. ಅನೇಕವೇಳೆ ಅಂಜೂರದ ಮರಗಳನ್ನು ದ್ರಾಕ್ಷೇತೋಟಗಳಲ್ಲಿ ನೆಡಲಾಗುತ್ತಿತ್ತು. (ಲೂಕ 13:6) ತನ್ನ ತನ್ನ ದ್ರಾಕ್ಷಾಲತೆ ಮತ್ತು ಅಂಜೂರ ಮರದ ಕೆಳಗೆ ಕೂತುಕೊಳ್ಳುವುದು ಶಾಂತಿಭರಿತ, ಸಮೃದ್ಧ ಮತ್ತು ಸುಭದ್ರ ಪರಿಸ್ಥಿತಿಗಳನ್ನು ಸೂಚಿಸುತ್ತದೆ. ಈಗಲೂ ಸಹ, ಯೆಹೋವನೊಂದಿಗಿರುವ ನಮ್ಮ ಸಂಬಂಧ ನಮಗೆ ಮನಶ್ಶಾಂತಿಯನ್ನು ಮತ್ತು ಆತ್ಮಿಕ ಭದ್ರತೆಯನ್ನು ಕೊಡುತ್ತದೆ. ಅಂತಹ ಪರಿಸ್ಥಿತಿಗಳು ರಾಜ್ಯದಾಳಿಕೆಯ ಕೆಳಗಿರುವಾಗ, ನಾವು ಭಯಪಡದವರೂ ಪೂರ್ಣವಾಗಿ ಸುರಕ್ಷಿತರೂ ಆಗಿರುವೆವು.

19. ಯೆಹೋವನ ಹೆಸರಿನಲ್ಲಿ ನಡೆಯುವುದೆಂದರೇನು?

19 ದೈವಿಕ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯಲು, ನಾವು ಯೆಹೋವನ ಹೆಸರಿನಲ್ಲಿ ನಡೆಯಬೇಕು. ಇದನ್ನು ಮೀಕ 4:5ರಲ್ಲಿ ಪ್ರಬಲವಾದ ರೀತಿಯಲ್ಲಿ ಹೇಳಲಾಗಿದೆ. ಅಲ್ಲಿ ಪ್ರವಾದಿಯು ಘೋಷಿಸುವುದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” ಯೆಹೋವನ ಹೆಸರಿನಲ್ಲಿ ನಡೆಯುವುದೆಂಬುದು ಕೇವಲ ಆತನು ನಮ್ಮ ದೇವರು ಎಂದು ಹೇಳುವುದನ್ನು ಮಾತ್ರ ಅರ್ಥೈಸುವುದಿಲ್ಲ. ಕ್ರೈಸ್ತ ಕೂಟಗಳಲ್ಲಿ ಭಾಗವಹಿಸುವುದು ಮತ್ತು ರಾಜ್ಯದ ಸಾರುವಿಕೆಯ ಕೆಲಸದಂಥ ಚಟುವಟಿಕೆಗಳು ಅತ್ಯಾವಶ್ಯಕವಾಗಿರುವುದಾದರೂ, ಇದು ನಮ್ಮಿಂದ ಹೆಚ್ಚನ್ನು ಆವಶ್ಯಪಡಿಸುತ್ತದೆ. ನಾವು ಯೆಹೋವನ ಹೆಸರಿನಲ್ಲಿ ನಡೆಯುತ್ತಿರುವುದಾದರೆ, ನಾವು ಆತನಿಗೆ ನಮ್ಮನ್ನು ಸಮರ್ಪಿಸಿಕೊಂಡವರಾಗಿರುತ್ತೇವೆ ಮತ್ತು ಪೂರ್ಣ ಪ್ರಾಣದ ಪ್ರೀತಿಯಿಂದ ಆತನಿಗೆ ನಂಬಿಗಸ್ತಿಕೆಯಿಂದ ಸೇವೆಯನ್ನು ಸಲ್ಲಿಸಲು ಪ್ರಯತ್ನಿಸುತ್ತಿರುವವರಾಗಿದ್ದೇವೆ. (ಮತ್ತಾಯ 22:37) ಮತ್ತು ಆತನ ಆರಾಧಕರಾಗಿ, ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ನಿತ್ಯಕ್ಕೂ ನಡೆಯಲು ನಾವು ದೃಢಸಂಕಲ್ಪವುಳ್ಳವರಾಗಿರುತ್ತೇವೆ.

20. ಮೀಕ 4:​6-13ರಲ್ಲಿ ಏನು ಮುಂತಿಳಿಸಲ್ಪಟ್ಟಿತು?

20 ಈಗ ದಯವಿಟ್ಟು ಮೀಕ 4:​6-13ರ ಪ್ರವಾದನಾ ಮಾತುಗಳನ್ನು ಪರಿಗಣಿಸಿರಿ. “ಚೀಯೋನ್‌ ಯುವತಿ” ದೇಶಭ್ರಷ್ಟಳಾಗಿ ‘ಬಾಬೆಲಿಗೆ ಸೇರಬೇಕು.’ ಸಾ.ಶ.ಪೂ. ಏಳನೆಯ ಶತಮಾನದಲ್ಲಿ ಯೆರೂಸಲೇಮಿನ ನಿವಾಸಿಗಳಿಗೆ ಹಾಗೆಯೇ ಸಂಭವಿಸಿತು. ಆದರೂ, ಯೆಹೂದಕ್ಕೆ ಒಂದು ಜನಶೇಷ ಹಿಂದಿರುಗುವುದೆಂದೂ, ಚೀಯೋನ್‌ ಪುನಃಸ್ಸ್ಥಾಪಿಸಲ್ಪಡುವಾಗ ಆಕೆಯ ವೈರಿಗಳು ಚೂರುಚೂರಾಗುವಂತೆ ಯೆಹೋವನು ನೋಡಿಕೊಳ್ಳುವನೆಂದೂ ಮೀಕನ ಪ್ರವಾದನೆಯು ಸೂಚಿಸುತ್ತದೆ.

21, 22. ಮೀಕ 5:2 ಹೇಗೆ ನೆರವೇರಿಸಲ್ಪಟ್ಟಿತು?

21 ಇತರ ನಾಟಕೀಯ ವಿಕಸನಗಳು ಮೀಕ 5ನೆಯ ಅಧ್ಯಾಯದಲ್ಲಿ ಮುಂತಿಳಿಸಲ್ಪಟ್ಟಿವೆ. ಉದಾಹರಣೆಗೆ, ಮೀಕ 5:​2-4ರಲ್ಲಿ ಏನು ಹೇಳಿದೆಯೊ ಅದನ್ನು ಗಮನಿಸಿರಿ. ದೇವರಿಂದ ನೇಮಿತನಾದ ಆಳತಕ್ಕವನೊಬ್ಬನು, ಅಂದರೆ ಯಾರ “ಮೂಲವು ಪುರಾತನ” ಆಗಿದೆಯೊ ಅವನು ಬೇತ್ಲೆಹೇಮಿನಿಂದ ಬರುವನೆಂದು ಮೀಕನು ಪ್ರವಾದಿಸುತ್ತಾನೆ. ಅವನು “ಯೆಹೋವನ ಬಲ”ದಿಂದ ಕುರುಬನಂತೆ ಆಳುವನು. ಅಲ್ಲದೆ ಈ ಆಳತಕ್ಕವನು, ಕೇವಲ ಇಸ್ರಾಯೇಲಿನಲ್ಲಲ್ಲ, ಬದಲಾಗಿ “ಭೂಮಿಯ ಕಟ್ಟಕಡೆಯ ವರೆಗೂ” ಪ್ರಬಲನಾಗಿರುವನು. ಇವನು ಯಾರೆಂಬುದು ಸಾಮಾನ್ಯ ಲೋಕವನ್ನು ಗೊಂದಲಕ್ಕೀಡು ಮಾಡಬಹುದಾದರೂ, ನಮಗಾದರೊ ಅದು ರಹಸ್ಯಮಯವಾಗಿರುವುದಿಲ್ಲ.

22 ಬೇತ್ಲೆಹೇಮಿನಲ್ಲಿ ಜನಿಸಿರುವವರಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯು ಯಾರು? ಮತ್ತು “ಭೂಮಿಯ ಕಟ್ಟಕಡೆಯ ವರೆಗೂ ಪ್ರಬಲನಾಗಿ” ಇರುವವನು ಯಾರು? ಮೆಸ್ಸೀಯನಾದ ಯೇಸು ಕ್ರಿಸ್ತನೇ! ಮಹಾ ಹೆರೋದನು ಮಹಾಯಾಜಕರನ್ನೂ ಶಾಸ್ತ್ರಿಗಳನ್ನೂ, ಮೆಸ್ಸೀಯನು ಹುಟ್ಟುವುದೆಲ್ಲಿ ಎಂದು ಕೇಳಲಾಗಿ ಅವರು, “ಯೂದಾಯದ ಬೇತ್ಲೆಹೇಮಿನಲ್ಲಿಯೇ” ಎಂದು ಉತ್ತರಕೊಟ್ಟರು. ಅವರು ಮೀಕ 5:2ರ ಮಾತುಗಳನ್ನೂ ಉದ್ಧರಿಸಿದರು. (ಮತ್ತಾಯ 2:​3-6) ಜನಸಾಮಾನ್ಯರಲ್ಲೂ ಕೆಲವರಿಗೆ ಇದು ಗೊತ್ತಿತ್ತು, ಏಕೆಂದರೆ, ಅವರು “ಕ್ರಿಸ್ತನು ಗಲಿಲಾಯದಿಂದ ಬರುವದು ಹೇಗೆ? ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬದಾಗಿ ಶಾಸ್ತ್ರದಲ್ಲಿ ಉಂಟಲ್ಲವೇ” ಎಂದು ಹೇಳುವುದನ್ನು ಯೋಹಾನ 7:42 ಉಲ್ಲೇಖಿಸುತ್ತದೆ.

ಜನರಿಗೆ ನಿಜ ಚೈತನ್ಯ

23. ಮೀಕ 5:7ರ ನೆರವೇರಿಕೆಯಲ್ಲಿ ಇಂದು ಏನು ನಡೆಯುತ್ತಿದೆ?

23ಮೀಕ 5:​5-15, ಕೇವಲ ಕ್ಷಣಿಕವಾದ ಯಶಸ್ಸನ್ನು ಪಡೆಯುವ ಒಂದು ಅಶ್ಶೂರ್ಯ ಆಕ್ರಮಣದ ಕುರಿತು ತಿಳಿಸುತ್ತದೆ ಮತ್ತು ದೇವರು ಅವಿಧೇಯ ಜನಾಂಗಗಳ ಮೇಲೆ ಮುಯ್ಯಿ ತೀರಿಸುವನು ಎಂಬುದನ್ನು ಸೂಚಿಸುತ್ತದೆ. ಮೀಕ 5:7 ಪಶ್ಚಾತ್ತಾಪಿ ಯೆಹೂದಿ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂದಿರುಗುವರೆಂಬುದನ್ನು ವಾಗ್ದಾನಿಸುತ್ತದೆ. ಆದರೆ ಈ ಮಾತುಗಳು ನಮ್ಮ ದಿನಗಳಿಗೂ ಅನ್ವಯವಾಗುತ್ತವೆ. ಮೀಕನು ಘೋಷಿಸುವುದು: “ಯೆಹೋವನ ವರವಾದ ಇಬ್ಬನಿಯೂ ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಹೇಗೆ . . . ಹಿತಕರವಾಗಿರುವವೋ ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವದು.” ಆತ್ಮಿಕ ಯಾಕೋಬಿನ ಅಥವಾ ಇಸ್ರಾಯೇಲಿನ ಜನಶೇಷವು ಜನರಿಗೆ ದೇವರಿಂದ ಬರುವ ಆಶೀರ್ವಾದವಾಗಿರುವುದು ಎಂಬುದನ್ನು ಮುಂತಿಳಿಸಲು ಈ ಸುಂದರವಾದ ಸಂಕೇತಗಳ ನಿರೂಪಣೆಯನ್ನು ಉಪಯೋಗಿಸಲಾಗಿದೆ. ಭೂನಿರೀಕ್ಷೆಯುಳ್ಳ ಯೇಸುವಿನ “ಬೇರೆ ಕುರಿಗಳು,” ಇತರರನ್ನು ಆತ್ಮಿಕವಾಗಿ ಚೈತನ್ಯಗೊಳಿಸುವುದರಲ್ಲಿ ಸಹಾಯಮಾಡುತ್ತಾ ಈ ಆಧುನಿಕ ದಿನಗಳ ಆತ್ಮಿಕ ಇಸ್ರಾಯೇಲಿನ ಉಳಿಕೆಯವರೊಂದಿಗೆ ಹೆಗಲುಕೊಟ್ಟು ಕೆಲಸಮಾಡುವುದರಲ್ಲಿ ಹರ್ಷಿಸುತ್ತವೆ. (ಯೋಹಾನ 10:16; ಗಲಾತ್ಯ 6:16; ಚೆಫನ್ಯ 3:9) ಈ ಸಂಬಂಧದಲ್ಲಿ, ಚಿಂತಿಸಲು ಒಂದು ಪ್ರಾಮುಖ್ಯವಾದ ವಿಷಯವಿದೆ. ರಾಜ್ಯ ಘೋಷಕರೋಪಾದಿ ನಾವು, ಇತರರಿಗೆ ನಿಜ ಚೈತನ್ಯವನ್ನು ತರುವ ನಮ್ಮ ಸುಯೋಗವನ್ನು ಬೆಲೆಯುಳ್ಳದ್ದಾಗಿ ಪರಿಗಣಿಸಬೇಕು.

24. ಮೀಕ 3ರಿಂದ 5ನೆಯ ಅಧ್ಯಾಯಗಳಲ್ಲಿರುವ ಯಾವ ಅಂಶಗಳು ನಿಮ್ಮ ಮನಮುಟ್ಟಿದವು?

24 ಮೀಕನ ಪ್ರವಾದನೆಯ 3ರಿಂದ 5 ಅಧ್ಯಾಯಗಳಲ್ಲಿ ನೀವು ಏನನ್ನು ಕಲಿತಿದ್ದೀರಿ? ಪ್ರಾಯಶಃ ಇಂತಹ ಕೆಲವು ಅಂಶಗಳನ್ನು: (1) ತನ್ನ ಜನರ ಮಧ್ಯೆ ನಾಯಕತ್ವವನ್ನು ವಹಿಸುವವರು ನ್ಯಾಯವನ್ನು ತೋರಿಸುವಂತೆ ದೇವರು ಅಪೇಕ್ಷಿಸುತ್ತಾನೆ. (2) ನಾವು ಪ್ರಜ್ಞಾಪೂರ್ವಕವಾಗಿ ಪಾಪವನ್ನು ಮಾಡುತ್ತಾ ಹೋಗುವಲ್ಲಿ ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡನು. (3) ದೇವರು ತನ್ನ ಪವಿತ್ರಾತ್ಮದ ಮೂಲಕ ನಮ್ಮನ್ನು ಬಲಪಡಿಸುವಲ್ಲಿ ಮಾತ್ರವೇ ನಾವು ನಮ್ಮ ಸಾರುವ ನೇಮಕವನ್ನು ಪೂರೈಸಬಲ್ಲೆವು. (4) ದೈವಿಕ ಅನುಗ್ರಹವನ್ನು ಅನುಭವಿಸಲು ನಾವು ಯೆಹೋವನ ಹೆಸರಿನಲ್ಲಿ ನಡೆಯಬೇಕು. (5) ರಾಜ್ಯ ಘೋಷಕರೋಪಾದಿ ನಾವು, ಜನರಿಗೆ ನಿಜ ಚೈತನ್ಯವನ್ನು ತರುವ ಸುಯೋಗವನ್ನು ಬೆಲೆಯುಳ್ಳದ್ದಾಗಿ ಪರಿಗಣಿಸಬೇಕು. ಬೇರೆ ವಿಷಯಗಳು ಸಹ ನಿಮ್ಮ ಮನಮುಟ್ಟಿರಬಹುದು. ಆದರೆ ಈ ಪ್ರವಾದನಾರೂಪದ ಬೈಬಲ್‌ ಪುಸ್ತಕದಿಂದ ನಾವು ಇನ್ನೇನನ್ನು ಕಲಿಯಬಲ್ಲೆವು? ಮೀಕನ ನಂಬಿಕೆಯನ್ನು ಬಲಪಡಿಸುವ ಪ್ರವಾದನೆಯ ಕೊನೆಯ ಎರಡು ಅಧ್ಯಾಯಗಳಿಂದ ನಾವು ಪ್ರಾಯೋಗಿಕ ಪಾಠಗಳನ್ನು ಪಡೆದುಕೊಳ್ಳುವಂತೆ ಮುಂದಿನ ಲೇಖನವು ನಮಗೆ ಸಹಾಯಮಾಡುವುದು.

ನೀವು ಹೇಗೆ ಉತ್ತರಿಸುವಿರಿ?

• ತನ್ನ ಜನರ ಮಧ್ಯೆ ನಾಯಕತ್ವವನ್ನು ವಹಿಸುವವರಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?

• ನಾವು ಯೆಹೋವನಿಗೆ ಅರ್ಪಿಸುವ ಸೇವೆಯಲ್ಲಿ ಪ್ರಾರ್ಥನೆ ಮತ್ತು ಪವಿತ್ರಾತ್ಮ ಏಕೆ ಪ್ರಾಮುಖ್ಯವಾಗಿವೆ?

• ಜನಾಂಗಗಳು ‘ಯೆಹೋವನ ಹೆಸರಿನಲ್ಲಿ ನಡೆಯುವುದು’ ಹೇಗೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರ]

ಹಂಡೆಯನ್ನು ಒಳಗೊಂಡ ಮೀಕನ ದೃಷ್ಟಾಂತವನ್ನು ನೀವು ವಿವರಿಸಬಲ್ಲಿರೋ?

[ಪುಟ 16ರಲ್ಲಿರುವ ಚಿತ್ರಗಳು]

ಮೀಕನಂತೆ ನಾವು ನಮ್ಮ ಶುಶ್ರೂಷೆಯಲ್ಲಿ ಧೈರ್ಯದಿಂದ ತೊಡಗುತ್ತಾ ಮುಂದುವರಿಯುತ್ತೇವೆ