ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಲೋಭನೆಗಳನ್ನು ಹೇಗೆ ಎದುರಿಸಲಿ?

ಪ್ರಲೋಭನೆಗಳನ್ನು ಹೇಗೆ ಎದುರಿಸಲಿ?

ಯುವ ಜನರು ಪ್ರಶ್ನಿಸುವುದು

ಪ್ರಲೋಭನೆಗಳನ್ನು ಹೇಗೆ ಎದುರಿಸಲಿ?

ಪಾರ್ಟಿಗೆ ಕ್ಯಾರನ್‌ ಬಂದು ಕೇವಲ ಹತ್ತು ನಿಮಿಷವಾಗಿತ್ತಷ್ಟೆ. ಇಬ್ಬರು ಹುಡುಗರು ಹಲವಾರು ದೊಡ್ಡ ಪೇಪರ್‌ ಬ್ಯಾಗುಗಳನ್ನು ಹೊತ್ತುಕೊಂಡು ಬರುವುದು ಅವಳ ಕಣ್ಣಿಗೆ ಬೀಳುತ್ತದೆ. ಆ ಬ್ಯಾಗ್‌ಗಳಲ್ಲಿ ಏನಿದೆಯೆಂದು ಹೇಳಬೇಕೆಂದಿಲ್ಲ. ಯಾಕೆಂದರೆ ಸ್ವಲ್ಪ ಮುಂಚೆ ಅದೇ ಹುಡುಗರು ಪಾರ್ಟಿಯಲ್ಲಿ “ಬೇಕಾದಷ್ಟು ಡ್ರಿಂಕ್ಸ್‌” ಇದೆಯೆಂದು ಹೇಳಿದ್ದು ಅವಳಿಗೆ ಕೇಳಿಸಿತ್ತು. ಆದರೆ ಈ ವಿಷಯವನ್ನು ಕ್ಯಾರನ್‌ ತನ್ನ ಅಪ್ಪಅಮ್ಮಗೆ ಹೇಳಿರಲಿಲ್ಲ. ಹುಡುಗರು ಏನೋ ತಮಾಷೆಮಾಡುತ್ತಿದ್ದಾರೆ, ಮನೆಯಲ್ಲಿ ಯಾರಾದರು ದೊಡ್ಡವರು ಇರಬಹುದು ಎಂದು ಅವಳು ನೆನಸಿದ್ದಳು.

“ಅಲ್ಲೇಕೆ ಸುಮ್ಮನೆ ನಿಂತುಬಿಟ್ಟೆ? ಪಾರ್ಟಿ ಇಷ್ಟ ಇಲ್ವಾ?” ಎಂದು ಥಟ್ಟನೆ ಪರಿಚಿತ ಧ್ವನಿಯೊಂದು ಕೇಳಬಂತು. ಅವಳ ಸ್ನೇಹಿತೆ ಜೆಸಿಕ ತೆರೆದ ಎರಡು ಬಿಯರ್‌ ಬಾಟಲಿ ಹಿಡಿದು ಅಲ್ಲಿ ನಿಂತಿದ್ದಳು. ಒಂದನ್ನು ಕ್ಯಾರನ್‌ಗೆ ಕೊಡುತ್ತಾ “ತಕ್ಕೋ ಕುಡಿ, ಬೇಡ ಎನ್ನಬೇಡ, ಸ್ವಲ್ಪ ಮಜಾ ಮಾಡೋಣ!” ಎಂದಳು.

ಕ್ಯಾರನ್‌ಗೆ ಬೇಡವೆನ್ನಲು ಮನಸ್ಸಿತ್ತು. ಆದರೆ ಕುಡಿಯಲು ಇದ್ದ ಒತ್ತಡವು ಅವಳು ನೆನಸಿದ್ದಕ್ಕಿಂತ ಎಷ್ಟೋ ಹೆಚ್ಚಿತ್ತು. ಕುಡಿಯಲು ಮನಸ್ಸಿರದಿದ್ದರೂ, ತಾನು ಮಜಾ ಮಾಡಲು ಇಷ್ಟಪಡದವಳೆಂದು ಜೆಸಿಕ ನೆನಸಬಾರದು ಎಂದವಳ ಆಶೆ. ಅದಲ್ಲದೆ ಜೆಸಿಕ ಒಳ್ಳೇ ಹುಡುಗಿ. ‘ಅವಳೇ ಕುಡಿಯುವುದಾದರೆ ನಾನೇನು ಮಹಾ? ಬರೇ ಬಿಯರ್‌ ತಾನೇ? ಡ್ರಗ್ಸ್‌ ಅಥವಾ ಸೆಕ್ಸ್‌ ಅಲ್ವಲ್ಲಾ’ ಎಂದು ತನ್ನೊಳಗೆ ಹೇಳಿಕೊಳ್ಳುತ್ತಾಳೆ.

ಯೌವನದಲ್ಲಿ ಪ್ರಲೋಭನೆಗಳು ಅನೇಕ ರೀತಿಗಳಲ್ಲಿ ಬರುತ್ತವೆ. ವಿಶೇಷವಾಗಿ ಹುಡುಗ ಹುಡುಗಿಯರ ಮಧ್ಯೆ. “ಶಾಲೆಯ ಹುಡುಗಿಯರು ತುಂಬ ಜೋರು. ಮೈ ಮೇಲೆ ಬಿದ್ದೇ ಮಾತಾಡ್ತಾರೆ. ದೂಡಿದರೂ ಬಿಡುವುದಿಲ್ಲ!” ಎನ್ನುತ್ತಾನೆ 17 ವರ್ಷದ ರಾಮಾನ್‌. * 17 ವರ್ಷದ ಡೀಯೆನಳಿಗೂ ಇದೇ ಅನುಭವವಾಗಿತ್ತು. “ಒಬ್ಬ ಹುಡುಗ ಥಟ್ಟನೆ ನನ್ನನ್ನು ತೋಳಿನಿಂದ ಬಳಸಿದ. ನಾನು ಅವನ ತೋಳಿಗೆ ಸರಿಯಾಗಿ ಗುದ್ದಿ, ‘ಯಾರೋ ನೀನು? ಹೋಗ್ತಿಯಾ ಇಲ್ವಾ?’ ” ಎಂದು ಗುಡುಗಿದೆ.

ನಿಮಗೂ ಇಂಥ ಪ್ರಲೋಭನೆಗಳು ಬರಬಹುದು. ಅವುಗಳಿಗೆ ಕೊನೆಯೇ ಇಲ್ಲವೆಂಬಂತೆ ತೋರೀತು. ಒಬ್ಬ ಕ್ರೈಸ್ತನು ಹೇಳುವ ಪ್ರಕಾರ “ನೀವೆಷ್ಟು ಬೇಡವೆಂದು ಹೇಳಲು ಪ್ರಯತ್ನಿಸಿದರೂ ಪ್ರಲೋಭನೆಯು ಸದಾ ನಿಮ್ಮ ಬಾಗಿಲನ್ನು ತಟ್ಟುತ್ತಾ ಇರುತ್ತದೆ.” ಆ ಸದ್ದು ನಿಮಗೆ ಯಾವಾಗಲೂ ಕೇಳಿಸುತ್ತದೋ? ಉದಾಹರಣೆಗೆ, ಈ ಕೆಳಗಿನವುಗಳಲ್ಲಿ ಯಾವುದಾದರೂ ನಿಮ್ಮನ್ನು ಪ್ರಲೋಭನೆಗೆ ಒಳಪಡಿಸುತ್ತದೋ?

ಧೂಮಪಾನ

ಮದ್ಯಪಾನ

ಡ್ರಗ್ಸ್‌ ಸೇವನೆ

ಅಶ್ಲೀಲ ಚಿತ್ರ ವೀಕ್ಷಣೆ

ಅನೈತಿಕ ಸೆಕ್ಸ್‌

ಇತರೆ

ಈ ಮೇಲಿನ ಯಾವುದೇ ಪ್ರಲೋಭನೆಯನ್ನು ನೀವು ಗುರುತಿಸಿದರೆ ಕ್ರೈಸ್ತರಾಗಲು ಅನರ್ಹರೆಂದು ನಿರ್ಣಯಿಸಬೇಡಿ. ಅಂಥ ದುರಿಚ್ಛೆಗಳನ್ನು ಹತೋಟಿಯಲ್ಲಿಡಲು ಮತ್ತು ಪ್ರಲೋಭನೆಗಳನ್ನು ಎದುರಿಸಲು ನೀವು ಕಲಿಯಬಲ್ಲಿರಿ. ಹೇಗೆ? ಪ್ರಲೋಭನೆಯ ಕಾರಣವನ್ನು ನೀವು ಗುರುತಿಸುವುದಾದರೆ ಅದು ಸಹಾಯಕಾರಿ. ಕೆಳಗಿನ ಮೂರು ಅಂಶಗಳನ್ನು ಗಮನಿಸಿ.

1. ಅಪರಿಪೂರ್ಣತೆ. ಕೆಟ್ಟದ್ದನ್ನು ಮಾಡುವ ಪ್ರವೃತ್ತಿ ಅಪರಿಪೂರ್ಣ ಮಾನವರಿಗೆ ಸರ್ವೇಸಾಮಾನ್ಯ. “ಒಳ್ಳೇಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ” ಎಂದು ಪ್ರೌಢ ಕ್ರೈಸ್ತ ಅಪೊಸ್ತಲ ಪೌಲನು ಸಹ ಯಥಾರ್ಥವಾಗಿ ಒಪ್ಪಿಕೊಂಡನು. (ರೋಮಾಪುರ 7:​21, NIBV) ನೀತಿವಂತನಾದ ಮನುಷ್ಯನು ಸಹ ಕೆಲವೊಮ್ಮೆ ‘ಶರೀರದಾಶೆ ಕಣ್ಣಿನಾಶೆಯ’ ಪ್ರಲೋಭನೆಗೆ ಒಳಗಾಗುತ್ತಾನೆ. (1 ಯೋಹಾನ 2:16) ಆದರೆ ಪ್ರಲೋಭನೆಗಳ ಕುರಿತು ಸದಾ ಯೋಚಿಸುತ್ತಾ ಇರುವುದು ಅವನ್ನು ತೀರಾ ಹೆಚ್ಚಿಸುತ್ತವೆಯೇ ಹೊರತು ಕಡಿಮೆಗೊಳಿಸುವುದಿಲ್ಲ. ಏಕೆಂದರೆ ಬೈಬಲ್‌ ಅನ್ನುವುದು: “ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”​—⁠ಯಾಕೋಬ 1:⁠15.

2. ಹೊರಗಿನ ಪ್ರಭಾವಗಳು. ಎಲ್ಲಿ ನೋಡಿದರೂ ಪ್ರಲೋಭನೆಗಳು ಇದ್ದೇ ಇರುತ್ತವೆ. “ಶಾಲೆಯಲ್ಲಿ ಮತ್ತು ಕೆಲಸದಲ್ಲಿ ಯಾವಾಗಲೂ ಸೆಕ್ಸ್‌ ಕುರಿತೇ ಮಾತು. ಟಿ.ವಿ. ಮತ್ತು ಚಲನಚಿತ್ರಗಳಲ್ಲಿ ಸೆಕ್ಸ್‌ ಅನ್ನು ತುಂಬಾ ಮನಮೋಹಕ ಹಾಗೂ ರೋಮಾಂಚಕವಾಗಿ ತೋರಿಸಲಾಗುತ್ತದೆ. ಅದರ ಕೆಟ್ಟ ಪರಿಣಾಮಗಳನ್ನು ಅವುಗಳಲ್ಲಿ ತೋರಿಸುವುದೇ ಇಲ್ಲ!” ಎಂದು ಟ್ರೂಡೀ ಹೇಳುತ್ತಾಳೆ. ಅಂಥ ಪ್ರಭಾವಗಳು ಎಷ್ಟು ಶಕ್ತಿಶಾಲಿ ಎಂಬುದನ್ನು ಟ್ರೂಡೀ ಅನುಭವದಿಂದ ಹೇಳುತ್ತಾಳೆ. “ನಾನು 16ರ ಹರೆಯದಲ್ಲೇ ಪ್ರೇಮದಲ್ಲಿ ಬಿದ್ದೆ ಎಂದು ನೆನಸಿದೆ. ನನ್ನ ಅಮ್ಮ ನನ್ನ ಹತ್ತಿರ ಕೂತು ಹೀಗೆಯೇ ಮುಂದುವರಿದರೆ ಬಸುರಾಗುವ ಸಂಭವವಿದೆ ಎಂದು ಬುದ್ಧಿ ಹೇಳಿದರು. ತಾಯಿ ಹಾಗೆ ಹೇಳುವರೆಂದು ನಾನು ಕನಸುಮನಸ್ಸಲ್ಲೂ ನೆನಸಿರಲಿಲ್ಲ! ಆದರೆ ಎರಡೇ ತಿಂಗಳಲ್ಲಿ ನಾನು ಬಸುರಿಯಾದೆ!”

3. ‘ಯೌವನದ ಇಚ್ಛೆಗಳು.’ (2 ತಿಮೊಥೆಯ 2:22) ಈ ವಚನ ಯೌವನದಲ್ಲಿ ಬರುವಂಥ ಯಾವುದೇ ಇಚ್ಛೆಗಳನ್ನು ಸೂಚಿಸುತ್ತದೆ. ಇತರರ ಮೆಚ್ಚಿಗೆ ಪಡೆಯುವ ಹಂಬಲ ಹಾಗೂ ಪ್ರೌಢ ವ್ಯಕ್ತಿಯಾಗಿ ಪರಿಗಣಿಸಲ್ಪಡುವ ಕಟ್ಟಾಸೆ ಇತ್ಯಾದಿ ಅದರಲ್ಲಿ ಸೇರಿದೆ. ಅಂಥ ಆಶೆಗಳು ತಪ್ಪೇನಲ್ಲ. ಆದರೆ ಅವನ್ನು ಅಂಕೆಯಲ್ಲಿಡದಿದ್ದರೆ ಪ್ರಲೋಭನೆಗಳನ್ನು ಎದುರಿಸಲು ಕಷ್ಟ. ಉದಾಹರಣೆಗೆ, ಪ್ರೌಢ ವ್ಯಕ್ತಿಯಾಗಿ ಪರಿಗಣಿಸಲ್ಪಡುವ ಕಟ್ಟಾಸೆಯು ನಿಮ್ಮ ಹೆತ್ತವರು ಕಲಿಸಿದ ಒಳ್ಳೇ ಮೌಲ್ಯಗಳನ್ನು ಕೊನೆಗೊಂದು ದಿನ ಕಡೆಗಣಿಸುವಂತೆಯೂ ಮಾಡೀತು. ಸ್ಟೀವ್‌ ಎಂಬವನಿಗೆ 17ರ ವಯಸ್ಸಿನಲ್ಲಿ ಅದೇ ಸಂಭವಿಸಿತು. ಅವನಂದದ್ದು: “ನಾನು ನನ್ನ ಹೆತ್ತವರ ವಿರುದ್ಧ ಎದ್ದು ಅವರು ನನಗೆ ಮಾಡಬಾರದೆಂದು ಕಲಿಸಿದ ಎಲ್ಲಾ ವಿಷಯಗಳನ್ನೂ ಮಾಡಿಬಿಟ್ಟೆ. ಹೀಗೆಲ್ಲಾ ಮಾಡಿದ್ದು ನಾನು ದೀಕ್ಷಾಸ್ನಾನವಾದ ಸ್ವಲ್ಪದರಲ್ಲೇ.”

ಮೇಲೆ ತಿಳಿಸಿದ ಪ್ರಭಾವಗಳು ಪ್ರಬಲವೆಂಬುದು ನಿಜ. ಆದರೂ ನೀವು ಪ್ರಲೋಭನೆಗಳನ್ನು ಎದುರಿಸಬಲ್ಲಿರಿ. ಹೇಗೆ?

ಮೊದಲಾಗಿ, ನಿಮಗೆ ಎದುರಿಸಲು ಅತೀ ಕಷ್ಟಕರವಾಗಿರುವ ಸಮಸ್ಯೆ ಯಾವುದೆಂದು ಗುರುತಿಸಿರಿ. (ಮೇಲೆ ನೀವದನ್ನು ಈ ಮೊದಲೇ ಗುರುತಿಸಿರಬಹುದು.)

ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಹೆಚ್ಚಾಗಿ ಯಾವಾಗ ನಾನು ಈ ಪ್ರಲೋಭನೆಗೆ ಒಳಗಾಗುತ್ತೇನೆ?’ ಕೆಳಗಿನವುಗಳಲ್ಲಿ ಒಂದನ್ನು ಗುರುತಿಸಿ:

ಶಾಲೆಯಲ್ಲಿ

ಉದ್ಯೋಗದಲ್ಲಿ

ಒಬ್ಬರೇ ಇರುವಾಗ

ಇತರೆ

ಪ್ರಲೋಭನೆಯು ಯಾವಾಗ ಬರುತ್ತದೆ ಎಂದು ತಿಳಿಯುವುದು ಅದನ್ನು ಪೂರ್ತಿಯಾಗಿ ನಿರೋಧಿಸಲೂ ಸಹಾಯಮಾಡುವುದು. ಉದಾಹರಣೆಗೆ, ಈ ಲೇಖನದ ಆರಂಭದಲ್ಲಿ ಕೊಟ್ಟಂಥ ಕಾಲ್ಪನಿಕ ದೃಶ್ಯವನ್ನು ಪರಿಗಣಿಸಿ. ಕ್ಯಾರನ್‌ ಹೋಗಿದ್ದ ಪಾರ್ಟಿಯಲ್ಲಿ ತೊಂದರೆಯಾದೀತೆಂಬುದಕ್ಕೆ ಅವಳಿಗೆ ಯಾವ ಎಚ್ಚರಿಕೆ ಸಿಕ್ಕಿತ್ತು? ಆ ಪ್ರಲೋಭನೆಯನ್ನು ಅವಳು ಆರಂಭದಲ್ಲೇ ಹೇಗೆ ಪೂರ್ತಿಯಾಗಿ ತಡೆಗಟ್ಟಬಹುದಿತ್ತು?

ನೀವೀಗ (1) ಪ್ರಲೋಭನೆಯನ್ನು ಗುರುತಿಸಿ, (2) ಅದು ಯಾವಾಗ ಸಂಭವಿಸಬಹುದು ಎಂದು ಕಂಡುಹಿಡಿದಿರುವುದರಿಂದ ಅದನ್ನು ನಿಭಾಯಿಸಲು ಸಿದ್ಧರಾಗಿದ್ದೀರಿ. ಈಗ ನೀವು ಮಾಡ​ಬೇಕಾದ ಮುಖ್ಯ ವಿಷಯವೇನೆಂದರೆ ಪ್ರಲೋಭನೆಯ ಸಂದರ್ಭಗಳನ್ನು ಕಡಿಮೆಗೊಳಿಸುವುದು ಮತ್ತು ಅದಕ್ಕೆ ಎದುರಾಗದಂತೆ ನೋಡಿಕೊಳ್ಳುವುದೇ ಆಗಿದೆ. ನೀವೇನು ಮಾಡಬೇಕು ಎಂಬುದನ್ನು ಕೆಳಗೆ ಬರೆಯಿರಿ.

.....

.....

(ಉದಾಹರಣೆಗಳು: ಧೂಮಪಾನಕ್ಕಾಗಿ ನಿಮ್ಮನ್ನು ಪ್ರೇರಿಸುವ ಸಹಪಾಠಿಗಳು ಶಾಲೆ ಮುಗಿದ ನಂತರ ನಿಮಗೆದುರಾಗುವುದಾದರೆ ಅವರು ಸಿಗುವ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಹೋಗಿರಿ. ಅಶ್ಲೀಲ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಆಗಾಗ್ಗೆ ಬರುತ್ತಿರುವುದಾದರೆ ನೀವು ಅಂಥ ಎಲ್ಲಾ ಮೆಸೆಜ್‌ಗಳನ್ನು ಮತ್ತು ಸೈಟ್‌ಗಳನ್ನು ‘ಬ್ಲಾಕ್‌’ ಮಾಡಲು ಪ್ರೊಗ್ಯಾಮ್‌ಗಳನ್ನು ಅಳವಡಿಸಬಹುದು. ಅಲ್ಲದೆ, ಸರ್ಚ್‌ ಎಂಜಿನ್‌ನಲ್ಲಿ ನೀವು ಎಂಟರ್‌ ಮಾಡುವಾಗ ಮುಖ್ಯಪದಗಳನ್ನು ಹೆಚ್ಚು ನಿರ್ದಿಷ್ಟವಾಗಿ ಸೂಚಿಸಿರಿ.)

ನೀವು ಎಲ್ಲ ಪ್ರಲೋಭನೆಗಳನ್ನು ತಡೆಗಟ್ಟಲಾರಿರಿ ಎಂಬುದು ನಿಶ್ಚಯ. ಇಂದೊ ನಾಳೆಯೊ ನೀವು ನೆನಸದಿದ್ದಾಗ ಒಂದು ಪ್ರಬಲ ಪ್ರಲೋಭನೆಯು ನಿಮಗೆ ಎದುರಾಗಬಹುದು. ನೀವೇನು ಮಾಡಬಲ್ಲಿರಿ?

ತಯಾರಾಗಿರ್ರಿ. ಯೇಸು ‘ಸೈತಾನನಿಂದ ಶೋಧಿಸಲ್ಪಟ್ಟಾಗ’ ಕೂಡಲೇ ಆ ಪ್ರಲೋಭನೆಯನ್ನು ನಿರಾಕರಿಸಿದನು. (ಮಾರ್ಕ 1:13) ಯಾಕೆ? ಯಾಕೆಂದರೆ ಅಂಥ ಪ್ರಲೋಭನೆಗಳು ಎದುರಾಗುವಾಗ ತಾನೇನು ಮಾಡಲಿದ್ದೇನೆ ಎಂದು ಅವನು ಮೊದಲೇ ಯೋಚಿಸಿ ಸಿದ್ಧನಾಗಿದ್ದನು. ಆ ಕುರಿತು ಯೋಚಿಸಿ. ಯೇಸು ಯಂತ್ರಮಾನವನಾಗಿರಲಿಲ್ಲ. ಅವನು ಪ್ರಲೋಭನೆಗೆ ಬಲಿಬೀಳುವ ಸಾಧ್ಯತೆಯಿತ್ತು. ಆದರೆ ತನ್ನ ತಂದೆಗೆ ಎಲ್ಲಾ ವಿಷಯಗಳಲ್ಲಿ ವಿಧೇಯನಾಗಿರಲು ಅವನು ಆ ಮೊದಲೇ ನಿರ್ಧರಿಸಿದ್ದನು. (ಯೋಹಾನ 8:​28, 29) “ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು” ಎಂದು ಯೇಸು ಹೇಳಿದಾಗ ಸತ್ಯವನ್ನೇ ನುಡಿದನು.​—⁠ಯೋಹಾನ 6:⁠38.

ನಿಮಗೆ ಹೆಚ್ಚಾಗಿ ಎದುರಾಗುವ ಪ್ರಲೋಭನೆಗಳನ್ನು ನೀವೇಕೆ ಎದುರಿಸಬೇಕು ಎಂಬುದಕ್ಕಿರುವ ಎರಡು ಕಾರಣಗಳನ್ನು ಹಾಗೂ ಅವನ್ನು ಪ್ರತಿರೋಧಿಸಲು ನೀವು ನಿಶ್ಚಯಿಸಿರುವ ಎರಡು ವಿಧಾನಗಳನ್ನು ಕೆಳಗಿನ ಖಾಲಿ ಜಾಗದಲ್ಲಿ ಬರೆಯಿರಿ.

1. .....

2. .....

ನೀವು ಪ್ರಲೋಭನೆಗಳಿಗೆ ಬಿಟ್ಟುಕೊಟ್ಟಲ್ಲಿ ನಿಮ್ಮ ಸ್ವಂತ ದುರಿಚ್ಛೆಗಳಿಗೆ ನೀವು ದಾಸರಾಗುವಿರಿ ಎಂಬುದನ್ನು ನೆನಪಿನಲ್ಲಿಡಿ. (ತೀತ 3:⁠3) ನಿಮ್ಮ ದುರಾಶೆಗಳಿಗೆ ದಾಸರಾಗುವಂತೆ ನೀವೇಕೆ ಬಿಟ್ಟುಕೊಡಬೇಕು? ನಿಮ್ಮ ದುರಾಶೆಗಳು ನಿಮ್ಮನ್ನು ಅಂಕೆಯಲ್ಲಿಡುವಂತೆ ಬಿಟ್ಟುಕೊಡುವ ಬದಲಾಗಿ ನಿಮ್ಮ ಪ್ರೌಢತೆಯು ನಿಮ್ಮನ್ನು ಅಂಕೆಯಲ್ಲಿಡಲಿ.​—⁠ಕೊಲೊಸ್ಸೆ 3:⁠5. (g 8/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿ]

^ ಹೆಸರುಗಳನ್ನು ಬದಲಾಯಿಸಲಾಗಿದೆ.

ಇದರ ಕುರಿತು ಯೋಚಿಸಿರಿ

ಪರಿಪೂರ್ಣ ಜೀವಿಗಳು ಪ್ರಲೋಭನೆಗೆ ಒಳಗಾಗಬಲ್ಲರೋ?​—⁠ಆದಿಕಾಂಡ 6:​1-3; ಯೋಹಾನ 8:⁠44.

ನೀವು ಪ್ರಲೋಭನೆಯನ್ನು ಎದುರಿಸುವಾಗ ನಿಮ್ಮ ನಂಬಿಗಸ್ತಿಕೆಯು ಇತರರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?​—⁠ಜ್ಞಾನೋಕ್ತಿ 27:11; 1 ತಿಮೊಥೆಯ 4:⁠12.

[ಪುಟ 29ರಲ್ಲಿರುವ ಚೌಕ]

ಮಾಡಿ ನೋಡಿ

ಒಂದು ದಿಕ್ಸೂಚಿಯನ್ನು ತೆಗೆದುಕೊಂಡು ಅದನ್ನು ಉತ್ತರ ದಿಕ್ಕಿಗೆ ತಿರುಗಿಸಿಡಿ. ಈಗ ದಿಕ್ಸೂಚಿಯ ಪಕ್ಕದಲ್ಲಿ ಒಂದು ಅಯಸ್ಕಾಂತವನ್ನು ಇಡಿ. ಆಗ ಏನಾಗುತ್ತದೆ? ಸೂಜಿಯು ಸರಿಯಾದ ದಿಕ್ಕನ್ನು ಸೂಚಿಸುವುದಿಲ್ಲ. ಬದಲಾಗಿ ಅದು ಅಯಸ್ಕಾಂತದ ಕಡೆಗೆ ತಿರುಗುತ್ತದೆ.

ನಿಮ್ಮ ಮನಸ್ಸಾಕ್ಷಿಯೂ ಆ ದಿಕ್ಸೂಚಿಯಂತೆ ಇದೆ. ಅದನ್ನು ಒಳ್ಳೇದಾಗಿ ತರಬೇತಿಗೊಳಿಸಿದ್ದಲ್ಲಿ ಅದು ಸರಿಯಾದ “ದಿಕ್ಕನ್ನು” ಸೂಚಿಸುತ್ತದೆ ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡುವಂತೆ ನೆರವು ನೀಡುತ್ತದೆ. ಆದರೆ ಹಾನಿಕರ ಸಹವಾಸವು ಒಂದು ಅಯಸ್ಕಾಂತದಂತಿದ್ದು ನಿಮ್ಮ ನೈತಿಕ ತೀರ್ಮಾನವನ್ನು ತಪ್ಪಾದ ದಿಕ್ಕಿಗೆ ತಿರುಚಬಲ್ಲದು. ಪಾಠ: ನಿಮ್ಮ ನೈತಿಕ ಪ್ರಜ್ಞೆಯನ್ನು ತಿರುಚಬಲ್ಲ ಜನರಿಂದಲೂ ಸನ್ನಿವೇಶಗಳಿಂದಲೂ ದೂರವಿರ್ರಿ!​—⁠ಜ್ಞಾನೋಕ್ತಿ 13:⁠20.

[ಪುಟ 27ರಲ್ಲಿರುವ ಚೌಕ]

ಸಲಹೆ

ಕೆಟ್ಟದ್ದನ್ನು ಮಾಡುವಂತೆ ಯಾರಾದರೂ ನಿಮ್ಮನ್ನು ಪ್ರಚೋದಿಸುಲ್ಲಿ ಹೇಗೆ ಪ್ರತಿವರ್ತಿಸಬೇಕೆಂದು ಮೊದಲೇ ಯೋಜಿಸಿ. ಚಿಂತಿಸದಿರಿ. ನೀವು ತುಂಬ ಯೋಗ್ಯರೆಂದು ತೋರಿಸುವಂಥ ರೀತಿಯಲ್ಲಿ ಉತ್ತರ ಹೇಳುವ ಅಗತ್ಯವಿಲ್ಲ. ಅನೇಕವೇಳೆ ದೃಢನಿಶ್ಚಯದಿಂದ ಕೂಡಿದ ಸರಳ ಉತ್ತರವೇ ಸಾಕು. ಉದಾಹರಣೆಗೆ, ನಿಮ್ಮ ಸಹಪಾಠಿಯೊಬ್ಬನು ಸಿಗರೇಟ್‌ ಕೊಟ್ಟು ಸೇದುವಂತೆ ಹೇಳುವಲ್ಲಿ “ನನಗೆ ಬೇಡ, ನಾನು ಸೇದುವುದಿಲ್ಲ!” ಎಂದು ನೇರವಾಗಿ ಹೇಳಿಬಿಡಿ.

[ಪುಟ 30ರಲ್ಲಿರುವ ಚಿತ್ರ]

ನೀವು ಪ್ರಲೋಭನೆಗಳಿಗೆ ಬಿಟ್ಟುಕೊಟ್ಟಲ್ಲಿ ನಿಮ್ಮ ಸ್ವಂತ ದುರಿಚ್ಛೆಗಳಿಗೆ ದಾಸರಾಗುವಿರಿ