ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಪತ್ತಿನ ಸೂಚನೆಗಳೋ?

ಆಪತ್ತಿನ ಸೂಚನೆಗಳೋ?

ಆಪತ್ತಿನ ಸೂಚನೆಗಳೋ?

“ತುವಾಲು ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ 73 ವಯಸ್ಸಿನ ವಾಲ್‌ ಲೇಸ ಎಂಬವನಿಗೆ ಸಮುದ್ರ ಮಟ್ಟವು ಏರುತ್ತಿದೆ ಎಂದು ತಿಳಿದುಕೊಳ್ಳಲು ವೈಜ್ಞಾನಿಕ ವರದಿಗಳ ಅಗತ್ಯವಿಲ್ಲ. ಅವನ ಬಾಲ್ಯದ ದಿನಗಳ ಸಮುದ್ರ ತೀರಗಳು ಕಣ್ಮರೆಯಾಗುತ್ತಾ ಇವೆ. ಅವನ ಕುಟುಂಬಕ್ಕೆ ಒಮ್ಮೆ ಪೋಷಣೆಯನ್ನು ನೀಡುತ್ತಿದ್ದ ಪೈರುಗಳು ಇಂದು ಉಪ್ಪುನೀರಿನಿಂದಾಗಿ ವಿಷಪೂರಿತವಾಗಿವೆ. ಏಪ್ರಿಲ್‌ [2007]ರಲ್ಲಿ ಅವನು ಮನೆಯನ್ನೂ ಬಿಟ್ಟು ಹೊರಡಬೇಕಾಯಿತು. ಏಕೆಂದರೆ ಪರ್ವಕಾಲದ ಭರತದಿಂದಾಗಿ ತೆರೆಗಳು ಅವನ ಮನೆಯನ್ನು ನೆರೆನೀರಿನಿಂದ ತುಂಬಿಸಿ ಕಲ್ಲು-ಮಣ್ಣು ಮುರುಕಲುಗಳಿಂದ ಸದೆಬಡೆದವು” ಎಂದು ಹೇಳುತ್ತದೆ ದ ನ್ಯೂ ಸೀಲೆಂಡ್‌ ಹೆರಾಲ್ಡ್‌.

ತುವಾಲು ಹಲವಾರು ದ್ವೀಪಗಳಿಂದ ಕೂಡಿದ ಒಂದು ಹಳ್ಳಿ. ಸಮುದ್ರ ಮಟ್ಟಕ್ಕಿಂತ ಕೇವಲ 4 ಮೀಟರ್‌ ಎತ್ತರದಲ್ಲಿದೆ. ಇಲ್ಲಿಯ ನಿವಾಸಿಗಳಿಗೆ ಭೂಮಿಯ ಬಿಸಿಯೇರುವಿಕೆಯ ಬಗ್ಗೆ ವಿಜ್ಞಾನಿಗಳು ಕಲಿಸಬೇಕೆಂದಿಲ್ಲ. ಅದು ಅವರ “ದಿನನಿತ್ಯದ ಅನುಭವ” ಎಂದು ಹೇಳುತ್ತದೆ ಹೆರಾಲ್ಡ್‌ ಪತ್ರಿಕೆ. * ಸಾವಿರಾರು ಜನರು ಈಗಾಗಲೇ ದ್ವೀಪವನ್ನು ಬಿಟ್ಟುಹೋಗಿದ್ದಾರೆ. ಇನ್ನೂ ಅನೇಕರು ಅಲ್ಲಿಂದ ಹೊರಡುವ ಸಿದ್ಧತೆಯಲ್ಲಿದ್ದಾರೆ.

ಈ ಮಧ್ಯೆ, ಆಸ್ಟ್ರೇಲಿಯದ ಬ್ರಿಸ್ಬನ್‌ನಲ್ಲಿ ವಾಸಿಸುವ ರಾಬರ್ಟ್‌ ಎಂಬವನಿಗೆ ತನ್ನ ತೋಟಕ್ಕೆ ಪ್ರತಿದಿನ ನೀರೆರೆಯಲು ಅನುಮತಿಯಿಲ್ಲ. ಅವನು ನಿರ್ದಿಷ್ಟ ದಿನಗಳಲ್ಲಿ ಮಾತ್ರ, ಅದೂ ಪೈಪ್‌ ಮೂಲಕವಲ್ಲ, ಬಕೆಟ್‌ನಿಂದಲೇ ನೀರು ಎರೆಯಬೇಕು ಯಾಕೆಂದರೆ ನೀರು ದುಂದಾಗಬಾರದೆಂಬ ಕಟ್ಟಾಜ್ಞೆ ಅಲ್ಲಿದೆ. ಅದಲ್ಲದೆ, ತನ್ನ ಇಡೀ ಕಾರನ್ನು ವಾಶ್‌ ಮಾಡಬೇಕಾದರೆ ನೀರಿನ ಮರುಬಳಕೆಯ ಸೌಕರ್ಯಗಳಿರುವ ಕಾರ್‌ ತೊಳೆಯುವ ವರ್ಕ್‌ಶಾಪ್‌ಗೆ ಅವನು ಹೋಗಬೇಕು. ಇಲ್ಲವಾದರೆ ಕಾರಿನ ಕನ್ನಡಿ, ಕಿಟಿಕಿಗಳು ಮತ್ತು ನಂಬರ್‌ ಪ್ಲೇಟುಗಳನ್ನು ಮಾತ್ರ ಅವನು ತೊಳೆಯಶಕ್ತನು. ಅಂಥ ನಿರ್ಬಂಧಗಳೇಕೆ? ಏಕೆಂದರೆ ರಾಬರ್ಟ್‌ ಜೀವಿಸುತ್ತಿರುವುದು ಶತಮಾನದಲ್ಲೇ ಅತಿ ಘೋರವಾದ ಅನಾವೃಷ್ಟಿಯಿಂದ ಬಳಲುತ್ತಿರುವ ಆ ದೇಶಭಾಗದಲ್ಲಿ. ದೇಶದ ಇತರ ಭಾಗಗಳಲ್ಲಾದರೋ ನೀರಿನ ಅಭಾವ ಇನ್ನಷ್ಟು ಹೆಚ್ಚು. ಆಸ್ಟ್ರೇಲಿಯ ಮತ್ತು ತುವಾಲುಗಳಲ್ಲಿರುವ ಈ ಸಮಸ್ಯೆಗಳು ಭೂಮಿ ಬಿಸಿಯೇರುವಿಕೆಯ ಪುರಾವೆಗಳೋ?

ಕೆಲವರ ಭವಿಷ್ಯನುಡಿ

ಮಾನವರ ಚಟುವಟಿಕೆಗಳೇ ಭೂಮಿ ಬಿಸಿಯೇರುವಿಕೆಗೆ ಮುಖ್ಯ ಕಾರಣವೆಂದು ಅನೇಕರು ನಂಬುತ್ತಾರೆ. ಹವಾಮಾನ ಮತ್ತು ಪರಿಸರಗಳ ಮೇಲೆ ವಿಪತ್ಕಾರಕ ಪರಿಣಾಮಗಳು ಅವುಗಳಿಂದಲೇ ಆಗುತ್ತಿರಬಹುದು. ಉದಾಹರಣೆಗೆ, ಉಷ್ಣತೆಯಿಂದಾಗಿ ಭೂಭಾಗದ ಮೇಲಿನ ಮಂಜುಗಡ್ಡೆಯು ಅಧಿಕ ಪ್ರಮಾಣದಲ್ಲಿ ಕರಗುವುದರಿಂದ ಮತ್ತು ನೀರಿನ ಬಿಸಿಯೇರುವಿಕೆಯಿಂದಾಗಿ ಸಾಗರಗಳ ಗಾತ್ರವು ವಿಸ್ತಾರಗೊಳ್ಳುವುದರಿಂದ ಸಮುದ್ರ ಮಟ್ಟವು ಒಮ್ಮಿಂದೊಮ್ಮೆಲೇ ಮೇಲೇರುತ್ತದೆ. ಆಗ ತುವಾಲುನಂಥ ತಗ್ಗು ಪ್ರದೇಶದಲ್ಲಿರುವ ದ್ವೀಪಗಳು ಕಾಣೆಯಾಗಿ ಹೋಗಬಲ್ಲವು, ಅಂತೆಯೇ ನೆದರ್ಲೆಂಡ್‌ ಮತ್ತು ಪ್ಲೋರಿಡಗಳ ಹೆಚ್ಚಿನ ಭಾಗಗಳು ಸಹ. ಇಂಥ ಸಂದರ್ಭಗಳಲ್ಲಿ ಶಾಂಘೈ, ಕೊಲ್ಕತ್ತ ಮತ್ತು ಬಂಗ್ಲಾದೇಶದ ಕೆಲವು ಸ್ಥಳಗಳಲ್ಲಿನ ಲಕ್ಷಾಂತರ ಜನರು ಸಹ ತಮ್ಮ ಮನೆಮಾರುಗಳನ್ನು ಕಳೆದುಕೊಂಡು ಬೇರೆ ಸ್ಥಳಗಳಿಗೆ ಓಡಿ​ಹೋಗಲು ನಿರ್ಬಂಧಿಸಲ್ಪಡಬಹುದು.

ಅದೇ ಸಮಯದಲ್ಲಿ ತಾಪಮಾನದ ಏರಿಕೆಯಿಂದಾಗಿ ಬಿರುಗಾಳಿಗಳು, ನೆರೆಗಳು ಮತ್ತು ಅನಾವೃಷ್ಟಿಗಳು ಇನ್ನಷ್ಟು ತೀಕ್ಷ್ಣಗೊಳ್ಳಸಾಧ್ಯವಿದೆ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹರಿಯುವ ಹಿಮನದಿಗಳು ಏಳು ನದೀ ವ್ಯವಸ್ಥೆಗಳಿಗೆ ನೀರಿನ ಮೂಲವಾಗಿರುತ್ತವೆ. ಆದರೆ ಆ ಹಿಮನದಿಗಳು ಈಗ ಕಣ್ಮರೆಯಾಗುತ್ತಾ ಬರುತ್ತಿರುವುದರಿಂದ ಲೋಕದ ಜನಸಂಖ್ಯೆಯ 40 ಶೇಕಡಾ ಜನರಿಗೆ ಶುದ್ಧನೀರಿನ ಅಭಾವವನ್ನು ತರಸಾಧ್ಯವಿದೆ. ಅಲ್ಲದೆ ಸಾವಿರಾರು ವಿವಿಧ ಜಾತಿಯ ಪ್ರಾಣಿಗಳು, ಹಿಮ​ಪ್ರದೇಶದಲ್ಲಿ ಇತರ ಜೀವಿಗಳನ್ನು ತಿಂದು ಬದುಕುವ ಹಿಮಕರಡಿಗಳೇ ಮುಂತಾದವುಗಳು ಸಹ ಅಪಾಯದಲ್ಲಿವೆ. ಅನೇಕ ಕರಡಿಗಳು ಬಡಕಲಾಗುತ್ತಾ ಬರುತ್ತಿವೆಯೆಂದೂ ಕೆಲವು ಕರಡಿಗಳು ಹೊಟ್ಟೆಗಿಲ್ಲದೆ ನರಳುತ್ತಿವೆಯೆಂದೂ ವರದಿಗಳು ಈಗಾಗಲೇ ಸೂಚಿಸುತ್ತವೆ.

ತಾಪಮಾನಗಳ ಏರುವಿಕೆಯು ರೋಗದ ಹರಡುವಿಕೆಯನ್ನು ಹೆಚ್ಚಿಸಲೂಬಹುದು. ಇದರಿಂದಾಗಿ ಸೊಳ್ಳೆಗಳು, ಪರೋಪಜೀವಿಗಳು, ಇತರ ರೋಗವಾಹಕ ಕ್ರಿಮಿಗಳು ಹಾಗೂ ಶಿಲೀಂದ್ರಗಳು ಸಹ ರೋಗಗಳನ್ನು ಬೇರೆ ಬೇರೆ ಕಡೆಗೆ ಹಬ್ಬಿಸುತ್ತವೆ. “ಹವಾಮಾನದ ಬದಲಾವಣೆಯ ಮೂಲಕ ಉಂಟಾಗುವ ಅಪಾಯಗಳು ಬಹುಮಟ್ಟಿಗೆ ಪರಮಾಣು ಶಸ್ತ್ರಗಳಿಂದ ಒಡ್ಡಲಾಗುವ ಗಂಡಾಂತರಗಳಷ್ಟೇ ಭೀಕರವಾಗಿವೆ. ಹವಾಮಾನದ ಬದಲಾವಣೆಯ ದುಷ್ಪರಿಣಾಮಗಳು ಒಡನೆಯೇ ತೋರಿ​ಬರಲಿಕ್ಕಿಲ್ಲವಾದರೂ, . . . ಮಾನವರ ಇರುನೆಲೆಯಾದ ಈ ಭೂಮಿಗೆ ಮುಂದಿನ ನಾಲ್ಕೈದು ದಶಕಗಳೊಳಗೆ ಅಪರಿಹಾರ್ಯ ಹಾನಿಯನ್ನು ಅದು ತರಸಾಧ್ಯವಿದೆ” ಎಂದು ಹೇಳುತ್ತದೆ ಬುಲೆಟಿನ್‌ ಆಫ್‌ ದಿ ಅಟೋಮಿಕ್‌ ಸೈಂಟಿಸ್ಟ್‌. ಭೂಮಿ ಬಿಸಿಯೇರುವಿಕೆಯಿಂದಾಗುವ ಬದಲಾವಣೆಗಳು ತಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ತೀವ್ರವಾಗಿ ಸಂಭವಿಸುತ್ತಿವೆಯೆಂದು ಕೆಲವು ವಿಜ್ಞಾನಿಗಳು ನಂಬುವುದರಿಂದ ಪರಿಸ್ಥಿತಿಯು ಇನ್ನಷ್ಟು ಭಯಭರಿತವಾಗಿದೆ.

ಈ ಭವಿಷ್ಯ ನುಡಿಗಳನ್ನು ನಾವು ನಂಬಬೇಕೋ? ಭೂಮಿಯ ಮೇಲೆ ಜೀವಿಸುವುದು ನಿಜವಾಗಿ ಅಪಾಯಕರವೋ? ಅಂಥ ವಿಪತ್ಕರ ಕಾಲ​ಜ್ಞಾನಗಳು ನಿರಾಧಾರವಾಗಿವೆಯೆಂದು ಭೂಮಿ ಬಿಸಿಯೇರುವಿಕೆಯನ್ನು ನಂಬದವರು ಹೇಳುತ್ತಾರೆ. ಇತರರಿಗಾದರೋ ಏನನ್ನು ನಂಬಬೇಕೆಂದು ತಿಳಿಯುವುದಿಲ್ಲ. ಹೀಗಿರಲಾಗಿ ಸತ್ಯ ಯಾವುದು? ಭೂಮಿ ಹಾಗೂ ನಮ್ಮ ಭವಿಷ್ಯತ್ತು ಅಪಾಯದಲ್ಲಿದೆಯೋ? (g 8/08)

[ಪಾದಟಿಪ್ಪಣಿ]

^ ಭೂಮಿಯ ವಾತಾವರಣ ಹಾಗೂ ಸಾಗರಗಳ ಸರಾಸರಿ ತಾಪಮಾನ ಹೆಚ್ಚುವುದೇ “ಭೂಮಿ ಬಿಸಿಯೇರುವಿಕೆ.”