ದೇವರು ಎಲ್ಲಾ ಕಡೆ, ಎಲ್ಲಾ ವಸ್ತುಗಳಲ್ಲಿಯೂ ಇದ್ದಾನಾ?
ಬೈಬಲ್ ಕೊಡೋ ಉತ್ತರ
ದೇವರು ಎಲ್ಲವನ್ನ ನೋಡ್ತಾನೆ. ಎಲ್ಲಿ ಏನ್ ಬೇಕಾದ್ರೂ ಮಾಡುವಂಥ ಶಕ್ತಿ ಆತನಿಗಿದೆ. (ಜ್ಞಾನೋಕ್ತಿ 15:3; ಇಬ್ರಿಯ 4:13) ಆದ್ರೆ ಬೈಬಲ್, ದೇವರು ಸರ್ವಾಂತರ್ಯಾಮಿ ಅಂತ ಹೇಳಲ್ಲ. ಅಂದ್ರೆ ದೇವರು ಎಲ್ಲ ಕಡೆ, ಎಲ್ಲ ವಸ್ತುಗಳಲ್ಲಿ ಇರ್ತಾನೆ ಅಂತ ಕಲಿಸಲ್ಲ. ಬದಲಿಗೆ ಆತನು ಒಬ್ಬ ವ್ಯಕ್ತಿಯಾಗಿದ್ದಾನೆ, ಆತನಿಗೂ ಇರೋಕೆ ಒಂದು ಜಾಗ ಇದೆ ಅಂತ ಹೇಳುತ್ತೆ.
ದೇವರ ಸ್ವರೂಪ: ದೇವರು “ಆತ್ಮಜೀವಿಯಾಗಿದ್ದಾನೆ.” (ಯೋಹಾನ 4:24, ಪಾದಟಿಪ್ಪಣಿ) ಮನುಷ್ಯರ ಕಣ್ಣಿಗೆ ಆತನು ಕಾಣಿಸಲ್ಲ. (ಯೋಹಾನ 1:18) ಬೈಬಲ್‌ನಲ್ಲಿ ದೇವರ ಬಗ್ಗೆ ಅನೇಕ ದರ್ಶನಗಳಿವೆ. ಆ ದರ್ಶನಗಳಲ್ಲಿ ದೇವರು ಒಂದು ಪ್ರತ್ಯೇಕ ಜಾಗದಲ್ಲಿ ಇರ್ತಾನೆ ಅಂತ ತಿಳಿಸಿದೇ ಹೊರತು ಆತನು ಎಲ್ಲ ಕಡೆ ಇರ್ತಾನೆ ಅಂತ ಎಲ್ಲಿಯೂ ಹೇಳಿಲ್ಲ.—ಯೆಶಾಯ 6:1, 2; ಪ್ರಕಟನೆ 4:2, 3, 8.
ದೇವರು ಎಲ್ಲಿ ಇರ್ತಾನೆ? ಆತನು ‘ತನ್ನ ವಾಸಸ್ಥಳವಾದ ಆಕಾಶದಲ್ಲಿ’ ಇರ್ತಾನೆ ಅಂತ ಬೈಬಲ್ ಹೇಳುತ್ತೆ. (1 ಅರಸು 8:30) ಅಂದ್ರೆ ದೇವರು ಭೂಮಿಯಲ್ಲೋ, ವಿಶ್ವದಲ್ಲೋ ಇಲ್ಲ, ಆತನು ಸ್ವರ್ಗದಲ್ಲಿ ಇದ್ದಾನೆ ಅಂತರ್ಥ. ಒಂದು ಸಂದರ್ಭದಲ್ಲಿ ದೇವದೂತರೆಲ್ಲ ‘ಯೆಹೋವನ a ಮುಂದೆ ಸೇರಿ ಬಂದರು’ ಅಂತ ಬೈಬಲ್ ಹೇಳುತ್ತೆ. ಇದ್ರಿಂದ ದೇವರು ಒಂದು ಪ್ರತ್ಯೇಕ ಜಾಗದಲ್ಲಿ ಇರ್ತಾನೆ ಅಂತ ನಮಗೆ ಗೊತ್ತಾಗುತ್ತೆ.—ಯೋಬ 1:6.
‘ದೇವರು ಎಲ್ಲಾ ಕಡೆ ಇರಲ್ಲ ಅಂದ್ಮೇಲೆ ನನ್ನ ಬಗ್ಗೆ ಯೋಚನೆ ಮಾಡ್ತಾನಾ?’
ಖಂಡಿತ. ದೇವರು ಪ್ರತಿಯೊಬ್ಬರ ಬಗ್ಗೆ ಯೋಚನೆ ಮಾಡ್ತಾನೆ. ಆತನು ಸ್ವರ್ಗದಲ್ಲಿ ಇದ್ದಾನೆ ನಿಜ. ಆದ್ರೆ ತನ್ನ ಇಷ್ಟದ ಪ್ರಕಾರ ನಡಿಯೋ ಜನರನ್ನ ಗಮನಿಸ್ತಾನೆ ಮತ್ತು ಅವ್ರಿಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತಾನೆ. (1 ಅರಸು 8:39; 2 ಪೂರ್ವಕಾಲವೃತ್ತಾಂತ 16:9) ಆತನನ್ನ ಮನಸ್ಸಾರೆ ಆರಾಧನೆ ಮಾಡೋರಿಗೆ ಯೆಹೋವನು ಹೇಗೆ ಸಹಾಯ ಮಾಡ್ತಾನೆ ಅಂತ ಗಮನಿಸಿ:
ಪ್ರಾರ್ಥನೆ ಮಾಡುವಾಗ: ನಾವು ಯೆಹೋವನಿಗೆ ಪ್ರಾರ್ಥನೆ ಮಾಡುವಾಗ ತಕ್ಷಣ ಆತನು ಕೇಳ್ತಾನೆ.—2 ಪೂರ್ವಕಾಲವೃತ್ತಾಂತ 18:31.
ಕುಗ್ಗಿಹೋದಾಗ: “ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ, ಮನಸ್ಸು ಚೂರುಚೂರಾಗಿ ಹೋಗಿರೋರನ್ನ ಆತನು ಕಾದು ಕಾಪಾಡ್ತಾನೆ.”—ಕೀರ್ತನೆ 34:18.
ಮಾರ್ಗದರ್ಶನ ಬೇಕಿದ್ದಾಗ: ಯೆಹೋವ ತನ್ನ ವಾಕ್ಯವಾದ ಬೈಬಲ್ ಮೂಲಕ ‘ತಿಳುವಳಿಕೆ ಕೊಟ್ಟು, ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತಾನೆ.’—ಕೀರ್ತನೆ 32:8.
ದೇವರು ಎಲ್ಲಾ ಕಡೆ ಇದ್ದಾನೆ ಅನ್ನೋದ್ರ ಬಗ್ಗೆ ಇರೋ ತಪ್ಪಾಭಿಪ್ರಾಯಗಳು
ತಪ್ಪಾಭಿಪ್ರಾಯ: ಸೃಷ್ಟಿಯ ಎಲ್ಲ ಕಡೆ ದೇವರು ಇದ್ದಾನೆ.
ನಿಜ: ದೇವರು ಭೂಮಿಯಲ್ಲೂ ಇಲ್ಲ, ನಮ್ಮ ಕಣ್ಣಿಗೆ ಕಾಣೋ ವಿಶ್ವದ ಯಾವ ಜಾಗದಲ್ಲಿಯೂ ಇಲ್ಲ. (1 ಅರಸು 8:27) ನಕ್ಷತ್ರಗಳು ಮತ್ತು ಸೃಷ್ಟಿ “ದೇವರ ಮಹಿಮೆಯನ್ನ ಸಾರಿ ಹೇಳುತ್ತೆ” ಅನ್ನೋದ್ರಲ್ಲಿ ಎರಡು ಮಾತಿಲ್ಲ. (ಕೀರ್ತನೆ 19:1) ಉದಾಹರಣೆಗೆ ಒಂದು ಚಿತ್ರನ ನೋಡಿದಾಗ ಅದನ್ನ ಬಿಡಿಸಿದವರ ಕೌಶಲದ ಬಗ್ಗೆ ತಿಳ್ಕೊಬಹುದು. ಆದ್ರೆ ನಾವು ಆ ಚಿತ್ರದಲ್ಲಿ ಆ ವ್ಯಕ್ತಿನ ನೋಡೋಕೆ ಆಗಲ್ಲ. ಅದೇ ತರ ಕಣ್ಣಿಗೆ ಕಾಣೋ ದೇವರ ಸೃಷ್ಟಿಯಲ್ಲಿ “ಕಣ್ಣಿಗೆ ಕಾಣದಿರೋ” ಆತನ ಗುಣಗಳನ್ನ ಅಂದ್ರೆ ಆತನ ಶಕ್ತಿ, ವಿವೇಕ ಮತ್ತು ಪ್ರೀತಿಯನ್ನ ನಾವು ನೋಡಬಹುದು.—ರೋಮನ್ನರಿಗೆ 1:20.
ತಪ್ಪಾಭಿಪ್ರಾಯ: ದೇವರು ಎಲ್ಲದ್ರ ಬಗ್ಗೆ ತಿಳ್ಕೊಬೇಕಂದ್ರೆ, ಸರ್ವಶಕ್ತನಾಗಿರಬೇಕಂದ್ರೆ ಆತನು ಎಲ್ಲ ಕಡೆ ಇರಲೇಬೇಕು.
ನಿಜ: ದೇವರು ತನ್ನ ಪವಿತ್ರಶಕ್ತಿ ಅಥವಾ ಸಕ್ರಿಯ ಶಕ್ತಿಯನ್ನ ಉಪಯೋಗಿಸಿ ಕೆಲಸ ಮಾಡ್ತಾನೆ. ಈ ಶಕ್ತಿಯನ್ನ ಉಪಯೋಗಿಸಿ ಯಾವಾಗ, ಏನ್ ಬೇಕಾದ್ರೂ ಆತನಿಗೆ ಮಾಡೋಕಾಗುತ್ತೆ. ಆ ಜಾಗಕ್ಕೆ ಹೋಗಿ ಅದನ್ನ ಮಾಡಬೇಕಾಗಿಲ್ಲ.—ಕೀರ್ತನೆ 139:7.
ತಪ್ಪಾಭಿಪ್ರಾಯ: ಕೀರ್ತನೆ 139:8 ರಲ್ಲಿ ದೇವರು ಎಲ್ಲಾ ಕಡೆ ಇರ್ತಾನೆ ಅಂತ ಹೇಳುತ್ತೆ. ಅಲ್ಲಿ ತಿಳಿಸೋದು: “ನಾನು ಸ್ವರ್ಗಕ್ಕೆ ಹೋದ್ರೂ ನೀನು ಅಲ್ಲಿ ಇರ್ತಿಯ, ಸಮಾಧಿಯಲ್ಲಿ ಹಾಸಿಗೆ ಹಾಸಿ ಮಲ್ಕೊಂಡ್ರೂ ನೀನು ಅಲ್ಲೂ ಇರ್ತಿಯ!”
ನಿಜ: ಈ ವಚನ ದೇವರು ಇರೋ ಸ್ಥಳದ ಬಗ್ಗೆ ಹೇಳ್ತಿಲ್ಲ. ನಾವು ಎಲ್ಲೇ ಇದ್ರೂ ದೇವರು ನಮಗೆ ಸಹಾಯ ಮಾಡ್ತಾನೆ ಅಂತ ಈ ವಚನದಲ್ಲಿ ಕಾವ್ಯಾತ್ಮಕವಾಗಿ ತಿಳಿಸಲಾಗಿದೆ.
a ಯೆಹೋವ ಎನ್ನುವುದು ಬೈಬಲಿನಲ್ಲಿರುವ ದೇವರ ಹೆಸರು.