ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕಾಂತ್ಯದ ಕುರಿತ ಸತ್ಯ

ಲೋಕಾಂತ್ಯದ ಕುರಿತ ಸತ್ಯ

ಲೋಕಾಂತ್ಯದ ಕುರಿತ ಸತ್ಯ

“ದೆವ್ವಗಳು [ಅಥವಾ ದುಷ್ಟ ದೂತರು] ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು.” —ಪ್ರಕಟನೆ 16:14, 16, ಸತ್ಯವೇದ ಭಾಷಾಂತರ.

ಅರ್ಮಗೆದ್ದೋನ್‌ (ಕೆಲವೊಮ್ಮೆ “ಹರ್ಮಗೆದೋನ್‌” ಎನ್ನಲಾಗುತ್ತದೆ) ಒಂದು ಸ್ಥಳದ ಹೆಸರು. ಆದರೆ ಭೂಮಿ ಮೇಲೆ ಈ ಹೆಸರಿನ ಸ್ಥಳ ಎಲ್ಲೂ ಇಲ್ಲ.

ಹಾಗಾದರೆ “ಅರ್ಮಗೆದ್ದೋನ್‌” ಅಂದರೇನು? ಎಷ್ಟೋ ಸಲ ಇದನ್ನು ಒಂದು ಘಟನೆಗೆ, ಒಂದು ಯುದ್ಧಕ್ಕೆ ಸೂಚಿಸಿ ಏಕೆ ಮಾತಾಡಲಾಗಿದೆ?

ಅರ್ಮಗೆದ್ದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ ಕೂಡಿಸಿದವು

ಹರ್ಮಗೆದೋನ್‌ ಎಂಬ ಹೀಬ್ರು ಪದದ ಅರ್ಥ “ಮೆಗಿದ್ದೋ ಬೆಟ್ಟ.” ಈ ಹೆಸರಿನ ಬೆಟ್ಟ ಎಲ್ಲೂ ಇಲ್ಲವಾದರೂ ಮೆಗಿದ್ದೋ ಹೆಸರಿನ ಸ್ಥಳ ಒಂದಿದೆ. ಪ್ರಾಚೀನ ಇಸ್ರೇಲಿನ ವಾಯವ್ಯ ದಿಕ್ಕಿಗೆ ಎರಡು ಮುಖ್ಯ ರಸ್ತೆಗಳು ಕೂಡುವ ಸ್ಥಳದಲ್ಲಿ ಈ ಮೆಗಿದ್ದೋ ಇದೆ. ಈ ಸ್ಥಳ ಅನೇಕ ದೊಡ್ಡ ಕದನಗಳನ್ನು ಕಂಡಿತ್ತು. ಆದ್ದರಿಂದ ಮೆಗಿದ್ದೋ ಎಂದ ಕೂಡಲೆ ಜನರಿಗೆ ಯುದ್ಧ ನೆನಪಾಗುತ್ತಿತ್ತು. *

ಮೆಗಿದ್ದೋವಿನಲ್ಲಿ ಯಾವ ಯುದ್ಧಗಳು ನಡೆದವು ಎಂಬುದಕ್ಕಿಂತ ಏಕೆ ನಡೆದವು ಎಂದು ತಿಳಿಯುವುದು ಮುಖ್ಯ. ಯೆಹೋವ ದೇವರು ಆ ಕಾಲದ ಇಸ್ರೇಲಿಗಳಿಗೆ ಕೊಟ್ಟ ದೇಶದ ಭಾಗವಾಗಿತ್ತು ಈ ಮೆಗಿದ್ದೋ. (ವಿಮೋಚನಕಾಂಡ 33:1; ಯೆಹೋಶುವ 12:7, 8, 21) ಇಸ್ರೇಲಿಗಳ ಮೇಲೆ ಯಾರೇ ದಾಳಿಮಾಡಿದರೂ ತಾನು ಕಾಪಾಡುವುದಾಗಿ ಆತನು ಮಾತು ಕೊಟ್ಟಿದ್ದನು. ಮಾತಿಗೆ ತಕ್ಕ ಹಾಗೆ ನಡೆದನು. (ಧರ್ಮೋಪದೇಶಕಾಂಡ 6:18, 19) ಇದಕ್ಕೊಂದು ನಿದರ್ಶನ ಇಸ್ರೇಲಿಗಳ ವಿರುದ್ಧ ಕಾನಾನಿನ ಅರಸ ಯಾಬೀನ ಮತ್ತವನ ಸೇನಾಪತಿ ಸೀಸೆರ ದಂಡೆತ್ತಿ ಬಂದಾಗ ಯೆಹೋವನು ಇಸ್ರೇಲಿಗಳನ್ನು ಅದ್ಭುತಕರವಾಗಿ ಕಾಪಾಡಿದ್ದು ಆಗಿದೆ. ಇದು ನಡೆದದ್ದು ಮೆಗಿದ್ದೋವಿನಲ್ಲೇ.—ನ್ಯಾಯಸ್ಥಾಪಕರು 4:14-16.

ಆದ್ದರಿಂದ “ಹರ್ಮಗೆದೋನ್‌” ಅಥವಾ “ಅರ್ಮಗೆದ್ದೋನ್‌” ಪದಕ್ಕೆ ಸಾಂಕೇತಿಕ ಮಹತ್ವಾರ್ಥವಿದೆ. ಅದು ಎರಡು ಶಕ್ತಿಶಾಲಿ ಪಡೆಗಳ ನಡುವಿನ ಕದನಕ್ಕೆ ಸೂಚಿಸುತ್ತದೆ.

ಬೈಬಲಿನ ಪ್ರಕಟನೆ ಪುಸ್ತಕದ ಒಂದು ಭವಿಷ್ಯವಾಣಿಗನುಸಾರ ಬಲು ಬೇಗನೆ ದೇವಜನರ ಮೇಲೆ ಒಂದು ದಾಳಿಯಾಗಲಿದೆ. ಸೈತಾನ ಮತ್ತವನ ದೆವ್ವಗಳು ಮಾನವ ಸರ್ಕಾರಗಳನ್ನು ಈ ದಾಳಿಗೆ ಚಿತಾಯಿಸಿ ಅವರ ಸೈನ್ಯಗಳನ್ನು ಕೂಡಿಸುವಂತೆ ಮಾಡುವವು. ದಾಳಿಮಾಡಲು ಬಂದವರನ್ನು ದೇವರು ಧೂಳಿಪಟ ಮಾಡುವನು, ಕೋಟಿಗಟ್ಟಲೆ ಮಂದಿ ಸತ್ತುಬೀಳುವರು.—ಪ್ರಕಟನೆ 19:11-18.

‘ಕನಿಕರ ದಯೆಯುಳ್ಳವನೂ ದೀರ್ಘಶಾಂತನೂ ಕೃಪಾಳೂ’ ಎಂದು ಬೈಬಲ್‌ನಲ್ಲಿ ಬಣ್ಣಿಸಲಾಗಿರುವ ದೇವರು ಇಷ್ಟು ಜನರ ಸಾವಿಗೆ ಕಾರಣನಾಗುವುದಾದರೂ ಏಕೆ? (ನೆಹೆಮೀಯ 9:17) ಇದನ್ನು ಅರ್ಥಮಾಡಿಕೊಳ್ಳಲು ಈ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ: (1) ಯುದ್ಧ ಆರಂಭಿಸುವವರು ಯಾರು? (2) ದೇವರ ಹಸ್ತಕ್ಷೇಪ ಏಕೆ? (3) ಈ ಸೆಣಸಾಟದಿಂದ ಭೂಮಿ ಮತ್ತು ಮಾನವರ ಮೇಲೆ ಯಾವ ಶಾಶ್ವತ ಪರಿಣಾಮ ಆಗಲಿದೆ?

1. ಯುದ್ಧ ಆರಂಭಿಸುವವರು ಯಾರು?

ಅರ್ಮಗೆದ್ದೋನ್‌ ಯುದ್ಧಕ್ಕೆ ನಾಂದಿಹಾಡುವುದು ಯೆಹೋವನಲ್ಲ. ತನ್ನ ಜನರನ್ನು ರಕ್ಷಿಸಲಿಕ್ಕಾಗಿ ಅವನು ಮಧ್ಯಬರುತ್ತಾನೆ ಅಷ್ಟೇ. ಕಾಲ್ಕೆರೆದು ಜಗಳಕ್ಕಿಳಿಯುವುದು ‘ಇಡೀ ನಿವಾಸಿತ ಭೂಮಿಯ ರಾಜರು’ ಅಂದರೆ ಲೋಕ ನಾಯಕರು. ಸೂತ್ರಧಾರಿಯಾಗಿರುವ ಸೈತಾನನ ಕೈಗೊಂಬೆಗಳಾಗಿ ಸರಕಾರೀ/ಮಿಲಿಟರಿ ಸಂಘಟನೆಗಳು ಯೆಹೋವ ದೇವರ ಆರಾಧಕರ ಮೇಲೆ ಮುಗಿಬಿದ್ದು ದಾಳಿಮಾಡಿ ಅವರನ್ನು ಅಳಿಸಿಹಾಕಲು ಪ್ರಯತ್ನಿಸುವರು.—ಪ್ರಕಟನೆ 16:13, 14; 19:17, 18.

ಇಂದು ಎಷ್ಟೋ ದೇಶಗಳಲ್ಲಿ ಸರ್ಕಾರಗಳು ವಾಕ್‌ ಸ್ವಾತಂತ್ರ್ಯಕ್ಕೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಮಾನ್ಯತೆ ನೀಡುತ್ತಿವೆ. ಹೀಗಿರುವಾಗ ಸರ್ಕಾರಗಳೇ ಶೀಘ್ರದಲ್ಲಿ ಧರ್ಮಕ್ಕೆ ಕಡಿವಾಣ ಹಾಕುತ್ತವೆ, ಅಳಿಸಿಹಾಕಲು ಪ್ರಯತ್ನಿಸುತ್ತವೆ ಎಂದು ಹೇಗೆ ತಾನೇ ಹೇಳಸಾಧ್ಯ? ಎನ್ನಬಹುದು ಕೆಲವರು. ಆದರೆ ಇಂಥ ದಾಳಿಗಳು 20ನೇ ಶತಮಾನದಲ್ಲಿ ನಡೆದಿವೆ, ಈಗಲೂ ನಡೆಯುತ್ತಿವೆ. * ಹಾಗಿದ್ದರೂ ಈ ದಾಳಿಗಳಿಗೂ ಅರ್ಮಗೆದ್ದೋನ್‌ಗೆ ಮುಂಚೆ ಯೆಹೋವನ ಆರಾಧಕರ ಮೇಲೆ ನಡೆಯಲಿರುವ ದಾಳಿಗೂ ಎರಡು ದೊಡ್ಡ ವ್ಯತ್ಯಾಸಗಳಿವೆ. ಮೊದಲನೇದು, ಈ ದಾಳಿ ಜಗದ್ವ್ಯಾಪಕವಾಗಿರುವುದು. ಎರಡನೇದು, ಈ ದಾಳಿಗೆ ಯೆಹೋವ ದೇವರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯೆ ತೋರಿಸಲಿದ್ದಾನೆ. (ಯೆರೆಮೀಯ 25:32, 33) ಸೂಕ್ತವಾಗಿಯೇ ಬೈಬಲ್‌ ಅದನ್ನು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಎಂದು ಕರೆಯುತ್ತದೆ.

2. ದೇವರ ಹಸ್ತಕ್ಷೇಪ ಏಕೆ?

ತನ್ನ ಆರಾಧಕರು ಶಾಂತಿಪ್ರಿಯರಾಗಿರಬೇಕು, ವೈರಿಗಳನ್ನೂ ಪ್ರೀತಿಸಬೇಕು ಎಂದು ಯೆಹೋವನು ಹೇಳುತ್ತಾನೆ. (ಮೀಕ 4:1-3; ಮತ್ತಾಯ 5:43, 44; 26:52) ಆದ್ದರಿಂದ ವೈರಿಗಳು ಅವರನ್ನು ನಾಶಮಾಡಲು ಎರಗುವಾಗ ಆತ್ಮರಕ್ಷಣೆಗೆಂದು ಅವರು ಅಸ್ತ್ರಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ದೇವರು ಹಸ್ತಕ್ಷೇಪ ಮಾಡದಿದ್ದಲ್ಲಿ ವೈರಿಗಳು ಅವರನ್ನು ಸಂಪೂರ್ಣವಾಗಿ ಅಳಿಸಿಬಿಡುವರು. ಹೀಗಾಗುವಂತೆ ಯೆಹೋವನು ಅನುಮತಿಸಿದರೆ ಆತನಲ್ಲಿ ಪ್ರೀತಿಯಿಲ್ಲ, ನ್ಯಾಯವಿಲ್ಲ, ಶಕ್ತಿಯೂ ಇಲ್ಲ ಎಂದಾಗುವುದು. ಯೆಹೋವನ ನಾಮಕ್ಕೆ ಕಳಂಕ ಬಂದುಬಿಡುವುದು. ಹಾಗಾಗಲು ದೇವರೆಂದೂ ಬಿಡನು!—ಕೀರ್ತನೆ 37:28, 29.

ದೇವರಿಗೆ ಯಾರನ್ನೂ ಅಳಿಸಿಹಾಕಲು ಇಷ್ಟವಿಲ್ಲ. ಹಾಗಾಗಿ ಮೊದಲೇ ಎಚ್ಚರಿಕೆ ಕೊಡುತ್ತಾನೆ. (2 ಪೇತ್ರ 3:9) ತನ್ನ ಜನರು ಆಕ್ರಮಣಕ್ಕೆ ಒಳಗಾದಾಗೆಲ್ಲ ತಾನು ಅವರ ಪರ ನಿಂತು ಕಾದಾಡುತ್ತೇನೆಂಬ ಮಾತನ್ನು ಆತನು ಬೈಬಲಿನ ಎಷ್ಟೋ ವೃತ್ತಾಂತಗಳ ಮೂಲಕ ನೆನಪುಹುಟ್ಟಿಸಿದ್ದಾನೆ. (2 ಅರಸುಗಳು 19:35) ಮುಂದೆಯೂ ಸೈತಾನ ಮತ್ತವನ ಮಾನವ ಕೈಗೊಂಬೆಗಳು ದೇವಜನರ ಮೇಲೆ ದಾಳಿಮಾಡುವಾಗ ಯೆಹೋವನು ಖಂಡಿತ ದಂಡೆತ್ತಿ ಬರುವನೆಂದು ಬೈಬಲ್‌ ಎಚ್ಚರಿಸುತ್ತದೆ. ದೇವರ ವಾಕ್ಯ ತುಂಬ ಕಾಲದ ಹಿಂದೆಯೇ ಅರುಹಿರುವಂತೆ ಯೆಹೋವನು ದುಷ್ಟರನ್ನು ನಾಶಮಾಡಿಯೇ ಮಾಡುವನು. (ಜ್ಞಾನೋಕ್ತಿ 2:21, 22; 2 ಥೆಸಲೊನೀಕ 1:6-9) ಆದ್ದರಿಂದ ತಾವು ಆ ದೇವರ ವಿರುದ್ಧವೇ ಕೈಯೆತ್ತಿದ್ದೇವೆ ಎಂದು ದಾಳಿಕೋರರಿಗೆ ಅರ್ಮಗೆದ್ದೋನ್‌ನಲ್ಲಿ ಖಚಿತವಾಗಿ ತಿಳಿದುಬರುವುದು.—ಯೆಹೆಜ್ಕೇಲ 38:21-23.

3. ಈ ಸೆಣಸಾಟದಿಂದ ಯಾವ ಶಾಶ್ವತ ಪರಿಣಾಮ ಆಗಲಿದೆ?

ಅರ್ಮಗೆದ್ದೋನ್‌ ಯುದ್ಧದಲ್ಲಿ ಲಕ್ಷಾಂತರ ಜನರು ಪಾರಾಗಿ ಉಳಿಯಲಿದ್ದಾರೆ. ಈ ಯುದ್ಧದ ಬಳಿಕ ಭೂಮಿಯ ಮೇಲೆ ಸುಖಶಾಂತಿ ಶಾಶ್ವತವಾಗಿ ನೆಲಸಲಿದೆ.—ಪ್ರಕಟನೆ 21:3, 4.

“ಒಂದು ಮಹಾ ಸಮೂಹ” ಈ ಕದನವನ್ನು ಪಾರಾಗಲಿದೆ ಎನ್ನುತ್ತದೆ ಬೈಬಲಿನ ಪ್ರಕಟನೆ ಪುಸ್ತಕ. (ಪ್ರಕಟನೆ 7:9, 14) ದೇವರ ಮಾರ್ಗದರ್ಶನದಡಿ ಈ ಮಹಾ ಸಮೂಹದವರೆಲ್ಲರೂ ಒಟ್ಟುಸೇರಿ ಯೆಹೋವನ ಆದಿ ಉದ್ದೇಶಕ್ಕನುಸಾರ ನಮ್ಮೀ ಭೂಮಿಯನ್ನು ನಯನಮನೋಹರ ತೋಟವಾಗಿ ಮಾರ್ಪಡಿಸಲಿದ್ದಾರೆ.

ದೇವಜನರ ಮೇಲೆ ಈ ದಾಳಿ ಯಾವಾಗ ನಡೆಯಲಿದೆ? ಉತ್ತರ ತಿಳಿಯಲು ಮುಂದಿನ ಲೇಖನ ಓದಿ. (w12-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 6 ಹಿಂದೆ ಮಾತ್ರವಲ್ಲ ಇವತ್ತೂ ಜನರಿಗೆ ಒಂದು ಸ್ಥಳದ ಹೆಸರು ಹೇಳಿದ ಕೂಡಲೆ ಯುದ್ಧದ ನೆನಪಾಗುತ್ತದೆ. ಉದಾ: ಹಿರೋಶಿಮ ಅಂದ ಕೂಡಲೆ ಮನಸ್ಸಿಗೆ ಬರುವುದು ನ್ಯೂಕ್ಲಿಯರ್‌ ಯುದ್ಧದ ಭೀತಿ. ಅಣು ಬಾಂಬ್‌ ಸ್ಫೋಟದಿಂದ ಆ ನಗರ ಸರ್ವನಾಶಗೊಂಡಿತ್ತು.

^ ಪ್ಯಾರ. 13 ಇದಕ್ಕೊಂದು ನಿದರ್ಶನ IIನೇ ಮಹಾಯುದ್ಧದ ಸಮಯದಲ್ಲಾದ ಯೆಹೂದಿಗಳ ಸಾಮೂಹಿಕ ಹತ್ಯಾಕಾಂಡ. ಧಾರ್ಮಿಕ ಮತ್ತು ಜನಾಂಗೀಯ ಗುಂಪುಗಳನ್ನು ತೊಡೆದುಹಾಕಲು ಒಂದು ಸರ್ಕಾರ ಮಾಡಿದ ಪ್ರಯತ್ನ ಇದಾಗಿತ್ತು. 1917-1991ರ ಅವಧಿಯಲ್ಲೂ ಪೂರ್ವ ರಷ್ಯದ ಆಡಳಿತದಲ್ಲಿ ಅನೇಕ ಧಾರ್ಮಿಕ ಗುಂಪುಗಳ ಸ್ವಾತಂತ್ರ್ಯವನ್ನು ನಿಗ್ರಹಿಸಲಾಯಿತು.

[ಪುಟ 6ರಲ್ಲಿರುವ ಚಿತ್ರ]

ಯೆಹೋವ ದೇವರು ಹಿಂದಿನ ಕಾಲದಲ್ಲಿ ತನ್ನ ಜನರಿಗಾಗಿ ಕಾದಾಡಿದ್ದಾನೆ

[ಪುಟ 7ರಲ್ಲಿರುವ ಚಿತ್ರ]

ಮುಂದೆಯೂ ಅರ್ಮಗೆದ್ದೋನ್‌ ಯುದ್ಧದಲ್ಲಿ ಯೆಹೋವನು ತನ್ನ ಜನರಿಗಾಗಿ ಕಾದಾಡುವನು