ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಎಲ್ಲಿಂದ ಬಂದನು?

ಯೇಸು ಎಲ್ಲಿಂದ ಬಂದನು?

ಯೇಸು ಎಲ್ಲಿಂದ ಬಂದನು?

“[ಪಿಲಾತನು] ಪುನಃ ರಾಜ್ಯಪಾಲನ ಅರಮನೆಯೊಳಗೆ ಹೋಗಿ ಯೇಸುವಿಗೆ, ‘ನೀನು ಎಲ್ಲಿಂದ ಬಂದವನು?’ ಎಂದು ಕೇಳಿದನು. ಯೇಸು ಅವನಿಗೆ ಯಾವುದೇ ಉತ್ತರ ಕೊಡಲಿಲ್ಲ.” —ಯೋಹಾನ 19:9.

ಜೀವ ಅಥವಾ ಮರಣವನ್ನು ವಿಧಿಸಲಿದ್ದ ವಿಚಾರಣೆಗಾಗಿ ಯೇಸು ನಿಂತಿದ್ದಾಗ ರೋಮನ್‌ ರಾಜ್ಯಪಾಲ ಪೊಂತ್ಯ ಪಿಲಾತನು ಈ ಪ್ರಶ್ನೆ ಕೇಳಿದನು. ಇಸ್ರಾಯೇಲಿನ ಯಾವ ಭಾಗದಿಂದ ಯೇಸು ಬಂದವನೆಂದು ಪಿಲಾತನಿಗೆ ಗೊತ್ತಿತ್ತು. (ಲೂಕ 23:6, 7) ಯೇಸು ಒಬ್ಬ ಸಾಧಾರಣ ಮನುಷ್ಯನಲ್ಲವೆಂದೂ ಅವನಿಗೆ ತಿಳಿದಿತ್ತು. ಹಾಗಾದರೆ ಅವನು ಆ ಪ್ರಶ್ನೆ ಕೇಳಿದ್ದು, ಯೇಸು ಮನುಷ್ಯನಾಗಿ ಬರುವ ಮುಂಚೆ ಎಲ್ಲಿಯಾದರೂ ಜೀವಿಸಿದ್ದನೇ ಎಂದು ತಿಳಿಯಲಿಕ್ಕೋ? ಅಥವಾ ಈ ವಿಧರ್ಮಿ ಅಧಿಪತಿ ಸತ್ಯ ತಿಳಿದು ಅದಕ್ಕನುಸಾರ ನಡೆಯಲು ಬಯಸಿದ್ದನೋ? ಅದೇನೇ ಆಗಿರಲಿ, ಉತ್ತರಕೊಡಲು ಯೇಸು ನಿರಾಕರಿಸಿದನು. ಅಲ್ಲದೆ ಪಿಲಾತನಿಗೆ ಸತ್ಯ, ನ್ಯಾಯಕ್ಕಿಂತಲೂ ತನ್ನ ಸ್ಥಾನಮಾನವೇ ತುಂಬ ಮುಖ್ಯವಾಗಿತ್ತೆಂದು ಸ್ವಲ್ಪ ಸಮಯದಲ್ಲೇ ಸ್ಪಷ್ಟವಾಗಿ ತೋರಿಬಂತು.—ಮತ್ತಾಯ 27:11-26.

ಯೇಸು ಎಲ್ಲಿಂದ ಬಂದನೆಂದು ಪ್ರಾಮಾಣಿಕವಾಗಿ ತಿಳಿಯುವ ಮನಸ್ಸುಳ್ಳವರು ಅದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಮೂಲತಃ ಯೇಸು ಕ್ರಿಸ್ತನು ಎಲ್ಲಿಂದ ಬಂದನೆಂಬದನ್ನು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಮುಂದಿನದ್ದನ್ನು ಗಮನಿಸಿ.

ಆತ ಹುಟ್ಟಿದ್ದೆಲ್ಲಿ? ಯೇಸು ಯೂದಾಯದ ಹಳ್ಳಿಯಾದ ಬೇತ್ಲೆಹೇಮಿನಲ್ಲಿ ಕಷ್ಟಕರ ಪರಿಸ್ಥಿತಿಗಳಲ್ಲಿ ಜನಿಸಿದನು. ಕೈಸರ ಔಗುಸ್ತ ತನ್ನ ಪ್ರಜೆಗಳು ಖಾನೆಷುಮಾರಿ ಬರೆಸಿಕೊಳ್ಳಬೇಕೆಂದು ಆಜ್ಞೆ ಹೊರಡಿಸಿದ್ದನು. ಆದ್ದರಿಂದ ಮರಿಯಳು ತುಂಬು ಗರ್ಭಿಣಿಯಾಗಿದ್ದರೂ ತನ್ನ ಪತಿ ಯೋಸೇಫನೊಂದಿಗೆ ಅವನ ಪೂರ್ವಜರ ಊರಾದ ಬೇತ್ಲೆಹೇಮಿಗೆ ಪ್ರಯಾಣಿಸಬೇಕಾಯಿತು. ಜನರಿಂದ ಕಿಕ್ಕಿರಿದಿದ್ದ ಆ ಹಳ್ಳಿಯಲ್ಲಿ ಉಳುಕೊಳ್ಳಲು ಎಲ್ಲಿಯೂ ಜಾಗ ಸಿಗದ್ದರಿಂದ ಅವರು ಒಂದು ಕೊಟ್ಟಿಗೆಯಲ್ಲಿ ತಂಗಬೇಕಾಯಿತು. ಯೇಸು ಅಲ್ಲಿ ಹುಟ್ಟಿದನು, ಅವನನ್ನು ಗೋದಲಿಯಲ್ಲಿ ಮಲಗಿಸಲಾಯಿತು.—ಲೂಕ 2:1-7.

ಯೇಸು ಎಲ್ಲಿ ಹುಟ್ಟಲಿದ್ದನೆಂದು ಬೈಬಲ್‌ ಶತಮಾನಗಳ ಮುಂಚೆಯೇ ಮುಂತಿಳಿಸಿತ್ತು: “ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು.” * (ಮೀಕ 5:2) ಬೇತ್ಲೆಹೇಮ್‌ ಯೆಹೂದ ಪ್ರದೇಶದಲ್ಲಿದ್ದ ಪಟ್ಟಣಗಳ ಪಟ್ಟಿಯಲ್ಲಿ ಸೇರಿಸಲಾಗದಷ್ಟು ಚಿಕ್ಕ ಊರಾಗಿತ್ತು. ಆದರೂ ಈ ಪುಟ್ಟ ಹಳ್ಳಿ ಅಪೂರ್ವ ಗೌರವಕ್ಕೆ ಪಾತ್ರವಾಗಲಿತ್ತು. ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತ ಈ ಬೇತ್ಲೆಹೇಮಿನಿಂದ ಬರಲಿದ್ದನು.—ಮತ್ತಾಯ 2:3-6; ಯೋಹಾನ 7:40-42.

ಆತ ಬೆಳೆದದ್ದೆಲ್ಲಿ? ಯೇಸುವಿನ ಕುಟುಂಬ ಈಜಿಪ್ತಿನಲ್ಲಿ ಸ್ವಲ್ಪ ಸಮಯ ಇದ್ದು ನಂತರ ಯೆರೂಸಲೇಮಿನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಗಲಿಲಾಯದ ಒಂದು ಪಟ್ಟಣವಾಗಿದ್ದ ನಜರೇತಿಗೆ ಸ್ಥಳಾಂತರಿಸಿತು. ಆಗ ಯೇಸುವಿಗಿನ್ನೂ 3 ವರ್ಷವಾಗಿರಲಿಲ್ಲ. ರೈತರು, ಕುರುಬರು, ಬೆಸ್ತರು ತಮ್ಮ ತಮ್ಮ ಕೆಲಸಮಾಡಿಕೊಂಡಿದ್ದ ಆ ದೃಶ್ಯಮನೋಹರ ಪಟ್ಟಣದಲ್ಲೇ ಯೇಸು ಶ್ರೀಮಂತರಲ್ಲದ ಒಂದು ದೊಡ್ಡ ಕುಟುಂಬದಲ್ಲಿ ಬೆಳೆದನು.—ಮತ್ತಾಯ 13:55, 56.

ಮೆಸ್ಸೀಯನು ನಜರೇತಿನವನಾಗಿರುವನು ಎಂದು ಶತಮಾನಗಳ ಮುಂಚೆಯೇ ಬೈಬಲ್‌ ಮುಂತಿಳಿಸಿತ್ತು. ಸುವಾರ್ತಾ ಪುಸ್ತಕದ ಲೇಖಕ ಮತ್ತಾಯನು, ಯೇಸುವಿನ ಕುಟುಂಬ ‘ನಜರೇತೆಂಬ ಊರಿಗೆ ಬಂದು ಅಲ್ಲಿ ವಾಸಿಸತೊಡಗಿತು; ಹೀಗೆ “ಅವನು ನಜರೇತಿನವನು ಎಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು’ ಎಂದು ಹೇಳುತ್ತಾನೆ. (ಮತ್ತಾಯ 2:19-23) ನಜರೇತಿನವನು ಎಂಬ ಹೆಸರು “ತಳಿರು” ಎಂಬದಕ್ಕಿರುವ ಹೀಬ್ರು ಪದಕ್ಕೆ ಸಂಬಂಧಿಸಿರುವಂತೆ ತೋರುತ್ತದೆ. ಇಲ್ಲಿ ಮತ್ತಾಯನು, ಮೆಸ್ಸೀಯನನ್ನು ಇಷಯನಿಂದ ಬರುವ “ತಳಿರು” ಅಂದರೆ ರಾಜ ದಾವೀದನ ತಂದೆಯಾದ ಇಷಯನ ವಂಶಜ ಎಂದು ಹೇಳುವ ಯೆಶಾಯನ ಪ್ರವಾದನೆ ಅಂದರೆ ಭವಿಷ್ಯನುಡಿಗೆ ಬೊಟ್ಟುಮಾಡುತ್ತಿದ್ದನೆಂಬುದು ಸ್ಪಷ್ಟ. (ಯೆಶಾಯ 11:1) ವಾಸ್ತವದಲ್ಲಿ ಯೇಸು ದಾವೀದನ ಮೂಲಕ ಇಷಯನ ವಂಶಜನೇ ಆಗಿದ್ದನು.—ಮತ್ತಾಯ 1:6, 16; ಲೂಕ 3:23, 31, 32.

ಮೂಲತಃ ಆತ ಎಲ್ಲಿಂದ ಬಂದನು? ಯೇಸುವಿನ ಜೀವನ ಆರಂಭವಾದದ್ದು ಬೇತ್ಲೆಹೇಮಿನ ಆ ಕೊಟ್ಟಿಗೆಯಲ್ಲಲ್ಲ ಬದಲಾಗಿ ಅದಕ್ಕಿಂತಲೂ ಎಷ್ಟೋ ಸಮಯದ ಹಿಂದೆಯೇ ಎಂದು ಬೈಬಲ್‌ ಬೋಧಿಸುತ್ತದೆ. ಆತನ “ಮೂಲವು ಪುರಾತನವೂ ಅನಾದಿಯೂ ಆದದ್ದು” ಎನ್ನುತ್ತದೆ ಈ ಹಿಂದೆ ತಿಳಿಸಲಾದ ಮೀಕನ ಪ್ರವಾದನೆ. (ಮೀಕ 5:2) ದೇವರ ಜ್ಯೇಷ್ಠ ಪುತ್ರನಾದ ಯೇಸು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟುವ ಮುಂಚೆ ಸ್ವರ್ಗದಲ್ಲಿ ಪ್ರಧಾನ ದೇವದೂತನಾಗಿದ್ದನು. ಆತನೇ ಹೇಳಿದ್ದು: “ನಾನು . . . ಸ್ವರ್ಗದಿಂದ ಇಳಿದುಬಂದಿದ್ದೇನೆ.” (ಯೋಹಾನ 6:38; 8:23) ಆತನು ಬಂದದ್ದು ಹೇಗೆ?

ಯೆಹೋವ ದೇವರು ತನ್ನ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮದ ಮೂಲಕ ಒಂದು ಅದ್ಭುತ ಮಾಡಿದನು. * ಸ್ವರ್ಗದಲ್ಲಿ ತನ್ನೊಂದಿಗಿದ್ದ ಆ ಪುತ್ರನ ಜೀವವನ್ನು ಯೆಹೂದಿ ಕನ್ಯೆಯಾಗಿದ್ದ ಮರಿಯ ಎಂಬಾಕೆಯ ಗರ್ಭಕ್ಕೆ ಸ್ಥಳಾಂತರಿಸಿದನು. ಹೀಗೆ ಯೇಸು ಪಾಪವಿಲ್ಲದ ಒಬ್ಬ ಪರಿಪೂರ್ಣ ಮಾನವನಾಗಿ ಹುಟ್ಟಲು ಸಾಧ್ಯವಾಯಿತು. ಇಂಥ ಅದ್ಭುತ ನಡೆಸಲು ಸರ್ವಶಕ್ತ ದೇವರಿಗೆ ಸುಲಭವಾಗಿತ್ತು. ಇದೆಲ್ಲವನ್ನು ಮರಿಯಳಿಗೆ ವಿವರಿಸಿದ ದೇವದೂತನು ಹೇಳಿದಂತೆ “ದೇವರಿಗೆ ಯಾವ ಮಾತೂ ನೆರವೇರಿಸಲು ಅಸಾಧ್ಯವಾದದ್ದಲ್ಲ.”—ಲೂಕ 1:30-35, 37.

ಯೇಸು ಎಲ್ಲಿಂದ ಬಂದನೆಂದು ಮಾತ್ರವಲ್ಲ ಇನ್ನೂ ಹೆಚ್ಚು ವಿಷಯಗಳನ್ನು ಬೈಬಲ್‌ ತಿಳಿಸುತ್ತದೆ. ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರು ಬರೆದ ನಾಲ್ಕು ಸುವಾರ್ತಾ ಪುಸ್ತಕಗಳು ಯೇಸು ಹೇಗೆ ಜೀವಿಸಿದನೆಂಬುದರ ಬಗ್ಗೆ ಬಹಳಷ್ಟನ್ನು ತಿಳಿಸುತ್ತವೆ. (w11-E 04/01)

[ಪಾದಟಿಪ್ಪಣಿಗಳು]

^ ಪ್ಯಾರ. 6 ಬೇತ್ಲೆಹೇಮಿನ ಹಳೇ ಹೆಸರು ಎಫ್ರಾತ ಆಗಿದ್ದಿರಬಹುದು.—ಆದಿಕಾಂಡ 35:19.

^ ಪ್ಯಾರ. 10 ಯೆಹೋವ ಎನ್ನುವುದು ದೇವರ ಹೆಸರು. ಇದು ಬೈಬಲಿನಲ್ಲಿದೆ.