ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಆದಿಕಾಂಡ 6:1, 4ರಲ್ಲಿ ಹೇಳಿರುವ, ಜಲಪ್ರಳಯಕ್ಕಿಂತ ಮುಂಚೆ ಇದ್ದ “ದೇವಪುತ್ರರು” ಯಾರು?

ಆಧಾರ ತಿಳಿಸುವಂತೆ ಅವರು ದೇವರ ಆತ್ಮಪುತ್ರರು. ಹಾಗಾದರೆ ಆ ಆಧಾರ ಯಾವುದು?

ವಚನದ ಆರಂಭದಲ್ಲಿ ತಿಳಿಸುವಂತೆ: “ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.”—ಆದಿ. 6:1, 2.

ಮೂಲ ಹೀಬ್ರು ಶಾಸ್ತ್ರಗ್ರಂಥದಲ್ಲಿ “ದೇವಪುತ್ರರು” ಮತ್ತು ‘ದೇವಕುಮಾರರು’ ಎಂಬ ಪದಗಳನ್ನು ಆದಿಕಾಂಡ 6:1, 4; ಯೋಬ 1:6; 2:1; 38:6 ಮತ್ತು ಕೀರ್ತನೆ 89:6ರಲ್ಲಿ ಕಾಣಬಹುದು. ಕನ್ನಡ ಬೈಬಲಿನಲ್ಲಿ ಆ ಪದಗಳು ಆದಿಕಾಂಡ 6:1, 4; ಯೋಬ 38:6ರಲ್ಲಿ ಮಾತ್ರ ಇವೆ. ಈ ವಚನಗಳು ಯಾರ ಬಗ್ಗೆ ತಿಳಿಸುತ್ತಿವೆ?

ದೇವರು ‘ಭೂಲೋಕದ ಮೂಲೆಗಲ್ಲನ್ನು ಹಾಕಿದಾಗ’ “ದೇವಕುಮಾರರೆಲ್ಲರೂ ಆನಂದಘೋಷ” ಮಾಡಿದರೆಂದು ಯೋಬ 38:4-7 ಹೇಳುತ್ತೆ. ಆಗ ಇನ್ನೂ ಮಾನವ ಸೃಷ್ಟಿ ಆಗಿರಲಿಲ್ಲವಾದ್ದರಿಂದ ಅವರು ದೇವದೂತರೇ ಆಗಿರಬೇಕು. ಈ ವಿಷಯ ಯೋಬ 1:6ರಲ್ಲಿ ಇನ್ನೂ ಸ್ಪಷ್ಟವಾಗಿದೆ. ಅಲ್ಲಿ ‘ದೇವದೂತರು’ ದೇವರ ಸನ್ನಿಧಿಯಲ್ಲಿ ಕೂಡಿಬಂದಿದ್ದರು ಎಂದು ಹೇಳಲಾಗಿದೆ. ಅವರಲ್ಲಿ ಸೈತಾನನು ಕೂಡ ಇದ್ದನು. ಅವನು ‘ಭೂಲೋಕದಲ್ಲಿ ಸಂಚರಿಸಿ’ ಬಂದಿದ್ದನು. (ಯೋಬ 1:7; 2:1, 2) ಅಷ್ಟೇ ಅಲ್ಲದೆ ಕೀರ್ತನೆ 89:6ರಲ್ಲಿ ತಿಳಿಸಿರುವಂತೆ ದೇವರೊಂದಿಗಿರುವವರು “ದೇವದೂತರು,” ಮನುಷ್ಯರಲ್ಲ.

ಹಾಗಾದರೆ ಆದಿಕಾಂಡ 6:1, 4ರಲ್ಲಿ ಹೇಳಲಾಗಿರುವ “ದೇವಪುತ್ರರು” ಯಾರು? ಯೋಬ ಪುಸ್ತಕದಲ್ಲಿ ಹೇಳಲಾಗಿರುವ ‘ದೇವಕುಮಾರರು’ ದೇವದೂತರು ಆಗಿರುವಾಗ, ಇವರು ಸಹ ದೇವದೂತರೆಂಬ ನಿರ್ಣಯಕ್ಕೆ ಬರುವುದು ತಾರ್ಕಿಕ. ಆ ಆತ್ಮಪುತ್ರರು ಭೂಮಿಗೆ ಬಂದ ಕುರಿತು ಆ ವೃತ್ತಾಂತ ತಿಳಿಸುತ್ತದೆ.

ಆದರೆ ದೇವದೂತರು ಲೈಂಗಿಕ ಸಂಬಂಧವನ್ನು ಇಟ್ಟುಕೊಂಡರೆಂಬ ವಿಷಯ ಅನೇಕರಿಗೆ ಒಪ್ಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮತ್ತಾಯ 22:30ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳಿಗನುಸಾರ ವಿವಾಹ ಮತ್ತು ಲೈಂಗಿಕ ಸಂಬಂಧ ಸ್ವರ್ಗದಲ್ಲಿ ಇಲ್ಲ. ಆದರೆ ಗಮನಿಸಬೇಕಾದ ವಿಷಯವೇನೆಂದರೆ ದೇವದೂತರು ಕೆಲವು ಸಂದರ್ಭಗಳಲ್ಲಿ ಮನುಷ್ಯರಾಗಿ ರೂಪಾಂತರಗೊಂಡರು. ಮನುಷ್ಯರಂತೆ ಊಟ-ಪಾನೀಯಗಳನ್ನು ಸೇವಿಸಿದರು. (ಆದಿ. 18:1-8; 19:1-3) ಹಾಗಾಗಿ ದೇವದೂತರು ಮನುಷ್ಯರೂಪವನ್ನು ಪಡೆದುಕೊಂಡಾಗ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳಲು ಶಕ್ತರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು.

ಕೆಲವು ದೇವದೂತರು ಹೀಗೆ ಮಾಡಿದ್ದರು ಎನ್ನುವುದಕ್ಕೆ ಬೈಬಲಿನಲ್ಲಿ ಆಧಾರಗಳಿವೆ. ಉದಾಹರಣೆಗೆ, ಶಾರೀರಿಕವಾಗಿ ಅಸ್ವಾಭಾವಿಕವಾದದ್ದನ್ನು ಬೆನ್ನಟ್ಟಿದ್ದ ಸೊದೋಮ್‌ ಪಟ್ಟಣಗಳ ಜನರನ್ನು ಯೂದ 6, 7ರಲ್ಲಿ “ತಮ್ಮ ಮೂಲಸ್ಥಾನವನ್ನು ಕಾಪಾಡಿಕೊಳ್ಳದೆ ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ ದೇವದೂತರಿಗೆ” ಹೋಲಿಸಲಾಗಿದೆ. ಸೊದೋಮಿನ ಜನರು, ಮಾತ್ರವಲ್ಲ ದೇವದೂತರು ಸಹ ‘ವಿಪರೀತ ಜಾರತ್ವವನ್ನು ನಡಿಸಿ ಶಾರೀರಿಕವಾಗಿ ಅಸ್ವಾಭಾವಿಕವಾದದ್ದನ್ನು ಬೆನ್ನಟ್ಟಿದ್ದರು’ ಎನ್ನುವುದೇ ಇದರ ಸಾರ. ಇದೇ ವಿಷಯವನ್ನು 1 ಪೇತ್ರ 3:19, 20ರಲ್ಲಿ ಹೇಳಲಾಗಿದೆ. ಅಲ್ಲಿ ಅವಿಧೇಯ ದೇವದೂತರು ‘ನೋಹನ ದಿನಗಳಲ್ಲಿದ್ದರು’ ಎಂದು ಹೇಳುತ್ತದೆ. (2 ಪೇತ್ರ 2:4, 5) ಹಾಗಾಗಿ ನೋಹನ ದಿನದ ಅವಿಧೇಯ ದೇವದೂತರು ಮಾಡಿದ ಕೃತ್ಯವು ಸೊದೋಮ್‌ ಗೊಮೋರಗಳ ಜನರ ಪಾಪಕ್ಕೆ ಹೋಲುತ್ತದೆ.

ಹಾಗಿದ್ದರೆ, ಆದಿಕಾಂಡ 6:1, 4ರಲ್ಲಿ ಹೇಳಲಾಗಿರುವ “ದೇವಪುತ್ರರು” ದೇವದೂತರಾಗಿದ್ದು, ಮಾನವ ದೇಹಕ್ಕೆ ರೂಪಾಂತರಗೊಂಡು ಸ್ತ್ರೀಯರೊಂದಿಗೆ ಅನೈತಿಕತೆ ನಡೆಸಿದರು ಎಂದು ನಾವು ಅರ್ಥಮಾಡಿಕೊಳ್ಳಬೇಕು.

‘ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ ಯೇಸು ಸಾರಿದನು ಎನ್ನುತ್ತೆ ಬೈಬಲ್‌. (1 ಪೇತ್ರ 3:19, 20) ಹಾಗೆಂದರೇನು?

ಅಪೊಸ್ತಲ ಪೇತ್ರ ಹೇಳುತ್ತಿರುವುದು “ನೋಹನ ದಿನಗಳಲ್ಲಿ ನಾವೆಯು ಕಟ್ಟಲ್ಪಡುತ್ತಿದ್ದಾಗ ದೇವರು ತಾಳ್ಮೆಯಿಂದ ಕಾದುಕೊಂಡಿದ್ದ ಸಮಯದಲ್ಲಿ ಅವಿಧೇಯರಾಗಿದ್ದ” ಆತ್ಮಜೀವಿಗಳ ಬಗ್ಗೆ. (1 ಪೇತ್ರ 3:20) ಈ ಆತ್ಮಜೀವಿಗಳು ಸೈತಾನನ ದಂಗೆಯಲ್ಲಿ ಕೈಜೋಡಿಸಿದ್ದರು. ಇವರ ಬಗ್ಗೆ ಯೂದನು ಹೇಳಿದ್ದು: “ತಮ್ಮ ಮೂಲಸ್ಥಾನವನ್ನು ಕಾಪಾಡಿಕೊಳ್ಳದೆ ತಮ್ಮ ಸೂಕ್ತವಾದ ವಾಸಸ್ಥಳವನ್ನು ಬಿಟ್ಟುಬಂದ ದೇವದೂತರಿಗೆ” ದೇವರು “ನಿತ್ಯವಾದ ಬೇಡಿಗಳನ್ನು ಹಾಕಿ ಮಹಾ ದಿನದಲ್ಲಾಗುವ ನ್ಯಾಯತೀರ್ಪಿಗಾಗಿ ದಟ್ಟವಾದ ಕತ್ತಲೆಯಲ್ಲಿ ಇಟ್ಟಿದ್ದಾನೆ.”—ಯೂದ 6.

ನೋಹನ ದಿನದಲ್ಲಿ ಆತ್ಮಜೀವಿಗಳು ಯಾವ ರೀತಿಯಲ್ಲಿ ಅವಿಧೇಯರಾದರು? ಜಲಪ್ರಳಯಕ್ಕೆ ಮುಂಚೆ ಈ ದುಷ್ಟ ಆತ್ಮಜೀವಿಗಳು, ತಮ್ಮನ್ನು ಮಾನವ ರೂಪಕ್ಕೆ ಬದಲಾಯಿಸಿಕೊಂಡರು. ದೇವರು ಅವರನ್ನು ಈ ಉದ್ದೇಶದೊಂದಿಗೆ ಸೃಷ್ಟಿಸಿರಲಿಲ್ಲ. (ಆದಿ. 6:2, 4) ಅಷ್ಟೇ ಅಲ್ಲದೆ ಈ ಆತ್ಮಜೀವಿಗಳು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡು ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಂಡರು. ದೇವರು ಆತ್ಮಜೀವಿಗಳನ್ನು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ಉದ್ದೇಶದೊಂದಿಗೆ ಸೃಷ್ಟಿಸಿಲ್ಲ. (ಆದಿ. 5:2) ಹಾಗಾಗಿ ದೇವರು ಈ ದುಷ್ಟ, ಅವಿಧೇಯ ಆತ್ಮಜೀವಿಗಳನ್ನು ತಕ್ಕ ಸಮಯದಲ್ಲಿ ನಾಶಮಾಡುತ್ತಾನೆ. ಈಗ ಅವು “ದಟ್ಟವಾದ ಕತ್ತಲೆಯಲ್ಲಿ” ಅಂದರೆ ಆಧ್ಯಾತ್ಮಿಕ ಬಂಧಿವಾಸದಲ್ಲಿದ್ದಾರೆ ಎಂದು ಯೂದ ಬರೆದಿದ್ದಾನೆ.

ಯೇಸು ಕ್ರಿಸ್ತನು ‘ಸೆರೆಯಲ್ಲಿದ್ದ ಆತ್ಮಜೀವಿಗಳಿಗೆ’ ಸಾರಿದ್ದು ಯಾವಾಗ ಮತ್ತು ಹೇಗೆ? ಯೇಸು “ಆತ್ಮಜೀವಿಯಾಗಿ ಬದುಕುವಂತಾದ” ಮೇಲೆ ಅಂದರೆ ಪುನರುತ್ಥಾನವಾದ ಮೇಲೆ ಸಾರಿದನೆಂದು ಪೇತ್ರನು ಹೇಳಿದನು. (1 ಪೇತ್ರ 3:18-20) ಯೇಸು “ಸಾರಿದನು” ಎಂದು ಪೇತ್ರ ಹೇಳಿರುವುದನ್ನು ಗಮನಿಸಿ. ಪೇತ್ರ ಬಳಸಿದ ಪದ ಭೂತಕಾಲದಲ್ಲಿರುವುದರಿಂದ ಅವನು ಮೊದಲನೇ ಪತ್ರ ಬರೆಯುವುದಕ್ಕಿಂತ ಮುಂಚೆಯೇ ಯೇಸು ಈ ಸಾರುವ ಕೆಲಸವನ್ನು ಮಾಡಿದ್ದನು ಎಂದು ತಿಳಿಯುತ್ತೆ. ಯೇಸು ದುಷ್ಟಾತ್ಮಗಳಿಗೆ ನಿರೀಕ್ಷೆ ಕೊಡುವ ಯಾವುದೇ ವಿಷಯವನ್ನು ಸಾರಲಿಲ್ಲ. ಬದಲಿಗೆ ನ್ಯಾಯವಾಗಿ ಅವರಿಗೆ ಸಿಗಲಿರುವ ತೀರ್ಪನ್ನು ಘೋಷಿಸಿದನು. (ಯೋನ 1:1, 2) ಯೇಸು ತನ್ನ ನಂಬಿಕೆ ಮತ್ತು ನಿಷ್ಠೆಯನ್ನು ಸಾಯುವವರೆಗೂ ಕಾಪಾಡಿಕೊಂಡನು ಮತ್ತು ಪುನರುತ್ಥಾನ ಹೊಂದಿದನು. ಇದರಿಂದ ತನ್ನ ಮೇಲೆ ಸೈತಾನನಿಗೆ ಯಾವುದೇ ಹಿಡಿತವಿಲ್ಲ ಎಂದು ಸಾಬೀತುಪಡಿಸಿದನು. ಹಾಗಾಗಿ ಸಂಪೂರ್ಣ ಹಕ್ಕಿನಿಂದ ದುಷ್ಟಾತ್ಮಗಳಿಗೆ ದಂಡನಾತ್ಮಕ ಘೋಷಣೆಯನ್ನು ಮಾಡಿದನು.—ಯೋಹಾ. 14:30; 16:8-11.

ಭವಿಷ್ಯತ್ತಿನಲ್ಲಿ ಯೇಸು ಸೈತಾನನನ್ನು ಮತ್ತು ಅವನ ಸಂಗಡಿಗರನ್ನು ಅಗಾಧ ಸ್ಥಳಕ್ಕೆ ದೊಬ್ಬಲಿದ್ದಾನೆ. (ಲೂಕ 8:30, 31; ಪ್ರಕ. 20:1-3) ಅಲ್ಲಿಯ ವರೆಗೆ ಈ ಅವಿಧೇಯ ದುಷ್ಟಾತ್ಮಗಳು ದಟ್ಟವಾದ ಆಧ್ಯಾತ್ಮಿಕ ಅಂಧಕಾರದಲ್ಲಿರುತ್ತವೆ ಮತ್ತು ಅವುಗಳ ನಾಶ ಖಂಡಿತ.—ಪ್ರಕ. 20:7-10.