ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ನಾನು ಲೋಕಕ್ಕೆ ಶಾಂತಿ ತರೋಕೆ ಬಂದೆ ಅಂತ ನೆನಸಬೇಡಿ” ಅಂತ ಯೇಸು ಹೇಳಿದ ಮಾತಿನ ಅರ್ಥ ಏನು?

ಒಬ್ಬರಿಗೊಬ್ಬರು ಶಾಂತಿಯಿಂದ ಇರಿ ಅಂತ ಯೇಸು ಕಲಿಸಿದನು. ಆದ್ರೆ ಒಂದು ಸಲ ತನ್ನ ಅಪೊಸ್ತಲರ ಹತ್ರ “ನಾನು ಲೋಕಕ್ಕೆ ಶಾಂತಿ ತರೋಕೆ ಬಂದೆ ಅಂತ ನೆನಸಬೇಡಿ. ಶಾಂತಿಯನ್ನಲ್ಲ ಕತ್ತಿ ಹಾಕೋಕೆ ಬಂದಿದ್ದೀನಿ. ಅಪ್ಪನಿಗೂ ಮಗನಿಗೂ, ಅಮ್ಮನಿಗೂ ಮಗಳಿಗೂ, ಅತ್ತೆಗೂ ಸೊಸೆಗೂ ವಿರೋಧ ತರೋಕೆ ನಾನು ಬಂದಿದ್ದೀನಿ” ಅಂತ ಹೇಳಿದನು. (ಮತ್ತಾ. 10:34, 35) ಯೇಸು ಯಾಕೆ ಹೀಗೆ ಹೇಳಿದನು?

ಕುಟುಂಬದವರು ಎಲ್ಲರೂ ಸಂತೋಷವಾಗಿರಬೇಕು ಅಂತಾನೇ ಯೇಸು ಆಸೆಪಟ್ಟನು. ಆದ್ರೆ ಆತನು ಕಲಿಸಿದ ವಿಷಯಗಳನ್ನ ನಾವು ಪಾಲಿಸಿದ್ರೆ ಕೆಲವೊಮ್ಮೆ ಕುಟುಂಬಗಳಲ್ಲಿ ಸಮಸ್ಯೆಗಳು ಬರುತ್ತೆ ಅಂತನೂ ಆತನಿಗೆ ಗೊತ್ತಿತ್ತು. ಹಾಗಾಗಿ ಯಾರು ಯೇಸುವಿನ ಶಿಷ್ಯರಾಗಿ ದೀಕ್ಷಾಸ್ನಾನ ಪಡೆದುಕೊಳ್ತಾರೋ ಅವರ ಕುಟುಂಬದವರು ಅದನ್ನ ಇಷ್ಟಪಡದೇ ಅವರನ್ನ ವಿರೋಧಿಸಬಹುದು ಅಂತ ನಾವು ಮುಂಚೆನೇ ತಿಳಿದುಕೊಂಡಿರಬೇಕು. ಸತ್ಯದಲ್ಲಿ ಇಲ್ಲದಿರೋ ಸಂಗಾತಿ ಅಥವಾ ಮನೆಯವರು ಹೀಗೆ ವಿರೋಧಿಸುವಾಗ ಯೇಸು ಕಲಿಸಿದ ವಿಷಯಗಳನ್ನ ಪಾಲಿಸೋಕೆ ನಮಗೆ ಕಷ್ಟ ಆಗಬಹುದು.

‘ಎಲ್ರ ಜೊತೆ ಶಾಂತಿಯಿಂದ ಇರಿ’ ಅಂತ ಬೈಬಲ್‌ ಹೇಳುತ್ತೆ. (ರೋಮ. 12:18) ಆದ್ರೆ ಯೇಸು ಕಲಿಸಿದ ವಿಷಯಗಳು ಕೆಲವೊಮ್ಮೆ ಕುಟುಂಬದವರ ಮಧ್ಯೆ “ಕತ್ತಿ” ಹಾಕಿದ ತರ ಇರುತ್ತೆ. ಯಾಕಂದ್ರೆ ಒಬ್ಬ ವ್ಯಕ್ತಿ ಯೇಸು ಹೇಳಿದ ತರ ನಡೆದುಕೊಳ್ಳೋಕೆ ಶುರು ಮಾಡಿದ ತಕ್ಷಣ ಅವನ ಕುಟುಂಬದವರು ಅದನ್ನ ಇಷ್ಟ ಪಡದೆ ಅವನನ್ನ ವಿರೋಧಿಸಬಹುದು. ಇಂಥ ಸನ್ನಿವೇಶದಲ್ಲಿ ಸತ್ಯ ಕಲಿತಿರೋ ವ್ಯಕ್ತಿಗೆ ಅವನ ಕುಟುಂಬದವರೇ ಅಂದ್ರೇ ಒಂದೇ ಮನೆಯಲ್ಲಿ ಇರುವವರೇ ಒಂದರ್ಥದಲ್ಲಿ “ಶತ್ರುಗಳಾಗ್ತಾರೆ.”—ಮತ್ತಾ. 10:36.

ಕುಟುಂಬದವರು ಸತ್ಯದಲ್ಲಿ ಇಲ್ಲದಿದ್ದಾಗ, ಸತ್ಯದಲ್ಲಿರೋ ನಮ್ಮ ಸಹೋದರ ಸಹೋದರಿಯರಿಗೆ ಕೆಲವೊಮ್ಮೆ ಯೆಹೋವ ಮತ್ತು ಯೇಸುವಿನ ಮಾತನ್ನ ಕೇಳಬೇಕಾ ಅಥವಾ ಮನೆಯವರ ಮಾತನ್ನ ಕೇಳಬೇಕಾ ಅನ್ನೋ ನಿರ್ಧಾರ ಮಾಡಬೇಕಾಗುತ್ತೆ. ಉದಾಹರಣೆಗೆ, ನಮ್ಮ ಸಹೋದರ ಅಥವಾ ಸಹೋದರಿಯರನ್ನ ಅವರ ಸಂಬಂಧಿಕರು ಹಬ್ಬಕ್ಕೆ ಕರೆಯಬಹುದು. ಆಗ ಏನು ಮಾಡೋದು? “ನನಗಿಂತ ಹೆಚ್ಚಾಗಿ ಅಪ್ಪಅಮ್ಮನನ್ನ ಪ್ರೀತಿಸಿದ್ರೆ ನನ್ನ ಶಿಷ್ಯನಾಗೋ ಯೋಗ್ಯತೆ ಅವನಿಗಿಲ್ಲ” ಅಂತ ಯೇಸು ಹೇಳಿದನು. (ಮತ್ತಾ. 10:37) ಹಾಗಾದ್ರೆ ಈ ಮಾತಿನ ಅರ್ಥ ಏನು? ನಾವು ನಮ್ಮ ಅಪ್ಪಅಮ್ಮನ ಪ್ರೀತಿಸಬಾರದು ಅಂತ ಯೇಸು ಇಲ್ಲಿ ಹೇಳುತ್ತಿದ್ದಾನಾ? ಇಲ್ಲ. ಯೇಸುವಿನ ಮಾತುಗಳನ್ನ ಪಾಲಿಸೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಿರಬೇಕು ಅನ್ನೋದೇ ಅದರ ಅರ್ಥ. ನಾವು ನಮ್ಮ ಕುಟುಂಬದವರನ್ನ ಪ್ರೀತಿಸುತ್ತೀವಿ ನಿಜ, ಆದ್ರೆ ಒಂದುವೇಳೆ ಅವರು ಯೆಹೋವನನ್ನು ಆರಾಧಿಸಬಾರದು ಅಂತ ಹೇಳಿದ್ರೆ ಆಗ ನಾವು ಅವರ ಮಾತನ್ನ ಕೇಳಲ್ಲ. ಹೀಗೆ ನಮಗೆ ಯೆಹೋವ ದೇವರೇ ಮುಖ್ಯ ಅನ್ನೋದನ್ನ ತೋರಿಸಿಕೊಡ್ತೀವಿ.

ನಮ್ಮ ಸ್ವಂತ ಕುಟುಂಬದವರೇ ನಮ್ಮನ್ನ ವಿರೋಧಿಸಿದಾಗ ನಮಗೆ ತುಂಬ ನೋವಾಗುತ್ತೆ. ಆದ್ರೆ ಯೇಸು ಹೇಳಿದ ಮಾತುಗಳನ್ನ ನಾವು ನೆನಪಲ್ಲಿಡುತ್ತೀವಿ. “ಯಾರಿಗೆಲ್ಲ ತಮ್ಮ ಹಿಂಸಾ ಕಂಬವನ್ನ ಹೊತ್ಕೊಂಡು ನನ್ನ ಹಿಂದೆ ಬರೋಕೆ ಇಷ್ಟ ಇಲ್ವೋ ಅವ್ರಿಗೆ ನನ್ನ ಶಿಷ್ಯರಾಗೋ ಯೋಗ್ಯತೆ ಇಲ್ಲ” ಅಂತ ಆತನು ಹೇಳಿದನು. (ಮತ್ತಾ. 10:38) ಹಾಗಾಗಿ, ಕ್ರೈಸ್ತರಿಗೆ ಬರೋ ಸಮಸ್ಯೆಗಳಲ್ಲಿ ಕುಟುಂಬದಿಂದ ಬರೋ ವಿರೋಧನೂ ಒಂದು ಅನ್ನೋದನ್ನ ನೆನಪಲ್ಲಿ ಇಟ್ಟುಕೊಂಡಿರುತ್ತೀವಿ. ಅಷ್ಟೇ ಅಲ್ಲ, ಸತ್ಯದಲ್ಲಿ ಇಲ್ಲದಿರೋ ಅಥವಾ ವಿರೋಧಿಸುತ್ತಿರುವ ಕುಟುಂಬದವರು ನಮ್ಮ ಒಳ್ಳೇ ನಡತೆಯನ್ನ ನೋಡಿ ಒಂದಲ್ಲಾ ಒಂದು ದಿನ ಮನಸ್ಸು ಬದಲಾಯಿಸಿಕೊಂಡು ಸತ್ಯ ಕಲಿತಾರೆ ಅನ್ನೋ ನಿರೀಕ್ಷೆಯನ್ನೂ ಇಟ್ಟುಕೊಂಡಿರುತ್ತೀವಿ.—1 ಪೇತ್ರ 3:1, 2.