ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಸ್ಸನ್ನು ವಿಷಪೂರಿತಗೊಳಿಸುವ ಅಸೂಯೆ

ಮನಸ್ಸನ್ನು ವಿಷಪೂರಿತಗೊಳಿಸುವ ಅಸೂಯೆ

ಮನಸ್ಸನ್ನು ವಿಷಪೂರಿತಗೊಳಿಸುವ ಅಸೂಯೆ

ಅಸೂಯೆ! ನೆಪೋಲಿಯನ್‌ ಬೋನಪಾರ್ಟ್‌ನಲ್ಲೂ ಇತ್ತು, ಜೂಲಿಯಸ್‌ ಸೀಸರ್‌ನಿಗೂ ಸೋಂಕಿತ್ತು, ಮಹಾ ಅಲೆಗ್ಸಾಂಡರನೂ ಅದರಿಂದ ಹೊರತಾಗಿರಲಿಲ್ಲ. ಸ್ಥಾನಮಾನ, ಅಧಿಕಾರ ಎಲ್ಲ ಇದ್ದರೂ ಅಸೂಯೆ ಎಂಬ ಗುಣ ಅವರ ಮನಸ್ಸನ್ನು ವಿಷಪೂರಿತಗೊಳಿಸಿತ್ತು. ಮತ್ತೊಬ್ಬರು ತಮ್ಮನ್ನು ಮೀರಿಸುವುದು ಈ ಮೂವರಿಗೂ ಅಸಹನೀಯವಾಗಿತ್ತು.

“ನೆಪೋಲಿಯನ್‌ಗೆ ಸೀಸರ್‌ನ ಮೇಲೆ ಮತ್ಸರ, ಸೀಸರನಿಗೆ [ಮಹಾ] ಅಲೆಗ್ಸಾಂಡರ್‌ ಮೇಲೆ ಮತ್ಸರ, ಅಲೆಗ್ಸಾಂಡರ್‌ಗೆ ಹರ್ಕ್ಯುಲೀಸ್‌ ಎಂಬ ಕಾಲ್ಪನಿಕ ವ್ಯಕ್ತಿಯ ಮೇಲೆ ಅಸೂಯೆ” ಹೀಗೆಂದು ಇಂಗ್ಲಿಷ್‌ ತತ್ವಜ್ಞಾನಿ ಬರ್ಟ್‌ರಾಂಡ್‌ ರಸ್ಸಲ್‌ ಹೇಳಿದರು. ಅಸೂಯೆ ಎಂಥವರಲ್ಲೂ ಬರಬಹುದು. ಎಷ್ಟೇ ಸಿರಿವಂತರಾಗಿರಲಿ ಗುಣವಂತರಾಗಿರಲಿ ಏಳಿಗೆ ಹೊಂದಿರಲಿ ಅಸೂಯೆ ಅವರಲ್ಲೂ ಮನೆಮಾಡಬಹುದು.

ಬೇರೆಯವರ ಆಸ್ತಿ, ಅಭಿವೃದ್ಧಿ, ಅನುಕೂಲ ಇತ್ಯಾದಿ ನೋಡಿ ಹೊಟ್ಟೆಗೆ ಕೆಂಡ ಸುರಿದಂಥಾಗುವುದೇ ಅಸೂಯೆ. ಹೊಟ್ಟೆಕಿಚ್ಚು ಮತ್ತು ಅಸೂಯೆಗಿರುವ ವ್ಯತ್ಯಾಸವನ್ನು ಬೈಬಲ್‌ ಪರಾಮರ್ಶನ ಪುಸ್ತಕವೊಂದು ಹೀಗೆ ವಿವರಿಸುತ್ತದೆ: “‘ಹೊಟ್ಟೆಕಿಚ್ಚು’ . . . ಅಂದರೆ ಅವನಂತೆ ನಾನಾಗಬೇಕೆಂಬ ಮನೋಭಾವ. ‘ಅಸೂಯೆ’ ಅಂದರೆ ಅವನ ಹತ್ತಿರ ಇರುವುದನ್ನು ಹೇಗಾದರೂ ಕಿತ್ತುಕೊಳ್ಳಬೇಕು ಎಂಬ ದುರಾಶೆ.” ಅಸೂಯೆ ಇದ್ದವರು ಪರರ ಬಳಿಯಿರುವುದನ್ನು ಕಂಡು ಕರುಬುತ್ತಾರೆ ಮಾತ್ರವಲ್ಲ ಅದು ತಮ್ಮದಾಗಬೇಕೆಂದು ಬಯಸುತ್ತಾರೆ.

ಅಸೂಯೆ ನಮ್ಮಲ್ಲಿ ಹೇಗೆ ಮೊಳೆಯಬಹುದು? ಅದರ ದುಷ್ಪರಿಣಾಮಗಳೇನು? ಇದನ್ನು ತಿಳಿಯುವುದು ವಿವೇಕಪ್ರದ. ಅಸೂಯೆ ನಮ್ಮ ಮೇಲೆ ಹತೋಟಿ ಸಾಧಿಸದಂತೆ ನಾವೇನು ಮಾಡಬೇಕು ಎನ್ನುವುದನ್ನು ತಿಳಿಯುವುದು ಸಹ ಬಹು ಮುಖ್ಯ.

ಅಸೂಯೆಯೆಂಬ ಬೆಂಕಿಗೆ ಉರುವಲಾಗಿರುವ ಮನೋಭಾವ

ಅಪರಿಪೂರ್ಣರಾದ ಮಾನವರಿಗೆ ‘ಅಸೂಯೆಪಡುವ ಪ್ರವೃತ್ತಿಯಿದೆ.’ ಆ ಪ್ರವೃತ್ತಿಯನ್ನು ನೀರೆರೆದು ಪೋಷಿಸುವ ಅನೇಕ ವಿಷಯಗಳಿವೆ. (ಯಾಕೋ. 4:5) ಅದರಲ್ಲೊಂದನ್ನು ಗುರುತಿಸುತ್ತಾ ಅಪೊಸ್ತಲ ಪೌಲ ಹೀಗೆ ಬರೆದನು: “ಅಹಂಕಾರಿಗಳೂ ಒಬ್ಬರೊಂದಿಗೊಬ್ಬರು ಸ್ಪರ್ಧೆಗಿಳಿಯುವವರೂ ಒಬ್ಬರ ಮೇಲೊಬ್ಬರು ಅಸೂಯೆಪಡುವವರೂ ಆಗದೆ ಇರೋಣ.” (ಗಲಾ. 5:26) ಅಪರಿಪೂರ್ಣರಾದ ನಮ್ಮಲ್ಲಿರುವ ಅಸೂಯೆಪಡುವ ಸ್ವಭಾವ ಸ್ಪರ್ಧಾತ್ಮಕ ಮನೋಭಾವದಿಂದಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಕ್ರೈಸ್ತರಾಗಿರುವ ಕ್ರಿಸ್ಟೀನ ಮತ್ತು ಹೋಸೇ * ಎಂಬವರಿಗೂ ಅದರ ಪ್ರಭಾವ ತಟ್ಟಿತು.

ರೆಗ್ಯುಲರ್‌ ಪಯನೀಯರರಾಗಿರುವ ಕ್ರಿಸ್ಟೀನ ಹೀಗನ್ನುತ್ತಾರೆ: “ಬೇರೆಯವರನ್ನು ನೋಡಿ ಅಸೂಯೆ ಪಡುವ ಮನೋಭಾವ ನನಗುಂಟು. ಅವರ ಬಳಿಯಿರುವುದು ನನ್ನ ಬಳಿ ಇಲ್ಲವಲ್ಲಾ ಎಂದು ಕೊರಗುತ್ತೇನೆ.” ಸಂಚರಣ ಕೆಲಸದಲ್ಲಿದ್ದ ದಂಪತಿಯನ್ನು ಒಮ್ಮೆ ಕ್ರಿಸ್ಟೀನ ಊಟಕ್ಕೆ ಕರೆದಿದ್ದರು. ಆ ದಂಪತಿ ತಮ್ಮಂತೆ ರೆಗ್ಯುಲರ್‌ ಪಯನೀಯರ್‌ ಆಗಿದ್ದವರು ಮತ್ತು ತಮ್ಮಷ್ಟೇ ಪ್ರಾಯದವರು ಎಂದು ತಿಳಿದ ಕ್ರಿಸ್ಟೀನ “ನನ್ನ ಗಂಡ ಕೂಡ ಸಭೆಯಲ್ಲಿ ಹಿರಿಯರು! ಸಂಚರಣ ಕೆಲಸ ಮಾಡುವ ಸುಯೋಗ ನಮಗೆ ಸಿಕ್ಕಿಲ್ಲ, ನಿಮಗೆ ಮಾತ್ರ ಸಿಕ್ಕಿಬಿಟ್ಟಿದೆ?” ಎಂದು ಮುಖದೆದುರಿಗೆ ಹೇಳಿದರು. ಸ್ಪರ್ಧಾತ್ಮಕ ಮನೋಭಾವ ಅವರಲ್ಲಿ ಅಸೂಯೆಯ ಕಿಡಿಹೊತ್ತಿಸಿತು. ತನಗೂ ತನ್ನ ಗಂಡನಿಗೂ ಈಗಾಗಲೇ ಇದ್ದ ಸುಯೋಗದೆಡೆಗೆ ಕುರುಡುಮಾಡಿತು. ಅಸಂತೃಪ್ತ ಭಾವನೆ ಅವರಲ್ಲಿ ತುಂಬಿತು.

ಹೋಸೇಗೆ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸುವ ಆಸೆಯಿತ್ತು. ತನಗೆ ಆ ಸುಯೋಗ ಸಿಗದೆ ಬೇರೆಯವರಿಗೆ ಸಿಕ್ಕಿದಾಗ ಅವರನ್ನು ನೋಡಿ ಅವನಿಗೆ ಅಸೂಯೆ ಉಂಟಾಯಿತು. ಹಿರಿಯರ ಮಂಡಲಿಯ ಸಂಯೋಜಕನ ಮೇಲೂ ಸಿಟ್ಟು. “ಈ ಹಿರಿಯರ ಮೇಲೆ ನನ್ನಲ್ಲಿ ದ್ವೇಷ ಕುದಿಯುತ್ತಿತ್ತು. ಸಭೆಯಲ್ಲಿ ನನಗೆ ಜವಾಬ್ದಾರಿಗಳು ಸಿಗುವುದು ಅವರಿಗೆ ಸಹಿಸಲಿಕ್ಕೆ ಆಗಲ್ಲ ಅಂದುಕೊಂಡೆ. ಅಸೂಯೆ ನಮ್ಮಲ್ಲಿ ಮೇಲುಗೈ ಸಾಧಿಸಿದಾಗ ನಮ್ಮ ಬಗ್ಗೆಯೇ ಹೆಚ್ಚಾಗಿ ಆಲೋಚಿಸತೊಡಗುತ್ತೇವೆ. ಯೋಚನಾಸಾಮರ್ಥ್ಯ ಕುಂದಿಹೋಗುತ್ತದೆ” ಎಂದು ಒಪ್ಪಿಕೊಳ್ಳುತ್ತಾರೆ ಹೋಸೇ.

ಬೈಬಲ್‌ ಉದಾಹರಣೆಗಳಿಂದ ಪಾಠ

ಬೈಬಲಿನಲ್ಲಿ ಅನೇಕ ಎಚ್ಚರಿಕೆಯ ಉದಾಹರಣೆಗಳು ನಮಗಿವೆ. (1 ಕೊರಿಂ. 10:11) ಕೆಲವು ಉದಾಹರಣೆಗಳು ನಮ್ಮಲ್ಲಿ ಅಸೂಯೆ ಹೇಗೆ ಬೆಳೆಯಬಹುದೆಂದೂ ಅಸೂಯೆ ಮೇಲುಗೈ ಸಾಧಿಸಿದಾಗ ಹೇಗೆ ವಿಷಕಾರಿಯಾಗುತ್ತದೆ ಎಂದೂ ತೋರಿಸುತ್ತವೆ.

ಉದಾಹರಣೆಗೆ, ಆದಾಮಹವ್ವರ ಮೊದಲನೇ ಮಗ ಕಾಯಿನನು ತನ್ನ ತಮ್ಮನ ಮೇಲೆ ಸಿಟ್ಟುಗೊಂಡನು. ಯೆಹೋವನು ಅವನ ಕಾಣಿಕೆಯನ್ನು ತಿರಸ್ಕರಿಸಿ ಅವನ ತಮ್ಮನ ಕಾಣಿಕೆಯನ್ನು ಸ್ವೀಕರಿಸಿದ್ದೇ ಇದಕ್ಕೆ ಕಾರಣ. ಕಾಯಿನ ತನ್ನ ಕೋಪವನ್ನು ಹತೋಟಿಗೆ ತಂದು ಒಳ್ಳೇದನ್ನು ಮಾಡಬಹುದಿತ್ತು. ಆದರೆ ಅಸೂಯೆ ಅವನನ್ನು ಕುರುಡಾಗಿಸಿತು. ಎಷ್ಟೆಂದರೆ ತಮ್ಮನನ್ನು ಕೊಲ್ಲುವಷ್ಟರ ಮಟ್ಟಿಗೆ ಕೊಂಡೊಯ್ಯಿತು. (ಆದಿ. 4:4-8) ಆದ್ದರಿಂದಲೇ ಬೈಬಲ್‌ ಕಾಯಿನನನ್ನು “ಕೆಡುಕನಿಂದ ಹುಟ್ಟಿದವ” ಎಂದನ್ನುತ್ತದೆ.—1 ಯೋಹಾ. 3:12.

ಯೋಸೇಫನು ತಂದೆಗೆ ಹೆಚ್ಚು ಪ್ರಿಯನಾಗಿದ್ದ ಕಾರಣ ಅವನ ಹತ್ತು ಮಂದಿ ಅಣ್ಣಂದಿರು ಅಸೂಯೆಪಟ್ಟರು. ಒಮ್ಮೆ ಯೋಸೇಫ ತನಗೆ ಬಿದ್ದ ಪ್ರವಾದನಾತ್ಮಕ ಕನಸಿನ ಬಗ್ಗೆ ಹೇಳಿದಾಗಲಂತೂ ಅವರ ದ್ವೇಷ ಇಮ್ಮಡಿಯಾಯಿತು. ಹೇಗಾದರೂ ಅವನನ್ನು ಕೊಲ್ಲಬೇಕೆಂದುಕೊಂಡರು. ಕೊನೆಗೆ ದಾಸತ್ವಕ್ಕೆ ಮಾರಿಬಿಟ್ಟರು. ಯೋಸೇಫನು ಸತ್ತನೆಂದು ತಂದೆಯನ್ನು ನಂಬಿಸಲು ನಿರ್ದಯವಾಗಿ ಸಂಚು ಹೂಡಿದರು. (ಆದಿ. 37:4-11, 23-28, 31-33) ವರ್ಷಗಳಾನಂತರ ತಮ್ಮ ಪಾಪವನ್ನು ಒಪ್ಪಿಕೊಳ್ಳುತ್ತಾ ಪರಸ್ಪರ ಹೀಗೆ ಮಾತಾಡಿದರು: “ನಾವು ನಮ್ಮ ತಮ್ಮನಿಗೆ ಮಾಡಿದ್ದು ದ್ರೋಹವೇ ಸರಿ; ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ.”—ಆದಿ. 42:21; 50:15-19.

ಮೋಶೆ ಮತ್ತು ಆರೋನನಿಗಿರುವ ವಿಶೇಷ ನೇಮಕ ತಮಗಿಲ್ಲವಲ್ಲಾ ಎಂದು ಕೋರಹ ದಾತಾನ್‌ ಅಬೀರಾಮ್‌ ಅಸೂಯೆಪಟ್ಟರು. ಬೇರೆಲ್ಲರಿಗಿಂತ ಮೇಲೇರಿಸಿಕೊಂಡು ‘ನಮ್ಮ ಮೇಲೆ ದೊರೆತನಮಾಡುತ್ತಿ’ ಎಂದು ಆರೋಪ ಹೊರಿಸಿದರು. (ಅರ. 16:13) ಆದರೆ ಮೋಶೆ ಹಾಗೆ ಮಾಡುತ್ತಿರಲಿಲ್ಲ. (ಅರ. 11:14, 15) ಯೆಹೋವನೇ ಮೋಶೆಗೆ ಆ ನೇಮಕವನ್ನು ಕೊಟ್ಟಿದ್ದನು. ಆದರೆ ಈ ಪ್ರತಿಭಟಕರು ಮೋಶೆಯ ಸ್ಥಾನ ತಮಗೆ ಬೇಕೆಂದು ಹಪಹಪಿಸಿದರು. ಕೊನೆಗೆ ಅವರು ಯೆಹೋವ ದೇವರ ಕೈಯಿಂದ ನಾಶವಾದರು.—ಕೀರ್ತ. 106:16, 17.

ಅಸೂಯೆ ಒಬ್ಬನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎನ್ನುವುದನ್ನು ರಾಜ ಸೊಲೊಮೋನನು ಕಣ್ಣಾರೆ ಕಂಡಿದ್ದನು. ಒಬ್ಬಾಕೆ ಹೆಂಗಸು ತನ್ನ ಹಸುಗೂಸು ಸತ್ತದ್ದನ್ನು ಕಂಡು ಪಕ್ಕದಲ್ಲಿದ್ದ ಸ್ತ್ರೀಯ ಕಂದನನ್ನು ತೆಗೆದುಕೊಂಡಳು. ತನ್ನ ಸತ್ತ ಮಗು ಆಕೆಯದ್ದೆಂದು ಹೇಳಿ ವಂಚಿಸಲು ಪ್ರಯತ್ನಿಸಿದಳು. ಇದರ ಬಗ್ಗೆ ರಾಜನ ಮುಂದೆ ವಿಚಾರಣೆ ನಡೆಯಿತು. ಜೀವಂತ ಮಗುವನ್ನು ಕೊಲ್ಲಿರೆಂದು ರಾಜ ಅಪ್ಪಣೆ ಕೊಟ್ಟಾಗ ಅದಕ್ಕೆ ಸಮ್ಮತಿ ಸೂಚಿಸಲೂ ಆ ಸುಳ್ಳಿ ಹೇಸಲಿಲ್ಲ. ಆದರೆ ಸೊಲೊಮೋನನು ಮಗುವನ್ನು ಅದರ ನಿಜವಾದ ತಾಯಿಗೆ ಕೊಟ್ಟುಬಿಟ್ಟನು.—1 ಅರ. 3:16-27.

ಅಸೂಯೆ ವಿಷಕಾರಿ ಪರಿಣಾಮಗಳನ್ನು ಉಂಟುಮಾಡಬಲ್ಲದು. ಇನ್ನೊಬ್ಬರನ್ನು ದ್ವೇಷಿಸುವಂತೆ, ಅನ್ಯಾಯ ಮಾಡುವಂತೆ ಅಷ್ಟೇಕೆ ಕೊಲೆ ಮಾಡುವಂತೆಯೂ ಪ್ರಚೋದಿಸಬಲ್ಲದೆಂದು ಮೇಲೆ ತಿಳಿಸಲಾದ ಉದಾಹರಣೆಗಳು ತಿಳಿಸುತ್ತವೆ. ಇನ್ನೊಂದೆಡೆ ಅಸೂಯೆಗೆ ಬಲಿಪಶುವಾದವರು ಯಾವ ತಪ್ಪನ್ನೂ ಮಾಡದ ಮುಗ್ಧರಾಗಿದ್ದರು. ಅಸೂಯೆ ನಮ್ಮ ಮೇಲೆ ಹತೋಟಿ ಸಾಧಿಸದಂತೆ ನಾವೇನಾದರೂ ಮಾಡಸಾಧ್ಯವೇ? ಅಸೂಯೆ ಎಂಬ ವಿಷವನ್ನು ತೆಗೆದು ಹಾಕಲು ಯಾವ ಮದ್ದಿದೆ?

ಪ್ರಭಾವಿ ಮದ್ದು!

ಪ್ರೀತಿ ಮತ್ತು ಸಹೋದರ ಮಮತೆ ಇರಲಿ. “ನೀವು ಸತ್ಯಕ್ಕೆ ವಿಧೇಯರಾಗಿರುವ ಮೂಲಕ ನಿಮ್ಮ ಪ್ರಾಣಗಳನ್ನು ಶುದ್ಧೀಕರಿಸಿಕೊಂಡು ನಿಷ್ಕಪಟವಾದ ಸಹೋದರ ಮಮತೆಯನ್ನು ಹೊಂದಿರುವುದರಿಂದ ಹೃದಯದಾಳದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ” ಎಂದು ಅಪೊಸ್ತಲ ಪೇತ್ರ ಕ್ರೈಸ್ತರಿಗೆ ಬುದ್ಧಿಹೇಳಿದನು. (1 ಪೇತ್ರ 1:22) ಪ್ರೀತಿ ಎಂಥದ್ದೆಂದು ಅಪೊಸ್ತಲ ಪೌಲ ಹೇಳುತ್ತಾನೆ. “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಹಿತವನ್ನು ಹುಡುಕುವುದಿಲ್ಲ.” (1 ಕೊರಿಂ. 13:4, 5) ಪರರಿಗಾಗಿ ನಮ್ಮಲ್ಲಿರುವ ಇಂಥ ಪ್ರೀತಿ ಅಸೂಯೆಗೆ ಕಡಿವಾಣ ಹಾಕುತ್ತದೆ. (1 ಪೇತ್ರ 2:1) ಯೋನಾತಾನನು ದಾವೀದನನ್ನು ಕಂಡು ಅಸೂಯೆಪಡಲಿಲ್ಲ. ಅವನನ್ನು ‘ತನ್ನ ಪ್ರಾಣದಂತೆಯೇ ಪ್ರೀತಿಸಿದನು.’—1 ಸಮು. 18:1.

ದೇವಜನರೊಂದಿಗೆ ಸಹವಾಸಿಸಿ. ಕೀರ್ತನೆ 73ನ್ನು ರಚಿಸಿದ ಕೀರ್ತನೆಗಾರನು ತೊಂದರೆ ತಾಪತ್ರಯಗಳಿಲ್ಲದೆ ಸಂತೋಷದಿಂದಿದ್ದ ದುಷ್ಟರನ್ನು ಕಂಡು ಅಸೂಯೆಪಟ್ಟನು. ಆದರೆ “ದೇವಾಲಯಕ್ಕೆ” ಹೋದ ಬಳಿಕ ತನ್ನಲ್ಲಿದ್ದ ಅಸೂಯೆಯನ್ನು ಕಿತ್ತೆಸೆಯಲು ಶಕ್ತನಾದನು. (ಕೀರ್ತ. 73:3-5, 17) ಜೊತೆ ಆರಾಧಕರೊಂದಿಗಿನ ಸಾಹಚರ್ಯವು “ದೇವರ ಸಾನ್ನಿಧ್ಯ”ದಲ್ಲಿ ತನಗೆ ಸಿಕ್ಕಿದ ಆಶೀರ್ವಾದಗಳನ್ನು ಗಣ್ಯಮಾಡುವಂತೆ ಅವನಿಗೆ ಸಹಾಯ ಮಾಡಿತು. (ಕೀರ್ತ. 73:28) ಕ್ರೈಸ್ತ ಕೂಟಗಳಲ್ಲಿ ಜೊತೆವಿಶ್ವಾಸಿಗಳೊಂದಿಗೆ ನಾವು ನಿಯತವಾಗಿ ಕೂಡಿಬರುವಾಗ ನಮಗೂ ಅದೇ ರೀತಿ ಸಹಾಯ ಸಿಗುವುದು.

ಉಪಕಾರ ಮಾಡಲು ದಾರಿಹುಡುಕಿ. ಕಾಯಿನನಲ್ಲಿ ಅಸೂಯೆ, ದ್ವೇಷ ಬೆಳೆಯುತ್ತಿರುವುದನ್ನು ದೇವರು ಗಮನಿಸಿ ‘ಒಳ್ಳೇ ಕೆಲಸ ಮಾಡುವಂತೆ’ ಬುದ್ಧಿಹೇಳಿದನು. (ಆದಿ. 4:7) ಕ್ರೈಸ್ತರು ಯಾವ “ಒಳ್ಳೇ ಕೆಲಸ” ಮಾಡಬೇಕು? ಯೇಸು ಹೇಳಿದಂತೆ ನಾವು ದೇವರಾದ ‘ಯೆಹೋವನನ್ನು ನಮ್ಮ ಪೂರ್ಣ ಹೃದಯದಿಂದಲೂ ನಮ್ಮ ಪೂರ್ಣ ಪ್ರಾಣದಿಂದಲೂ ನಮ್ಮ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು ಮತ್ತು ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು.’ (ಮತ್ತಾ. 22:37-39) ಯೆಹೋವನ ಸೇವೆ ಮಾಡುವ ಮತ್ತು ನೆರೆಯವರನ್ನು ಪ್ರೀತಿಸುವ ಅತ್ಯುತ್ತಮ ವಿಧ ಸುವಾರ್ತೆ ಸಾರುವುದರಲ್ಲಿ, ಶಿಷ್ಯರನ್ನಾಗಿ ಮಾಡುವುದರಲ್ಲಿ ಆದಷ್ಟು ಹೆಚ್ಚನ್ನು ಮಾಡುವುದೇ. ಇದು ನಮಗೆ ಮಹತ್ವದ ವಿಷಯಗಳಾಗಿರುವಾಗ “ಯೆಹೋವನ ಆಶೀರ್ವಾದ” ಮತ್ತು ಸಂತೃಪ್ತಿ ಸಿಗುತ್ತದೆ. ಈ ಸಂತೃಪ್ತ ಭಾವನೆ ಅಸೂಯೆಯನ್ನು ಹೊಡೆದೋಡಿಸುವ ಅಸ್ತ್ರವಾಗಿದೆ.—ಜ್ಞಾನೋ. 10:22.

“ಆನಂದಿಸುವವರೊಂದಿಗೆ ಆನಂದಿಸಿ.” (ರೋಮ. 12:15) ತನ್ನ ಶಿಷ್ಯರು ಶುಶ್ರೂಷೆಯಲ್ಲಿ ಒಳ್ಳೇ ಫಲಿತಾಂಶಗಳನ್ನು ಪಡೆದು ಆನಂದಿಸಿದಾಗ ಯೇಸು ಅವರೊಂದಿಗೆ ಆನಂದಿಸಿದನು. ಸಾರುವ ಕೆಲಸದಲ್ಲಿ ತನಗಿಂತಲೂ ಹೆಚ್ಚನ್ನು ಸಾಧಿಸುವರೆಂದು ಹೇಳಿದನು. (ಲೂಕ 10:17, 21; ಯೋಹಾ. 14:12) ಯೆಹೋವನ ಸೇವಕರಾದ ನಾವು ಐಕ್ಯದಿಂದಿದ್ದೇವೆ. ಒಬ್ಬರ ಯಶಸ್ಸು ಎಲ್ಲರಿಗೂ ಹರ್ಷಾನಂದ ತರುತ್ತದೆ. (1 ಕೊರಿಂ. 12:25, 26) ಹಾಗಾಗಿ ಇನ್ನೊಬ್ಬರಿಗೆ ಹೆಚ್ಚು ಜವಾಬ್ದಾರಿ ಸಿಗುವಾಗ ಅಸೂಯೆ ಪಡುವುದನ್ನು ಬಿಟ್ಟು ಅವರ ಜೊತೆ ಸೇರಿ ಹರ್ಷಿಸಬೇಕಲ್ಲವೇ?

ಸುಲಭವೇನಲ್ಲ!

ಅಸೂಯೆಯನ್ನು ಕಿತ್ತೆಸೆಯಲು ನಿರಂತರ ಹೋರಾಟ ಮಾಡುತ್ತಿರಬೇಕು. ಕ್ರಿಸ್ಟೀನ ಹೀಗನ್ನುತ್ತಾರೆ: “ಈಗಲೂ ಕೆಲವೊಮ್ಮೆ ನನ್ನಲ್ಲಿ ಅಸೂಯೆ ಹುಟ್ಟುತ್ತೆ. ಅಸೂಯೆಯನ್ನು ನಾನು ದ್ವೇಷಿಸಿದರೂ ಅದು ನನ್ನಲ್ಲಿದೆ. ಅದನ್ನು ಹತೋಟಿಯಲ್ಲಿಡಲು ನಾನು ಸತತ ಹೋರಾಟ ಮಾಡುತ್ತೇನೆ.” ಹೋಸೇ ಕೂಡ ಇಂಥ ಹೋರಾಟವನ್ನು ಮಾಡುತ್ತಾರೆ. “ಯೆಹೋವ ದೇವರು ಹಿರಿಯರ ಮಂಡಲಿಯ ಸಂಯೋಜಕನ ಒಳ್ಳೇ ಗುಣಗಳನ್ನು ಗಣ್ಯಮಾಡಲು ಸಹಾಯ ಮಾಡಿದನು. ದೇವರೊಂದಿಗಿನ ಸುಸಂಬಂಧದಿಂದಲೇ ಇದು ಸಾಧ್ಯವಾಯಿತು” ಎನ್ನುತ್ತಾರೆ ಅವರು.

ಅಸೂಯೆ ‘ಶರೀರಭಾವದ ಕಾರ್ಯಗಳಲ್ಲಿ’ ಒಂದು. ಎಲ್ಲ ಕ್ರೈಸ್ತರು ಅದರ ವಿರುದ್ಧ ಹೋರಾಡಬೇಕಿದೆ. (ಗಲಾ. 5:19-21) ಅಸೂಯೆ ನಮ್ಮ ಮೇಲೆ ಹಿಡಿತ ಸಾಧಿಸದಂತೆ ನಾವು ನೋಡಿಕೊಂಡರೆ ಜೀವನವು ಆನಂದಮಯವಾಗಿ ಇರುವುದು. ತಂದೆಯಾದ ಯೆಹೋವ ದೇವರ ಮನಸ್ಸಿಗೂ ಹರ್ಷವನ್ನು ತರುವುದು.

[ಪಾದಟಿಪ್ಪಣಿ]

^ ಪ್ಯಾರ. 7 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 17ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಆನಂದಿಸುವವರೊಂದಿಗೆ ಆನಂದಿಸಿ”