ಕೀರ್ತನೆ 106:1-48

  • ಇಸ್ರಾಯೇಲ್ಯರಿಗೆ ಗಣ್ಯತೆ ಕಮ್ಮಿ

    • ದೇವರು ಮಾಡಿದ್ದನ್ನ ತಕ್ಷಣ ಮರೆತುಬಿಟ್ರು (13)

    • ದೇವರಿಗೆ ಕೊಡೋ ಗೌರವವನ್ನ ಹೋರಿಯ ಮೂರ್ತಿಗೆ ಕೊಟ್ರು (19, 20)

    • ದೇವರ ಮಾತಲ್ಲಿ ಅವರಿಗೆ ಭರವಸೆ ಇರಲಿಲ್ಲ (24)

    • ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು (28)

    • ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿ ಕೊಟ್ರು (37)

106  ಯಾಹುವನ್ನ ಸ್ತುತಿಸಿ!* ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+  2  ಯೆಹೋವನ ಶಕ್ತಿಶಾಲಿ ಕೆಲಸಗಳ ಬಗ್ಗೆ ಯಾರು ಚೆನ್ನಾಗಿ ಹೇಳ್ತಾರೆ? ಹೊಗಳಿಕೆಗೆ ಯೋಗ್ಯವಾಗಿರೋ ಆತನ ಕೆಲಸಗಳ ಬಗ್ಗೆ ಯಾರು ಸಾರುತ್ತಾರೆ?+  3  ನ್ಯಾಯವಾಗಿ ನಡಿಯೋರು ಖುಷಿಯಾಗಿ ಇರ್ತಾರೆ. ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡೋರು ಭಾಗ್ಯವಂತರು.+  4  ಯೆಹೋವನೇ, ಜನ್ರ ಕಡೆ ನಿನ್ನ ಕೃಪೆ* ತೋರಿಸುವಾಗ ನನ್ನನ್ನ ನೆನಪಿಸ್ಕೊ.+ ನನ್ನ ಕಡೆ ಕಾಳಜಿ ತೋರಿಸು, ನನ್ನನ್ನ ಕಾದು ಕಾಪಾಡು.  5  ಆಗ, ನೀನು ಆರಿಸ್ಕೊಂಡಿರೋ ಜನ್ರಿಗೆ+ ತೋರಿಸೋ ಒಳ್ಳೇತನದಲ್ಲಿ ನಾನೂ ಖುಷಿಪಡ್ತೀನಿ,ನಿನ್ನ ಜನಾಂಗದ ಜೊತೆ ನಾನೂ ಸಂಭ್ರಮಿಸ್ತೀನಿ,ನಿನ್ನ ಆಸ್ತಿಯಾಗಿರೋ ಜನ್ರ ಜೊತೆ ಸೇರಿ ನಿನ್ನನ್ನ ಹೆಮ್ಮೆಯಿಂದ ಕೊಂಡಾಡ್ತೀನಿ.*  6  ನಮ್ಮ ಪೂರ್ವಜರ ಹಾಗೆ ನಾವೂ ಪಾಪ ಮಾಡಿದ್ದೀವಿ,+ತಪ್ಪು ಮಾಡಿದ್ದೀವಿ, ಕೆಟ್ಟದಾಗಿ ನಡ್ಕೊಂಡಿದ್ದೀವಿ.+  7  ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ. ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+  8  ಆದ್ರೆ ಆತನು ತನ್ನ ಹೆಸ್ರಿನ ಕಾರಣ ಅವ್ರನ್ನ ರಕ್ಷಿಸಿದ,+ತನ್ನ ಮಹಾಶಕ್ತಿ ತೋರಿಸೋಕೆ ಹೀಗೆ ಮಾಡಿದ.+  9  ಆತನು ಕೆಂಪು ಸಮುದ್ರವನ್ನ ಗದರಿಸಿದಾಗ ಅದು ಬತ್ತಿಹೋಯ್ತು,ಮರುಭೂಮಿಯಲ್ಲಿ* ನಡಿಸ್ಕೊಂಡು ಹೋಗೋ ತರ ಆತನು ಅವ್ರನ್ನ ಆಳವಾದ ಸಮುದ್ರದ ತಳದಲ್ಲಿ ನಡೆಸಿದ.+ 10  ವೈರಿಗಳ ಕೈಯಿಂದ ಅವ್ರನ್ನ ರಕ್ಷಿಸಿದ,+ಶತ್ರುಗಳ ಕೈಯಿಂದ ಅವ್ರನ್ನ ಬಿಡಿಸಿದ.+ 11  ಸಮುದ್ರ ಅವ್ರ ಶತ್ರುಗಳನ್ನ ಮುಚ್ಚಿಹಾಕ್ತು,ಅವ್ರಲ್ಲಿ ಒಬ್ಬನೂ ಬದುಕುಳಿಲಿಲ್ಲ.+ 12  ಆಗ ಅವ್ರಿಗೆ ಆತನ ಮಾತಿನ ಮೇಲೆ ನಂಬಿಕೆ ಬಂದು,+ಆತನಿಗೆ ಹಾಡಿ ಹೊಗಳೋಕೆ ಶುರುಮಾಡಿದ್ರು.+ 13  ಆದ್ರೆ ಆತನು ಮಾಡಿದ್ದನ್ನ ಅವರು ತಕ್ಷಣ ಮರೆತುಬಿಟ್ರು,+ಆತನ ಮಾರ್ಗದರ್ಶನಕ್ಕಾಗಿ ಅವರು ಕಾಯಲಿಲ್ಲ. 14  ಕಾಡಲ್ಲಿ ತಮ್ಮ ಸ್ವಾರ್ಥ ಬಯಕೆಗಳಿಗೆ ತಲೆಬಾಗಿದ್ರು,+ಬಂಜರು ಭೂಮಿಯಲ್ಲಿ ದೇವರನ್ನ ಪರೀಕ್ಷಿಸಿದ್ರು.+ 15  ಅವರು ಕೇಳಿದ್ದನ್ನ ಆತನು ಅವ್ರಿಗೆ ಕೊಟ್ಟ,ಆದ್ರೆ ಆಮೇಲೆ ಅವ್ರನ್ನ ವ್ಯಾಧಿಯಿಂದ ನಾಶಮಾಡಿದ.+ 16  ಪಾಳೆಯದಲ್ಲಿದಾಗ ಅವರು ಮೋಶೆ ಮೇಲೆ,ಯೆಹೋವನ ಪವಿತ್ರ ಸೇವಕ+ ಆರೋನನ ಮೇಲೆ ಅಸೂಯೆಪಟ್ರು.+ 17  ಆಗ ಭೂಮಿ ಬಾಯಿ ತೆಗೆದು ದಾತಾನನನ್ನ ನುಂಗಿಹಾಕ್ತು,ಅಬೀರಾಮನ ಜೊತೆ ಇದ್ದವ್ರನ್ನ ಮುಚ್ಚಿಹಾಕ್ತು.+ 18  ಅವ್ರ ಗುಂಪಿನ ಮಧ್ಯ ಬೆಂಕಿ ಹೊತ್ತಿ ಉರೀತು,ಕೆಟ್ಟವರನ್ನ ಅಗ್ನಿ ಭಸ್ಮ ಮಾಡ್ತು.+ 19  ಹೋರೇಬಲ್ಲಿ ಅವರು ಒಂದು ಕರು ಮಾಡಿದ್ರು,ಆ ಲೋಹದ ಮೂರ್ತಿಗೆ* ಬಗ್ಗಿ ನಮಸ್ಕರಿಸಿದ್ರು.+ 20  ನನಗೆ ಕೊಡಬೇಕಾದ ಗೌರವವನ್ನ,ಅವರು ಹುಲ್ಲು ತಿನ್ನೋ ಹೋರಿಯ ಮೂರ್ತಿಗೆ ಕೊಟ್ರು.+ 21  ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+ 22  ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+ 23  ಆತನು ಅವ್ರನ್ನ ಇನ್ನೇನು ನಿರ್ಮೂಲ ಮಾಡಿಬಿಡಬೇಕು ಅಂತಿದ್ದ,ಅಷ್ಟರಲ್ಲಿ ಆತನು ಆರಿಸಿದ್ದ ಮೋಶೆ ಬಂದು ಆತನನ್ನ ಬೇಡ್ಕೊಂಡ,*ನಾಶಮಾಡಬೇಕು ಅನ್ನೋ ಆತನ ಕೋಪನ ಶಾಂತಮಾಡಿದ.+ 24  ಆಮೇಲೆ ಅವರು ಒಳ್ಳೇ ದೇಶವನ್ನ ಕೀಳಾಗಿ ನೋಡಿದ್ರು,+ಆತನ ಮಾತಲ್ಲಿ ಅವ್ರಿಗೆ ಭರವಸೆ ಇರಲಿಲ್ಲ.+ 25  ಅವರು ತಮ್ಮ ಡೇರೆಗಳಲ್ಲಿ ಗೊಣಗ್ತಾ ಇದ್ರು,+ಯೆಹೋವನ ಸ್ವರ ಕೇಳಿಸ್ಕೊಳ್ಳಲಿಲ್ಲ.+ 26  ಹಾಗಾಗಿ ಆತನು ತನ್ನ ಕೈಯೆತ್ತಿ ಅವ್ರ ಬಗ್ಗೆ ಆಣೆ ಮಾಡಿದ,ಅವರು ಕಾಡಲ್ಲೇ ಸತ್ತುಹೋಗೋ ಹಾಗೆ ಮಾಡ್ತೀನಿ ಅಂತ,+ 27  ಜನಾಂಗಗಳ ಮಧ್ಯ ಅವ್ರ ಸಂತತಿ ನಾಶವಾಗೋ ಹಾಗೆ ಮಾಡ್ತೀನಿ ಅಂತ,ಅವ್ರನ್ನ ದೇಶದಲ್ಲೆಲ್ಲ ಚೆಲ್ಲಾಪಿಲ್ಲಿ ಮಾಡ್ತೀನಿ ಅಂತ ಹೇಳಿದ.+ 28  ಆಮೇಲೆ ಅವರು ಪೆಗೋರಿನಲ್ಲಿದ್ದ ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು,+ಸತ್ತವರಿಗೆ ಅರ್ಪಿಸಿದ ಬಲಿಗಳನ್ನ* ತಿಂದ್ರು. 29  ಅವರು ತಮ್ಮ ಕೆಲಸಗಳಿಂದ ಆತನನ್ನ ರೇಗಿಸಿದ್ರು,+ಅದ್ರಿಂದ ಅವ್ರ ಮಧ್ಯ ಒಂದು ವ್ಯಾಧಿ ಶುರುವಾಯ್ತು.+ 30  ಆದ್ರೆ ಫೀನೆಹಾಸ ಎದ್ದು ಮುಂದೆ ಬಂದಾಗಆ ವ್ಯಾಧಿ ನಿಂತುಹೋಯ್ತು.+ 31  ಇದ್ರಿಂದ ತಲತಲಾಂತರದ ತನಕಅವನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+ 32  ಅವರು ಆತನನ್ನ ಮೆರೀಬಾ ನೀರಿನ ಹತ್ರ ಮತ್ತೆ ರೇಗಿಸಿದ್ರು,ಅವ್ರಿಂದ ಮೋಶೆ ತೊಂದ್ರೆ ಅನುಭವಿಸಿದ.+ 33  ಅವರು ಮೋಶೆಗೆ ಕೋಪ ಬರೋ ಹಾಗೆ ಮಾಡಿದ್ರು,ಅವನು ದುಡುಕಿ ಮಾತಾಡಿಬಿಟ್ಟ.+ 34  ಅನ್ಯಜನಾಂಗಗಳನ್ನ ಪೂರ್ತಿ ನಾಶಮಾಡೋಕೆ ಯೆಹೋವ ಆಜ್ಞೆ ಕೊಟ್ಟಿದ್ರೂ,+ಅವರು ಹಾಗೆ ಮಾಡಲಿಲ್ಲ.+ 35  ಅವರು ಬೇರೆ ಜನಾಂಗಗಳ ಜೊತೆ ಸೇರಿ+ಅವ್ರ ಪದ್ಧತಿಗಳನ್ನ ಒಪ್ಕೊಂಡ್ರು.*+ 36  ಅವ್ರ ಮೂರ್ತಿಗಳನ್ನ ಆರಾಧಿಸ್ತಾ ಇದ್ರು,+ಇದು ಅವ್ರ ಪ್ರಾಣಕ್ಕೆ ಕುತ್ತು ತಂತು.+ 37  ಅವರು ತಮ್ಮ ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿಯಾಗಿ ಕೊಡ್ತಿದ್ರು.+ 38  ಅವರು ನಿರಪರಾಧಿಗಳ ರಕ್ತವನ್ನ,+ತಮ್ಮ ಸ್ವಂತ ಮಕ್ಕಳ ರಕ್ತವನ್ನ ಸುರಿಸ್ತಾನೇ ಇದ್ರು. ಅವ್ರನ್ನ ಕಾನಾನಿನ ಮೂರ್ತಿಗಳಿಗೆ ಅರ್ಪಿಸ್ತಿದ್ರು,+ದೇಶ ರಕ್ತಪಾತದಿಂದ ಹಾಳಾಗಿ ಹೋಯ್ತು. 39  ತಮ್ಮ ಕೆಲಸಗಳಿಂದ ಅವರು ಅಶುದ್ಧರಾದ್ರು,ಹೀಗೆ ಅವರು ದೇವರಿಗೆ ನಂಬಿಕೆ ದ್ರೋಹ* ಮಾಡಿದ್ರು.+ 40  ಹಾಗಾಗಿ ಯೆಹೋವನ ಕೋಪ ತನ್ನ ಜನ್ರ ಮೇಲೆ ಹೊತ್ತಿ ಉರೀತು,ತನ್ನ ಆಸ್ತಿ ಮೇಲೆ ಆತನಿಗೆ ಅಸಹ್ಯ ಆಯ್ತು. 41  ಆತನು ಪದೇಪದೇ ಅವ್ರನ್ನ ಬೇರೆ ಜನಾಂಗಗಳ ಕೈಗೆ ಒಪ್ಪಿಸಿದ,+ಹಾಗಾಗಿ ಅವ್ರನ್ನ ದ್ವೇಷಿಸೋ ಆ ಜನಾಂಗಗಳು ಅವ್ರ ಮೇಲೆ ಆಳ್ವಿಕೆ ಮಾಡಿದ್ವು.+ 42  ಅವ್ರ ಮೇಲೆ ಶತ್ರುಗಳು ದಬ್ಬಾಳಿಕೆ ಮಾಡಿದ್ರು,ಅವರು ಶತ್ರುಗಳಿಗಿದ್ದ ಶಕ್ತಿ ಮುಂದೆ ತಲೆತಗ್ಗಿಸಬೇಕಾಯ್ತು. 43  ಎಷ್ಟೋ ಸಲ ಆತನು ಅವ್ರನ್ನ ಬಿಡಿಸಿದ.+ ಆದ್ರೆ ಅವರು ತಿರುಗಿಬಿದ್ರು, ಮಾತು ಕೇಳಲಿಲ್ಲ,+ಅವರ ತಪ್ಪಿಂದ ಅವ್ರಿಗೇ ಅವಮಾನ ಆಯ್ತು.+ 44  ಆದ್ರೆ ಆತನು ಅವ್ರ ಕಷ್ಟಗಳನ್ನ ನೋಡ್ತಿದ್ದ+ಸಹಾಯಕ್ಕಾಗಿ ಅವ್ರಿಟ್ಟ ಮೊರೆಯನ್ನ ಕೇಳಿಸ್ಕೊಳ್ತಿದ್ದ.+ 45  ಅವ್ರಿಗಾಗಿ ಆತನು ತನ್ನ ಒಪ್ಪಂದವನ್ನ ನೆನಪಿಸಿಕೊಳ್ತಿದ್ದ,ಶ್ರೇಷ್ಠವಾದ* ತನ್ನ ಶಾಶ್ವತ ಪ್ರೀತಿಯಿಂದ ಅವ್ರನ್ನ ನೋಡಿ ಮರುಗುತಿದ್ದ.*+ 46  ಅವ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಿದ್ದವರೆಲ್ಲಅವ್ರನ್ನ ನೋಡಿ ಪಾಪ ಅನ್ನೋ ತರ ಮಾಡ್ತಿದ್ದ.+ 47  ನಮ್ಮ ದೇವರಾದ ಯೆಹೋವನೇ, ನಮ್ಮನ್ನ ಕಾಪಾಡು,+ನಾವು ನಿನ್ನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳೋ ತರ,ನಿನ್ನನ್ನ ಹೊಗಳೋದ್ರಲ್ಲಿ ಖುಷಿಪಡೋ ತರ+ಬೇರೆ ಜನಾಂಗಗಳ ಮಧ್ಯ ಚೆದರಿಹೋಗಿರೋ ನಮ್ಮನ್ನ ಒಟ್ಟುಸೇರಿಸು.+ 48  ಇಸ್ರಾಯೇಲಿನ ದೇವರಾದ ಯೆಹೋವನಿಗೆಯುಗಯುಗಾಂತರಕ್ಕೂ* ಹೊಗಳಿಕೆ ಸಿಗಲಿ.+ ಎಲ್ಲ ಜನ್ರು “ಆಮೆನ್‌!”* ಅಂತ ಹೇಳಲಿ. ಯಾಹುವನ್ನ ಸ್ತುತಿಸಿ!*

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಅನುಗ್ರಹ.”
ಅಥವಾ “ಹೊಗಳ್ತೀನಿ.”
ಅಥವಾ “ಕಾಡಲ್ಲಿ.”
ಅಥವಾ “ಅಚ್ಚಲ್ಲಿ ಹೊಯ್ದ ಮೂರ್ತಿಗೆ.”
ಅಕ್ಷ. “ಆತನ ಮುಂದಿರೋ ಬಿರುಕಲ್ಲಿ ನಿಂತ್ಕೊಂಡ.”
ಅದು, ಸತ್ತವರಿಗೆ ಅಥವಾ ಜೀವವಿಲ್ಲದ ಮೂರ್ತಿಗಳಿಗೆ ಕೊಟ್ಟ ಬಲಿ.
ಅಥವಾ “ಕಲಿತ್ರು.”
ಅಕ್ಷ. “ವೇಶ್ಯೆ ತರ ನಡ್ಕೊಂಡ್ರು.”
ಅಥವಾ “ಬೇಜಾರು ಮಾಡ್ಕೊಂಡ.”
ಅಥವಾ “ಅಪಾರವಾದ.”
ಅಥವಾ “ನಿತ್ಯನಿರಂತರಕ್ಕೂ.”
ಅಥವಾ “ಹಾಗೆಯೇ ಆಗಲಿ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.