ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎರಡನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

ಎರಡನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಎರಡನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು

ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುವುದು ಪರಿಪೂರ್ಣ ವಿಧೇಯತೆಯನ್ನು ಅಗತ್ಯಪಡಿಸುತ್ತದೊ? ಯಥಾರ್ಥತೆಯನ್ನು ತೋರಿಸುವ ಮನುಷ್ಯನು ಯಾವಾಗಲೂ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡುತ್ತಾನೊ? ಯಾವ ರೀತಿಯ ವ್ಯಕ್ತಿಯನ್ನು ಸತ್ಯ ದೇವರು ‘ತನಗೆ ಒಪ್ಪುವ’ ಮನುಷ್ಯನೆಂದು ಪರಿಗಣಿಸುತ್ತಾನೆ? (1 ಸಮುವೇಲ 13:14) ಬೈಬಲಿನ ಎರಡನೇ ಸಮುವೇಲ ಪುಸ್ತಕವು ಈ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ನೀಡುತ್ತದೆ.

ಎರಡನೇ ಸಮುವೇಲ ಪುಸ್ತಕವು, ಪುರಾತನ ಇಸ್ರಾಯೇಲ್‌ನ ರಾಜ ದಾವೀದನಿಗೆ ಆಪ್ತರಾಗಿದ್ದ ಗಾದ್‌ ಮತ್ತು ನಾತಾನ್‌ ಎಂಬ ಇಬ್ಬರು ಪ್ರವಾದಿಗಳಿಂದ ಬರೆಯಲ್ಪಟ್ಟಿತು. * ಈ ಪುಸ್ತಕವು, ದಾವೀದನ 40 ವರುಷಗಳ ಆಳ್ವಿಕೆಯ ಅಂತ್ಯದಷ್ಟಕ್ಕೆ, ಅಂದರೆ ಸಾ.ಶ.ಪೂ. 1040ರ ಸುಮಾರಿಗೆ ಬರೆದು ಮುಗಿಸಲ್ಪಟ್ಟಿತು. ಇದರಲ್ಲಿ ಮುಖ್ಯವಾಗಿ, ದಾವೀದನ ಕುರಿತಾಗಿ ಮತ್ತು ಯೆಹೋವನೊಂದಿಗಿದ್ದ ಅವನ ಸಂಬಂಧದ ಕುರಿತಾಗಿ ತಿಳಿಸಲ್ಪಟ್ಟಿದೆ. ವ್ಯಾಜ್ಯದಿಂದಾಗಿ ವಿಭಜಿತಗೊಂಡ ರಾಷ್ಟ್ರವು ಒಬ್ಬ ಪರಾಕ್ರಮಿ ರಾಜನ ಆಳ್ವಿಕೆಯ ಕೆಳಗೆ ಹೇಗೆ ಒಂದು ಸಮೃದ್ಧ ಐಕ್ಯ ರಾಜ್ಯವಾಯಿತು ಎಂಬುದನ್ನು ಈ ರೋಮಾಂಚಕ ವೃತ್ತಾಂತವು ತಿಳಿಸುತ್ತದೆ. ಮನಸೆಳೆಯುವ ಈ ವೃತ್ತಾಂತವು, ಬಹಳ ತೀವ್ರತೆಯಿಂದ ವ್ಯಕ್ತಪಡಿಸಿರುವ ಮಾನವ ಭಾವನೆಗಳಿಂದ ತುಂಬಿದೆ.

ದಾವೀದನು “ಅಭಿವೃದ್ಧಿಹೊಂದುತ್ತಾ ಹೋದನು”

(2 ಸಮುವೇಲ 1:​1–10:19)

ಸೌಲ ಮತ್ತು ಯೋನಾತಾನನ ಮರಣದ ಸುದ್ದಿಯನ್ನು ಕೇಳಿಸಿಕೊಂಡಾಗ ದಾವೀದನು ಪ್ರತಿಕ್ರಿಯಿಸಿದ ರೀತಿಯಿಂದ, ಅವರ ಕಡೆಗೆ ಮತ್ತು ಯೆಹೋವನ ಕಡೆಗೆ ಅವನಿಗಿದ್ದ ಭಾವನೆಗಳು ವ್ಯಕ್ತವಾಗುತ್ತವೆ. ಹೆಬ್ರೋನಿನಲ್ಲಿ ದಾವೀದನು ಯೆಹೂದ ಕುಲಕ್ಕೆ ಅರಸನಾಗಿ ಅಭಿಷೇಕಿಸಲ್ಪಟ್ಟನು. ಸೌಲನ ಮಗನಾದ ಈಷ್ಬೋಶೆತನು ಬೇರೆಲ್ಲ ಇಸ್ರಾಯೇಲ್ಯರ ಮೇಲೆ ಅರಸನಾಗಿ ನೇಮಿಸಲ್ಪಟ್ಟನು. ದಾವೀದನು “ಅಭಿವೃದ್ಧಿಹೊಂದುತ್ತಾ ಹೋದನು” ಮತ್ತು ಏಳೂವರೆ ವರುಷಗಳ ಬಳಿಕ ಇಸ್ರಾಯೇಲ್‌ ಸಮೂಹದ ಮೇಲೆ ಅರಸನಾಗಿ ಅಭಿಷೇಕಿಸಲ್ಪಟ್ಟನು.​—⁠2 ಸಮುವೇಲ 5:10.

ದಾವೀದನು ಯೆರೂಸಲೇಮನ್ನು ಯೆಬೂಸಿಯರಿಂದ ವಶಪಡಿಸಿಕೊಂಡು, ಅದನ್ನು ತನ್ನ ರಾಜ್ಯದ ರಾಜಧಾನಿಯಾಗಿ ಮಾಡಿದನು. ಒಡಂಬಡಿಕೆಯ ಮಂಜೂಷವನ್ನು ಯೆರೂಸಲೇಮಿಗೆ ಸ್ಥಳಾಂತರಿಸುವ ಅವನ ಮೊದಲ ಪ್ರಯತ್ನವು ವಿಪತ್ತನ್ನು ತಂದೊಡ್ಡಿತು. ಹಾಗಿದ್ದರೂ, ಎರಡನೇ ಪ್ರಯತ್ನವು ಸಫಲಗೊಂಡಿತು ಮತ್ತು ಇದರಿಂದಾಗಿ ದಾವೀದನು ಅತ್ಯಾನಂದದಿಂದ ಕುಣಿದಾಡಿದನು. ಯೆಹೋವನು ದಾವೀದನೊಂದಿಗೆ ರಾಜ್ಯದ ಒಡಂಬಡಿಕೆಯನ್ನು ಮಾಡಿದನು. ಆತನು ದಾವೀದನೊಂದಿಗೆ ಇದ್ದ ಕಾರಣ ಅವನು ತನ್ನ ಎಲ್ಲ ವೈರಿಗಳನ್ನು ಸದೆಬಡಿದನು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

2:​18​—⁠ಯೋವಾಬ್‌ ಮತ್ತು ಅವನ ಇಬ್ಬರು ಸಹೋದರರು, ಅವರ ತಾಯಿಯಾದ ಚೆರೂಯಳ ಮೂರು ಮಂದಿ ಮಕ್ಕಳು ಎಂದು ಏಕೆ ಕರೆಯಲ್ಪಟ್ಟರು? ಹೀಬ್ರು ಶಾಸ್ತ್ರದಲ್ಲಿ ಸಾಮಾನ್ಯವಾಗಿ ವಂಶಾವಳಿಯನ್ನು ತಂದೆಯ ಮೂಲಕ ಗುರುತಿಸಲಾಗುತ್ತಿತ್ತು. ಚೆರೂಯಳ ಗಂಡನು ಬೇಗನೆ ತೀರಿಕೊಂಡಿರಬೇಕು ಅಥವಾ ಒಂದುವೇಳೆ ಪವಿತ್ರ ಶಾಸ್ತ್ರದಲ್ಲಿ ಅವನ ಹೆಸರನ್ನು ದಾಖಲಿಸಲು ಯೋಗ್ಯನಾಗಿ ಅವನು ಪರಿಗಣಿಸಲ್ಪಡದಿದ್ದಿರಬಹುದು. ಚೆರೂಯಳು ದಾವೀದನ ಸಹೋದರಿ ಅಥವಾ ಮಲಸಹೋದರಿಯಾಗಿದ್ದಳು. ಒಂದುವೇಳೆ ಈ ಕಾರಣದಿಂದಲೂ ಅವಳ ಹೆಸರು ಬರೆಯಲ್ಪಟ್ಟಿರಬಹುದು. (1 ಪೂರ್ವಕಾಲವೃತ್ತಾಂತ 2:15, 16) ಈ ಮೂವರು ಸಹೋದರರ ತಂದೆಯ ಕುರಿತು, ಬೇತ್ಲೆಹೇಮಿನಲ್ಲಿರುವ ಅವನ ಶ್ಮಶಾನಭೂಮಿಯ ಬಗ್ಗೆ ತಿಳಿಸುವಾಗ ಮಾತ್ರ ಉಲ್ಲೇಖಿಸಲಾಗಿದೆ.​—⁠2 ಸಮುವೇಲ 2:32.

5:​1, 2​—⁠ಈಷ್ಬೋಶೆತನು ಮೃತಪಟ್ಟು ಎಷ್ಟು ಸಮಯದ ನಂತರ ದಾವೀದನು ಇಸ್ರಾಯೇಲ್‌ ಸಮೂಹದ ಮೇಲೆ ಅರಸನಾಗಿ ಅಭಿಷೇಕಿಸಲ್ಪಟ್ಟನು? ಸೌಲನು ಮೃತಪಟ್ಟ ಅನಂತರ ಸ್ವಲ್ಪ ಸಮಯದಲ್ಲಿ ಅಂದರೆ ದಾವೀದನು ಹೆಬ್ರೋನಿನಲ್ಲಿ ಆಳ್ವಿಕೆಯನ್ನು ಆರಂಭಿಸಿದ ಹೆಚ್ಚುಕಡಿಮೆ ಅದೇ ಸಮಯದಲ್ಲಿ ಈಷ್ಬೋಶೆತನು ತನ್ನ ಎರಡು ವರುಷದ ರಾಜ್ಯಾಳ್ವಿಕೆಯನ್ನು ಆರಂಭಿಸಿದನು ಎಂದು ತೀರ್ಮಾನಿಸುವುದು ನ್ಯಾಯಸಮ್ಮತವಾಗಿದೆ. ದಾವೀದನು ಹೆಬ್ರೋನಿನಿಂದ ಯೆಹೂದವನ್ನು ಏಳು ವರುಷ ಆರು ತಿಂಗಳು ಆಳಿದನು. ಅವನು ಇಸ್ರಾಯೇಲ್‌ ಸಮೂಹದ ಮೇಲೆ ಅರಸನಾದ ಸ್ವಲ್ಪ ಸಮಯದಲ್ಲಿಯೇ ತನ್ನ ರಾಜಧಾನಿಯನ್ನು ಯೆರೂಸಲೇಮಿಗೆ ಸ್ಥಳಾಂತರಿಸಿದನು. ಆದುದರಿಂದ, ದಾವೀದನು ಇಸ್ರಾಯೇಲ್‌ ಸಮೂಹದ ಮೇಲೆ ಅರಸನಾಗುವ ಮುನ್ನ ಈಷ್ಬೋಶೆತನು ಮೃತಪಟ್ಟು ಸುಮಾರು ಐದು ವರುಷ ದಾಟಿತ್ತು.​—⁠2 ಸಮುವೇಲ 2:3, 4, 8-11; 5:4, 5.

8:2​—⁠ಇಸ್ರಾಯೇಲ್ಯರು ಮೋವಾಬ್ಯರೊಂದಿಗೆ ಯುದ್ಧಮಾಡಿದ ಬಳಿಕ ಮೋವಾಬ್ಯರಲ್ಲಿ ಎಷ್ಟು ಮಂದಿ ಹತರಾದರು? ಲೆಕ್ಕಿಸುವ ಬದಲಾಗಿ ಅಳತೆಮಾಡುವ ಮೂಲಕ ಸಂಖ್ಯೆಯನ್ನು ನಿರ್ಧರಿಸಲಾಗಿರಬಹುದು. ದಾವೀದನು ಪ್ರಾಯಶಃ ಮೋವಾಬ್ಯರನ್ನು ನೆಲದ ಮೇಲೆ ಒಬ್ಬರ ಪಕ್ಕದಲ್ಲಿ ಇನ್ನೊಬ್ಬರಂತೆ ಸಾಲಾಗಿ ಮಲಗಿಸಿರಬಹುದು. ನಂತರ, ಆ ಸಾಲನ್ನು ದಾರದಿಂದಲೊ ಹಗ್ಗದಿಂದಲೊ ಅಳತೆಮಾಡಿರಬಹುದು. ಎರಡು ದಾರ ಅಳತೆಗಳು ಅಥವಾ ಮೂರರಲ್ಲಿ ಎರಡು ಪಾಲು ಮೋವಾಬ್ಯರನ್ನು ಕೊಲ್ಲಲಾಯಿತು ಮತ್ತು ಒಂದು ದಾರ ಅಳತೆ ಅಥವಾ ಮೂರರಲ್ಲಿ ಒಂದು ಪಾಲನ್ನು ಉಳಿಸಲಾಯಿತೆಂದು ವ್ಯಕ್ತವಾಗುತ್ತದೆ.

ನಮಗಾಗಿರುವ ಪಾಠಗಳು:

2:1; 5:​19, 23. ದಾವೀದನು ಹೆಬ್ರೋನಿಗೆ ಹೋಗುವ ಮುನ್ನ ಮತ್ತು ತನ್ನ ವಿರೋಧಿಗಳ ವಿರುದ್ಧ ಯುದ್ಧಮಾಡುವ ಮುನ್ನ ಯೆಹೋವನನ್ನು ವಿಚಾರಿಸಿದನು. ಅದೇ ರೀತಿಯಲ್ಲಿ ನಾವು ಸಹ ನಮ್ಮ ಆಧ್ಯಾತ್ಮಿಕತೆಯನ್ನು ಬಾಧಿಸುವ ಯಾವುದೇ ನಿರ್ಣಯಗಳನ್ನು ಮಾಡುವ ಮುನ್ನ ಯೆಹೋವನ ಬಳಿಗೆ ಮಾರ್ಗದರ್ಶನಕ್ಕಾಗಿ ಬೇಡಬೇಕು.

3:​26-30. ಸೇಡುತೀರಿಸುವುದು ಕೆಟ್ಟ ಫಲಿತಾಂಶಗಳಿಗೆ ನಡೆಸುತ್ತದೆ.​—⁠ರೋಮಾಪುರ 12:​17-19.

3:​31-34; 4:​9-12. ದಾವೀದನಲ್ಲಿ ಸೇಡುತೀರಿಸುವ ಮನೋಭಾವ ಮತ್ತು ಹಗೆತನವನ್ನು ತೋರಿಸುವ ಮನೋಭಾವ ಇರಲಿಲ್ಲ. ಇದು ನಮಗೆ ಒಂದು ಉತ್ತಮ ಮಾದರಿಯಾಗಿದೆ.

5:12. ಯೆಹೋವನು ನಮಗೆ ತನ್ನ ಮಾರ್ಗಗಳನ್ನು ಬೋಧಿಸಿದ್ದಾನೆ ಮತ್ತು ಆತನೊಂದಿಗೆ ಒಂದು ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದನ್ನು ಸಾಧ್ಯಗೊಳಿಸಿದ್ದಾನೆ ಎಂಬುದನ್ನು ನಾವೆಂದೂ ಮರೆಯಬಾರದು.

6:​1-7. ದಾವೀದನು ಒಂದು ಒಳ್ಳೇ ಉದ್ದೇಶದಿಂದಲೇ ಮಂಜೂಷವನ್ನು ಸಾಗಿಸಲು ಪ್ರಯತ್ನಿಸಿದ್ದನಾದರೂ ಅದನ್ನು ಬಂಡಿಯ ಮೇಲೆ ಸಾಗಿಸಿದ್ದು ದೇವರ ಆಜ್ಞೆಗೆ ವಿರುದ್ಧವಾಗಿತ್ತು ಮತ್ತು ಆ ಕಾರಣ ಅವನ ಪ್ರಯತ್ನವು ವಿಫಲಗೊಂಡಿತು. (ವಿಮೋಚನಕಾಂಡ 25:13, 14; ಅರಣ್ಯಕಾಂಡ 4:15, 19; 7:7-9) ಉಜ್ಜನು ಕೈಚಾಚಿ ಮಂಜೂಷವನ್ನು ಹಿಡಿದ ಘಟನೆಯು ಸಹ, ಸದುದ್ದೇಶಗಳು ದೇವರ ಆವಶ್ಯಕತೆಗಳನ್ನು ಬದಲಾಯಿಸಲಾರವು ಎಂಬುದನ್ನು ಸೂಚಿಸುತ್ತದೆ.

6:​8, 9. ಒಂದು ವಿಪತ್ಕಾರಕ ಸನ್ನಿವೇಶದಲ್ಲಿ ಮೊದಲು ದಾವೀದನು ಉರಿಗೊಂಡನು, ನಂತರ ಭಯಪಟ್ಟನು​—⁠ಒಂದುವೇಳೆ ಈ ದುರ್ಘಟನೆಗಾಗಿ ಯೆಹೋವನ ಮೇಲೆ ಅಪವಾದವನ್ನು ಹೊರಿಸಿರಲೂಬಹುದು. ದೇವರ ನಿಯಮಗಳನ್ನು ಅಲಕ್ಷಿಸುವ ಮೂಲಕ ಉಂಟಾಗಬಹುದಾದ ಸಮಸ್ಯೆಗಳಿಗಾಗಿ ನಾವು ಆತನ ಮೇಲೆ ಅಪವಾದ ಹೊರಿಸುವುದರ ವಿರುದ್ಧ ಎಚ್ಚರಿಕೆಯಿಂದಿರಬೇಕು.

7:​18, 22, 23, 26. ದಾವೀದನ ದೀನತೆ, ಯೆಹೋವನ ಕಡೆಗೆ ಅವನಿಗಿದ್ದ ಅನನ್ಯ ಭಕ್ತಿ ಮತ್ತು ದೇವರ ನಾಮವನ್ನು ಘನತೆಗೇರಿಸಲು ಅವನಿಗಿದ್ದ ಇಚ್ಛೆ ಈ ಮುಂತಾದ ಗುಣಗಳನ್ನು ನಾವು ಅನುಕರಿಸಬೇಕು.

8:⁠2. ನಾನ್ನೂರು ವರುಷಗಳಿಗೆ ಹಿಂದೆ ಪ್ರವಾದಿಸಲ್ಪಟ್ಟ ಮಾತು ನೆರವೇರಿತು. (ಅರಣ್ಯಕಾಂಡ 24:17) ಯೆಹೋವನ ಮಾತು ಯಾವಾಗಲೂ ನಿಜವಾಗಿ ಪರಿಣಮಿಸುತ್ತದೆ.

9:​1, 6, 7. ದಾವೀದನು ಕೊಟ್ಟ ಮಾತಿಗೆ ತಪ್ಪಲಿಲ್ಲ. ನಾವು ಸಹ ಯಾವಾಗಲೂ ಕೊಟ್ಟ ಮಾತಿಗೆ ತಪ್ಪದಿರಲು ಪ್ರಯತ್ನಿಸಬೇಕು.

ತನ್ನ ಅಭಿಷಿಕ್ತನ ವಿರುದ್ಧ ಯೆಹೋವನು ವಿಪತ್ತನ್ನು ಬರಮಾಡುತ್ತಾನೆ

(2 ಸಮುವೇಲ 11:​1–20:26)

ಯೆಹೋವನು ದಾವೀದನಿಗೆ ಹೇಳಿದ್ದು: “ಯೆಹೋವನಾದ ನನ್ನ ಮಾತನ್ನು ಕೇಳು​—⁠ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ತೆಗೆದು ನಿನ್ನೆದುರಿನಲ್ಲಿಯೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಕೂಡ ಮಲಗುವನು.” (2 ಸಮುವೇಲ 12:11) ಈ ಮಾತುಗಳಿಗೆ ಕಾರಣವೇನು? ದಾವೀದನು ಬತ್ಷೆಬೆಯೊಂದಿಗೆ ಮಾಡಿದ ಪಾಪವೇ ಆಗಿತ್ತು. ದಾವೀದನು ಪಶ್ಚಾತ್ತಾಪಪಟ್ಟ ಕಾರಣ ಕ್ಷಮಿಸಲ್ಪಟ್ಟನಾದರೂ, ಅವನು ತನ್ನ ಪಾಪದ ಫಲವನ್ನು ಅನುಭವಿಸಲೇಬೇಕಾಯಿತು.

ಮೊದಲಾಗಿ ಬತ್ಷೆಬೆಗೆ ಹುಟ್ಟಿದ ಮಗುವು ಮೃತಪಟ್ಟಿತು. ಅನಂತರ, ಕನ್ಯೆಯಾಗಿದ್ದ ದಾವೀದನ ಮಗಳಾದ ತಾಮಾರಳು ತನ್ನ ಮಲಸಹೋದರನಾದ ಅಮ್ನೋನನಿಂದ ಕೆಡಿಸಲ್ಪಟ್ಟಳು. ಅವಳ ಅಣ್ಣನಾದ ಅಬ್ಷಾಲೋಮನು ಇದಕ್ಕೆ ಪ್ರತಿಯಾಗಿ ಅಮ್ನೋನನನ್ನು ಕೊಂದನು. ಅಬ್ಷಾಲೋಮನು ತನ್ನ ತಂದೆಗೆ ವಿರುದ್ಧವಾಗಿ ಎದ್ದು, ತನ್ನನ್ನು ಹೆಬ್ರೋನಿನ ಅರಸನೆಂದು ಘೋಷಿಸಿಕೊಂಡನು. ದಾವೀದನು ಯೆರೂಸಲೇಮಿನಿಂದ ಪಲಾಯನಗೈಯಬೇಕಾಯಿತು. ತನ್ನ ತಂದೆಯು ಮನೆಕಾಯುವುದಕ್ಕೆ ಬಿಟ್ಟುಹೋದ ಅವನ ಹತ್ತು ಮಂದಿ ಉಪಪತ್ನಿಯರೊಂದಿಗೆ ಅಬ್ಷಾಲೋಮನು ಸಂಭೋಗಮಾಡಿದನು. ದಾವೀದನು ಕೇವಲ ಅಬ್ಷಾಲೋಮನು ಸತ್ತ ನಂತರವೇ ತನ್ನ ರಾಜತ್ವಕ್ಕೆ ಹಿಂದಿರುಗಿದನು. ಬೆನ್ಯಾಮೀನ್‌ ಕುಲದವನಾದ ಶೆಬನ ದಂಗೆಯು ಅವನ ಮರಣದಲ್ಲಿ ಕೊನೆಗೊಂಡಿತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

14:7​—⁠“ನನಗುಳಿದಿರುವ ಒಂದು ಕೆಂಡ” ಎನ್ನುವುದು ಏನನ್ನು ಸೂಚಿಸುತ್ತದೆ? ನಿಧಾನವಾಗಿ ಉರಿಯುತ್ತಿರುವ ಇದ್ದಲಿನ ಕೆಂಡವು ಜೀವದಿಂದಿರುವ ಸಂತತಿಯನ್ನು ಸೂಚಿಸುತ್ತದೆ.

19:29​—⁠ದಾವೀದನು ಮೆಫೀಬೋಶೆತನಿಗೆ ಈ ರೀತಿ ಏಕೆ ಪ್ರತಿಕ್ರಿಯಿಸಿದನು? ಮೆಫೀಬೋಶೆತನು ಹೇಳಿದ್ದನ್ನು ಕೇಳಿಸಿಕೊಂಡ ಬಳಿಕ, ತಾನು ಚೀಬನ ಮಾತನ್ನು ಕೇಳಿ ತಪ್ಪುಮಾಡಿದೆ ಎಂದು ದಾವೀದನು ಗ್ರಹಿಸಿದ್ದಿರಬೇಕು. (2 ಸಮುವೇಲ 16:1-4; 19:24-28) ಇದು ಖಂಡಿತವಾಗಿಯೂ ಅವನನ್ನು ದುಃಖಗೊಳಿಸಿತು ಮತ್ತು ಆ ವಿಷಯದಲ್ಲಿ ಅವನು ಇನ್ನೇನನ್ನೂ ಕೇಳಿಸಿಕೊಳ್ಳಲು ಬಯಸಲಿಲ್ಲ.

ನಮಗಾಗಿರುವ ಪಾಠಗಳು:

11:​2-15. ದಾವೀದನು ಮಾಡಿದ ತಪ್ಪುಗಳ ಕುರಿತಾದ ಸ್ಪಷ್ಟವಾದ ವೃತ್ತಾಂತವು ತಾನೇ ಬೈಬಲ್‌ ದೇವರ ಪ್ರೇರಿತ ವಾಕ್ಯವಾಗಿದೆ ಎಂಬುದನ್ನು ರುಜುಪಡಿಸುತ್ತದೆ.

11:​16-27. ನಾವು ಘೋರವಾದ ಪಾಪಮಾಡಿದಾಗ, ದಾವೀದನಂತೆ ಅದನ್ನು ಮರೆಮಾಚಲು ಪ್ರಯತ್ನಿಸಬಾರದು. ಬದಲಾಗಿ, ನಾವು ನಮ್ಮ ಪಾಪಗಳನ್ನು ಯೆಹೋವನ ಮುಂದೆ ಒಪ್ಪಿಕೊಂಡು, ಸಭಾ ಹಿರಿಯರಿಂದ ಸಹಾಯವನ್ನು ಕೇಳಿಕೊಳ್ಳಬೇಕು.​—⁠ಜ್ಞಾನೋಕ್ತಿ 28:13; ಯಾಕೋಬ 5:​13-16.

12:​1-14. ಸಭೆಯಲ್ಲಿರುವ ನೇಮಿತ ಹಿರಿಯರಿಗೆ ನಾತಾನನು ಒಂದು ಉತ್ತಮ ಮಾದರಿಯನ್ನಿಟ್ಟಿದ್ದಾನೆ. ಯಾರು ಪಾಪಮಾಡುತ್ತಾರೊ ಅಂಥವರು ತಮ್ಮನ್ನು ತಿದ್ದಿಕೊಳ್ಳುವಂತೆ ಹಿರಿಯರು ಸಹಾಯಮಾಡಬೇಕು. ಈ ಜವಾಬ್ದಾರಿಯನ್ನು ಅವರು ಜಾಣ್ಮೆಯಿಂದ ನಿರ್ವಹಿಸಬೇಕು.

12:​15-23. ತನಗೆ ಸಂಭವಿಸಿದ ಕಷ್ಟಗಳ ವಿಷಯದಲ್ಲಿ ಸರಿಯಾದ ನೋಟವನ್ನು ಹೊಂದಿರುವುದು ಅವುಗಳಿಗೆ ಸರಿಯಾಗಿ ಪ್ರತಿಕ್ರಿಯಿಸುವಂತೆ ದಾವೀದನಿಗೆ ಸಹಾಯಮಾಡಿತು.

15:12; 16:​15, 21, 23. ಅಬ್ಷಾಲೋಮನು ಸಿಂಹಾಸನಾರೂಢನಾಗುತ್ತಾನೆ ಎಂದು ತೋರಿದಾಗ, ಹೆಮ್ಮೆ ಮತ್ತು ಹೆಬ್ಬಯಕೆಯು ಬಹಳ ಜಾಣ ಸಲಹೆಗಾರನಾದ ಅಹೀತೋಫೆಲನು ದ್ರೋಹಿಯಾಗುವಂತೆ ನಡೆಸಿತು. ಆದುದರಿಂದ, ದೀನತೆ ಮತ್ತು ನಿಷ್ಠೆ ಇಲ್ಲದೆ ಕೇವಲ ಜಾಣ್ಮೆಯನ್ನು ಹೊಂದಿರುವುದು ಒಂದು ಉರುಲಾಗಿ ಪರಿಣಮಿಸಬಲ್ಲದು.

19:​24, 30. ಮೆಫೀಬೋಶೆತನು ದಾವೀದನ ಪ್ರೀತಿಪೂರ್ವಕ ದಯೆಯನ್ನು ನಿಜವಾಗಿಯೂ ಗಣ್ಯಮಾಡಿದನು. ಚೀಬನ ಕುರಿತಾಗಿ ರಾಜನು ಮಾಡಿದ ನಿರ್ಣಯಕ್ಕೆ ಅವನು ಮನಃಪೂರ್ವಕವಾಗಿ ವಿಧೇಯನಾದನು. ಯೆಹೋವನ ಕಡೆಗೆ ಮತ್ತು ಆತನ ಸಂಘಟನೆಯ ಕಡೆಗೆ ನಮಗಿರುವ ಗಣ್ಯತೆಯು, ನಾವು ಯಾವಾಗಲೂ ವಿಧೇಯರಾಗಿರುವಂತೆ ಮಾಡುತ್ತದೆ.

20:​21, 22. ಒಬ್ಬ ವ್ಯಕ್ತಿಯ ವಿವೇಕವು ಅನೇಕರಿಗೆ ಸಂಭವಿಸಸಾಧ್ಯವಿರುವ ವಿಪತ್ತನ್ನು ತೊಲಗಿಸಬಲ್ಲದು.​—⁠ಪ್ರಸಂಗಿ 9:​14, 15.

ನಾವು “ಯೆಹೋವನ ಕೈಯಲ್ಲಿ” ಬೀಳೋಣ

(2 ಸಮುವೇಲ 21:​1–24:25)

ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸುವ ಮೂಲಕ ರಕ್ತಾಪರಾಧವನ್ನು ಉಂಟುಮಾಡಿದ್ದರಿಂದ ದೇಶದಲ್ಲೆಲ್ಲ ಮೂರು ವರುಷಗಳ ಕಾಲ ಬರವಿತ್ತು. (ಯೆಹೋಶುವ 9:15) ಆ ರಕ್ತಾಪರಾಧಕ್ಕಾಗಿ ಸೇಡುತೀರಿಸಿಕೊಳ್ಳಲು ಗಿಬ್ಯೋನ್ಯರು ಸೌಲನ ಏಳು ಗಂಡುಮಕ್ಕಳನ್ನು ಹತಿಸಲಿಕ್ಕಾಗಿ ತಮಗೆ ಒಪ್ಪಿಸಬೇಕೆಂದು ಕೇಳಿಕೊಂಡರು. ದಾವೀದನು ಅವರನ್ನು ಗಿಬ್ಯೋನ್ಯರ ಕೈಗೆ ಒಪ್ಪಿಸಿದನು ಮತ್ತು ಆಗ ಮಳೆಯು ಬಂದು ಬರವು ಕೊನೆಗೊಂಡಿತು. ನಾಲ್ಕು ಮಂದಿ ಫಿಲಿಷ್ಟಿಯ ದೈತ್ಯರು “ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.”​—⁠2 ಸಮುವೇಲ 21:22.

ದಾವೀದನು ನ್ಯಾಯಬದ್ಧವಲ್ಲದ ಖಾನೇಷುಮಾರಿಯನ್ನು ಮಾಡುವುದಕ್ಕೆ ಅಪ್ಪಣೆ ನೀಡುವ ಮೂಲಕ ಗಂಭೀರವಾದ ಪಾಪಗೈದನು. ಅವನು ಪಶ್ಚಾತ್ತಾಪಪಟ್ಟು ‘ಯೆಹೋವನ ಕೈಯಲ್ಲಿ ಬೀಳುವ’ ಆಯ್ಕೆಮಾಡಿದನು. (2 ಸಮುವೇಲ 24:14) ಈ ಕಾರಣದಿಂದ, 70,000 ಮಂದಿ ವ್ಯಾಧಿಯಿಂದ ಸತ್ತರು. ನಂತರ ದಾವೀದನು ದೇವರು ಆಜ್ಞಾಪಿಸಿದಂತೆ ಮಾಡಿದನು ಮತ್ತು ಹೀಗೆ ದೇವರ ಕೋಪವು ಶಾಂತವಾಯಿತು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

21:​9, 10​—⁠ಗಿಬ್ಯೋನ್ಯರಿಂದ ಹತಿಸಲ್ಪಟ್ಟ ತನ್ನ ಇಬ್ಬರು ಗಂಡುಮಕ್ಕಳಿಗಾಗಿ ಮತ್ತು ಸೌಲನ ಐದು ಮೊಮ್ಮಕ್ಕಳಿಗಾಗಿ ರಿಚ್ಪಳು ಎಷ್ಟು ದಿವಸಗಳ ತನಕ ಜಾಗರಣೆಮಾಡಿದಳು? ಈ ಏಳು ಮಂದಿ ಗಂಡುಮಕ್ಕಳು “ಜವೆಗೋದಿಸುಗ್ಗಿ ಆರಂಭ”ವಾದಾಗ, ಅಂದರೆ ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಕೊಂದು ನೇತುಹಾಕಲ್ಪಟ್ಟರು. ಅವರ ಮೃತ ದೇಹವು ಗುಡ್ಡದ ಮೇಲೆ ಬಿಡಲ್ಪಟ್ಟಿತು. ಯೆಹೋವನ ಕೋಪವು ತಣ್ಣಗಾಗಿ ಬರಗಾಲವು ಕೊನೆಗೊಳ್ಳುವ ತನಕ ರಿಚ್ಪಳು ಹಗಲೂರಾತ್ರಿ ಆ ಏಳು ಮೃತ ದೇಹಗಳನ್ನು ಕಾದುಕುಳಿತಳು. ಅಕ್ಟೋಬರ್‌ ತಿಂಗಳಿನಲ್ಲಿ ಸುಗ್ಗಿಕಾಲವು ಮುಗಿಯುವ ತನಕ ಬಹಳವಾಗಿ ಮಳೆಬಂದಿರುವುದು ಅಸಂಭವನೀಯ. ಆದುದರಿಂದ, ರಿಚ್ಪಳು ಐದು ಅಥವಾ ಆರು ತಿಂಗಳುಗಳ ವರೆಗೆ ತನ್ನ ಜಾಗರಣೆಯನ್ನು ಮುಂದುವರಿಸಿರಬೇಕು ಎಂದು ತೋರುತ್ತದೆ. ಆದುದರಿಂದಲೇ, ನಂತರ ದಾವೀದನು ಆ ಮನುಷ್ಯರ ಎಲುಬುಗಳನ್ನು ತಂದು ಸಮಾಧಿಮಾಡಿಸಿದನು.

24:1​—⁠ದಾವೀದನು ಖಾನೇಷುಮಾರಿಮಾಡಿದ್ದು ಒಂದು ಗಂಭೀರ ಪಾಪವಾಗಿ ಪರಿಗಣಿಸಲ್ಪಟ್ಟದ್ದೇಕೆ? ಖಾನೇಷುಮಾರಿಮಾಡುವುದು ತಾನೇ ಧರ್ಮಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಟಿರಲಿಲ್ಲ. (ಅರಣ್ಯಕಾಂಡ 1:1-3; 26:1-4) ಯಾವ ಉದ್ದೇಶದಿಂದ ದಾವೀದನು ಖಾನೇಷುಮಾರಿಮಾಡುವಂತೆ ಪ್ರೇರೇಪಿಸಲ್ಪಟ್ಟನು ಎಂಬುದನ್ನು ಬೈಬಲ್‌ ನಮಗೆ ತಿಳಿಸುವುದಿಲ್ಲ. ಆದರೆ, ಹೀಗೆ ಮಾಡುವಂತೆ ದಾವೀದನನ್ನು ಪ್ರೇರೇಪಿಸಿದವನು ಸೈತಾನನೇ ಎಂದು 1 ಪೂರ್ವಕಾಲವೃತ್ತಾಂತ 21:1 ತಿಳಿಸುತ್ತದೆ. ಸಂಗತಿಯು ಏನೇ ಆಗಿರಲಿ, ಖಾನೇಷುಮಾರಿಮಾಡಲು ದಾವೀದನು ತೆಗೆದುಕೊಂಡ ನಿರ್ಣಯವು ತಪ್ಪಾಗಿದೆ ಎಂದು ಸೇನಾಪತಿಯಾದ ಯೋವಾಬನಿಗೆ ತಿಳಿದಿತ್ತು ಮತ್ತು ಅವನು ಹಾಗೆ ಮಾಡದಂತೆ ದಾವೀದನನ್ನು ತಡೆಯಲು ಪ್ರಯತ್ನಿಸಿದನು.

ನಮಗಾಗಿರುವ ಪಾಠಗಳು:

22:​2-51. ದಾವೀದನು ರಚಿಸಿದ ಸ್ತುತಿಗೀತೆಯು ಯೆಹೋವನೇ ಸತ್ಯ ದೇವರಾಗಿದ್ದಾನೆ ಮತ್ತು ನಮ್ಮ ಸಂಪೂರ್ಣ ಭರವಸೆಗೆ ಯೋಗ್ಯನಾಗಿದ್ದಾನೆ ಎಂದು ಬಹಳ ಸುಂದರವಾಗಿ ವ್ಯಕ್ತಪಡಿಸುತ್ತದೆ!

23:​15-17. ಜೀವ ಮತ್ತು ರಕ್ತದ ಕುರಿತಾದ ದೇವರ ನಿಯಮಕ್ಕೆ ದಾವೀದನು ಆಳವಾದ ಗೌರವವನ್ನು ತೋರಿಸಿದನು. ಈ ವಚನದಲ್ಲಿ ತಿಳಿಸಿರುವ ಸನ್ನಿವೇಶದಲ್ಲಿ, ದೇವರ ನಿಯಮಕ್ಕೆ ವಿರುದ್ಧವಾಗಿದೆ ಎಂದು ತೋರಿದ ಸಂಗತಿಯನ್ನೂ ಮಾಡಲು ಅವನು ನಿರಾಕರಿಸಿದನು. ದೇವರ ಎಲ್ಲ ಆಜ್ಞೆಗಳ ವಿಷಯದಲ್ಲಿ ನಾವು ಸಹ ಇದೇ ರೀತಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

24:10. ದಾವೀದನ ಮನಸ್ಸಾಕ್ಷಿಯು ಪಶ್ಚಾತ್ತಾಪಪಡುವಂತೆ ಅವನನ್ನು ಪ್ರೇರೇಪಿಸಿತು. ಇದೇ ರೀತಿ ಪ್ರತಿಕ್ರಿಯಿಸುವಷ್ಟರ ಮಟ್ಟಿಗೆ ನಮ್ಮ ಮನಸ್ಸಾಕ್ಷಿಯೂ ಸೂಕ್ಷ್ಮಗ್ರಾಹಿಯಾಗಿದೆಯೊ?

24:14. ಮಾನವರಿಗಿಂತ ಯೆಹೋವನು ಬಹಳ ಕರುಣಾಮಯಿ ಎಂದು ದಾವೀದನಿಗೆ ತಿಳಿದಿತ್ತು. ಅದೇ ನಿಶ್ಚಿತಾಭಿಪ್ರಾಯ ನಮಗಿದೆಯೆ?

24:17. ತನ್ನ ಪಾಪದ ದೆಸೆಯಿಂದ ಇಡೀ ಜನಾಂಗವು ಕಷ್ಟಪಡಬೇಕಾಯಿತು ಎಂದು ದಾವೀದನು ಬಹಳ ದುಃಖಿತನಾದನು. ಇದೇ ರೀತಿಯಾಗಿ, ಪಶ್ಚಾತ್ತಾಪಪಡುವ ಒಬ್ಬ ತಪ್ಪಿತಸ್ಥನು ತನ್ನ ಕೃತ್ಯವು ಇಡೀ ಸಭೆಯ ಮೇಲೆ ತಂದಿರಬಹುದಾದ ಕಳಂಕದ ಬಗ್ಗೆ ಮರುಕಪಡಬೇಕು.

‘ದೇವರ ಹೃದಯಕ್ಕೆ ಒಪ್ಪುವ’ ವ್ಯಕ್ತಿಯಾಗಲು ನಮ್ಮಿಂದ ಸಾಧ್ಯವಿದೆ

ಇಸ್ರಾಯೇಲಿನ ಎರಡನೇ ಅರಸನು ‘ಯೆಹೋವನಿಗೆ ಒಪ್ಪುವ ಪುರುಷ’ನಾದನು. (1 ಸಮುವೇಲ 13:14) ಯೆಹೋವನ ನೀತಿಯ ಮಟ್ಟಗಳನ್ನು ದಾವೀದನು ಎಂದೂ ಪ್ರಶ್ನಿಸಲಿಲ್ಲ. ದೇವರಿಂದ ಸ್ವತಂತ್ರನಾಗಿರುವ ಮಾರ್ಗವನ್ನು ಅವನೆಂದಿಗೂ ಬೆನ್ನಟ್ಟಲಿಲ್ಲ. ದಾವೀದನು ಪ್ರತಿ ಸಲ ತಪ್ಪನ್ನು ಮಾಡಿದಾಗಲೂ ತನ್ನ ತಪ್ಪನ್ನು ಒಪ್ಪಿಕೊಂಡನು, ಶಿಕ್ಷೆಯನ್ನು ಸ್ವೀಕರಿಸಿದನು ಮತ್ತು ತನ್ನ ಮಾರ್ಗವನ್ನು ಸರಿಪಡಿಸಿಕೊಂಡನು. ದಾವೀದನು ಸಮಗ್ರತೆಯುಳ್ಳ ವ್ಯಕ್ತಿಯಾಗಿದ್ದನು. ನಾವು ಸಹ ಅವನಂತೆಯೇ ಇರುವುದು ವಿವೇಕಪ್ರದವಾಗಿಲ್ಲವೇ, ಮುಖ್ಯವಾಗಿ ತಪ್ಪುಮಾಡಿದ ಸಂದರ್ಭದಲ್ಲಿ?

ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸುವುದೆಂದರೆ, ಸರಿ ಮತ್ತು ತಪ್ಪುಗಳ ವಿಷಯದಲ್ಲಿ ಆತನು ಇಟ್ಟಿರುವ ಮಟ್ಟಗಳನ್ನು ಸ್ವೀಕರಿಸಿ, ಸಮಗ್ರತೆ ಪಾಲಕರಾಗಿ ಅವುಗಳಿಗೆ ತಕ್ಕಂತೆ ಜೀವಿಸಲು ಪ್ರಯತ್ನಿಸುವುದೇ ಆಗಿದೆ ಎಂಬುದನ್ನು ದಾವೀದನ ಜೀವನ ಕಥೆಯು ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ. ಇದನ್ನು ಮಾಡುವುದು ಅಸಾಧ್ಯ ಸಂಗತಿಯೇನಲ್ಲ. ಎರಡನೇ ಸಮುವೇಲ ಪುಸ್ತಕದಿಂದ ನಾವು ಕಲಿತಂಥ ಪಾಠಗಳಿಗಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಈ ಪುಸ್ತಕದಲ್ಲಿ ಅಡಕವಾಗಿರುವ ಪ್ರೇರಿತ ಸಂದೇಶವು ನಿಜವಾಗಿಯೂ ಸಜೀವವಾಗಿದೆ ಮತ್ತು ಕಾರ್ಯಸಾಧಕವಾಗಿದೆ.​—⁠ಇಬ್ರಿಯ 4:12.

[ಪಾದಟಿಪ್ಪಣಿ]

^ ಪ್ಯಾರ. 4 ಈ ಪುಸ್ತಕವನ್ನು ಸಮುವೇಲನು ಬರೆಯಲಿಲ್ಲವಾದರೂ, ಇದು ಅವನ ಹೆಸರನ್ನು ಹೊಂದಿದೆ. ಏಕೆಂದರೆ, ಸಮುವೇಲನ ಹೆಸರನ್ನು ಹೊಂದಿರುವ ಎರಡೂ ಪುಸ್ತಕಗಳು ಮೂಲ ಹೀಬ್ರು ಗ್ರಂಥದಲ್ಲಿ ಒಂದು ಸುರುಳಿಯಾಗಿದ್ದವು. ಮತ್ತು ಮೊದಲನೇ ಸಮುವೇಲ ಪುಸ್ತಕದ ಹೆಚ್ಚಿನ ಭಾಗವನ್ನು ಸಮುವೇಲನೇ ಬರೆದನು.

[ಪುಟ 16ರಲ್ಲಿರುವ ಚಿತ್ರ]

ತನ್ನನ್ನು ಯಾರು ಅರಸನನ್ನಾಗಿ ನೇಮಿಸಿದ್ದಾನೆ ಎಂಬುದನ್ನು ನೆನಪುಮಾಡಿಕೊಳ್ಳುವುದು ತಾನೇ ದಾವೀದನಿಗೆ ದೀನನಾಗಿ ಉಳಿಯಲು ಸಹಾಯಮಾಡಿತು

[ಪುಟ 18ರಲ್ಲಿರುವ ಚಿತ್ರಗಳು]

“ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು”

ಬತ್ಷೆಬೆ

ತಾಮಾರಳು

ಅಮ್ನೋನ