ಎರಡನೇ ಸಮುವೇಲ 24:1-25

  • ದಾವೀದ ಜನಗಣತಿ ಮಾಡಿಸಿ ಪಾಪ ಮಾಡಿದ (1-14)

  • ಅಂಟುರೋಗದಿಂದ 70,000 ಸಾವು (15-17)

  • ದಾವೀದ ಯಜ್ಞವೇದಿ ಕಟ್ಟಿಸಿದ (18-25)

    • ಬಿಟ್ಟಿಯಾಗಿ ಬಲಿ ಅರ್ಪಿಸಲ್ಲ (24)

24  ಒಮ್ಮೆ ಒಬ್ಬ* ದಾವೀದನ ಹತ್ರ ಬಂದು ಅವನನ್ನ ಇಸ್ರಾಯೇಲ್ಯರಿಗೆ ಹಾನಿ ಆಗೋ ಕೆಲಸ ಮಾಡೋಕೆ ಪ್ರೇರಿಸ್ತಾ ಹೀಗಂದ: “ನೀನು ಇಸ್ರಾಯೇಲ್ಯರ, ಯೆಹೂದ್ಯರ ಜನಗಣತಿ ಮಾಡು.”+ ಆಗ ಯೆಹೋವನಿಗೆ ಮತ್ತೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು.+  ರಾಜ ದಾವೀದ ತನ್ನ ಸೇನಾಪತಿ ಯೋವಾಬನಿಗೆ+ “ದಯವಿಟ್ಟು, ದಾನಿಂದ ಬೇರ್ಷೆಬ+ ತನಕ ಇರೋ ಇಸ್ರಾಯೇಲ್ಯರ ಎಲ್ಲ ಕುಲಗಳ ಹತ್ರ ಹೋಗಿ ಜನ್ರ ಹೆಸ್ರು ಬರಿ. ಅಲ್ಲಿ ಎಷ್ಟು ಜನ್ರಿದ್ದಾರೆ ಅಂತ ನನಗೆ ಗೊತ್ತಾಗಬೇಕು” ಅಂದ.  ಅದಕ್ಕೆ ಯೋವಾಬ ರಾಜನಿಗೆ “ನಿನ್ನ ದೇವರಾದ ಯೆಹೋವ ನಿನ್ನ ಪ್ರಜೆಗಳ ಸಂಖ್ಯೆಯನ್ನ 100 ಪಟ್ಟು ಜಾಸ್ತಿ ಮಾಡಲಿ, ಅದನ್ನ ನೀನು ನಿನ್ನ ಕಣ್ಣಾರೆ ನೋಡೋ ತರ ಆಗಲಿ. ಆದ್ರೆ ನನ್ನ ಒಡೆಯನಾದ ರಾಜ, ನೀನ್ಯಾಕೆ ಹೀಗೆ ಮಾಡಬೇಕಂತ ಇದ್ದೀಯಾ?” ಅಂದ.  ದಾವೀದ ಈ ಮಾತಿಗೆ ಒಪ್ಪಲಿಲ್ಲ, ಹಾಗಾಗಿ ಯೋವಾಬ, ಎಲ್ಲ ಸೇನಾಪತಿಗಳು ರಾಜನ ಮಾತಿಗೆ ತಲೆಬಾಗಲೇ ಬೇಕಾಯ್ತು. ಅವರು ಇಸ್ರಾಯೇಲ್ಯರ ಹೆಸ್ರನ್ನ ಬರಿಯೋಕೆ ರಾಜನ ಸನ್ನಿಧಿಯಿಂದ ಹೋದ್ರು.+  ಯೋರ್ದನ್‌ ನದಿ ದಾಟಿ ಅರೋಯೇರ್‌+ ಪಟ್ಟಣದಲ್ಲಿ, ಕಣಿವೆ ಮಧ್ಯದಲ್ಲಿದ್ದ ಪಟ್ಟಣದ ಬಲಭಾಗದಲ್ಲಿ* ಪಾಳೆಯ ಹೂಡಿದ್ರು. ಆಮೇಲೆ ಗಾದ್ಯರ ಪ್ರಾಂತ್ಯದ ಕಡೆಗೂ ಯಜ್ಜೇರಿನ+ ಕಡೆಗೂ ಹೋದ್ರು.  ಅಲ್ಲಿಂದ ಅವರು ಗಿಲ್ಯಾದಿಗೆ,+ ತಖ್ತೀಮ್‌-ಹೊಜೀ ದೇಶಕ್ಕೆ ಹೋದ್ರು. ದಾನ್‌-ಯಾನ್‌ ತನಕ ಹೋಗಿ ಅಲ್ಲಿಂದ ಸೀದೋನ್‌+ ಕಡೆಗೆ ತಿರುಗಿದ್ರು.  ಆಮೇಲೆ ತೂರ್‌+ ಪಟ್ಟಣದ ಕೋಟೆಗೆ, ಹಿವ್ವಿಯರ + ಮತ್ತು ಕಾನಾನ್ಯರ ಎಲ್ಲ ಪಟ್ಟಣಗಳಿಗೆ ಹೋದ್ರು. ಕೊನೆಗೆ ಯೆಹೂದದ ನೆಗೆಬಿನಲ್ಲಿದ್ದ+ ಬೇರ್ಷೆಬಕ್ಕೆ+ ಬಂದ್ರು.  ಹೀಗೆ ಅವರು ಒಂಬತ್ತು ತಿಂಗಳು 20 ದಿನ ದೇಶವನ್ನೆಲ್ಲ ಸುತ್ತಿ ಯೆರೂಸಲೇಮಿಗೆ ಬಂದ್ರು.  ಆಮೇಲೆ ಯೋವಾಬ ಲೆಕ್ಕ ಮಾಡಿದ ಜನ್ರ ಸಂಖ್ಯೆನ ರಾಜನಿಗೆ ಹೇಳಿದ. ಅದ್ರಲ್ಲಿ ಕತ್ತಿ ಇದ್ದ 8,00,000 ಇಸ್ರಾಯೇಲ್ಯರ ವೀರ ಸೈನಿಕರು ಇದ್ರು. 5,00,000 ಯೆಹೂದದ ಸೈನಿಕರಿದ್ರು.+ 10  ಆದ್ರೆ ಜನಗಣತಿ ಮಾಡಿದ ಮೇಲೆ ದಾವೀದನಿಗೆ ಮನಸ್ಸಾಕ್ಷಿ ಚುಚ್ಚಿತು.+ ಆಗ ದಾವೀದ ಯೆಹೋವನಿಗೆ “ನಾನು ಜನಗಣತಿ ಮಾಡಿ ದೊಡ್ಡ ಪಾಪ ಮಾಡಿದೆ.+ ಯೆಹೋವನೇ, ದಯವಿಟ್ಟು ಮೂರ್ಖನ ಹಾಗೆ ನಡ್ಕೊಂಡಿರೋ+ ಈ ನಿನ್ನ ಸೇವಕನ ತಪ್ಪನ್ನ ಕ್ಷಮಿಸು”+ ಅಂದ. 11  ದಾವೀದ ಬೆಳಿಗ್ಗೆ ಏಳುವಷ್ಟರಲ್ಲಿ ಯೆಹೋವ ತನ್ನ ಸಂದೇಶವನ್ನ ಪ್ರವಾದಿಯಾದ ಗಾದನಿಗೆ+ ಕೊಟ್ಟನು. ಅವನು ದಾವೀದನ ದರ್ಶಿಯಾಗಿದ್ದ. 12  ದೇವರು ಗಾದನಿಗೆ: “ನೀನು ದಾವೀದನ ಹತ್ರ ಹೀಗೆ ಹೇಳು: ‘ಯೆಹೋವ ಹೀಗೆ ಹೇಳ್ತಾನೆ: “ನಾನು ನಿನ್ನ ಮುಂದೆ ಮೂರು ಶಿಕ್ಷೆ ಇಡ್ತೀನಿ. ಅದ್ರಲ್ಲಿ ನಿನಗೆ ಯಾವ ಶಿಕ್ಷೆ ಬೇಕಂತ ಆರಿಸ್ಕೊ”’”+ ಅಂದನು. 13  ಆಗ ಗಾದ ದಾವೀದನ ಹತ್ರ ಬಂದು “ನಿನ್ನ ದೇಶದಲ್ಲಿ ಏಳು ವರ್ಷ ಬರಗಾಲ ಬರಬೇಕಾ?+ ನಿನ್ನ ಶತ್ರುಗಳು ಮೂರು ತಿಂಗಳು ನಿನ್ನನ್ನ ಬೆನ್ನಟ್ಟಬೇಕಾ?+ ನಿನ್ನ ದೇಶದಲ್ಲಿ ಮೂರು ದಿನ ಅಂಟುರೋಗ ಇರಬೇಕಾ?+ ನನ್ನನ್ನ ಕಳಿಸಿದವನಿಗೆ ನಾನೇನು ಉತ್ತರ ಕೊಡಬೇಕಂತ ಚೆನ್ನಾಗಿ ಯೋಚನೆ ಮಾಡಿ ಹೇಳು” ಅಂದ. 14  ಅದಕ್ಕೆ ದಾವೀದ ಗಾದನಿಗೆ “ನಾನು ದೊಡ್ಡ ಕಷ್ಟದಲ್ಲಿ ಸಿಕ್ಕಿಹಾಕೊಂಡೆ. ಯೆಹೋವನೇ ನಮಗೆ ಶಿಕ್ಷೆ ಕೊಡ್ಲಿ.+ ಯಾಕಂದ್ರೆ ಆತನ ಕರುಣೆ ಎಲ್ಲಕ್ಕಿಂತ ದೊಡ್ಡದು.+ ದಯವಿಟ್ಟು ನಮ್ಮನ್ನ ಮನುಷ್ಯರ ಕೈಯಲ್ಲಿ ಬೀಳೋಕೆ ಬಿಡಬೇಡ”+ ಅಂದ. 15  ಆಮೇಲೆ ಯೆಹೋವ ಬೆಳಿಗ್ಗೆಯಿಂದ ತಾನು ಹೇಳಿದ ಸಮಯ ತನಕ ಇಸ್ರಾಯೇಲ್ಯರ ಮೇಲೆ ಅಂಟುರೋಗ ಬರೋ ಹಾಗೆ ಮಾಡಿದನು.+ ಆ ಅಂಟುರೋಗದಿಂದ ದಾನಿಂದ ಬೇರ್ಷೆಬ+ ತನಕ 70,000 ಜನ್ರು ಸತ್ರು.+ 16  ದೇವದೂತ ಯೆರೂಸಲೇಮನ್ನ ನಾಶ ಮಾಡೋಕೆ ತನ್ನ ಕೈ ಚಾಚಿದಾಗ, ನಡೆದ ದುರಂತದ ಬಗ್ಗೆ ಯೆಹೋವ ದುಃಖಪಟ್ಟು*+ ಜನ್ರನ್ನ ನಾಶ ಮಾಡ್ತಿದ್ದ ಆ ದೂತನಿಗೆ “ಸಾಕು! ಕೈ ಕೆಳಗಿಡು” ಅಂದನು. ಆ ಸಮಯದಲ್ಲಿ ಯೆಹೋವನ ದೂತ ಯೆಬೂಸಿಯನಾದ+ ಅರೌನನ+ ಕಣದ ಹತ್ರ ಇದ್ದ. 17  ಜನ್ರನ್ನ ನಾಶ ಮಾಡ್ತಿದ್ದ ದೇವದೂತನನ್ನ ದಾವೀದ ನೋಡಿದಾಗ ಅವನು ಯೆಹೋವನಿಗೆ “ಪಾಪ ಮಾಡಿದವನು ನಾನು, ತಪ್ಪು ಮಾಡಿದವನು ನಾನು. ಹಾಗಾಗಿ ಕುರಿಗಳ ತರ+ ಇರೋ ಈ ಜನ್ರನ್ನ ಬಿಟ್ಟುಬಿಡು. ದಯವಿಟ್ಟು ನನಗೆ, ನನ್ನ ತಂದೆ ಕುಟುಂಬದವರಿಗೆ ಶಿಕ್ಷೆ ಕೊಡು”+ ಅಂದ. 18  ಹಾಗಾಗಿ ಗಾದ ಆ ದಿನ ದಾವೀದನ ಹತ್ರ ಬಂದು “ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟು”+ ಅಂದ. 19  ಆಗ ದಾವೀದ ಗಾದನ ಮೂಲಕ ಯೆಹೋವ ತನಗೆ ಹೇಳಿದ್ದನ್ನ ಮಾಡೋಕೆ ಅಲ್ಲಿಗೆ ಹೋದ. 20  ರಾಜ, ಅವನ ಸೇವಕರು ತನ್ನ ಕಡೆಗೆ ಬರೋದನ್ನ ನೋಡಿ ಅರೌನ ತಕ್ಷಣ ಹೋಗಿ ನೆಲದ ತನಕ ಬಗ್ಗಿ ರಾಜನಿಗೆ ನಮಸ್ಕರಿಸಿ 21  ಹೀಗಂದ: “ನನ್ನ ಒಡೆಯನಾದ ರಾಜನೇ, ನಿನ್ನ ಸೇವಕನ ಹತ್ರ ಬರೋಕೆ ಕಾರಣ ಏನು?” ಅಂತ ಕೇಳಿದ. ಆಗ ದಾವೀದ “ನಾನು ನಿನ್ನ ಕಣವನ್ನ ಖರೀದಿಸೋಕೆ ಬಂದಿದ್ದೀನಿ. ಇಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಬೇಕು. ಆಗ ದೇವರಿಗೆ ಜನರ ಮೇಲೆ ಬಂದಿರೋ ಕೋಪ ಹೋಗಬಹುದು”+ ಅಂದ. 22  ಅದಕ್ಕೆ ಅರೌನ “ನನ್ನ ಒಡೆಯನಾದ ರಾಜನೇ, ಕಣವನ್ನ ತಗೊ. ನಿನಗೆ ಸರಿ ಅನಿಸಿದ್ದನ್ನ ಮಾಡು. ಇಲ್ಲಿ ಸರ್ವಾಂಗಹೋಮ ಬಲಿಗಾಗಿ ದನಕರುಗಳಿವೆ, ಸೌದೆಗಾಗಿ ಕಣದಲ್ಲಿ ಉಪಯೋಗಿಸೋ ಮರದ ಬಂಡಿ, ನೊಗ ಇದೆ. 23  ರಾಜ, ಇದನ್ನೆಲ್ಲ ನಿನಗೆ ಕೊಡ್ತೀನಿ. ನಿನ್ನ ದೇವರಾದ ಯೆಹೋವ ನಿನ್ನನ್ನ ಆಶೀರ್ವದಿಸಲಿ” ಅಂದ. 24  ಆದ್ರೆ ರಾಜ ಅರೌನನಿಗೆ “ಬೇಡ, ನಾನು ಇದನ್ನ ಬಿಟ್ಟಿಯಾಗಿ ತಗೊಳ್ಳಲ್ಲ. ಬೆಲೆಕೊಟ್ಟು ತಗೊಳ್ತೀನಿ. ನನಗೆ ಬಿಟ್ಟಿಯಾಗಿ ಸಿಕ್ಕಿದ್ದನ್ನ ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮ ಬಲಿಗಳಾಗಿ ಅರ್ಪಿಸಲ್ಲ” ಅಂದ. ದಾವೀದ ಕಣ, ದನಕರುಗಳನ್ನ 50 ಬೆಳ್ಳಿ ಶೆಕೆಲ್‌* ಕೊಟ್ಟು ತಗೊಂಡ.+ 25  ಆ ಕಣದಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಿ,+ ಅದ್ರ ಮೇಲೆ ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಅರ್ಪಿಸಿದ. ಆಗ ದೇಶದ ಪರವಾಗಿ ಮಾಡಿದ ಪ್ರಾರ್ಥನೆಯನ್ನ ಯೆಹೋವ ಕೇಳಿದ,+ ಇಸ್ರಾಯೇಲ್ಯರ ವಿರುದ್ಧ ಆತನಿಗಿದ್ದ ಕೋಪ ಹೋಯ್ತು.

ಪಾದಟಿಪ್ಪಣಿ

ಅಥವಾ “ದಕ್ಷಿಣದಲ್ಲಿ.”
ಅಥವಾ “ವಿಷಾದಪಟ್ಟು.”
ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.