ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರಿ ಮರುಭೂಮಿ ಪ್ರದೇಶದ ಪುರಾತನ ರಾಣಿ

ಮಾರಿ ಮರುಭೂಮಿ ಪ್ರದೇಶದ ಪುರಾತನ ರಾಣಿ

ಮಾರಿ ಮರುಭೂಮಿ ಪ್ರದೇಶದ ಪುರಾತನ ರಾಣಿ

“ಆ ದಿವಸ ನಡೆದ ಅನಿರೀಕ್ಷಿತ ಘಟನೆಯ ಸಂತೋಷವನ್ನು ನನ್ನ ಸಂಗಡಿಗರೊಂದಿಗೆ ಆಚರಿಸಿ ರಾತ್ರಿ ಮನೆತಲಪುವಾಗ ನನಗೆ ಬಹಳ ಸುಸ್ತಾಗಿತ್ತು” ಎಂದು ಫ್ರಾನ್ಸ್‌ನ ಭೂಗರ್ಭಶಾಸ್ತ್ರಜ್ಞರಾದ ಆನ್‌ಡ್ರೇ ಪಾರೋ ನೆನಪಿಸಿಕೊಳ್ಳುತ್ತಾರೆ. 1934ರ ಜನವರಿ ತಿಂಗಳಿನಲ್ಲಿ, ಸಿರಿಯದ ಯೂಫ್ರೇಟಿಸ್‌ ನದಿಯ ತೀರದಲ್ಲಿರುವ ಚಿಕ್ಕ ಪಟ್ಟಣವಾದ ಆಬೂ ಕೆಮಾಲ್‌ನ ಬಳಿಯಿರುವ ಟೆಲ್‌ ಹಾರೀರೀ ಎಂಬ ಸ್ಥಳದಲ್ಲಿ ಪಾರೋ ಮತ್ತು ಅವರ ಸಂಗಡಿಗರಿಗೆ ಭೂಅಗೆತದ ಸಮಯದಲ್ಲಿ ಒಂದು ಮೂರ್ತಿಯು ದೊರಕಿತು. ಅದರ ಮೇಲೆ: “ಲಾಮ್ಗೀ-ಮಾರಿ, ಮಾರಿಯ ಅರಸ, ಎನ್‌ಲಿಲ್‌ ದೇವತೆಯ ಮಹಾ ಯಾಜಕ” ಎಂಬ ಕೆತ್ತನೆಲಿಪಿಯಿತ್ತು. ಈ ಆವಿಷ್ಕಾರದಿಂದ ಅವರು ಬಹಳ ಪುಳಕಗೊಂಡರು.

ಕೊನೆಗೂ ಮಾರಿ ಎಂಬ ನಗರವು ಕಂಡುಹಿಡಿಯಲ್ಪಟ್ಟಿತ್ತು! ಬೈಬಲ್‌ ವಿದ್ಯಾರ್ಥಿಗಳಿಗೆ ಈ ಆವಿಷ್ಕಾರವು ಯಾಕೆ ಆಸಕ್ತಿದಾಯಕವಾಗಿದೆ?

ಮಾರಿ ನಗರದ ಬಗ್ಗೆ ತಿಳಿಯುವುದು ಏಕೆ ಆಸಕ್ತಿದಾಯಕವಾಗಿದೆ?

ಪುರಾತನ ಬರಹಗಳಿಂದಾಗಿ ಮಾರಿ ನಗರದ ಅಸ್ತಿತ್ವವು ತಿಳಿದಿತ್ತಾದರೂ, ಅದು ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿತ್ತು ಎಂಬುದು ಬಹಳ ಕಾಲದ ವರೆಗೆ ಒಂದು ಮರ್ಮವಾಗಿಯೇ ಉಳಿದಿತ್ತು. ಸುಮೇರಿಯನ್‌ ಬರಹಗಳಿಗನುಸಾರ, ಮಾರಿ ನಗರವು ಒಂದು ಸಮಯದಲ್ಲಿ ಇಡೀ ಮೆಸೊಪೊತಾಮ್ಯವನ್ನು ಆಳಿದಂಥ ರಾಜವಂಶಸ್ಥರ ಕೇಂದ್ರ ಸ್ಥಳವಾಗಿತ್ತು. ಯೂಫ್ರೇಟಿಸ್‌ ನದಿಯ ತೀರದಲ್ಲಿದ್ದ ಆ ನಗರವು, ಪರ್ಷಿಯನ್‌ ಕೊಲ್ಲಿಯನ್ನು ಅಶ್ಶೂರ್ಯ, ಮೆಸೊಪೊತಾಮ್ಯ, ಆ್ಯನಾಟೊಲಿಯ ಮತ್ತು ಮೆಡಿಟರೇನಿಯನ್‌ ಸಮುದ್ರದ ಕರಾವಳಿ ಪ್ರದೇಶಕ್ಕೆ ಜೋಡಿಸುವ ಪ್ರಮುಖ ವ್ಯಾಪಾರಿ ಮಾರ್ಗಗಳು ಕೂಡಿಬರುವ ಸ್ಥಳದಲ್ಲಿತ್ತು. ಮೆಸೊಪೊತಾಮ್ಯದಲ್ಲಿ ತೀರ ವಿರಳವಾಗಿದ್ದ ಮರ, ಲೋಹ ಮತ್ತು ಕಲ್ಲು ಮುಂತಾದ ವಸ್ತುಗಳನ್ನು ಮಾರಿ ನಗರದಿಂದ ಸಾಗಣೆಮಾಡಲಾಗುತ್ತಿತ್ತು. ಇವುಗಳಿಂದ ದೊರೆತ ಕಂದಾಯದಿಂದಾಗಿ ಮಾರಿ ನಗರವು ಸಂಪದ್ಭರಿತವಾಗಿತ್ತು. ಮಾತ್ರವಲ್ಲದೆ, ಇಡೀ ಪ್ರಾಂತದ ಮೇಲೆ ತನ್ನ ಅಧಿಕಾರವನ್ನು ಚಲಾಯಿಸಲು ಶಕ್ತವಾಯಿತು. ಆದರೆ, ಆಕಾಡ್‌ನ ಸರ್ಗೋನನು ಸಿರಿಯವನ್ನು ವಶಪಡಿಸಿಕೊಂಡಾಗ ಈ ಆಧಿಪತ್ಯವು ಕೊನೆಗೊಂಡಿತು.

ಸರ್ಗೋನನು ಸಿರಿಯವನ್ನು ವಶಪಡಿಸಿಕೊಂಡು ಸುಮಾರು 300 ವರುಷಗಳ ಅನಂತರ ಮಾರಿ ನಗರವು ಬೇರೆ ಬೇರೆ ಮಿಲಿಟರಿ ಅಧಿಕಾರಿಗಳಿಂದ ಆಳಲ್ಪಟ್ಟಿತು. ಅವರ ಕೈಕೆಳಗಿರುವಾಗ ಆ ನಗರವು ಪುನಃ ತಕ್ಕಮಟ್ಟಿಗಿನ ಸಮೃದ್ಧಿಯನ್ನು ಹೊಂದಿತು. ಆದರೆ, ಅದರ ಕೊನೇ ಅಧಿಕಾರಿಯಾದ ಜಿಮ್ರೀ-ಲಿಮ್‌ನ ಸಮಯದಲ್ಲಿ ಅದು ತನ್ನ ಪ್ರಖ್ಯಾತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿತು. ಜಿಮ್ರೀ-ಲಿಮ್‌, ಅನೇಕ ಮಿಲಿಟರಿ ವಿಜಯಗಳು, ಸಂಧಾನಗಳು ಮತ್ತು ವಿವಾಹ ಸಂಬಂಧಗಳ ಮೂಲಕ ತನ್ನ ಸಾಮ್ರಾಜ್ಯವನ್ನು ಸ್ಥಿರಪಡಿಸಲು ಪ್ರಯತ್ನಿಸಿದನು. ಆದರೆ ಸಾ.ಶ.ಪೂ. 1760ರ ಸುಮಾರಿಗೆ, ಬ್ಯಾಬಿಲೋನಿನ ರಾಜ ಹಮ್ಮುರಾಬಿಯು ಆ ನಗರವನ್ನು ವಶಪಡಿಸಿಕೊಂಡು ಅದನ್ನು ನಾಶಮಾಡಿದನು. ಹೀಗೆ, “ಪುರಾತನ ಲೋಕದಲ್ಲಿನ ಅತಿ ಪ್ರಖ್ಯಾತ ನಾಗರಿಕತೆಗಳಲ್ಲಿ ಒಂದು” ಎಂಬುದಾಗಿ ಪಾರೋ ಅವರಿಂದ ಕರೆಯಲ್ಪಟ್ಟ ನಗರವು ಧ್ವಂಸಗೊಂಡಿತು.

ಹಮ್ಮುರಾಬಿಯ ಸೇನೆಗಳು ಮಾರಿ ನಗರವನ್ನು ನೆಲಸಮಮಾಡಿದಾಗ ತಮಗರಿವಿಲ್ಲದೆಯೇ ಆಧುನಿಕ ದಿನದ ಅಗೆತಶಾಸ್ತ್ರಜ್ಞರಿಗೆ ಮತ್ತು ಇತಿಹಾಸಗಾರರಿಗೆ ಒಂದು ದೊಡ್ಡ ಸಹಾಯವನ್ನು ಮಾಡಿದವು. ಅದು ಹೇಗೆಂದರೆ, ಸುಡದ ಮಣ್ಣಿನ ಇಟ್ಟಿಗೆಯಿಂದ ಮಾಡಲ್ಪಟ್ಟಿರುವ ಗೋಡೆಗಳನ್ನು ಸೇನೆಗಳು ಉರುಳಿಸಿದಾಗ, ಕೆಲವು ಸ್ಥಳಗಳಲ್ಲಿ ಐದು ಮೀಟರುಗಳಷ್ಟು ಎತ್ತರದ ಕಟ್ಟಡಗಳು ಆ ಮಣ್ಣಿನಿಂದ ಮುಚ್ಚಲ್ಪಟ್ಟವು. ಹೀಗೆ, ಆಗಿನ ಸಮಯದ ನಾಶಕಾರಕ ಪ್ರಭಾವಗಳಿಗೆ ಆ ಕಟ್ಟಡಗಳು ಗುರಿಯಾಗದಂತೆ ಸಂರಕ್ಷಿಸಲ್ಪಟ್ಟಿವೆ. ಅಗೆತಶಾಸ್ತ್ರಜ್ಞರು, ದೇವಸ್ಥಾನಗಳ ಮತ್ತು ಅರಮನೆಗಳ ಅವಶೇಷಗಳನ್ನು ಭೂಮಿಯಿಂದ ಅಗೆದು ತೆಗೆದಿದ್ದಾರೆ. ಅಷ್ಟುಮಾತ್ರವಲ್ಲದೆ, ಪುರಾತನ ನಾಗರಿಕತೆಯ ಬಗ್ಗೆ ಮಾಹಿತಿಯನ್ನು ನೀಡುವ ಅನೇಕಾನೇಕ ಕರಕುಶಲ ವಸ್ತುಗಳು ಮತ್ತು ಸಾವಿರಾರು ಕೆತ್ತನೆಲಿಪಿಗಳನ್ನು ಸಹ ಕಂಡುಕೊಂಡಿದ್ದಾರೆ.

ಮಾರಿ ನಗರದ ಅವಶೇಷಗಳು ನಮಗೆ ಏಕೆ ಆಸಕ್ತಿದಾಯಕವಾಗಿವೆ? ಪೂರ್ವಜನಾದ ಅಬ್ರಹಾಮನು ಜೀವಿಸಿದಂಥ ಸಮಯವನ್ನು ತುಸು ಪರಿಗಣಿಸಿರಿ. ಅಬ್ರಹಾಮನು, ಜಲಪ್ರಳಯವು ಸಂಭವಿಸಿ 352 ವರುಷಗಳ ಬಳಿಕ ಸಾ.ಶ.ಪೂ. 2018ರಲ್ಲಿ ಜನಿಸಿದನು. ಅವನು ನೋಹನ ಅನಂತರದ ಹತ್ತನೇ ಸಂತತಿಯವನಾಗಿದ್ದನು. ದೇವರ ಆಜ್ಞೆಯ ಮೇರೆಗೆ ಅಬ್ರಹಾಮನು ತನ್ನ ಸ್ವದೇಶವಾದ ಊರ್‌ ಪಟ್ಟಣವನ್ನು ಬಿಟ್ಟು ಖಾರಾನ್‌ ಪಟ್ಟಣಕ್ಕೆ ಹೋದನು. ಸಾ.ಶ.ಪೂ. 1943ರಲ್ಲಿ ಅಬ್ರಹಾಮನು 75 ವರುಷದವನಾಗಿದ್ದಾಗ ಖಾರಾನ್‌ ಪಟ್ಟಣವನ್ನು ಬಿಟ್ಟು ಕಾನಾನ್‌ ದೇಶಕ್ಕೆ ಹೋದನು. “ಅಬ್ರಹಾಮನು ಊರ್‌ ಪಟ್ಟಣದಿಂದ [ಕಾನಾನ್‌ನಲ್ಲಿರುವ] ಯೆರೂಸಲೇಮಿಗೆ ಸ್ಥಳಾಂತರಿಸಿದ ಘಟನೆಯು ಮಾರಿ ನಗರವು ಅಸ್ತಿತ್ವದಲ್ಲಿದ್ದ ಸಮಯದಲ್ಲಿಯೇ ಸಂಭವಿಸಿತು” ಎಂಬುದಾಗಿ ಇಟಲಿಯ ಅಗೆತಶಾಸ್ತ್ರಜ್ಞರಾದ ಪಾಓಲೋ ಮಾತ್ತೀಐ ತಿಳಿಸುತ್ತಾರೆ. ಆದುದರಿಂದಲೇ, ಮಾರಿ ನಗರದ ಆವಿಷ್ಕಾರವು ಬಹಳ ಪ್ರಯೋಜನಕರವಾಗಿದೆ. ಏಕೆಂದರೆ, ದೇವರ ನಂಬಿಗಸ್ತ ಸೇವಕನಾದ ಅಬ್ರಹಾಮನು ಜೀವಿಸಿದಂಥ ಲೋಕವು ಹೇಗಿತ್ತೆಂಬುದನ್ನು ಅರ್ಥಮಾಡಿಕೊಳ್ಳಲು ಅದು ನಮಗೆ ಸಹಾಯಮಾಡುತ್ತದೆ. *​—⁠ಆದಿಕಾಂಡ 11:​10–12:⁠4.

ಅವಶೇಷಗಳು ಏನನ್ನು ಬಯಲುಪಡಿಸುತ್ತವೆ?

ಮೆಸೊಪೊತಾಮ್ಯದಾದ್ಯಂತ ಇದ್ದಂತೆ ಮಾರಿ ನಗರದಲ್ಲಿಯೂ ಧರ್ಮವು ಮುಖ್ಯ ಸ್ಥಾನವನ್ನು ಹೊಂದಿತ್ತು. ದೇವರುಗಳನ್ನು ಸೇವಿಸುವುದು ಮನುಷ್ಯನ ಕರ್ತವ್ಯ ಎಂದು ಪರಿಗಣಿಸಲಾಗುತ್ತಿತ್ತು. ಯಾವುದೇ ಪ್ರಾಮುಖ್ಯ ನಿರ್ಣಯವನ್ನು ಮಾಡುವ ಮುನ್ನ ಆ ಕುರಿತು ದೇವರುಗಳ ಚಿತ್ತವೇನು ಎಂಬುದನ್ನು ವಿಚಾರಿಸಿ ನೋಡಲಾಗುತ್ತಿತ್ತು. ಅಗೆತಶಾಸ್ತ್ರಜ್ಞರು ಆರು ದೇವಸ್ಥಾನಗಳ ಅವಶೇಷಗಳನ್ನು ಕಂಡುಹಿಡಿದರು. ಇವುಗಳಲ್ಲಿ ಸಿಂಹಗಳ ದೇವಸ್ಥಾನ (ಕೆಲವರು ಇದನ್ನು ಡಾಗಾನನ ಅಂದರೆ ಬೈಬಲಿನಲ್ಲಿ ತಿಳಿಸಿರುವ ದಾಗೋನ್‌ನ ದೇಗುಲ ಎಂದು ನೆನಸುತ್ತಾರೆ) ಮತ್ತು ಸಂತಾನೋತ್ಪತ್ತಿ ದೇವತೆಯಾದ ಇಷ್ಟಾರಳ ಹಾಗೂ ಸೂರ್ಯದೇವನಾದ ಶೇಮಾಷ್‌ನ ಪೂಜ್ಯಸ್ಥಾನವೂ ಸೇರಿವೆ. ಆರಂಭದಲ್ಲಿ ಈ ಎಲ್ಲ ದೇವಸ್ಥಾನದಲ್ಲಿ ಅದರದರ ದೇವದೇವತೆಗಳ ಮೂರ್ತಿಯನ್ನು ಇಡಲಾಗಿತ್ತು ಮತ್ತು ಅವುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು. ಭಕ್ತರು ನಗೆಮುಖ ಬೀರುತ್ತಾ ಪ್ರಾರ್ಥಿಸುತ್ತಿರುವಂತೆ ತೋರುವ ತಮ್ಮ ಸ್ವಂತ ಪ್ರತಿಮೆಯನ್ನು ಮಾಡಿ, ದೇವಸ್ಥಾನದಲ್ಲಿರುವ ಆಸನಗಳಲ್ಲಿ ಇಡುತ್ತಿದ್ದರು. ತಾವು ಪ್ರಾರ್ಥಿಸಿ ಹೋದ ನಂತರವೂ ತಮ್ಮ ಪ್ರತಿಮೆಯು ದೀರ್ಘ ಸಮಯದ ವರೆಗೆ ದೇವರಿಗೆ ಆರಾಧನೆಯನ್ನು ಸಲ್ಲಿಸುತ್ತಾ ಇರುತ್ತದೆ ಎಂಬ ನಂಬಿಕೆಯಿಂದ ಅವರು ಹೀಗೆ ಮಾಡುತ್ತಿದ್ದರು. ಪಾರೋ ತಿಳಿಸಿದ್ದು: “ಇಂದು ಕ್ಯಾಥೊಲಿಕ್‌ ಚರ್ಚುಗಳಲ್ಲಿ ಆರಾಧಕರು ಉರಿಸುವ ಮೇಣದ ಬತ್ತಿಯಂತೆ, ಆದರೆ ಅದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ, ಅಂದು ಇಡಲ್ಪಡುತ್ತಿದ್ದ ಭಕ್ತನ ಪ್ರತಿಮೆಯು ಭಕ್ತನಿಗೆ ಬದಲಿಯಾಗಿ ಪರಿಗಣಿಸಲ್ಪಡುತ್ತಿತ್ತು.”

ಟೆಲ್‌ ಹಾರೀರೀ ಅವಶೇಷಗಳಲ್ಲಿ ಅತಿ ರೋಮಾಂಚಕಾರಿ ಆವಿಷ್ಕಾರವು, ಬೃಹತ್ತಾದ ಅರಮನೆಯ ಅವಶೇಷವೇ ಆಗಿದೆ. ಆ ಅರಮನೆಯು ಅದರ ಕೊನೆಯ ನಿವಾಸಿಯಾದ ಅರಸ ಜಿಮ್ರೀ-ಲಿಮ್‌ನ ಹೆಸರಿನಿಂದ ಪ್ರಖ್ಯಾತವಾಗಿತ್ತು. ಫ್ರೆಂಚ್‌ ಅಗೆತಶಾಸ್ತ್ರಜ್ಞರಾದ ಲೂಯಿ-ವ್ಲೀಯೂಎಗ್‌ ವಿನ್ಸನ್‌ ಅದನ್ನು “ಪೂರ್ವ ಕಾಲದ ಪೌರಸ್ತ್ಯ ವಾಸ್ತುಶಿಲ್ಪದ ರತ್ನ” ಎಂದು ವರ್ಣಿಸಿದರು. ಈ ಅರಮನೆಯು ಆರು ಎಕರೆಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಆವರಿಸುತ್ತಾ ಸುಮಾರು 300 ಕೋಣೆಗಳು ಮತ್ತು ಅಂಗಣಗಳನ್ನು ಹೊಂದಿತ್ತು. ಪ್ರಾಚೀನಕಾಲದಲ್ಲಿಯೂ ಈ ಅರಮನೆಯನ್ನು ಲೋಕದ ಅದ್ಭುತಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲಾಗಿತ್ತು. “ಇದು ಎಷ್ಟೊಂದು ಪ್ರಖ್ಯಾತವಾಗಿತ್ತೆಂದರೆ, ಸಿರಿಯದ ಕರಾವಳಿ ಪ್ರದೇಶವಾದ ಯೂಗಾರಿಟ್‌ನ ಅರಸನು ಕೇವಲ ‘ಜಿಮ್ರೀ-ಲಿಮ್‌ನ ಮನೆಗೆ’ ಭೇಟಿ ನೀಡುವ ಉದ್ದೇಶಕ್ಕಾಗಿ ತನ್ನ ಮಗನನ್ನು 600 ಕಿಲೋಮೀಟರ್‌ಗಳಷ್ಟು ದೂರದ ಒಳಪ್ರದೇಶಕ್ಕೆ ಕಳುಹಿಸಲು ಹಿಂಜರಿಯಲಿಲ್ಲ” ಎಂದು ಪುರಾತನ ಇರಾಕ್‌ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಜಾರ್ಜ್‌ ರೂ ತಿಳಿಸಿದ್ದಾರೆ.

ಸಂದರ್ಶಕರು ವಿಶಾಲವಾದ ಅಂಗಣವನ್ನು ಪ್ರವೇಶಿಸುವ ಮುನ್ನ, ಎರಡೂ ಬದಿಯಲ್ಲಿ ಬುರುಜುಗಳಿರುವ ಏಕೈಕ ಪ್ರವೇಶ ದ್ವಾರದಿಂದ ಈ ಭದ್ರವಾದ ಅರಮನೆಯನ್ನು ಪ್ರವೇಶಿಸುವರು. ಮಾರಿ ನಗರದ ಕೊನೆಯ ಅರಸನಾದ ಜಿಮ್ರೀ-ಲಿಮ್‌ ಒಂದು ವೇದಿಕೆಯ ಮೇಲೆ ಇಡಲ್ಪಟ್ಟಿದ್ದ ಸಿಂಹಾಸನದ ಮೇಲೆ ಕುಳಿತುಕೊಂಡು, ಮಿಲಿಟರಿ, ವಾಣಿಜ್ಯ ಮತ್ತು ರಾಜತಾಂತ್ರಿಕ ವಿಚಾರಗಳನ್ನು ನಿರ್ವಹಿಸುತ್ತಿದ್ದನು. ಅಷ್ಟುಮಾತ್ರವಲ್ಲದೆ, ಅವನು ನ್ಯಾಯತೀರ್ಪನ್ನು ವಿಧಿಸುತ್ತಿದ್ದನು ಮತ್ತು ಸಂದರ್ಶಕರನ್ನು ಹಾಗೂ ರಾಯಭಾರಿಗಳನ್ನು ಸ್ವಾಗತಿಸುತ್ತಿದ್ದನು. ಅತಿಥಿಗಳಿಗೆ ಉಳಿದುಕೊಳ್ಳಲು ಕೋಣೆಗಳನ್ನು ನೀಡಲಾಗುತ್ತಿತ್ತು. ಪ್ರತಿದಿನ ಪುಷ್ಕಳವಾದ ಔತಣಗಳ ಸಮಯದಲ್ಲಿ ಅತಿಥಿಗಳಿಗೆ ಅರಸನಿಂದ ಊಟ ಉಪಚಾರಗಳು ನೀಡಲ್ಪಡುತ್ತಿದ್ದವು. ಔತಣದಲ್ಲಿ ಈ ಎಲ್ಲ ಪದಾರ್ಥಗಳು ಸೇರಿದ್ದವು​—⁠ಸುಟ್ಟ ಅಥವಾ ಬೇಯಿಸಿದ ದನದ ಮಾಂಸ, ಕುರಿಮಾಂಸ, ಜಿಂಕೆಮಾಂಸ, ಮೀನು ಮತ್ತು ಕೋಳಿಯನ್ನು ಮಸಾಲೆ ಬೆರಸಿರುವ ಗಾರ್ಲಿಕ್‌ ಸಾಸ್‌ನೊಂದಿಗೆ ಬಡಿಸಲಾಗುತ್ತಿತ್ತು ಮತ್ತು ಅದರೊಂದಿಗೆ ವಿಧವಿಧವಾದ ತರಕಾರಿಗಳು ಹಾಗೂ ಚೀಸ್‌ಗಳನ್ನು ನೀಡಲಾಗುತ್ತಿತ್ತು. ಊಟದ ಅನಂತರ ನೀಡಲ್ಪಡುತ್ತಿದ್ದ ಸಿಹಿಭಕ್ಷ್ಯಗಳಲ್ಲಿ ತಾಜಾ ಹಣ್ಣುಗಳು, ಒಣಗಿಸಿರುವ ಹಣ್ಣುಗಳು ಅಥವಾ ಸಕ್ಕರೆಯಲ್ಲಿ ನೆನಸಿಡಲ್ಪಟ್ಟ ಹಣ್ಣುಗಳು ಮತ್ತು ವಿವಿಧ ಆಕಾರದ ಕೇಕ್‌ಗಳು ಸೇರಿದ್ದವು. ದಾಹವನ್ನು ತಣಿಸಲಿಕ್ಕಾಗಿ ಅತಿಥಿಗಳಿಗೆ ಬಿಯರ್‌ ಅಥವಾ ದ್ರಾಕ್ಷಾಮದ್ಯವನ್ನು ನೀಡಲಾಗುತ್ತಿತ್ತು.

ಅರಮನೆಯಲ್ಲಿ ಉತ್ತಮ ನೈರ್ಮಲ್ಯ ಸೌಕರ್ಯಗಳಿದ್ದವು. ಮಣ್ಣಿನ ಸ್ನಾನದ ತೊಟ್ಟಿಗಳಿರುವ ಸ್ನಾನದ ಗೃಹಗಳು ಮತ್ತು ಆಸನರಹಿತ ಶೌಚಾಲಯಗಳು ಇದ್ದವು. ನೆಲಗಳೂ ಗೋಡೆಯ ಕೆಳಭಾಗಗಳೂ ಹಾಳಾಗದಂತೆ ಅವುಗಳಿಗೆ ಟಾರ್‌ ಬಳಿಯಲಾಗಿತ್ತು. ಕೊಳಚೆ ನೀರನ್ನು ಇಟ್ಟಿಗೆಯಿಂದ ಕಟ್ಟಲ್ಪಟ್ಟ ಒಳಚರಂಡಿಗಳ ಮೂಲಕ ಹರಿದುಹೋಗುವಂತೆ ಮಾಡಲಾಗಿತ್ತು ಮತ್ತು ಟಾರ್‌ ಹಚ್ಚಿ ಜಲಾಭೇದ್ಯಗೊಳಿಸಲ್ಪಟ್ಟ ಮಣ್ಣಿನ ಪೈಪ್‌ಗಳು 3,500 ವರುಷಗಳ ಅನಂತರ ಈಗಲೂ ಉಪಯೋಗಿಸಲ್ಪಡುವ ಸ್ಥಿತಿಯಲ್ಲಿವೆ. ರಾಜಮನೆತನದ ಸ್ತ್ರೀಯರಲ್ಲಿ ಮೂವರು ಮರಣಕಾರಕ ರೋಗದಿಂದ ಬಾಧಿಸಲ್ಪಟ್ಟಾಗ ಅವರಿಗೆ ಕಟ್ಟುನಿಟ್ಟಿನ ಸಲಹೆಗಳು ನೀಡಲ್ಪಟ್ಟವು. ಅಂಥ ಅಸ್ವಸ್ಥ ಸ್ತ್ರೀಯನ್ನು ಸಂಪರ್ಕ ನಿರೋಧ ಸ್ಥಿತಿಯಲ್ಲಿಡಲಾಗುತ್ತಿತ್ತು. “ಯಾರೂ ಅವಳ ಪಾತ್ರೆಯಲ್ಲಿ ಕುಡಿಯಬಾರದು, ಅವಳೊಂದಿಗೆ ಕೂತು ಊಟಮಾಡಬಾರದು, ಅವಳ ಕುರ್ಚಿಯಲ್ಲಿ ಕುಳಿತುಕೊಳ್ಳಬಾರದು.”

ಈ ದಾಖಲೆಗಳಿಂದ ನಾವೇನನ್ನು ಕಲಿಯಬಲ್ಲೆವು?

ಪಾರೋ ಮತ್ತು ಅವರ ಸಂಗಡಿಗರು, ಆಕಾಡ್‌ ಭಾಷೆಯಲ್ಲಿ ಬರೆಯಲ್ಪಟ್ಟ ಸುಮಾರು 20,000 ಬೆಣೆಲಿಪಿ ಶಿಲಾಫಲಕಗಳನ್ನು ಕಂಡುಹಿಡಿದರು. ಆ ಶಿಲಾಫಲಕಗಳಲ್ಲಿ ಪತ್ರಗಳು ಮತ್ತು ಆಡಳಿತಕ್ಕೆ ಹಾಗೂ ಹಣಕಾಸಿಗೆ ಸಂಬಂಧಿಸಿದ ವಿಚಾರಗಳು ಇದ್ದವು. ಈ ದಾಖಲೆಗಳಲ್ಲಿ, ಕೇವಲ ಮೂರರಲ್ಲಿ ಒಂದಂಶವು ಮಾತ್ರ ಪ್ರಕಟಿಸಲ್ಪಟ್ಟಿತು. ಆದರೂ, ಅವೇ 28 ಸಂಪುಟಗಳಾದವು. ಇವುಗಳಿಂದ ಏನು ಪ್ರಯೋಜನವಿದೆ? “ಮಾರಿ ನಗರದ ದಾಖಲೆಗಳು ದೊರಕುವ ತನಕ, ಎರಡನೇ ಸಹಸ್ರಮಾನದ ಆರಂಭದಲ್ಲಿ ಮೆಸೊಪೊತಾಮ್ಯ ಮತ್ತು ಸಿರಿಯದ ಇತಿಹಾಸ, ಆಚಾರವಿಚಾರಗಳು ಮತ್ತು ದೈನಂದಿನ ಜೀವನ ರೀತಿ ಹೇಗಿತ್ತು ಎಂಬುದರ ಬಗ್ಗೆ ನಮಗೆ ಕಿಂಚಿತ್ತೂ ತಿಳಿದಿರಲಿಲ್ಲ. ಈ ಶಿಲಾಫಲಕಗಳ ಕಾರಣ ಆ ಸಮಯಾವಧಿಯ ಕುರಿತಾಗಿ ಬಹಳಷ್ಟು ಮಾಹಿತಿಯನ್ನು ಬರೆಯಲು ಸಾಧ್ಯವಾಯಿತು” ಎಂಬುದಾಗಿ ಮಾರಿ ನಗರದ ಅಗೆತಶಾಸ್ತ್ರೀಯ ಸಂಸ್ಥೆಯ ಕಾರ್ಯನಿರ್ವಾಹಕರಾದ ಜಾನ್‌-ಕ್ಲೋಡ್‌ ಮಾರ್ಗರೊನ್‌ ತಿಳಿಸುತ್ತಾರೆ. ಪಾರೋ ತಿಳಿಸಿದಂತೆ, ದೊರಕಿರುವ ದಾಖಲೆಗಳು “ಅವುಗಳಲ್ಲಿ ತಿಳಿಸಲಾಗಿರುವ ಜನರ ಮತ್ತು ಪೂರ್ವಿಕರ ಸಮಯಾವಧಿಯ ಕುರಿತು ಹಳೇ ಒಡಂಬಡಿಕೆಯು ತಿಳಿಸುವ ವಿಷಯಗಳ ನಡುವೆ ಆಶ್ಚರ್ಯಕರವಾದ ಅನೇಕ ಹೊಂದಾಣಿಕೆಯನ್ನು ತಿಳಿಯಪಡಿಸುತ್ತವೆ.”

ಮಾರಿ ನಗರದಲ್ಲಿ ದೊರೆತ ಶಿಲಾಫಲಕಗಳು ಕೆಲವು ಬೈಬಲ್‌ ವೃತ್ತಾಂತಗಳ ಮೇಲೆಯೂ ಬೆಳಕನ್ನು ಬೀರುತ್ತವೆ. ಉದಾಹರಣೆಗೆ, ವೈರಿಯ ಪತ್ನಿಯರನ್ನು ಮತ್ತು ಉಪಪತ್ನಿಯರನ್ನು ಸ್ವಾಧೀನಪಡಿಸಿಕೊಳ್ಳುವುದು ಆ ಸಮಯದಲ್ಲಿ “ರಾಜರ ವರ್ತನೆಯ ಮೂಲಭೂತ ಹಕ್ಕಾಗಿತ್ತು” ಎಂದು ಅವು ತಿಳಿಸುತ್ತವೆ. ಅಬ್ಷಾಲೋಮನು ತನ್ನ ತಂದೆಯಾದ ರಾಜ ದಾವೀದನ ಉಪಪತ್ನಿಯರನ್ನು ಕೂಡುವಂತೆ ದ್ರೋಹಿ ಸಲಹೆಗಾರನಾದ ಅಹೀತೋಫೆಲನು ಹೇಳಿದ ಸಂಗತಿಯು ಒಂದು ಹೊಸ ವಿಚಾರವಾಗಿರಲಿಲ್ಲ.​—⁠2 ಸಮುವೇಲ 16:​21, 22.

ಇಸವಿ 1933ರಿಂದ ಟೆಲ್‌ ಹಾರೀರೀಗೆ ಸಂಬಂಧಿಸಿದ 41 ಅಗೆತಶಾಸ್ತ್ರೀಯ ಕಾರ್ಯಾಚರಣೆಗಳು ಮಾಡಲ್ಪಟ್ಟಿವೆ. ಆದರೆ, 270 ಎಕರೆ ವಿಸ್ತಾರವಿರುವ ಮಾರಿ ನಗರದ 20 ಎಕರೆಗಳನ್ನು ಮಾತ್ರ ಇದುವರೆಗೆ ಪರಿಶೋಧಿಸಲಾಗಿದೆ. ಇದರರ್ಥ, ಮರುಭೂಮಿ ಪ್ರದೇಶದ ಪುರಾತನ ರಾಣಿಯಂತಿದ್ದ ಮಾರಿ ನಗರದಲ್ಲಿ ಕಂಡುಹಿಡಿಯಲು ಇನ್ನೂ ಬಹಳಷ್ಟು ರೋಮಾಂಚಕ ವಿಷಯಗಳಿವೆ.

[ಪಾದಟಿಪ್ಪಣಿ]

^ ಪ್ಯಾರ. 8 ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶವಾದ ನಂತರ ಬ್ಯಾಬಿಲೋನಿಯರು ಯೆಹೂದಿ ಬಂಧಿವಾಸಿಗಳನ್ನು ಒಂದುವೇಳೆ ಧ್ವಂಸಗೊಂಡ ಮಾರಿ ನಗರದ ದಾರಿಯಾಗಿಯೇ ಕೊಂಡೊಯ್ದಿರಬಹುದು.

[ಪುಟ 10ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಪರ್ಷಿಯನ್‌ ಕೊಲ್ಲಿ

ಊರ್‌

ಮೆಸೊಪೊತಾಮ್ಯ

ಯೂಫ್ರೇಟಿಸ್‌ ನದಿ

ಮಾರಿ

ಅಶ್ಶೂರ್ಯ

ಖಾರಾನ್‌

ಆ್ಯನಾಟೊಲಿಯ

ಕಾನಾನ್‌

ಯೆರೂಸಲೇಮ್‌

ಮೆಡಿಟರೇನಿಯನ್‌ ಸಮುದ್ರ (ಮಹಾ ಸಮುದ್ರ)

[ಪುಟ 11ರಲ್ಲಿರುವ ಚಿತ್ರ]

ಈ ದಾಖಲೆಯಲ್ಲಿ ಮಾರಿ ನಗರದ ಅರಸನಾದ ಇಆದನ್‌-ಲಿಮ್‌ ತನ್ನ ನಿರ್ಮಾಣಕಾರ್ಯದ ಕುರಿತು ಹೆಮ್ಮೆಯಿಂದ ಮಾತಾಡಿದ್ದಾನೆ

[ಪುಟ 11ರಲ್ಲಿರುವ ಚಿತ್ರ]

ಲಾಮ್ಗೀ-ಮಾರಿಯ ಈ ಮೂರ್ತಿಯ ಆವಿಷ್ಕಾರವು ಮಾರಿ ನಗರವನ್ನು ಸರಿಯಾಗಿ ಕಂಡುಹಿಡಿಯಲು ಸಹಾಯಮಾಡಿತು

[ಪುಟ 12ರಲ್ಲಿರುವ ಚಿತ್ರ]

ಮಾರಿ ನಗರದ ಮೇಲ್ವಿಚಾರಕನಾದ ಎಬಿಹೀಲ್‌ ಪ್ರಾರ್ಥಿಸುತ್ತಿರುವುದು

[ಪುಟ 12ರಲ್ಲಿರುವ ಚಿತ್ರ]

ಅರಮನೆಯಲ್ಲಿ ದೇವತೆಯ ಪ್ರತಿಮೆಯನ್ನು ಇಡುವ ಪೀಠ

[ಪುಟ 12ರಲ್ಲಿರುವ ಚಿತ್ರ]

ಸುಡದ ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ ಕಟ್ಟಡಗಳನ್ನು ತೋರಿಸುವ ಮಾರಿ ನಗರದ ಅವಶೇಷಗಳು

[ಪುಟ 12ರಲ್ಲಿರುವ ಚಿತ್ರ]

ಅರಮನೆಯ ಸ್ನಾನದ ಗೃಹ

[ಪುಟ 13ರಲ್ಲಿರುವ ಚಿತ್ರ]

ಮಾರಿ ನಗರವನ್ನು ಸ್ವಾಧೀನಪಡಿಸಿಕೊಂಡ ನಾರಾಮ್‌ಸಿನ್‌ನ ಪುರಾತನ ಕಲ್ಲಿನ ಫಲಕ

[ಪುಟ 13ರಲ್ಲಿರುವ ಚಿತ್ರ]

ಅರಮನೆಯ ಅವಶೇಷಗಳಲ್ಲಿ ಸುಮಾರು 20,000 ಬೆಣೆಲಿಪಿ ಶಿಲಾಫಲಕಗಳು ಕಂಡುಹಿಡಿಯಲ್ಪಟ್ಟವು

[ಪುಟ 10ರಲ್ಲಿರುವ ಚಿತ್ರ ಕೃಪೆ]

© Mission archéologique française de Tell Hariri - Mari (Syrie)

[ಪುಟ 11ರಲ್ಲಿರುವ ಚಿತ್ರ ಕೃಪೆ]

ದಾಖಲೆಪತ್ರ: Musée du Louvre, Paris; statue: © Mission archéologique française de Tell Hariri - Mari (Syrie)

[ಪುಟ 12ರಲ್ಲಿರುವ ಚಿತ್ರ ಕೃಪೆ]

ಪ್ರತಿಮೆ: Musée du Louvre, Paris; podium and bathroom: © Mission archéologique française de Tell Hariri - Mari (Syrie)

[ಪುಟ 13ರಲ್ಲಿರುವ ಚಿತ್ರ ಕೃಪೆ]

ಪುರಾತನ ಕಲ್ಲಿನ ಫಲಕ: Musée du Louvre, Paris; palace ruins: © Mission archéologique française de Tell Hariri - Mari (Syrie)