ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರನ್ನು “ಆತ್ಮದಿಂದ” ಆರಾಧಿಸಿರಿ

ದೇವರನ್ನು “ಆತ್ಮದಿಂದ” ಆರಾಧಿಸಿರಿ

ದೇವರನ್ನು “ಆತ್ಮದಿಂದ” ಆರಾಧಿಸಿರಿ

“ದೇವರನ್ನು ಯಾರಿಗೆ ಹೋಲಿಸಬಲ್ಲಿರಿ? ಯಾವ ರೂಪವನ್ನು ಆತನಿಗೆ ಕಲ್ಪಿಸಬಲ್ಲಿರಿ?”—ಯೆಶಾಯ 40:​18, “ದ ಜೆರೂಸಲೇಮ್‌ ಬೈಬಲ್‌”

ದೇವರ ಆರಾಧನೆಯಲ್ಲಿ ಧಾರ್ಮಿಕ ವರ್ಣಚಿತ್ರಗಳನ್ನು ಉಪಯೋಗಿಸುವುದು ಸ್ವೀಕಾರಾರ್ಹವಾದ ವಿಷಯವೆಂದು ಪ್ರಾಯಶಃ ನೀವು ಯಥಾರ್ಥವಾಗಿ ನಂಬುತ್ತೀರಿ. ಅದು ನಿಮ್ಮನ್ನು ಅದೃಶ್ಯನಾದ ಮತ್ತು ವ್ಯಕ್ತಿಸ್ವರೂಪವಿಲ್ಲದವನೂ ಅಮೂರ್ತನೂ ಆಗಿ ತೋರಿಬರುವ, ಪ್ರಾರ್ಥನೆಯನ್ನು ಕೇಳುವಾತನ ಹೆಚ್ಚು ಸಮೀಪಕ್ಕೆ ತರಿಸುತ್ತದೆಂದು ನೀವೆಣಿಸಬಹುದು.

ಆದರೆ ದೇವರ ಬಳಿಗೆ ಬರಲು ನಮ್ಮ ಸ್ವಂತ ವಿಧಾನವನ್ನು ಆರಿಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ನಮಗಿದೆಯೆ? ಯಾವುದು ಸ್ವೀಕರಣೀಯ, ಯಾವುದು ಸ್ವೀಕರಣೀಯವಲ್ಲವೆಂದು ಹೇಳುವ ಅಂತಿಮ ಅಧಿಕಾರಿ ದೇವರೇ ಆಗಿರಬೇಕಲ್ಲವೊ? ಯೇಸು ಈ ಕೆಳಗಿನಂತೆ ಹೇಳಿದಾಗ ಆ ವಿಷಯದ ಕುರಿತು ದೇವರ ದೃಷ್ಟಿಕೋನವನ್ನು ತಿಳಿಯಪಡಿಸಿದನು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರಲಾರನು.” (ಯೋಹಾನ 14:6) * ಧಾರ್ಮಿಕ ವರ್ಣಚಿತ್ರಗಳನ್ನು ಅಥವಾ ಇನ್ನಾವುದೇ ಪವಿತ್ರ ವಸ್ತುಗಳನ್ನು ಉಪಯೋಗಿಸದಿರಲು ಈ ಮಾತುಗಳೇ ಸಾಕು.

ಹೌದು, ಯೆಹೋವ ದೇವರು ಅಂಗೀಕರಿಸುವಂಥ ಒಂದು ನಿರ್ದಿಷ್ಟ ರೀತಿಯ ಆರಾಧನೆಯಿದೆ. ಅದು ಯಾವುದು? ಇನ್ನೊಂದು ಸಂದರ್ಭದಲ್ಲಿ ಯೇಸು ವಿವರಿಸಿದ್ದು: “ಸತ್ಯಾರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲವು ಬರುತ್ತದೆ​—ವಾಸ್ತವದಲ್ಲಿ ಅದು ಈಗಾಗಲೇ ಬಂದಿದೆ: ಆ ರೀತಿಯ ಆರಾಧಕನನ್ನೇ ತಂದೆಯು ಬಯಸುತ್ತಾನೆ. ದೇವರು ಆತ್ಮಸ್ವರೂಪನು ಮತ್ತು ಆತನನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆತನನ್ನು ಆರಾಧಿಸತಕ್ಕದ್ದು.”​—ಯೋಹಾನ 4:​23, 24.

“ಆತ್ಮಸ್ವರೂಪ”ನಾದ ದೇವರನ್ನು ಭೌತಿಕ ಪ್ರತಿಮೆಯೊಂದು ಪ್ರತಿನಿಧಿಸಸಾಧ್ಯವೊ? ಇಲ್ಲ. ಒಂದು ಧಾರ್ಮಿಕ ವರ್ಣಚಿತ್ರವು ಎಷ್ಟೇ ಸುಂದರವಾಗಿರಲಿ, ಅದು ದೇವರ ಮಹಿಮೆಗೆ ಸರಿಸಾಟಿಯಾಗಿರುವುದಿಲ್ಲ. ಆದುದರಿಂದ, ಒಂದು ಚಿತ್ರವು ಎಂದಿಗೂ ಆತನ ಸತ್ಯವಾದ ಪ್ರತಿನಿಧೀಕರಣವಾಗಿರಲಾರದು. (ರೋಮಾಪುರ 1:​22, 23) ಒಬ್ಬನು ಮಾನವಕೃತ ಧಾರ್ಮಿಕ ವರ್ಣಚಿತ್ರದ ಮೂಲಕ ದೇವರನ್ನು ಸಮೀಪಿಸುವಲ್ಲಿ, ‘ಸತ್ಯದಿಂದ ಆರಾಧಿಸುವವನಾಗುವನೊ?’

ಬೈಬಲಿನ ಸ್ಪಷ್ಟ ಬೋಧನೆ

ವಿಗ್ರಹಗಳನ್ನು ಆರಾಧನಾ ವಸ್ತುಗಳಾಗಿ ಮಾಡುವುದನ್ನು ದೇವರ ಧರ್ಮಶಾಸ್ತ್ರವು ನಿಷೇಧಿಸಿತು. ದಶಾಜ್ಞೆಗಳಲ್ಲಿ ಎರಡನೆಯದು ಆಜ್ಞಾಪಿಸಿದ್ದು: “ನೀವೇ ಕೆತ್ತಿದ ಮೂರ್ತಿಯನ್ನಾಗಲಿ ಅಥವಾ ಸ್ವರ್ಗದಲ್ಲಿ ಅಥವಾ ಕೆಳಗೆ ಭೂಮಿಯಲ್ಲಿ ಅಥವಾ ಭೂಮಿಯ ಕೆಳಗಿನ ನೀರಿನಲ್ಲಿರುವ ಯಾವುದರ ಹೋಲಿಕೆಯನ್ನಾಗಲಿ ಮಾಡಬಾರದು; ನೀವು ಅವುಗಳಿಗೆ ಅಡ್ಡಬೀಳಲೂ ಬಾರದು, ಅವುಗಳನ್ನು ಸೇವಿಸಲೂ ಬಾರದು.” (ವಿಮೋಚನಕಾಂಡ 20:​4, 5) ಪ್ರೇರಿತವಾದ ಕ್ರೈಸ್ತ ಶಾಸ್ತ್ರವೂ ಆಜ್ಞಾಪಿಸುವುದು: “ವಿಗ್ರಹಾರಾಧನೆಯಿಂದ ದೂರವಿರಿ.”​—1 ಕೊರಿಂಥ 10:14.

ನಿಜ, ತಮ್ಮ ಆರಾಧನೆಯಲ್ಲಿನ ವಿಗ್ರಹಗಳ ಉಪಯೋಗವು ವಿಗ್ರಹಾರಾಧನೆಯಲ್ಲವೆಂದು ಅನೇಕರು ವಾದಿಸುತ್ತಾರೆ. ದೃಷ್ಟಾಂತಕ್ಕೆ, ಆರ್ತೊಡಾಕ್ಸ್‌ ಕ್ರೈಸ್ತರು ಯಾವುದರ ಮುಂದೆ ತಲೆಬಗ್ಗಿಸಿ, ಮೊಣಕಾಲೂರಿ, ಪ್ರಾರ್ಥಿಸುತ್ತಾರೊ ಆ ಧಾರ್ಮಿಕ ವರ್ಣಚಿತ್ರಗಳನ್ನು, ತಾವು ನಿಜವಾಗಿಯೂ ಆರಾಧಿಸುತ್ತೇವೆಂಬುದನ್ನು ಅನೇಕವೇಳೆ ಅಲ್ಲಗಳೆಯುತ್ತಾರೆ. ಒಬ್ಬ ಆರ್ತೊಡಾಕ್ಸ್‌ ಪಾದ್ರಿ ಬರೆದುದು: “ಅವು ಪವಿತ್ರ ವಸ್ತುಗಳಾಗಿರುವುದರಿಂದ ಮತ್ತು ಆ ಧಾರ್ಮಿಕ ವರ್ಣಚಿತ್ರಗಳು ಏನನ್ನು ಚಿತ್ರಿಸುತ್ತವೊ ಅದನ್ನು ನಾವು ಪೂಜ್ಯವೆಂದೆಣಿಸುವುದರಿಂದ ಅವನ್ನು ಗೌರವಿಸುತ್ತೇವೆ.”

ಆದರೂ, ಉಳಿಯುವಂಥ ಪ್ರಶ್ನೆಯೇನಂದರೆ: ಪರೋಕ್ಷವಾದ ಪೂಜೆಯೆಂದು ಹೇಳಲ್ಪಡುವ ಉದ್ದೇಶಕ್ಕಾದರೂ ದೇವರು ಧಾರ್ಮಿಕ ವರ್ಣಚಿತ್ರಗಳ ಉಪಯೋಗಕ್ಕೆ ಒಪ್ಪಿಗೆಯನ್ನು ಕೊಡುತ್ತಾನೋ? ಬೈಬಲು ಎಲ್ಲಿಯೂ ಇಂತಹ ಆಚಾರವನ್ನು ಅನುಮತಿಸುವುದಿಲ್ಲ. ಯೆಹೋವನನ್ನು ಪೂಜಿಸುವ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಾ ಇಸ್ರಾಯೇಲ್ಯರು ಬಸವನ ಮೂರ್ತಿಯನ್ನು ಮಾಡಿದಾಗ, ಅವರು ಧರ್ಮಭ್ರಷ್ಟ ಕೆಲಸವನ್ನು ಮಾಡಿದ್ದಾರೆಂದು ಹೇಳುತ್ತ, ಯೆಹೋವನು ತನ್ನ ಬಲವಾದ ಅಸಮಾಧಾನವನ್ನು ವ್ಯಕ್ತಪಡಿಸಿದನು.​—ವಿಮೋಚನಕಾಂಡ 32:​4-7.

ಮರೆಯಲ್ಲಿರುವ ಅಪಾಯ

ಆರಾಧನೆಯಲ್ಲಿ ಸ್ಪರ್ಶ್ಯ ವಸ್ತುಗಳ ಉಪಯೋಗವು ಅಪಾಯಕರವಾದ ಆಚಾರವಾಗಿದೆ. ಅದು ಜನರನ್ನು, ಅವರು ಆ ವಸ್ತುವು ಯಾರನ್ನು ಪ್ರತಿನಿಧಿಸುತ್ತದೆಂದು ಹೇಳಲಾಗುತ್ತದೋ ಆ ದೇವರನ್ನು ಆರಾಧಿಸುವ ಬದಲಿಗೆ ಆ ವಸ್ತುವನ್ನೇ ಆರಾಧಿಸುವಂತೆ ಸುಲಭವಾಗಿ ಪ್ರೇರಿಸಬಹುದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಆ ಧಾರ್ಮಿಕ ವರ್ಣಚಿತ್ರವು ವಿಗ್ರಹಾರಾಧನೆಗಾಗಿ ಗಮನದ ಕೇಂದ್ರವಾಗುತ್ತದೆ.

ಇಸ್ರಾಯೇಲ್ಯರ ದಿನಗಳಲ್ಲಿ ಅನೇಕ ವಸ್ತುಗಳು ಹೀಗಾಗಿ ಪರಿಣಮಿಸಿದವು. ಉದಾಹರಣೆಗೆ, ಅರಣ್ಯದಲ್ಲಿನ ಅವರ ಪ್ರಯಾಣದ ಸಮಯದಲ್ಲಿ ಮೋಶೆಯು ಒಂದು ತಾಮ್ರದ ಹಾವನ್ನು ಮಾಡಿದನು. ಆದಿಯಲ್ಲಿ, ಕಂಬದ ಮೇಲೆ ಇಡಲ್ಪಟ್ಟ ಆ ಹಾವಿನ ರೂಪವು ಜನರನ್ನು ಗುಣಪಡಿಸುವ ಸಾಧನವಾಯಿತು. ಹಾವುಕಡಿತದ ಶಿಕ್ಷೆ ಪಡೆದವರು ಆ ತಾಮ್ರದ ಹಾವನ್ನು ನೋಡುವ ಮೂಲಕ ದೇವರ ಸಹಾಯವನ್ನು ಪಡೆಯಸಾಧ್ಯವಿತ್ತು. ಆದರೆ ಜನರು ವಾಗ್ದತ್ತ ದೇಶದಲ್ಲಿ ನೆಲೆಸಿದ ಬಳಿಕ ಅವರು ಈ ಹಾವಿದ್ದ ಕಂಬವನ್ನು, ಆ ತಾಮ್ರದ ಹಾವಿಗೇ ಗುಣಮಾಡುವ ಶಕ್ತಿ ಇದೆಯೊ ಎಂಬಂತೆ, ವಿಗ್ರಹವನ್ನಾಗಿ ಮಾಡಿದರು. ಅವರು ಅದರ ಮುಂದೆ ಧೂಪವನ್ನು ಸುಟ್ಟದ್ದು ಮಾತ್ರವಲ್ಲ, ಅದಕ್ಕೆ ನೆಹುಷ್ಟಾನ್‌ ಎಂಬ ಹೆಸರನ್ನೂ ಕೊಟ್ಟರು.​—ಅರಣ್ಯಕಾಂಡ 21:8, 9; 2 ಅರಸುಗಳು 18:4.

ಇಸ್ರಾಯೇಲ್ಯರು ಒಡಂಬಡಿಕೆಯ ಮಂಜೂಷವನ್ನೂ ತಮ್ಮ ಶತ್ರುಗಳೆದುರು ಪೀಡೆ ನಿವಾರಿಸುವ ರಕ್ಷೆಯಾಗಿ ಉಪಯೋಗಿಸಿ, ವಿಪತ್ಕಾರಕ ಫಲಿತಾಂಶಗಳನ್ನು ಅನುಭವಿಸಿದರು. (1 ಸಮುವೇಲ 4:​3, 4; 5:11) ಮತ್ತು ಯೆರೆಮೀಯನ ದಿನಗಳಲ್ಲಿ, ಯೆರೂಸಲೇಮಿನ ನಿವಾಸಿಗಳು ದೇವಾಲಯದಲ್ಲಿ ಆರಾಧಿಸಲ್ಪಡುತ್ತಿದ್ದ ದೇವರ ವಿಷಯದಲ್ಲಿ ಲಕ್ಷ್ಯಕೊಡುವ ಬದಲಿಗೆ ದೇವಾಲಯಕ್ಕೇ ಹೆಚ್ಚಿನ ಲಕ್ಷ್ಯವನ್ನು ಕೊಟ್ಟರು.​—ಯೆರೆಮೀಯ 7:​12-15.

ದೇವರ ಬದಲು ವಸ್ತುಗಳನ್ನೇ ಆರಾಧಿಸುವ ಪ್ರವೃತ್ತಿ ಈಗಲೂ ವ್ಯಾಪಕವಾಗಿದೆ. ಸಂಶೋಧಕ ವಿಟಾಲಿ ಇವಾನ್ಯಿಚ್‌ ಪೆಟ್ರೆಂಕೋ ಹೇಳಿದ್ದು: “ಧಾರ್ಮಿಕ ವರ್ಣಚಿತ್ರಗಳು ಆರಾಧನೆಯ ವಸ್ತುವಾಗುವ ಮತ್ತು ವಿಗ್ರಹಾರಾಧನೆಯಾಗಿ ಪರಿಣಮಿಸುವ ಅಪಾಯವನ್ನು ತರುತ್ತದೆ. . . . ಇದು ಮೂಲತಃ ಜನಪ್ರಿಯ ನಂಬಿಕೆಗಳ ಮೂಲಕ ಧಾರ್ಮಿಕ ವರ್ಣಚಿತ್ರದ ಆರಾಧನೆಯೊಳಕ್ಕೆ ತರಲ್ಪಟ್ಟ ವಿಧರ್ಮಿ ವಿಚಾರವಾಗಿತ್ತೆಂದು ಒಬ್ಬನು ಒಪ್ಪಿಕೊಳ್ಳಲೇ ಬೇಕು.” ಅದೇ ರೀತಿ, ಗ್ರೀಕ್‌ ಆರ್ತೊಡಾಕ್ಸ್‌ ಪಾದ್ರಿ, ದೀಮೀಟ್ರೀಯಾಸ್‌ ಕಾನ್‌ಸ್ಟಾಂಟಿಲಾಸ್‌, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚನ್ನು ಅರ್ಥಮಾಡಿಕೊಳ್ಳುವುದು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಹೇಳುವುದು: “ಒಂದು ಧಾರ್ಮಿಕ ವರ್ಣಚಿತ್ರವನ್ನು ಒಬ್ಬ ಕ್ರೈಸ್ತನು ಆರಾಧನೆಯ ವಸ್ತುವಾಗಿ ಮಾಡಿಕೊಳ್ಳಸಾಧ್ಯವಿದೆ.”

ಧಾರ್ಮಿಕ ವರ್ಣಚಿತ್ರಗಳು ಸಂಬಂಧಸೂಚಕ ಆರಾಧನೆಗೆ ಕೇವಲ ಸಹಾಯಕಗಳು ಎಂಬ ವಾದವು ತೀರ ಸಂಶಯಾಸ್ಪದವಾಗಿದೆ. ಏಕೆ? ಮರಿಯಳು ಮತ್ತು “ಸಂತರ” ನಿರ್ದಿಷ್ಟವಾದ ಧಾರ್ಮಿಕ ವರ್ಣಚಿತ್ರಗಳು, ಬಹು ಹಿಂದೆ ಸತ್ತಿರುವ ಒಂದೇ ವ್ಯಕ್ತಿಯನ್ನು ಪ್ರತಿನಿಧಿಸುವ ಇತರ ಧಾರ್ಮಿಕ ವರ್ಣಚಿತ್ರಗಳಿಗಿಂತ ಹೆಚ್ಚು ಭಕ್ತಿಗೆ ಅರ್ಹವೂ ಹೆಚ್ಚು ಉಪಯುಕ್ತವೂ ಆಗಿವೆಯೆಂದು ಪರಿಗಣಿಸಲ್ಪಡುತ್ತವೆ ಎಂಬ ಮಾತು ನಿಜವಲ್ಲವೊ? ಉದಾಹರಣೆಗೆ, ಗ್ರೀಸ್‌ನ ಟೀನಾಸ್‌ನಲ್ಲಿ ಮರಿಯಳನ್ನು ಪ್ರತಿನಿಧಿಸುವ ಒಂದು ಧಾರ್ಮಿಕ ವರ್ಣಚಿತ್ರಕ್ಕೆ ಅದರದ್ದೇ ಆದ ಆರ್ತೊಡಾಕ್ಸ್‌ ಹಿಂಬಾಲಕರಿದ್ದಾರೆ. ಅದೇ ಸಮಯದಲ್ಲಿ, ಉತ್ತರ ಗ್ರೀಸ್‌ನ ಸೂಮೇಲಾದ ಮರಿಯಳನ್ನು ಪ್ರತಿನಿಧಿಸುವ ಧಾರ್ಮಿಕ ವರ್ಣಚಿತ್ರಕ್ಕೆ ಅಷ್ಟೇ ನಂಬಿಗಸ್ತರಾದ ಭಕ್ತರು ಇದ್ದಾರೆ. ಈ ಎರಡೂ ಗುಂಪುಗಳು ತಮ್ಮ ಧಾರ್ಮಿಕ ವರ್ಣಚಿತ್ರವೇ ಶ್ರೇಷ್ಠವೆಂದೂ, ಅದು ಇನ್ನೊಂದಕ್ಕಿಂತ ಹೆಚ್ಚು ಭಾವೋತ್ತೇಜಕ ಚಮತ್ಕಾರಗಳನ್ನು ನಡೆಸುತ್ತದೆಂದೂ ನಂಬುತ್ತಾರೆ. ಆದರೆ ಈ ಎರಡು ಧಾರ್ಮಿಕ ವರ್ಣಚಿತ್ರಗಳೂ ದೀರ್ಘಕಾಲದ ಹಿಂದೆ ಸತ್ತಿದ್ದ ಒಂದೇ ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಹೀಗೆ ಆಚರಣೆಯಲ್ಲಿ, ಜನರು ಕೆಲವು ಧಾರ್ಮಿಕ ವರ್ಣಚಿತ್ರಗಳಿಗೆ ನಿಜ ಶಕ್ತಿಯಿದೆಯೆಂದು ನಂಬಿ ಅವುಗಳನ್ನೇ ಆರಾಧಿಸುತ್ತಾರೆ.

“ಸಂತರಿಗೆ” ಪ್ರಾರ್ಥಿಸುವುದೊ ಮರಿಯಳಿಗೊ?

ಆದರೆ ಮರಿಯಳು ಇಲ್ಲವೆ “ಸಂತರನ್ನು” ಪೂಜಿಸುವ ವಿಷಯದಲ್ಲೇನು? ಸೈತಾನನ ಶೋಧನೆಗೆ ಉತ್ತರ ಕೊಡುತ್ತ, ಯೇಸು ಧರ್ಮೋಪದೇಶಕಾಂಡ 6:13ಕ್ಕೆ ಸೂಚಿಸಿ ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು.” (ಮತ್ತಾಯ 4:10) ಆ ಬಳಿಕ ಅವನು, ಸತ್ಯಾರಾಧಕರು “ತಂದೆಯನ್ನು” ಹೊರತು ಇನ್ನಾರನ್ನೂ ಆರಾಧಿಸುವುದಿಲ್ಲವೆಂದು ಹೇಳಿದನು. (ಯೋಹಾನ 4:23) ಇದನ್ನು ಗ್ರಹಿಸಿದ ಒಬ್ಬ ದೇವದೂತನು, ತನ್ನನ್ನು ಆರಾಧಿಸಲು ಪ್ರಯತ್ನಿಸಿದ ಅಪೊಸ್ತಲ ಯೋಹಾನನಿಗೆ ಹೇಳಿದ್ದು: “ಹಾಗೆ ಮಾಡಬೇಡ . . . ನೀನು ಆರಾಧಿಸಲೇ ಬೇಕಾಗಿರುವುದು ದೇವರನ್ನು.”​—ಪ್ರಕಟನೆ 22:9.

ತಮ್ಮ ಪರವಾಗಿ ದೇವರಿಗೆ ಬಿನ್ನಹ ಮಾಡುವಂತೆ, ಯೇಸುವಿನ ಭೂಮಾತೆಯಾದ ಮರಿಯಳಿಗೆ ಅಥವಾ ಕೆಲವು “ಸಂತರಿಗೆ” ಪ್ರಾರ್ಥಿಸುವುದು ಸರಿಯೊ? ಬೈಬಲಿನ ನೇರವಾದ ಉತ್ತರವು ಇದೇ: “ದೇವರ ಮತ್ತು ಮಾನವಕುಲದ ಮಧ್ಯೆ ಒಬ್ಬನೇ ಮಧ್ಯಸ್ಥಗಾರನಿದ್ದಾನೆ. ಅವನು ಮನುಷ್ಯನಾದ ಕ್ರಿಸ್ತ ಯೇಸು.”​—1 ತಿಮೊಥೆಯ 2:5.

ದೇವರೊಂದಿಗೆ ನಿಮಗಿರುವ ಸಂಬಂಧವನ್ನು ಕಾಪಾಡಿರಿ

ಧಾರ್ಮಿಕ ವರ್ಣಚಿತ್ರಗಳ ಆರಾಧನೆಯು ಬೈಬಲಿನ ಸ್ಪಷ್ಟ ಬೋಧನೆಗೆ ವಿರುದ್ಧವಾಗಿರುವುದರಿಂದ, ಅದು ಜನರು ದೇವರ ಒಪ್ಪಿಗೆಯನ್ನು ಮತ್ತು ರಕ್ಷಣೆಯನ್ನು ಪಡೆಯುವಂತೆ ಸಹಾಯಮಾಡಲಾರದು. ಇದಕ್ಕೆ ವ್ಯತಿರಿಕ್ತವಾಗಿ, ಒಬ್ಬನೇ ಸತ್ಯದೇವರ ಜ್ಞಾನವನ್ನು ಪಡೆದುಕೊಂಡು, ಆತನ ಸರಿಸಾಟಿಯಿಲ್ಲದ ವ್ಯಕ್ತಿತ್ವ ಹಾಗೂ ಆತನ ಉದ್ದೇಶಗಳು ಮತ್ತು ಮಾನವರೊಂದಿಗಿನ ಆತನ ವ್ಯವಹಾರಗಳ ಪರಿಚಯವನ್ನು ಮಾಡಿಕೊಳ್ಳುವುದರ ಮೇಲೆ ನಿತ್ಯಜೀವವು ಹೊಂದಿಕೊಂಡಿದೆಯೆಂದು ಯೇಸು ಹೇಳಿದನು. (ಯೋಹಾನ 17:3) ಕಣ್ಣು ಕಾಣದ, ಸ್ಪರ್ಶಜ್ಞಾನವಿಲ್ಲದ ಅಥವಾ ಮಾತಾಡಲಾರದ ಧಾರ್ಮಿಕ ವರ್ಣಚಿತ್ರಗಳು ಒಬ್ಬನನ್ನು, ದೇವರನ್ನು ಅರಿತುಕೊಳ್ಳಲಿಕ್ಕಾಗಿ ಅಥವಾ ಆತನನ್ನು ಸ್ವೀಕಾರಾರ್ಹವಾಗಿ ಆರಾಧಿಸಲಿಕ್ಕಾಗಲಿ ಸಹಾಯಮಾಡಲಾರವು. (ಕೀರ್ತನೆ 115:4-8) ಆ ಅತಿ ಪ್ರಾಮುಖ್ಯ ಶಿಕ್ಷಣವು, ದೇವರ ವಾಕ್ಯವಾದ ಬೈಬಲಿನ ಅಧ್ಯಯನದ ಮೂಲಕ ಮಾತ್ರ ದೊರೆಯುತ್ತದೆ.

ಧಾರ್ಮಿಕ ವರ್ಣಚಿತ್ರಗಳ ಆರಾಧನೆಯು ಪ್ರಯೋಜನವನ್ನು ತರದಿರುವುದು ಮಾತ್ರವಲ್ಲ, ಅದು ಆತ್ಮಿಕವಾಗಿ ಅಪಾಯಕಾರಿಯೂ ಆದೀತು. ಹೇಗೆ? ಪ್ರಧಾನವಾಗಿ, ಅದು ಯೆಹೋವನೊಂದಿಗೆ ನಮಗಿರುವ ಸಂಬಂಧದಲ್ಲಿ ಬಿರುಕನ್ನು ಉಂಟುಮಾಡಬಲ್ಲದು. “ಅಸಹ್ಯ ವಿಗ್ರಹಗಳಿಂದ ತನಗೆ ಕೋಪವೆಬ್ಬಿಸಿದ” ಇಸ್ರಾಯೇಲಿನ ಕುರಿತು ದೇವರು ಮುಂತಿಳಿಸಿದ್ದು: “ನಾನು ಅವರಿಂದ ನನ್ನ ಮುಖವನ್ನು ಅಡಗಿಸಿಕೊಳ್ಳುವೆನು.” (ಧರ್ಮೋಪದೇಶಕಾಂಡ 32:​16, 20, ದ ನ್ಯೂ ಅಮೆರಿಕನ್‌ ಬೈಬಲ್‌) ದೇವರೊಂದಿಗೆ ಅವರ ಸಂಬಂಧವನ್ನು ಪುನಃ ಕಟ್ಟುವುದು, ‘ಪಾಪಕರವಾದ ವಿಗ್ರಹಗಳನ್ನು ತಳ್ಳಿಹಾಕುವುದನ್ನು’ ಅರ್ಥೈಸಿತು.​—ಯೆಶಾಯ 31:6, 7, ಎನ್‌.ಎ.ಬಿ.

ಆದಕಾರಣ, ಈ ಶಾಸ್ತ್ರೀಯ ಸಲಹೆ ಎಷ್ಟು ಸೂಕ್ತವಾಗಿದೆ: “ನನ್ನ ಚಿಕ್ಕ ಮಕ್ಕಳೇ, ವಿಗ್ರಹಗಳ ವಿಷಯದಲ್ಲಿ ಎಚ್ಚರಿಕೆ ವಹಿಸಿರಿ”!​—1 ಯೋಹಾನ 5:​21, ಎನ್‌.ಎ.ಬಿ.

[ಪಾದಟಿಪ್ಪಣಿ]

^ ಪ್ಯಾರ. 4 ಬೇರೆ ರೀತಿಯಲ್ಲಿ ಹೇಳಲ್ಪಡದಿರುವಲ್ಲಿ, ಎಲ್ಲ ಶಾಸ್ತ್ರವಚನಗಳ ಉದ್ಧರಣೆಗಳನ್ನು ಕ್ಯಾಥೊಲಿಕ್‌ ಜೆರೂಸಲೇಮ್‌ ಬೈಬಲ್‌ನಿಂದ ತೆಗೆಯಲಾಗಿದೆ.

[ಪುಟ 6ರಲ್ಲಿರುವ ಚೌಕ]

“ಆತ್ಮದಿಂದ” ಆರಾಧಿಸಲು ಸಹಾಯ ಪಡೆದುಕೊಂಡವರು

ಅಲ್ಬೇನಿಯದ ಆರ್ತೊಡಾಕ್ಸ್‌ ಚರ್ಚಿನಲ್ಲಿ ಆಲಿವೇರಾ ಎಂಬಾಕೆ ಧರ್ಮಶ್ರದ್ದೆಯಿದ್ದ ಸದಸ್ಯೆಯಾಗಿದ್ದಳು. 1967ರಲ್ಲಿ ಆ ದೇಶವು ಧರ್ಮವನ್ನೇ ನಿಷೇಧಿಸಿದಾಗ, ಆಲಿವೇರಾ ಗುಪ್ತವಾಗಿ ತನ್ನ ಧಾರ್ಮಿಕ ಆಚಾರಗಳನ್ನು ನಡೆಸುತ್ತ ಮುಂದುವರಿದಳು. ಆಕೆಗೆ ಸಿಗುತ್ತಿದ್ದ ಚಿಕ್ಕ ಮೊತ್ತದ ಪಿಂಚಣಿಯಲ್ಲಿ ಹೆಚ್ಚಿನದನ್ನು ಆಕೆ ಬಂಗಾರ ಮತ್ತು ಬೆಳ್ಳಿಯ ಧಾರ್ಮಿಕ ವರ್ಣಚಿತ್ರಗಳು, ಧೂಪ ಮತ್ತು ಮೋಂಬತ್ತಿಯನ್ನು ಕೊಂಡುಕೊಳ್ಳಲು ಉಪಯೋಗಿಸುತ್ತಿದ್ದಳು. ಆಕೆ ಅವನ್ನು ತನ್ನ ಹಾಸಿಗೆಯಲ್ಲಿ ಅಡಗಿಸಿಟ್ಟು, ಅವನ್ನು ಯಾರಾದರೂ ನೋಡಿಬಿಟ್ಟಾರು ಅಥವಾ ಕದ್ದುಬಿಟ್ಟಾರು ಎಂಬ ಭಯದಿಂದ ಅನೇಕವೇಳೆ ಹತ್ತಿರದ ಕುರ್ಚಿಯಲ್ಲೇ ಮಲಗುತ್ತಿದ್ದಳು. ಯೆಹೋವನ ಸಾಕ್ಷಿಗಳು 1990ನೆಯ ದಶಕದ ಆದಿಭಾಗದಲ್ಲಿ ಆಕೆಯನ್ನು ಭೇಟಿಮಾಡಿದಾಗ, ಆಲಿವೇರಾ ಅವರ ಸಂದೇಶದಲ್ಲಿ ಸತ್ಯವಿದೆಯೆಂದು ಕಂಡುಹಿಡಿದಳು. ಸತ್ಯಾರಾಧನೆಯು “ಆತ್ಮದಿಂದ” ಇರಬೇಕೆಂಬುದರ ಕುರಿತು ಬೈಬಲು ಏನು ಹೇಳುತ್ತದೆಂದು ಆಕೆ ತಿಳಿದು, ಧಾರ್ಮಿಕ ವರ್ಣಚಿತ್ರಗಳ ಉಪಯೋಗದ ವಿಷಯದಲ್ಲಿ ದೇವರ ಅನಿಸಿಕೆ ಏನೆಂಬುದನ್ನು ಕಲಿತಳು. (ಯೋಹಾನ 4:​24, ದ ಜೆರೂಸಲೇಮ್‌ ಬೈಬಲ್‌) ಆಕೆಯೊಂದಿಗೆ ಅಧ್ಯಯನ ಮಾಡುತ್ತಿದ್ದ ಸಾಕ್ಷಿ ಸ್ತ್ರೀ, ಪ್ರತಿ ಬಾರಿ ಆಕೆಯ ಮನೆಯಲ್ಲಿ ಭೇಟಿ ಮಾಡಿದಾಗ, ಧಾರ್ಮಿಕ ವರ್ಣಚಿತ್ರಗಳು ಕಡಮೆಯಾಗುತ್ತಾ ಹೋಗುವುದನ್ನು ಗಮನಿಸಿದಳು. ಕೊನೆಗೆ ಒಂದೂ ಕಂಡುಬರಲಿಲ್ಲ. ದೀಕ್ಷಾಸ್ನಾನವಾದ ಮೇಲೆ ಆಲಿವೇರಾ ಹೇಳಿದ್ದು: “ಇಂದು ಆ ನಿರರ್ಥಕವಾದ ಧಾರ್ಮಿಕ ವರ್ಣಚಿತ್ರಗಳ ಬದಲು ಯೆಹೋವನ ಪವಿತ್ರಾತ್ಮ ನನಗಿದೆ. ನನ್ನನ್ನು ತಲಪಲಿಕ್ಕಾಗಿ ಆತನ ಆತ್ಮಕ್ಕೆ ಧಾರ್ಮಿಕ ವರ್ಣಚಿತ್ರಗಳ ಅಗತ್ಯವಿಲ್ಲವೆಂಬುದಕ್ಕೆ ನಾನು ತುಂಬ ಕೃತಜ್ಞಳು.”

ಗ್ರೀಸ್‌ನ ಲೆಸ್ವಾಸ್‌ ದ್ವೀಪದಲ್ಲಿರುವ ಅಥೀನ, ಆರ್ತೊಡಾಕ್ಸ್‌ ಚರ್ಚಿನ ಬಹಳ ಕ್ರಿಯಾಶೀಲ ಸದಸ್ಯಳಾಗಿದ್ದಳು. ಆಕೆ ಚರ್ಚ್‌ ಗಾಯಕವೃಂದದ ಸದಸ್ಯೆಯೂ ಆಗಿದ್ದು, ಧಾರ್ಮಿಕ ವರ್ಣಚಿತ್ರಗಳ ಉಪಯೋಗ ಸಮೇತವಾಗಿ ಧಾರ್ಮಿಕ ಸಂಪ್ರದಾಯಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಳು. ಆಕೆಗೆ ಕಲಿಸಲ್ಪಟ್ಟಿರುವುದೆಲ್ಲವೂ ಬೈಬಲಿಗನುಸಾರವಾದದ್ದಲ್ಲ ಎಂಬುದನ್ನು ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳು ಆಕೆಗೆ ಸಹಾಯಮಾಡಿದರು. ಈ ವಿಷಯಗಳಲ್ಲಿ ಆರಾಧನೆಯಲ್ಲಿ ಧಾರ್ಮಿಕ ವರ್ಣಚಿತ್ರಗಳು ಮತ್ತು ಕ್ರೂಜೆಯ ಉಪಯೋಗವೂ ಸೇರಿದ್ದವು. ಈ ಧಾರ್ಮಿಕ ಪೂಜಾವಸ್ತುಗಳ ಮೂಲದ ಕುರಿತು ತನ್ನದೇ ಆದ ಸಂಶೋಧನೆಯನ್ನು ನಡೆಸುತ್ತೇನೆಂದು ಅಥೀನ ಪಟ್ಟುಹಿಡಿದಳು. ಅನೇಕ ಪರಾಮರ್ಶನ ಗ್ರಂಥಗಳಲ್ಲಿ ಭಾರೀ ಸಂಶೋಧನೆ ನಡೆಸಿದ ಬಳಿಕ, ಈ ವಸ್ತುಗಳ ಮೂಲ ಕ್ರಿಸ್ತೀಯವಲ್ಲ ಎಂಬುದು ಅವಳಿಗೆ ಮನದಟ್ಟಾಯಿತು. ದೇವರನ್ನು “ಆತ್ಮದಿಂದ” ಆರಾಧಿಸಲು ಆಕೆಗಿದ್ದ ಅಪೇಕ್ಷೆಯು, ಆ ಧಾರ್ಮಿಕ ವರ್ಣಚಿತ್ರಗಳು ದುಬಾರಿ ಬೆಲೆಯುಳ್ಳವುಗಳಾಗಿದ್ದರೂ, ಅವನ್ನು ತ್ಯಜಿಸುವಂತೆ ಮಾಡಿತು. ಆದರೆ, ದೇವರನ್ನು ಆತ್ಮಿಕವಾಗಿ ಶುದ್ಧವಾದ ಮತ್ತು ಸ್ವೀಕಾರಾರ್ಹವಾದ ರೀತಿಯಲ್ಲಿ ಆರಾಧಿಸುವ ಸಲುವಾಗಿ ಅಥೀನ ಯಾವುದೇ ನಷ್ಟವನ್ನು ಸಹಿಸಲು ಸಂತೋಷದಿಂದ ಸಿದ್ಧಳಾಗಿದ್ದಳು.​—ಅ. ಕೃತ್ಯಗಳು 19:19.

[ಪುಟ 7ರಲ್ಲಿರುವ ಚೌಕ/ಚಿತ್ರ]

ಧಾರ್ಮಿಕ ವರ್ಣಚಿತ್ರಗಳು ಕೇವಲ ಕಲಾಕೃತಿಗಳೊ?

ಇತ್ತೀಚಿನ ವರುಷಗಳಲ್ಲಿ ಆರ್ತೊಡಾಕ್ಸ್‌ ಧಾರ್ಮಿಕ ವರ್ಣಚಿತ್ರಗಳನ್ನು ಲೋಕಾದ್ಯಂತವಾಗಿ ಶೇಖರಿಸಲಾಗಿದೆ. ಇದರ ಸಂಗ್ರಹಕರು ಸಾಮಾನ್ಯವಾಗಿ ಈ ಧಾರ್ಮಿಕ ವರ್ಣಚಿತ್ರಗಳನ್ನು ಪವಿತ್ರ ಧಾರ್ಮಿಕ ಕೃತಿಗಳಾಗಿ ನೋಡದೆ, ಬೈಸಾಂಟೀನ್‌ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಗಳಾಗಿ ವೀಕ್ಷಿಸುತ್ತಾರೆ. ನಾಸ್ತಿಕರೆಂದು ಹೇಳಿಕೊಳ್ಳುವವರ ಮನೆ ಮತ್ತು ಆಫೀಸುಗಳಲ್ಲಿಯೂ ಇಂತಹ ಅನೇಕ ಧಾರ್ಮಿಕ ವರ್ಣಚಿತ್ರಗಳು ಕಂಡುಬರುವುದು ಅಸಾಮಾನ್ಯವಲ್ಲ.

ಆದರೆ ಯಥಾರ್ಥ ಕ್ರೈಸ್ತರು ಧಾರ್ಮಿಕ ವರ್ಣಚಿತ್ರದ ಪ್ರಧಾನ ಉದ್ದೇಶವನ್ನು ಮರೆತುಬಿಡುವುದಿಲ್ಲ. ಅದು ಆರಾಧನೆಯ ವಸ್ತುವಾಗಿದೆ. ಒಬ್ಬನಿಗೆ ಧಾರ್ಮಿಕ ವರ್ಣಚಿತ್ರಗಳನ್ನು ಸ್ವತ್ತಾಗಿ ಇಟ್ಟುಕೊಳ್ಳುವ ಹಕ್ಕಿನ ವಿಷಯದಲ್ಲಿ ಕ್ರೈಸ್ತರು ಸವಾಲೆಬ್ಬಿಸುವುದಿಲ್ಲವಾದರೂ, ಅವರು ತಾವೇ ಅವುಗಳನ್ನು ಸ್ವತ್ತಾಗಿಯಾಗಲಿ, ಸಂಗ್ರಹಕರ ಕೃತಿಯಂತಾಗಲಿ ಇಟ್ಟುಕೊಳ್ಳುವುದಿಲ್ಲ. ಇದು ದ ಜೆರೂಸಲೇಮ್‌ ಬೈಬಲ್‌ಧರ್ಮೋಪದೇಶಕಾಂಡ 7:26ರಲ್ಲಿ ಕಂಡುಬರುವ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿದೆ: “ನೀವು ಅಸಹ್ಯ ವಸ್ತುವನ್ನು [ಆರಾಧನೆಯಲ್ಲಿ ಉಪಯೋಗಿಸುವ ವಿಗ್ರಹಗಳನ್ನು] ನಿಮ್ಮ ಮನೆಯೊಳಗೆ ತರಬಾರದು, ಹಾಗೆ ತರುವಲ್ಲಿ ನೀವೂ ಅದರಂತೆ ನಿಷೇಧಕ್ಕೊಳಗಾಗುವಿರಿ. ನೀವು ಅವನ್ನು ಅಶುದ್ಧವಾದವುಗಳಾಗಿ ಮತ್ತು ಹೇಸಿಗೆಯ ವಸ್ತುಗಳಾಗಿ ನೋಡಬೇಕು.”

[ಪುಟ 7ರಲ್ಲಿರುವ ಚಿತ್ರ]

ದೇವರು ಆರಾಧನೆಯಲ್ಲಿ ವಿಗ್ರಹಗಳ ಉಪಯೋಗವನ್ನು ಅನುಮತಿಸಲಿಲ್ಲ

[ಪುಟ 8ರಲ್ಲಿರುವ ಚಿತ್ರ]

ಬೈಬಲಿನಿಂದ ಸಿಗುವ ಜ್ಞಾನವು ನಾವು ದೇವರನ್ನು ಆತ್ಮದಿಂದ ಆರಾಧಿಸುವಂತೆ ಸಹಾಯಮಾಡುತ್ತದೆ