ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಲೋಕವ್ಯಾಪಕ ಸಹೋದರತ್ವದಿಂದ ಬಲಹೊಂದಿದ್ದು

ನಮ್ಮ ಲೋಕವ್ಯಾಪಕ ಸಹೋದರತ್ವದಿಂದ ಬಲಹೊಂದಿದ್ದು

ಜೀವನ ಕಥೆ

ನಮ್ಮ ಲೋಕವ್ಯಾಪಕ ಸಹೋದರತ್ವದಿಂದ ಬಲಹೊಂದಿದ್ದು

ಥಾಮ್ಸನ್‌ ಕಾಂಗಾಲ ಅವರು ಹೇಳಿದಂತೆ

ಏಪ್ರಿಲ್‌ 24, 1993ರಂದು, ಸಾಂಬಿಯದ ಲುಸಾಕದಲ್ಲಿರುವ 13 ಕಟ್ಟಡಗಳಿರುವ ಹೊಸ ಬ್ರಾಂಚ್‌ ಆಫೀಸ್‌ ಸಂಕೀರ್ಣದ ಪ್ರಾರಂಭೋತ್ಸವಕ್ಕೆ ನನ್ನನ್ನು ಆಮಂತ್ರಿಸಲಾಗಿತ್ತು. ನನಗೆ ನಡೆಯಲು ಕಷ್ಟವಾಗುತ್ತಿದ್ದುದರಿಂದ, ನಮಗೆ ಆ ಸೌಕರ್ಯಗಳನ್ನು ತೋರಿಸುತ್ತಿದ್ದ ಕ್ರೈಸ್ತ ಸಹೋದರಿಯು ವಿನಯಭಾವದಿಂದ, “ನೀವು ಈ ಪ್ರವಾಸದಲ್ಲಿ ಆಗಾಗ ವಿಶ್ರಾಂತಿ ತೆಗೆದುಕೊಳ್ಳಲಾಗುವಂತೆ, ನಾನು ಒಂದು ಕುರ್ಚಿಯನ್ನು ತರಲೋ?” ಎಂದು ಕೇಳಿದಳು. ನಾನು ಕಪ್ಪು ಬಣ್ಣದವನೂ ಆಕೆ ಬಿಳಿಯಳೂ ಆಗಿದ್ದರೂ, ಅವಳು ಅದಕ್ಕೆ ಯಾವುದೇ ಮಹತ್ವವನ್ನು ಕೊಡಲಿಲ್ಲ. ಇದರಿಂದ ನನ್ನ ಹೃದಯ ತುಂಬಿ ಬಂತು, ಮತ್ತು ನಾನು ಆಕೆಗೆ ಉಪಕಾರ ಹೇಳಿದೆ, ಏಕೆಂದರೆ ಆಕೆಯ ದಯಾಭಾವದಿಂದಾಗಿ ನಾನು ಇಡೀ ಬ್ರಾಂಚ್‌ ಸೌಕರ್ಯವನ್ನು ಸಂದರ್ಶಿಸಲು ಸಮರ್ಥನಾದೆ.

ಅನೇಕ ವರುಷಗಳಿಂದ, ಇಂತಹ ಅನುಭವಗಳು ನನಗೆ ಹೃದಯೋಲ್ಲಾಸವನ್ನು ತಂದಿವೆ. ಇದು, ಯೆಹೋವನ ಸಾಕ್ಷಿಗಳ ಕ್ರೈಸ್ತ ಸಹವಾಸದೊಳಗೆ ತನ್ನ ನಿಜ ಶಿಷ್ಯರನ್ನು ಗುರುತಿಸುವ ಪ್ರೀತಿಯು ಅಸ್ತಿತ್ವದಲ್ಲಿದೆ ಎಂಬ ಮನವರಿಕೆಯನ್ನು ನನ್ನಲ್ಲಿ ಸ್ಥಿರೀಕರಿಸಿದೆ. (ಯೋಹಾನ 13:35; 1 ಪೇತ್ರ 2:17) ನನಗೆ 1931ರಲ್ಲಿ ಈ ಕ್ರೈಸ್ತರ ಪರಿಚಯ ಹೇಗಾಯಿತೆಂಬುದನ್ನು ದಯವಿಟ್ಟು ಕೇಳಿರಿ. ಆ ವರುಷವು, ಯೆಹೋವನ ಸಾಕ್ಷಿಗಳೆಂಬ ಬೈಬಲಾಧಾರಿತ ಹೆಸರಿನಿಂದ ತಿಳಿಯಲ್ಪಡಲು ತಮಗಿರುವ ಬಯಕೆಯನ್ನು ಅವರು ಬಹಿರಂಗವಾಗಿ ಘೋಷಿಸಿದ ವರುಷವಾಗಿತ್ತು.​—ಯೆಶಾಯ 43:12.

ಆಫ್ರಿಕದಲ್ಲಿ ನಡೆದ ಆದಿ ಶುಶ್ರೂಷೆ

ನವೆಂಬರ್‌ 1931ರಲ್ಲಿ, 22 ವರ್ಷ ವಯಸ್ಸಿನವನಾಗಿದ್ದ ನಾನು ಉತ್ತರ ರೊಡೇಶ್ಯದ (ಈಗ ಸಾಂಬಿಯ) ಕಾಪರ್‌ಬೆಲ್ಟ್‌ ಪ್ರದೇಶದ ಕೀಟ್ವೇಯಲ್ಲಿ ಜೀವಿಸುತ್ತಿದ್ದೆ. ನಾನು ಯಾರೊಂದಿಗೆ ಫುಟ್‌ಬಾಲ್‌ ಆಡುತ್ತಿದ್ದೆನೊ ಆ ಸ್ನೇಹಿತನು ನನಗೆ ಸಾಕ್ಷಿಗಳ ಪರಿಚಯ ಮಾಡಿಸಿದನು. ನಾನು ಅವರ ಕೆಲವು ಕೂಟಗಳಲ್ಲಿ ಉಪಸ್ಥಿತನಾದ ನಂತರ, ದಕ್ಷಿಣ ಆಫ್ರಿಕದ ಕೇಪ್‌ ಟೌನ್‌ನಲ್ಲಿದ್ದ ಬ್ರಾಂಚ್‌ ಆಫೀಸಿಗೆ, ಹಾರ್ಪ್‌ ಆಫ್‌ ಗಾಡ್‌ ಎಂಬ ಬೈಬಲ್‌ ಅಧ್ಯಯನ ಸಹಾಯಕಕ್ಕಾಗಿ ವಿನಂತಿಸುತ್ತಾ ಪತ್ರ ಬರೆದೆ. * ಆ ಪುಸ್ತಕ ಇಂಗ್ಲಿಷ್‌ನಲ್ಲಿದ್ದುದರಿಂದ ಮತ್ತು ಆ ಭಾಷೆ ನನಗೆ ಅಷ್ಟೊಂದು ಚೆನ್ನಾಗಿ ಗೊತ್ತಿಲ್ಲದಿದ್ದುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟಕರವಾಗಿತ್ತು.

ಬಾಂಗ್ವೀವೂಲೂ ಸರೋವರದ ನೈರುತ್ಯದಲ್ಲಿ, 240 ಕಿಲೊಮೀಟರ್‌ ದೂರದಲ್ಲಿರುವ ಕಾಪರ್‌ಬೆಲ್ಟ್‌ ಪ್ರದೇಶವು, ಬೇರೆ ಪ್ರಾಂತ್ಯಗಳ ಅನೇಕರಿಗೆ ತಾಮ್ರದ ಗಣಿಗಳಲ್ಲಿ ಕೆಲಸವನ್ನು ಒದಗಿಸುತ್ತಿತ್ತು. ಈ ಪ್ರದೇಶದ ಸಮೀಪವೇ ನಾನು ಹುಟ್ಟಿ ಬೆಳೆದಿದ್ದೆ. ಅಲ್ಲಿ ಸಾಕ್ಷಿಗಳ ಅನೇಕ ಗುಂಪುಗಳು ಕ್ರಮವಾಗಿ ಬೈಬಲ್‌ ಅಧ್ಯಯನಕ್ಕಾಗಿ ಕೂಡಿಬರುತ್ತಿದ್ದವು. ಸ್ವಲ್ಪ ಸಮಯಾನಂತರ, ನಾನು ಕೀಟ್ವೇಯಿಂದ ಸಮೀಪದ ಅಂಡೋಲ ಪಟ್ಟಣಕ್ಕೆ ಹೋಗಿ ಅಲ್ಲಿ ಸಾಕ್ಷಿಗಳ ಒಂದು ಗುಂಪಿನೊಂದಿಗೆ ಜೊತೆಗೂಡಲಾರಂಭಿಸಿದೆ. ಆ ಸಮಯದಲ್ಲಿ, ಪ್ರಿನ್ಸ್‌ ಆಫ್‌ ವೇಲ್ಸ್‌ ಎಂಬ ಫುಟ್‌ಬಾಲ್‌ ತಂಡದ ಕ್ಯಾಪ್ಟನ್‌ ನಾನಾಗಿದ್ದೆ. ನಾನು ಮಧ್ಯ ಆಫ್ರಿಕದಲ್ಲಿ ಆಫ್ರಿಕನ್‌ ಲೇಕ್ಸ್‌ ಕಾರ್ಪೊರೇಶನ್‌ ಎಂಬ ಅನೇಕ ಸರಪಣಿ ಮಳಿಗೆಗಳಿದ್ದ ಕಂಪೆನಿಯ ಮ್ಯಾನೆಜರನಾಗಿದ್ದ ಒಬ್ಬ ಬಿಳಿಯನ ಮನೆಯಲ್ಲಿ ಸೇವಕನೂ ಆಗಿದ್ದೆ.

ನನಗೆ ಶಾಲೆಯ ವಿದ್ಯಾಭ್ಯಾಸ ಕೊಂಚವಾಗಿದ್ದರೂ, ನಾನು ಯಾರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆನೊ ಅವರಿಂದ ಸ್ವಲ್ಪ ಇಂಗ್ಲಿಷನ್ನು ಕಲಿತುಕೊಂಡಿದ್ದೆ. ಆದರೂ, ನನ್ನ ಲೌಕಿಕ ವಿದ್ಯಾಭ್ಯಾಸವನ್ನು ಹೆಚ್ಚಿಸುವ ಆಸಕ್ತಿ ನನಗಿದ್ದುದರಿಂದ, ದಕ್ಷಿಣ ರೊಡೇಶ್ಯ (ಈಗ ಸಿಂಬಾಬ್ವೆ) ಪ್ಲಮ್‌ಟ್ರೀಯ ಒಂದು ಶಾಲೆಗೆ ಅರ್ಜಿ ಹಾಕಿದೆ. ಈ ಮಧ್ಯೆ, ಎರಡನೆಯ ಬಾರಿ ಕೇಪ್‌ ಟೌನ್‌ ಬ್ರಾಂಚ್‌ ಆಫೀಸಿಗೆ ನಾನು ಪತ್ರ ಬರೆದೆ. ನನಗೆ ಹಾರ್ಪ್‌ ಆಫ್‌ ಗಾಡ್‌ ಪುಸ್ತಕವು ಸಿಕ್ಕಿದೆಯೆಂದೂ ಯೆಹೋವನನ್ನು ಪೂರ್ಣ ಸಮಯ ಸೇವಿಸುವ ಬಯಕೆ ನನಗಿದೆಯೆಂದೂ ನಾನು ಬರೆದೆ.

ಅವರಿಂದ ಉತ್ತರ ಬಂದಾಗ ನನಗೆ ಆಶ್ಚರ್ಯವಾಯಿತು. ಅದು ಹೇಳಿದ್ದು: “ಯೆಹೋವನನ್ನು ಸೇವಿಸುವ ಬಯಕೆ ನಿಮಗಿದೆಯೆಂಬುದು ಶ್ಲಾಘನೀಯ ಮಾತು. ಅದನ್ನು ಪ್ರಾರ್ಥನೆಯ ವಿಷಯವಾಗಿ ಮಾಡಿರಿ ಎಂದು ನಾವು ಪ್ರೋತ್ಸಾಹಿಸುತ್ತೇವೆ. ಆಗ ಯೆಹೋವನು ನಿಮಗೆ ಸತ್ಯದ ಹೆಚ್ಚು ಉತ್ತಮವಾದ ತಿಳಿವಳಿಕೆಯನ್ನು ಕೊಟ್ಟು, ಆತನನ್ನು ಸೇವಿಸುವ ಅವಕಾಶವನ್ನು ಒದಗಿಸುವನು.” ಆ ಪತ್ರವನ್ನು ಅನೇಕಾವರ್ತಿ ಓದಿದ ಬಳಿಕ, ನಾನೇನು ಮಾಡಲಿ ಎಂದು ಅನೇಕ ಸಾಕ್ಷಿಗಳನ್ನು ಕೇಳಿದೆ. “ಇದು ನಿಜವಾಗಿಯೂ ನಿಮ್ಮ ಅಪೇಕ್ಷೆಯಾಗಿರುವಲ್ಲಿ, ಒಡನೆ ಅದನ್ನು ಆರಂಭಿಸಿರಿ,” ಎಂದರವರು.

ನಾನು ಒಂದು ಇಡೀ ವಾರ ಆ ವಿಷಯದ ಕುರಿತು ಪ್ರಾರ್ಥಿಸಿದ ಬಳಿಕ, ಕೊನೆಗೆ ಐಹಿಕ ವಿದ್ಯಾಭ್ಯಾಸವನ್ನು ಬಿಟ್ಟುಬಿಡಲು ಮತ್ತು ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಮುಂದುವರಿಸಲು ನಿರ್ಧರಿಸಿದೆ. ಮುಂದಿನ ವರುಷ, 1932ರ ಜನವರಿಯಲ್ಲಿ ನಾನು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವ ದೇವರಿಗೆ ನನ್ನ ಸಮರ್ಪಣೆಯನ್ನು ಸೂಚಿಸಿದೆ. ಅಂಡೋಲದಿಂದ ಲೂಆಂಶಾ ಎಂಬ ಹತ್ತಿರದ ಪಟ್ಟಣದಲ್ಲಿ ವಾಸಿಸಲು ಹೋದಾಗ, ಜೊತೆವಿಶ್ವಾಸಿಯಾದ ಜನೆಟ್‌ ಎಂಬವಳನ್ನು ನಾನು ಭೇಟಿಯಾಗಿ, ಸೆಪ್ಟೆಂಬರ್‌ 1934ರಲ್ಲಿ ನಮ್ಮ ವಿವಾಹ ನಡೆಯಿತು. ನಾವು ಮದುವೆ ಮಾಡಿಕೊಂಡಾಗ, ಜನೆಟ್‌ಗೆ ಆಗಲೇ ಒಬ್ಬ ಮಗನೂ ಒಬ್ಬ ಮಗಳೂ ಇದ್ದರು.

ನಾನು ಕ್ರಮೇಣ ಆತ್ಮಿಕವಾಗಿ ಪ್ರಗತಿ ಹೊಂದಿ, 1937ರಲ್ಲಿ ಪೂರ್ಣ ಸಮಯದ ಶುಶ್ರೂಷೆಗೆ ತೊಡಗಿದೆ. ಸ್ವಲ್ಪದರಲ್ಲಿ, ನನ್ನನ್ನು ಈಗ ಸರ್ಕಿಟ್‌ ಮೇಲ್ವಿಚಾರಕರೆಂದು ಕರೆಯುವ ಸಂಚಾರ ಶುಶ್ರೂಷಕನಾಗಿ ನೇಮಿಸಲಾಯಿತು. ಇಂತಹ ಸಂಚರಣ ಮೇಲ್ವಿಚಾರಕರು ಯೆಹೋವನ ಸಾಕ್ಷಿಗಳ ಸಭೆಗಳನ್ನು ಆತ್ಮಿಕವಾಗಿ ಬಲಪಡಿಸಲು ಅವುಗಳಿಗೆ ಭೇಟಿಕೊಡುತ್ತಾರೆ.

ಆರಂಭದ ವರುಷಗಳ ಸಾರುವಿಕೆ

ಜನವರಿ 1938ರಲ್ಲಿ, ಆಫ್ರಿಕದ ಹಳ್ಳಿಯ ಮುಖಂಡನಾದ ಸೊಕೊಂಟ್ವೀ ಎಂಬವನನ್ನು ಭೇಟಿಮಾಡುವಂತೆ ನನಗೆ ಹೇಳಲಾಯಿತು. ಆ ವ್ಯಕ್ತಿ, ಯೆಹೋವನ ಸಾಕ್ಷಿಗಳು ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದನು. ಆ ಸ್ಥಳವನ್ನು ಸೇರಲು ನಾನು ಮೂರು ದಿನಗಳ ಸೈಕಲ್‌ ಪ್ರಯಾಣವನ್ನು ಮಾಡಿದೆ. ಅವನು ನಮ್ಮ ಕೇಪ್‌ ಟೌನ್‌ ಆಫೀಸಿಗೆ ಬರೆದ ಪತ್ರದಿಂದಾಗಿ ನಾನು ಬಂದಿದ್ದೇನೆ ಎಂದು ನಾನು ಅವನಿಗೆ ಹೇಳಲಾಗಿ, ಅವನು ನಿಜವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.

ನಾನು ಒಂದೊಂದು ಗುಡಿಸಲಿಗೂ ಹೋಗಿ ಅವನ ಜನರನ್ನು ಭೇಟಿಮಾಡಿ ಅವರನ್ನು ಇನ್‌ಸಾಕಾ (ಸಾರ್ವಜನಿಕ ಚಪ್ಪರ)ಕ್ಕೆ ಆಮಂತ್ರಿಸಿದೆ. ಅವರು ಕೂಡಿ ಬಂದಾಗ, ನಾನು ಮಾತಾಡಲಾಗಿ, ಅನೇಕ ಬೈಬಲ್‌ ಅಧ್ಯಯನಗಳು ಪ್ರಾರಂಭಿಸಲ್ಪಟ್ಟವು. ಆ ಹಳ್ಳಿಯ ಮುಖಂಡನೂ ಅವನ ಗುಮಾಸ್ತನೂ ಅಲ್ಲಿಯ ಸಭೆಗಳ ಪ್ರಥಮ ಮೇಲ್ವಿಚಾರಕರಾದರು. ಇಂದು, ಆ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸಭೆಗಳಿವೆ. ಈಗ ಆ ಪ್ರದೇಶದ ಹೆಸರು ಸಾಂಫ್ಯಾ ಜಿಲ್ಲೆ ಎಂದಾಗಿದೆ.

ವರುಷ 1942ರಿಂದ 1947ರ ವರೆಗೆ ನಾನು ಲೇಕ್‌ ಬಾಂಗ್ವೀವೂಲೂ ಪ್ರದೇಶದಲ್ಲಿ ಸೇವೆ ಮಾಡಿದೆ. ಪ್ರತಿ ಸಭೆಯೊಂದಿಗೆ ಹತ್ತು ದಿನಗಳನ್ನು ಕಳೆದೆ. ಆಗ ಆತ್ಮಿಕ ಕೊಯ್ಲಿನಲ್ಲಿ ಭಾಗವಹಿಸಲು ಕೆಲಸಗಾರರು ಕಮ್ಮಿಯಾಗಿದ್ದುದರಿಂದ, “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು​—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ,” ಎಂದು ಹೇಳಿದ ನಮ್ಮ ಕರ್ತನಾದ ಯೇಸು ಕ್ರಿಸ್ತನಿಗೆ ಅನಿಸಿದಂತೆಯೇ ನಮಗೂ ಅನಿಸಿತು. (ಮತ್ತಾಯ 9:​36-38) ಆ ಕಾಲದಲ್ಲಿ ಪ್ರಯಾಣವು ಪ್ರಯಾಸಕರವಾಗಿದ್ದುದರಿಂದ, ನಾನು ಸಭೆಗಳಿಗೆ ಭೇಟಿ ಕೊಡುತ್ತಿದ್ದಾಗ, ಜನೆಟ್‌ ಸಾಮಾನ್ಯವಾಗಿ ಮಕ್ಕಳೊಂದಿಗೆ ಲೂಆಂಶಾದಲ್ಲಿ ಇರುತ್ತಿದ್ದಳು. ಆ ಸಮಯದೊಳಗೆ ನಮಗೆ ಇನ್ನೆರಡು ಗಂಡುಮಕ್ಕಳಾಗಿದ್ದರು, ಆದರೆ ಅವರಲ್ಲಿ ಒಂದು ಮಗು ಹತ್ತು ತಿಂಗಳುಗಳಲ್ಲೇ ತೀರಿಹೋಗಿತ್ತು.

ಆ ದಿನಗಳಲ್ಲಿ ಅಷ್ಟೊಂದು ಮೋಟಾರು ವಾಹನಗಳೂ ಇರಲಿಲ್ಲ, ರಸ್ತೆಗಳೂ ಇರಲಿಲ್ಲ. ಒಂದು ದಿನ, ಜನೆಟ್‌ಳ ಸೈಕಲಿನಲ್ಲಿ ನಾನು 200 ಕಿಲೊಮೀಟರ್‌ಗಳ ಪ್ರಯಾಣಕ್ಕೆ ತೊಡಗಿದೆ. ಕೆಲವು ಬಾರಿ, ಚಿಕ್ಕ ನದಿಯನ್ನು ದಾಟಲಿಕ್ಕಾಗಿ, ಸೈಕಲನ್ನು ಹೊತ್ತುಕೊಂಡು, ಒಂದು ಕೈಯಲ್ಲಿ ಅದನ್ನು ಹಿಡಿದುಕೊಂಡು ಇನ್ನೊಂದು ಕೈಯನ್ನು ಈಜಲು ಉಪಯೋಗಿಸುತ್ತಿದ್ದೆ. ಲೂಆಂಶಾದಲ್ಲಿ ಸಾಕ್ಷಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆಯಿತು. ಮತ್ತು 1946ರಲ್ಲಿ, ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 1,850 ಮಂದಿ ನೆರೆದುಬಂದರು.

ನಮ್ಮ ಕೆಲಸಕ್ಕೆ ಬಂದ ವಿರೋಧ

ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಒಂದು ಸಂದರ್ಭದಲ್ಲಿ, ಕಾವಾಂಬ್ವಾದ ಡಿಸ್ಟ್ರಿಕ್ಟ್‌ ಕಮಿಷನರ್‌ ನನ್ನನ್ನು ಕರೆದು ಹೇಳಿದ್ದು: “ವಾಚ್‌ಟವರ್‌ ಸೊಸೈಟಿಯ ಪುಸ್ತಕಗಳು ಈಗ ನಿಷೇಧಿಸಲ್ಪಟ್ಟಿರುವುದರಿಂದ ಅದನ್ನು ಉಪಯೋಗಿಸುವುದನ್ನು ನೀನು ನಿಲ್ಲಿಸಬೇಕು. ಆದರೆ ನಿನ್ನ ಕೆಲಸದಲ್ಲಿ ಉಪಯೋಗಿಸಲು ಬೇರೆ ಪುಸ್ತಕಗಳನ್ನು ನೀನು ಬರೆಯಬೇಕಾಗಿರುವಲ್ಲಿ, ಅದಕ್ಕೆ ಬೇಕಾದ ಸೌಕರ್ಯಗಳನ್ನು ನಾನು ಒದಗಿಸಬಲ್ಲೆ.”

ಆಗ ನಾನು, “ನಮಗಿರುವ ಪುಸ್ತಕಗಳಲ್ಲಿ ನನಗೆ ತೃಪ್ತಿಯಿದೆ. ನನಗೆ ಇನ್ನೇನೂ ಬೇಕಿಲ್ಲ,” ಎಂದು ಉತ್ತರ ಕೊಟ್ಟೆ.

“ಅಮೆರಿಕನರು ಎಂಥವರೆಂದು ನಿನಗೆ ಗೊತ್ತಿಲ್ಲ. (ಆಗ ನಮ್ಮ ಪುಸ್ತಕಗಳು ಅಮೆರಿಕದಲ್ಲಿ ಛಾಪಿಸಲ್ಪಡುತ್ತಿದ್ದವು.) ಅವರು ನಿನ್ನನ್ನು ತಪ್ಪುದಾರಿಗೆಳೆಯುವರು,” ಎಂದರು ಆ ಕಮಿಷನರ್‌.

“ಹಾಗಿಲ್ಲ, ನಾನು ಯಾರೊಂದಿಗೆ ವ್ಯವಹರಿಸುತ್ತೇನೊ ಅವರು ಅಂಥವರಲ್ಲ,” ಎಂದೆ ನಾನು.

ಬಳಿಕ ಅವರು, “ಬೇರೆ ಧರ್ಮಗಳು ಮಾಡುವಂತೆಯೇ, ಯುದ್ಧಕ್ಕೆ ಹಣಸಹಾಯ ಮಾಡಲು ನೀನು ನಿಮ್ಮ ಸಭೆಗಳನ್ನೂ ಪ್ರೋತ್ಸಾಹಿಸಬಾರದೊ?” ಎಂದು ಕೇಳಿದರು.

“ಆ ಕೆಲಸ ಸರಕಾರೀ ಕೆಲಸಗಾರರದ್ದು,” ಎಂದೆ ನಾನು.

“ಮನೆಗೆ ಹೋಗಿ ಯೋಚಿಸಿ ನೋಡಬಾರದೊ?” ಎಂದರು ಅವರು.

ವಿಮೋಚನಕಾಂಡ 20:13 ಮತ್ತು 2 ತಿಮೊಥೆಯ 2:24ರಲ್ಲಿ, ನಾವು ಹತ್ಯೆ ಮಾಡಬಾರದು ಮತ್ತು ಜಗಳ ಮಾಡಬಾರದೆಂದು ಬೈಬಲ್‌ ಹೇಳುತ್ತದೆ,” ಎಂದೆ ನಾನು.

ನನಗೆ ಅಲ್ಲಿಂದ ಹೋಗಲು ಅನುಮತಿ ದೊರೆಯಿತಾದರೂ, ಆ ಬಳಿಕ ಆ ಡಿಸ್ಟ್ರಿಕ್ಟ್‌ ಕಮಿಷನರ್‌ ನನ್ನನ್ನು ಈಗ ಮಾನ್ಸಾ ಎಂದು ಕರೆಯಲ್ಪಡುವ ಫೋರ್ಟ್‌ ರೋಸ್‌ಬೆರಿಗೆ ಕರೆದರು. “ಸರಕಾರವು ನಿಮ್ಮ ಪುಸ್ತಕಗಳನ್ನು ನಿಷೇಧಿಸಿದೆ ಎಂದು ಹೇಳಲಿಕ್ಕಾಗಿಯೇ ನಿನ್ನನ್ನು ಇಲ್ಲಿಗೆ ಕರೆಸಿದ್ದೇನೆ,” ಎಂದು ಅವರು ಹೇಳಿದರು.

“ಹೌದು, ನಾನೂ ಆ ಸುದ್ದಿ ಕೇಳಿದ್ದೇನೆ,” ಎಂದೆ ನಾನು.

“ಹಾಗಾದರೆ ನೀನು ಎಲ್ಲ ಸಭೆಗಳಿಗೆ ಹೋಗಿ, ನಿನ್ನ ಜೊತೆಯಲ್ಲಿ ಆರಾಧಿಸುವವರು ಆ ಪುಸ್ತಕಗಳನ್ನೆಲ್ಲಾ ಇಲ್ಲಿಗೆ ತರುವಂತೆ ಹೇಳು, ತಿಳಿಯಿತಾ?” ಎಂದರವರು.

“ಅದು ನನ್ನ ಕೆಲಸವಲ್ಲ, ಅದು ಸರಕಾರೀ ಕೆಲಸಗಾರರ ಜವಾಬ್ದಾರಿ,” ಎಂದು ನಾನು ಉತ್ತರ ಕೊಟ್ಟೆ.

ಅಕಸ್ಮಾತ್ತಾದ ಭೇಟಿ ಫಲ ನೀಡುತ್ತದೆ

ಯುದ್ಧ ಮುಗಿದ ಬಳಿಕವೂ ನಾವು ಸಾರುತ್ತ ಮುಂದುವರಿದೆವು. 1947ರಲ್ಲಿ, ನಾನು ಮ್ವಾನ್ಸಾ ಹಳ್ಳಿಯ ಸಭೆಯ ಸಂದರ್ಶನವನ್ನು ಆಗ ತಾನೇ ಮುಗಿಸಿ, ಒಂದು ಕಪ್‌ ಚಹಾ ಎಲ್ಲಿ ಸಿಗಬಹುದು ಎಂದು ಕೇಳಿದಾಗ, ನನ್ನನ್ನು ಶ್ರೀ ಅನ್‌ಕೋಂಡೀ ಎಂಬವರ ಮನೆಯಲ್ಲಿದ್ದ ಚಹಾದ ಕೋಣೆಗೆ ಕಳುಹಿಸಲಾಯಿತು. ಶ್ರೀ ಅನ್‌ಕೋಂಡೀ ಮತ್ತು ಅವರ ಪತ್ನಿ ನನ್ನನ್ನು ಹಾರ್ದಿಕವಾಗಿ ಸ್ವಾಗತಿಸಿದರು. ನಾನು ಚಹಾ ಕುಡಿಯುತ್ತಿರುವಾಗ, “ದೇವರು ಸತ್ಯವಂತನೇ ಸರಿ” ಪುಸ್ತಕದಲ್ಲಿರುವ “ಪಾತಾಳ​—ನಿರೀಕ್ಷೆಯಲ್ಲಿ ವಿಶ್ರಾಂತಿಗೊಳ್ಳುವ ಸ್ಥಳ” ಎಂಬ ಅಧ್ಯಾಯವನ್ನು ಓದುವಿರೊ ಎಂದು ಶ್ರೀ ಅನ್‌ಕೋಂಡೀ ಅವರನ್ನು ಕೇಳಿದೆ.

ಚಹಾ ಕುಡಿದು ಮುಗಿದ ಬಳಿಕ, “ಹಾಗಾದರೆ ಪಾತಾಳದ ಕುರಿತು ನಿಮ್ಮ ತಿಳಿವಳಿಕೆ ಏನು?” ಎಂದು ಅವರನ್ನು ಕೇಳಿದೆ. ಅದನ್ನು ಓದಿ ಆಶ್ಚರ್ಯಪಟ್ಟಿದ್ದ ಅವರು ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿ, ತರುವಾಯ ಅವರೂ ಅವರ ಹೆಂಡತಿಯೂ ದೀಕ್ಷಾಸ್ನಾನ ಪಡೆದುಕೊಂಡರು. ಆ ವ್ಯಕ್ತಿ ಸಾಕ್ಷಿಯಾಗಿ ಮುಂದುವರಿಯದಿದ್ದರೂ, ಅವರ ಹೆಂಡತಿಯೂ ಅನೇಕ ಮಂದಿ ಮಕ್ಕಳೂ ಸಾಕ್ಷಿಗಳಾಗಿ ಉಳಿದರು. ವಾಸ್ತವವೇನಂದರೆ, ಅವರ ಮಕ್ಕಳಲ್ಲಿ ಒಬ್ಬಳಾದ ಪಿಲ್ನೀ, ಸಾಂಬಿಯದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಈಗಲೂ ಸೇವೆ ಮಾಡುತ್ತಿದ್ದಾಳೆ. ಪಿಲ್ನೀಯ ತಾಯಿ ಈಗ ತುಂಬಾ ವೃದ್ಧೆಯಾಗಿರುವುದಾದರೂ, ಆಕೆ ಇನ್ನೂ ನಂಬಿಗಸ್ತೆಯಾದ ಸಾಕ್ಷಿಯಾಗಿದ್ದಾಳೆ.

ಪೂರ್ವ ಆಫ್ರಿಕದಲ್ಲಿ ಅಲ್ಪಕಾಲಿಕ ವಾಸ

ಉತ್ತರ ರೊಡೇಶ್ಯದ ಲುಸಾಕಾದಲ್ಲಿ 1948ರಲ್ಲಿ ಸ್ಥಾಪನೆಗೊಂಡಿದ್ದ ಬ್ರಾಂಚ್‌ ಆಫೀಸು ನನ್ನನ್ನು ಟಾಂಗನ್ಯೀಕ (ಈಗ ಟಾನ್ಸೆನೀಯ) ದೇಶಕ್ಕೆ ನೇಮಿಸಿತು. ನಾನೂ ನನ್ನ ಹೆಂಡತಿಯೂ ಇನ್ನೊಬ್ಬ ಸಾಕ್ಷಿಯ ಜೊತೆಯಲ್ಲಿ ಆ ಪರ್ವತ ಪ್ರದೇಶದಲ್ಲಿ ನಡೆಯುತ್ತ ಪ್ರಯಾಣ ಮಾಡಿದೆವು. ಆ ಪ್ರಯಾಣಕ್ಕೆ ಮೂರು ದಿವಸಗಳು ಹಿಡಿದವು ಮತ್ತು ನಾವು ತುಂಬ ಬಳಲಿಹೋದೆವು. ನಾನು ನಮ್ಮ ಪುಸ್ತಕಗಳನ್ನೂ ನನ್ನ ಹೆಂಡತಿ ನಮ್ಮ ಬಟ್ಟೆಬರೆಗಳನ್ನೂ ಆ ಸಾಕ್ಷಿ ಸಹೋದರನು ನಮ್ಮ ಹಾಸಿಗೆಗಳನ್ನೂ ಹೊತ್ತುಕೊಂಡು ಹೋದೆವು.

ನಾವು ಮಾರ್ಚ್‌ 1948ರಲ್ಲಿ ಅಂಬೇಯಾಕ್ಕೆ ಬಂದು ಮುಟ್ಟಿದಾಗ, ಅಲ್ಲಿನ ಸಹೋದರರು ಬೈಬಲ್‌ ಬೋಧನೆಗಳಿಗೆ ಹೆಚ್ಚು ಪೂರ್ಣವಾಗಿ ಹೊಂದಿಕೊಳ್ಳುವಂತೆ ಸಹಾಯಮಾಡುವ ವಿಷಯದಲ್ಲಿ ತುಂಬ ಕೆಲಸವನ್ನು ಮಾಡಲಿಕ್ಕಿತ್ತು. ನಾವು ಆ ಪ್ರದೇಶದಲ್ಲಿ ವಾಚ್‌ಟವರ್‌ ಜನರು ಎಂದು ಪ್ರಸಿದ್ಧರಾಗಿದ್ದೆವು. ಸಹೋದರರು ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಅಂಗೀಕರಿಸಿದ್ದರೂ, ಅದನ್ನು ಬಹಿರಂಗವಾಗಿ ಉಪಯೋಗಿಸಿದ್ದಿರಲಿಲ್ಲ. ಇದಲ್ಲದೆ, ಕೆಲವು ಮಂದಿ ಸಾಕ್ಷಿಗಳು ಮೃತರನ್ನು ಗೌರವಿಸುವ ಪದ್ಧತಿಗಳನ್ನು ತ್ಯಜಿಸಬೇಕಾಗಿತ್ತು. ಆದರೆ ಹೆಚ್ಚಿನವರಿಗೆ ಅತಿ ಕಷ್ಟಕರವಾಗಿದ್ದ ಹೊಂದಿಕೊಳ್ಳುವಿಕೆಯು ತಮ್ಮ ವಿವಾಹಗಳನ್ನು, ಅವು ಎಲ್ಲರ ಮುಂದೆ ಗೌರವಾರ್ಹವಾಗಿರುವಂತೆ ರಿಜಿಸ್ಟರ್‌ ಮಾಡುವುದೇ ಆಗಿತ್ತು.​—ಇಬ್ರಿಯ 13:4.

ಆ ಬಳಿಕ, ಯುಗಾಂಡವನ್ನು ಸೇರಿಸಿ, ಪೂರ್ವ ಆಫ್ರಿಕದ ಬೇರೆ ಪ್ರದೇಶಗಳಲ್ಲಿ ಸೇವೆಮಾಡುವ ಸಂದರ್ಭ ನನಗೆ ದೊರಕಿತು. ನಾನು ಆರು ವಾರಗಳನ್ನು ಎಂಟೆಬಿ ಮತ್ತು ಕಂಪಾಲದಲ್ಲಿ ಕಳೆದಾಗ, ಅನೇಕರಿಗೆ ಬೈಬಲ್‌ ಸತ್ಯದ ಜ್ಞಾನವನ್ನು ಪಡೆಯುವ ಸಹಾಯವು ದೊರೆಯಿತು.

ನ್ಯೂ ಯಾರ್ಕ್‌ ಸಿಟಿಗೆ ಹೋಗಲು ಆಮಂತ್ರಣ

ಯುಗಾಂಡದಲ್ಲಿ ಸ್ವಲ್ಪ ಸಮಯ ಕಳೆದ ಬಳಿಕ, ನಾನು ಟಾಂಗನ್ಯೀಕದ ರಾಜಧಾನಿಯಾದ ಡಾರೆಸ್ಸಲಾಮ್‌ಗೆ 1956ರ ಆರಂಭದಲ್ಲಿ ಬಂದು ಮುಟ್ಟಿದೆ. ಅಲ್ಲಿ, ಯೆಹೋವನ ಸಾಕ್ಷಿಗಳ ಜಾಗತಿಕ ಪ್ರಧಾನ ಕಾರ್ಯಾಲಯದಿಂದ ಬಂದಿದ್ದ ಒಂದು ಪತ್ರ ನನಗಾಗಿ ಕಾದಿತ್ತು. ನ್ಯೂ ಯಾರ್ಕ್‌ನಲ್ಲಿ 1958ರ ಜುಲೈ 27ರಿಂದ ಆಗಸ್ಟ್‌ 3ರ ವರೆಗೆ ಅಂತಾರಾಷ್ಟ್ರೀಯ ಅಧಿವೇಶನವೊಂದು ನಡೆಯಲಿಕ್ಕಿತ್ತು. ಅದಕ್ಕೆ ಹಾಜರಾಗಲು ತಯಾರಿಯನ್ನು ಮಾಡುವುದರ ಕುರಿತಾದ ಮಾಹಿತಿ ಆ ಪತ್ರದಲ್ಲಿತ್ತು. ಈ ಪ್ರತೀಕ್ಷೆಯ ಕುರಿತು ನಾನು ರೋಮಾಂಚನಗೊಂಡೆನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆ ಸಮಯ ಬಂದಾಗ, ಲೂಕಾ ಮ್ವಾಂಗೋ ಎಂಬ ಇನ್ನೊಬ್ಬ ಸಂಚರಣ ಮೇಲ್ವಿಚಾರಕನೂ ನಾನೂ, ಅಂಡೋಲದಿಂದ ದಕ್ಷಿಣ ರೊಡೇಶ್ಯದ ಸಾಲ್ಸ್‌ಬೆರಿ (ಈಗ ಹರಾರೆ)ಗೂ ಬಳಿಕ ಕೆನ್ಯದ ನೈರೋಬಿಗೂ ವಾಯುಮಾರ್ಗವಾಗಿ ಹೋದೆವು. ಅಲ್ಲಿಂದ ಇಂಗ್ಲೆಂಡಿನ ಲಂಡನ್‌ಗೆ ಹೋಗಲಾಗಿ, ಅಲ್ಲಿ ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು. ಇಂಗ್ಲೆಂಡಿಗೆ ಬಂದು ಸೇರಿದ ರಾತ್ರಿ, ನಾವು ಮಲಗಲು ಹೋದಾಗ ತುಂಬ ಪುಳಕಿತರಾಗಿದ್ದೆವು ಮತ್ತು ಬಿಳಿ ಜನರು ಆಫ್ರಿಕದವರಾದ ನಮ್ಮನ್ನು ಎಷ್ಟು ಅತಿಥಿ ಸತ್ಕಾರದಿಂದ ಬರಮಾಡಿಕೊಂಡರು ಎಂಬುದರ ಕುರಿತು ಮಾತಾಡುತ್ತ ಹೋದೆವು. ಆ ಅನುಭವದಿಂದ ನಮಗೆ ಅತಿರೇಕವಾದ ಉತ್ತೇಜನ ದೊರೆಯಿತು.

ಕೊನೆಗೆ, ಅಧಿವೇಶನ ನಡೆಯಲಿದ್ದ ನ್ಯೂ ಯಾರ್ಕ್‌ಗೆ ಬಂದು ಸೇರಿದೆವು. ಒಂದು ದಿನ, ಉತ್ತರ ರೊಡೇಶ್ಯದ ಯೆಹೋವನ ಸಾಕ್ಷಿಗಳ ಕಾರ್ಯದ ಕುರಿತು ನಾನು ಅಧಿವೇಶನದಲ್ಲಿ ಒಂದು ವರದಿಯನ್ನು ಕೊಟ್ಟೆ. ಆ ದಿನ, ನ್ಯೂ ಯಾರ್ಕ್‌ನ ಪೋಲೋ ಗ್ರೌಂಡ್ಸ್‌ ಮತ್ತು ಯಾಂಕೀ ಸ್ಟೇಡಿಯಮ್‌ನಲ್ಲಿ ನೆರೆದಿದ್ದ ಸಭಿಕರ ಸಂಖ್ಯೆ ಸುಮಾರು 2 ಲಕ್ಷವಾಗಿತ್ತು. ನಾನು ಅಂದು ಅನುಭವಿಸಿದಂಥ ಅದ್ಭುತಕರವಾದ ಸದವಕಾಶದ ಕುರಿತು ಯೋಚಿಸುತ್ತ ಆ ರಾತ್ರಿ ನನಗೆ ನಿದ್ದೆಯೇ ಹತ್ತಲಿಲ್ಲ.

ಆದರೆ ಬೇಗನೆ ಆ ಅಧಿವೇಶನ ಮುಗಿಯಲಾಗಿ ನಾವು ಸ್ವದೇಶಕ್ಕೆ ಹಿಂದೆರಳಿದೆವು. ಆ ಪ್ರಯಾಣದಲ್ಲಿ ನಾವು ಪುನಃ ಇಂಗ್ಲೆಂಡಿನ ಸೋದರಸೋದರಿಯರ ಪ್ರೀತಿಯ ಅತಿಥಿಸತ್ಕಾರವನ್ನು ಅನುಭವಿಸಿದೆವು. ಆ ಪ್ರಯಾಣದ ಸಮಯದಲ್ಲಿ, ಕುಲ ಅಥವಾ ರಾಷ್ಟ್ರೀಯತೆ ಯಾವುದೇ ಆಗಿರಲಿ, ಯೆಹೋವನ ಜನರ ಐಕ್ಯವು ಅವಿಸ್ಮರಣೀಯವಾದ ರೀತಿಯಲ್ಲಿ ನಮಗೆ ತೋರಿಸಲ್ಪಟ್ಟಿತು!

ಮುಂದುವರಿದ ಸೇವೆ ಮತ್ತು ಪರೀಕ್ಷೆಗಳು

ವರುಷ 1967ರಲ್ಲಿ, ಸರ್ಕಿಟಿನಿಂದ ಸರ್ಕಿಟಿಗೆ ಪ್ರಯಾಣ ಮಾಡುವ ಶುಶ್ರೂಷಕನಾದ ಡಿಸ್ಟ್ರಿಕ್ಟ್‌ ಸೇವಕನಾಗಿ ನಾನು ನೇಮಕಗೊಂಡೆ. ಅಷ್ಟರೊಳಗೆ ಸಾಂಬಿಯದ ಯೆಹೋವನ ಸಾಕ್ಷಿಗಳ ಸಂಖ್ಯೆ 35,000ಕ್ಕೂ ಹೆಚ್ಚಾಗಿ ಹೋಗಿತ್ತು. ತರುವಾಯ, ಹದಗೆಡುತ್ತಿದ್ದ ಆರೋಗ್ಯದ ಕಾರಣ, ನನ್ನನ್ನು ಪುನಃ ಕಾಪರ್‌ಬೆಲ್ಟ್‌ ಪ್ರದೇಶದಲ್ಲಿ ಸರ್ಕಿಟ್‌ ಸೇವಕನಾಗಿ ನೇಮಿಸಲಾಯಿತು. ಕ್ರಮೇಣ, ಜನೆಟ್‌ಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ, ಆಕೆ 1984ರಲ್ಲಿ ಯೆಹೋವನಿಗೆ ನಂಬಿಗಸ್ತಳಾಗಿ ಮರಣಹೊಂದಿದಳು.

ಆಕೆಯ ಮರಣಾನಂತರ, ಜನೆಟಳ ಅವಿಶ್ವಾಸಿ ಕುಟುಂಬ ಸದಸ್ಯರು, ನಾನು ಮಾಟಮಂತ್ರವನ್ನು ಉಪಯೋಗಿಸಿ ಆಕೆ ಸಾಯುವಂತೆ ಮಾಡಿದೆನೆಂದು ಅಪವಾದ ಹೊರಿಸಿದಾಗ, ನನಗೆ ತೀರ ನೋವುಂಟಾಯಿತು. ಆದರೆ ಜನೆಟಳ ರೋಗದ ಬಗ್ಗೆ ತಿಳಿದಿದ್ದ ಕೆಲವರು ಆಕೆಯ ಡಾಕ್ಟರರೊಂದಿಗೆ ಮಾತನಾಡಿ ಸತ್ಯವಿಷಯವನ್ನು ಆ ಸಂಬಂಧಿಕರಿಗೆ ತಿಳಿಯಪಡಿಸಿದರು. ಬಳಿಕ ಇನ್ನೊಂದು ಪರೀಕ್ಷೆ ಬಂತು. ಕೆಲವು ಮಂದಿ ಸಂಬಂಧಿಕರು ಊಕೂಪ್ಯಾನಿಕಾ ಎಂಬ ಸಾಂಪ್ರದಾಯಿಕ ಆಚಾರವನ್ನು ನಾನು ನೆರವೇರಿಸಬೇಕೆಂದು ಬಯಸಿದರು. ನಾನು ಬಂದಿರುವ ಪ್ರದೇಶದಲ್ಲಿ ಈ ಪದ್ಧತಿಯಲ್ಲಿ, ವಿವಾಹ ಸಂಗಾತಿಗಳಲ್ಲಿ ಒಬ್ಬರು ಸತ್ತಾಗ, ಬದುಕಿರುವ ವ್ಯಕ್ತಿ ಸತ್ತವರ ಹತ್ತಿರದ ಸಂಬಂಧಿಯೊಂದಿಗೆ ಸಂಭೋಗ ಮಾಡಬೇಕೆಂಬ ವಿಷಯವು ಒಳಗೂಡಿದೆ. ಇದಕ್ಕೆ ನಾನು ಒಪ್ಪಲಿಲ್ಲ.

ಕ್ರಮೇಣ, ಈ ಸಂಬಂಧಿಕರ ಒತ್ತಡ ಅಂತ್ಯಗೊಂಡಿತು. ನಾನು ಸ್ಥಿರವಾಗಿ ನಿಲ್ಲಲು ಯೆಹೋವನು ಸಹಾಯಮಾಡಿದ್ದಕ್ಕೆ ನಾನು ಆಭಾರಿಯಾಗಿದ್ದೆ. ನನ್ನ ಹೆಂಡತಿಯನ್ನು ಹೂಣಿಟ್ಟು ಒಂದು ತಿಂಗಳು ಕಳೆದ ಬಳಿಕ, ಒಬ್ಬ ಸಹೋದರನು ಬಂದು ಹೀಗೆ ಹೇಳಿದನು: “ಸಹೋದರ ಕಾಂಗಾಲ, ನಿಮ್ಮ ಹೆಂಡತಿ ತೀರಿಕೊಂಡಾಗ, ನೀವು ನಮಗೆ ನಿಜವಾದ ಉತ್ತೇಜನವನ್ನು ಕೊಟ್ಟಿರಿ. ಹೇಗೆಂದರೆ, ಒಂದೇ ಒಂದು ಅದೈವಿಕ ಸಂಪ್ರದಾಯಕ್ಕೆ ನೀವು ಮಣಿಯಲಿಲ್ಲ. ನಿಮಗೆ ತುಂಬ ಉಪಕಾರ.”

ಅದ್ಭುತಕರವಾದ ಕೊಯ್ಲು

ನಾನು ಒಬ್ಬ ಯೆಹೋವನ ಸಾಕ್ಷಿಯೋಪಾದಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿ ಈಗ 65 ವರುಷಗಳಾಗಿವೆ. ಈ ವರುಷಗಳಲ್ಲಿ, ನಾನು ಒಂದು ಕಾಲದಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡಿದ ಪ್ರದೇಶಗಳಲ್ಲಿ ನೂರಾರು ಸಭೆಗಳು ರೂಪಿಸಲ್ಪಡುವುದನ್ನೂ ಅನೇಕ ರಾಜ್ಯ ಸಭಾಗೃಹಗಳು ಕಟ್ಟಲ್ಪಡುವುದನ್ನೂ ನೋಡುವುದು ಅದೆಷ್ಟು ಆನಂದದಾಯಕ! 1943ರಲ್ಲಿ ಸುಮಾರು 2,800 ಮಂದಿ ಸಾಕ್ಷಿಗಳ ಸಂಖ್ಯೆ ಈಗ ಸಾಂಬಿಯದಲ್ಲಿ 1,22,000 ರಾಜ್ಯ ಪ್ರಚಾರಕರ ಸಂಖ್ಯೆಗೆ ವೃದ್ಧಿಯಾಗಿದೆ. ಹೌದು, ಕಳೆದ ವರುಷ 1.1 ಕೋಟಿಗಿಂತ ತುಸು ಕಡಮೆ ಇದ್ದ ಈ ದೇಶದ ಜನಸಂಖ್ಯೆಯಲ್ಲಿ 5,14,000ಕ್ಕೂ ಹೆಚ್ಚು ಮಂದಿ ಜ್ಞಾಪಕಾಚರಣೆಗೆ ಬಂದಿದ್ದರು.

ಈ ಮಧ್ಯೆ, ಯೆಹೋವನು ನನ್ನನ್ನು ಒಳ್ಳೆಯದಾಗಿ ಪರಾಮರಿಸುತ್ತಿದ್ದಾನೆ. ನನಗೆ ವೈದ್ಯರ ಸಹಾಯ ಬೇಕಾಗಿರುವಾಗ, ಒಬ್ಬ ಕ್ರೈಸ್ತ ಸಹೋದರನು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಸಭೆಗಳು ಭಾಷಣ ನೀಡಲು ನನಗೆ ಇನ್ನೂ ಕರೆಕೊಡುತ್ತಿವೆ. ಮತ್ತು ಇದರಿಂದ ಆತ್ಮೋನ್ನತಿಯ ಸಮಯಗಳು ನನಗೆ ಒದಗಿಬರುತ್ತವೆ. ನಾನು ಸಹವಾಸಮಾಡುತ್ತಿರುವ ಸಭೆಯು ನನ್ನ ಮನೆಯನ್ನು ಶುಚಿಗೊಳಿಸಲು ಸಹೋದರಿಯರನ್ನು ಸರದಿಯಾಗಿ ಏರ್ಪಡಿಸುತ್ತದೆ ಮತ್ತು ಸಹೋದರರು ನನ್ನನ್ನು ಪ್ರತಿ ವಾರದ ಕೂಟಗಳಿಗೆ ಕರೆದೊಯ್ಯಲು ಮುಂದೆ ಬರುತ್ತಾರೆ. ನಾನು ಯೆಹೋವನನ್ನು ಸೇವಿಸದಿರುತ್ತಿದ್ದಲ್ಲಿ ಇಂತಹ ಪ್ರೀತಿಯ ಆರೈಕೆ ನನಗೆ ಎಂದಿಗೂ ದೊರೆಯುತ್ತಿರಲಿಲ್ಲ ಎಂದು ನನಗೆ ತಿಳಿದಿದೆ. ಪೂರ್ಣ ಸಮಯದ ಸೇವೆಯಲ್ಲಿ ನನ್ನನ್ನು ಇನ್ನೂ ಬಳಸುತ್ತಿರುವುದಕ್ಕಾಗಿಯೂ, ಇದುವರೆಗೆ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಮರ್ಥ್ಯವನ್ನು ನನಗೆ ಕೊಟ್ಟದ್ದಕ್ಕಾಗಿಯೂ ನಾನು ಆತನಿಗೆ ಉಪಕಾರ ಹೇಳುತ್ತೇನೆ.

ನನ್ನ ದೃಷ್ಟಿ ಮಂದವಾಗಿದೆ, ಮತ್ತು ನಾನು ರಾಜ್ಯ ಸಭಾಗೃಹಕ್ಕೆ ನಡೆದುಕೊಂಡು ಹೋಗುವಾಗ, ದಾರಿಯಲ್ಲಿ ಅನೇಕ ಬಾರಿ ವಿಶ್ರಮಿಸಬೇಕಾಗುತ್ತದೆ. ನನ್ನ ಪುಸ್ತಕಚೀಲವು ಈಗೀಗ ಹೆಚ್ಚು ಭಾರವಾಗಿರುವಂತೆ ಭಾಸವಾಗುತ್ತದೆ. ಆದುದರಿಂದ ಕೂಟಗಳಲ್ಲಿ ಬೇಡವಾಗಿರುವ ಪುಸ್ತಕಗಳನ್ನು ಮನೆಯಲ್ಲೇ ಇಟ್ಟು ಚೀಲವನ್ನು ಹಗುರ ಮಾಡುತ್ತೇನೆ. ನನ್ನ ಕ್ಷೇತ್ರಸೇವೆಯಲ್ಲಿ ಈಗ ಹೆಚ್ಚಾಗಿ ನನ್ನ ಮನೆಗೆ ಬರುವವರೊಂದಿಗೆ ನಾನು ನಡೆಸುವ ಬೈಬಲ್‌ ಅಧ್ಯಯನಗಳು ಕೂಡಿರುತ್ತವೆ. ಆದರೂ, ಕಳೆದುಹೋಗಿರುವ ವರುಷಗಳನ್ನು ಹಿಂದಿರುಗಿ ನೋಡಿ, ಸಂಭವಿಸಿರುವ ಅದ್ಭುತಕರವಾದ ಬೆಳವಣಿಗೆಯ ಕುರಿತು ಚಿಂತಿಸಶಕ್ತನಾಗುವುದು ಅದೆಷ್ಟು ಸುಖಕರವಾಗಿದೆ. ಯೆಶಾಯ 60:22ರಲ್ಲಿ ದಾಖಲೆಯಾಗಿರುವ ಯೆಹೋವನ ಮಾತುಗಳು ಗಮನಾರ್ಹವಾಗಿ ನೆರವೇರಿರುವ ಕ್ಷೇತ್ರದಲ್ಲಿ ನಾನು ಸೇವೆ ಮಾಡಿರುತ್ತೇನೆ. ಅಲ್ಲಿ ಹೀಗೆ ಹೇಳಲಾಗಿದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” ಹೌದು, ಇದೇ ವಿಷಯವು ಸಾಂಬಿಯದಲ್ಲಿ ಮಾತ್ರವಲ್ಲ, ಇಡೀ ಲೋಕದಲ್ಲಿ ನಡೆಯುವುದನ್ನು ನೋಡುವ ಅವಕಾಶ ನನ್ನದಾಗಿದೆ. *

[ಪಾದಟಿಪ್ಪಣಿಗಳು]

^ ಪ್ಯಾರ. 7 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಪುಸ್ತಕ, ಆದರೆ ಈಗ ಮುದ್ರಣದಲ್ಲಿಲ್ಲ.

^ ಪ್ಯಾರ. 50 ದುಃಖಕರವಾದ ವಿಷಯವೇನಂದರೆ, ಸಹೋದರ ಕಾಂಗಾಲ ಅವರ ಶಕ್ತಿಯು ಕೊನೆಗೆ ಕುಂದಿಹೋಗಲಾಗಿ, ಈ ಲೇಖನವು ಪ್ರಕಟನೆಗಾಗಿ ತಯಾರಿಸಲ್ಪಡುತ್ತಿದ್ದಾಗ, ಅವರು ನಂಬಿಗಸ್ತರಾಗಿ ತೀರಿಕೊಂಡರು.

[ಪುಟ 24ರಲ್ಲಿರುವ ಚಿತ್ರಗಳು]

ಹಿನ್ನಲೆಯಲ್ಲಿ ಸಾಂಬಿಯ ಬ್ರಾಂಚ್‌ನೊಂದಿಗೆ ಥಾಮ್ಸನ್‌

[ಪುಟ 26ರಲ್ಲಿರುವ ಚಿತ್ರ]

ಇಂದು ಸಾಂಬಿಯ ಬ್ರಾಂಚ್‌