ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’

ಸನ್ನಿವೇಶ ಬದಲಾಗುತ್ತದೆ

ಸನ್ನಿವೇಶ ಬದಲಾಗುತ್ತದೆ

“ನಾವು ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ, ಆದರೆ ಅಲುಗಾಡಲು ಸಾಧ್ಯವಿಲ್ಲದಷ್ಟು ನಿರ್ಬಂಧಿಸಲ್ಪಟ್ಟಿಲ್ಲ; ನಾವು ದಿಕ್ಕುಕಾಣದವರಾಗಿದ್ದೇವೆ, ಆದರೆ ಸಂಪೂರ್ಣವಾಗಿ ದಾರಿಕಾಣದವರಲ್ಲ.”—2 ಕೊರಿಂಥ 4:8.

ತಲೆನೋವು ಬಂತು ಅಂತ ತಲೆ ಹಾರಿಸುವುದು ಎಷ್ಟು ಸರಿ? ಅದೇ ರೀತಿ ತಾತ್ಕಾಲಿಕ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಂದುಕೊಳ್ಳುವುದು ಸರಿಯೇ? ನೀವಿರುವ ಸನ್ನಿವೇಶ ತುಂಬ ನಿರಾಶಾದಾಯಕವಾಗಿ ಕಾಣಬಹುದು, ಕೈಮೀರಿ ಹೋಗಿದೆ ಎಂದನಿಸಬಹುದು. ಆದರೆ ಸನ್ನಿವೇಶ ಇದ್ದ ಹಾಗೆ ಇರುವುದಿಲ್ಲ, ಮುಂದೆ ಖಂಡಿತ ಬದಲಾಗುತ್ತದೆ. ಇದನ್ನು ನಂಬಲು ನಿಮಗೆ ಕಷ್ಟವಾಗಬಹುದು. ಆದರೂ ಇದು ನಿಜ. ನೀವು ನೆನಸದಿರುವಷ್ಟು ಒಳ್ಳೇದಾಗುವ ಸಾಧ್ಯತೆಯೂ ಇದೆ.—ಕೆಳಗಿರುವ ಚೌಕ ನೋಡಿ.

ಒಂದುವೇಳೆ ಸನ್ನಿವೇಶ ಬದಲಾಗದಿದ್ದರೆ? ಸಮಸ್ಯೆ ನಿಭಾಯಿಸಲು ಇವತ್ತು ಏನು ಮಾಡಲಿಕ್ಕಾಗುತ್ತದೋ ಅದನ್ನು ಮಾಡಿ. ಯೇಸು ಹೀಗಂದನು: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.”—ಮತ್ತಾಯ 6:34.

ಬದಲಾಗಲು ಸಾಧ್ಯವೇ ಇಲ್ಲದ ಸನ್ನಿವೇಶದಿಂದ ನೀವು ಹತಾಶರಾಗಿದ್ದರೆ ಆಗೇನು? ಉದಾಹರಣೆಗೆ, ದೀರ್ಘಕಾಲದ ಕಾಯಿಲೆ, ಮುರಿದುಹೋದ ವಿವಾಹ, ಪ್ರಿಯರೊಬ್ಬರ ಮರಣ ಇತ್ಯಾದಿ.

ಅಂಥ ಸಮಯಗಳಲ್ಲೂ ಬದಲಾಯಿಸಲು ಆಗುವ ವಿಷಯವೊಂದಿದೆ. ಅದು ಆ ಸನ್ನಿವೇಶದ ಬಗ್ಗೆ ನಿಮಗಿರುವ ಮನೋಭಾವವೇ. ಅದನ್ನು ಮಾಡುವುದು ಹೇಗೆ? ಸನ್ನಿವೇಶವನ್ನು ಬದಲಾಯಿಸಲು ಅಸಾಧ್ಯ ಎನ್ನುವುದನ್ನು ಒಪ್ಪಿಕೊಳ್ಳಿ. ಆಗ ಸಕಾರಾತ್ಮಕವಾಗಿ ಯೋಚಿಸಲು ನಿಮ್ಮಿಂದಾಗುವುದು. (ಜ್ಞಾನೋಕ್ತಿ 15:15) ಮಾತ್ರವಲ್ಲ ನಿಮ್ಮ ಸಮಸ್ಯೆಗೆ ‘ಸಾವು’ ಪರಿಹಾರವೆಂದು ಯೋಚಿಸದೆ ಅದನ್ನು ನಿಭಾಯಿಸಲು ಮಾರ್ಗಗಳನ್ನು ಹುಡುಕುವಿರಿ. ಫಲಿತಾಂಶ? ಸನ್ನಿವೇಶ ಹತೋಟಿಯಲ್ಲಿ ಇಲ್ಲದಿರಬಹುದಾದರೂ ಆ ಸನ್ನಿವೇಶದ ಕುರಿತ ನಿಮ್ಮ ಮನೋಭಾವ ನಿಮ್ಮ ಹತೋಟಿಗೆ ಬರುತ್ತದೆ.—ಯೋಬ 2:10.

ನೆನಪಿಡಿ: ಒಂದೇ ಹೆಜ್ಜೆಯಲ್ಲಿ ಬೆಟ್ಟ ಹತ್ತಲು ಆಗುವುದಿಲ್ಲ. ಆದರೆ ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗುವಲ್ಲಿ ಅದು ಸಾಧ್ಯ. ನೀವು ಎದುರಿಸುತ್ತಿರುವ ಕಷ್ಟಗಳು ಸಹ ಬೆಟ್ಟದಂತೆ ಎಷ್ಟೇ ದೊಡ್ಡದಾಗಿರಲಿ ಆ ಮಾತು ನಿಜ.

ಇವತ್ತು ನೀವೇನು ಮಾಡಬಹುದು? ನಿಮ್ಮ ಒಬ್ಬ ಸ್ನೇಹಿತನೊಟ್ಟಿಗೆ ಅಥವಾ ಮನೆಯಲ್ಲಿ ಯಾರೊಟ್ಟಿಗಾದರೂ ನಿಮ್ಮ ಸನ್ನಿವೇಶದ ಬಗ್ಗೆ ಮಾತಾಡಿ. ನಿಮ್ಮ ಸನ್ನಿವೇಶದ ಬಗ್ಗೆ ಸರಿಯಾದ ನೋಟವನ್ನಿಡಲು ಅವರು ನಿಮಗೆ ಸಹಾಯ ಮಾಡಬಲ್ಲರು.—ಜ್ಞಾನೋಕ್ತಿ 11:14.