ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸುಖೀ ಸಂಸಾರಕ್ಕೆ ಸಲಹೆಗಳು | ದಂಪತಿಗಳಿಗಾಗಿ

ಖರ್ಚಿಗೆ ಕಡಿವಾಣ! ಹೇಗೆ?

ಖರ್ಚಿಗೆ ಕಡಿವಾಣ! ಹೇಗೆ?

ಸಮಸ್ಯೆ

ಹಣ ಖಾಲಿಯಾಗುವುದೇ ಗೊತ್ತಾಗಲ್ಲ. ಬ್ಯಾಂಕ್‌ ಪಾಸ್‍ಬುಕ್‌, ಬಿಲ್‌ಗಳನ್ನು ನೋಡಿದಾಗಲೇ ‘ಓ ಇಷ್ಟೊಂದು ಹಣ ಖರ್ಚಾಯ್ತಾ!’ ಎಂದು ಬೆಚ್ಚಿಬೀಳುತ್ತೀರಿ. ನಿಮ್ಮ ಮದುವೆಯಾಗಿ ಹೆಚ್ಚು ಸಮಯ ಆಗಿರಲಿಕ್ಕಿಲ್ಲವಾದರೂ ಖರ್ಚು ಮಾತ್ರ ಮುಗಿಲು ಮುಟ್ಟಿರಬಹುದು. ತಪ್ಪು ಯಾರದ್ದು? ನಿಮ್ಮ ಸಂಗಾತಿಯದ್ದಾ? ಆ ರೀತಿ ಯೋಚಿಸದೆ ಇಂಥ ಇಕ್ಕಟ್ಟಿನಲ್ಲಿ ಸಿಕ್ಕಿಬೀಳಲು ಕಾರಣವೇನೆಂದು ಇಬ್ಬರೂ ಕೂತು ಮಾತಾಡಿ. *

ಯಾಕೆ ಹೀಗಾಗುತ್ತೆ?

ಹೊಂದಾಣಿಕೆ ಇಲ್ಲದಿರುವುದು. ಮದುವೆಯಾಗುವ ಮೊದಲು ನಿಮ್ಮ ಖರ್ಚನ್ನು ಅಪ್ಪಅಮ್ಮ ನೋಡಿಕೊಳ್ಳುತ್ತಿದ್ದಿರಬಹುದು. ಈಗ ಅದನ್ನು ನೀವೇ ನೋಡಿಕೊಳ್ಳಬೇಕಾಗಿದೆ. ಇದು ನಿಮಗೆ ಹೊಸದು. ಅಷ್ಟೇ ಅಲ್ಲದೆ ಹಣ ಖರ್ಚುಮಾಡುವುದರ ಬಗ್ಗೆ ನಿಮಗೂ ನಿಮ್ಮ ಸಂಗಾತಿಗೂ ಬೇರೆ ಬೇರೆ ದೃಷ್ಟಿಕೋನ ಇರಬಹುದು. ಒಬ್ಬರಿಗೆ ಖರ್ಚು ಮಾಡುವುದು ಇಷ್ಟವಾದರೆ, ಇನ್ನೊಬ್ಬರಿಗೆ ಹಣ ಉಳಿಸಬೇಕೆಂಬ ಯೋಚನೆ. ಹಾಗಾಗಿ ನವ ದಂಪತಿ ಒಬ್ಬರಿಗೊಬ್ಬರು ಹೊಂದಿಕೊಂಡು ಖರ್ಚುವೆಚ್ಚದ ಬಗ್ಗೆ ಒಂದೇ ನಿರ್ಧಾರಕ್ಕೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ.

ಸಾಲವು ಕಳೆಗಳಂತೆ; ಹಾಗೆಯೇ ಬಿಟ್ಟರೆ ಬೆಳೆಯುತ್ತಾ ಹೋಗುತ್ತದೆ

ಮುಂದೂಡುವುದು. ಈಗ ಒಳ್ಳೇ ವ್ಯಾಪಾರಸ್ಥನಾಗಿರುವ ಜಿಮ್‌, ಮದುವೆಯಾದ ಹೊಸತರಲ್ಲಿ ಆದ ಫಜೀತಿಯನ್ನು ನೆನಪಿಸಿಕೊಳ್ಳುತ್ತಾರೆ. ಹಣ ಹೇಗೆ ಖರ್ಚು ಮಾಡಬೇಕೆಂದು ಗೊತ್ತಿಲ್ಲದೆ ಅವರು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡರಂತೆ. “ಬಿಲ್‌ ಕಟ್ಟುವುದನ್ನು ಯಾವಾಗಲೂ ಮುಂದೂಡುತ್ತಿದ್ದೆ. ಹಾಗಾಗಿ ತುಂಬ ಹಣವನ್ನು ನಂತರ ದಂಡ ಅಥವಾ ಬಡ್ಡಿಗೇ ಸುರಿಯಬೇಕಾಯಿತು. ಕೊನೆಗೆ ಕೈಯಲ್ಲಿ ಹಣವೇ ಇರುತ್ತಿರಲಿಲ್ಲ” ಎನ್ನುತ್ತಾರವರು.

ಅಂದಾಜಿಗೆ ಸಿಗದ ಖರ್ಚು. ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಇಂಟರ್‌ನೆಟ್‌ ಮೂಲಕ ಖರೀದಿ, ಇ-ಬ್ಯಾಂಕಿಂಗ್‌ ಇತ್ಯಾದಿ ಸುಲಭ ಸೇವೆಗಳು ಇಂದು ಲಭ್ಯ. ಹಾಗಾಗಿ ಕಿಸೆಯಿಂದ ಅಥವಾ ಪರ್ಸಿನಿಂದ ಹಣ ತೆಗೆದು ಕೊಡುವ ತಾಪತ್ರಯವೇ ಇಲ್ಲ. ಹಣ ನಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹೋಗುತ್ತದೆ. ಆದರೆ ಇದರಿಂದಾಗಿ ಎಷ್ಟು ಹಣ ಖರ್ಚಾಯಿತೆಂಬ ಅಂದಾಜು ಸಿಗುವುದಿಲ್ಲ. ಅದೂ ಅಲ್ಲದೆ, ಈಗ ‘ಸುಲಭ ಸಾಲ’ ವ್ಯವಸ್ಥೆ ಇರುವುದರಿಂದ ನವದಂಪತಿ ದುಂದುವೆಚ್ಚ ಮಾಡುವ ಬಲೆಗೆ ಸಿಕ್ಕಿಕೊಳ್ಳುವುದೂ ಸುಲಭ.

ನಿಮಗಿರುವ ಹಣದ ಸಮಸ್ಯೆಗೆ ಕಾರಣ ಏನೇ ಆಗಿರಲಿ, ಅದು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ವಿವಾಹ ಉಳಿಸಲು ಹೋರಾಟ (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವುದೇನೆಂದರೆ, “ತುಂಬ ಹಣವಿದ್ದರೂ ತಮ್ಮ ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆ ಏಳುವುದು ಹಣದಿಂದಲೇ ಎಂದು ಹೆಚ್ಚಿನ ದಂಪತಿಗಳು ಹೇಳುತ್ತಾರೆ. ಹಣವು ಗಂಡಹೆಂಡತಿಯ ಮಧ್ಯೆ ಯಾವಾಗಲೂ ಜಗಳ ತಂದಿಡುತ್ತದೆ.”

 ಏನು ಮಾಡಬಹುದು?

ಪರಸ್ಪರ ಸಹಕರಿಸುವ ನಿರ್ಧಾರ ಮಾಡಿ. ಒಬ್ಬರು ಇನ್ನೊಬ್ಬರ ಮೇಲೆ ತಪ್ಪು ಹೊರಿಸಬೇಡಿ. ಖರ್ಚಿಗೆ ಕಡಿವಾಣ ಹಾಕಲು ಇಬ್ಬರೂ ಒಟ್ಟಿಗೆ ಪ್ರಯತ್ನಿಸಿ. ಇದರ ಕುರಿತು ಚರ್ಚಿಸುವುದಕ್ಕೆ ಮುಂಚೆ ಹಣದಿಂದಾಗಿ ನಿಮ್ಮ ಸಂಬಂಧದಲ್ಲಿ ಬಿರುಕು ಬರುವಂತೆ ಬಿಡುವುದಿಲ್ಲ ಎಂದು ದೃಢನಿರ್ಣಯ ಮಾಡಿ.—ಬೈಬಲ್‌ ತತ್ವ: ಎಫೆಸ 4:32.

ಬಜೆಟ್‌ ಮಾಡಿ. ಒಂದು ತಿಂಗಳಲ್ಲಿ ಆಗುವ ಖರ್ಚುಗಳನ್ನೆಲ್ಲ ಬರೆದಿಡಿ. ಚಿಕ್ಕ ಪುಟ್ಟದ್ದಾಗಿದ್ದರೂ ಪರವಾಗಿಲ್ಲ. ಹೀಗೆ ಮಾಡುವಾಗ ಎಲ್ಲಿ ಹಣ ಪೋಲಾಗುತ್ತಿದೆ, ಯಾವುದಕ್ಕೆ ಅನಗತ್ಯವಾಗಿ ಖರ್ಚಾಗುತ್ತಿದೆ ಎಂದು ಕಂಡುಹಿಡಿಯಲು ಆಗುತ್ತದೆ. ಜಿಮ್‌ ಹೇಳುವುದನ್ನು ಗಮನಿಸಿ: ‘ರಕ್ತ ಸೋರುವುದನ್ನು ತಡೆಯುವುದು ಎಷ್ಟು ಮುಖ್ಯವೋ ಹಣ ಪೋಲಾಗುವುದನ್ನು ತಡೆಯುವುದೂ ಅಷ್ಟೇ ಮುಖ್ಯ.’

ಪ್ರತಿ ತಿಂಗಳು ನೀವು ಮಾಡಲೇಬೇಕಾದ ಖರ್ಚುಗಳ ಒಂದು ಪಟ್ಟಿ ಮಾಡಿ. ಉದಾಹರಣೆಗೆ, ಊಟಬಟ್ಟೆಯ ಖರ್ಚು, ಬಾಡಿಗೆ, ಪೆಟ್ರೋಲ್‌ ಖರ್ಚು ಇತ್ಯಾದಿ. ಆಯಾ ಖರ್ಚಿನ ಮುಂದೆ ಅದಕ್ಕೆ ಎಷ್ಟು ಹಣ ಬೇಕಾಗುತ್ತದೆಂದು ಬರೆಯಿರಿ.—ಬೈಬಲ್‌ ತತ್ವ: ಲೂಕ 14:28.

“ಸಾಲಗಾರನು ಸಾಲಕೊಟ್ಟವನಿಗೆ ಸೇವಕ.”—ಜ್ಞಾನೋಕ್ತಿ 22:7

ಊಟ, ಬಾಡಿಗೆ, ಪೆಟ್ರೋಲ್‌ ಹೀಗೆ ಪ್ರತಿಯೊಂದಕ್ಕೂ ಎಷ್ಟು ಹಣ ಖರ್ಚು ಮಾಡಬೇಕೆಂದು ಪ್ರತಿ ತಿಂಗಳ ಆರಂಭದಲ್ಲೇ ನಿರ್ಧರಿಸಿ. ಕೆಲವರು ಏನು ಮಾಡುತ್ತಾರೆಂದರೆ, ಒಂದೊಂದು ಖರ್ಚಿಗೆ ಬೇಕಾಗುವ ಹಣವನ್ನು ಒಂದೊಂದು ಲಕೋಟೆಯಲ್ಲಿ ಹಾಕಿಡುತ್ತಾರೆ. * ಒಂದು ನಿರ್ದಿಷ್ಟ ಖರ್ಚಿಗೆಂದು ಇಟ್ಟ ಹಣ ಮುಗಿದುಹೋದಲ್ಲಿ ಅವರು ಆ ತಿಂಗಳಲ್ಲಿ ಅದಕ್ಕಾಗಿ ಇನ್ನು ಖರ್ಚುಮಾಡುವುದಿಲ್ಲ ಅಥವಾ ಬೇರೆ ಲಕೋಟೆಯಲ್ಲಿರುವ ಸ್ವಲ್ಪ ಹಣವನ್ನು ಈ ಲಕೋಟೆಗೆ ಹಾಕುತ್ತಾರೆ. ಹೀಗೆ ಮಾಡುವಾಗ, ನಿರ್ಧರಿಸಿದ್ದಕ್ಕಿಂತ ಹೆಚ್ಚು ಹಣ ಖರ್ಚಾಗುವುದಿಲ್ಲ.

ವಸ್ತುಗಳ ಆಶೆ ನಿಮಗೆದೆಯಾ ಪರೀಕ್ಷಿಸಿ. ಹೊಸ ಹೊಸ ವಸ್ತುಗಳನ್ನು ಖರೀದಿಸುವುದರಿಂದ ಸಂತೋಷ ಸಿಗುವುದಿಲ್ಲ. ಅದಕ್ಕೇ ಯೇಸು, “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು” ಎಂದು ಹೇಳಿದನು. (ಲೂಕ 12:15) ಈ ಮಾತನ್ನು ನೀವು ನಂಬುತ್ತೀರಾ ಇಲ್ಲವಾ ಎನ್ನುವುದು ನೀವು ಹಣ ಖರ್ಚುಮಾಡುವ ರೀತಿಯಿಂದ ಗೊತ್ತಾಗುತ್ತದೆ.—ಬೈಬಲ್‌ ತತ್ವ: 1 ತಿಮೊಥೆಯ 6:8.

ಹೊಂದಿಸಿಕೊಳ್ಳಿ. ಮದುವೆಯಾಗಿ ಎರಡು ವರ್ಷವಾಗಿರುವ ಏರನ್‌ ಹೀಗನ್ನುತ್ತಾರೆ: “ಕೇಬಲ್‌ ಟಿವಿ, ಹೋಟೆಲಿಗೆ ಹೋಗಿ ಊಟಮಾಡೋದು, ಇದೆಲ್ಲ ದೊಡ್ಡ ಖರ್ಚೇನಲ್ಲ ಎಂದು ಮೊದಮೊದಲು ಅನಿಸುತ್ತದೆ. ಆದರೆ ದಿನ ಕಳೆದಂತೆ ಎಷ್ಟೋ ಹಣ ಅಲ್ಲೇ ಖರ್ಚಾಗಿ ಹೋಗುತ್ತದೆ. ಹಾಗಾಗಿ ಕೆಲವೊಂದು ವಿಷಯಗಳಿಗೆ ‘ಬೇಡ’ ಎಂದು ಹೇಳಲು ಕಲಿತೆವು.” (g14-E 06)

^ ಪ್ಯಾರ. 4 ಈ ಲೇಖನ ನವದಂಪತಿಗಳಿಗಾಗಿ ಇರುವುದಾದರೂ ಇಲ್ಲಿರುವ ಸಲಹೆಗಳು ಎಲ್ಲ ವಿವಾಹಿತ ದಂಪತಿಗಳಿಗೆ ಅನ್ವಯ.

^ ಪ್ಯಾರ. 14 ನೀವು ಇಂಟರ್‌ನೆಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸುವಲ್ಲಿ ಹಣದ ಬದಲು ಖರ್ಚುಮಾಡಲಿರುವ ಹಣದ ಮೊತ್ತವನ್ನು ಚೀಟಿಯಲ್ಲಿ ಬರೆದು ಲಕೋಟೆಯೊಳಗಿಡಿ.