ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವ ಸಮಸ್ಯೆಗಳಿಗೆ ದಾನಧರ್ಮ ಪರಿಹಾರವೋ?

ಮಾನವ ಸಮಸ್ಯೆಗಳಿಗೆ ದಾನಧರ್ಮ ಪರಿಹಾರವೋ?

ಮಾನವ ಸಮಸ್ಯೆಗಳಿಗೆ ದಾನಧರ್ಮ ಪರಿಹಾರವೋ?

ನೈಸರ್ಗಿಕ ವಿಪತ್ತುಗಳು, ಬಡತನ, ಹಸಿವು, ರೋಗಗಳು ಮತ್ತು ಪರಿಸರಕ್ಕೆ ಸಂಬಂಧಪಟ್ಟ ಸಂಭಾವ್ಯ ಅಪಾಯಗಳೇ ವಾರ್ತೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ ಮನಸ್ಸಿಗೆ ನೆಮ್ಮದಿತರುವ ಒಂದು ಪ್ರವೃತ್ತಿಯೂ ಜನರಲ್ಲಿ ಕಾಣಬರುತ್ತಿದೆ. ಅದು ಯಾವುದೆಂದರೆ, ಜನರು ಹೆಚ್ಚೆಚ್ಚು ಉದಾರಿಗಳಾಗುತ್ತಿದ್ದಾರೆ. ಧನಿಕ ವ್ಯಕ್ತಿಗಳು ಒಳ್ಳೇ ಉದ್ದೇಶಗಳಿಗಾಗಿ ಲಕ್ಷಗಟ್ಟಲೆ, ಕೆಲವೊಮ್ಮೆ ಕೋಟಿಗಟ್ಟಲೆ ಡಾಲರ್‌ಗಳನ್ನೂ ದಾನಮಾಡಲಿದ್ದಾರೆಂಬ ಘೋಷಣೆಗಳು ದೊಡ್ಡ ಸುದ್ದಿಯಾಗುತ್ತವೆ. ಸಾಮಾನ್ಯವಾಗಿ ಹೆಸರಾಂತ ವ್ಯಕ್ತಿಗಳು ತಮ್ಮ ಖ್ಯಾತಿಯನ್ನು ಬಳಸಿ ಗಂಭೀರ ಸಮಸ್ಯೆಗಳೆಡೆಗೆ ಜನರ ಗಮನ ಸೆಳೆಯುತ್ತಿರುವುದು ಕಂಡುಬರುತ್ತಿದೆ. ಮಧ್ಯಮವರ್ಗದವರು ಸಹ ಧನಸಹಾಯ ಮಾಡುತ್ತಾರೆ. ಆದರೆ ಇಂಥ ಆರ್ಥಿಕ ನೆರವು ಎಷ್ಟರ ಮಟ್ಟಿಗೆ ಸಹಾಯ ಮಾಡಬಲ್ಲದು?

ದಾನಮಾಡುವಿಕೆಯ ಸುವರ್ಣ ಯುಗವೋ?

ಕೆಲವು ದೇಶಗಳಲ್ಲಿ ದಾನಮಾಡುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವಂತೆ ತೋರುತ್ತಿದೆ. “ಹಿಂದೆಂದಿಗಿಂತಲೂ, ಈ ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ ಹೆಚ್ಚು ದೇಶಗಳಲ್ಲಿ ಹೆಚ್ಚು ಸಂಪತ್ತಿರುವ ಹೆಚ್ಚು [ದಾನಧರ್ಮದ] ಸಂಘಗಳಿವೆ” ಎಂದು ಒಂದು ಪುಸ್ತಕ ಹೇಳುತ್ತದೆ. ಐಶ್ವರ್ಯವಂತರ ಸಂಖ್ಯೆ ಏರುತ್ತಿರುವುದರಿಂದ ದಾನಧರ್ಮಗಳು ಮುಂದುವರಿಯುವವೆಂದು ನಿರೀಕ್ಷಿಸಲಾಗಿದೆ. ಈ ಧನಿಕರಲ್ಲಿ ಕೆಲವರು ತುಂಬ ಹಣ ದಾನಮಾಡುವರು ಮಾತ್ರವಲ್ಲ, ಅವರು ಸಾವನ್ನಪ್ಪುವಾಗ ದಾನಧರ್ಮಕ್ಕೆಂದು ತಮ್ಮ ಉಯಿಲಿನಲ್ಲಿ ಬಿಟ್ಟುಹೋಗಿರುವ ಹಣದ ಮೊತ್ತವೂ ದೊಡ್ಡದ್ದಾಗಿರುವುದೆಂದು ನಿರೀಕ್ಷಿಸಲಾಗಿದೆ. ದ ಇಕನಾಮಿಸ್ಟ್‌ ಎಂಬ ಬ್ರಿಟಿಷ್‌ ವಾರ್ತಾಪತ್ರಿಕೆಯು ಸಕಾರಣದಿಂದಲೇ ಹೇಳಿದ್ದೇನೆಂದರೆ, ಬಹುಶಃ ನಾವು “ದಾನಧರ್ಮದ ಸುವರ್ಣ ಯುಗ” ಉದಯವಾಗುವುದನ್ನು ನೋಡುತ್ತಿದ್ದೇವೆ.

ದಾನಧರ್ಮ ಮಾಡುವ ಈ ಪ್ರವೃತ್ತಿಗೆ ಒಂದು ಕಾರಣ, ಕೂಡಲೇ ಗಮನಕೊಡಬೇಕಾದ ಜಾಗತಿಕ ಸಮಸ್ಯೆಗಳೆಡೆಗೆ ಸರ್ಕಾರಗಳು ತೋರಿಸುವ ನಿರ್ಲಕ್ಷ್ಯವೇ ಆಗಿದೆ. ಆಫ್ರಿಕದಲ್ಲಿ ಏಚ್‌ಐವಿ/ಏಡ್ಸ್‌ಗಾಗಿರುವ ವಿಶ್ವಸಂಸ್ಥೆಯ ಒಬ್ಬ ವಿಶೇಷ ಪ್ರತಿನಿಧಿಗನುಸಾರ “ರಾಜಕೀಯ ನಾಯಕತ್ವದ ಕೊರತೆಯೇ” ಹೆಸರಾಂತ ವ್ಯಕ್ತಿಗಳು ಭೌಗೋಳಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆಂದು ಸಹಾಯಹಸ್ತ ನೀಡುತ್ತಿರಲು ಒಂದು ಕಾರಣವಾಗಿದೆ. ಬಡತನ, ಆರೋಗ್ಯಾರೈಕೆ, ಪರಿಸರ, ಶಿಕ್ಷಣ ಅಥವಾ ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟ “ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ವತಿಯಿಂದ ಹಾಗೂ ಅಂತಾರಾಷ್ಟ್ರೀಯವಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿಲ್ಲವೆಂಬುದರ ಕುರಿತು ಹೆಚ್ಚೆಚ್ಚಾಗಿ ತಾಳ್ಮೆಗೆಡುತ್ತಿರುವವರು” ವಿಶೇಷವಾಗಿ ಧನಿಕ ವ್ಯಕ್ತಿಗಳೆಂದು ದ ಫೌಂಡೇಷನ್‌: ಅ ಗ್ರೇಟ್‌ ಅಮೆರಿಕನ್‌ ಸೀಕ್ರೆಟ್‌​—⁠ಹೌ ಪ್ರೈವೇಟ್‌ ವೆಲ್ತ್‌ ಇಸ್‌ ಚೇಂಜಿಂಗ್‌ ದ ವರ್ಲ್ಡ್‌ ಎಂಬ ಪುಸ್ತಕದಲ್ಲಿ ಜೋಯೆಲ್‌ ಫ್ಲೀಷ್‌ಮ್ಯಾನ್‌ ಎಂಬವರು ಹೇಳುತ್ತಾರೆ. ಪರಿಸ್ಥಿತಿಯನ್ನು ಕೂಡಲೇ ಸುಧಾರಿಸಬೇಕೆಂದು ಆತುರಪಡುವ ಕೆಲವು ಧನಿಕ ದಾನಿಗಳು, ತಮಗೆ ವ್ಯಾಪಾರದಲ್ಲಿ ಯಶಸ್ಸನ್ನು ತಂದ ವಿಧಾನಗಳನ್ನು ಇದರಲ್ಲೂ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ದಾನಧರ್ಮಕ್ಕಿರುವ ಶಕ್ತಿ

ಇಪ್ಪತ್ತನೆಯ ಶತಮಾನದ ಆರಂಭದಲ್ಲೂ ಜನರು ತುಂಬ ದಾನಧರ್ಮ ಮಾಡಿದರು. ವ್ಯಾಪಾರ ಕ್ಷೇತ್ರದ ದಿಗ್ಗಜರಾದ ಆ್ಯಂಡ್ರೂ ಕಾರ್ನೆಗೀ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಸೀನಿಯರ್‌ ಎಂಬವರು ಬಡಬಗ್ಗರಿಗೆ ಸಹಾಯ ಮಾಡಲಿಕ್ಕಾಗಿ ತಮ್ಮ ಹಣವನ್ನು ಬಳಸಲು ನಿರ್ಧರಿಸಿದರು. ಈ ಕೊಡುಗೈ ದಾನಿಗಳು ಗಮನಿಸಿದ್ದೇನೆಂದರೆ, ಸಾಮಾನ್ಯ ಸಹಾಯಸಂಘಗಳು ಹಸಿದಿರುವ ಜನರಿಗೆ ಊಟಕೊಟ್ಟು, ಅಸ್ವಸ್ಥ ಮಕ್ಕಳ ಆರೈಕೆ ಮಾಡುತ್ತವಾದರೂ ಈ ಸಮಸ್ಯೆಗಳ ಮೂಲಕಾರಣಗಳನ್ನು ಬಗೆಹರಿಸುತ್ತಿಲ್ಲ. ದಾನವನ್ನು ಹೆಚ್ಚು ವ್ಯವಸ್ಥಾಪಿತ ವಿಧದಲ್ಲಿ ಮಾಡುವ ಅಗತ್ಯವನ್ನು ಇವರು ಗ್ರಹಿಸಿ, ಸಾಮಾಜಿಕ ಬದಲಾವಣೆಗೆ ಇಂಬುಕೊಡುವ ಹಾಗೂ ಸಮಸ್ಯೆಗಳ ಮೂಲಕಾರಣಗಳನ್ನು ಅಳಿಸಿಹಾಕಲು ಮಾಡಲಾಗುವ ಸಂಶೋಧನೆಗೆ ಹಣ ಒದಗಿಸುವ ಸಂಘಸಂಸ್ಥೆಗಳನ್ನು ಸ್ಥಾಪಿಸಿದರು. ಆ ಕಾಲದಿಂದ ಹಿಡಿದು ಲೋಕವ್ಯಾಪಕವಾಗಿ ಅಂಥ ಸಾವಿರಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ 50ಕ್ಕಿಂತಲೂ ಹೆಚ್ಚು ಸಂಸ್ಥೆಗಳು ನೂರು ಕೋಟಿ ಡಾಲರಿಗಿಂತಲೂ ಅಧಿಕ ಮೌಲ್ಯದ ಸೊತ್ತುಗಳನ್ನು ಹೊಂದಿವೆ.

ಇದೆಲ್ಲದರಿಂದಾಗಿ ಸಾಧಿಸಲಾಗಿರುವ ಒಳಿತನ್ನು ಅಲ್ಲಗಳೆಯಲಾಗದು. ತಲೆಯೆತ್ತಿರುವ ಅಸಂಖ್ಯಾತ ಶಾಲೆಗಳು, ಗ್ರಂಥಾಲಯಗಳು, ಆಸ್ಪತ್ರೆಗಳು, ಉದ್ಯಾನಗಳು ಹಾಗೂ ವಸ್ತುಸಂಗ್ರಹಾಲಯಗಳು ಇದಕ್ಕೆ ಸಾಕ್ಷ್ಯ. ಅದೇ ರೀತಿಯಲ್ಲಿ, ಆಹಾರ ಉತ್ಪಾದನೆಯ ಪ್ರಮಾಣವನ್ನು ಏರಿಸುವ ಕಾರ್ಯಕ್ರಮಗಳಿಂದಾಗಿ ಬಡರಾಷ್ಟ್ರಗಳಿಗೆ ಇನ್ನಷ್ಟು ಆಹಾರ ಒದಗಿಸಲು ಸಾಧ್ಯವಾಗಿದೆ. ವೈದ್ಯಕೀಯ ಸಂಶೋಧನೆಗೆ ಬಂಡವಾಳ ಒದಗಿಸಿರುವುದರಿಂದ, ಆರೋಗ್ಯಾರೈಕೆ ಉತ್ತಮಗೊಂಡಿದೆ ಮತ್ತು ಪೀತಜ್ವರ ಹಾಗೂ ಕೆಲವೊಂದು ರೋಗಗಳ ನಿರ್ಮೂಲನವೂ ಸಾಧ್ಯವಾಗಿದೆ.

ಇಂದು ಜಾಗತಿಕ ಸಮಸ್ಯೆಗಳನ್ನು ಹಿಂದೆಂದಿಗಿಂತಲೂ ಹೆಚ್ಚು ತುರ್ತುಭಾವದಿಂದ ಮತ್ತು ಹೆಚ್ಚಿನ ನೆರವಿನೊಂದಿಗೆ ನಿರ್ವಹಿಸಲಾಗುತ್ತಿದೆ. ಈ ಕಾರಣ, ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಯಶಸ್ಸು ಕಾಣುವ ಸಾಧ್ಯತೆ ಹೆಚ್ಚಿದೆಯೆಂದು ಅನೇಕರಿಗೆ ತೋರುತ್ತದೆ. 2006ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರು, ದಾನಧರ್ಮ ಮಾಡುವವರ ಒಂದು ಗುಂಪಿಗೆ ಹೇಳಿದ್ದು: “ಸಾರ್ವಜನಿಕರ ಸ್ಥಿತಿಗತಿಗಳನ್ನು ಸುಧಾರಿಸಲು ಖಾಸಗಿ ದಾನಗಳು ಮಹತ್ತರವಾಗಿ ಸಹಾಯ ಮಾಡುತ್ತವೆ.”

ಆದರೆ ಅನೇಕರಿಗೆ ಕೇವಲ ದಾನಗಳಿಂದ ಸುಧಾರಣೆ ಆಗಬಲ್ಲದು ಎಂಬುದರ ಕುರಿತು ಅನಿಶ್ಚಿತತೆಯಿದೆ. ಭೌಗೋಳಿಕ ಆರೋಗ್ಯಾರೈಕೆಯ ಕ್ಷೇತ್ರದಲ್ಲಿ ತಜ್ಞಳಾದ ಲ್ಯಾರಿ ಗೆರೆಟ್‌ ಬರೆದದ್ದು: “ಇಷ್ಟೊಂದು ಹಣ ಹರಿದುಬರುತ್ತಿರುವುದರಿಂದ ಲೋಕದ ಅನೇಕ ಆರೋಗ್ಯ ಸಮಸ್ಯೆಗಳು ಬೇಗನೆ ಬಗೆಹರಿಯಲಿವೆ ಎಂಬಂತೆ ತೋರಬಹುದು. ಆದರೆ ಈ ಎಣಿಕೆ ತಪ್ಪು.” ಯಾಕೆ? ಕೋರ್ಟು-ಕಛೇರಿಗಳಿಗೆಂದು ಆಗುವ ದುಬಾರಿ ಖರ್ಚು, ಭ್ರಷ್ಟಾಚಾರ, ಸಂಘಟಿತ ಪ್ರಯತ್ನದ ಕೊರತೆ ಮತ್ತು ಇಂಥಿಂಥ ಆರೋಗ್ಯ ಸಮಸ್ಯೆಗಳಿಗೇ (ಉದಾಹರಣೆಗೆ, ಏಡ್ಸ್‌ ರೋಗಕ್ಕೆ ಮಾತ್ರ) ತಮ್ಮ ಹಣ ಬಳಸಬೇಕೆಂದು ದಾನಿಗಳು ನಿರ್ಬಂಧಿಸುವುದು ಸಮಸ್ಯೆಯೊಡ್ಡುತ್ತದೆಂದು ಆಕೆ ಹೇಳುತ್ತಾಳೆ.

ಪ್ರಯತ್ನಗಳು ಸಂಘಟಿಸಲ್ಪಟ್ಟಿಲ್ಲ ಮತ್ತು ಹಣವನ್ನು “ಎಲ್ಲರಿಗೂ ಅವಶ್ಯವಿರುವ ಸಾಮಾನ್ಯ ಆರೋಗ್ಯಾರೈಕೆಯ ಬದಲು ಹೆಚ್ಚಾಗಿ ನಿರ್ದಿಷ್ಟವಾದ ಕೆಲವೇ ರೋಗಗಳಿಗೆಂದು ಕೊಡಲಾಗುತ್ತಿದೆ.” ಆದುದರಿಂದ, “ಔದಾರ್ಯದ ಈ ಸದ್ಯದ ಯುಗವು ಜನರ ನಿರೀಕ್ಷಣೆಗಳಿಗೆ ತಕ್ಕಂತೆ ಇರಲಿಕ್ಕಿಲ್ಲ ಮಾತ್ರವಲ್ಲ, ಸಮಸ್ಯೆಗಳು ಇನ್ನಷ್ಟು ಹದಗೆಡುವ ಗಂಭೀರ ಅಪಾಯವೂ ಇದೆ” ಎಂದು ಗೆರೆಟ್‌ಗನಿಸುತ್ತದೆ.

ಹಣವೊಂದೇ ಸಾಲದೇಕೆ?

ದಾನಧರ್ಮದ ಉದ್ದೇಶ ಏನೇ ಆಗಿರಲಿ ಅದರಿಂದ ಸಿಗುವ ಯಶಸ್ಸು ಯಾವಾಗಲೂ ಸೀಮಿತವಾಗಿರುವುದು. ಏಕೆ? ಒಂದು ಕಾರಣವೇನೆಂದರೆ ಹಣವಾಗಲಿ, ಉತ್ತಮ ಐಹಿಕ ಶಿಕ್ಷಣವಾಗಲಿ ಲೋಭ, ದ್ವೇಷ, ಪೂರ್ವಗ್ರಹ, ರಾಷ್ಟ್ರೀಯತೆ, ಜಾತೀಯತೆ ಮತ್ತು ಸುಳ್ಳು ಧಾರ್ಮೀಕ ನಂಬಿಕೆಗಳಂಥ ಸಮಸ್ಯೆಗಳನ್ನು ಕಿತ್ತೊಗೆಯಲಾರದು. ಈ ಎಲ್ಲ ವಿಷಯಗಳು ಮಾನವಕುಲದ ದುರ್ಗತಿಯನ್ನು ಹೆಚ್ಚಿಸುತ್ತವೆ ನಿಜ, ಆದರೆ ಅವು ಕಷ್ಟಸಂಕಟಗಳಿಗೆ ಮೂಲಕಾರಣಗಳಲ್ಲ. ಅವುಗಳಿಗಿಂತ ಹೆಚ್ಚು ಗಂಭೀರ ಅಂಶಗಳು ಒಳಗೂಡಿವೆಯೆಂದು ಬೈಬಲ್‌ ತಿಳಿಸುತ್ತದೆ.

ಇವುಗಳಲ್ಲಿ ಒಂದು ಮೂಲಕಾರಣ, ಮಾನವನ ಅಪರಿಪೂರ್ಣತೆ ಅಂದರೆ ಮಾನವನು ಪಾಪಿಯಾಗಿ ಹುಟ್ಟಿರುವುದೇ ಆಗಿದೆ. (ರೋಮಾಪುರ 3:23; 5:12) ನಮ್ಮ ಈ ಅಪರಿಪೂರ್ಣತೆಯಿಂದಾಗಿಯೇ ತಪ್ಪಾದ ವಿಷಯಗಳನ್ನು ಯೋಚಿಸುತ್ತೇವೆ ಹಾಗೂ ಮಾಡುತ್ತೇವೆ. “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಆದಿಕಾಂಡ 8:21 ಹೇಳುತ್ತದೆ. ಈ ಮನಸ್ಸಂಕಲ್ಪಕ್ಕೆ ಮಣಿಯುವುದರಿಂದ ಲಕ್ಷಗಟ್ಟಲೆ ಜನರು ಲೈಂಗಿಕ ಅನೈತಿಕತೆಯಲ್ಲಿ ತೊಡಗುತ್ತಾರೆ ಹಾಗೂ ಮಾದಕ ಪದಾರ್ಥಗಳ ವ್ಯಸನಿಗಳಾಗುತ್ತಾರೆ. ಈ ನಡತೆ ವಿವಿಧ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ ಮತ್ತು ಇವುಗಳಲ್ಲಿ ಏಡ್ಸ್‌ ಒಂದಾಗಿದೆ.​—⁠ರೋಮಾಪುರ 1:26, 27.

ಮಾನವರ ಕಷ್ಟಸಂಕಟಗಳಿಗೆ ಇನ್ನೊಂದು ಮೂಲಕಾರಣವು, ಅವರು ತಮ್ಮನ್ನೇ ಸರಿಯಾಗಿ ಆಳಲು ಅಸಮರ್ಥರಾಗಿರುವುದೇ ಆಗಿದೆ. “ಮನುಷ್ಯನು . . . ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂದು ಯೆರೆಮೀಯ 10:23 ಹೇಳುತ್ತದೆ. ಈ ಮುಂಚೆ ಸೂಚಿಸಲಾದ “ರಾಜಕೀಯ ನಾಯಕತ್ವದ ಕೊರತೆ”ಯಿಂದಾಗಿಯೇ ಕೆಲವು ಸಂಘಗಳು, ಸರ್ಕಾರ ನೆರವು ನೀಡಲಿ ಎಂದು ಕಾಯದೇ ತಾವಾಗಿ ಮುಂದೆಹೋಗಿ ದಾನಗಳನ್ನು ಮಾಡುತ್ತವೆ. ಮಾನವರು ಪರಸ್ಪರರನ್ನಲ್ಲ, ಬದಲಾಗಿ ಸೃಷ್ಟಿಕರ್ತನನ್ನು ತಮ್ಮ ಅಧಿಪತಿಯಾಗಿ ಸ್ವೀಕರಿಸುವಂತೆ ಸೃಷ್ಟಿಸಲ್ಪಟ್ಟರೆಂದು ಬೈಬಲ್‌ ವಿವರಿಸುತ್ತದೆ.​—⁠ಯೆಶಾಯ 33:22.

ಅಷ್ಟೇ ಅಲ್ಲ, ಸೃಷ್ಟಿಕರ್ತನಾದ ಯೆಹೋವ ದೇವರು ಮಾನವಕುಲವನ್ನು ಬಾಧಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ತೆಗೆದುಹಾಕುವನೆಂದೂ ಬೈಬಲ್‌ ವಾಗ್ದಾನಿಸುತ್ತದೆ. ಈ ದಿಶೆಯಲ್ಲಿ ಆತನು ಈಗಾಗಲೇ ಮಹತ್ತಾದ ಕ್ರಮಕೈಗೊಂಡಿದ್ದಾನೆ.

ಮಹಾನ್‌ ದಾನಿ

ದಾನಧರ್ಮಕ್ಕಾಗಿರುವ ಗ್ರೀಕ್‌ ಪದದ ಮೂಲಾರ್ಥವು, “ಮಾನವಕುಲದ ಮೇಲಿನ ಪ್ರೀತಿ” ಎಂದಾಗಿದೆ. ಮಾನವಕುಲದ ಮೇಲೆ ಸೃಷ್ಟಿಕರ್ತನಿಗಿರುವಷ್ಟು ಪ್ರೀತಿ ಬೇರಾರಿಗೂ ಇಲ್ಲ. ಯೋಹಾನ 3:16 ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಹೌದು, ಮಾನವರನ್ನು ಪಾಪಮರಣಗಳ ಬಿಗಿಮುಷ್ಟಿಯಿಂದ ಬಿಡಿಸಲಿಕ್ಕಾಗಿ ಯೆಹೋವನು ಹಣಕ್ಕಿಂತಲೂ ಎಷ್ಟೋ ಹೆಚ್ಚಿನದ್ದನ್ನು ಕೊಟ್ಟನು. ಆತನು ‘ಅನೇಕರನ್ನು ಬಿಡಿಸಿಕೊಳ್ಳಲು ಈಡು’ ಇಲ್ಲವೇ ವಿಮೋಚನಾ ಮೌಲ್ಯವಾಗಿ ತನ್ನ ಅತಿಪ್ರಿಯ ಮಗನನ್ನು ಕೊಟ್ಟನು. (ಮತ್ತಾಯ 20:28) ಅಪೊಸ್ತಲ ಪೇತ್ರನು ಯೇಸುವಿನ ಕುರಿತು ಬರೆದದ್ದು: “ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.”​—⁠1 ಪೇತ್ರ 2:24.

ಆಳ್ವಿಕೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿಯೂ ಯೆಹೋವನು ಏರ್ಪಾಡು ಮಾಡಿದ್ದಾನೆ. ಇದಕ್ಕಾಗಿ ಆತನು, ದೇವರ ರಾಜ್ಯವೆಂದು ಕರೆಯಲಾಗಿರುವ ಏಕೈಕ ಸರ್ಕಾರವನ್ನು ಸ್ಥಾಪಿಸಿದ್ದಾನೆ. ಈ ರಾಜ್ಯವು ಸ್ವರ್ಗದಿಂದ ಆಳುತ್ತಾ, ದುಷ್ಟರೆಲ್ಲರನ್ನೂ ತೆಗೆದುಹಾಕಿ ಭೂಮಿಗೆ ಶಾಂತಿಸಾಮರಸ್ಯವನ್ನು ತರುವುದು.​—⁠ಕೀರ್ತನೆ 37:10, 11; ದಾನಿಯೇಲ 2:44; 7:13, 14.

ಮಾನವ ಕಷ್ಟಸಂಕಟಗಳ ಮೂಲಕಾರಣಗಳನ್ನು ಪೂರ್ಣವಾಗಿ ತೆಗೆದುಹಾಕುವ ಮೂಲಕ, ಸಾಂಘಿಕವಾಗಿಯಾಗಲಿ ವೈಯಕ್ತಿಕವಾಗಿಯಾಗಲಿ ಮಾನವರು ಸಾಧಿಸಲಾರದ ವಿಷಯಗಳನ್ನು ದೇವರು ಸಾಧಿಸಲಿಕ್ಕಿದ್ದಾನೆ. ಆದುದರಿಂದ, ಯೆಹೋವನ ಸಾಕ್ಷಿಗಳು ದಾನಧರ್ಮದ ಸಂಘಗಳನ್ನು ಸ್ಥಾಪಿಸುವ ಬದಲಿಗೆ, ಯೇಸುವನ್ನು ಅನುಸರಿಸುತ್ತಾ ತಮ್ಮ ಸಮಯ ಹಾಗೂ ಸಂಪನ್ಮೂಲಗಳನ್ನು “ದೇವರ ರಾಜ್ಯದ ಸುವಾರ್ತೆಯನ್ನು” ಪ್ರಕಟಿಸಲಿಕ್ಕಾಗಿ ವ್ಯಯಿಸಲು ಇಷ್ಟಪಡುತ್ತಾರೆ.​—⁠ಮತ್ತಾಯ 24:14; ಲೂಕ 4:43. (g 5/08)

[ಪುಟ 17ರಲ್ಲಿರುವ ಚೌಕ/ಚಿತ್ರ]

“ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು”

ಬೈಬಲಿನಲ್ಲಿ 2 ಕೊರಿಂಥ 9:7ರಲ್ಲಿರುವ ಈ ಹೇಳಿಕೆಯು ಯೆಹೋವನ ಸಾಕ್ಷಿಗಳನ್ನು ಮಾರ್ಗದರ್ಶಿಸುವ ಒಂದು ಮೂಲತತ್ತ್ವವಾಗಿದೆ. “ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; . . . ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು” ಎಂಬ ಬುದ್ಧಿಮಾತನ್ನು ಅನ್ವಯಿಸಲು ಪ್ರಯತ್ನಿಸುತ್ತಾ ಇತರರ ಪ್ರಯೋಜನಕ್ಕಾಗಿ ತಮ್ಮ ಸಮಯ, ಶಕ್ತಿ ಹಾಗೂ ಸಂಪನ್ಮೂಲಗಳನ್ನು ವ್ಯಯಿಸುತ್ತಾರೆ.—1 ಯೋಹಾನ 3:18.

ನೈಸರ್ಗಿಕ ವಿಪತ್ತುಗಳಂಥ ಕಷ್ಟದ ಸಮಯಗಳಲ್ಲಿ ಬಾಧಿತರಾದವರಿಗೆ ಸಹಾಯ ಮಾಡುವುದನ್ನು ಯೆಹೋವನ ಸಾಕ್ಷಿಗಳು ತಮ್ಮ ಸುಯೋಗವೆಂದು ಎಣಿಸುತ್ತಾರೆ. ಉದಾಹರಣೆಗೆ ಯುನೈಟೆಡ್‌ ಸ್ಟೇಟ್ಸ್‌ನ ದಕ್ಷಿಣ ಪ್ರಾಂತಕ್ಕೆ ಕತ್ರಿನಾ, ರೀಟಾ ಮತ್ತು ವಿಲ್ಮಾ ಎಂಬ ಚಂಡಮಾರುತಗಳು ​ಅಪ್ಪಳಿಸಿದಾಗ, ಸಾವಿರಾರು ಸಾಕ್ಷಿಗಳು ಆ ಕ್ಷೇತ್ರಕ್ಕೆ ಗುಂಪುಗುಂಪಾಗಿ ಬಂದು ಪರಿಹಾರ ಕಾರ್ಯದಲ್ಲಿ ಹಾಗೂ ಪುನರ್‌ನಿರ್ಮಾಣ ಕೆಲಸದಲ್ಲಿ ಸಹಾಯ ಮಾಡಿದರು. ಈ ಸ್ವಯಂಸೇವಕರು ಸ್ಥಳಿಕ ಪರಿಹಾರ ಸಮಿತಿಗಳ ನಿರ್ದೇಶನಕ್ಕನುಸಾರ ಕೆಲಸಮಾಡುತ್ತಾ, ಯೆಹೋವನ ಸಾಕ್ಷಿಗಳ 5,600ಕ್ಕಿಂತಲೂ ಹೆಚ್ಚು ಮನೆಗಳು ಮತ್ತು 90 ರಾಜ್ಯ ಸಭಾಗೃಹಗಳನ್ನು ರಿಪೇರಿಮಾಡಿದರು.

ತಮ್ಮ ಸಂಬಳದ ಹತ್ತನೇ ಭಾಗವನ್ನು ಕಾಣಿಕೆಯಾಗಿ ಕೊಡಬೇಕೆಂಬ ನಿಯಮ ಯೆಹೋವನ ಸಾಕ್ಷಿಗಳಲ್ಲಿಲ್ಲ, ಇಲ್ಲವೇ ಬೇರಾವುದೇ ರೀತಿಯಲ್ಲಿ ಅವರು ಹಣಕ್ಕಾಗಿ ಮನವಿಮಾಡುವುದಿಲ್ಲ. ಅವರ ಕೆಲಸವು ಪೂರ್ತಿಯಾಗಿ ಸ್ವಯಂಪ್ರೇರಿತ ದಾನಗಳಿಂದ ನಡೆಯುತ್ತದೆ.—ಮತ್ತಾಯ 6:3, 4; 2 ಕೊರಿಂಥ 8:12.

[ಪುಟ 16ರಲ್ಲಿರುವ ಚಿತ್ರಗಳು]

ಕಾಯಿಲೆಗಳು ಹಾಗೂ ಕಷ್ಟಸಂಕಟದ ಮೂಲಕಾರಣಗಳನ್ನು ಹಣ ಅಳಿಸಿಹಾಕಲಾರದು

[ಕೃಪೆ]

© Chris de Bode/Panos Pictures