ಕೊರಿಂಥದವರಿಗೆ ಬರೆದ ಎರಡನೇ ಪತ್ರ 8:1-24

  • ಯೂದಾಯದ ಕ್ರೈಸ್ತರಿಗಾಗಿ ಕಾಣಿಕೆ ಸಂಗ್ರಹ (1-15)

  • ತೀತನನ್ನ ಕೊರಿಂಥಕ್ಕೆ ಕಳಿಸಲಾಗುತ್ತೆ (16-24)

8  ಈಗ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ದೇವರು ತೋರಿಸಿರೋ ಅಪಾರ ಕೃಪೆ ಬಗ್ಗೆ ನಿಮಗೆ ಹೇಳೋಕೆ ಇಷ್ಟಪಡ್ತೀನಿ.+  ಅವ್ರಿಗೆ ದೊಡ್ಡ ಪರೀಕ್ಷೆ ಬಂದಿದ್ರಿಂದ ತುಂಬ ಕಷ್ಟದಲ್ಲಿದ್ರು, ಕಡು ಬಡತನದಲ್ಲಿದ್ರು. ಆದ್ರೂ ದಾನಶೂರರಾಗಿ ತುಂಬ ಖುಷಿಯಿಂದ ಕಾಣಿಕೆ ಕೊಟ್ರು.  ತಮ್ಮಿಂದ ಕೊಡೋಕೆ ಆಗೋದನ್ನೆಲ್ಲ ಅವರು ಕೊಟ್ರು.+ ನಿಜ ಹೇಳಬೇಕಂದ್ರೆ, ಅವ್ರಿಂದ ಎಷ್ಟು ಕೊಡೋಕೆ ಆಯ್ತೋ ಅದಕ್ಕಿಂತ ಜಾಸ್ತಿನೇ ಕೊಟ್ರು. ಇದಕ್ಕೆ ನಾನೇ ಸಾಕ್ಷಿ.+  ಅವ್ರಾಗೇ ಮುಂದೆ ಬಂದು ಪವಿತ್ರ ಜನ್ರಿಗಾಗಿರೋ ಪರಿಹಾರ ಸೇವೆಯಲ್ಲಿ ‘ನಮಗೂ ಒಂದು ಪಾಲಿರಬೇಕು, ಪ್ರೀತಿಯಿಂದ ಕಾಣಿಕೆ ಕೊಡೋ ಸೌಭಾಗ್ಯ ನಮಗೂ ಸಿಗಬೇಕು’ ಅಂತ ನಮ್ಮ ಹತ್ರ ಮತ್ತೆ ಮತ್ತೆ ಬೇಡ್ಕೊಂಡ್ರು.+  ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿನೇ ಅವರು ಮಾಡಿದ್ರು. ದೇವರ ಇಷ್ಟದ ಪ್ರಕಾರ ಪ್ರಭುವಿನ ಸೇವೆ ಮಾಡೋಕೆ ಮತ್ತು ನಮಗೆ ಸಹಾಯ ಮಾಡೋಕೆ ಅವರು ಅವ್ರನ್ನೇ ಅರ್ಪಿಸ್ಕೊಂಡ್ರು.  ಇದನ್ನ ನೋಡಿ ನಿಮ್ಮಿಂದ ಪ್ರೀತಿಯ ಕಾಣಿಕೆಯನ್ನ ಕೂಡಿಡೋ ಕೆಲಸವನ್ನ ಶುರುಮಾಡಿದ ತೀತನಿಗೆ ಅದನ್ನ ಮುಗಿಸೋಕೆ ನಾವು ಪ್ರೋತ್ಸಾಹಿಸಿದ್ವಿ.+  ನಿಮ್ಮ ಬಗ್ಗೆ ಹೇಳೋದಾದ್ರೆ ನಿಮ್ಮಲ್ಲಿ ತುಂಬ ನಂಬಿಕೆ, ಜ್ಞಾನ, ಶ್ರದ್ಧೆ ಇದೆ, ಚೆನ್ನಾಗಿ ಮಾತಾಡೋ ಸಾಮರ್ಥ್ಯ ಇದೆ. ನಾವು ನಿಮ್ಮನ್ನ ಪ್ರೀತಿಸೋ ತರಾನೇ ನೀವು ಬೇರೆಯವ್ರನ್ನ ತುಂಬ ಪ್ರೀತಿಸ್ತೀರ. ಅದೇ ತರ ಪ್ರೀತಿಯಿಂದ ಕಾಣಿಕೆ ಕೊಡೋ ವಿಷ್ಯದಲ್ಲೂ ತುಂಬ ಉದಾರಿಗಳಾಗಿರಿ.+  ಇದನ್ನ ನಾನು ಆಜ್ಞೆ ತರ ಹೇಳ್ತಿಲ್ಲ. ಬೇರೆಯವ್ರ ಶ್ರಮ, ಸಿದ್ಧಮನಸ್ಸಿನ ಬಗ್ಗೆ ನಿಮಗೆ ಗೊತ್ತಾಗಬೇಕಂತ, ನಿಮ್ಮ ಪ್ರೀತಿ ಎಷ್ಟು ನಿಜ ಅಂತ ತಿಳ್ಕೊಳ್ಳೋಕೆ ಇಷ್ಟಪಡ್ತೀನಿ.  ನಮ್ಮ ಪ್ರಭು ಯೇಸು ಕ್ರಿಸ್ತ ತೋರಿಸಿದ ಅಪಾರ ಕೃಪೆ ಬಗ್ಗೆ ನಿಮಗೆ ಗೊತ್ತೇ ಇದೆ. ಆತನು ಶ್ರೀಮಂತನಾಗಿದ್ರೂ ಆತನ ಬಡತನದಿಂದ+ ನೀವು ಶ್ರೀಮಂತರಾಗಬೇಕು ಅಂತ ಆತನು ನಿಮಗೋಸ್ಕರ ಬಡವನಾದನು. 10  ಪರಿಹಾರ ಸೇವೆ ಬಗ್ಗೆ ನನ್ನ ಅಭಿಪ್ರಾಯ ಹೇಳ್ತೀನಿ.+ ನೀವು ಒಂದು ವರ್ಷದ ಹಿಂದೆ ಈ ಕೆಲಸ ಶುರುಮಾಡಿದ್ದಷ್ಟೇ ಅಲ್ಲ ಇದ್ರಲ್ಲಿ ತುಂಬ ಉತ್ಸಾಹ ತೋರಿಸಿದ್ರಿ. ಈಗ ಈ ಕೆಲಸ ಮುಗಿಸೋದ್ರಿಂದ ನಿಮಗೆ ಪ್ರಯೋಜನ ಇದೆ. 11  ಈ ಕೆಲಸನ ಎಷ್ಟು ಉತ್ಸಾಹದಿಂದ ಶುರುಮಾಡಿದ್ರೋ ಅಷ್ಟೇ ಉತ್ಸಾಹದಿಂದ ಮುಗಿಸಿ. ಇದಕ್ಕಾಗಿ ನಿಮ್ಮ ಕೈಲಾಗಿದ್ದನ್ನ ಕೊಡಿ. 12  ಮನಸಾರೆ ಕೊಡೋದಾದ್ರೆ ದೇವರು ಅದನ್ನ ಮೆಚ್ತಾನೆ. ಯಾಕಂದ್ರೆ ದೇವರು ಒಬ್ಬನ ಹತ್ರ ಇಲ್ಲದೇ ಇರೋದನ್ನ ಕೇಳಲ್ಲ, ಇರೋದನ್ನೇ ಕೇಳ್ತಾನೆ.+ 13  ಬೇರೆಯವ್ರ ಕಷ್ಟ ಪರಿಹರಿಸೋಕೆ ಹೋಗಿ ನೀವು ಕಷ್ಟಪಡಬೇಕು ಅಂತ ನಾನಿದನ್ನ ಹೇಳ್ತಿಲ್ಲ. 14  ಈಗ ನಿಮ್ಮ ಹತ್ರ ತುಂಬಿರೋದು ಅವ್ರ ಅಗತ್ಯವನ್ನ ತುಂಬಿಸ್ಲಿ, ಅವ್ರ ಹತ್ರ ತುಂಬಿರೋದು ನಿಮ್ಮ ಅಗತ್ಯವನ್ನ ತುಂಬಿಸ್ಲಿ ಅನ್ನೋದು ನನ್ನಿಷ್ಟ. ಹೀಗೆ ಸಮಾನತೆ ಇರುತ್ತೆ. 15  ಇದ್ರಿಂದ “ಜಾಸ್ತಿ ಇದ್ದವನಿಗೆ ತುಂಬ ಜಾಸ್ತಿ ಆಗಲಿಲ್ಲ, ಕಮ್ಮಿ ಇದ್ದವನಿಗೆ ತುಂಬ ಕಮ್ಮಿನೂ ಆಗಲಿಲ್ಲ” ಅಂತ ಬರೆದಿರೋ ತರ ಆಗುತ್ತೆ.+ 16  ನಿಮ್ಮ ಬಗ್ಗೆ ನಮಗಿರುವಷ್ಟೇ ಕಾಳಜಿಯನ್ನ ದೇವರು ತೀತನ ಮನಸ್ಸಲ್ಲೂ ಹುಟ್ಟಿಸಿದಕ್ಕಾಗಿ ಆತನಿಗೆ ಧನ್ಯವಾದ.+ 17  ನಾವು ಹೇಳಿದ್ದನ್ನ ಮಾಡೋಕೆ ಅವನು ಒಪ್ಕೊಂಡು ಅವನೇ ಇಷ್ಟಪಟ್ಟು ತುಂಬ ಹುಮ್ಮಸ್ಸಿಂದ ನಿಮ್ಮ ಹತ್ರ ಬರ್ತಿದ್ದಾನೆ. 18  ನಾವು ಅವನ ಜೊತೆ ಇನ್ನೊಬ್ಬ ಸಹೋದರನನ್ನ ಕಳಿಸ್ತಿದ್ದೀವಿ. ಈ ಸಹೋದರ ಸಿಹಿಸುದ್ದಿಗಾಗಿ ತುಂಬ ಕೆಲಸ ಮಾಡ್ತಿರೋದ್ರಿಂದ ಎಲ್ಲ ಸಭೆಗಳಲ್ಲೂ ಅವನಿಗೆ ಒಳ್ಳೇ ಹೆಸ್ರಿದೆ. 19  ಅಷ್ಟೆ ಅಲ್ಲ ಕೂಡಿಟ್ಟ ಕಾಣಿಕೆಯನ್ನ ಹಂಚೋದ್ರಲ್ಲಿ ನಮ್ಮ ಜೊತೆ ಬಂದು ಸಹಾಯ ಮಾಡೋಕೆ ಆ ಸಹೋದರರನ್ನ ಸಭೆಗಳು ನೇಮಿಸಿದ್ವು. ಒಡೆಯನ ಮಹಿಮೆಗಾಗಿ ನಾವು ಈ ಹಂಚೋ ಕೆಲಸ ಮಾಡ್ತೀವಿ. ಬೇರೆಯವ್ರಿಗೆ ಸಹಾಯ ಮಾಡೋಕೆ ನಮಗೆ ಮನಸ್ಸಿರೋದಕ್ಕೆ ಇದು ಸಾಕ್ಷಿ ಆಗಿದೆ. 20  ಈ ಉದಾರ ಕಾಣಿಕೆಯನ್ನ ಹಂಚೋ ವಿಷ್ಯದಲ್ಲಿ ಯಾರೂ ನಮ್ಮ ಮೇಲೆ ತಪ್ಪು ಹೊರಿಸದ ಹಾಗೆ ಹುಷಾರಾಗಿದ್ದೀವಿ.+ 21  ಯಾಕಂದ್ರೆ ನಾವು ‘ಯೆಹೋವನ* ದೃಷ್ಟಿಯಲ್ಲಷ್ಟೇ ಅಲ್ಲ ಮನುಷ್ಯರ ದೃಷ್ಟಿಯಲ್ಲೂ ಎಲ್ಲವನ್ನ ಪ್ರಾಮಾಣಿಕವಾಗಿ ಮಾಡ್ತೀವಿ.’+ 22  ಅಷ್ಟೇ ಅಲ್ಲ, ಇವರಿಬ್ರ ಜೊತೆ ನಮ್ಮ ಇನ್ನೊಬ್ಬ ಸಹೋದರನನ್ನ ಕಳಿಸಿದ್ದೀವಿ. ಅವನು ಶ್ರದ್ಧೆಯಿಂದ ಕೆಲಸ ಮಾಡ್ತಾನೆ ಅಂತ ನಾವು ತುಂಬ ಸಲ ಎಷ್ಟೋ ವಿಷ್ಯಗಳಲ್ಲಿ ಅವನನ್ನ ಪರೀಕ್ಷಿಸಿ ತಿಳ್ಕೊಂಡಿದ್ದೀವಿ. ಅವನಿಗೆ ನಿಮ್ಮ ಮೇಲೆ ತುಂಬ ನಂಬಿಕೆ ಇರೋದ್ರಿಂದ ಈಗ ಅವನು ಇನ್ನೂ ತುಂಬ ಶ್ರದ್ಧೆಯಿಂದ ಕೆಲಸ ಮಾಡ್ತಾನೆ. 23  ನಿಮಗೆ ತೀತನ ಬಗ್ಗೆ ಏನಾದ್ರೂ ಪ್ರಶ್ನೆ ಇದ್ರೆ ನಾನು ಹೇಳ್ತೀನಿ ಕೇಳಿ, ಅವನು ನನ್ನ ಜೊತೆ ಬಂದವನು ಮತ್ತು ನನ್ನ ಜೊತೆ ಸೇವೆ ಮಾಡುವವನು. ಅವನ ಜೊತೆ ಬರೋ ನಮ್ಮ ಸಹೋದರರ ಬಗ್ಗೆ ಪ್ರಶ್ನೆ ಇದ್ರೆ ನಾನು ಹೇಳ್ತೀನಿ ಕೇಳಿ, ಅವರು ಸಭೆಗಳ ಅಪೊಸ್ತಲರು ಮತ್ತು ಕ್ರಿಸ್ತನಿಗೆ ಮಹಿಮೆ ತರುವವರು. 24  ಹಾಗಾಗಿ ನೀವು ಅವ್ರನ್ನ ಪ್ರೀತಿಸ್ತೀರ ಅಂತ ತೋರಿಸಿ.+ ನಾವು ನಿಮ್ಮ ಬಗ್ಗೆ ಸುಮ್‌ಸುಮ್ನೆ ಹೊಗಳಲಿಲ್ಲ ಅಂತ ಸಭೆಗಳಿಗೆ ತೋರಿಸಿ.

ಪಾದಟಿಪ್ಪಣಿ