ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನದಲ್ಲಿ ಜಿಗುಪ್ಸೆ ಬಂದಾಗ

ಜೀವನದಲ್ಲಿ ಜಿಗುಪ್ಸೆ ಬಂದಾಗ

“ನನಗೆ ನಕಾರಾತ್ಮಕ ಭಾವನೆಗಳು ಮಿತಿಮೀರಿ ಬರುತ್ತಿದ್ದವು. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದೆ” ಎನ್ನುತ್ತಾಳೆ ಬ್ರಸಿಲ್‌ನ ಆ್ಯಡ್ರಿಯಾನ.

ನಿಮಗೆ ಯಾವತ್ತಾದರೂ ಬದುಕುವುದೇ ಬೇಡ ಅಂತ ಅನಿಸಿದೆಯಾ? ಹಾಗಿದ್ದರೆ ಆ್ಯಡ್ರಿಯಾನಳ ಸನ್ನಿವೇಶ ನಿಮಗೆ ಚೆನ್ನಾಗಿ ಅರ್ಥವಾಗಬಹುದು. ಆಕೆ ತೀವ್ರವಾಗಿ ಚಿಂತಿಸುತ್ತಿದ್ದಳು, ಯಾವಾಗಲೂ ತುಂಬ ನಿರಾಶೆಯಿಂದ ಇರುತ್ತಿದ್ದಳು. ಆಕೆಗೆ ಖಿನ್ನತೆ ಕಾಯಿಲೆ ಇದೆ ಅಂತ ರೋಗಪರೀಕ್ಷೆಯಿಂದ ಗೊತ್ತಾಯಿತು.

ಜಪಾನಿನ ಕಾಒರು ಎಂಬಾತನು ಕಾಯಿಲೆಯಿಂದಿದ್ದ ತನ್ನ ವೃದ್ಧ ಹೆತ್ತವರ ಆರೈಕೆ ಮಾಡುತ್ತಿದ್ದನು. ಅವನು ಹೇಳುತ್ತಾನೆ: “ಕೆಲವೊಮ್ಮೆ ನನ್ನ ಕೆಲಸದಲ್ಲಿ ತುಂಬ ಒತ್ತಡ ಇರುತ್ತಿತ್ತು. ಹೀಗೆ ಸಮಯ ಹೋಗ್ತಾ ಹೋಗ್ತಾ ನನಗೆ ಹಸಿವೆಯೇ ಅನಿಸುತ್ತಿರಲಿಲ್ಲ. ನಿದ್ದೆನೂ ಸರಿಯಾಗಿ ಬರುತ್ತಿರಲಿಲ್ಲ. ಸಾಯುವುದೇ ಇದಕ್ಕಿರುವ ಪರಿಹಾರ ಎಂಬ ತೀರ್ಮಾನಕ್ಕೆ ಬಂದೆ.”

ನೈಜೀರಿಯದ ಊಜೀಬೋಡೀ ಹೀಗೆ ಹೇಳುತ್ತಾನೆ: “ನಾನು ಯಾವಾಗಲೂ ಅಳು ಉಕ್ಕಿಬರುವಷ್ಟು ದುಃಖದಲ್ಲಿರುತ್ತಿದ್ದೆ. ಆದುದರಿಂದ ಹೇಗೆ ಸಾಯುವುದು ಅಂತ ದಾರಿಗಳನ್ನು ಹುಡುಕುತ್ತಿದ್ದೆ.” ಊಜೀಬೋಡೀ, ಕಾಒರು ಮತ್ತು ಆ್ಯಡ್ರಿಯಾನ ಇವರಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂಬುದು ಸಂತೋಷದ ವಿಷಯ. ಆದರೆ ಪ್ರತಿವರ್ಷ ಹತ್ತಿರತ್ತಿರ ಎಂಟು ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸಹಾಯ ಹಸ್ತ

ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಹೆಚ್ಚು ಮಂದಿ ಪುರುಷರು. ಅವರಲ್ಲಿ ಅನೇಕರು ಬೇರೆಯವರ ಸಹಾಯ ಕೇಳಲು ನಾಚಿಕೆಪಟ್ಟವರೇ ಆಗಿದ್ದರು. ಕಾಯಿಲೆ ಇರುವವರಿಗೆ ವೈದ್ಯನ ಅಗತ್ಯ ಇದೆ ಎಂದು ಯೇಸು ಹೇಳಿದ್ದಾನೆ. (ಲೂಕ 5:31) ಆದುದರಿಂದ ನಿಮಗೆ ಸಾಯಬೇಕೆನಿಸುವಷ್ಟು ಖಿನ್ನತೆ ಇದ್ದರೆ ಸಹಾಯ ಪಡೆದುಕೊಳ್ಳಲು ನಾಚಿಕೆ ಪಡಬೇಡಿರಿ. ಖಿನ್ನತೆ ಕಾಯಿಲೆ ಇರುವವರಲ್ಲಿ ತುಂಬ ಮಂದಿ ತಮಗೆ ಚಿಕಿತ್ಸೆಯಿಂದ ಸಹಾಯವಾಗಿದೆ ಎಂದು ಹೇಳಿದ್ದಾರೆ. ಊಜೀಬೋಡೀ, ಕಾಒರು ಮತ್ತು ಆ್ಯಡ್ರಿಯಾನ ಇವರೆಲ್ಲರು ಚಿಕಿತ್ಸೆ ಪಡೆದರು. ಇದರಿಂದಾಗಿ ಈಗ ಅವರ ಪರಿಸ್ಥಿತಿ ತುಂಬ ಸುಧಾರಿಸಿದೆ.

ಇದರ ಚಿಕಿತ್ಸೆಗಾಗಿ ವೈದ್ಯರು ಔಷಧಿ ಇಲ್ಲವೆ ಸಂಭಾಷಣೆ ಚಿಕಿತ್ಸೆ (ಟಾಕಿಂಗ್‌ ತೆರಪಿ) ನೀಡಬಹುದು ಅಥವಾ ಇವೆರಡನ್ನೂ ಬಳಸಬಹುದು. ಈ ಕಾಯಿಲೆ ಇರುವವರನ್ನು ಕುಟುಂಬಸ್ಥರು ಮತ್ತು ಗೆಳೆಯರು ಅರ್ಥಮಾಡಿಕೊಂಡು ತಾಳ್ಮೆ ಮತ್ತು ದಯೆಯಿಂದ ಬೆಂಬಲಿಸುವುದು ತುಂಬ ಅಗತ್ಯ. ಆದರೂ ಒಬ್ಬ ವ್ಯಕ್ತಿಗೆ ಸಿಗಬಹುದಾದ ಅತಿಶ್ರೇಷ್ಠ ಗೆಳೆಯನು ಯೆಹೋವ ದೇವರೇ. ಆತನು ನಮಗೆ ಬೈಬಲಿನ ಮೂಲಕ ಅದ್ಭುತಕರವಾಗಿ ಸಹಾಯ ನೀಡುತ್ತಾನೆ.

ಇದಕ್ಕೆ ಶಾಶ್ವತ ಪರಿಹಾರ ಇದೆಯಾ?

ಖಿನ್ನತೆ ಕಾಯಿಲೆ ಇರುವವರು ಹೆಚ್ಚಾಗಿ ಕೆಲವು ವರ್ಷಗಳವರೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ ಮತ್ತು ತಮ್ಮ ಜೀವನ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಆದರೆ ನೀವು ಖಿನ್ನತೆಯಿಂದ ನರಳುತ್ತಿದ್ದರೆ, ಬರಲಿರುವ ಒಂದು ಸುಂದರ ಭವಿಷ್ಯಕ್ಕಾಗಿ ಎದುರು ನೋಡಬಹುದು. ಇದರ ಬಗ್ಗೆ ಯೋಚಿಸುವುದರಿಂದ ಊಜೀಬೋಡೀಗೂ ತುಂಬ ಸಹಾಯವಾಯಿತು. “ಭೂಮಿಯಲ್ಲಿ ಜೀವಿಸುತ್ತಿರುವ ಯಾವನೂ ‘ತಾನು ಅಸ್ವಸ್ಥನು ಎಂದು ಹೇಳನು’ ಎಂದು ಯೆಶಾಯ 33:24​ರಲ್ಲಿ ಹೇಳಿರುವ ಮಾತಿನ ನೆರವೇರಿಕೆಗಾಗಿ ನಾನು ಕಾಯುತ್ತಾ ಇದ್ದೇನೆ” ಎಂದು ಅವನು ಹೇಳುತ್ತಾನೆ. ಊಜೀಬೋಡೀಯಂತೆ ನೀವು ಸಹ “ನೋವು” ಇಲ್ಲದ “ನೂತನ ಭೂಮಿಯ” ಬಗ್ಗೆ ದೇವರು ಕೊಟ್ಟಿರುವ ವಾಗ್ದಾನದ ಕುರಿತು ಯೋಚಿಸುವ ಮೂಲಕ ಬಲ ಪಡೆದುಕೊಳ್ಳಿರಿ. (ಪ್ರಕಟನೆ 21:1, 4) ಇಲ್ಲಿ ಹೇಳಿರುವ ನೋವಿನಲ್ಲಿ ಮಾನಸಿಕ ಮತ್ತು ಭಾವನಾತ್ಮಕ ನೋವೂ ಒಳಗೂಡಿದೆ. ನಿಮ್ಮ ನೋವಿನ ಭಾವನೆಗಳು ಇಲ್ಲದೇ ಹೋಗುತ್ತವೆ. ಅದರ ನಂತರ ನೀವು ಯಾವತ್ತೂ ನಿಮ್ಮ ನೋವಿನ ಭಾವನೆಗಳನ್ನು ‘ಜ್ಞಾಪಿಸಿಕೊಳ್ಳುವುದಿಲ್ಲ, ಅವು ನಿಮ್ಮ ನೆನಪಿಗೆ ಬರುವುದೂ ಇಲ್ಲ.’—ಯೆಶಾಯ 65:17.