ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಿಯರು ಸಾವನ್ನಪ್ಪಿದಾಗ

ಪ್ರಿಯರು ಸಾವನ್ನಪ್ಪಿದಾಗ

“ದಿಢೀರಂತ ನನ್ನ ಅಣ್ಣ ತೀರಿಕೊಂಡಾಗ ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಇದಾಗಿ ತಿಂಗಳುಗಳಾದರೂ ನನಗೆ ಇದ್ದಕ್ಕಿದ್ದಂತೆ ಅವನ ನೆನಪಾಗುತ್ತಿತ್ತು. ಆಗ ಎಷ್ಟು ನೋವಾಗುತ್ತಿತ್ತೆಂದರೆ ಚಾಕುವಿನಿಂದ ಜೋರಾಗಿ ತಿವಿದ ಹಾಗಾಗುತ್ತಿತ್ತು. ಕೆಲವು ಸಲ, ಅವನು ಸತ್ತದ್ದು ಅನ್ಯಾಯ ಅಂತ ಅನಿಸಿ ಕೋಪ ಬರುತ್ತಿತ್ತು. ಅವನ ಜೊತೆ ತುಂಬ ಸಮಯ ಕಳೆಯದೇ ಇದ್ದದ್ದಕ್ಕೆ ನನ್ನ ಮನಸ್ಸಾಕ್ಷಿ ಚುಚ್ಚುತ್ತಿತ್ತು.”—ಆಸ್ಟ್ರೇಲಿಯದ ವೆನೆಸ್ಸಾ.

ನಿಮ್ಮ ಪ್ರಿಯರೂ ತೀರಿಕೊಂಡಿರುವುದಾದರೆ ನಿಮಗೆ ಸಹ ಬೇರೆ ಬೇರೆ ರೀತಿಯ ಭಾವನೆಗಳು ಬರಬಹುದು. ನೋವು, ದುಃಖ ಆಗಿರಬಹುದು, ಒಂಟಿಭಾವನೆ ಮತ್ತು ದಿಕ್ಕೇ ತೋಚದಂತೆ ಅನಿಸಿರಬಹುದು. ಜೊತೆಗೆ, ಕೋಪ ಬಂದಿರಬಹುದು, ಮನಸ್ಸಾಕ್ಷಿ ಚುಚ್ಚಿರಬಹುದು ಮತ್ತು ಭಯವಾಗಿರಬಹುದು. ಇನ್ನು ಬದುಕಿ ಏನು ಪ್ರಯೋಜನ ಎಂದೂ ಯೋಚಿಸಿರಬಹುದು.

ನೆನಪಿಡಿ, ದುಃಖಪಡುವುದು ಬಲಹೀನತೆಯ ಸೂಚನೆ ಅಲ್ಲ, ತೀರಿಕೊಂಡ ವ್ಯಕ್ತಿ ನಿಮಗೆಷ್ಟು ಇಷ್ಟ ಎಂದು ಅದು ತೋರಿಸುತ್ತದೆ. ಆದರೆ, ಈ ನೋವಿನಿಂದ ಹೊರಬರಲು ಯಾವುದಾದರೂ ದಾರಿ ಇದೆಯಾ?

ಅನೇಕರಿಗೆ ಸಹಾಯ ಮಾಡಿದ ವಿಷಯಗಳು

ನಿಮ್ಮ ಈ ದುಃಖ, ನೋವು ಯಾವತ್ತೂ ಕಡಿಮೆಯಾಗುವುದಿಲ್ಲ ಎಂದು ಅನಿಸುವುದಾದರೂ ಕೆಳಗಿನ ಕೆಲವು ವಿಷಯಗಳಿಂದ ನಿಮಗೆ ಸ್ವಲ್ಪ ಸಮಾಧಾನ ಆಗಬಹುದು:

ನಿಮ್ಮ ದುಃಖವನ್ನು ಹೊರಹಾಕಿ

ಎಲ್ಲರೂ ಒಂದೇ ರೀತಿಯಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸುವುದಿಲ್ಲ. ಕೆಲವರು ಹೆಚ್ಚು ಸಮಯ ದುಃಖಪಟ್ಟರೆ ಇನ್ನು ಕೆಲವರು ಸ್ವಲ್ಪ ಸಮಯದಲ್ಲೇ ಚೇತರಿಸಿಕೊಳ್ಳುತ್ತಾರೆ. ಅದೇನೇ ಆಗಲಿ, ಅಳುವುದು ನಿಮ್ಮ ನೋವನ್ನು ಸ್ವಲ್ಪ ಕಡಿಮೆಮಾಡುತ್ತದೆ. ಆರಂಭದಲ್ಲಿ ತಿಳಿಸಲಾದ ವೆನೆಸ್ಸಾ ಹೀಗೆ ಹೇಳುತ್ತಾಳೆ: “ನನಗೆ ನೋವಿನಿಂದ ಉಪಶಮನ ಸಿಗಬೇಕಿತ್ತು, ಅದಕ್ಕೆ ನಾನು ಅಳುತ್ತಿದ್ದೆ.” ಆಕಸ್ಮಿಕವಾಗಿ ತಂಗಿಯನ್ನು ಕಳೆದುಕೊಂಡ ಸೊಫೀಯ ಹೀಗನ್ನುತ್ತಾಳೆ: “ನಡೆದದ್ದರ ಬಗ್ಗೆ ಯೋಚಿಸುವುದರಿಂದ ತುಂಬ ನೋವಾಗುತ್ತದೆ. ಅದು ಕೀವು ಕಟ್ಟಿದ ಗಾಯವನ್ನು ಶುಚಿ ಮಾಡಿದಂತಿರುತ್ತದೆ. ಆಗ ತಾಳಲಾಗದಷ್ಟು ನೋವಾದರೂ ಹಾಗೆ ಮಾಡುವುದರಿಂದ ಗಾಯ ಗುಣವಾಗುತ್ತದೆ.”

ನಿಮ್ಮ ಯೋಚನೆ ಮತ್ತು ಭಾವನೆಗಳನ್ನು ತೋಡಿಕೊಳ್ಳಿ

ಕೆಲವೊಮ್ಮೆ ನೀವೊಬ್ಬರೇ ಇರಬೇಕು ಅಂತ ನಿಮಗೆ ಅನಿಸುವುದು ಸಹಜ. ಆದರೆ ನೋವನ್ನು ನೀವೊಬ್ಬರೇ ತಾಳಿಕೊಳ್ಳುತ್ತಿದ್ದರೆ ಅದು ತುಂಬ ಭಾರವಾದ ವಸ್ತುವನ್ನು ನೀವೊಬ್ಬರೇ ಹೊರಲು ಪ್ರಯತ್ನಿಸಿದಂತೆ ಆಗುತ್ತದೆ. ತನ್ನ ತಂದೆಯನ್ನು ಕಳೆದುಕೊಂಡ 17 ವರ್ಷದ ಜರಡ್‌ ಹೀಗೆ ನೆನಪಿಸಿಕೊಳ್ಳುತ್ತಾನೆ: “ನನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಂಡೆ. ಅದೆಲ್ಲಾ ಅವರಿಗೆ ಅರ್ಥ ಆಯ್ತಾ ಅಂತ ನಂಗೊತ್ತಿಲ್ಲ. ಆದರೂ ಹಾಗೆ ಹೇಳಿಕೊಂಡಿದ್ದು ಒಳ್ಳೇದೇ ಆಯಿತು.” ಮೊದಲ ಲೇಖನದಲ್ಲಿ ತಿಳಿಸಲಾದ ಜಾನಿಸ್‌ ಹೀಗೆ ಹೇಳುತ್ತಾಳೆ: “ಇತರರ ಜೊತೆ ಮಾತಾಡುವುದರಿಂದ ತುಂಬ ಸಾಂತ್ವನ ಸಿಕ್ಕಿತು. ಇತರರು ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದೆನಿಸಿತು ಮತ್ತು ನನಗೆ ಅಷ್ಟೊಂದು ಒಂಟಿ ಭಾವನೆ ಕಾಡಲಿಲ್ಲ.”

ಸಹಾಯ ಸ್ವೀಕರಿಸಿ

ವೈದ್ಯನೊಬ್ಬನು ಹೀಗನ್ನುತ್ತಾನೆ: “ಒಬ್ಬ ವ್ಯಕ್ತಿಯು ತನ್ನ ಪ್ರಿಯರನ್ನು ಕಳೆದುಕೊಂಡಾಗ, ಆರಂಭದಲ್ಲೇ ಸ್ನೇಹಿತರು ಮತ್ತು ಸಂಬಂಧಿಕರಿಂದ ಸಹಾಯ ಪಡೆಯುವುದಾದರೆ ಮುಂದೆ ಸಹ ನೋವಿನಿಂದ ಹೊರಬರಲು ಸುಲಭವಾಗುತ್ತದೆ.” ಸ್ನೇಹಿತರು ನಿಮಗೆ ಸಹಾಯ ಮಾಡಲು ಬಯಸುವುದಾದರೂ ಏನು ಮಾಡಬೇಕೆಂದು ತಿಳಿಯದಿರಬಹುದು. ಆದ್ದರಿಂದ ನಿಮಗೇನು ಅಗತ್ಯವೆಂದು ತಿಳಿಸಿ.—ಜ್ಞಾನೋಕ್ತಿ 17:17.

ದೇವರಿಗೆ ಹತ್ತಿರವಾಗಿ

ಟೀನ ಹೀಗನ್ನುತ್ತಾಳೆ: “ನನ್ನ ಗಂಡ ದಿಢೀರಂತ ಕ್ಯಾನ್ಸರ್‌ನಿಂದಾಗಿ ತೀರಿಹೋದ ನಂತರ, ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಅವರಿಲ್ಲವಲ್ಲ ಅಂತ ಅನಿಸುತ್ತಿತ್ತು. ಆಗ ನಾನು ಎಲ್ಲವನ್ನೂ ದೇವರಿಗೆ ಹೇಳಿಕೊಳ್ಳಲು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ, ‘ದಿನವಿಡೀ ನನ್ನ ಕೈಹಿಡಿದು ನಡೆಸಪ್ಪಾ’ ಅಂತ ಪ್ರಾರ್ಥಿಸುತ್ತಿದ್ದೆ. ದೇವರು ನನಗೆ ಮಾತಿನಲ್ಲಿ ಹೇಳಲಿಕ್ಕಾಗದಷ್ಟು ವಿಧಗಳಲ್ಲಿ ಸಹಾಯ ಮಾಡಿದ್ದಾನೆ.” 22​ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಟಾರ್ಶ ಹೀಗೆ ಹೇಳುತ್ತಾಳೆ: “ಪ್ರತಿದಿನ ಬೈಬಲ್‌ ಓದುವುದರಿಂದ ಸಾಂತ್ವನ ಸಿಗುತ್ತಿತ್ತು. ಹೀಗೆ ಓದಿದ್ದರಿಂದ ನನಗೆ ಯೋಚಿಸಲು ಒಂದಾದರೂ ಪ್ರೋತ್ಸಾಹದ ವಿಷಯ ಸಿಗುತ್ತಿತ್ತು.”

ಪುನರುತ್ಥಾನವನ್ನು ಚಿತ್ರಿಸಿಕೊಳ್ಳಿ

“ಆರಂಭದಲ್ಲಿ ನನಗೆ ಪುನರುತ್ಥಾನದ ನಿರೀಕ್ಷೆಯಿಂದ ಸಾಂತ್ವನ ಸಿಗಲಿಲ್ಲ. ಯಾಕೆಂದರೆ, ಆವಾಗಲೇ ನನಗೆ ನನ್ನ ಗಂಡನ ಮತ್ತು ನನ್ನ ಮಕ್ಕಳಿಗೆ ಅವರ ತಂದೆಯ ಅಗತ್ಯ ತುಂಬ ಇತ್ತು. ನನ್ನ ಗಂಡ ತೀರಿಹೋಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ನಾನು ಆ ನಿರೀಕ್ಷೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಬದುಕುತ್ತಿದ್ದೇನೆ. ಅದೇ ನನಗೆ ಬದುಕಲು ಆಸರೆಯಾಗಿದೆ. ಅವರನ್ನು ಪುನಃ ನೋಡುವುದನ್ನು ಚಿತ್ರಿಸಿಕೊಳ್ಳುತ್ತೇನೆ. ಇದರಿಂದ ನನಗೆ ನೆಮ್ಮದಿ, ಸಂತೋಷ ಸಿಗುತ್ತದೆ” ಎನ್ನುತ್ತಾಳೆ ಟೀನ.

ಪ್ರಿಯರು ತೀರಿಕೊಂಡ ಆರಂಭದಲ್ಲೇ ನಿಮ್ಮ ನೋವು ಕಡಿಮೆಯಾಗಲಿಕ್ಕಿಲ್ಲ. ಆದರೂ ವೆನೆಸ್ಸಾಳ ಮಾತುಗಳು ನಿಮಗೆ ಭರವಸೆ ಮೂಡಿಸಬಲ್ಲವು. “ಯಾವತ್ತೂ ಈ ನೋವು ಕಡಿಮೆಯಾಗಲ್ಲ ಎಂದು ನಿಮಗನಿಸುತ್ತದೆ, ಆದರೆ ಕ್ರಮೇಣ ನೀವು ಚೇತರಿಸಿಕೊಳ್ಳುತ್ತೀರಿ” ಎನ್ನುತ್ತಾಳೆ ಅವಳು.

ನೆನಪಿಡಿ, ಎಷ್ಟೇ ಸಮಯ ಕಳೆದರೂ ನಿಮ್ಮ ಹೃದಯಕ್ಕಾದ ಗಾಯದ ಗುರುತು ಇನ್ನೂ ಉಳಿದಿರಬಹುದು, ಆದರೂ ನಿಮ್ಮ ಜೀವನ ಪ್ರಯೋಜನವಿಲ್ಲದ್ದೇನಲ್ಲ. ದೇವರ ಸಹಾಯದಿಂದ ನೀವು ಒಳ್ಳೇ ಸ್ನೇಹಿತರ ಜೊತೆ ಉದ್ದೇಶಭರಿತ ಜೀವನ ನಡೆಸುತ್ತಾ ಆನಂದಿಸಲು ಸಾಧ್ಯ. ಬಲುಬೇಗನೆ ದೇವರು ಸತ್ತವರನ್ನು ಜೀವಂತಗೊಳಿಸುತ್ತಾನೆ ಅಥವಾ ಪುನರುತ್ಥಾನ ಮಾಡುತ್ತಾನೆ. ತೀರಿಹೋದ ನಿಮ್ಮ ಪ್ರಿಯರನ್ನು ನೀವು ಬಲುಬೇಗನೆ ನೋಡಬೇಕು, ಅಪ್ಪಿಕೊಳ್ಳಬೇಕು ಎಂದು ಆತನು ಬಯಸುತ್ತಾನೆ. ಆಗ ಮಾತ್ರ ನಿಮ್ಮ ಹೃದಯಕ್ಕಾದ ಆ ಗಾಯ ಸಂಪೂರ್ಣ ಗುಣವಾಗುತ್ತದೆ.