ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನ ದೃಷ್ಟಿಕೋನ

ಮುದುಡಿದ ಮನಸ್ಸು

ಮುದುಡಿದ ಮನಸ್ಸು

ಖಿನ್ನತೆ ಅಂದರೇನು?

“ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.”—ಕೀರ್ತನೆ 38:6.

ಸಂಶೋಧಕರು ಏನು ಹೇಳುತ್ತಾರೆ?

ಎಲ್ಲರೂ ಒಂದಲ್ಲ ಒಮ್ಮೆ ಮನಗುಂದಿ ಹೋಗುತ್ತಾರೆ. ಆದರೆ ಖಿನ್ನತೆಯೆಂಬ ಕಾಯಿಲೆಗೆ ಒಬ್ಬ ವ್ಯಕ್ತಿ ತುತ್ತಾದರೆ ಅದು ಅವನನ್ನು ತುಂಬ ಸಮಯದ ವರೆಗೆ ಹಿಂಡಿ ಹಿಪ್ಪೆ ಮಾಡಿಬಿಡುತ್ತೆ. ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎಬ್ಬಿಸುತ್ತೆ. ಒಬ್ಬ ವ್ಯಕ್ತಿಯಲ್ಲಿ, ಎಲ್ಲರನ್ನು ಕಾಡುವ ಸಾಮಾನ್ಯ ದುಗುಡ ಇದೆಯಾ? ಅಥವಾ ಖಿನ್ನತೆ ಇದೆಯಾ? ಅಂತ ಕಂಡುಹಿಡಿಯೋದು ಕಷ್ಟ ಆಗಿಬಿಡುತ್ತೆ ಅಂತಾರೆ ತಜ್ಞರು. ಖಿನ್ನತೆಯಿಂದ ನರಳುವವರು ನಕಾರಾತ್ಮಕ ಭಾವನೆಗಳಿಂದ ತಾವು ಕೆಲಸಕ್ಕೆ ಬಾರದವರು, ಅಪರಾಧಿಗಳು ಅಂತ ನೆನಸಿ ನೆನಸಿ ಕೊರಗುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ಮುಂಚಿನ ಕಾಲದಲ್ಲೂ ಜನರು ನಕಾರಾತ್ಮಕ ಭಾವನೆಗಳಿಂದ ಕುಗ್ಗಿಹೋದರು ಅಂತ ಬೈಬಲ್‌ ಹೇಳುತ್ತದೆ. ಉದಾಹರಣೆಗೆ, ಹನ್ನ “ಬಹುದುಃಖ”ಪಟ್ಟಳು. ಇದನ್ನು ಬೇರೆ ಭಾಷಾಂತರಗಳು, “ಮುರಿದ ಮನಸ್ಸು” ಹಾಗೂ “ಮನಗುಂದಿದಳು” ಅಂತ ತಿಳಿಸುತ್ತವೆ. (1 ಸಮುವೇಲ 1:10) ಒಂದು ಸಂದರ್ಭದಲ್ಲಿ ಪ್ರವಾದಿ ಎಲೀಯನಿಗೆ ಸಹ ಎಷ್ಟು ಜಿಗುಪ್ಸೆ ಆಯಿತೆಂದರೆ ತನ್ನ ಪ್ರಾಣವನ್ನೇ ತೆಗೆಯುವಂತೆ ದೇವರಲ್ಲಿ ಬೇಡಿಕೊಂಡನು.—1 ಅರಸುಗಳು 19:4.

“ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿ” ಅಂತ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಹೇಳಲಾಗಿತ್ತು. (1 ಥೆಸಲೊನೀಕ 5:14) “ಜೀವನದ ಒತ್ತಡಗಳ ಮಧ್ಯೆ ತಾತ್ಕಾಲಿಕವಾಗಿ ಸಿಲುಕಿಹಾಕಿಕೊಂಡವರನ್ನು” “ಮನಗುಂದಿದವರು” ಅಂತ ಒಂದು ಪುಸ್ತಕ ಹೇಳುತ್ತದೆ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ ಏನೆಂದರೆ, ಹಿಂದಿನ ಕಾಲದಲ್ಲಿದ್ದ ದೇವಭಕ್ತ ಪುರುಷ-ಸ್ತ್ರೀಯರು ಕೂಡ ಕೆಲವೊಮ್ಮೆ ದುಃಖದಿಂದ ನುಚ್ಚುನೂರಾಗುತ್ತಿದ್ದರು.

 ಖಿನ್ನತೆ ಇದೆ ಎಂದಮಾತ್ರಕ್ಕೆ ಅದು ವ್ಯಕ್ತಿಯ ತಪ್ಪಾ?

“ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.” ರೋಮನ್ನರಿಗೆ 8:22.

ಬೈಬಲ್‌ ಏನು ಹೇಳುತ್ತದೆ?

ಮೊದಲ ಮಾನವ ದಂಪತಿಯ ದಂಗೆ ಪರಿಣಾಮದಿಂದಲೇ ಆ ದೌರ್ಬಲ್ಯ ನಮಗೆ ಬಂದಿದೆ ಎಂದು ಬೈಬಲ್‌ ಹೇಳುತ್ತೆ. ಉದಾಹರಣೆಗೆ, ಕೀರ್ತನೆ 51:5 ಹೇಳೋದು: “ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.” ರೋಮನ್ನರಿಗೆ 5:12 ಹೇಳೋದು, “ಒಬ್ಬ ಮನುಷ್ಯನಿಂದ [ಅಂದರೆ ಮೊದಲ ಮಾನವ ಆದಾಮನಿಂದ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಅಂತ. ಆದಾಮನಿಂದ ಮತ್ತು ಹುಟ್ಟಿನಿಂದ ನಮ್ಮಲ್ಲಿರುವ ಅಪರಿಪೂರ್ಣತೆಯಿಂದಾಗಿ ನಾವು ಈ ರೀತಿಯ ಅಸ್ವಸ್ಥತೆಗೆ ತುತ್ತಾಗುತ್ತೇವೆ. ಅದು ಶಾರೀರಿಕ ದೌರ್ಬಲ್ಯ ಆಗಿರಬಹುದು, ಮಾನಸಿಕ ಕಾಯಿಲೆಯಾಗಿರಬಹುದು. ಹಾಗಾಗಿಯೇ “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ” ಅನ್ನುತ್ತೆ ಬೈಬಲ್‌. (ರೋಮನ್ನರಿಗೆ 8:22) ಹಾಗಂತ ನಮಗೇನು ನಿರೀಕ್ಷೆಯೇ ಇಲ್ಲ ಅಂತನಾ? ಯಾವ ವೈದ್ಯರೂ ಕೊಡದ ನಿರೀಕ್ಷೆಯನ್ನು ಬೈಬಲ್‌ ನಮಗೆ ಕೊಡುತ್ತೆ. ಬರಲಿರುವ ಶಾಂತಿಯ ನೂತನ ಭೂಮಿಯಲ್ಲಿ ಖಿನ್ನತೆಯನ್ನು ಸೇರಿಸಿ ಎಲ್ಲ ರೀತಿಯ ಕಾಯಿಲೆಗಳನ್ನು ಬುಡಸಮೇತ ತೆಗೆದುಹಾಕುತ್ತೇನೆ ಅಂತ ದೇವರು ಮಾತುಕೊಟ್ಟಿದ್ದಾನೆ.—ಪ್ರಕಟನೆ 21:4.

ಖಿನ್ನತೆಯಿಂದ ಹೊರಬರೋದು ಹೇಗೆ?

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.

ಇದು ನಿಮಗೆ ಮಹತ್ವದ್ದೇಕೆ?

ಸನ್ನಿವೇಶಗಳು ಯಾವಾಗಲೂ ನಮ್ಮ ಕೈಯಲ್ಲಿರಲ್ಲ. ಕೆಲವೊಂದು ಸಾರಿ ಕೆಟ್ಟದ್ದರಿಂದ ತಪ್ಪಿಸಿಕೊಳ್ಳಕ್ಕೆ ನಮ್ಮಿಂದ ಆಗಲ್ಲ. (ಪ್ರಸಂಗಿ 9:11, 12) ಅದೇನೇ ಇರಲಿ, ಜೀವನದಲ್ಲಿ ನಕಾರಾತ್ಮಕ ಭಾವನೆಗಳು ನಿಮ್ಮನ್ನು ಹತ್ತಿಕ್ಕದಂತೆ ಕಾರ್ಯಸಾಧಕ ಹೆಜ್ಜೆಗಳನ್ನು ತೆಗೆದುಕೊಳ್ಳಕ್ಕೆ ಆಗುತ್ತೆ.

ಬೈಬಲ್‌ ಏನು ಹೇಳುತ್ತದೆ?

ರೋಗಿಗಳಿಗೆ ವೈದ್ಯನ ಆವಶ್ಯಕತೆ ಇದೆ ಅಂತ ಬೈಬಲ್‌ ಒಪ್ಪಿಕೊಳ್ಳುತ್ತೆ. (ಲೂಕ 5:31) ಹಾಗಾಗಿ ಖಿನ್ನತೆ ಬೆನ್ನು ಬಿಡದಿದ್ದಾಗ ಔಷಧೋಪಚಾರ ಪಡಕೊಳ್ಳೋದು ತಪ್ಪಲ್ಲ. ಅದೇ ಸಮಯದಲ್ಲಿ ಪ್ರಾರ್ಥನೆಗಿರುವ ಶಕ್ತಿಯನ್ನು ಬೈಬಲ್‌ ಒತ್ತಿಹೇಳುತ್ತೆ. ಉದಾಹರಣೆಗೆ, ಕೀರ್ತನೆ 55:22 ಹೇಳೋದು, “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” ಪ್ರಾರ್ಥನೆ ನಿಮ್ಮ ಮನಸ್ಸನ್ನು ಹಗುರಮಾಡುವ ವಿಧಾನ ಅಷ್ಟೇ ಅಲ್ಲ, ಯೆಹೋವ ದೇವರೊಂದಿಗೆ ಮಾಡುವ ಸಂವಾದ ಕೂಡ.—ಕೀರ್ತನೆ 34:18.

ಒಬ್ಬ ಆಪ್ತ ಸ್ನೇಹಿತನಿಗೆ ನಿಮ್ಮೆಲ್ಲ ದುಗುಡವನ್ನು ಹೇಳಿಕೊಳ್ಳುವ ಮೂಲಕ ಸಹ ಉಪಶಮನ ಪಡಕೊಳ್ಳಲು ಸಾಧ್ಯ. (ಜ್ಞಾನೋಕ್ತಿ 17:17) ಯೆಹೋವನ ಸಾಕ್ಷಿಯಾಗಿರುವ ಡ್ಯಾನಿಯೆಲಾ ಹೇಳುತ್ತಾರೆ, “ನನ್ನ ಸ್ನೇಹಿತೆಯೊಬ್ಬಳು ನನಗಿರುವ ಖಿನ್ನತೆ ಬಗ್ಗೆ ಮನಬಿಚ್ಚಿ ಹೇಳುವಂತೆ ಮೃದುವಾಗಿ ಕೇಳಿಕೊಂಡಳು. ಎಷ್ಟೋ ವರ್ಷಗಳ ವರೆಗೆ ನಾನು ಅದರ ಬಗ್ಗೆ ಮಾತಾಡಕ್ಕೆ ಇಷ್ಟ ಪಡುತ್ತಿರಲಿಲ್ಲ. ಆದ್ರೆ ನನಗೆ ಆಮೇಲೆ ಗೊತ್ತಾಗಿದ್ದು, ನನಗೆ ಪರಿಹಾರ ಬೇಕಂದರೆ ಅದರ ಬಗ್ಗೆ ಮಾತಾಡಲೇ ಬೇಕಂತ. ಆಮೇಲೆ ನನಗೆ ಸಿಕ್ಕ ನಿರಾಳ ನೆಮ್ಮದಿ ಕಂಡು ನನಗೇ ಬೆರಗಾಯಿತು.” (g13-E 10)